ಕಲಬುರಗಿಯ ಸಾಂಸ್ಕೃತಿಕ ಸಂಭ್ರಮ, ಗಗನದೆತ್ತರಕ್ಕೆ ಮೆರೆವಲ್ಲಿ ಹೊರಗಿನವರ ಕಾಣ್ಕೆ ಮುಗಿಲಗಲ.ಇನ್ನು ಕಲಬುರಗಿಯಲ್ಲಿಯೇ ಹುಟ್ಟಿಬೆಳೆದ ಹಲವಾರು ಮಹನೀಯರಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪರಿಚಯವನ್ನು ಮಾಡಿಕೊಡುತ್ತಾರೆ ಖ್ಯಾತ ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರು. ಮುಂದೆ ಓದಿ…
ನಮ್ಮ ಕಲ್ಯಾಣ ಕರ್ನಾಟಕದ ರಾಜಧಾನಿಯಂತಿರುವ ಕರ್ತೃಭೂಮಿ ಕಲಬುರ್ಗಿಯ ಸಾಂಸ್ಕೃತಿಕ ಬದುಕಿನ ಬೆಡಗು ಮತ್ತು ಬೆರಗು ಹೆಚ್ಚಿಸುವಲ್ಲಿ ವ್ಹಾಯಾ ಹುಟಗಿ ಮತ್ತು ಯಾದಗಿರಿ, ಕಮಲಾಪುರ ಮಾರ್ಗದ ಕೊಡುಗೆ ಅಪಾರ. ವ್ಹಾಯಾ ಹುಟಗಿ ರೈಲುಗಾಡಿ ಮೂಲಕ ಕಲಬುರ್ಗಿಗೆ ಬಂದವರು ಅಂದರೆ ಅಂದಿನ ಅವಿಭಜಿತ ಬಿಜಾಪುರದ ಕಡೆಯಿಂದ ಬಂದು ನೆಲೆಸಿದವರು. ಅವರನ್ನು ಕಲಬುರ್ಗಿಯಲ್ಲಿ ವ್ಹಾಯಾ ಹುಟಗಿ ಮಂದಿ ಎಂತಲೇ ಕರೆಯೋದು.
ಹಾಗೇನೇ ವ್ಹಾಯಾ ಯಾದಗಿರಿ ರೈಲುಗಾಡಿ ಮೂಲಕ ಬಂದವರೆಂದರೆ ಅವತ್ತಿನ ಅಖಂಡ ರಾಯಚೂರು ಜಿಲ್ಲೆ ಕಡೆಯಿಂದ ಕಲಬುರ್ಗಿಗೆ ಬಂದವರು. ಕಮಲಾಪುರದ ಮೂಲಕ ಕಲಬುರ್ಗಿಗೆ ಬಂದವರು ಬೀದರ ಕೋಟೆಯ ಎನ್ಕಿ ಮಂದಿ. ಈ ಎಲ್ಲ ಮುಖಾಂತರ ಮಂದಿಯಿಂದ ಕಲಬುರಗಿ ಮಾನಸ ತುದಿ ಮೇಲೆ ಜ್ಞಾನಕೆ ನಿಲುಕುವಂತೆ ಥಳಥಳ ಹೊಳೆಯುತ್ತಿರುವುದನ್ನು ಅಲ್ಲಗಳೆಯಲಾಗದು. ಕಲಬುರಗಿಯ ಸಾಂಸ್ಕೃತಿಕ ಲೋಕಕ್ಕೆ ಒಬ್ಬೊಬ್ಬರ ಕೊಡುಗೆಯು ಕಂಡಾಪಟಿ. ಅದೆಲ್ಲವನ್ನು ಅದೆಲ್ಲರ ಕ್ಷಮೆ ಕೋರಿ ಆಯ್ದ ಕೆಲವರ ಕುರಿತು ಕೆಲವು ಟಿಪ್ಪಣಿಗಳು. ಇಲ್ಲಿ ಉಲ್ಲೇಖ ಇಲ್ಲದವರ ಕಾಣ್ಕೆ ಇಲ್ಲವೆಂದಲ್ಲ. ಮಾಸೀಲು ನೋಡಿದಂತೆ. ಅನ್ನದಗುಳು ಹಿಚುಕಿ ನೋಡಿದಷ್ಟು ಖಾತರಿ.
ಕಲಬುರಗಿಯ ಕಲರವ ಹೆಚ್ಚಲು ಅವರೆಲ್ಲರ ಕೊಡುಗೆ ಅನನ್ಯವಾದುದು. ಅಷ್ಟಕ್ಕೂ ಈಗ ಅವರೆಲ್ಲರೂ ಕಲಬುರಗಿಯವರೇ ಆಗಿ ಹೋಗಿದ್ದಾರೆ. ಹೌದು ಕಲಬುರ್ಗಿ ಗುಣವೇ ಅಂಥದು. ಅದು ವಲಸಿಗರಿಗೆ ಬೇಗ ಒಲಿಯುತ್ತದೆ. ಯಾವತ್ತೂ ಮಲತಾಯಿ ಭಾವ ತೋರದೇ ಅವರನ್ನು ಅದು ಹೃದಯ ತುಂಬಿ ಅಪ್ಪಿಕೊಂಡಿದೆ. ಬೇರೆಯವರೆಂಬ ಭಿನ್ನ ಬೇಧವರಿಯದೇ ಒಪ್ಪಿಕೊಂಡಿದೆ. ಅವರಾದರೂ ಕಲಬುರಗಿಯೆಂಬ ಅಪ್ಪಟ ಮೊಗಲಾಯಿ ನೆಲದ ತಾಯಿಬೇರು ಸಂವೇದನೆಗಳು ಕಿಂಚಿತ್ತೂ ಗಿಜಗುಳಕಿ ಆಗದಂತೆ ನಡಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಪಡಕೊಂಡಿದ್ದಾರೆ.

(ಎ. ಕೆ. ರಾಮೇಶ್ವರ ಮಾಸ್ತರರ ಚಿತ್ರ)
ತೊಂಬತ್ತರ ಉತ್ತುಂಗದ ಹೊಸ್ತಿಲಲ್ಲಿರುವ ಎ. ಕೆ. ರಾಮೇಶ್ವರ ಮಾಸ್ತರರು ಹಳೆಯ ವಿಜಾಪುರ ಜಿಲ್ಲೆಯವರು. ಅವರು ಕಲಬುರಗಿಯಲ್ಲೇ ಹುಟ್ಟಿ ಬೆಳೆದವರಿಗಿಂತ ಅನುಪಮ ಬಾಳಿನ ಅರ್ಧಗುಂಜಿ ಹೆಚ್ಚಿನ ತೂಕದ ಅನನ್ಯತೆ ಬದುಕಿದ್ದಾರೆ. ಅವರು ರಾಷ್ಟ್ರಮಟ್ಟದ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರೆಂದೂ ಅದನ್ನು ತಮ್ಮ ಕಲ್ಚರಲ್ ಕಬ್ಜಾ ಅಂದುಕೊಂಡವರಲ್ಲ.
ಅದೆಲ್ಲ ಕಲಬುರಗಿ ಸೀಮೆಗೆ ದಕ್ಕಿದ ಮಾನ್ಯತೆಯೆಂಬ ಯಥಾರ್ಥ ಮನೋಧರ್ಮ ಅವರಲ್ಲಿ ಸ್ಥಾಯಿಗೊಂಡಿದೆ. ಅದು ರಾಮೇಶ್ವರ ಮಾಸ್ತರಗೆ ಮಾತ್ರ ಸೀಮಿತವಲ್ಲ. ಬೇರೆ ಜಿಲ್ಲೆಗಳಿಂದ ಬಂದು ಖ್ಯಾತಿ ಗಳಿಸಿದ ಅನೇಕರಿಗೂ ಅಕ್ಷರಶಃ ಲಾಗೂ ಆಗ್ತದೆ. ಅಂಥವರು ಇಲ್ಲಿಗೆ ಬಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಿದ್ಧ ಪ್ರಸಿದ್ಧರಾಗಲು ನಮ್ಮ ಕಲಬುರ್ಗಿ ಹಾಳತವಾದ ಭೂಮಿ.
ಕಲಬುರಗಿ ವಲಸಿಗರಿಗೆ ಒಲಿದಂತೆ ಇಲ್ಲೇ ಹುಟ್ಟಿ ಬೆಳೆದ ನೆಲದ ಮಕ್ಕಳಿಗೆ ಒಲಿದಿಲ್ಲ. ಅಂತೆಯೇ ಅದು ಆನು ಒಲಿದಂತೆ ಹಾಡುವೆನಯ್ಯ ಎನ್ನುತ್ತದೆ. ಹೀಂಗಾಗಿ ಕಲಬುರ್ಗಿ ನೆಲದ ಹದ ಮತ್ತು ಹಸಿವನ್ನು ಅನ್ಯ ಜಿಲ್ಲೆಯವರು ಪಸಂದಾಗಿ ಅರ್ಥೈಸಿಕೊಂಡಿದ್ದಾರೆ. ಈ ನೆಲದಲ್ಲಿ ಏನೇನು ಬಿತ್ತಿ ಬೆಳೆಯಬಹುದೆಂಬುದು ಬೇರೆಯವರಿಗೆ ಗೊತ್ತಿದ್ದಷ್ಟು ನಮ್ಮನೆಲ ಉತ್ತುವ ನಮಗೇ ಗೊತ್ತಿಲ್ಲ. ನಮಗೆ ಗಾಂವಟಿ ಲೆಕ್ಕದಲ್ಲಿ ಉತ್ತುವುದು ಗೊತ್ತು. ನಮ್ಮ ನೆಲದಲ್ಲಿ ಏನು ಬಿತ್ತಬೇಕೆಂಬ ಶ್ಯಾಣೇತನವಿಲ್ಲ. ಹೌದು ನಮಗೆ ಕಟಿನೀರು ಬಸಿಯುವಂತೆ ರೋಮ ರೋಮ ದುಡಿಯುವ ಬೋಳೇತನ ಗೊತ್ತಿದೆ. ಬಿತ್ತುವ, ಬೆಳೆಯುವ ಹದವರಿತ ಮತ್ತು ಹರಿತ ಜ್ಞಾನ ನಮ್ಮ ನೆಲದಲ್ಲೇ ಹುಟ್ಟಿ ಬೆಳೆದ ನಮಗಿಲ್ಲ. ಅದು ಒಮ್ಮೊಮ್ಮೆ ‘ಜಾಂದೇ ಚೋಡೋ’ ಎಂಬ ಹುಂಬತನವೂ ಆಗಿದ್ದೀತು.
ಸಂತಸದ ಸಂಗತಿಯೆಂದರೆ ಹೊರಗಿನಿಂದ ಬಂದ ಎಲ್ಲ ಸಾಂಸ್ಕೃತಿಕ ಮನಸುಗಳು ಕಲಬುರಗಿಯ ಮೃಣ್ಮನದ ಸಾಕ್ಷೀಪ್ರಜ್ಞೆಯಂತೆ ಬದುಕಿ ತೋರಿದ್ದಾರೆ. ಅದು ಬರೀ ವಿಜಯಪುರ, ಬೀದರ, ರಾಯಚೂರುಗಳಲ್ಲದೇ ದೂರದ ಬಳ್ಳಾರಿ, ಬೆಳಗಾವಿ, ಧಾರವಾಡದ ಕೊಡುಗೆಯೂ ಅಷ್ಟೇ ಅಮೋಘವಾಗಿದೆ. ಅನುಭಾವದ ಹರಿಕಾರ ನಮ್ಮ ಕಡಕೋಳ ಮಡಿವಾಳಪ್ಪನವರನ್ನು ಶಾಸ್ತ್ರೀಯ ಜ್ಞಾನಶಿಸ್ತು ನೆಲೆಗಳಲ್ಲಿ ಮೊದಲು ಗುರುತಿಸಿದವರು ಪ್ರೊ. ಎಸ್. ಎಸ್. ಬಾಣದ ಹಾಗೂ ಬೆಳಗಾವಿಯ ಪೋತನಾಳದ ಪ್ರೊ. ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ.

(ಡಾ. ಮೀನಾಕ್ಷಿ ಬಾಳಿಯವರ ಚಿತ್ರ )
ಅದಕ್ಕೆ ಮುನ್ನ ನಾವು ಮಡಿವಾಳಪ್ಪನವರನ್ನು ದೈವತ್ವದ ಪುರಾಣದ ನೆಲೆಗಳಲ್ಲೇ ದೈವೀಕರಿಸಿದ್ದೇ ಅಧಿಕ. ಆನಂತರದ ಇತ್ತೀಚಿನ ವರ್ಷಗಳಲ್ಲಿ ಮಡಿವಾಳಪ್ಪನವರ ಚಿಂತನಧಾರೆಗೆ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಮಾನ್ಯತೆ ದಕ್ಕುವ ದಿಕ್ಕಿನಲ್ಲಿ ಮಹತ್ತರ ಕೆಲಸ ಮಾಡಿದವರು ನಮ್ಮ ನಡುವಿನ ಸಂಸ್ಕೃತಿ ಚಿಂತಕಿ ವಿಜಾಪುರ ಜಿಲ್ಲೆಯ ದೇವಣಗಾಂವ ಮೂಲದ ಡಾ. ಮೀನಾಕ್ಷಿ ಬಾಳಿ. ನೆನಪಿರಲಿ ನಮ್ಮ ಮಡಿವಾಳಪ್ಪನವರ ತಾಯಿ ಗಾಣಿಗರ ಗಂಗಮ್ಮ ಅಂದಿನ ವಿಜಾಪುರ ಜಿಲ್ಲೆಯ ನಾಗಠಾಣದವರು.
ಕಾವ್ಯಮೀಮಾಂಸೆ ಲೋಕದಲ್ಲಿ ಕಲಬುರಗಿಗೆ ವಿಮರ್ಶೆಯ ಕಿರೀಟ ತೊಡಿಸಿದ ಮೊದಲಿಗರೆಂದರೆ ಪ್ರೊ. ಕೃಷ್ಣಮೂರ್ತಿ ಕಿತ್ತೂರು ಮತ್ತವರ ಜತೆ ಅನೇಕರು. ಕಲಬುರಗಿಯ ಸ್ನಾತಕೋತ್ತರ ಕೇಂದ್ರವು ಅಂದಿನ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಶಿಶು. ಆಗ ಅದು ಯಾವುದೇ ಬಾಲರೋಗಗಳಿಗೆ ಬಲಿಯಾಗದಂತೆ ರೋಗನಿರೋಧಕ ಸೂಕ್ತ ರಕ್ಷಣಾ ಲಸಿಕೆಗಳನ್ನು ನೀಡುವಲ್ಲಿ ಸ್ಥಳೀಯರಿಗಿಂತ ಹೊರಗಿನವರ ಕೊಡುಗೆ ಕೊಂಡಾಡುವಂತಹದ್ದು.

(ಪ್ರೊ. ಪೋತೆಯವರ ಚಿತ್ರ)
ಅಂದಿನ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ವಿ.ವಿ. ಕಟ್ಟುವುದರ ಜತೆ ಜತೆಯಲ್ಲಿ ಕಲಬುರಗಿ ಪರಿಸರದ ಸಾಂಸ್ಕೃತಿಕ ಬದುಕನ್ನು ಸಮೃದ್ಧಗೊಳಿಸಿದವರು. ಧಾರವಾಡ, ಬೆಳಗಾವಿ, ವಿಜಾಪುರದವರ ಈ ಪರಂಪರೆ ನಮ್ಮ ಪ್ರೊ. ಎಚ್.ಟಿ. ಪೋತೆ ಅವರವರೆಗೂ ಸೊಗಸಾಗಿ ಸಾಗಿ ಬಂದಿದೆ. ಪ್ರೊ. ಪೋತೆಯವರು ಕಲಬುರ್ಗಿಯ ಹೈ.ಕ. ಬದುಕನ್ನು ಪ್ರಗತಿಪರ ಮತ್ತು ತೀಕ್ಷ್ಣತೆಯ ಒಳನೋಟಗಳಿಂದ ಗುರುತಿಸುವ ಗುರುತರ ಕೆಲಸಕ್ಕೆ ತೊಡಗಿದ್ದಾರೆ.

(ಗಿರಡ್ಡಿ ಗೋವಿಂದರಾಜಯವರ ಚಿತ್ರ)
ಕಲಬುರಗಿಯ ಆಧುನಿಕ ರಂಗಭೂಮಿ ಬೆಳವಣಿಗೆ ಸಂದರ್ಭದಲ್ಲಿ ಜಿಲ್ಲೆಯ ಹೊರಗಿನವರು ತೋರಿದ ಅಪೂರ್ವ ಕಳಕಳಿ ಅವರ್ಣನೀಯ. ಅದರಲ್ಲಂತೂ ಗಿರಡ್ಡಿ ಗೋವಿಂದರಾಜರಿಗೆ ಅಗ್ರಸ್ಥಾನ. ಅಲ್ಲಿಂದ ಶುರುವಾಗಿ ಪ್ರೊ. ಆರ್. ಕೆ. ಹುಡುಗಿ ಮಾಸ್ತರರು, ನಮ್ಮ ಘಂಟಿ ಶಂಕ್ರಯ್ಯರವರೆಗೆ ಅದು ಗಟ್ಟಿಗೊಂಡಿದೆ. ಅವರಿಂದಾಗಿ ಕರ್ನಾಟಕದ ಸಮುದಾಯ ಸಂಘಟನೆಯಲ್ಲಿ ಕಲಬುರಗಿಗೆ ವಿಶೇಷ ಜಾಗ. ಡಾ. ಸರಸ್ವತಿ ಚಿಮ್ಮಲಗಿ, ಡಾ. ಸುಜಾತಾ ಜಂಗಮಶೆಟ್ಟಿ, ಶೋಭಾ ರಂಜೋಳ್ಕರ್ ರಂಗಶ್ರಮ ಗಮನಾರ್ಹ.
ಬೀದರಿನಿಂದ ಬಂದ ಪ್ರೊ. ರಾಮಶೆಟ್ಟಿ ಹುಡಗಿ ಮಾಸ್ತರರು ಕಲಬುರ್ಗಿ ನೆಲದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಚಿಂತನೆಯ ಬೀಜ ಬಿತ್ತಿದ ಅಕ್ಷರ ಕೃಷಿಕರು. ಸಮುದಾಯದ ಬೀದಿನಾಟಕಗಳ ಮೂಲಕ ಸಮೂಹ ಚಿಂತನೆಯ ಸಾಂಸ್ಕೃತಿಕ ಎಚ್ಚರ, ಶಿಸ್ತುಬದ್ಧ ರಾಜಕೀಯದ ಅಂತಃಪ್ರಜ್ಞೆಯ ತೀವ್ರತೆ ಹೆಚ್ಚಿಸಿದವರು ಹುಡುಗಿ ಮಾಸ್ತರರು. ಅನುವಾದ ಸಾಹಿತ್ಯದಲ್ಲಿ ಹುಡುಗಿ ಮಾಸ್ತರರದು ಅಸಾಧಾರಣ ಸಾಧನೆ. ರಾಹು (ರಾಮಶೆಟ್ಟಿ ಹುಡುಗಿ) ಹೆಸರಲ್ಲಿ ಅವರು ಮಹತ್ವದ ಕೃತಿಗಳನ್ನು ನೀಡಿದ್ದಾರೆ.

(ಚಂದ್ರಕಾಂತ ಕುಸನೂರುಯವರ ಚಿತ್ರ)
ಧಾರವಾಡ ಕಡೆಯ ಅಬ್ಬಿಗೇರಿಯ ಗಿರಡ್ಡಿ ಗೋವಿಂದರಾಜರು ರಂಗಮಾಧ್ಯಮದ ಮುಖೇನ ಆಧುನಿಕ ರಂಗಭೂಮಿಗೆ ಕಲಬುರಗಿಯಲ್ಲಿ ಗುದ್ದಲಿ ಹಾಕಿದವರು. ಗಿರಡ್ಡಿಯವರ ಕೊಡುಗೆ ನಾಟಕ ಮಾತ್ರವಲ್ಲದೇ ವಿಮರ್ಶೆ, ಕಥಾಲೋಕಕ್ಕು ಸಾತತ್ಯಗೊಂಡುದನ್ನು ಮರೆಯಲಾಗದು. ಗಿರಡ್ಡಿ ಜತೆ ಅಂದು ಹೊಯ್ ಕೈಯಾಗಿ ರಂಗ ಕೈಂಕರ್ಯಕ್ಕೆ ಕೈ ಜೋಡಿಸಿದವರು ನಮ್ಮವರೇ ಆದ ಚಂದ್ರಕಾಂತ ಕುಸನೂರು. ನಾಟಕ ಪ್ರದರ್ಶನಗೊಳ್ಳಲಿ, ಬಿಡಲಿ ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರ್ಗಿಯಲ್ಲೇ ಕ್ಯಾಂಪ್ ಮಾಡಿರುವುದು ವಿಜಯಪುರದ ಹಾನಗಲ್ ಕುಮಾರೇಶ್ವರ ನಾಟಕ ಕಂಪನಿ.
ಕಲ್ಯಾಣನಾಡಿನ ಶಿಕ್ಷಣ, ಸಾಹಿತ್ಯ, ಸಂಗೀತ, ರಂಗಭೂಮಿ, ಇತಿಹಾಸ, ಜನಪದ, ವೈದ್ಯಕೀಯ, ರಾಜಕೀಯ, ನ್ಯಾಯಾಂಗ, ಕೃಷಿ ಹೀಗೆ ಸರ್ವಾಂಗೀಣ ಅಭಿವೃದ್ಧಿಗೆ ಹೊರ ಜಿಲ್ಲೆಗಳಿಂದ ಬಂದು ಶ್ರಮಿಸಿದ ಅವರುಗಳು ನಮ್ಮೊಳಗೊಂದಾದರು. ನಮ್ಮವರಾಗೇ ಕಲಬುರಗಿಯ ಕೀರುತಿ ಕಳಶ ಮೆರೆದದ್ದು ಅಪ್ರತಿಮ. ಹಾಗೆಯೇ ಕಲಬುರ್ಗಿಯು ತೋರಿದ ತಾಯ್ತನದ ಪ್ರೀತಿ, ಅಂತಃಕರಣ ಅನ್ಯಾದೃಶವಾದುದು. ಇದೊಂದು ಬಗೆಯ ಆನುಷಂಗಿಕ ಪ್ರೀತಿಯ ಫಲ.

(ಸಿದ್ಧರಾಮ ಜಂಬಲದಿನ್ನಿಯವರ ಚಿತ್ರ)
ಉತ್ತರಾದಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕಲಬುರ್ಗಿ ನೆಲದ ಎತ್ತರ ಬಿತ್ತರ ಹೆಚ್ಚಿಸಿದವರೆಂದರೆ ರಾಯಚೂರಿನ ಸಿದ್ಧರಾಮ ಜಂಬಲದಿನ್ನಿ ಅವರು. ವಚನಗಳಿಗೆ ಮಲ್ಲಿಕಾರ್ಜುನ ಮನ್ಸೂರ್ ಅವರಷ್ಟೇ ಸಮರ್ಥ ಪ್ರಮಾಣದಲ್ಲಿ ಕಲಬುರ್ಗಿ ನಾಡಿಗೆ ಕಾಣಿಕೆ ನೀಡಿದವರು ಜಂಬಲದಿನ್ನಿ ಸಿದ್ಧರಾಮಣ್ಣ. ಗಂಗೂಬಾಯಿ ಸಂಗೀತ ವಿ.ವಿ.ಯ ಪ್ರಥಮ ಕುಲಪತಿ ಡಾ. ಹನುಮಣ್ಣ ನಾಯಕ ದೊರೆ, ಇವತ್ತಿನ ಡಾ. ಲಕ್ಷ್ಮೀ ಶಂಕರ ಜೋಷಿ, ಮಲ್ಲಿಕಾರ್ಜುನ ಮನಸೂರ ಅವರ ಮೊಮ್ಮಗಳು ಸೀಮಾ ಪಾಟೀಲ, ಡಾ. ಜಯದೇವಿ ಜಂಗಮಶೆಟ್ಟಿತನಕ ಕಲಬುರಗಿಯಲ್ಲಿ ಶಾಸ್ತ್ರೀಯ ಸಂಗೀತದ ಹೆಜ್ಜೆ ಗುರುತುಗಳು ಗುರುತರವಾಗಿವೆ.
ಹತ್ತತ್ರ ಎರಡು ದಶಕಗಳ ಕಾಲ ಗುಲಬರ್ಗಾ ವಿ.ವಿ.ಯಲ್ಲಿದ್ದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ಚರಿತ್ರೆಯನ್ನು ನಿಜದನೆಲೆಯಲ್ಲಿ ಚರಿತ್ರಾರ್ಹಗೊಳಿಸಿದವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಪ್ರೊ. ಬಿ.ಸಿ. ಮಹಾಬಲೇಶ್ವರಪ್ಪ. ಕೇಂದ್ರೀಯ ವಿಶ್ವ ವಿದ್ಯಾಲಯ ಕಟ್ಟುವ ನಿಟ್ಟಿನಲ್ಲಿ ಮಹೇಶ್ವರಯ್ಯ, ಅಪ್ಪಗೆರೆ ಸೋಮಶೇಖರ ಇನ್ನೂ ಕೆಲವರನ್ನು ನೆನೆಯಲೇಬೇಕು.

(ಗವೀಶ ಹಿರೇಮಠಯವರ ಚಿತ್ರ)
ಜಯತೀರ್ಥ ರಾಜಪುರೋಹಿತರು, ತವಗ ಭೀಮಸೇನರಾಯರು, ಶಾಂತರಸ, ಶೈಲಜಾ ಉಡಚಣ, ಕೆಲಕಾಲ ಯಾದಗಿರಿಯ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಸಿದ್ಧಯ್ಯ ಪುರಾಣಿಕ, ಕವಿ ಎಸ್. ಜಿ. ಸ್ವಾಮಿ, ಪ್ರೊ. ಬಸವರಾಜ ಸಬರದ, ಮಹಾಂತೇಶ ನವಲಕಲ್, ಪ್ರೊ. ವಸಂತ ಕುಷ್ಟಗಿ, ಡಾ. ಸ್ವಾಮಿರಾವ ಕುಲಕರ್ಣಿ ಕಳೆದ ವರ್ಷ ನಿಧನರಾದ ಗವೀಶ ಹಿರೇಮಠವರೆಗೆ ಅಖಂಡ ರಾಯಚೂರು ಜಿಲ್ಲೆಯ ಕೊಡುಗೆ ಬಣ್ಣಿಸಲಸದಳ.
ವಿಜಯಪುರದ ಪ್ರೊ. ಮ. ಗು. ಬಿರಾದಾರ, ಪ್ರೊ. ಬಿ. ಬಿ. ಹೆಂಡಿ, ಲಕ್ಷ್ಮಣರಾವ ಗೋಗಿ, ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತೆ ಡಾ. ಸರಸ್ವತಿ ಚಿಮ್ಮಲಗಿ, ಮಲ್ಲಿಕಾ ಘಂಟಿ, ನಾಗಾಬಾಯಿ ಬುಳ್ಳಾ, ರವೀಂದ್ರ ಕರ್ಜಗಿ, ಡಾ. ಬಸವರಾಜ ಡೋಣೂರು, ಡಾ. ಪಿ.ಕೆ. ಖಂಡೋಬಾ, ಡಾ. ಶ್ರೀಶೈಲ ಘೂಳಿ, ಡಾ. ಶ್ರೀಶೈಲ ನಾಗರಾಳ ಇನ್ನೂ ಅನೇಕರು ಕಲಬುರಗಿಯಲ್ಲಿ ಬೀರಿದ ಸಾಂಸ್ಕೃತಿಕ ಪರಿಮಳದ ಹಿರಿಮೆ ಹಿರಿದಾದುದು. ಬಾದಾಮಿ ಚಾಲುಕ್ಯರ ನಾಡಿನಿಂದ ಬಂದ ಹಿರಿಯ ಸನ್ಮಿತ್ರರಾದ ಎಸ್. ಎಸ್. ಹಿರೇಮಠ ಅವರ ಮಾತಿನಲ್ಲೇ ಹೇಳುವುದಾದರೆ ನಾವು ವಿಜಾಪುರ ಜಿಲ್ಲೆಯವರೆಂದರೆ ಕರ್ನಾಟಕದ ಕೇರಳಿಗರು.
ಕಲಬುರಗಿಗೆ ಬೀದರದ ಕಾಣ್ಕೆ ಸಣ್ಣದೇನಲ್ಲ. ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಕಲಬುರ್ಗಿ ಹೆಸರನ್ನು ಕಂಗೊಳಿಸಿದ ಮಲ್ಲಿಕಾರ್ಜುನ ಖರ್ಗೆ ಮೂಲತಃ ಬೀದರ ಜಿಲ್ಲೆಯವರು. ಸಂಸ್ಕೃತಿ ಚಿಂತಕ ವಿಕ್ರಮ ವಿಸಾಜಿ, ಜನವಾದಿ ಮಹಿಳಾ ಸಂಘಟನೆಯ ಕಾಂ. ಕೆ. ನೀಲಾ, ಕಾಶಿನಾಥ ಅಂಬಲಗೆ ಹೀಗೆ ಬೀದರ ಜಿಲ್ಲೆಯಿಂದ ಬಂದು ಕಲಬುರಗಿಯ ಸಾಂಸ್ಕೃತಿಕ ಕ್ಷಿತಿಜದ ಸಾಧ್ಯತೆ ವಿಸ್ತರಿಸಿದವರು ಅನೇಕರು.

(ಪಾಟೀಲ ಪುಟ್ಟಪ್ಪ ಅವರ ತಮ್ಮ ರಾಷ್ಟ್ರ ಖ್ಯಾತಿಯ ಡಾ. ಪಿ. ಎಸ್. ಶಂಕರ)
ಹೆಸರಾಂತ ವೈದ್ಯ ಡಾ. ನರಸಣಗಿ, ಡಾ. ನಾಗಠಾಣ, ಡಾ. ಧಾರವಾಡಕರ್, ರಾಷ್ಟ್ರ ಖ್ಯಾತಿಯ ಡಾ. ಪಿ. ಎಸ್. ಶಂಕರ (ಪಾಟೀಲ ಪುಟ್ಟಪ್ಪರ ತಮ್ಮ) ಹೀಗೆ ಇನ್ನೂ ಅನೇಕ ಕ್ಷೇತ್ರಗಳ ಅನೇಕರು ಕಲಬುರಗಿಯ ಆರೋಗ್ಯ ಬದುಕಿನ ಸ್ವಾಸ್ಥ್ಯ ಕಾಪಿಟ್ಟವರು.
ಕಲಬುರ್ಗಿಯ ಮಾಧ್ಯಮ ಲೋಕಕ್ಕೆ ಹೊರಗಿನವರ ಕೊಡುಗೆಯೇನು ಕಮ್ಮೀಇಲ್ಲ. ಆಕಾಶವಾಣಿಯಲ್ಲಿ ಹಲವು ವರ್ಷಗಳ ಕಾಲ ಕಲಬುರ್ಗಿಯ ಬಾನುಲಿ ಕೇಂದ್ರ ಕಟ್ಟಿ ಬೆಳೆಸಿದ ಕೀರ್ತಿ ಧಾರವಾಡ ಮೂಲದ ಗೌಸ್ ಮೋಹಿದ್ದೀನ್ ಶಿರಹಟ್ಟಿ ಅವರಿಗೆ ಸಲ್ಲಬೇಕು. ಕಳೆದೊಂದು ದಶಕದಲ್ಲಿ ಕರಾವಳಿ ಕರ್ನಾಟಕದ ಸದಾನಂದ ಪೆರ್ಲ ಕಲಬುರ್ಗಿ ಬಾನುಲಿ ನಾದ ನಿನಾದದ ಸೂತ್ರದಾರರು. ವಿದ್ಯುನ್ಮಾನ ಮಾಧ್ಯಮದಲ್ಲಿ ಹದಿನೇಳು ವರ್ಷಕ್ಕೂ ಹೆಚ್ಚುಕಾಲ ಶಿವರಾಮ ಅಸುಂಡಿ, ಕಲಘಟಗಿಯ ಸಂಜಯ ಚಿಕ್ಕಮಠ ಕಲಬುರ್ಗಿಗೆ ಹೆಸರಾಗಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಮುಧೋಳ ಸಿದ್ಧರಾಮೇಶ, ಪಿ. ಎಂ. ಮಣೂರ, ಟಿ. ವಿ. ಶಿವಾನಂದನ್, ಜಿ. ಎನ್. ಮೋಹನ್, ಗಣೇಶ ಚಂದನಶಿವ, ವಾದಿರಾಜ ವ್ಯಾಸಮುದ್ರ, ಸಿದ್ಧು ಸುಭೇದಾರ ಹೀಗೊಂದು ಪಟ್ಟಿಯೇ ರಾರಾಜಿಸಬಲ್ಲದು.
ಒಟ್ಟಿನಲ್ಲಿ ಕಲಬುರಗಿಯ ಸಾಂಸ್ಕೃತಿಕ ಸಂಭ್ರಮ, ಸಡಗರದ ಗುಲ್ದಾಸ್ಥ ಗುಂಬಜದಂತೆ ಗಗನದೆತ್ತರಕೆ ಮೆರೆವಲ್ಲಿ ಹೊರಗಿನವರ ಕಾಣ್ಕೆ ಮುಗಿಲಗಲ. ಇಲ್ಲೇ ಹುಟ್ಟಿ ಬೆಳೆದ ಕಲಬುರಗಿ ನೆಲಮೂಲ ಸಂಸ್ಕೃತಿಯ ಹಕ್ಕಿನೊಡೆಯರಾದ ಎಸ್. ಎಮ್. ಪಂಡಿತ್, ಚೆನ್ನಣ್ಣ ವಾಲೀಕಾರ, ಶಿವಶರಣ ಜಾವಳಿ, ರಾಜಶೇಖರ ಹತಗುಂದಿ, ಪ್ರಭುರಾಜ ಅರಣಕಲ್, ಮಹಿಪಾಲರೆಡ್ಡಿ ಮುನ್ನೂರ, ಗೀತಾ ನಾಗಭೂಷಣ, ಲಿಂಗಣ್ಣ ಸತ್ಯಂಪೇಟೆ, ಸಂಧ್ಯಾ ಹೊನಗುಂಟೀಕರ್, ಪ್ರಭಾಕರ ಜೋಷಿ, ಚಿತ್ರಶೇಖರ ಕಂಠಿ, ವಿ. ಜಿ. ಅಂದಾನಿ, ಜೆ. ಎಸ್. ಖಂಡೇರಾವ್, ಕೆ. ಷರೀಫಾ ಇನ್ನೂ ಅನೇಕ ಸಂಪನ್ನರ ಕುರಿತು ಇನ್ನೊಮ್ಮೆ ಬರೆಯುವೆ.
- ಮಲ್ಲಿಕಾರ್ಜುನ ಕಡಕೋಳ (ಖ್ಯಾತ ಬರಹಗಾರರು)
