ಬ್ರಹ್ಮಚಾರಿ ಕಿಟ್ಟಣ್ಣನೂ, ಕಪ್ಪಕ್ಕಿ ಪಾಯಸವೂ….

ಕಪ್ಪಕ್ಕಿ ಪಾಯಸ ಮಾಡುವುದು ಕೂಡ ಬಹಳ ಸುಲಭ.ಈ ಕಪ್ಪು ಮುತ್ತು ಎಂಬ ಕಪ್ಪಕ್ಕಿ ಅಲ್ಲದೇ ಅಪರೂಪ ಆಗಿರುವ ಆಲೂರು ಸಣ್ಣ, ಸಣ್ಣ ವಾಳ್ಯ, ಮೀನಾಕ್ಷಿ ಸಣ್ಣ ಎಂಬ ಊಟದ ಅಕ್ಕಿ, ಅಭಿಲಾಷ, ಪದ್ಮರೇಖ ಎನ್ನುವ ತಿಂಡಿಯ ಸ್ಪೆಷಲ್ ಸಾವಯವದ ಅಕ್ಕಿ ವಗೈರೆಗಳು ಲಭ್ಯವಿದೆ. ನಾಗೇಂದ್ರ ಸಾಗರ್ ಅವರ ಕಪ್ಪಕ್ಕಿ ಪಾಯಸದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಕೆಲವು ದಿನಗಳ ಕೆಳಗೆ, ಮೂರು ಸಂಜೆಯ ಹೊತ್ತಿಗೆ ನಮ್ಮ ಮಲೆನಾಡು ಗಿಡ್ಡ ಕಚೇರಿಯಲ್ಲಿ ಹೊರಗೆ ಓತಪ್ರೋತವಾಗಿ ಸುರಿವ ಮಳೆ ಮತ್ತು ಬಿರುಗಾಳಿಯ ಜುಗಲ್ ಬಂದಿಯನ್ನು ನೋಡುತ್ತಾ ಕುಳಿತಿದ್ದೆ.. ಅದೇ ಹೊತ್ತಿಗೆ ಕಿಟ್ಟಣ್ಣ ಅಂದರೆ ಮನೆಘಟ್ಟದ ಕೃಷ್ಣಮೂರ್ತಿಯ ಆಗಮನವಾಯಿತು.

ಕಿಟ್ಟಣ್ಣ ಬಂದನೆಂದರೆ ಅಲ್ಲಿ ಕಲೆ, ಸಾಹಿತ್ಯ, ರಂಗಭೂಮಿ, ರಾಜಕೀಯ ಮತ್ತಿತರ ಸಮಕಾಲೀನ ಆಗುಹೋಗುಗಳ ಮಾತು, ಕತೆಗಳ ರಸಗವಳ ಆಗುತ್ತಿರುತ್ತದೆ.. ಹಾಗೆ ನೋಡಿದರೆ ಕಿಟ್ಟಣ್ಣ ನನಗಿಂತ ಸಾಕಷ್ಟು ಹಿರಿಯ.. ಆದರೆ ಓರಿಗೆಯವನ ತರಹದ ಮಿತ್ರತ್ವವಿದೆ.. ಹೀಗೆ ಆಕಸ್ಮಿಕವಾಗಿ ಸಿಕ್ಕಾಗ ಗಂಟೆಗಟ್ಟಲೆ ಪುರಾಣ ಪುಣ್ಯಕತೆಗಳಿದ್ದು ಲೇಟೆಸ್ಟಾಗಿ ಏನು ಓದು ಆಯಿತು ಎಂಬಲ್ಲಿಗೆ ಬಂದು ನಿಲ್ಲುತ್ತದೆ..‌ ನನ್ನ ಟೇಬಲ್ಲಿನ ಮೇಲೆ ಓದಲೆಂದು ಇರಿಸಿಕೊಂಡ ಪುಸ್ತಕಗಳನ್ನು ಎತ್ತಿಕೊಂಡು ವಿಷಯದ ಆಚೆ ಈಚೆಗಿನ ಸಂಗತಿಗಳು ಚರ್ಚೆಯಾಗಿ ಮುಂದಿನ ಓದಿನ ಬುನಾದಿಯಾಯಿತು.

ನಡುವೆ ಗೆಳೆಯ ರಾಧಾಕೃಷ್ಣ ಬಂದಗದ್ದೆ ಫೋನಾಯಿಸಿ ಹೊತ್ತು ಸುಮಾರು ಆಯಿತಲ್ಲೋ ಬರಲೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಇದ್ದೇನೆ ಎಂದರು.. ಕಿಟ್ಟಣ್ಣ ಬಂದಿದ್ದಾನೆ.. ನೀವೂ ಬಂದರೆ ಒಟ್ಟಿಗೇ ಕಾಫಿ ಕುಡಿಯೋಣ ಎಂದಿದ್ದೇವೆ ಎಂದೆ.. ಹಾಗಿದ್ದರೆ ಹತ್ತಿಪ್ಪತ್ತು ನಿಮಿಷಗಳಲ್ಲಿ ಬಂದೇ ಬಿಡುತ್ತೇನೆ ಎಂದರು.

ಹಾಗಾಗಿ ಅಷ್ಟು ಸಮಯವಿದೆ.. ಕಿಟ್ಟಣ್ಣನ ವಿಚಾರಕ್ಕೆ ಬರೋಣ.. ಕಿಟ್ಟಣ್ಣ ಸಾಗರದ ಮನೆಘಟ್ಟ ಊರಿನವ.. ಮನೆಘಟ್ಟ ಸುಬ್ರಾಯರ ಮಗ.. ಅವರ ಕಾಲಕ್ಕೆ ಸುಬ್ರಾಯರು ಸಾಗರ ಪ್ರಾಂತ್ಯದಲ್ಲಿ ಒಂದು ತೂಕದ ಜನ.. ತುಂಬಾ ಒಳ್ಳೆಯ ಕೃಷಿಕರು.. ಸಾಹಿತ್ಯ ಮತ್ತು ರಂಗಭೂಮಿಯಲ್ಲೂ ಆಸಕ್ತಿ ಉಳ್ಳವರಾಗಿದ್ದರು.. ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣ ತಮ್ಮಂದಿರು, ಅವರುಗಳ ಸಂಸಾರ.. ಎಲ್ಲರೂ ಒಟ್ಟಾಗಿ ಅನುಸರಿಸಿಕೊಂಡ ಅನ್ಯೋನ್ಯದ ಬದುಕು.. ಅದನ್ನು ನೋಡುವುದೇ ಒಂದು ಚೆಂದವಾಗಿತ್ತು.. ಅದೇ ಮಾತು ಮುನ್ನೆಲೆಗೆ ಬಂತು.. ಕಿಟ್ಟಣ್ಣ ಅದನ್ನು ನೆನೆಸಿಕೊಳ್ಳುತ್ತಾ ಕೊಂಚ ಅನ್ಯಮನಸ್ಕನಾದ.. ಏನೇ ಅನ್ನು ಆ ಕಾಲದ್ದೇ ಒಂದು ಸೊಗಸು ಮಾರಾಯ ಎಂದು ಮತ್ತೆ ನಮ್ಮ ಕಾಲಘಟ್ಟಕ್ಕೆ ಬಂದಂತಾದ.

ಇಂತಿರ್ಪ ಕಿಟ್ಟಣ್ಣ ಯಾಕೋ ಮದುವೆ ಆಗಲೇ ಇಲ್ಲ.. ಸಾಗರ ಸಮೀಪದಲ್ಲಿ ಅಣ್ಣ ತಮ್ಮಂದಿರು ಸೇರಿ ಜಮೀನು ಮಾಡಿದ್ದಾರೆ.. ನಡುವೆ ಪುಟ್ಟ ಮನೆಯಲ್ಲಿ ಒಬ್ಬನೇ ಇದ್ದಾನೆ.. ಹಗಲು ಓದು, ಕೃಷಿ ಅಂತೆಲ್ಲಾ ಕಾಲ ಕಳೆದು ಸಂಜೆ ಪೇಟೆ ಕಡೆ ಬರುತ್ತಾನೆ.. ಬರುವಾಗ ಬಗಲು ಚೀಲದಲ್ಲಿ ಸೀಸನ್ನಿಗೆ ತಕ್ಕಂತೆ ಹಣ್ಣು ವಗೈರೆ ತರುತ್ತಾನೆ.. ಇಷ್ಟು ಮಿತ್ರರಿಗೆ ಹಂಚಿ ನಾಕು ಮಾತಾಡಿ ಹೋಗುತ್ತಾನೆ.

ಹೇಳಿಕೆಯಂತೆಯೇ ಬಂದಗದ್ದೆಯವರ ಬರೋಣವಾಯಿತು.. ಮತ್ತೆ ಮಾತಿನ ಮೆಲುಕೂ ಆಯಿತು.. ಕಾಫಿಗೆ ಏಳುವ ಮುನ್ನ.. ನನಗೆ ಕಿಟ್ಟಣ್ಣನ ಬ್ರಹ್ಮಚಾರಿ ಸಂಸಾರದ ಕುರಿತು ಕೆಟ್ಟ ಕುತೂಹಲ ಬಂದು, ಹೌದು ಕಿಟ್ಟಣ್ಣ ನಿನ್ನ ಊಟ, ತಿಂಡಿಗಳೆಲ್ಲ ಏನಿರುತ್ತದೆ? ಹೇಗಿರುತ್ತದೆ ಎಂದೆ.. ತಿಂಡಿಯೆಂದರೆ ಅವಲಕ್ಕಿಯೇ ಮೆಚ್ಚು ಎಂದ.. ದಪ್ಪವಲಕ್ಕಿ ತೊಳೆದು ನೆನೆಸಿ ಒಗ್ಗರಣೆ ಅವಲಕ್ಕಿ, ಗೊಜ್ಜವಲಕ್ಕಿ, ಮೊಸರವಲಕ್ಕಿ ಮತ್ತು ಕುಟ್ಟವಲಕ್ಕಿಯ ಕತೆ ಹೇಳಿದ.. ಅವನ ಅವಲಕ್ಕಿಯ ಬಗೆಬಗೆಯ ತಿಂಡಿಯ ಪ್ರಯೋಗಗಳನ್ನು ಕೇಳಿ ಬಾಯಲ್ಲಿ ನೀರೂರಿ ಏನೇ ಆಗಲಿ ನೀನೇ ಲಕ್ಕಿ ಎಂದು ಬಾಯಿ ತುಂಬಾ ಹೇಳಿದೆ… ಅವಲಕ್ಕಿ ಒಂದೇ ಅಲ್ಲ, ಆಗಾಗ ಉಪ್ಪಿಟ್ಟು ಮತ್ತು ದೋಸೆ ಇರುತ್ತದೆ ಎಂದ.

ಮತ್ತೆ ಮಧ್ಯಾಹ್ನವೂ ಅನ್ನದ ಜೊತೆಗೆ ಸಾರು, ಸಾಂಬಾರು ಆಗಾಗ ಪಲ್ಯ, ತಂಬುಳಿ, ಗೊಜ್ಜು ಇರುತ್ತದೆ.. ಮಧ್ಯಾಹ್ನ ಊಟಕ್ಕೆ ಪ್ಯಾಕೇಟು ಮೊಸರು ಇರುತ್ತದೆ ಎಂದಿದ್ದ.. ಮಾತಿನ ನಡುವೆ ಎದ್ದು ಹೋದವ, ಮೊದಲೇ ನೋಡಿ ಬಂದಿದ್ದನೋ ಏನೋ ಕೌಂಟರ್ರಿನಲ್ಲಿ ಇಟ್ಟ ಕಾಕಾಲಿನವರ ಚಟ್ನಿ ಮತ್ತು ಉಪ್ಪಿನಕಾಯಿ ಖರೀದಿ ಮಾಡಿದ.

ನಿನ್ನ ಮೆಚ್ಚಿನ ಸಿಹಿ ಯಾವುದು ಎಂದೆ.. ಸ್ವೀಟಿನ ಮಟ್ಟಿಗೆ ಅಷ್ಟೇನೂ ಖಾಯಷ್ಷು ಇಲ್ಲ, ಮಾಡಿಕೊಳ್ಳುವುದೂ ಇಲ್ಲ.. ಹಾಗಂತ ತಿನ್ನುವುದಿಲ್ಲ ಎಂದ.. ನಾನು ನಮ್ಮ ಕಪ್ಪಕ್ಕಿ ತೋರಿ.. ಇದರ ಪಾಯಸ ಮಾಡಬೇಕು ಕಿಟ್ಟಣ್ಣ, ಇದರ ಸೊಗಸಿನ ಮುಂದೆ ಸಣ್ಣಕ್ಕಿ ಕೇಸರೀಬಾತನ್ನೂ ನಿವಾಳಿಸಿ ಎಸೆಯಬೇಕು ಎಂದೆ.. ಅದು ನಿಜವೂ ಹೌದು.. ಕಪ್ಪಕ್ಕಿ ಪಾಯಸ ಮಾಡುವುದು ಕೂಡ ಬಹಳ ಸುಲಭ.. ಕಪ್ಪಕ್ಕಿ ಬೇಯಿಸುವಾಗ ಸ್ವಲ್ಪ ಹಾಲು ಸೇರಿಸಿ ಕುದಿಸಿದರಾಯಿತು. ಬೆಲ್ಲವೋ, ಸಕ್ಕರೆಯೋ ಅದು ನಮ್ಮ ಆಯ್ಕೆ… ಮಿಕ್ಕಂತೆ ಯಾವುದೇ ಷೋಡಶೋಪಚಾರ ಬೇಡವೇ ಬೇಡ.. ಬೇಕೇ ಬೇಕೆಂದರೆ ಮೇಲೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಬೆರೆಸಿದರೆ ಆಯಿತು ಎಂದೆ.. ನಮ್ಮಲ್ಲಿಗೆ ಯಾರೇ ಅತಿಥಿಗಳು ಬಂದಿರಲಿ ಇದನ್ನು ಮಾಡಿ ತಿನ್ನಿಸಿ ಕಪ್ಪಕ್ಕಿಯ ಬಳಕೆಯನ್ನು ಮುನ್ನೆಲೆಗೆ ತರುತ್ತಿದ್ದೇವೆ ಎಂದೆ… ನೀನು ಬರುತ್ತೀಯಾ ಎಂದರೆ ಕಪ್ಪಕ್ಕಿ ಪಾಯಸ ಮಾಡಿಸಿರುತ್ತೇನೆ ಎಂದೆ.

ನಮ್ಮಲ್ಲಿ ರೈತರಿಂದ ನೇರ ಖರೀದಿ ಮಾಡಿದ ಈ ಕಪ್ಪು ಮುತ್ತು ಎಂಬ ಕಪ್ಪಕ್ಕಿ ಅಲ್ಲದೇ ಅಪರೂಪ ಆಗಿರುವ ಆಲೂರು ಸಣ್ಣ, ಸಣ್ಣ ವಾಳ್ಯ, ಮೀನಾಕ್ಷಿ ಸಣ್ಣ ಎಂಬ ಊಟದ ಅಕ್ಕಿ, ಅಭಿಲಾಷ, ಪದ್ಮರೇಖ ಎನ್ನುವ ತಿಂಡಿಯ ಸ್ಪೆಷಲ್ ಸಾವಯವದ ಅಕ್ಕಿ ವಗೈರೆಗಳು ಲಭ್ಯವಿದೆ.

ಹೊರಡುವ ಮುನ್ನ ಕಿಟ್ಟಣ್ಣ ನಮ್ಮ ಒಂದೇ ವಿನಂತಿಗೆ ಸಂಸ್ಥೆಗೆ ತನ್ನದೊಂದು ಷೇರು ಹಾಕುತ್ತೇನೆ ಎಂದ.. ತನ್ನ ಜೀವಮಾನದಲ್ಲಿ ತಾನು ಈವರೆಗೆ ಯಾವುದೇ ಸಂಘ ಸಂಸ್ಥೆಯಲ್ಲಿ ಷೇರು ಹಾಕಿದವನಲ್ಲ… ನೀವು ಗೆಳೆಯರು ಒಳ್ಳೆಯ ಉದ್ದೇಶದಿಂದ ಒಂದು ಸಂಸ್ಥೆ ಕಟ್ಟಲು ಹೊರಟಿದ್ದೀರಿ.. ನಿಮ್ಮೊಂದಿಗೆ ನಾನೂ ಜೊತೆ ಆಗುವುದು ಒಂದು ಖುಷಿಯ ವಿಚಾರ ಎಂದ.. ನಮ್ಮ ಮೇಲಿನ ಕಿಟ್ಟಣ್ಣನ ಈ ಅಭಿಮಾನಕ್ಕೆ ನಾನು ಕಿಟ್ಟಣ್ಣನ ಅಭಿಮಾನಿಯಾದೆ.

ಈ ಷೇರು ಸಂಗ್ರಹ ಅಭಿಯಾನದ ಸಂದರ್ಭದಲ್ಲಿ ನಮಗೆ ನೂರೆಂಟು ಅನುಭವಗಳು ಆಗಿವೆ.. ಒಂದೇ ಮಾತಿಗೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಷೇರು ಹಾಕಿದವರು ಇದ್ದಾರೆ.. ತಿಳಿಸಿ ಹೇಳಿದ ಮೇಲೆ ಎಸ್ ಅಂದವರು ಇದ್ದಾರೆ.. ಷೇರು ಹಾಕಿದರೆ ನಮಗೇನು ಲಾಭ ಎಂದು ಕೇಳಿದವರು ಇದ್ದಾರೆ.. ನಿಮಗೆ ಬೇರೆ ಕೆಲಸ ಇಲ್ಲವೇ? ಈಗ ನಿಮಗಿದು ಬೇಕಿತ್ತಾ ಎಂದು ತಣ್ಣೀರೆರೆಚಿದವರು ಇದ್ದಾರೆ… ಗಂಟೆಗಟ್ಟಲೆ ಪ್ರಶ್ನೆಯಾಡಿ ಎಲ್ಲ ಕೇಳಿಯಾದ ಮೇಲೆ .. ಸ್ವಲ್ಪ ದಿನ ಹೋಗಲಿ ಮತ್ತೆ ನೋಡೋಣ ಎಂತಲೋ..‌ ನಿಮ್ಮ ಆಫೀಸಿಗೇ ಬಂದು ಹಾಕುತ್ತೇವೆ ಎಂದು ಸಾಗು ಹಾಕಿದವರೂ ಇದ್ದಾರೆ.. ಇಂತಹ ಸೋಗಲಾಡಿಗಳ ನಡುವೆ ಕಿಟ್ಟಣ್ಣ ನನಗಂತೂ ಅಭಿಮಾನದ ಜನವಾಗಿಯೇ ಕಾಣುತ್ತಾನೆ.

ನಿಜ ಹೇಳಬೇಕೆಂದರೆ ನಮ್ಮ ಸಂಸ್ಥೆ ಅಂತಲ್ಲ, ರೈತ ಕಾಳಜಿಯ, ರೈತರ ಆದಾಯ ವೃದ್ಧಿ ಉದ್ದೇಶದ ಸಂಸ್ಥೆಗಳು.. ಉತ್ಪಾದಕಾ ಕಂಪನಿಗಳು ಇಂದಿನ ಅಗತ್ಯ… ಬೆಳಕು ಹರಿಯುವುದರೊಳಗೆ ಇವು ರೈತೋದ್ಧಾರ ಮಾಡಿ ಬಿಡುತ್ತದೆ ಎಂದಲ್ಲ.. ಆದರೆ ರೈತನಿಗೆ ಮಾನ, ಸನ್ಮಾನ ತಂದು ಕೊಡು ಬಲ್ಲವು.. ಎಲ್ಲಕಿಂತ ಹೆಚ್ಚಿನದಾಗಿ ರೈತನಿಗೆ ಒಂದು ಸ್ವಾಭೀಮಾನದ ವೇದಿಕೆ ಆಗಬಲ್ಲದು.


  • ನಾಗೇಂದ್ರ ಸಾಗರ್

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW