ಮತ್ತೆ, ಮತ್ತೆ ಕಣ್ಣೊರೆಸಿಕೊಂಡು ನೋಡಿದ. ಬಸವಳಿದ ಮುಖ, ಬತ್ತಿದ ಕೆನ್ನೆ, ಗುಳಿ ಬಿದ್ದ ಕಣ್ಣು. ಅವಳೇನಾ! ಇವಳು, ಎನ್ನುವಷ್ಟು ಬದಲಾವಣೆ. ಕರೀಮಣಿ ಮಾಲೀಕನೇ ಬೇರೆ ಆಗಿದ್ದ ಈಗ. ಶೋಭಾ ನಾರಾಯಣ ಹೆಗಡೆ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಮೊಬೈಲ್ ಓಪನ್ ಮಾಡಿದ್ರೆ ಸಾಕು, ಬರೀ ರೀಲ್ಸಗಳೇ..ಅದರಲ್ಲೂ ಈಗಂತೂ ಈ ಹಾಡು ಅದೇನು ಟ್ರೆಂಡ್ ಆಗಿದೆಯೋ?..ಏನಿಲ್ಲ.. ಏನಿಲ್ಲ.. ನನ್ನ ನಿನ್ನ ನಡುವೆ ಏನಿಲ್ಲ… ಓ ನಲ್ಲ..ಕರಿಮಣಿ ಮಾಲೀಕ ನೀನಲ್ಲ ಎನ್ನುವ ಹಾಡಿಗೆ ಅದೆಷ್ಟು ಜನ ಹೆಂಗಸರು, ಹೆಣ್ಣು ಮಕ್ಕಳು ಹೆಜ್ಜೆ ಹಾಕ್ತಾ ಇದ್ದಾರೆ.
ರೀಲ್ಸ್ ನೋಡೋಕೆ ಬೇಜಾರು ಅನಿಸಿ ಭಾರ್ಗವ್ ಪೋಟೋ ಗ್ಯಾಲರಿ ಓಪನ್ ಮಾಡಿದ. ಅವಳ ಪೋಟೋ, ಅದೇ ಮುಗ್ಧತೆಯ ಭಾವ. ತದೇಕ ಚಿತ್ತದಿಂದ ನೋಡುತ್ತಲೇ ತನ್ನಲ್ಲೇ ಯೋಚನೆ ಮಾಡತೊಡಗಿದ.
ಹೌದಲ್ವಾ?ಎಲ್ಲಾ ಸರಿಯಾಗಿ ಇದ್ದಿದ್ದರೆ ನಾನೂ ಕೂಡ ನಿನ್ನ ಕರಿಮಣಿ ಮಾಲೀಕ ಆಗಿರ್ತಾ ಇದ್ದೆ ಕಣೇ ಧಾತ್ರಿ. ಏನ್ ಮಾಡ್ಲಿ? ನನ್ನ ಹಣೇಬರಹ ಸರಿ ಇಲ್ಲ. ನೀನೂ ಹೀಗೇ ಹಾಡ್ತಾ ಇರಬಹುದು ಅಲ್ವಾ? ಕರೀಮಣಿ ಮಾಲೀಕ ನೀನಲ್ಲ ಅಂತ.
ಕಣ್ತುಂಬಿ ಕಣ್ಣು ಮಂಜು ಮಂಜಾಯಿತು. ಕಣ್ಣೀರು ಕೆನ್ನೆ ಮೇಲೆ ಜಾರತೊಡಗಿ ಬಿಕ್ಕಿ ಬಿಕ್ಕಿ ಅಳಬೇಕು ಎನಿಸಿದರೂ ತಾನು ಗಂಡು. ಒರಟ, ಅಳೋಕೆ ಆಗುತ್ತಾ?ಸುಮ್ಮನೆ ಆದ. ಆದರೂ ಹೃದಯ ಮಾತ್ರ, ವಿಲಿ ವಿಲಿ ಎಂದು ಒದ್ದಾಡಿ ಬಿಟ್ಟಿತು. ಪ್ರೀತಿ ಕಳೆದುಕೊಂಡ ಭಗ್ನಪ್ರೇಮದ ಆ ನೋವು, ಹೃದಯಕ್ಕೆ ತಾನೇ ಅರಿವಾಗೋದು.
ಕಣ್ಣೀರು ಜಾರುವಾಗಲೇ ಅವಳ ನೆನಪು ಮನಕ್ಕೆ ಭಾರ ಎನಿಸಿ ,ಧಾರೆಯಾಗಿ ಕಣ್ಣೀರು ಹರಿಯೋದು. ಬೇಡ, ಯಾವತ್ತೂ ಮತ್ತೆ ಅವಳನ್ನು ನೆನಪು ಮಾಡಿಕೊಳ್ಳಲೇ ಬಾರದು ಎಂದು ಎಷ್ಟು ಶತ ಪ್ರಯತ್ನ ಪಟ್ಟರೂ ,ಅದು ಯಾವುದೋ ರೂಪದಲ್ಲಿ ನೆನಪು ಮೂಡಿ ,ಕಣ್ಣೀರು ಹರಿಯುವಂತೆ ಮಾಡುತ್ತಿತ್ತು ಅವಳ ನೆನಪು.ಈಗ ಎಲ್ಲೆಡೆ ಕೇಳಿ ಬರುವ ಕರೀಮಣಿ ಮಾಲೀಕ ನೀನಲ್ಲ ಎಂಬ ಹಾಡು,ಭಾರ್ಗವನ ಹೃದಯವನ್ನು,ಮತ್ತಷ್ಟು ಬಗೆಬಗೆದು ನೋವಿನ ಆಳವನ್ನೇ ಹೆಚ್ಚುವ ಹಾಗೆ ಮಾಡಿತ್ತು. ಬೇಡವೆಂದದ್ದೇ ಅಲ್ಲವೇ,ಬೇಕು ಎಂದು ಮನಸ್ಸು ರಚ್ಚೆ ಹಿಡಿಯುವುದು. ಆ ದಿನಗಳ ಮಧುರ ಕ್ಷಣವನ್ನು ಮೆಲುಕು ಹಾಕುವ ಮನಸ್ಸು ಆಯಿತು.
ಪದವಿ ಮುಗಿಸಿದರೂ,ತನಗೆ ಹಳ್ಳಿಯದೇ ಸೆಳೆತ..ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ ಹೀಗೆ,ಇದರಲ್ಲೇ ಆಸಕ್ತಿ ಜಾಸ್ತಿ.. ಹಾಗಾಗಿ ನೌಕರಿಯ ಬೆನ್ನು ಹತ್ತದೇ ಮನೆಯಲ್ಲೇ ಉಳಿದೆ. ಹಲುಬಿದರು ಸುಮಾರು ಮಂದಿ. ಪದವಿ ಮುಗಿಸಿದೀಯಾ.. ನಗರಕ್ಕೆ ಹೋಗಿ ನೌಕರಿ ಹಿಡಿಯಬಾರದೇ?ಆಮೇಲೆ ಮದುವೆ ಆಗಲು ಕಷ್ಟ ಆಗಬಹುದು ಎಂದರು.ಯಾಕೆಂದರೆ ರೈತರಿಗೆ ಹೆಣ್ಣು ಕೊಡಲಾರರು ಈಗ ಅಂತ. ಆಗೆಲ್ಲ ನನ್ನದು ನೇರ ಉತ್ತರ. ಹಣೆಯಲ್ಲಿ ಒಬ್ಬ ಹುಡುಗನಿಗೆ, ಒಂದು ಹುಡುಗಿ ಎಂದು ಆ ಬೃಹ್ಮ ಬರೆದಿದ್ರೆ,ಖಂಡಿತ ಮದುವೆ ಆಗುತ್ತೆ.ಇಲ್ಲ ಎಂದರೆ,ಹೀಗೇ ಇರ್ತೀನಿ ಬಿಡಿ ಅಂತ..ಹುಚ್ಚು ನಿನಗೆ ಎಂದು ಜರಿದರು. ಆದರೆ ನನ್ನ ನಂಬಿಕೆ ಸುಳ್ಳಾಗಲಿಲ್ಲ..ಆ ದಿನಗಳು ಹತ್ತಿರ ಬಂತು.. ನಾನು,ದಿನಾಲೂ ಹಾಲು ಹಾಕಲು ಊರ ಹೊರಗಿರುವ ಡೈರಿಗೆ ಹೋಗುತ್ತಿದ್ದೆ. ಅಲ್ಲೊಂದು ಸುಂದರಿ ಕಂಡೆ. ದಿನಾಲೂ ಅವಳೂ ಕೂಡ ಹಾಲು ಹಾಕಲು ,ಆಕ್ಟೀವ್ ಹೊಂಡಾದ ಮೇಲೆ ಝುಂ ಎಂದು ಬರ್ತಾ ಇದ್ಲು..
ನೋಡಲು ಸುಂದರಿ. ಹೆಸರಿನಂತೆ ಮುದ್ದು ಮುದ್ದು ಅವಳು. ಮುಗ್ಧತೆ, ಮಂದಸ್ಮಿತೆ. ನೋಡಿದರೆ ಮತ್ತೆ ತಿರುಗಿ ನೋಡುವಂತಹ ಸೌಂದರ್ಯ. ಹೀಗೇ ಒಬ್ಬರನ್ನೊಬ್ಬರು ನೋಡುತ್ತಿದ್ವಿ. ಮುಗುಳ್ನಗೆ ವಿನಿಮಯ ಆಗ್ತಾ ಇತ್ತು. ಒಂದು ದಿನ ಅವಳ ಹೊಂಡಾ ಚಾಲೂ ಆಗಲೇ ಇಲ್ಲ. ಕಿಕ್ ಒದ್ದು ಒದ್ದು ಸುಸ್ತಾಗಿ ಹೋದಳು ಹುಡುಗಿ. ಅದನ್ನು ನೋಡಿದ ನನಗೆ, ಪಾಪ ಎನಿಸಿತು. ಎಷ್ಟೆಂದರೂ ಹೆಣ್ಣು ಸುಕೋಮಲೆ ಅಲ್ವಾ? ನಾನೇ ಕಿಕ್ ಒದ್ದು ಚಾಲೂ ಮಾಡಿದೆ. ಥ್ಯಾಂಕ್ಯೂ ಎಂದು ಮುದ್ದಾಗಿ ಉಲಿದಳು. ನಾನು ವೆಲ್ಕಮ್ ಎಂದು ಮುಗುಳ್ನಗೆ ಬೀರಿದೆ..ಹೀಗೆ ಪರಿಚಯ ಆಯಿತು. ಪ್ರತೀ ದಿನ ಅವಳು ,ನಾನು ಒಂದೇ ಟೈಮ್ ಗೆ ಹಾಲು ಹಾಕಲು ಬರುತ್ತಿದ್ದುದು ಮಾತ್ರ ಕಾಕತಾಳೀಯ ಆಗಿತ್ತು.. ಅವಳು ಡಿಗ್ರಿ ಮುಗಿಸಿ ಮನೆಯಲ್ಲಿ ಇದ್ದಳು..ಮನೆಯಲ್ಲಿ ಮುಂದೆ ಓದುವುದು ಬೇಡ ಎಂದು ತಾಖೀತು ಮಾಡಿದ್ದರು.. ಅಷ್ಟೇನೂ ಓದಿನಲ್ಲಿ ಆಸಕ್ತಿ ಇದ್ದಂತೆ ಕಾಣಲಿಲ್ಲ.. ಹಾಗಾಗಿ ಮನೆಯಲ್ಲಿ ಆರಾಮವಾಗಿ ಇದ್ದಂತೆ ತೋರಿತು.ಪ್ರತೀ ದಿನ ನಡೆಯುವ ಮಾತುಕತೆಯ ಪರಿಚಯವೇ , ಸ್ನೇಹ ಬೆಸೆಯುವಂತೆ ಮಾಡಿದ್ದು.. ಹತ್ತಿರ ಆಗಿದ್ದು.. ನಂತರ ಪೋನ್ ನಂ ವಿನಿಮಯ ಆಯಿತು.. ಆದರೂ ನೆಟ್ವರ್ಕ್ ಸಿಕ್ಕಾಗ ಮಾತ್ರ ನಮ್ಮ ಸಂಭಾಷಣೆ.. ಇಲ್ಲ ಎಂದರೆ ಇಲ್ಲ.
ಅವಳ ಸೈಲೆಂಟ್ ತನವೇ ನನಗೆ ತುಂಬಾ ಹಿಡಿಸಿದ್ದು..ಗೊತ್ತಿಲ್ಲ.. ಬೆಂಕಿ ಮುಂದೆ ಬೆಣ್ಣೆ ಇಟ್ಟರೆ,ಕರಗದೇ ಇರುತ್ತದೆಯೇ?ಅಂತ ಹಿರಿಯರು ಹೇಳುವ ಹಾಗೇ..ನಮ್ಮ ಸ್ನೇಹದ ನಡುವೆ, ಅದು ಹೇಗೆ ಪ್ರೀತಿ ನುಸುಳಿತೋ ?ಇಬ್ಬರೂ ಬಿಟ್ಟಿರಲಾರದಷ್ಟು ಪ್ರೇಮಿಗಳು ಆಗಿಬಿಟ್ವಿ..ಮೊದಲು ನಾನೇ ಅವಳಿಗೆ ಪ್ರಪೋಸ್ ಮಾಡಿದ್ದು..ನನಗೆ ಅವಳು ಬೆಸ್ಟೀ ಆಗಿದ್ಲು. ಸ್ನೇಹಿತೆಯೇ, ಬಾಳನ್ನೂ… ಬೆಳಗಲು ಮಡದಿಯಾಗಿ ಬರಲಿ ಎಂದು ನನ್ನ ಮನಸ್ಸು ಆಸೆ ಪಡ್ತು..ಅವಳಿಗೂ ಇಷ್ಟ ಆಯಿತು ನನ್ನ ಪ್ರಪೋಸ್.. ಎಲ್ಲವೂ ಚಂದ ಇತ್ತು.. ನಮ್ಮ ಪ್ರೇಮ ಎಲ್ಲೂ ಪರಿಧಿ ದಾಟಿ ಹೋಗಲಿಲ್ಲ.. ಮಾನಸಿಕವಾಗಿ ತುಂಬಾ ಹತ್ತಿರ ಆದರೂ, ಇಂದಿನ ಲವರ್ಸ್ ಅಂತೆ,ಯೂಸ್ ಎಂಡ್ ತ್ರೋ ದ ಹಾಗೇ ಅವಸರವಸರದ ದೈಹಿಕ ಸುಖಕ್ಕೆ ಆಸೆ ಪಡಲಿಲ್ಲ. ಪರಿಶುದ್ಧವಾದ ಪ್ರೀತಿ ನಮ್ಮದು.. ಅವಳಿಗೆ ಗಂಡು ನೋಡುತ್ತಿದ್ದರು ಮನೆಯಲ್ಲಿ.. ನನಗೂ ಮನೆಯಲ್ಲಿ ಮದುವೆ ಆಗು ಎಂದು ದುಂಬಾಲು ಬಿದ್ದಿದ್ದರು..ಮದುವೆ ಆಗುಬಹುದಾದ ಎಲ್ಲಾ ಸಾಧ್ಯತೆಗಳ ಸಮಯ ಹತ್ತಿರ ಎನಿಸಿ, ಮದುವೆ ಆಗುವ ತೀರ್ಮಾನಕ್ಕೆ ಬಂದಾಯಿತು..ಆದರೆ ತೊಡಕಾಗಿದ್ದು ನಮ್ಮಿಬ್ಬರ ಜಾತಿ,ಅಂತಸ್ತು….ಅವಳದೇ ಬೇರೆ ಜಾತಿ, ನನ್ನದೇ ಬೇರೆ ಜಾತಿ..ಅವಳು ಸಿರಿವಂತೆ.ನಾನು ಮಧ್ಯಮ ವರ್ಗದವ…ಹಿರಿಯರು ಒಪ್ಪಿಗೆ ನೀಡಲೇ ಇಲ್ಲ… ಓಡಿ ಹೋಗಿ ಮದುವೆ ಆಗಲು,ಸುತಾರಾಂ ಒಪ್ಪಲಿಲ್ಲ ಅವಳು.ನನಗೂ ಕೆಟ್ಟ ಹೆಸರು ಬರಬಾರದು. ಹೆತ್ತವರಿಗೂ ಮಸಿ ಬಳೆಯುವ ಕೆಲಸ ಬೇಡ ಎಂದಳವಳು..ಒಪ್ಪಿಸಲು ಹರಸಾಹಸ ಪಟ್ಟಿದ್ದೂ ಆಯಿತು. ಆದರೆ ಆಗಲೇ ಇಲ್ಲ.. ಕೊನೆಗೆ ನಮ್ಮ ಪವಿತ್ರ ಪ್ರೀತಿ, ತ್ಯಾಗದ ಹೆಸರಿನಲ್ಲಿ,ಜೀವಗಳು ಬೇರೆ ಬೇರೆ ಆಗುವ ಹಾಗಾಯಿತು…ನಾನೇನೋ ಗಂಡು ಹುಡುಗ. ನನ್ನ ಮಾತು ನಡೆಯುತ್ತಿತ್ತು..ಮನೆಯಲ್ಲಿ ಹೇಳುವವರು ಕೇಳುವವರು ಯಾರಿಲ್ಲ.ಆದರೆ ಧಾತ್ರಿ ಗೆ ಹಾಗಲ್ಲ.ಅಪ್ಪ ತೋರಿಸಿದ ಹುಡುಗನ ಮದುವೆ ಆಗಲೇಬೇಕಿತ್ತು.ಮನಸಿಲ್ಲದ ಮನಸಿನಲ್ಲಿ ಮದುವೆ ಆಗಿ,ಗಂಡನ ಜೊತೆಗೆ ಹೊರಟೇಹೋದಳು..ನಾನಿಲ್ಲಿ.. ಅವಳಲ್ಲಿ. ಈಗಲೂ ನಮ್ಮ ಮನಸುಗಳನ್ನು ಯಾರಿಂದಲೂ ಬೇರ್ಪಡಿಸಲಾಗದು.ಬೇರ್ಪಡಿಸಿದ್ದು,ನಮ್ಮ ದೇಹಗಳನ್ನು ಮಾತ್ರ… ತಡೆಯಲಾಗಲಿಲ್ಲ.. ಬಿಕ್ಕಿ ಬಿಕ್ಕಿ ಅತ್ತುಬಿಟ್ಟ ಭಾರ್ಗವ.. ಮಂಜಾದ ಕಣ್ಣಿನಿಂದ ಏನೂ ಕಾಣಿಸಲಿಲ್ಲ.. ಕೈ ಸ್ಪರ್ಶದಿಂದ ಮೊಬೈಲ್ ನಲ್ಲಿ ಮತ್ತೆ ರೀಲ್ಸ್ ಓಪನ್ ಆಗಿ ಹೋಯಿತು..ಮತ್ತೆ ಅದೇ ಹಾಡು…ಏನಿಲ್ಲ, ಏನಿಲ್ಲ.. ನನ್ನ ನಿನ್ನ ನಡುವೆ ಏನಿಲ್ಲ..
ಮನಸಿನೊಳಗೆ ಖಾಲಿ ಖಾಲಿ.
ನೀ ಮನದೊಳಗೆ ಇದ್ದರೂ.
ಮಲ್ಲಿಗೆ, ಸಂಪಿಗೆ, ತರದೆ ಹೋದರು ನೀ ನನಗೆ.
ಓ ನಲ್ಲ, ನೀನಲ್ಲ.
ಕರಿಮಣಿ ಮಾಲೀಕ ನೀನಲ್ಲ.
ಹೌದು, ಅವಳೇ. ಮತ್ತೆ, ಮತ್ತೆ ಕಣ್ಣೊರೆಸಿಕೊಂಡು ನೋಡಿದ. ಬಸವಳಿದ ಮುಖ,ಬತ್ತಿದ ಕೆನ್ನೆ, ಗುಳಿ ಬಿದ್ದ ಕಣ್ಣು, ಅವಳೇನಾ, ಇವಳು ಎನ್ನುವಷ್ಟು ಬದಲಾವಣೆ…ಧಾತ್ರಿ…ನೀನೇನಾ? ಓಯ್ ಧಾತ್ರಿ,ಬಂಗಾರ, ಏನೋ ಇದು?ಪ್ರೀತಿ ಮಾಡಬಾರದು.. ಮಾಡಿದರೆ ಜಗಕೆ ಹೆದರಬಾರದು ಎಂಬ ಟ್ಯಾಗ್ ಲೈನ್ ,ರೀಲ್ಸ್ ಗೆ..ಆದರೆ ಕಾಲ ಮಿಂಚಿ ಹೋಗಿತ್ತು..
ಅವಳು ಆ ಹಾಡಿಗೆ ಅಭಿನಯ ಮಾಡುತ್ತಿದ್ದರೂ..ನಿಜವಾದ ಕಣ್ಣೀರು ಜಾರುತ್ತಲೇ ಇತ್ತು, ಅವಳ ಕೆನ್ನೆಯಿಂದ. ಕರೀಮಣಿ ಮಾಲೀಕನೇ ಬೇರೆ ಆಗಿದ್ದ ಈಗ. ಹೃದಯದ ಮಾಲೀಕನನ್ನೂ ಬಿಡಲಾಗದೇ,ಕರೀಮಣಿ ಮಾಲೀಕನನ್ನೂ ಬಿಟ್ಟು ಕೊಡಲಾಗದೇ,ಒದ್ದಾಡುತ್ತಿದ್ದ ಅವಳ ಬದುಕಿನ ಪರಿಪಾಟಲು ,ಭಾರ್ಗವನ ಗಂಟಲ ಸೆರೆಯನ್ನು ಬಿಗಿದಿತ್ತು…ಇವನ ಕಣ್ಣೀರು ಕೂಡ ಜಾರುತ್ತಲೇ ಇತ್ತು.
- ಶೋಭಾ ನಾರಾಯಣ ಹೆಗಡೆ – ಶಿರಸಿ.
