ಸೂರ‍್ಯನೋ ಅಥವಾ ಸೂರ್ಯನೋ !

ಸೂ‍ರ್‍ಯ ಎಂದೇ ಬರೆಯುತ್ತಿದ್ದೆವು ಹೊರತು ಸೂರ್ಯ ಎಂದಲ್ಲ. ಮುದ್ರಣಕ್ಕೆ ಅಕ್ಷರಗಳನ್ನು ಜೋಡಿಸುವ ಹಳೆ ಪದ್ದತಿ ನಶಿಸಿ ಡಿಟಿಪಿ ಟೆಕ್ನಾಲಜಿ ಮುದ್ರಣ ಕ್ಷೇತ್ರದಲ್ಲಿ ಕಾಲಿಟ್ಟ ಮೇಲೆ ನಡೆದ ಬೆಳವಣಿಗೆ ಇದು ಎಂದೆನಿಸುತ್ತದೆ. ಶ್ರೀಪಾದ ಹೆಗಡೆ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಕನ್ನಡ ಬರವಣಿಗೆಯಲ್ಲಿ ಸೂರ‍್ಯ ಎಂದು ಬರೆಯುವ ಬದಲು ಸೂರ್ಯ ಎಂದು ಬರೆಯುವುದು, ಕಾರ‍್ಯಕ್ರಮದ ಬದಲು ಕಾರ್ಯಕ್ರಮವೆಂದು ಬರೆಯುವುದು ಹೀಗೆ ರ ಒತ್ತನ್ನು ನಿಯಮ ಪಲ್ಲಟಗೊಳಿಸಿ ಬರೆಯುವ ರೂಢಿ ಬಂದಿರುವುದು ಕಳೆದ ಮೂರು- ನಾಲ್ಕು ದಶಕಗಳೀಚಿನ ಬರವಣಿಗೆ. ನನಗೆ ನೆನಪಿರುವಂತೆ ನಾನು ಶಾಲೆಯಲ್ಲಿ ಓದುವಾಗ ನಾವು ಎಂದೂ ಹೀಗೆ ಬರೆದದ್ದಿಲ್ಲ ಮತ್ತು ಪಠ್ಯ ಪುಸ್ತಕಗಳಲ್ಲೂ ಇರುತ್ತಿರಲಿಲ್ಲ. ಸೂ‍ರ್‍ಯ ಎಂದೇ ಬರೆಯುತ್ತಿದ್ದೆವು ಹೊರತು ಸೂರ್ಯ ಎಂದಲ್ಲ. ಬರೆಯಲು ಕಂಪ್ಯೂಟರ್ ಸಾಫ್ಟವ್ಯಾರ್ ಬಳಸುವ ಪೀಳಿಗೆಯ ಜನ ಸೂರ‍್ಯ ಎಂದು ಎಂದೂ ಬರೆದಿರಲಿಕ್ಕಿಲ್ಲ ಮತ್ತು ಓದಿರಲಿಕ್ಕಿಲ್ಲ. ಏಕೆಂದರೆ ಸೂರ್ಯ ಎಂದು ಬರೆಯುವುದನ್ನು (ಟೈಪ್ ಮಾಡುವುದನ್ನು) ಸುಲಭ ಗೊಳಿಸಿ, ಸೂರ‍್ಯ ಎಂದು ಬರೆಯುವ ವಿಧಾನವನ್ನು ಕಂಪ್ಯೂಟರ್ ಕೀ ಬೋರ‍್ಡುಗಳು ಕ್ಲಿಷ್ಟಕರ ಮಾಡಿರುವುದು ಇದಕ್ಕೆ ಮುಖ್ಯ ಕಾರಣವಿರಬಹುದು. ಮುದ್ರಣಕ್ಕೆ ಅಕ್ಷರಗಳನ್ನು ಜೋಡಿಸುವ ಹಳೆ ಪದ್ದತಿ ನಶಿಸಿ ಡಿಟಿಪಿ ಟೆಕ್ನಾಲಜಿ ಮುದ್ರಣ ಕ್ಷೇತ್ರದಲ್ಲಿ ಕಾಲಿಟ್ಟ ಮೇಲೆ ನಡೆದ ಬೆಳವಣಿಗೆ ಇದು ಎಂದೆನಿಸುತ್ತದೆ. ಹಲವರಿಗೆ ಇದೊಂದು ಪರಿಗಣನೆಗೆ ತೆಗೆದು ಕೊಳ್ಳುವ ವಿಷಯವಲ್ಲದಿರ ಬಹುದು. ಇಂದಿನ ಹಲವು ಯುವಕರಿಗೆ ಇದು ಕನ್ನಡದ ವ್ಯಾಕರಣದ ನಿಯಮಕ್ಕೆ ಹೊಂದುವಂಥದ್ದಲ್ಲ ಎಂದು ಅನಿಸದೇ ಇರುವುದು ಸ್ವಾಭಾವಿಕ ಏಕೆಂದರೆ ಅವರು ತಮ್ಮ ಎಳವೆಯಿಂದ ಓದಿ ಬರೆದದ್ದೇ ಹೀಗೆ.

ನಾವು ಮಾತಾಡುವ ರೀತಿಯಲ್ಲಿಯೇ ಚಾಚೂ ತಪ್ಪದೆ ಕನ್ನಡದ ಲಿಪಿ ಅಥವಾ ಬರವಣಿಗೆ ರೂಪ ಗೊಂಡಿದೆ. ಮಾತಾಡುವಾಗ ಎಲ್ಲ ಒತ್ತಕ್ಷರಗಳ ಸ್ವರಗಳನ್ನು ನಾವು ಉಚ್ಚರಿಸುವುದು ಮುಖ್ಯ ಅಕ್ಷರದ ಸ್ವರದ ನಂತರ. ಬರೆಯುವಾಗಲೂ ಇದೇ ಕ್ರಮವನ್ನು ಅಂದರೆ ಮುಖ್ಯ ಅಕ್ಷರವನ್ನು ಬರೆದು ನಂತರ ಒತ್ತಕ್ಷರದ ಚಿಹ್ನೆಯನ್ನು ಬರೆಯುತ್ತೇವೆ ಮತ್ತು ಆ ಚಿಹ್ನೆ ಮುಖ್ಯ ಅಕ್ಷರದ ಅಡಿಯಲ್ಲಿ ಬರುತ್ತದೆ ಹೊರತು ಮುಖ್ಯ ಅಕ್ಷರದ ಸಾಲಿನಲ್ಲಿ ಬರುವುದಿಲ್ಲ. ಮುಖ್ಯ ಎಂದು ಉಚ್ಚರಿಸುವಾಗ ಖ್ ಎನ್ನುವ ವ್ಯಂಜನವನ್ನು ಮೊದಲು ಉಚ್ಚರಿಸಿ ಅದರ ನಂತರ ಯ ಎನ್ನುವ ವ್ಯಂಜನ ಉಚ್ಚರಿಸಿ ಅದಕ್ಕೆ ಅ ಸ್ವರವನ್ನು ಸೇರಿಸುತ್ತೇವೆ. ಮುದ್ರಣ ಎನ್ನುವಾಗ ದ್ ನಂತರ ರ್ ತದನಂತರ ಅ ಎನ್ನುವ ಸ್ವರವನ್ನು ಅದಕ್ಕೆ ಸೇಎರಿಸುತ್ತೇವೆ. ಸೂ‍ರ‍್ಯ ಎನ್ನುವಾಗಲೂ ರ್ ವನ್ನು ಮೊದಲು ಉಚ್ಚರಿಸಿ ತದನಂತರ ಯ್ ಉಚ್ಚರಿಸುತ್ತೇವೆ. ಆದರೆ ಬರೆಯುವಾಗ ಸೂರ್ಯ ಎಂದು ಬರೆದರೆ ಕನ್ನಡದ ಈ ಸಾರ್ವತ್ರಿಕ ವ್ಯಾಕರಣವನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿದಂತಾಗುತ್ತದೆ. ಒತ್ತಕ್ಷರವಾದ ಯ್ ಮೊದಲು ಬಂದು ಮುಖ್ಯ ಅಕ್ಷರವಾದ ರ್ ನಂತರ ಅದೂ ಒತ್ತಕ್ಷರದ ಚಿಹ್ನೆಯ ರೂಪದಲ್ಲಿ ಬಂದು ಬಿಡುತ್ತದೆ. ಅಷ್ಟೇ ಅಲ್ಲ ಇದು ನಮ್ಮ ಉಚ್ಚಾರಣೆಯ ವಿಧಾನಕ್ಕೆ ವಿರುದ್ಧವಾದ ಬರವಣಿಗೆಯಾಗಿರುತ್ತದೆ. ರ ಕ್ಕೆ ಯಕಾರದ ಒತ್ತು ಕೊಡುವ ಬದಲು ಯ ಕ್ಕೆ ರ ಕಾರದ ಒತ್ತು ಕೊಡುವಂತೆ ಆಗುತ್ತದೆ . ಇದು ತಪ್ಪು ಬರವಣಿಗೆ.

ಯಾಕಾಗಿ ಯಾರು ಈ ತಪ್ಪು ಪದ್ದತಿಯನ್ನು ಜಾರಿಗೆ ತಂದರೋ ! ರ ಕ್ಕೆ ಒತ್ತಕ್ಷರ ಬಂದಾಗ ಹೀಗೆ ಬರೆಯುವ ಪದ್ದತಿಯನ್ನು ತಪ್ಪಾಗಿ ಜಾರಿಗೆ ತಂದಿದ್ದಾರೆ – ಸೂರ್ಯ, ಕಾರ್ಯ, ಅರ್ಥ, ಅರ್ಧ, ವರ್ಗ ಇತ್ಯದಿ. ಇದು ನಾಗರಿ ಲಿಪಿಯ ಪ್ರಭಾವ. ಅಲ್ಲಿ ಒತ್ತಕ್ಷರಗಳೇ ಮುಖ್ಯ ಅಕ್ಷರಗಳಾಗಿ ಮೊದಲು ಬಂದು ಮುಖ್ಯ ಅಕ್ಷರ ಒತ್ತಕ್ಷರದ ಚಿಹ್ನೆ ಮಾತ್ರವಾಗಿ ಉಳಿಯುತ್ತದೆ. ಆದರೆ ರ ಕಾರಕ್ಕೆ ಒತ್ತಕ್ಷರ ಬಂದಾಗ ಮಾತ್ರ ಕನ್ನಡದ ವ್ಯಾಕರಣ ಪದ್ದತಿಯನ್ನು ಮುರಿದು ಹೀಗೆ ಬರೆಯುವ ಪದ್ದತಿ ಬಂದಿತೋ ತಿಳಿಯದು. ಇದನ್ನು ಕನ್ನಡ ಭಾಷೆಗೆ ಸಂಬಂಧಿಸಿದ ಸಂಸ್ಥೆ ಯಾವವೂ ಇದನ್ನು ಅಧಿಕೃತ ಗೊಳಿಸಿರುವುದು ನನಗಂತೂ ತಿಳಿದಿಲ್ಲ. ಹಾಗೊಮ್ಮೆ ಅಧಿಕೃತಗೊಳಿಸಿದ್ದರೆ ಅದಕ್ಕೆ ಕಾರಣವೇನಿರಬಹುದು ಎಂದು ತಿಳಿಯುತ್ತಿಲ್ಲ. ಉಳಿದ ಒತ್ತಕ್ಷರಗಳಿಗೆ ಅನ್ವಯಿಸುವ ನಿಯಮದ ಪ್ರಕಾರ ಕನ್ನಡದಲ್ಲಿ ‘ಸೂರ‍್ಯ ’ ಎಂದು ಬರೆಯುವ ಸೌಕರ‍್ಯ ಇರುವಾಗ ನಿಯಮವನ್ನು ಪಲ್ಲಟಗೊಳಿಸುವ ಈ ಕ್ರಮ ಏಕೆ ?

ಪ್ರತಿ ಬಾರಿ ಇಂತಹ ಪದವನ್ನು (ಸೂರ್ಯ, ಕಾರ್ಯ) ಟೈಪಿಸುವಾಗ ನನಗೆ ಒಂದು ರೀತಿಯ ಮುಜುಗರವಾಗುತ್ತದೆ. ನಾನು ಕೈಯಿಂದ ಬರೆಯುತ್ತಿದ್ದ ಕಾಲದಲ್ಲಿ ಎಂದೂ ಹೀಗೆ ಬರೆದಿಲ್ಲದಿರುವುದು ಇದಕ್ಕೆ ಕಾರಣವಿರಬಹುದು. ಇನ್ನು ಸೂರ‍್ಯ ಎಂದು ಟೈಪಿಸಿದಾಗ ಅಂತಹ ಬರಹವನ್ನು ಮತ್ತೊಮ್ಮೆ ತೆರೆದು ಸಾಮಾಜಿಕ ಮಾಧ್ಯಮದಲ್ಲಿ ಓದುವಾಗ ಅಲ್ಲಿ ವಿಚಿತ್ರವಾದ ಚಿಹ್ನೆಗಳು ಮೂಡಿ ಬಂದಿರುತ್ತವೆ. ಅಂದರೆ ಬಹುತೇಕ ಸಾಫ್ಟವ್ಯಾರ್ ಗಳು ಸೂರ‍್ಯ ಎಂದು ಬರೆದದ್ದನ್ನು ಅರ‍್ಥ ಮಾಡಿಕೊಳ್ಳುವುದಿಲ್ಲ ಎನಿಸುತ್ತದೆ.


  • ಶ್ರೀಪಾದ ಹೆಗಡೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW