‘ಕಾಡುವ ಕವಿತೆಗಳು’ ನಾಗೇಶ ಜೆ ನಾಯಕ ಅವರ ಹೊಸ ಬಗೆಯ ಅಂಕಣ. ಇದರಲ್ಲಿ 50 ಕವಿಗಳ ಕವಿತೆಗಳ ಹೊಸತನದ ಝಲಕ್ ಗಳನ್ನು ಅರಿತುಕೊಳ್ಳಬಹುದು. ಅನ್ನಪೂರ್ಣ ಪದ್ಮಸಾಲಿ ಅವರು ‘ಕಾಡುವ ಕವಿತೆಗಳು’ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಪುಸ್ತಕ : ಕಾಡುವ ಕವಿತೆ ಅಂಕಣ ಬರಹಗಳು
ಲೇಖಕರು : ನಾಗೇಶ ಜೆ. ನಾಯಕ
ಪ್ರಕಾಶಕರು : ಸಹೃದಯ ಸಾಹಿತ್ಯ ಪ್ರತಿಷ್ಠಾನ (ರಿ) ಸವದತ್ತಿ
ಪುಟಗಳು: 223
ಬೆಲೆ: 250.00
ಇದೊಂದು ನಾಗೇಶ ಜೆ ನಾಯಕ ಸರ್ ಅವರ ಹೊಸ ಬಗೆಯ ಅಂಕಣ. ಕಾಡುವ ಕವಿತೆಗಳ ನೋಟಕೆ ಅದ್ಭುತ ಕಿಟಕಿ. ಇಲ್ಲಿ 50 ಕವಿಗಳ ಕವಿತೆಗಳ ಹೊಸತನದ ಝಲಕ್ ಗಳನ್ನು ಅರಿತುಕೊಳ್ಳಬಹುದು. ಜೊತೆಗೆ ಕವಿತೆಗಳ ಮಹತ್ವತೆಯ ಯಾತ್ರೆಗಳ ಬಗ್ಗೆ ಪರಿಚಯವನ್ನು ಮನದುಂಬಿಸಿಕೊಳ್ಳಬಹುದು. ಪದ್ಯಗಳ ಜೊತೆ ಕವಿತೆಗಳ, ಕವಿಗಳ ವಿವರಣೆಯ ಹೂರಣದ ಗದ್ಯಗಳನ್ನು ಕಂಗೋಳಿಸಿದ್ದು ನಾಗೇಶ ಜೆ ನಾಯಕ ಸರ್ ಅವರ ಭಾಷೆ ಕಾವ್ಯ ಎಂದೆನಿಸುತ್ತದೆ. ಅವರೊಳಗಿನ ಕವಿತ್ವದ ಹೊಳವು ಹೊರಹೊಮ್ಮಿಸಿ ಓದುಗರ ಓದಿನ ಹುಮ್ಮಸ್ಸು ಹೆಚ್ಚಿಸುತ್ತದೆ.

ಕಾಡಿದ ಕವಿತೆಗಳ ಮಹತ್ವ ಸಾರುವ ಸಂಗ್ರಹ ಕೃತಿ ಇದಾಗಿದೆ. ಕವಿತೆಗಳಿಗೆ ಮೆಚ್ಚುಗೆ ಸೂಚಿಸುವ, ಬೆನ್ನು ತಟ್ಟುತ ಅದ್ಭುತ ಪ್ರೋತ್ಸಾಹ ಕೊಡುವ ಪರಿ ನಿಜಕ್ಕೂ ನನಗೆ ವಿಸ್ಮಯವೆನಿಸಿತು. ಓದುಗರಿಗೆ ಅದು ತಟ್ಟುತ್ತಿದೆ ಎನ್ನುವ ಖುಷಿ ಜೊತೆಗೆ ಇದೇ ಹೆಸರಿನ ಅಂಕಣವನ್ನು ಉದಯಕಾಲ ಪತ್ರಿಕೆಯಲ್ಲಿ ಬರೆಯುತ್ತಿದ್ದು, ಇಗೂ ಅದು ಮುಂದುವರೆಯುತ್ತಿದೆ ಎನ್ನುವುದೊಂದು ನಮಗೆ ಸಂಭ್ರಮ.
“ಕಾಡುವ ಕವಿತೆ” ಅಂಕಣ ಬರಹಗಳ ಈ ಪುಸ್ತಕ ಓದುವ ಆರಂಭ ಬರಹದ ಕವಿಗಳಿಗೆ ಸದಾ ಮಾರ್ಗದರ್ಶನ ನೀಡಲು ಸಹಾಯಕವಾಗುವ ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಇದು ಸಿದ್ಧಗೊಂಡಿದೇನೋ ಎಂದೆನಿಸುತ್ತದೆ. ಕಾವ್ಯಾಸಕ್ತರು ಇಲ್ಲಿನ ಬರಹಗಳ ಒಂದು ಸುತ್ತು ಓದಿದರೆ ಅಸಂಖ್ಯಾತ ಭಾವನೆಗಳ ಬಗ್ಗೆ ಕುತೂಹಲ ಉಕ್ಕಿಸುವ, ಭಾವೋದ್ರೇಕಕ್ಕೆ ಒಳಗಾಗುವ, ಎಲ್ಲರ ಹೃದಯ ತಟ್ಟುವ ದಟ್ಟ ಭಾವ ಹೊರಹೊಮ್ಮಿಸುವ ಕವಿತೆಗಳು ಇದರಲ್ಲಿವೆ.

ಇದರಲ್ಲಿನ ಪ್ರತಿ ಕವಿತೆಗಳಲ್ಲಿ ಕೆಲವೊಂದು ಸಾಲುಗಳು ನನಗೆ ಸಾಕಷ್ಟು ಸಲಹೆಗಳನ್ನು (ಟಿಪ್ಸ್) ಕೊಟ್ಟಿವೆ. ಇಂದಿನ ಬಿರುಬೇಸಿಗೆಯಲ್ಲಿ ನಾನು “ಕಾಡುವ ಕವಿತೆ” ಓದುತ್ತಿದ್ದಾಗ *ತಣ್ಣಗಿನ ಪಾನಕ* ನನಗೆ ದಕ್ಕಿದಂತೆನಿಸಿತು. ಹಾಗಿದೆ ಈ ಕೃತಿ.
ಓದುಗರಲ್ಲಿ ಜ್ಞಾನೋದಯ ದೀಪದ ಕುಡಿ ಕಡೆಗೆ ಮನ ಪರಿವರ್ತನೆಗೊಳ್ಳುವಂತೆ ಈ ಕೃತಿ ಓದನ್ನು ಪುಳಕಗೊಳಿಸುತ್ತದೆ. ಹಾಗಿದ್ದರೆ.., ನಿಮ್ಮ ಮನದಲ್ಲೂ, ಮೊಗದಲ್ಲೂ, ಚಿಂತನೆಯ ಚಿಲುಮೆಯ ಮುಗುಳು ನಗೆ ಅರಳಬೇಕೆಂದರೆ ತಡಮಾಡದೇ *“ಕಾಡುವ ಕವಿತೆ”* ಓದಿ ಸುಖಿಸಬೇಕಷ್ಟೆ.
- ಅನ್ನಪೂರ್ಣ ಪದ್ಮಸಾಲಿ, ಕೊಪ್ಪಳ.
