ಬದುಕ ಕಳಕಳಿಯ ಭಾವತುಡಿತದ ‘ಕೈಗಾ’ದಲ್ಲೊಬ್ಬ ಕವಿ



ಕವಿಯಾಗಿ, ನಾಟಕಕಾರರಾಗಿ, ಸಾಮಾಜಿಕಚಿಂತಕರಾಗಿ, ಶ್ರೇಷ್ಠವಾಗ್ಮಿಯಾಗಿರುವ ಎ.ಎನ್.ರಮೇಶ್‍ ಅವರು ಕಾರವಾರದ ಕೈಗಾದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿಯಾದ್ದಾರೆ.೧೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ೩೦ಕ್ಕೂ ಹೆಚ್ಚು ನಾಟಕಗಳನ್ನು ಬರೆದು ನಿರ್ದೇಶಿದ್ದಾರೆ, ಅವರ ಕುರಿತಾದ ಸಾಹಿತ್ಯ ಚಿಂತನ ಲೇಖನವನ್ನು ಡಾ. ಸಂಗಮೇಶ ತಮ್ಮನಗೌಡ್ರ ಅವರು ಓದುಗರ ಮುಂದಿಟ್ಟಿದ್ದಾರೆ, ಮುಂದೆ ಓದಿ…

ಬದುಕು ಬಿಟ್ಟುಕಾವ್ಯವಿಲ್ಲ. ಕಾವ್ಯವುತನ್ನ ವಿಚಾರಗಳ ಮೂಲಕ ಬದುಕನ್ನುತಿದ್ದಬಲ್ಲದು ! ನಮ್ಮ ನಿತ್ಯ ಬದುಕಿನ ಆಗುಹೋಗುಗಳು ಕಾವ್ಯದ ಮೂಲಕ ಭಟ್ಟಿ ಇಳಿಯುತ್ತವೆ. ಕವಿಯಾದವನು ಬದುಕನ್ನು ಪ್ರೀತಿಸುತ್ತ ಕಾವ್ಯ ಬರೆದಾಗ ಅದಕ್ಕೊಂದು ಬೆಲೆ ಬರುತ್ತದೆ ! ತುಮಕೂರಿನ ಗುಬ್ಬಿಯ ಎ.ಎನ್. ರಮೇಶ ಬದುಕ ಕಳಕಳಿಯ ಭಾವತುಡಿತದ ಕಾವ್ಯ ರಚಿಸಿ ಈಗಾಗಲೇ ಹಲವು ಕೃತಿಗಳನ್ನು ರಚಿಸಿದ್ದಾರೆ.

ಗುಬ್ಬಿಯ ಹಿರಿಮೆ ದೊಡ್ಡದು :

ತುಮಕೂರುಜಿಲ್ಲೆಯಗುಬ್ಬಿಯುಕನ್ನಡ ನಾಡಿನ ಮನೆ ಮನಕ್ಕೆಲ್ಲಾಗೊತ್ತು. ನಾಟಕ ರತ್ನ ಗುಬ್ಬಿ ವೀರಣ್ಣ ಕಲಾ ವೈಭವ ನಾಟ್ಯಸಂಘವನ್ನು ಕಟ್ಟಿ ಹಲವು ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಪ್ರದರ್ಶನ ಮೇಲ್ಮೆಯೊಂದಿಗೆ ಮನೆ ಮಾತಾಗುತ್ತಾರೆ. ಆನೆ, ಅಂಬಾರಿ, ರಥ, ಕುದುರೆಗಳ ಬಳಕೆಯನ್ನು ರಂಗಕಟ್ಟೆಗೆತಂದ ಹಿರಿಮೆ ವೀರಣ್ಣನವರದಾಗಿದೆ !ಇಂಥ ಪ್ರಸಿದ್ಧ ಊರಿನಲ್ಲಿ ಜನಿಸಿದ ಕವಿ ಎ.ಎನ್.ರಮೇಶ್‍ಆಗಿದ್ದಾರೆ.

ಕೈಗಾದಲ್ಲೊಬ್ಬ ಕವಿ – ಎ.ಎನ್. ರಮೇಶ್ :

ಕಾರವಾರದ ಬಳಿಯ ಕೈಗಾದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿಯಾಗಿರುವ ಎ.ಎನ್.ರಮೇಶ್‍ ಉತ್ತಮತಾಂತ್ರಿಕ, ಉತ್ತಮ ವ್ಯವಸ್ಥಾಪಕರೆಂದು ಹೆಸರು ಮಾಡಿರುವ ರಮೇಶ್‍ ಅವರು ಕವನ, ಚಟುಕು ಮತ್ತು ನಾಟಕ ಕೃತಿಗಳನ್ನು ರಚಿಸಿ ಪ್ರಕಟಿಸುವ ಮೂಲಕವೂ ಹೆಸರುವಾಸಿಯಾಗಿದ್ದಾರೆ.

ವೃತ್ತಿಯ ನೈಪುಣ್ಯತೆಯಕಟ್ಟುನಿಟ್ಟಿನಉದ್ಯೋಗ ನಿರ್ವಹಣೆಯೊಂದಿಗೆ ಸಮಯ ಹೊಂದಿಸಿಕೊಂಡು ನಿರಂತರ ಬರವಣಿಗೆಯಲ್ಲಿತೊಡಗಿರುತ್ತಾರೆ.ಅತ್ಯಂತಕಟ್ಟುನಿಟ್ಟಿನ ನಿಯಮಗಳನ್ನು ಕೈಗಾ ಅಣುಸ್ಥಾವರದ ವೃತ್ತಿ ನಿಭಾಯಿಸಿಕೊಂಡು ಅಂದರೆ ಹತ್ತರಿಂದ ಹನ್ನೆರಡು ಗಂಟೆಗಳತನಕ ಸ್ಥಾವರಘಟಕ ಒಳಹೋದವರು ಹೊರ ಬರುವವರೆಗೆಅತ್ಯಂತ ಭದ್ರೆತೆಯೊಳಗೆ, ಗಂಭೀರ ಸ್ಥಿತಿಯೊಂದಿಗೆಯೇ ಕಾರ್ಯನಿರ್ವಹಿಸುವ ಸ್ಥಿತಿಯು ಕೈಗಾದ ನೌಕರರದು ಆಗಿರುತ್ತದೆ !ಕೇಂದ್ರ ಸರ್ಕಾರಿ ಅಧೀನ ಘಟಕವು ಇದಾಗಿರುವುದರಿಂದ ವೃತ್ತಿ ನೈಪುಣ್ಯತೆಯದೃಷ್ಟಿಯಿಂದಮೊಬೈಲ್ ಫೋನ್ ಬಳಸಲೂ ಸಹ ಇಲ್ಲಿಅನುಮತಿ ಇರುವುದಿಲ್ಲ. ಇಂತಹ ಗುರುತರ ಜವಾಬ್ದಾರಿಯ ಬದುಕು ನಿಭಾವಣೆಯ ಮಧ್ಯದಲ್ಲಿಯೂ ಎ.ಎನ್.ರಮೇಶ್‍ ಒಬ್ಬ ಚಿಂತನಶೀಲ ಕವಿಯಾಗಿರುವುದನ್ನೇ ಮೆಚ್ಚಬೇಕು !ಅವರ ಒಂದೊಂದು ಗ್ರಂಥದಲ್ಲಿಯೂ ಒಂದೊಂದು ಅನುಭವ ದ್ರವ್ಯವು ಅಡಗಿದೆ.

“ಮಾತು-ಮೌನಗಳ ನಡುವೆ”–ಗ್ರ್ರಂಥದಒಳತೋಟ :

ಚಂದರ ದೂರದರ್ಶನದ “ಥಟ್‍ ಅಂತ ಹೇಳಿ”ಖ್ಯಾತಿಯ ಡಾ.ನಾ ಸೋಮೇಶ್ವರ ಅವರು ಮಾತು ಮೌನಗಳ ಕೃತಿಗೆ ಮುನ್ನುಡಿ ಬರೆದಿದ್ದಾರೆ. 2021ರಲ್ಲಿ ತುಮಕೂರಿನ ಗೋಮಿನಿ ಪ್ರಕಾಶನವು 74ನೆಯ ಪ್ರಕಟನೆಯಾಗಿ ಈ ಗ್ರಂಥವನ್ನು ಹೊರತಂದಿದೆ. 208 ಪುಟದ ಈ ಕೃತಿಯಲ್ಲಿ ಕವಿಯ ಶುಭ್ರ ಮನಸ್ಸಿನಿಂದ ಅರಳಿದ 108 ಕವಿತೆಗಳು ಇವೆ. ಒಂದೊಂದು ಕವನವೂ ಒಂದೊಂದು ರಸಪಾಕದಂತೆ ಓದುಗನಿಗೆ ಹೊಸ ಅನುಭವಕೊಡುವ ದಿವ್ಯಾನುಸಂಧಾನವುಇಲ್ಲಿದೆ. ಪುಸ್ತಕ ಓದುತ್ತಾ ಹೋದಂತೆ ಇನ್ನೂಓದಬೇಕೆಂಬ ಕೌತುಕ ಮೂಡಿಸುವ ಭಾವ ಪಕ್ವತೆಯನ್ನು ಹೊಮ್ಮಿಸುವಚಿಂತನೆಯು ಇಲ್ಲಿ ಮೇಲ್ಮೆಯಾಗಿ ನೆಲೆನಿಂತಿದೆ. ಕವಿಯ ಸಾರ್ಥಕ ಚಿಂತನೆಯು ಕಾವ್ಯವಾಗಿ ಸಫಲತೆಯನ್ನುಕಂಡಿದೆ.

“ಜಗದ ಬದುಕೆಂದರೆ ಹೀಗೆ………

ಕೆತ್ತಿಸಿಕೊಳ್ಳುವ ಕಸುವುಳ್ಳವರು

ಸಹಿಸಿ ದಹಿಸಿಕೊಳ್ಳುವವರು

ಮಾನ್ಯರಾಗಿ ಪೂಜ್ಯರಾಗುತ್ತಾರೆ !

ಶಿಲೆಯು ಉಳಿಯಪೆಟ್ಟು ತಿಂದು ಮೂರ್ತಿಯಾಗುತ್ತದೆ !ತ್ಯಾಗಕ್ಕೆ ನಿಜಬೆಲೆಯಿರುತ್ತದೆ. ಪೂಜಿಸಲ್ಪಡುವ ವಸ್ತುವು ತ್ಯಾಗಕ್ಕೂ ಸನ್ನದ್ಧವಾಗಿರಬೇಕುಎಂದು ಕವಿ ಹೇಳುತ್ತಾರೆ.

“ಮಹಾತ್ಮನ ಪ್ರಶಾಂತತೆ

ನಮ್ಮ ವದನಗಳಲೇಕಿಲ್ಲ…………..?

ಕಾರಣಗಾಂಧಿಯ ಹೃದಯದ

ಸತ್ಯ ಪ್ರೀತಿತ್ಯಾಗ ನಮ್ಮೊಳಗಿಲ್ಲ !”

ಮಹಾತ್ಮಾಗಾಂಧೀಜಿಯ ವ್ಯಕ್ತಿತ್ವವು ಬಹುದೊಡ್ಡದು !ಸತ್ಯ ಶಾಂತಿ, ಪ್ರೀತಿ, ತ್ಯಾಗಗಳ ಅಳವಡಿಕೆಯಿಂದ ಮಹಾತ್ಮಾಗಾಂಧೀಜಿದೊಡ್ಡವರಾಗುತ್ತಾರೆ.ಗಾಂಧೀಜಿಯ ಮೊಗದಲ್ಲಿಯ ಪ್ರಶಾಂತತೆಯುನಮ್ಮ ಮುಖದಲ್ಲೇಕೆಇಲ್ಲ ?ಎಂಬುದೇಕವಿಯ ಪ್ರಶ್ನೆಯಾಗಿದೆ.

“ಆತ್ಮಸಾಕ್ಷಿಯ ನುಡಿಗಳನ್ನು

ತಾಳ್ಮೆಯಲಿ ಆಲಸುವುದಕ್ಕಿಂತ

ಅಕ್ಕಪಕ್ಕದವರ ಮಾತುಗಳನ್ನೇ

ತತ್‍ಕ್ಷಣ ಆಲಿಸುತ್ತೇವೆ”

ನಮ್ಮತನದಅರಿವು ನಮಗಿಲ್ಲದಿದ್ದರೂಅನ್ಯರ ಮಾತುಗಳನ್ನು ಬಹು ಲಕ್ಷ್ಯವಹಿಸಿ ಕೇಳುತ್ತೇವೆ. ಬೇರೆಯವರ ಮಾತುಗಳು ಬಹು ಮುಖ್ಯವೆನಿಸುತ್ತವೆ. ಗೋಡೆಗಳಿಗೂ ಕಿವಿಯಿರುತ್ತವೆಎಂಬುದಇದೇ ವಿಚಾರಕ್ಕೆಎಂದೆನಿಸುತ್ತದೆ.

“ಆಡುವಾ ಮಾತುಗಳು

ಲಯತಪ್ಪುತ್ತಿರುವಾಗ

ಶೃತಿಕೆಡಿಸುತ್ತಿರುವಾಗ

ಅಪಸ್ವರವೆತ್ತುತ್ತಿರುವಾಗ

ಸುಮ್ಮನೆ ಮೌನದಾ

ಒಳ ಹೊಕ್ಕು ಬಿಡಬೇಕು”

ಮಾತು ಮೌನಗಳ ನಡುವೆ ಬಹಳಷ್ಟು ಅಂತರವಿರುವುದು.ಮಾತಿಗಿಂತಒಮ್ಮೊಮ್ಮೆ ಮೌನವೇ ಲೇಸೆಂದೆನಿಸುತ್ತದೆ.

“ಆಡುವಾ ಮಾತುಗಳು

ಕಲಹ ಬಿಚ್ಚುವಾಗ

ಹಗೆ ಹಚ್ಚುವಾಗ

ಕಿಚ್ಚು ಹೆಚ್ಚಿಸುವಾಗ

ತತ್‍ಕ್ಷಣವೇ ಮೌನದಾ

ಮನೆ ಸೇರಿಬಿಡಬೇಕು !

ಎ.ಎನ್.ರಮೇಶ ಅವರು ತಾತ್ತ್ವಿಕ ಚಿಂತನೆಯ ಹಿನ್ನೆಲೆಯಲ್ಲಿಯೇ ಕೆಲವು ವಿಚಾರಗಳನ್ನು ಹೇಳುತ್ತಾರೆ.ಪದ್ಯದ ಒಂದೊಂದು ಸಾಲೂ ವಜನ ಕಟ್ಟಾಗಿಯೇ ಇದೆ.

“ನೋವು ನಿರಾಸೆಗಳಲಿ ಜಿಗುಪ್ಸೆಯಾದಾಗ,

ಬುದ್ಧನಾಗಲು ಬೋಧಿವೃಕ್ಷ ಹುಡುಕುತ್ತೇನೆ

ತಕ್ಷಣವೇ ಭ್ರಮೆಯಕಲ್ಪವೃಕ್ಷಕರೆಯುತ್ತದೆ !

ಚಪಲಚಿತ್ತ ಮತ್ತೆ ಹುಚ್ಚೆದ್ದುಕೆನೆಯುತ್ತ !

ಅದಕೆ ನಾನಿನ್ನೂ ಬುದ್ಧನಂತಾಗಲುಆಗುತ್ತಿಲ್ಲ !

ಮಧ್ಯರಾತ್ರಿಯಲಿ ಎದ್ದುಎಲ್ಲೆಲ್ಲೋ ಹೋದವರೆಲ್ಲರೂ ಬುದ್ಧನಾಗಲು ಸಾಧ್ಯವಿಲ್ಲ. ಬುದ್ಧನೆಂದರೆ‘ಸುಜ್ಞಾನ’ತುಂಬಿದಅರಿವುಎಂಬುದನ್ನುಎಲ್ಲರೂ ಮರೆಯುತ್ತೇವೆ !

“ಬದುಕಿಂತಇಲ್ಲಿಗುರುವಿಲ್ಲ

ಬದುಕು ಕಲಿಸದ ಪಾಠವಿಲ್ಲ

ಬದುಕಿನ ಕುಲುಮೆಯೊಳಗೆ

ಪರಿಪಕ್ವವಾಗದಜೀವವಿಲ್ಲ”

ಧರ್ಮಪತ್ನಿಯೊಂದಿಗೆ ಎ.ಎನ್.ರಮೇಶ್‍

 

ಬದುಕು ವಿಶಾಲ ಅರ್ಥದಲ್ಲಿ ಬಹುದೊಡ್ಡ ಪಾಠವನ್ನು ಕಲಿಸುವುದು.ಅಖಂಡ ಅನುಭವಗಳ ಸಂಗಮದಲ್ಲಿ ಬದುಕು ನಿರ್ಮಾಣವಾಗುತ್ತದೆ.ಇಂಥ ವಿಚಾರಗಳು ‘ಮಾತು-ಮೌನಗಳ ನಡುವೆ’ಕೃತಿಯ ಅನೂಹ್ಖ ಚಿಂತನಗಳಂತೆ ಹೊರ ಹೊಮ್ಮಿವೆ. ‘ಮಾತು ಮೌನಗಳ ನಡುವೆ’ ಪ್ರೀತಿ ವಿಶ್ವಾಸ ಹಾಡುಗಳೂ ಚಿರಂತನ ಚಿಂತನಗಳಂತೆ ಕವನಗಳನ್ನು ಎ.ಎನ್. ರಮೇಶ್ ಬರೆದಿದ್ದಾರೆ.

“ಹಾಸ್ಯ ಕವನಗಳ ಗುಚ್ಛ – ಸಂಸಾರವೆಂಬ ಹಾರ(ರ್)ಮೋನಿಯಂ” :

ಯಾಂತ್ರೀಕೃತ ಬದುಕಿನಲ್ಲಿಇಂದು ಬಹಳಷ್ಟು ಜನರು‘ಹಾಸ್ಯ’ಅನುಭವಿಸುವಲ್ಲಿ ವಿಮುಖ ರಾಗುತ್ತಿದ್ದಾರೆ. ಕೆಲವು ಕ್ಷಣವಾದರೂ ಮೊಗದೊಳಗೆ ನಗು ಚಿಮ್ಮಿದರೆ ಹೃದಯವು ಅರಳುತ್ತದೆ, ಭಾವವುಕೆರಳುತ್ತದೆ !ಈ ಕೃತಿಯಲ್ಲಿಎಂಭತ್ತು ಕವನಗಳಿವೆ. ಡಾ.ಕಬ್ಬಿನಾಲೆ ಬಸಂತ ಭಾರಧ್ವಾಜ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ನಗೆ ಅಲೆಯ ಕವನಗಳು ಹೃದಯ ಚುಂಬಿಸುವಂತಿವೆ. ಲೇಖಕ ಎ.ಎನ್.ರಮೇಶ್ 2019 ರಲ್ಲಿ ಈ ಕೃತಿ ಪ್ರಕಟಿಸಿದ್ದಾರೆ.

“ರಾತ್ರಿ ಮಲಗಿದರೆ

ಬೆಳಿಗ್ಗೆ ಏಳುವ

ಗ್ಯಾರಂಟಿಇಲ್ಲ !

ಹಾರ್ಟು, ಲಿವರ್

ಕಿಡ್ನಿಯಾವುದಕ್ಕೂ

ವಾರಂಟಿಇಲ್ಲ !”

ನಾವು ಉಣ್ಣುವ ಆಹಾರವು ಸಾತ್ವಿಕತೆಯನ್ನು ಹೊಂದಿಲ್ಲ. ಹೀಗಾರಿ ಅನಾರೋಗ್ಯದ ಬಾಧೆಯು ನಮ್ಮನ್ನು ಸದಾಕಾಡುತ್ತದೆ. ಹೀಗಾಗಿ ನಮ್ಮಆಯುಷ್ಯವೂಗಟ್ಟಿಯಾಗಿಲ್ಲ. ಯಹುವಕರು ಅಸಹಜ ಚಟುವಟಿಕೆಯಿಂದೊಡಗೂಡಿದ ಚಟಗಳ ದಾಸರಾದುದರಿಂದ ಅಕಾಲಿಕ ಸಾವು ಅರವನ್ನುಎಡೆಬಿಡದೆಕಾಡುತ್ತಿವೆ.

“ಸೀತೆಯ ವರಿಸಲು

ರಾಮಎತ್ತಿ ಮುರಿದದ್ದು

ಒಂದೇಒಂದು ಬಿಲ್ಲು !

ನನ್ನವಳ ಕೈ ಹಿಡಿಯಲು

ನಾನು ಎತ್ತಿದ್ದುಕೊಟ್ಟಿದ್ದು

ಹೊಟೇಲು-ಕೆಫೆ-ಮಾಲು

ಸಿನಿಮಾ ಮಂದಿರಗಳ

ನೂರಾರುಬಿ (BILL)ಲ್ಲು !”

ಆಗಿನ ಈಗಿನ ಸುಧಾರಿತಕಾಲದ ಬದುಕಿನಲ್ಲಿ ಬಹಳ ವ್ಯತ್ಯಾಸವಿದೆ.ತ್ರೇತ್ರಾಯುಗದಆಚಾರ-ವಿಚಾರಕ್ಕೂ ಈಗಿನ ಕಾಲದಜೀವನ ವೈಖರಿಗೂ ಬಹಳಷ್ಟು ಅಂತರವಿದೆ. ವಿಚಾರ-ನಡೆ-ನುಡಿ ಎಲ್ಲದರಲ್ಲೂ ಬದಲಾವಣೆ ಇದೆ.

ಚುಟುಕುಗಳ ಗುಚ್ಛ ‘ಗುಬ್ಬಿಯ ಕಲವರ’ :

2012ರಲ್ಲಿ ಹೊರಬಂದ 60 ಪುಟಗಳ ‘ಗುಬ್ಬಿಯ ಕಲರವ’ ಕೃತಿಯು ಎ.ಎನ್. ರಮೇಶ್‍ ಅವರ ಆರಂಭಿಕ ಸಾಹಿತ್ಯದ ಅನಾವರಣವಾಗಿದೆ.‘ಗುಬ್ಬಿ’ಯುರಮೇಶ್‍ ಅವರ ಸ್ವಂತ ಊರಾಗಿದ್ದರಿಂದಲೇ ಈ ಹೆಸರು ಹೆಚ್ಚು ಮಹತ್ವ ಪಡೆದುಕೊಂಡಿದೆ. ಮಂಗಳೂರಿನ ವಿ.ಗ.ನಾಯಕಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.

– ಭ್ರಮನಿರಸನ–

“ಮದುವೆಗೆ ಮುನ್ನ

ಕೇಳುತ್ತಾರೆ ಭವಿಷ್ಯ !

ಮದುವೆಯ ನಂತರ……..

ಎಣಿಸುತ್ತಾರೆಅಯುಷ್ಯ !”

ಬದುಕೆಂಬುದು ಭ್ರಮೆಯ ಹಳವಂಡ !ಭ್ರಮೆಯ ಪರಿಭ್ರಮಣೆಯಲ್ಲಿ ಬದುಕು ಸಾಗುವಾಗ ಎದುಸಿರು ಹೊಮ್ಮುವುದು ಸಹಜ.

– ಆರಂಭ–

“ಸಚಿವ ಶಾಸಕರಿಗೂ ಈಗ ಜೈಲುವಾಸ !

ನ್ಯಾಯಪೀಠ ಸೃಷ್ಟಿಸಿದೆ ಹೊಸ ಇತಿಹಾಸ !

ಆರಂಭವಾಗಿದೆರಾಷ್ಟ್ರಶುದ್ಧಿಯ ಸಾಹಸ !

ಲಂಚ ಕಳ್ಳಹಣ ತಿಂದವರಿಗೆ ಈಗ ಉಬ್ಬಸ ||”

ಉಪ್ಪುತಿಂದ ಮೇಲೆ ನೀರುಕುಡಿಯಲೇ ಬೇಕು ಎಂಬ ಗಾದೆ ಮಾತಿನಂತೆತಪ್ಪುಎಸಗಿದ್ದವರು ಶಿಕ್ಷೆ ಅನುಭವಿಸಲೇ ಬೇಕು !ಪ್ರತಿಷ್ಠಿತರುಎಂಥವರಿದ್ದರೂ ಕಾನೂನಿನ ದೃಷ್ಠಿಯಲ್ಲಿ ಚಿಕ್ಕವರೇ ಎಂಬುದು ಕವಿಯ ಅಭಿಮತವಾಗಿದೆ.

– ಶಾಸ್ತ್ರಿ –

“ಕೋಟಿಗಳ ಆಸ್ತಿ, ಪಲ್ಲಂಗಕುಸ್ತಿ !

ಆಶÀ್ರಮದಿ ನಿತ್ಯವೂ ಮೋಜು-ಮಸ್ತು !!

ಕಾವಿ ಕೆಡಿಸಿದ ಕಾವಿ ಸ್ವಾಮಿಯ………

ಸಾಧನೆಗೆಜನರೇಕೊಡಬೇಕಿದೆ ಪ್ರಶಸ್ತಿ !!”

ಖಾದಿಯ ಪಾವಿತ್ರ್ಯತೆಯು ಕಳಚಿರುವಂತೆ ಕಾವಿಯ ಮೌಲ್ಯವೂ ಅಳಿದಿದೆ. ಬೆಂಗಳೂರಿನ ಬಿಡದಿಯ ನಿತ್ಯಾನಂದ ಸ್ವಾಮಿಯ ಕಾಮ ವಿಲಾಸದ ರಾಸಲೀಲೆಯಿಂದ ಸ್ವಾಮಿಗಳ ವರ್ಚಸ್ಸು ಕಡಿಮೆಯಾಯಿತು ಎಂಬ ವಾಸ್ತವ ಸತ್ಯವನ್ನು ಕವಿಯು ಹೊಮಿಸಿದ್ದಾರೆ.

– ವಾಸ್ತು–

“ತಪ್ಪಿದಾಗ ಬದುಕಿನ ಲಯ,

ಶಂಕಿಸುವೆವು ಮನೆ ವಾಸ್ತು ಆಯ!

ಭದ್ರವಾಗಿದ್ದರೆ ಮನೋಬಲದಅಡಿಪಾಯ,

ತಟ್ಟುವುದಿಲ್ಲ ಗ್ರಹ, ವಾಸ್ತುಗಳ ಅಪಾಯ !!

ಬದುಕುಏಕತಾನದಲ್ಲಿಒಂದೇತೆರನಾಗಿಇರುವುದಿಲ್ಲ. ಆಗಾಗ ಬದಲಾವಣೆಗಳು ಘಟಿಸುತ್ತಲೇಇರುತ್ತವೆ. ಯಾವುದೋತಪ್ಪು ನಡೆದಾಗ, ಯಾವುದೋಕಾರಣವನ್ನು ಹುಡುಕುತ್ತೇವೆ ! ಇದು ಬಹು ಜನತೆಯ ಜೀವನಸ್ಥಿತಿಯೂ ಆಗಿರುತ್ತದೆ. ಗ್ರಂಥ ಚಿಕ್ಕದಾದರೂ ಚುಟುಕುಗಳ ವಿಚಾರ ಬಾಹುಳ್ಯತೆಯಿಂದ ಪ್ರಬುದ್ಧ ಸ್ಥಿತಿಯಲ್ಲಿತನ್ನ ಛಾಪು ಹರಡಿದೆ.

ಕಲಾವಿದರಾಗಿ ಎ.ಎನ್.ರಮೇಶ್

ನಾಟಕಕಾರರಾಗಿ ಕೈಗಾ ಕವಿ ಎ.ಎನ್.ರಮೇಶ್ :

ಶಕ್ತಿ ಮತ್ತುಅಂತ ಎಂಬ ಅವಳಿ ನಾಟಕಗಳನ್ನು ಚಿಂತನಶೀಲ ಕವಿಯಾದಎ.ಎನ್.ರಮೆಶ್‍ಅವರು ಬರೆದಿದ್ದಾರೆ. 2017 ರಲ್ಲಿ ಈ ಗ್ರಂಥವು ಹೊರಬಂದಿದೆ.72 ಪುಟಗಳ ಗ್ರಂಥಇದಾಗಿದ್ದು, ಕಿರುಗಾತ್ರದ ನಾಟಕಗಳು ವೈಚಾರಿಕ ಸೂಕ್ಷ್ಮದೃಷ್ಟಿಯ ಮೆರಗು ಚಲನಚಿತ್ರ ನಿರ್ದೇಶಕರಾದಎಚ್.ಜಿ.ಸೋಮಶೇಖರರಾವ್ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.



‘ಶಕ್ತಿ’ ನಾಟಕದ ಒಳಾಂತರಂಗ :

ಅಣುಶಕ್ತಿಯ ಮೊರೆಯನ್ನು ಹೋದ ಮಾನವನ್ನು ವಿದ್ಯುಚ್ಛಕ್ತಿಯಅಭಾವವನ್ನು ಎದುರಿಸಿದ್ದರಿಂದ, ಪರ್ಯಾಯ ವ್ಯವಸ್ಥೆಯಿಂದ ಹಲವು ಸಮಸ್ಯೆಗಳಿಗೂ ಈಡಾಗಬೇಕಾಯಿತು. ಲೋಡ್‍ ಸೆಡ್ಡಿಂಗ್‍ನಂಥಹ ಸಮಸ್ಯೆ ಸಹಜವಾಗಿಎದುರಾಯಿತು.“NUCLEAR  POWER  IS  CLEAN,  GREEN AND ENVIRONMENT PRIENDLY POWER” ಅಂದರೆ“ಅಣುಶಕ್ತಿಯು ಶುದ್ಧವಾದ ಹಸಿರಾದ, ಪರಿಸರ ಸ್ನೇಹಿ-ಶಕ್ತಿ ಎಂಬ ಚಿಂತನವನ್ನುಅವರ ವೃತ್ತಿಗೆ ಪೂರಕವಾಗಿ ಈ ನಾಟಕವನ್ನುಎ.ಎನ್.ರಮೇಶ್‍ಅವರು ಮಾಡಿದ್ದಾರೆ. ಸಹಜಆಡುಭಾಷೆಯುಇಲ್ಲಿನ ಪಾತ್ರಗಳಿಗೆ ಜೀವತುಂಬಿದೆ.

‘ಅಂತ’ ನಾಟಕದ ವೈಚಾರಿಕ ಲಹರಿ :

ಮೂಢನಂಬಿಕೆ, ಕಂದಾಚಾರಗಳ ವಿರುದ್ಧಧ್ವನಿಯೆತ್ತಿ ಮಹಾರಾಷ್ಟ್ರರಾಜ್ಯವು ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದಿತು. ಸಾಕಷ್ಟು ಪರ-ವಿರೋಧ ಪ್ರತಿರೋಧಗಳೂ ಉಂಟಾದವು.  ಕೆಲವು ಅಪಸಹ್ಯ ಘಟನೆಗಳು ಅಲ್ಲಲ್ಲಿ ನಡೆದವು. ಗೋವನಾಳ ಒತ್ತುವರಿ, ಉಳ್ಳವರು ಕನಿಷ್ಠ ಜನರ ಶೋಷಣೆ ಮಾಡುವುದು, ಇವುಗಳಲ್ಲದೇ, ನೂರಾರುಧರ್ಮ, ಸಾವಿರಾರುಜಾತಿ, ಜಾತಿಗೊಂದು ಮಠ, ಮಸೀದಿ, ಚರ್ಚು ರಾಜಕಾರಣಿಗಳ ಕೈ ಆಡಿಸುವ ಮಠಾಧಿಪತಿಗಳು. ಈ ವ್ಯವಸ್ಥೆಯನ್ನುತಮ್ಮ ಸ್ವಾರ್ಥ ಮತ್ತುಅಧಿಕಾರದಈಡೇರಿಕೆಗೆ ಬಳಸಿಕೊಳ್ಳುತ್ತಿರುವ ರಾಜಕಾರಣಿಗಳು……. ಒಟ್ಟಿನಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯೇ ಸ್ವಾಸ್ಥ್ಯದಿಂದ ದೂರಾದ ಚಿಂತನೆಯನ್ನುಎ.ಎನ್.ರಮೆಶ್‍ಅವರ‘ಅಂತ’ ನಾಟಕವು ಮಾಡುತ್ತದೆ.

 

ಕೇಶವನಾಮ –ಚೈತನ್ಯಧಾಮ–ಕೃತಿಯ ಅವಲೋಕನ :

ಗುರುಕೃಪೆ, ದೈವಾನುಗ್ರಹ, ಆಧ್ಯಾತ್ಮಿಕಚಿಂತನದ ವಿಚಾರವು ಎ.ಎನ್.ರಮೇಶ್‍ ಅವರ “ಕೇಶವನಾಮ ಚೈತನ್ಯಧಾಮ” ಚುಟುಕು ಕೃತಿಯಲ್ಲಿಇದೆ. 2014 ರಲ್ಲಿ ಪ್ರಕಟಗೊಂಡ ಈ ಕೃತಿಯು 116 ಪುಟದಲ್ಲಿದೆ. ಕಾರವಾರ ಕೈಗಾ ವಸತಿ ಸಂಕೀರ್ಣದ ಭಗವದ್ಗೀತಾ ಮೈತ್ರಿ ಸಂಘದ ಭಾರತಿ ಭಟ್ ಈ ಕೃತಿ ಅಕ್ಕರೆಯ ನುಡಿ ಬರೆದಿದ್ದರೆ, ಮಂಜೇಶ್ವರದ ಡಾ.ರಮಾನಂದ ಬನಾರಿ ಅವರು ಮುನ್ನುಡಿ ಬರೆದಿದ್ದಾರೆ.

– ಅಕ್ಷರಜ್ಯೋತಿ–

“ಪುಸ್ತಕದ ಪದ ಎಷ್ಟು ಓದಿದರೇನು……?

ಪುಸ್ತಕದಿ ದಾಖಲಾಗದಿರೆ ಫಲವೇನು ??

ಅಕ್ಷರವೆಅರಿವಿನ ಬೆಳಕೆಂದ ಕೇಶವನು !”

ಅಕ್ಷರಗಳ ಖಣಜವು ಪುಸ್ತಕವಾಗಿದೆ.ಅರಿವಿಗೆ ನಾಂದಿ ಹಾಡುವುದು ಪುಸ್ತಕದ ಓದು ನಿರಂತರ ಓದು ಬಾಳನ್ನು ತಿದ್ದುವುದು ! ಓದಿದವರು ಬಾಳಲ್ಲಿ ಸಹಜ ನಡೆಯಲ್ಲಿ ಸುಧಾರಿಸುವರು.

– ನಂಬಿಕೆ–

“ನಂಬಿಕೆಯೆ ಭರವಸೆಗಳಿಗೆ ಜೀವ !

ನಂಬಿಕೆಯೆ ಬದುಕಿನ ನಿಜಭಾವ !

ನಂಬಿಕೆಯಿಂದ ಸಕಲವೂ ಸಂಭವ !

ನಂಬಿದರಷ್ಟೇ ಸಲಹುವನು ಕೇಸವ !!

‘ಕೇಶವ’ ನಾಮಾಂಕಿತದಲ್ಲಿ ಹುಟ್ಟುವಇಲ್ಲಿನ ವಿಚಾರಗಳು ಅನನ್ಯಚಿಂತನೆಯನ್ನು ಹೊಂದಿದ್ದುಎ.ಎನ್.ರಮೇಶ್‍ಅವರ ವೈವಿಧ್ಯಮಯಚಿಂತನೆಯ ಅಳವಡಿಕೆಯು ಈ ಕೃತಿಯ ಹಿರಿಮೆಯನ್ನುಎತ್ತಿತೋರಿಸುತ್ತದೆ.ಆಧ್ಯಾತ್ಮ ಕಸುವಿನ ಮಾತುಗಳಂತೆ ಇಲ್ಲಿನ ಚುಟುಕುಗಳು ಹೊರಹೊಮ್ಮಿವೆ. 220ಕ್ಕೂ ಹೆಚ್ಚಿನ ಚುಟುಕುಗಳು “ಕೇಶವನಾಮ-ಚೈತನ್ಯಧಾಮ”.

ರಮೇಶ್‍ಅವರಿಗೆ ಸಂದ ಹಲವು ಸಾಹಿತ್ಯ ಪುರಸ್ಕಾರಗಳು :

ಗಬ್ಬಿಯ ಎ.ಎನ್. ರಮೇಶ್‍ ಅವರಿಗೆ ಸಾಹಿತ್ಯ ಸೇವೆಯ ಗೌರವಾರ್ಥ ಹಲವಾರು ಪ್ರಶಸ್ತಿಗಳು ಮುಡಿಗೇರಿವೆ.

2014ರ ಚುಟುಕು ಮುಕುಟರಾಜ್ಯ ಪ್ರಶಸ್ತಿ, ಗುಬ್ಬಿಯಕಲರವಕೃತಿಗೆ‘ಬಿ.ಕೃಷ್ಣ ಪೈಬದಿಯಡ್ಕ ಸ್ಮಾರಕ ಪ್ರಶಸ್ತಿ’‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’ ವಿಶ್ವೇಶ್ವರಯ್ಯರಾಷ್ಟ್ರೀಯ ಪ್ರಶಸ್ತಿ, “ಬಸವಜ್ಯೋತಿ” ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ರಮೇಶ್‍ಅವರಿಗೆ ಸಂದಿವೆ.



ಪ್ರಬುದ್ಧ ಬರಹಕ್ಕೆ ಹೆಸರಾದ ‘ಕೈಗಾ ಕವಿ ರಮೇಶ್’ :

ತುಮಕೂರಿನ ಗುಬ್ಬಿಯಿಂದ ಕಾರವಾರದ ಕೈಗಾ ಅಣುಸ್ಥಾವರದ ಉದ್ಯೋಗಿಯಾದ ಎ.ಎನ್.ರಮೇಶ್‍ ಅವರು ತಮ್ಮ ಕಠೋರ ಸಮಯ ವಿನಯೋಗಿಸುವ ವೃತ್ತಿಯ ಮಧ್ಯದಲ್ಲಿಯೂ ಪ್ರವೃತ್ತಿಯಾದ ಸಾಹಿತ್ಯ ವೃತ್ತಿಯನ್ನು ಕೈ ಬಿಟ್ಟಿಲ್ಲ.

ಕವಿಯಾಗಿ, ನಾಟಕಕಾರರಾಗಿ, ಸಾಮಾಜಿಕ ಚಿಂತಕರಾಗಿ, ಶ್ರೇಷ್ಠವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ಅವರುತಮ್ಮ ಕ್ರಿಯಾಶೀಲತೆಯಿಂದ ಉತ್ತರೋತ್ತರವಾಗಿ ಬೆಳೆಯಲಿ, ಹೆಚ್ಚು ಹೆಚ್ಚು ಓದುಗರುಅವರಕೃತಿಗೆ ಸಿಗಲಿ ಎಂದುಹಾರೈಸುವೆನು.


  • ಡಾ. ಸಂಗಮೇಶ ತಮ್ಮನಗೌಡ್ರ (ಶಿಕ್ಷಕರು, ಸಾಹಿತಿಗಳು, ಚಿಂತಕರು, ಸೃಜನಶೀಲ ಬರಹಗಾರರು. ೧೦೪ ಕೃತಿಗಳ ಪ್ರಕಟನೆ.ನಾಟಕಕಾರ,ಗಾಯಕ,ಅಂಕಣಕಾರ, ರಾಮಗಿರಿಯಬೇಂದ್ರೆ ವೇದಿಕೆ (ರಿ) ಸಂಸ್ಥಾಪಕ.), ಬೂದಿಹಾಳ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW