ಒಳ್ಳೆಯ ನಡೆ ನುಡಿಗಳು ಪ್ರಭಾವ ಬೀರುತ್ತದೆ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತದೆ…ಕವಿ ನಾಗರಾಜ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕಾಲ ನಿತ್ಯ ನಿರಂತರ ಮುಂದೆ ಸರಿಯುತ್ತದೆ
ಯಾವುದನ್ನು ಯಾರನ್ನೂ ಕ್ಷಣವೂ ಲೆಕ್ಕಿಸದೆ
ನಮ್ಮ ಲೆಕ್ಕಾಚಾರವನ್ನ ತಲೆಕೆಳಗೆ ಮಾಡುತ್ತದೆ
ತನ್ನ ಪಾಡಿಗೆ ತಾನು ಸಾಗುತ್ತದೆ ಹಿಂತಿರುಗದೆ
ಹುಟ್ಟಿದ ಎಲ್ಲಾ ಜೀವಿಗಳು ಅಳಿಯುತ್ತವೆ
ನೆನಪುಗಳ ಮೆರವಣಿಗೆ ನಿತ್ಯ ನಡೆಯುತ್ತದೆ
ಮಾಡಿದ ಸಾಧನೆಗಳು ಮಾತ್ರ ಉಳಿಯುತ್ತದೆ
ಕಾಲದ ಪುಟಗಳಲ್ಲಿ ದಾಖಲಾಗಿ ಅಚ್ಚಳಿಯದೆ
ಒಳ್ಳೆಯ ನಡೆ ನುಡಿಗಳು ಪ್ರಭಾವ ಬೀರುತ್ತದೆ
ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತದೆ
ಜನರನ್ನು ತನ್ನತ್ತ ಆಕರ್ಷಿಸುತ್ತ ಪ್ರೇರೇಪಿಸುತ್ತದೆ
ಸಾರ್ಥಕತೆಯನ್ನು ಹೊಂದುವಂತೆ ಮಾಡುತ್ತದೆ
ನಾವಿಲ್ಲಿ ನೂರುಕಾಲ ಬಾಳುವುದು ಮುಖ್ಯವಲ್ಲ
ನಮ್ಮದೇ ಆದ ವ್ಯಕ್ತಿತ್ವದ ಛಾಪು ಮೂಡಿಸದೆ
ಬಿಟ್ಟು ಹೋಗಬೇಕು ನಾವು ಒಳ್ಳೆಯ ನೆನಪುಗಳ
ನಮ್ಮಬಾಳ ಪುಟದ ಮೇಲೆ ಕಾಣುವ ಹಾಗೆ ಸಹಿ
ನಾವು ತೋರಿದ ಪ್ರೀತಿ ಮತ್ತು ಮಾನವೀಯತೆ
ಕಾಲದ ಪುಟಗಳಲ್ಲಿ ಸಹಿಯಾಗಿ ಉಳಿಯುತ್ತದೆ
ಮನುಷ್ಯತ್ವ ಮಾತ್ರ ಉಳಿಯುತ್ತದೆ ಬೆಳೆಯುತ್ತದೆ
ಕಡು ಕತ್ತಲ ನಡುವೆಯೂ ಬೆಳಕಾಗಿ ಬೆಳಗುತ್ತದೆ
- ನಾಗರಾಜ ಜಿ. ಎನ್. ಬಾಡ, ಕುಮಟ
