ಕನಕದಾಸರು ಬರೀ ಕೀರ್ತನಕಾರರಲ್ಲ

ಕನಕದಾಸರು ಬರೀ ಕೀರ್ತನಕಾರರಲ್ಲ ಕವಿಗಳು ಕೂಡ ಆಗಿದ್ದರು, ಖ್ಯಾತ ಹಿರಿಯ ಲೇಖಕಿ ಪ್ರಭಾವತಿ ಎಸ್ ವಿ ಅವರು ಕನಕದಾಸ ಜಯಂತಿ ಪ್ರಯುಕ್ತ ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ….

ಕನಕದಾಸರು ಬರೀ ಕೀರ್ತನಕಾರರಲ್ಲ ಕವಿಗಳು ಕೂಡ. ಅವರು ನಾಲ್ಕು ಕಾವ್ಯಗಳನ್ನು ರಚಿಸಿದ್ದಾರೆ. ಅವರ ಕೆಲವು ಕೀರ್ತನೆಗಳು, ಹರಿ ಭಕ್ತಿ ಸಾರ, ರಾಮ ಧಾನ್ಯ ಚರಿತೆ – ಇವಿಷ್ಟನ್ನು ಸೇರಿಸಿ ” ಜನಪ್ರಿಯ ಕನಕ ಸಂಪುಟ ” ಎಂಬ ಹೆಸರಿನ ಈ ಪುಸ್ತಕವು ನನಗೆ ತಿಳಿದಂತೆ ಕಳೆದ ೩೦ ವರ್ಷಗಳಿಂದ ಐಎಎಸ್ ಗೆ ಪಠ್ಯವಾಗಿದೆ. ಮುದ್ರಣದ ಪ್ರತಿಗಳು ಸಿಗುವುದಿಲ್ಲವಾಗಿ ವಿದ್ಯಾರ್ಥಿಗಳು ಇಂತಹ ಹಾಳೆಗಳನ್ನು ಬಳಸುತ್ತಾರೆ. ಈಗ ನಾನು ಐಎಎಸ್ ಗೆ ಪಾಠ ಮಾಡುತ್ತಿರುವುದರಿಂದ ಇದನ್ನು ಬಳಸಿ ಬರೆಯುವುದು ನನಗೆ ಸಾಧ್ಯ ಅನ್ನಿಸಿತು. ಈಗ ಅವರ ಪ್ರಸಿದ್ಧವಾದ ಉಗಾಭೋಗ ಒಂದನ್ನು ನೋಡಬಹುದು. ಕಿ.ರಂ ಅವರು ತಮ್ಮ ‘ಕಾಲಜ್ಞಾನಿ ಕನಕ’ ಎಂಬ ನಾಟಕಕ್ಕೆ ಇದನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ.

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ
ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೆ
ಎಂಬ ಪಲ್ಲವಿ ಅನುಪಲ್ಲವಿ ಯೊಂದಿಗೆ ಆರಂಭವಾಗುವ ಇದು
ಬಯಲೊಳಗೆ ಆಲಯವೋ ಆಲಯದೊಳಗೆ ಬಯಲೋ
ಬಯಲು ಆಲಯವೆರಡು ನಯನದೊಳಗೋ
ನಯನ ಬುದ್ದಿಯ ಒಳಗೋ ಬುದ್ದಿ ನಯನದ ಒಳಗೋ
ನಯನ ಬುದ್ದಿಗಳೆರಡು ನಿನ್ನೊಳಗೊ ಹರಿಯೇ

ಎಂದು ಪ್ರಾರಂಭದಲ್ಲಿ ಯೇ ತನ್ನ ಪ್ರಶ್ನೆಗೆ ತಾನೇ ಉತ್ತರ ಕೊಟ್ಟಿದ್ದರೂ ಮತ್ತೆ ಅನೇಕ ಸಾಮತಿಗಳಿಂದ ಮುಂದುವರೆಯುತ್ತದೆ

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆ ಎರಡೂ ಜಿಹ್ವೆಯೊಳಗೊ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ ಜಿಹ್ವೆ ಮನಸುಗಳೆರಡೂ ನಿನ್ನೊಳಗೊ ಹರಿಯೇ
ಕುಸುಮದಲಿ ಗಂಧವೋ ಗಂಧದಲಿ ಕುಸುಮವೋ
ಕುಸುಮ ಗಂಧಗಳೆರಡು ಆಘ್ರಾಣದೊಳಗೋ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ ಹರಿಯೇ

ಎಂದು ಮುಂದುವರಿದು ಎಲ್ಲವೂ ಪಂಚೇಂದ್ರಿಯಗಳ ಕೆಲಸ ವಾದರೂ ಅವನ್ನು ಅನುಭವಿಸಲು ಬುದ್ಧಿಬೇಕು ಅದನ್ನು ಕೊಡುವವನು ಭಗವಂತ ಎಂಬ ತೀರ್ಮಾನಕ್ಕೆ ಬರುತ್ತದೆ
ಇದು ಐನ್ಸ್ಟೈನ್ ರ ಸಾಪೇಕ್ಷ ಸಿದ್ಧಾಂತಕ್ಕೆ ತೀರಾ ಹತ್ತಿರ ವಾಗಿದೆ ಎಂಬುದನ್ನು ಪಾಠ ಮಾಡುವಾಗ ಗಮನಿಸಿ ನಾನು ಆಶ್ಚರ್ಯ ಚಕಿತಳಾಗಿದ್ದೆ . ಕಾಲ ದೇಶ ಗಳು ಎಲ್ಲರಿಗೂ ಒಂದೇ ಅಲ್ಲ ಅವು ಸಾಪೇಕ್ಷ ಎಂಬ ಅವರ ಸಿದ್ಧಾಂತ ಕ್ಕೆ ಅವರಿಗಿಂತ ೫೦೦ ವರ್ಷ ಹಿಂದೆ ಬದುಕಿದ್ದ ಕನಕದಾಸರ ಮಾತು ಗಳು ಉದಾಹರಣೆಗೆ ಯಾಗಿ ಪರಿಣಮಿಸುತ್ತವೆ .

ನಾವು ನಮ್ಮ ಅನುಕೂಲ ಕ್ಕೆ ತಕ್ಕಂತೆ ಒಂದು ಗಡಿಯಾರ ಒಂದು ಕ್ಯಾಲೆಂಡರ್ ಮಾಡಿಕೊಂಡು * ಕಾಲ * ವನ್ನು ೨೪ ಗಂಟೆಗಳಾಗಿಯೂ ೩೬೫ ದಿನಗಳಾಗಿಯೂ ವಿಭಾಗಿಸಿಕೊಂಡಿದ್ದೇವೆ . ಆದರೆ ಭೂಮಿಯ ಒಂದು ಕಡೆ ಹಗಲಾಗಿರುವಾಗ ಇನ್ನೊಂದು ಕಡೆ ರಾತ್ರಿ ಯಾಗಿರುತ್ತದೆ . ಅಷ್ಟೇ ಏಕೆ ನಮ್ಮ ದೇಶದ ಒಂದು ಭಾಗಕ್ಕಿಂತ ಇನ್ನೊಂದು ಭಾಗಕ್ಕೆ ೪೦ ನಿಮಿಷಗಳ ವ್ಯತ್ಯಾಸ ವಿರುತ್ತದೆ . ಚೆನ್ನೈ ನ ಸಮುದ್ರ ದ ತಡಿಯಲ್ಲಿ ಸಂಜೆ ೬ ಗಂಟೆಯ ಕತ್ತಲಾಗುವಾಗ ದ್ವಾರಕಾ ದ ಸಮುದ್ರ ತಡಿಯಲ್ಲಿ ಇನ್ನೂ ೫ ಗಂಟೆಯ ಬಿಸಿಲು ರಣಗುಟ್ಟುತ್ತಿರುತ್ತದೆ. ಎಷ್ಟೋ ಮಿಲಿಯನ್ ವರ್ಷಕಾಲ ಚಲಿಸಿ ಚಲಿಸಿ ಆಗಿರುವಂತವು ಈ ಭೂಖಂಡ ಗಳು . ನಮ್ಮ ದೇಶ ನಮ್ಮ ಭಾಷೆ ನಮ್ಮ ಸಂಸ್ಕೃತಿ ಎಂಬುವೂ ನಾವು ಮಾಡಿಕೊಂಡಂಥವೇ.

ಹೀಗಿರುವಾಗ ಇನ್ನು ಕಾಲವೆಲ್ಲಿ ನಮ್ಮ ಕೈಲಿದೆ ದೇಶವೆಲ್ಲಿ ನಮ್ಮ ಕೈಲಿದೆ ….. ಇದನ್ನು ಕನಕದಾಸರು ಕಾವ್ಯದ ಲೇಪ ಕೊಟ್ಟು ಹೇಳುತ್ತಾರೆ.


  • ಪ್ರಭಾವತಿ ಎಸ್ ವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading