ರಿಷಬ್ ಶೆಟ್ಟಿಯವರ ಎರಡನೆ ಪ್ರಯೋಗ ‘ಕಾಂತಾರ ಚಾಪ್ಟರ್ ೧’ ಬಗ್ಗೆ ಅದು ಬಿಡುಗಡೆಯಾದಂದಿನಿಂದ ಅದರಲ್ಲಿ ದೋಷಗಳಿವೆ ಎಂದು ಕೆಲವು ವಿರೋಧದ ಅಲೆಗಳು ಎದ್ದಿರುವುದನ್ನು ಗಮನಿಸಿದ ನಾನು ಒಮ್ಮೆ ನೋಡಿಯೇ ಬಿಡೊಣವೆಂದು ಕೈಯಲ್ಲಿ ದುರ್ಬೀನು ಸಿದ್ಧ ಮಾಡಿಟ್ಟುಕೊಂಡು ನೋಡಲು ಹೋದೆ. ನನಗಂತೂ ಒಂದು ದೋಷವೂ ಕಾಣಲಿಲ್ಲ. ಪೂರ್ವಗ್ರಹವಿಲ್ಲದೆ ನೋಡಿದರೆ ಚಿತ್ರವು ಅದ್ಭುತವಾಗಿ ಮೂಡಿ ಬಂದಿರುವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ಅವರು ಕಾಂತಾರ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ರಿಷಬ್ ಶೆಟ್ಟಿಯವರು ಇಂದು ಬಹಳ ಎತ್ತರಕ್ಕೆ ಏರಿರುವ ಓರ್ವ ಚಿತ್ರರಂಗದ ತಾರೆ. ಅವರ ಮೊದಲ ಚಿತ್ರ ‘ಸರಕಾರಿ ಪ್ರಾಥಮಿಕ ಶಾಲೆ ಕಾಸರಗೋಡು’ ನೋಡಿದಾಗಲೇ ಒಂದು ಚಿತ್ರನಿರ್ಮಾಣದ ಹಿಂದೆ ಅವರ ಪ್ರತಿಭೆ-ಪರಿಶ್ರಮಗಳು ಯಾವ ರೀತಿ ಮಿಂಚಬಲ್ಲವು ಅನ್ನುವುದು ನನಗೆ ಗೋಚರವಾಗಿತ್ತು. ಆ ಚಿತ್ರದ ಬಗ್ಗೆ ಒಂದು ವಿಮರ್ಶೆ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿದ್ದೆ ಕೂಡಾ. ಯಾವುದೇ ಹೆಸರಿಗಾಗಲಿ ಜನಪ್ರಿಯತೆಗಾಗಲಿ ಅವರು ಏನೂ ಮಾಡುವವರಲ್ಲ ಮತ್ತು ಅಪಾರ ಶ್ರದ್ಧೆ ಮತ್ತು ಧ್ಯಾನಗಳೇ ಅವರ ಚಿತ್ರಗಳ ಹಿಂದಿನ ಶಕ್ತಿ ಅನ್ನುವುದನ್ನು ಈ ಹಿಂದಿನ ‘ಕಾಂತಾರ’ದಲ್ಲೂ ಅವರು ವ್ಯಕ್ತ ಪಡಿಸಿದ್ದಾರೆ. ರಿಷಬ್ ಶೆಟ್ಟಿಯವರು ನಮ್ಮ ಕುಂದಾಪುರದವರು, ಅಲ್ಲದೆ ನಾನು ಪ್ರಾಧ್ಯಾಪಕಿಯಾಗಿದ್ದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಕಲಿತವರು ಅನ್ನುವ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಹೆಮ್ಮೆ-ಅಭಿಮಾನಗಳು ನನ್ನಲ್ಲಿ ಇದ್ದರೂ ಕೂಡಾ.

ಕಾಂತಾರ-೧ ನಲ್ಲಿ ಹಲವು ಕಡೆ ಪುನರಾವರ್ತನೆಗಳು ಇವೆ ಅಂದಿದ್ದಾರೆ ಕೆಲವರು. ಅದು ಇರುವುದು ಮೊದಲ ಒಂದು ಶಾಟ್ ನಲ್ಲಿ ಮತ್ತು ಕೊನೆಯಲ್ಲಿ ಒಟ್ಟು ಸಂದೇಶವನ್ನು ಸಂಕ್ಷಿಪ್ತವಾಗಿ ಹೇಳುವ ಸಂದರ್ಭಗಳಲ್ಲಿ ಮಾತ್ರ. ಎರಡೂ ಕಡೆ ಅದು ಸಂದರ್ಭೋಚಿತ. ಆರಂಭದಲ್ಲಿ ಹಿಂದಿನ ಚಿತ್ರಕ್ಕೆ ಒಂದು ಸಣ್ಣ ಕೊಂಡಿಯಾಗಿ ಮಾತ್ರ. ತರಗತಿಯಲ್ಲಿ ಅಧ್ಯಾಪಕರು ‘ ನಾನು ನಿನ್ನೆ ಏನು ಹೇಳಿದ್ದೆ?’ ಎಂದು ಆರಂಭಿಸುವುದಿಲ್ಲವೇ, ಹಾಗೆ. ಬರವಣಿಗೆಯಲ್ಲಿ ಒಂದು ಕಾದಂಬರಿ ಬರೆಯುವಾಗ ಭಾಗ ೧- ಭಾಗ ೨ ಅಂತ ಇದ್ದರೆ ಈ ರೀತಿಯ ಪುನರಾವರ್ತನೆಯ ಅಗತ್ಯವಿಲ್ಲ. ಆದರೆ ದೃಶ್ಯ ಮಾಧ್ಯಮದಲ್ಲಿ ಇದು ಬೇಕಾಗುತ್ತದೆ. ಕೊನೆಯಲ್ಲಿ ದೈವದ ಮಹಿಮೆಯನ್ನು ಸಾರುವ ‘ವರಾಹ ರೂಪಂ’ ಹಾಡು ಪುನರಾವರ್ತನೆ ಅನ್ನುತ್ತಾರೆ. ಆದರೆ ಅದು ಇರುವುದರಿಂದ ಏನೂ ಆಭಾಸವೆನ್ನಿಸುವುದಿಲ್ಲ. ‘ಗಂಧದ ಗುಡಿ’ ಚಿತ್ರದ ಎರಡೂ ಭಾಗಗಳಲ್ಲಿ ಹಾಡು ಪುನರಾವರ್ತನೆ ಆಗಿಲ್ಲವೇ? ಮತ್ತು ಅದೇ ಕೊನೆಯ ದೃಶ್ಯದಲ್ಲಿ ದೈವವು ಬಾವಿಯೊಳಗೆ ಹೋಗಿ ಮಾಯವಾಗುವುದು ಹಿಂದಿನ ಚಿತ್ರದ ಪುನರಾವರ್ತನೆ ಅನ್ನುವ ಅರೋಪವಿದೆ. ಧರ್ಮ ಸಂಸ್ಥಾಪನೆಗೋಸ್ಕರ ಪ್ರತ್ಯಕ್ಷವಾಗಿ ಸಂಸ್ಥಾಪನೆಯ ನಂತರ ಮಾಯವಾಗುವುದು ದೈವದ ಸ್ವಭಾವ ಅಂದಮೇಲೆ ಇನ್ನೇನು ತಾನೇ ಮಾಡಲು ಸಾಧ್ಯ?
ಇನ್ನು ಕಿವಿಗಡಚಿಕ್ಕುವಂತಹ ಶಬ್ದಗಳಿವೆ -ಹೋರಾಟ-ಬಡಿದಾಟ-ಅರಚಾಟ-ಕಿರುಚಾಟಗಳಿವೆ, ಕಿವಿಗೆ ಹತ್ತಿ ಹಾಕಿಕೊಂಡು ಹೋಗಬೇಕು ಅನ್ನುವ ಆರೋಪ. ಇಲ್ಲಿ ಚಿತ್ರದ ವಸ್ತುವೇ ಹಾಗಿದೆ. ಪ್ರಕೃತಿಯನ್ನು ಶ್ರದ್ಧಾಭಕ್ತಿಗಳಿಂದ ಆರಾಧಿಸುವ, ನಿಸ್ವಾರ್ಥ ಮನೋಭಾವದಿಂದ ಪ್ರಕೃತಿಯ ಒಂದೇ ಒಂದು ಅಂಗಕ್ಕೆ ನೋವಾಗಲು ಬಿಡದ ಮತ್ತು ಪ್ರಕೃತಿಯಲ್ಲೇ ದೈವವನ್ನು ಕಾಣುವ ಒಂದು ವರ್ಗ ಮತ್ತು ಕೇವಲ ಸ್ವಾರ್ಥಕ್ಕೋಸ್ಕರ ಪ್ರಕೃತಿಯನ್ನೂ ಸಾಧು ಮನುಷ್ಯರನ್ನೂ ಅತ್ಯಂತ ಕ್ರೂರವಾಗಿ ಶೋಷಿಸುವ ವರ್ಗ-ಇವೆರಡರ ನಡುವಣ ಸತತ ಸಂಘರ್ಷಗಳ ಚಿತ್ರಣದಲ್ಲಿ ಶಬ್ದವಲ್ಲದೆ ಮೌನವನ್ನು ಬಳಸುವುದು ಹೇಗೆ ಸಾಧ್ಯ? ಪ್ರಕೃತಿಯೊಳಗೆ ಹುದುಗಿರುವ ದೈವೀಶಕ್ತಿಯನ್ನು ಅನಾವರಣಗೊಳಿಸುವುದೇ ಚಿತ್ರದ ಉದ್ದೇಶ. ಈ ಸತ್ಯವನ್ನು ನಿರೂಪಿಸಬೇಕಿದ್ದರೆ ಶಬ್ದ ಅಬ್ಬರ ಬೇಕೇಬೇಕು. ಮಗು ಗರ್ಭದೊಳಗಿಂದ ಹೊರಗೆ ಬರುವ ಸಮಯದಲ್ಲಿ ನಾವು ಕಾಣುವುದು ಹೋರಾಟವಲ್ಲವೇ? ಕೇಳುವುದು ಕಿರಿಚಾಟವಲ್ಲವೇ?

ದೇವರ ಕುರಿತಾದ ನೂರಾರು ಚಿತ್ರಗಳು ಈಗಾಗಲೇ ಬಂದಿವೆ. ಅಲ್ಲೆಲ್ಲ ಫ್ಯಾಂಟಸಿ ಬಳಸಿಲ್ಲವೇ? ಫ್ಯಾಂಟಸಿ ಅಂದ ಮೇಲೆ ಕಲ್ಪನೆಗೆ ಎಷ್ಟು ದೂರ ಬೇಕಾದರೂ ಹೋಗುವ ಅವಕಾಶವಿದೆ. ಬಾಕ್ಸ್ ಆಫೀಸನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದಾರೆ ಅನ್ನುವುದು ವೃಥಾ ಮಾಡುವ ಆರೋಪ. ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ಅನ್ನುವಂತೆ . ಯಾವ ಚಿತ್ರ ತಾನೇ ಬಾಕ್ಸ್ ಆಫೀಸ್ ಬಗ್ಗೆ ಆಲೋಚನೆ ಮಾಡುವುದಿಲ್ಲ? ಅಂಥ ತ್ಯಾಗ ಮನೋಭಾವದಿಂದ ಯಾರು ಚಿತ್ರ ಮಾಡುತ್ತಾರೆ? ಆದರೆ ಮಾಡಿದ್ದರಲ್ಲಿ ಎಷ್ಟು ನೈಜತೆಯನ್ನು ತರುತ್ತಾರೆ ಅನ್ನುವುದು ಮುಖ್ಯ. ಆ ದೃಷ್ಟಿಯಿಂದ ಕಾಂತಾರ ಚಾಪ್ಟರ್ ೧ ಗೆದ್ದಿದೆ.
ಚಿತ್ರವು ನಾಯಕ ಕೇಂದ್ರಿತವಾಗಿದೆ ಅನ್ನುವ ಆರೋಪದಲ್ಲೂ ಹುರುಳಿಲ್ಲ. ಇದುವರೆಗೆ ದೊಡ್ಡ ದೊಡ್ಡ ಹೆಸರು ಪಡೆದ ಎಲ್ಲಾ ಚಿತ್ರಗಳೂ ನಾಯಕ ಕೇಂದ್ರಿತವೇ ಅಲ್ಲವೇ? ಉಳಿದ ಎಲ್ಲಾ ಪಾತ್ರಗಳಿಗೂ ಸಿಗಬೇಕಾದ ಮಹತ್ವ ಇಲ್ಲಿ ಸಿಕ್ಕಿದೆ. ಮತ್ತು ಇಲ್ಲಿ ಕನಿಷ್ಠ ಪಕ್ಷ ನಾಯಕಿಗೂ ಪ್ರಾಮುಖ್ಯವಿದೆ. ಕೆಲವು ನಾಯಕ ಕೇಂದ್ರಿತ ಚಿತ್ರಗಳಲ್ಲಿ ನಾಯಕಿಗೂ ಹೇಳಿಕೊಳ್ಳುವಂಥ ಸ್ಥಾನವಿರುವುದಿಲ್ಲ. ಇಲ್ಲಿ ನಾಯಕ-ನಾಯಕಿ ಇಬ್ಬರೂ ಮನಮುಟ್ಟುವಂಥ ಅದ್ಭುತ ಅಭಿನಯ ನೀಡಿದ್ದಾರೆ ಅನ್ನುವುದು ಚಿತ್ರದ ಹೆಗ್ಗಳಿಕೆ.
ಚಿತ್ರದಲ್ಲಿ ಕಾಣಿಸಿದ ಕಾಡಿನ ದೃಶ್ಯಗಳು, ವೇಷಭೂಷಣಗಳು, ಮಿಂಚಿ ಮಾಯವಾಗುವ ಕತ್ತಲು-ಬೆಳಕು-ಮಬ್ಬು ಬೆಳಕುಗಳು ತಾಂತ್ರಿಕವಾಗಿ ಚಿತ್ರಕ್ಕೆ ಯಶಸ್ಸು ನೀಡಿದ ಅಂಶಗಳು.
ಕಾಂತಾರ ಕುರಿತು ಇತರ ಲೇಖಕರ ಅಭಿಪ್ರಾಯಗಳು :
- ಇನ್ನೊಂದು ಸೃಷ್ಟಿಕೋನದಲ್ಲಿ ‘ಕಾಂತಾರ ಚಾಪ್ಟರ್ ೧’ – ನೂತನ ದೋಶೆಟ್ಟಿ
- ದೃಶ್ಯ ಶ್ರೀಮಂತಿಕೆಯ ಭೂತನರ್ತನ ಕಾಂತಾರ ೧ – ಹಿರಿಯೂರು ಪ್ರಕಾಶ್
- ಡಾ.ಪಾರ್ವತಿ ಜಿ.ಐತಾಳ್
