ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….
ನನ್ನಯ ನುಡಿಯೊಳು ಕನ್ನಡದುಸಿರಿದೆ
ಮುನ್ನಿನ ಜನ್ಮವು ನನಗಿಲ್ಲೆ
ಕನ್ನಡವೆನ್ನೊಳು ನೆಲೆಯಾಗಿರುವುದು
ಚೆನ್ನನ ಮನದೊಳು ಪದಮಾಲೆ
ನನ್ನೊಳಗುದಿಸಿಹ ಸವಿಪದದಿಂದಲೆ
ಹೊನ್ನುಡಿಗಟ್ಟಿನ ಸರಮಾಲೆ
ಅನ್ನವ ನೀಡಿಹ ನೆಲ ಜಲ ಕಾನಿದೆ
ನನ್ನೆದೆ ಸೂಸಿದೆ ಕಾವ್ಯದಲೆ
ಬಣ್ಣಿಸೊ ಪದಗಳೆ ಬಣ್ಣಗಳೋಪರಿ
ಕಣ್ಣಿಗೆ ತಂಪನು ನೀಡಿದವು
ತಣ್ಣನೆ ಕೇಳುಗರದೆಯೊಳಗಿಳಿದಿವೆ
ಹೆಣ್ಣಿನೊಳಿಂಪಿನ ಗಾಯನವು
ನನ್ನಯ ಮುಂದಿನ ಜನ್ಮವದಿಲ್ಲಿಗೆ
ಕನ್ನಡ ಮಣ್ಣೊಳು ಹುಟ್ಟುವೆನು
ಕನ್ನಡಪದಗಳ ಕೇಳುತಲಿಲ್ಲಿಯೆ
ಉನ್ನತ ನಾಡೊಳು ಬದುಕುವೆನು.
- ಚನ್ನಕೇಶವ ಜಿ ಲಾಳನಕಟ್ಟೆ
