ಮೆಲ್ಲ ಮೆಲ್ಲನೆ ಜಾರುತಿರೊ ಕಾಲಗರ್ಭದಲಿ ನೆನೆಪಿನಾಳದ ಬುತ್ತಿ ಗತ ಸೇರಿದಂತಾಗುತಿದೆ …ಕವಿಯತ್ರಿ ಅಭಿಜ್ಞಾ ಪಿ.ಎಮ್.ಗೌಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ..
ಸಾಧ್ಯ ಅಸಾಧ್ಯತೆಗಳ ಹೊತ್ತು
ಉರುಳಿದ ಕಾಲದೊಳಗೆ
ಸಿಹಿ ಕಹಿ ಅನುಭವಗಳು ಬೇಕಾದಷ್ಟು
ಅದರೊಳಗೆ
ಅರಳಿದ್ದೆಷ್ಟೊ ನರಳಿದೆಷ್ಟೊ
ನೆನೆದರಂತು ರೋಮಾಂಚನ…
ಹಳೆಬೇರು ಹೊಸಚಿಗುರು ಬೆಸೆದು
ಒಸೆದ ಬಾಳಿನೊಳಗೆ
ಗಮ್ಯದೆಡೆಗಿನ ಪಯಣವದು
ಕಳೆದ ನಿನ್ನೆಗಳ ನೆನಪಲಿ
ನಾಳೆ ರೂಪಿಸೊ ಯೋಜನೆಯ
ಏಣಿ ಆರೋಹವಾಗಬೇಕಷ್ಟೆ….
ಜಾರುತಲೆ ಜಾಲಾಡಿದೆ ಕಾಲ
ಸೂಕ್ಷ್ಮಾನು ಸೂಕ್ಷ್ಮ
ತಿರುವುಗಳಲಿ ಮುಳುಗಿಸಿ
ಮೇಲೇಳಿಸುತ
ಮನುಜನೊಳಗಿನ ದರ್ಪವ..!
ಅರಿತು ಮುನ್ನಡೆದರೆ
ಹೊಸ ಹೆಜ್ಜೆ ಹೊಸ ಬೆಳಕು
ನವಚೈತನ್ಯದ ಆಸರೆ
ಇಲ್ಲದಿರೆ ಕಾಲದ ಕೈಸೆರೆ…
ಕಳೆದ ತಿರುವುಗಳ ಪುಳಕ
ಮನದ ಬಯಕೆಗಳ ಮೇಲೆ ಥಳಕು
ತೆರೆದುಕೊಳ್ಳಬೇಕಿದೆ
ಹೊಸತರೊಂದಿಗೆ ಬೆರೆತ
ಕಹಿಭಾವಗಳ ಝಲಕು
ಹಳಸದಂತೆ ಮಾಡದಿರಲಿ
ಬಂಧ ಬಾಂಧವ್ಯಗಳ ಬೆಳಕು..
ಮೆಲ್ಲ ಮೆಲ್ಲನೆ ಜಾರುತಿರೊ
ಕಾಲಗರ್ಭದಲಿ ನೆನೆಪಿನಾಳದ ಬುತ್ತಿ
ಗತ ಸೇರಿದಂತಾಗುತಿದೆ
ಹೊಕ್ಕಿ ತರಬೇಕಾಗಿದೆ
ನಾಳೆ ಭರವಸೆಗಳು ಹೊಮ್ಮಲು.!
ಕನವುಗಳ ನೆಳಲಿನಲಿ
ಅವೆಲ್ಲಿ ಉಚ್ಛೇದವಾಗುತ್ತವೋ
ಬಲ್ಲವರಾರು.?
ಉಡಿಕಿಡಿಯು ಚಿಮ್ಮುತ
ಮನದಳಲು ಕಾಣುವಂತಾಗಲಿ…
ಗಾಲಿಯಂತೆ ಕಣ್ಣೆದುರೆ
ಉರುಳಿತಿರೊ ದಿನಗಳಂತೆ
ನೋವುಗಳೆಲ್ಲ ಸರಿದುಹೋಗಲಿ
ನೆಮ್ಮದಿಯ ಕ್ಷಣಗಳು
ಹರಿದು ಬರುತಿರಲಿ
ಹೊಸ ಹೆಜ್ಜೆಗೊಂದು ಹೊಸ
ಉಪೋದ್ಘಾತವಿರಲಿ
ಹೊಸ ಬಾಳಿನಲಿ
ಉಬ್ಬೆಮೆಗಳು ತೊಲಗುತ
ಉದ್ಯೋತ ಹೆಚ್ಚಾಗಲಿ….
- ಅಭಿಜ್ಞಾ ಪಿ.ಎಮ್.ಗೌಡ – ಮಂಡ್ಯ
