ಶಶಿಧರ ಹಾಲಾಡಿ ಅವರು ಸೆರೆಹಿಡಿದ ‘ಕನ್ಯಾಸ್ತ್ರೀ’



ಖ್ಯಾತ ಅಂಕಣಕಾರ ಶಶಿಧರ ಹಾಲಾಡಿ ಅವರು ತಮ್ಮ ಸೋನಿ ಕ್ಯಾಮೆರಾದಲ್ಲಿ ಸೆರೆ ಹಿಡಿಯ ‘ಕನ್ಯಾಸ್ತ್ರೀ’ ಚಿತ್ರಗಳು ನೂರಾರು ವೆಬ್‍ಸೈಟ್‍ಗಳು, ಪತ್ರಿಕೆಗಳು ಮರುಬಳಕೆ ಮಾಡಿವೆ. ಗೂಗಲ್ ಸರ್ಚ್‍ನಲ್ಲಿ ಹುಡುಕಿದರೆ, ಅದೇ ಚಿತ್ರ ನೂರಾರು ಸ್ಥಳಗಳಲ್ಲಿ ಉಪಯೋಗವಾಗಿದ್ದು ಕಾಣುಸಿಗುತ್ತದೆ. ಅವರ ಲೇಖನದಲ್ಲಿ ‘ಕನ್ಯಾಸ್ತ್ರೀ’ ಸೆರೆಹಿಡಿದ ಬಗೆಯನ್ನು ವಿವರಿಸಿದ್ದಾರೆ, ಮುಂದೆ ಓದಿ…

‘ಕನ್ಯಾಸ್ತ್ರೀ’ ಈ ಪದವನ್ನು ಮೊದಲಿಗೆ ಉಪಯೋಗಿಸಿದವರು ಬಿಜಿಎಲ್ ಸ್ವಾಮಿಯವರು. ‘ಹಸುರು ಹೊನ್ನು’ ಪುಸ್ತಕದಲ್ಲಿ ಕನ್ಯಾಸ್ತ್ರೀಯ ಸುಂದರ ರೇಖಾಚಿತ್ರವನ್ನು ರಚಿಸಿ, ಮುದ್ರಿಸಿ, ಈ ಅಪರೂಪದ ಅಣಬೆಯ ವಿವರವನ್ನು ನೀಡಿದ್ದರು. ಡಿಕ್ಟಿಯೋಫೋರಾ ಹೆಸರಿನ ಈ ಅಣಬೆಯನ್ನು ಇಂಗ್ಲಿಷಿನಲ್ಲಿ ವೀಲ್ಡ್ ಲೇಡಿ ಎಂದೂ ಕರೆಯುವುದುಂಟು. ಮುಖಕ್ಕೆ ತೆಳ್ಳನೆಯ, ಬಲು ಸೂಕ್ಷ್ಮ ಕುಸುರಿಯ ಬಿಳಿ ಪರದೆಯನ್ನು ಹಾಕಿಕೊಂಡ ಮಹಿಳೆಯನ್ನು ಹೋಲುವುದರಿಂದ, ಅದೊಂದು ಅನ್ವರ್ಥ ನಾಮ. ಮಳೆ ಸುರಿಯತೊಡಗಿದಾಗ, ಕಾಡಿನ ನಡುವೆಯೋ, ತೋಟದ ಮೂಲೆಯಲ್ಲೋ ಬೆಳೆಯುವ ಈ ಅಣಬೆಯ ಆಯಸ್ಸು ಕೇವಲ ಒಂದು ದಿನ. ಬೆಳಿಗ್ಗೆ ನೆಲದಿಂದ ಮೊಳಕೆಯೊಡೆಯಲು ಆರಂಭಿಸಿ, ಮಧ್ಯಾಹ್ನದ ಸಮಯದಲ್ಲಿ ಜಾಲರಿಯ ಲಂಗ ಧರಿಸಿ ತಲೆ ಎತ್ತಿ ನಿಲ್ಲುತ್ತದೆ. ಬಹು ಸೂಕ್ಷ್ಮವಾದ, ಬಲೆಯಂತಹ ಅದರ ದೇಹವು, ಸಂಜೆಯ ಸಮಯಕ್ಕೆ ಮುದುಡಿಹೋಗುತ್ತದೆ. ಆ ಅಣಬೆಯ ತಲೆಯ ಭಾಗದ ಬುಗುಟಿನಂತಹ ಜಾಗದಲ್ಲಿ ಸ್ರವಿಸುವ ದ್ರವದ ವಾಸನೆ ಕೆಲವು ಕೀಟಗಳಿಗೆ ಇಷ್ಟ. ಮುತ್ತಿ, ರಸ ಹೀರುತ್ತವೆ; ಅದೇ ಬೀಜಪ್ರಸಾರಕ್ಕೂ ದಾರಿ. ಸಂಜೆ ಕುಸಿದು, ಕೆಳಗಿನ ಕೊಳೆತ ತರಗಲೆಯಲ್ಲಿ ಮಣ್ಣಾಗಿ ಹೋಗುವ ಕನ್ಯಾಸ್ತ್ರೀಯನ್ನು ಮತ್ತೆ ನೋಡಬೇಕೆಂದರೆ, ಮುಂದಿನ ವರುಷದ ಮಳೆಗಾಲದ ತನಕ ಕಾಯಬೇಕು!

‘ಹಸುರು ಹೊನ್ನು’ ಪುಸ್ತಕವನ್ನು ನಾನು ಬಹಳಷ್ಟು ಮೋಹಿಸುತ್ತಾ, ಮತ್ತೆ ಮತ್ತೆ ಓದಿದ್ದುಂಟು. ಅಲ್ಲಿದ್ದ ಕನ್ಯಾಸ್ತ್ರೀ ಅಣಬೆಯ ರೇಖಾ ಚಿತ್ರ ಮತ್ತು ಇತರ ಸಸ್ಯಗಳ ವರ್ಣನೆ, ಸ್ವಾಮಿಯವರೇ ರಚಿಸಿದ ನೂರಾರು ಸಸ್ಯಗಳ ಚಿತ್ರಗಳು ನನ್ನನ್ನು ಬೇರೊಂದೇ ಪ್ರಪಂಚಕ್ಕೆ ಕರೆದೊಯ್ದಿದ್ದವು. ಅದೇ ಪರಿಸರ ಲೋಕ. 1970ರ ದಶಕದ ಕೊನೆಯ ಭಾಗದಲ್ಲಿ ಪ್ರಕಟಗೊಂಡ ‘ಹಸುರು ಹೊನ್ನು’, ಆಗಿನ ದಿನಮಾನಗಳ ಅಪ್ರತಿಮ ಪರಿಸರ ಪುಸ್ತಕ. ಆ ಗುಂಗಿನಲ್ಲೇ, ಒಂದು ಮಳೆಗಾಲದಲ್ಲಿ, ನಮ್ಮ ಮನೆಯ ಹಿಂದಿನ ಕೈತೋಟದಲ್ಲಿ ಸುತ್ತಾಡುವಾಗ, ‘ಕನ್ಯಾಸ್ತ್ರೀ’ ನನ್ನ ಕಣ್ಣಿಗೆ ಬಿದ್ದಳು! ಆ ಸುಂದರ ಅಣಬೆಯನ್ನು ನಮ್ಮ ಮನೆಯ ಸರಹದ್ದಿನಲ್ಲೇ ಕಂಡು, ಗುರುತಿಸಿದಾಗ, ನನ್ನಲ್ಲಿ ಅದೇನೋ ಒಂದು ರೀತಿಯ ಸಂಭ್ರಮ, ಸಡಗರ. ಬಿಜಿಎಲ್ ಸ್ವಾಮಿಯವರು ದಟ್ಟ ಕಾಡಿನ ನಡುವೆ, ಆಗುಂಬೆಯಲ್ಲೋ ಮತ್ತೆಲ್ಲೋ ಕಂಡು, ರೇಖಾಚಿತ್ರ ಸಹಿತ ವಿವರಿಸಿ ಬರೆದಿದ್ದ ಡಿಕ್ಟಿಯೋಫೋರಾ ಅಣಬೆಯು ನಮ್ಮ ಊರಿನಲ್ಲೂ ಇದೆ ಎಂದು ಹೊಸದಾಗಿ ‘ಕಂಡುಹಿಡಿದ’ ಬೆರಗು ನನ್ನಲ್ಲಿ. ಅದು ಜುಲೈ ತಿಂಗಳೇ ಇರಬೇಕು. ನಾಲ್ಕಾರು ವಾರ ನಮ್ಮೂರಲ್ಲಿ ಮಳೆ ಸುರಿದು, ಕೈತೋಟದ ನೆಲವೆಲ್ಲಾ ಮಿದುಗಟ್ಟಿತ್ತು; ಎಲೆಗಳು ಕೊಳೆತು, ನೆಲದ ಮಣ್ಣು ಕಪ್ಪಾಗಿತ್ತು. ಆ ಮಿದು ಮಣ್ಣಿನಲ್ಲೇ ತಲೆ ಎತ್ತಿದ್ದ ‘ಕನ್ಯಾಸ್ತ್ರೀ’, ಮಳೆಗಾಲದ ಆ ಹೊಳವಾದ ದಿನ ನನಗೊಂದು ಸುಂದರ ನೋಟವನ್ನು ಕಟ್ಟಿಕೊಟ್ಟಿತ್ತು. ಸುಮಾರು ಮೂರು ಇಂಚು ಉದ್ದದ ದೇಹ, ತಲೆಯ ಬಳಿ ನಸುಕಂದು ಬಣ್ಣದ ಬುಗುಟು, ಆ ಬುಗುಟನ್ನು ಆಧರಿಸಿ ಅರ್ಧ ದೇಹದ ತನಕ ಕೆಳಗಿಳಿದು ಹೋಗಿದ್ದ, ಮಸ್ಲಿನ್ ಬಟ್ಟೆಗಿಂತಲೂ ಸೂಕ್ಷ್ಮ ಎನಿಸುವ ಬಿಳಿ ಪರದೆ. ಆ ಬಿಳಿ ಪರದೆಯ ಚುಕ್ಕಿ ಚುಕ್ಕಿ ವಿನ್ಯಾಸ, ನೋಡಲು ಮೋಹಕ, ಅಚ್ಚರಿ. ನಿಸರ್ಗದಲ್ಲಿ ಎಂತೆಂತಹ ಸೋಜಿಗಗಳು ಆವಿರ್ಭಸಲು ಸಾಧ್ಯ ಎಂಬ ಬೆರಗು ಹುಟ್ಟಿಸುವ ದೇಹ ಅದು. ಅದೇ ದಿನ ಎರಡು ಮೂರು ಬಾರಿ ತೋಟಕ್ಕೆ ಹೋಗಿ ನೋಡಿದೆ. ಸಂಜೆಯ ಹೊತ್ತಿಗೆ ಕುಸಿದು, ಮಣ್ಣಿನಲ್ಲಿ ಬೆರೆತು ಹೋಗಿತ್ತು ಆ ಬಿಳಿ ಪರದೆ ಹೊದ್ದ ಕನ್ಯಾಸ್ತ್ರೀ ಅಣಬೆ.

ಕೊಡಚಾದ್ರಿಯಲ್ಲೂ ಕನ್ಯಾಸ್ತ್ರೀ

ಅದೇ ವರ್ಷ ಇರಬೇಕು, ಕಾಲೇಜಿನಿಂದ ಕೊಡಚಾದ್ರಿಗೆ ಚಾರಣ ಏರ್ಪಡಿಸಿದ್ದರು. ಆ ದಟ್ಟ ಹರಿದ್ವರ್ಣ ಕಾಡಿನ ಪರ್ವತ ಭಿತ್ತಿಯಲ್ಲಿ ನವೆಂಬರ್ ತನಕವೂ ಮಳೆ ತಾನೆ! ಕಾಡಿನ ನಡುವೆ, ಮರವೊಂದರ ತಳದಲ್ಲಿ ಕೊಳೆತ ಎಲೆಗಳ ನಡುವೆ ಕನ್ಯಾಸ್ತ್ರೀ ನಸುನಗುತ್ತಿದ್ದಳು! ಕಾಡಿನ ದಟ್ಟ ನೆರಳಿನಲ್ಲಿ ಎರಡು ಅಣಬೆಗಳು ತಮ್ಮ ಜಾಲರಿ ಲಂಗವನ್ನು ಬಿಟ್ಟುಕೊಂಡು, ನನ್ನಲ್ಲಿ ಅಚ್ಚರಿ ಹುಟ್ಟಿಸಿದ್ದವು. ವಿಶೇಷವೆಂದರೆ, ಆ ದಟ್ಟಕಾಡಿನಲ್ಲಿ ಬೆಳೆದಿದ್ದ ಕನ್ಯಾಸ್ತ್ರೀಯ ಜಾಲರಿ ದೇಹದ ಬಣ್ಣ ನಸು ಹಳದಿ. ಡಿಕ್ಟಿಯೋಫೋರಾ ಅಣಬೆಯ ಉಪಪ್ರಬೇಧ ಅದು. ಮರಗಳ ನೆರಳಿನ ನಸುಗತ್ತಲಿನಲ್ಲಿ ಇನ್ನಷ್ಟು ಚಂದ ಕಾಣಿಸುತ್ತಿತ್ತು ಆ ಕನ್ಯಾಸ್ತ್ರೀ ಜೋಡಿ. ಆಗಿನ ದಿನಗಳಲ್ಲಿ ನನ್ನ ಬಳಿ #ಕ್ಯಾಮೆರಾ ಇರಲಿಲ್ಲ – ಕನ್ಯಾಸ್ತ್ರೀಯ ನೋಟವನ್ನು ಕಣ್ಣಿನ ಕ್ಯಾಮೆರಾದಲ್ಲಿ ಸೆರೆಹಿಡಿದು, ನೆನಪಿನ ಮೂಸೆಯಲ್ಲಿ ಶೇಖರಿಸಿಟ್ಟುಕೊಂಡೆ.

ಈ ನಡುವೆ ನಮ್ಮ ಕಾಲೇಜಿನ ಸಸ್ಯಶಾಸ್ತ್ರ ಉಪನ್ಯಾಸಕರ ಬಳಿ, ಈ #ಕನ್ಯಾಸ್ತ್ರೀಯ ಸುಂದರ ದೇಹವನ್ನು ಕಂಡುಕೊಂಡ ವಿವರವನ್ನು ಹಂಚಿಕೊಂಡೆ. ನಮ್ಮ ಮನೆಯ ಹತ್ತಿರದಲ್ಲೇ ಆ ಅಣಬೆಗಳು ಬೆಳೆಯುತ್ತವೆ ಎಂದು ಹೆಮ್ಮೆಯಿಂದ ಹೇಳಿಕೊಂಡೆ! ಇನ್ನೊಮ್ಮೆ ಕಂಡರೆ, ಬಾಟಲಿಯಲ್ಲಿ ಸಂಗ್ರಹಿಸಿ ತಾ, ಕಾಲೇಜಿನ ಸಸ್ಯಶಾಸ್ತ್ರ ಸಂಗ್ರಹಾಲಯಕ್ಕೆ ಅಮೂಲ್ಯ ಸೇರ್ಪಡೆಯಾಗುತ್ತದೆ – ಎಂದರು ಅವರು. ಸಸ್ಯಗಳ ಸ್ಪೆಸಿಮನ್ ಸಂಗ್ರಹಿಸುವ ಒಂದು ಅಡಿ ಉದ್ದದ, ಅಗಲ ಬಾಯಿಯ ಗಾಜಿನ ಬಾಟಲಿಯಲಿ ಫಾರ್ಮಲಿನ್ ದ್ರವ ತುಂಬಿಸಿ ಕೊಟ್ಟರು. ಅದನ್ನು 25 ಕಿಮೀ ದೂರದ ನಮ್ಮ ಹಳ್ಳಿಯ ಮನೆಗೆ ತಂದಿಟ್ಟುಕೊಂಡು, ಕನ್ಯಾಸ್ತ್ರೀ ಪ್ರತ್ಯಕ್ಷಳಾಗುತ್ತಾಳಾ ಎಂದು ಕಾದೆ. ಉಹುಂ, ಆ ಅಪರೂಪದ ಅಣಬೆ ನಮ್ಮ ಹಳ್ಳಿಯಲ್ಲಿ ಭೂಮಿಯಿಂದ ತಲೆ ಎತ್ತಿ ಮೇಲೆ ಬರುವುದು, ಮಳೆಗಾಲದ ಜುಲೈ ತಿಂಗಳಿನಲ್ಲಿ ಮಾತ್ರ. ಒಂದೆರಡು ತಿಂಗಳು ಕಾದೆ; ಕನ್ಯಾಸ್ತ್ರೀ ಅಣಬೆ ದೊರಕಲಿಲ್ಲ. ಕಾಲೇಜಿನ ಸ್ವತ್ತಾಗಿದ್ದ ಆ ಬಾಟಲಿಯನ್ನು ವಾಪಸು ಕೊಡಬೇಕೆಂಬ ತವಕ. ಕಾಡಿನ ಅಂಚಿನಲ್ಲಿದ್ದ ನಮ್ಮ ಮನೆಯ ಸುತ್ತಲಿನ ಹಾಡಿ-ಹಕ್ಕಲುಗಳಲ್ಲಿ, ತೋಟದಲ್ಲಿ ಚಿತ್ರ ವಿಚಿತ್ರ ವಿನ್ಯಾಸದ ಹತ್ತಾರು ಅಣಬೆಗಳು ಮಳೆಗಾಲದಲ್ಲಿ ಅರಳುತ್ತಿದ್ದವು. ನಮ್ಮ ಮನೆಯ ಹಿಂಭಾಗದಲ್ಲೇ, ಲಡ್ಡು ಹಿಡಿದ ಮರದ ಕಾಂಡವೊಂದರ ಮೇಲೆ ಕಗ್ಗತ್ತಲಿನ ರಾತ್ರಿಯಲ್ಲೂ ಹೊಳೆಯುವ ಪುಟಾಣಿ ಅಣಬೆಗಳು ಸಹ ನೂರಾರು ಸಂಖ್ಯೆಯಲ್ಲಿ ಬೆಳೆಯುತ್ತಿದ್ದುದನ್ನು ನಾನು ಕಂಡಿದ್ದೆ. ಆದರೆ ನಾನು ಬಾಟಲಿಯಲ್ಲಿ ಸೆರೆಹಿಡಿಯಬೇಕಿದ್ದುದು ಕನ್ಯಾಸ್ತ್ರೀ! ಆ ವರ್ಷ ಇನ್ನು ಸಿಕ್ಕುವ ಸಾಧ್ಯತೆ ಇರಲಿಲ್ಲ, ಮಳೆಗಾಲ ಮುಗಿಯತೊಡಗಿತ್ತು. ಕೊನೆಗೊಮ್ಮೆ ನಮ್ಮ ಹಕ್ಕಲಿನಲ್ಲಿ ದೊಡ್ಡ ಗಾತ್ರದ, ಬಣ್ಣ ಬಣ್ಣದ ಕೊಡೆಯಿದ್ದ, ಯಕ್ಷಗಾನದ ಬಣ್ಣದ ವೇಷವನ್ನು ನೆನಪಿಸುವ ಎರಡು ಅಣಬೆಗಳನ್ನು ಕಂಡೆ. ಬಣ್ಣ ತುಂಬಿದ ಆ ಅಣಬೆಯ ಕೊಡೆಯು ಅಂಗೈ ಅಗಲವಿತ್ತು! ಅವೆರಡು ಅಣಬೆಗಳನ್ನು ನಾಜೂಕಾಗಿ ಕಿತ್ತು ತಂದು, ಫಾರ್ಮಲಿನ್ ದ್ರವ ತುಂಬಿದ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ, ಕಾಲೇಜಿನ ಬಾಟನಿ ವಿಭಾಗಕ್ಕೆ ತಲುಪಿಸಿದೆ. ‘ಇದು ಡಿಕ್ಟಿಯೋಫೋರಾ ಅಲ್ಲ’ ಎಂದು ನಸುನಕ್ಕರು, ಕಾಲೇಜಿನ ಉಪನ್ಯಾಸಕರು. ಅದು ಸಿಗಲಿಲ್ಲ ಸರ್, ಅದಕ್ಕೆ ಇನ್ನು ಮುಂದಿನ ವರ್ಷದ ಜುಲೈ ತನಕ ಕಾಯಬೇಕು. ಬಹಳ ದಿನ ಆಯ್ತಲ್ಲ ಈ ಬಾಟಲಿ ಕೊಂಡೊಯ್ದು, ನಾನು ಇನ್ನಷ್ಟು ದಿನ ಇಟ್ಟುಕೊಂಡರೆ ತಪ್ಪಾದೀತು. ಆದ್ದರಿಂದ ಈ ಅಣಬೆಯನ್ನು ಸಂಗ್ರಹಿಸಿ ತಂದೆ ಎಂದು ಉತ್ತರಿಸಿದೆ.

ಕಾಲೇಜು ವಿದ್ಯಾಭ್ಯಾಸ ಮುಗಿಯಿತು. ಉದ್ಯೋಗ ಅರಸಿ ಬಯಲು ಸೀಮೆಯ ಹಳ್ಳಿಯೊಂದನ್ನು ಸೇರಿಕೊಂಡೆ. ಕನ್ಯಾಸ್ತ್ರೀ ಜತೆಗಿನ ನನ್ನ ಸಂಬಂಧ ಅಲ್ಲಿಗೇ ಮುಕ್ತಾಯವಾಯಿತು ಎಂದುಕೊಂಡೆ. ಮೂರು ದಶಕಗಳ ನಂತರ, ಮಳೆ ಸುರಿಯುವ ಜುಲೈ ತಿಂಗಳಿನಲ್ಲಿ ಊರಿಗೆ ಹೋಗಿದ್ದೆವು. ಜಡಿ ಮಳೆ ಸುರಿದು, ನಾಲ್ಕಾರು ದಿನ ಹೊಳವಾಗಿತ್ತು. ಹೆಬ್ರಿ ಸನಿಹದ ಬೆಳ್ವೆಯ ನಮ್ಮ ಸೋದರತ್ತೆಯ ಮನೆಯಲ್ಲಿ ವಾಸ್ತವ್ಯ. ಬೆಳಿಗ್ಗೆ ಎದ್ದು ನೋಡಿದರೆ, ಮನೆಯ ಹತ್ತಿರವೇ, ಬಾಳೆಗಿಡವೊಂದರ ಬುಡದ ಕೊಳೆತ ಮಿದುಮಣ್ಣಿನಿಂದ ಎರಡು ಅಣಬೆಗಳು ಮೊಳಕೆಯೊಡೆಯಲು ಪ್ರಾರಂಭಿಸಿದ್ದವು. ಆ ಅಣಬೆಗಳ ದೇಹದಲ್ಲಿ ಮೂಡತೊಡಗಿದ್ದ, ಲಂಗದ ರೀತಿಯ ನಾಜೂಕು ಬಿಳಿ ಜಾಲರಿಯನ್ನು ಕಂಡ ಕೂಡಲೆ, ನನಗೆ ಗೊತ್ತಾಯಿತು, ಇದು ಕನ್ಯಾಸ್ತ್ರೀ! ಆ ವರ್ಷ ಖರೀದಿಸಿದ್ದ ಪುಟಾಣಿ ಸೋನಿ ಕ್ಯಾಮೆರಾದ ಜೂಮ್ ಶಕ್ತಿಶಾಲಿಯಾಗಿತ್ತು. ಆ #ಡಿಜಿಟಲ್_ಕ್ಯಾಮೆರಾದಿಂದ ಗಂಟೆಗೊಂದರಂತೆ ಕನ್ಯಾಸ್ತ್ರೀಯ ಫೋಟೋ ತೆಗೆಯಲಾರಂಭಿಸಿದೆ. ಆರಂಭದ ಹಂತ, ಜಾಲರಿ ಲಂಗ ಬಿಡಿಸುವ ಪರಿ, ಪೂರ್ತಿ ಲಂಗ ಅರಳಿದಾಗ ಕನ್ಯಾಸ್ತ್ರೀಯ ಸೊಗಸಾದ ನೋಟ, ಎಲ್ಲವೂ ಡಿಜಿಟಲ್ ರೂಪದಲ್ಲಿ ಸಂಗ್ರಹಗೊಂಡವು. ಮಧ್ಯಾಹ್ನದ ಸಮಯಕ್ಕೆ ಎರಡು ಕನ್ಯಾಸ್ತ್ರೀ ಅಣಬೆಗಳು ಪೂರ್ತಿ ಎದ್ದು ನಿಂತಿದ್ದವು. ದೇಹದ ಜಾಲರಿಯಂತೂ ಸ್ಫುಟವಾಗಿ, ಸುಂದರವಾಗಿ ಮೂಡಿದ್ದವು. ಬಿಜಿಎಲ್ ಸ್ವಾಮಿಯವರು ವರ್ಣಿಸಿದ್ದಂತೆ, ಆ ಅಣಬೆಗಳ ತಲೆಯ ಭಾಗದ ಬುಗುಟಿನಲ್ಲಿ ಒಸರುವ ದ್ರವವೆಂದರೆ, ಕೆಲವು ಕೀಟಗಳಿಗೆ ಮತ್ತು ನೊಣಗಳಿಗೆ ತುಂಬಾ ಇಷ್ಟ. ಕೀಟಗಳು ರಸಹೀರಲು ಕನ್ಯಾಸ್ತ್ರೀಯನ್ನು ಹತ್ತಿ ಕುಳಿತ ಪರಿಯು ನಾನು ತೆಗೆದ ಛಾಯಾಚಿತ್ರಗಳಲ್ಲಿ ಸ್ಪಷ್ಟವಾಗಿ ಸೆರೆಯಾಯಿತು.
ಕನ್ಯಾಸ್ತ್ರೀ ಜತೆಗಿನ ನನ್ನ ಒಡನಾಟ ಅಲ್ಲಿಗೇ ಮುಗಿಯಲಿಲ್ಲ. ಇದು ಡಿಜಿಟಲ್ ಯುಗ ತಾನೆ! ಕನ್ಯಾಸ್ತ್ರೀ ಫೊಟೋಗಳನ್ನು ವಿಕಿಪೀಡಿಯಾದಲ್ಲಿನ ‘ಡಿಕ್ಟಿಯೋಫೋರಾ’ (ಫಾಲಸ್ ಇಂಡುಸಿಯಾಟಸ್) ಪುಟದಲ್ಲಿ ಅಳವಡಿಸಿದೆ. ಅದೇಕೋ ಏನೋ, ಅದಾಗಲೇ ಅಲ್ಲಿ ಹಲವು ಛಾಯಾಚಿತ್ರಗಳಿದ್ದರೂ, ನಾನು ತೆಗೆದ ಕನ್ಯಾಸ್ತ್ರೀ ಚಿತ್ರವು ಪ್ರಾತಿನಿಧಿಕವಾಗಿ ಖಾಯಂ ಸ್ಥಾನ ಪಡೆಯಿತು. ಸರಳ, ಚಂದದ ಆ ಫೋಟೋ ವಿಕಿಪೀಡಿಯಾದಲ್ಲಿ ಇಂದಿಗೂ ವಿರಾಜಿಸಿದೆ. ಅಷ್ಟೇ ಅಲ್ಲ, ನಾನು ಚಿತ್ರಿಸಿದ ಆ ಕನ್ಯಾಸ್ತ್ರೀ ಚಿತ್ರವನ್ನು ನೂರಾರು ಇತರ ವೆಬ್‍ಸೈಟ್‍ಗಳು, ಪತ್ರಿಕೆಗಳು ಮರುಬಳಕೆ ಮಾಡಿವೆ! ಗೂಗಲ್ ಸರ್ಚ್‍ನಲ್ಲಿ ಹುಡುಕಿದರೆ, ಅದೇ ಚಿತ್ರ ನೂರಾರು ಸ್ಥಳಗಳಲ್ಲಿ ಉಪಯೋಗಗೊಂಡದ್ದು ಕಾಣುತ್ತದೆ!.



ಅದೇನೇ ಇರಲಿ, ಕನ್ಯಾಸ್ತ್ರೀಯನ್ನು ಛಾಯಾಚಿತ್ರ ರೂಪದಲ್ಲಿ ಉತ್ತಮ ಗುಣಮಟ್ಟದಲ್ಲಿ ಸೆರೆಹಿಡಿದ ತೃಪ್ತಿ ನನಗಿದೆ. ಆದರೂ, ಬಿಜಿಎಲ್ ಸ್ವಾಮಿಯವರು ‘ಹಸುರು ಹೊನ್ನು’ ಪುಸ್ತಕದಲ್ಲಿ, ತಾವೇ ರಚಿಸಿದ ರೇಖಾಚಿತ್ರದಲ್ಲಿ ಒಡಮೂಡಿಸಿದ ಕನ್ಯಾಸ್ತ್ರೀಯ ವಯ್ಯಾರವು, ನನ್ನ ಛಾಯಾಚಿತ್ರಕ್ಕಿಂತ ಹೆಚ್ಚು ರಚನಾತ್ಮಕವಾಗಿದೆ ಎಂಬುದು ಮಾತ್ರ ಸತ್ಯಸ್ಯ ಸತ್ಯ!


  • ಫೋಟೋ ಹಿಂದಿನ ಕಣ್ಣು ಮತ್ತು ಲೇಖನ : ಶಶಿಧರ ಹಾಲಾಡಿ  (ಖ್ಯಾತ ಕಾದಂಬರಿಕಾರರು, ಕತೆಗಾರರು, ಪತ್ರಕರ್ತರು)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW