ನವೆಂಬರ್ ತಿಂಗಳು ಬಂದಾಗ ಕನ್ನಡಾಭಿಮಾನ ಧುಮ್ಮಿಕ್ಕಿಕೊಂಡು ಬರುತ್ತೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಗೆ ಬಗೆಯ ಭಾವಚಿತ್ರಗಳು ರಾರಾಜಿಸುತ್ತವೆ. ತದ ನಂತರ ಇಂಗ್ಲೀಷ ಮಾಯಾಂಗಿನಿಯ ಜೊತೆ ಪ್ರೇಮ ಸಲ್ಲಾಪ ನಡೆಯುತ್ತೆ. ಯಾಕೆ ಹೀಗೆ? ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಕನ್ನಡ ಕುರಿತಾದ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಬಾರಿಸೋ ಕನ್ನಡ ಡಿಂಡಿಮವಾ
ಓ ಕರ್ನಾಟಕ ಹೃದಯ ಶಿವ
ರಾಷ್ಟ್ರಕವಿ, ಕರುನಾಡ ಚೇತನ, ಕುವೆಂಪು ಅವರ ಈ ಸಾಲುಗಳು ಪ್ರತಿಯೊಬ್ಬ ಕನ್ನಡಿಗರನ್ನು ಕನ್ನಡದ ಆತ್ಮಾಭಿಮಾನವನ್ನು ಎತ್ತಿ ತೋರಿಸಲು ಬಡಿದೆಬ್ಬಿಸುತ್ತೆ. ಬಡಿದೆಬ್ಬಿಸಲೇಬೇಕು ಕನ್ನಡ ನಮ್ಮ ಉಸಿರಾಗಬೇಕು. ಆಗುತ್ತೆ ಅದು ಯಾವಾಗ ನವೆಂಬರ್ ತಿಂಗಳು ಬಂದಾಗ ಅದೆಲ್ಲೆಲ್ಲೋ ಅಡಗಿದ್ದ ಕನ್ನಡಾಭಿಮಾನ ಧುಮ್ಮಿಕ್ಕಿಕೊಂಡು ಬರುತ್ತೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಗೆ ಬಗೆಯ ಭಾವಚಿತ್ರಗಳು ರಾರಾಜಿಸುತ್ತವೆ.
ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆಯು ನಡೆಯುತ್ತೆ. ಕನ್ನಡ ಬಾವುಟಗಳು ವಿಜೃಂಭಿಸುತ್ತವೆ. ವೇದಿಕೆಗಳಲ್ಲಿ ತಮ್ಮ ಮಕ್ಕಳನ್ನೇ ದೊಡ್ಡ ದೊಡ್ಡ ಇಂಗ್ಲೀಷ ಮಾಧ್ಯಮ ಶಾಲೆಗೆ ಕಳಿಸುವ ಮಹನೀಯರಿಂದ ಕನ್ನಡ ಭಾಷೆಯ ಉಳಿವಿನ – ಬೆಳವಿನ ಕುರಿತು ಭಯಂಕರ ಭಾಷಣಗಳು ಝೇಂಕರಿಸುತ್ತೆ. ತದ ನಂತರ ಯಥಾ ಪ್ರಕಾರ, ಇಂಗ್ಲೀಷ ಮಾಯಾಂಗಿನಿಯ ಜೊತೆ ಪ್ರೇಮ ಸಲ್ಲಾಪ ನಡೆಯುತ್ತೆ. ಯಾಕೆ ಹೀಗೆ? ನಮ್ಮ ತಾಯಿಯ ಬಗ್ಗೆ ನಮಗೆ ಯಾಕಿಷ್ಟು ತಾತ್ಸಾರ. ಕನ್ನಡ ಮಾತಾಡಿದ್ರೆ ತಮ್ಮ ಘನತೆಗೆ ಕುಂದು ಬರುತ್ತೆ ಅನ್ನುವಂತ ಮನಸ್ಥಿತಿಯಲ್ಲಿರುವ ಕನ್ನಡಿಗರು ಇದ್ದಾರೆ. ಹೀಗಾದರೆ ಹೇಗೆ ನಮ್ಮ ಕನ್ನಡ ಬೆಳೆಯಬೇಕು, ಉಳಿಯಬೇಕು, ಸಹಸ್ರಾರು ವರುಷಗಳ ಅಮೋಘ ಉತ್ಕೃಷ್ಟ ಇತಿಹಾಸವಿರುವ ಕನ್ನಡ, ಭಾಷೆ ಒಂದೆಯಾದ್ರು ಪ್ರತಿ ಜಿಲ್ಲೆ ಜಿಲ್ಲೆಗೂ, ಮಾತನಾಡುವ ಶೈಲಿ ವಿಭಿನ್ನವಾಗಿ ಮತ್ತು ಸಾಂಸ್ಕೃತಿಕ ವೈವಿದ್ಯೆಯನ್ನು ಹೊಂದಿದೆ. ಇಂತಾ ಕರುನಾಡಲ್ಲಿ ಹುಟ್ಟಿರುವ ಪ್ರತಿಯೊಂದು ಜೀವಿಯು ಪುಣ್ಯಜೀವಿಯು. ಆದ್ರೆ ಅನ್ಯ ಭಾಷೆ ಮೋಹಕ್ಕೆ ಸಿಲುಕಿ ಪಾಪಿಗಳಾಗುತ್ತಿದ್ದೇವೆ. ಪಾಪಿಗಳಾಗಿ ಕನ್ನಡಮ್ಮನಿಗೆ ನೋವು ಕೊಡದೆ ಕನ್ನಡ ಉಳಿಸಿ ಬೆಳಸಿ, ಕನ್ನಡ ಭಾಷೆ ವಿಶ್ವದಲ್ಲಿ ರಾರಾಜಿಸುವಂತೆ ಮಾಡೋಣ.

ಕರ್ನಾಟಕ ಏಕೀಕರಣ ಹಿನ್ನೆಲೆ
ಕನ್ನಡ ರಾಜ್ಯದ ವಿಸ್ತಾರವು ಕವಿರಾಜಮಾರ್ಗದಲ್ಲಿ ವಿವರಿಸಿದಂತೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೆ ಇತ್ತೆನ್ನಲಾಗಿದೆ. ಈ ನೆಲವನ್ನು ಅನೇಕ ಕನ್ನಡ ರಾಜವಂಶಗಳು ಆಳಿದವು. ವಿಜಯನಗರದ ಪತನದ ನಂತರ ಕನ್ನಡ ಮಾತನಾಡುವ ಪ್ರದೇಶಗಳು ರಾಜಕೀಯ ವ್ಯವಸ್ಥೆಗಳಲ್ಲಿ ವಿವಿಧ ಬದಲಾವಣೆಗಳಿಗೆ ಒಳಗಾಗಬೇಕಾಯಿತು. ಟಿಪ್ಪು ಸುಲ್ತಾನನ ಮರಣದ ನಂತರ, ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಭಾಷೆಗಳ ಇಪ್ಪತ್ತು ಆಡಳಿತ ವಿಭಾಗಗಳಲ್ಲಿ ಹಂಚಲ್ಪಟ್ಟವು. ಹೈದರಾಬಾದ್‌ನ ಮಾರ್ಥಾಸ್ ಮತ್ತು ನಿಜಾಮರ ಆಳ್ವಿಕೆಯಲ್ಲಿ ಕನ್ನಡಿಗರು ಪರಕೀಯರಾಗಬೇಕಾಯಿತು. ಈ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು, ಕನ್ನಡಿಗರು ಒಂದೇ ರಾಜ್ಯ ಮತ್ತು ಒಂದು ಆಡಳಿತದ ಅಡಿಯಲ್ಲಿ ಒಗ್ಗೂಡಲು ತೀವ್ರವಾಗಿ ಹೋರಾಡಿದರು. ಈ ಹೋರಾಟವನ್ನು ಕರ್ನಾಟಕ ಏಕೀಕರಣ ಚಳುವಳಿ ಎಂದು ಕರೆಯಲಾಗುತ್ತದೆ.
ಆರ್ ಎಚ್ ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ 1890 ರಲ್ಲಿ ಸ್ಥಾಪನೆಯಾದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಏಕೀಕರಣದ ಕನಸಿಗೆ ಸಾಂಸ್ಥಿಕ ರೂಪವನ್ನು ಒದಗಿಸಿತು. ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಇದು ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಗತಿಯನ್ನು ಸುಲಭಗೊಳಿಸಲು ಮತ್ತು ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಕರ್ನಾಟಕ ಏಕೀಕರಣ ಸಭಾ 1916 ರಲ್ಲಿ ಧಾರವಾಡದಲ್ಲಿ ಪ್ರಾರಂಭವಾಯಿತು.
ಈ ಸಂಘಟನೆಗಳು ಏಕೀಕರಣಕ್ಕಾಗಿ ಹೋರಾಟವನ್ನು ಮುಂದುವರೆಸಿದವು. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯ ಸಮಾವೇಶದಲ್ಲಿ ಹುಯಿಲಗೋಳ ನಾರಾಯಣ ರಾವ್ ಅವರು ಸ್ವಾಗತ ಗೀತೆಯಾಗಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ (ನಮ್ಮ ಕನ್ನಡ ನಾಡು ಉದಯವಾಗಲಿ) ಎಂದು ಹಾಡುವ ಮೂಲಕ ಕರ್ನಾಟಕ ಏಕೀಕರಣ ಪ್ರಕ್ರಿಯೆಯನ್ನು ಔಪಚಾರಿಕವಾಗಿ ಪ್ರಾರಂಭಿಸಿದರು. ಸಮಾವೇಶದ ಅಧ್ಯಕ್ಷರಾಗಿದ್ದ ಗಾಂಧೀಜಿಯವರು ಏಕೀಕರಣ ಚಳುವಳಿಗೆ ತಮ್ಮ ಬೆಂಬಲವನ್ನು ನೀಡಿದರು. ಏಕೀಕರಣ ಚಳುವಳಿಯು ಸ್ವಾತಂತ್ರ್ಯ ಚಳುವಳಿಯ ಪರವಾಗಿ ಕೆಲಸ ಮಾಡಿತು.
ಡೆಪ್ಯೂಟಿ ಚೆನ್ನಪ್ಪ, ಏಕೀಕರಣದ ಶಿಲ್ಪಿ ಆಲೂರು ವೆಂಕಟರಾಯರು ಸಿದ್ಧಪ್ಪ ಕಂಬಳಿ ಹೀಗೆ ಹಲವಾರು ಮಹನೀಯರ ಹಾರಾಟದ ಫಲ ಶ್ರುತಿಯಾಗಿ ನವೆಂಬರ್ 1 , 1956 ರಂದು ಮೈಸೂರು ಕನ್ನಡ ರಾಜ್ಯವಾಗಿ ಉದಯವಾಯಿತು. ಮುಂದೆ ಉತ್ತರ ಕರ್ನಾಟಕ ಜನತೆಯ ಮಹತ್ತರ ಒತ್ತಾಯಕ್ಕೆ ಪುರಸ್ಕರಿಸಿ ದಿವಂಗತ ದೇವರಾಜ್ ಅರಸು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ದಿನಾಂಕ ನವೆಂಬರ್ 1, 1973 ರಂದು ಕರ್ನಾಟಕವೆಂದು ಮರು ನಾಮಕರಣವನ್ನು ಮಾಡಲಾಯಿತು.
ಕಡೆ ನುಡಿ : ಕನ್ನಡನಾಡು ಕರ್ನಾಟಕ ರಾಜ್ಯವಾಗಿ ಅರ್ಧ ಶತಮಾನದ ಮೇಲಾದ್ರು ಯಾವುದೇ ಬದಲಾಣೆಯಾಗದೆ ಇನ್ನಷ್ಟು ಕನ್ನಡ ನಶಿಸುತ್ತಿದೆ. ಆದಕಾರಣ ಘನವೆತ್ತ ಸರಕಾರವು ಕೇವಲ ನವೆಂಬರ್ ಒಂದಕ್ಕೆ ಮಾತ್ರ ಆದ್ಯತೆ ನೀಡದೆ ಕನ್ನಡ ಭಾಷೆಯನ್ನು ಅನ್ನದ ( ಸಂಬಳ ನೀಡುವ ) ಭಾಷೆಯಾಗಿಸುವದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ನಾನೊಬ್ಬ ಬರಹಗಾರನಾಗಿ ವಿನಂತಿಸುವದರ ಜೊತೆಗೆ ಸರಕಾರಕ್ಕೆ ಆಗ್ರಹಿಸುವೆ. ಕನ್ನಡವನ್ನು ಅನ್ನಕೊಡುವ ಭಾಷೆಯಾಗಿಸಿದಾಗ ಮಾತ್ರ ಕನ್ನಡ ಉಳಿದು ಬೆಳೆಯಲು ಸಾಧ್ಯ.
ಸಿರಿಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ.
- ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ – ಯಡ್ರಾಮಿ ಜಿಲ್ಲಾ, ಕಲ್ಬುರ್ಗಿ
