ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೩)

“ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ‌‌??? ” ನಿಜ ಅಲ್ವಾ. ಪ್ರೀತಿಗೆ ಪರ್ಯಾಯ ಮುಖಗಳು ಬಹಳಷ್ಟಿವೆ. ಇವು ಲೌಕಿಕವೂ ಹೌದು, ಪಾರಲೌಕಿಕವೂ ಹೌದು. ಲೌಕಿಕವಾದ ಪ್ರೀತಿ ನಮ್ಮ ಬದುಕಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಪ್ರೀತಿಯೆಂಬ ವಿಸ್ಮಯ’ ತಪ್ಪದೆ ಮುಂದೆ ಓದಿ…

“ನನ್ನ ಭಾವನೆಗಳ ಬಣ್ಣದ ಗರಿಗಳೆ
ನನ್ನ ಬೆಡಗಿನ ಲೋಕದ ಸಹ ವಿಹಾರಿಗಳೆ
ನನ್ನ ಭಾವ ಜಗತ್ತಿನ ಉಜ್ವಲ
ಚಿತ್ರಗಳೆ
ತರತರತರದಲಿ ನನ್ನ ಮನೋಲೋಕದಲ್ಲಿ ನರ್ತಿಸುವ
ಬಣ್ಣದ ಕಾರಂಜಿಗಳೆ
ನವನವೋನ್ಮೇಷಗೊಂಡಿದೆ
ನನ್ನ ಎದೆಯ ಹೊಲ
ನಿಮ್ಮ ಜೀವಂತಿಕೆಯ ಮಾರ್ದವದಲಿ
ನನ್ನದೆಲ್ಲ ಶೋಕತಮವವಿತಿದೆ
ನಿಮ್ಮ ಪ್ರೀತಿ ಚಿಪ್ಪಿನ ಒಳಗೆ
ನನ್ನ ಬಾಲ್ಯವಿದೊ ಹರಯವಿದೊ
ಹೊರಳಿ ಮರಳಿದೆ
ನಿಮ್ಮ ಬದುಕಿನ ಒಲವ ಸಂಪುಟದೊಳಗೆ
ನಿಮ್ಮ ಪ್ರೀತಿಯ ಸರಕಿನ ಬೇಹಾರಿ”

ನಿಮ್ಮ ಶಿವದೇವಿ ಮೇಡಂ..
*
ಎಲ್ಲೋ ಬರೆದಿಟ್ಟ ನನ್ನದೇ ಕವನ ನನ್ನ ಕಡತದಲ್ಲಿ ಹಣಕಿದಾಗ….ಪುಳಕಿತಳಾದೆ. ‘ಶಾಲೆಯೆಂಬ ದೇವಮಂದಿರ’ ದಲ್ಲಿ, ವಸತಿಯೆಂಬ ಒಂದು ವಿಶ್ರಾಂತಿಧಾಮದಲ್ಲೂ ಪ್ರೀತಿಯ ಬೆಸುಗೆ ಎಂತಹ ಸಂವೇದನೆಗಳನ್ನು ಉಂಟುಮಾಡಬಲ್ಲುದೆಂಬುದಕ್ಕೆ ಈ ಮೇಲಿನ ಕವನವೇ ಸಾಕ್ಷಿ. ವಿದ್ಯಾರ್ಥಿನಿಯರ ನಡುವಿದ್ದಷ್ಟು ದಿನ ಅವರೇ ನಾನಾಗಿ ಅವರನ್ನೇ ಆವಾಹಿಸಿಕೊಂಡು,ಆ ಕರ್ತವ್ಯವನ್ನೇ ಬದ್ಧತೆಯಾಗಿ ಆಚ್ಛಾದಿಸಿಕೊಂಡು ಕಳೆದ ದಿನಗಳಿಗಂತೂ ಬೆಲೆ ಕಟ್ಟಲಾಗದು.ಪ್ರೀತಿ ಎಂಬುದು ಪ್ರತಿಫಲಿಸುವ ಕನ್ನಡಿ.ಇಲ್ಲಿ ತೋರುವುದೇ ಅಲ್ಲಿ ಸಹ ಕಾಣುವುದು.ಆದರೆ ಅದನ್ನು ಸಂರಕ್ಷಿಸಿ ಕೊಳ್ಳುವುದು ಅಷ್ಟು ಸುಲಭದ ಕಾರ್ಯವಲ್ಲ.ನಿರಂತರ ಎಚ್ಚರ,ಕಾಳಜಿ,ಪರಸ್ಪರ ಸ್ಪಂದಿಸುವಿಕೆ,ಅವರದೇ ಆದ ಪ್ರತ್ಯೇಕ ಸಮಸ್ಯೆಗಳಿಗೆ ನಾವು ಪ್ರತಿಕ್ರಿಯಿಸ
ಬೇಕಾದ ಸಂದರ್ಭಗಳಲ್ಲಿ ನಾವು ತೋರಬೇಕಾದ ಚಾಕಚಕ್ಯತೆ ಎಲ್ಲವೂ ಪರಿಗಣನೆಗೆ ಬರುತ್ತವೆ.

ಆದರೂ ಅದು ಕೊಡುವ ಆನಂದ ಮಾತ್ರ ಅವರ್ಣನೀಯ. ಪ್ರೀತಿಯ ಲಭ್ಯತೆ ನಂಬಿಕೆಯ ನೆಲೆಗಟ್ಟಿನ ಮೇಲೆ ಅವಲಂಬಿತವಾಗಿರುತ್ತದೆ. ನಂಬಿಕೆಗೆ ಪಾತ್ರವಾಗುವುದು…ಬಹಳ ಸವಾಲಿನ ಕೆಲಸವೇ ಹೌದು…ಆದರೆ ಒಮ್ಮೆ ಬೇರುಬಿಟ್ಟರೆ ಅದು ಶಾಖೋಪಶಾಖೆಯಾಗಿ, ದಾಂಗುಡಿಯಿಟ್ಟು, ಹೂ ಹಣ್ಣುಗಳಿಂದ ತುಂಬಿ ಲೋಕೋಪಕಾರಿಯಾಗುವ ಮರದಂತೆ ನಮ್ಮ ಅರ್ಹತೆಯನ್ನು ಔನ್ನತ್ಯಕ್ಕೆ ಕೊಂಡೊಯ್ಯುತ್ತದೆ.ಸಮಾಜಮುಖಿಯಾಗಿ ಧನ್ಯತೆಯನ್ನು ತುಂಬುತ್ತದೆ.

ಅದಕ್ಕೇ ಕವಿಗಳೆಲ್ಲರೂ ಪ್ರೀತಿಯನ್ನು ಹೊರತುಪಡಿಸಿ ಏನನ್ನೂ ಬರೆಯಲಾಗದ್ದು ಎನಿಸುತ್ತಿದೆ. ಪ್ರೀತಿ ಪ್ರೇಮ, ಸ್ನೇಹ, ವಾತ್ಸಲ್ಯ ಇವು ಅನೇಕ ರೂಪಗಳಲ್ಲಿ ಕಂಡು ಬರುವ ಮಾನವೀಯ ಸಂಬಂಧ. ಅದಕ್ಕೇ ಕವಿ ಜಿ.ಎಸ್ ಶಿವರುದ್ರಪ್ಪನವರು, ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?’ ಎಂದು ಉದ್ಗರಿಸಿದರು.

ಕವಿ ಚೆನ್ನವೀರ ಕಣವಿಯವರು,

”ಸ್ವಾರ್ಥವಿರದ ಪ್ರೇಮ ನಿಸ್ಸೀಮದಾರಾಮ
ಹೋಮಾಗ್ನಿಯಂತಿಹುದು ಪ್ರೇಮಾಗ್ನಿಯು
ಪತನ ಹೊಂದಿರುವ ಪತಂಗದಂತಿದೆ ಕಾಮ
ಪ್ರೇಮ ಚಿನ್ನವ ಸುಡುವ ದಿವ್ಯಾಗ್ನಿಯು”

ಭಾವಜೀವಿ
*

‘ಸ್ವಾರ್ಥವಿರದ ಪ್ರೇಮ’
‘ಚಿನ್ನವ ಸುಡುವ ದಿವ್ಯಾಗ್ನಿ’

ಈ ಅಭಿಪ್ರಾಯ ಎಷ್ಟು ಅರ್ಥಪೂರ್ಣ ಅಲ್ಲವಾ..? ಚಿನ್ನ ಪರಿಶುದ್ಧವಾಗಿ ದಿವ್ಯವಾಗಬೇಕಾದರೂ ಅದು ಹೋಮಾಗ್ನಿಯಲ್ಲಿ ಪರಿಷ್ಕಾರ ಹೊಂದಲೇ ಬೇಕು.ಇದೇ ಸತ್ವಪರೀಕ್ಷೆ ಬಾಳಿನ ಹೋಮ ಕುಂಡದಲ್ಲಿ ಪ್ರೇಮವನ್ನೂ ಒರೆಹಚ್ಚುತ್ತದೆ.ಗೆದ್ದರಂತೂ ಅದರ ಮೌಲ್ಯ ಶಾಶ್ವತ…

“ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ‌‌??? ” ನಿಜ ಅಲ್ವಾ. ಪ್ರೀತಿಗೆ ಪರ್ಯಾಯ ಮುಖಗಳು ಬಹಳಷ್ಟಿವೆ. ಇವು ಲೌಕಿಕವೂ ಹೌದು, ಪಾರಲೌಕಿಕವೂ ಹೌದು. ಲೌಕಿಕವಾದ ಪ್ರೀತಿ ನಮ್ಮ ಬದುಕಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಹಲವು ಬಗೆಯ ಕಟ್ಟುಪಾಡಿಗೆ ಒಳಪಟ್ಟಿರುವ ನಾವು ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅದಕ್ಕೆ ಬದ್ಧವಾಗಿಯೇ ಇರಬೇಕಾಗುತ್ತದೆ.

ಉದಾಹರಣೆಗೆ ತಾಯ್ತಂದೆಯರ ಮೇಲಿರುವ ಪ್ರೇಮ, ‌ಪ್ರಕೃತಿ ಪ್ರೇಮ,ಒಡಹುಟ್ಟಿನ ಪ್ರೇಮ, ಬಂಧು ಪ್ರೇಮ, ದಾಂಪತ್ಯ ಪ್ರೇಮ, ತನ್ನ ವೃತ್ತಿ ಪ್ರೇಮ, ಪ್ರಾಣಿ ಪ್ರೇಮ ಹೀಗೆ ಹಲವು ಪ್ರೇಮಗಳ ಮೂಲ‌, ಬಂಧನವೇ ಆಗಿರುತ್ತದೆ.ಇದು ನಮ್ಮ ಲೌಕಿಕ ಬದುಕಿಗೆ‌ ಅನಿವಾರ್ಯವೇ‌ ಆದರೂ ಎಂದಿಗೂ ನಿರ್ವಹಣೆ ಸುಲಭಸಾಧ್ಯವಲ್ಲ.

“ಹಗ್ಗವಿಲ್ಲದ ಕಟ್ಟು,ಬೆತ್ತವಿಲ್ಲದ ಪೆಟ್ಟು, ಒಗ್ಗಿತೇ ಈ ಗತಿಯು ಸವಿವಿಷವ ತಿಂದು” ಎಂಬ ಕವಿವಾಣಿಯಂತೆ

ಒಂದೊಮ್ಮೆ ಅವುಗಳೇ ನಮಗೆ ಪಾಶವಾಗಿ ಬದುಕನ್ನು ನಿರ್ಬಂಧಿಸುವುದು ಕೂಡ ಸುಳ್ಳಲ್ಲ.

‘ಮುಳುಗುತ್ತಿರುವವನು ಆಸರೆಗಾಗಿ
ಮೊಸಳೆಯನ್ನೇ ತಬ್ಬಿದಂತಹ’ ಸ್ಥಿತಿ ಇದರದು.
ಹುಲಿಯ ಬೆನ್ನೇರಿದವನ ಸ್ಥಿತಿಯಲ್ಲಿ
ತನ್ನ ಅಸ್ತಿತ್ವವನ್ನು ಉಳಿಸಿಕೊಂಡೇ
ಆ ಅಪಾಯಕಾರೀ ಸ್ಥಿತಿಯಿಂದ ಪಾರಾಗುವ ಅಪಾಯವನ್ನೂ ಚಿಂತಿಸುವ ಚಾಣಾಕ್ಷತೆ ಬೇಕಾಗುತ್ತದೆ.
ಕತ್ತಿಯ ಅಲುಗಿನ ಮೇಲೆ ನಡೆಯುವ
ಪರಿಸ್ಥಿತಿಯಂತೆ’…!
*
ನಮ್ಮ ಸನಾತನ ಪರಂಪರೆಯಲ್ಲಿ ಶಾಶ್ವತ ಪ್ರೇಮದ ಬಗೆಗೆ ಅರಿವನ್ನು ಹೊಂದಿದ ಹಲವಾರು ಸಾಧಕರನ್ನು ಕಾಣುತ್ತೇವೆ. ಇದಕ್ಕೆ ಹಲವು ಮುಖಗಳು. ಭಕ್ತನಾ /ಳಾ/ಗಿ ತನ್ನ ಭಗವಂತನ ಕುರಿತು ಇರುವ ದಾಸತ್ವ…! ಕನಕ /ಪುರಂದರದಾಸರು ,ಸೂರದಾಸ,ತುಳಸೀದಾಸರು ಇದಕ್ಕೆ ನಿದರ್ಶನವಾಗುತ್ತಾರೆ.

ಸಂತೆ ಮೀರಾ ಸಹ ತನ್ನ ಆರಾಧ್ಯದೈವವಾದ ಶ್ರೀಕೃಷ್ಣನ ಸಾಕ್ಷಾತ್ಕಾರಕ್ಕಾಗಿ ತನ್ನೆಲ್ಲ ವೈಭವೋಪೇತವಾದ ಜೀವನವನ್ನು ತಿರಸ್ಕರಿಸುತ್ತಾಳೆ. ರಾಧಾಕೃಷ್ಣರ ನಡುವಿನ ಬಾಂಧವ್ಯ ವಾಕ್ಯವೂ ಚಿರಂತನ..ಲೋಕೋತ್ತರವಾದುದು. ಇನ್ನೊಂದು ಸತೀಭಾವ. ಶರಣರಲ್ಲಿದ್ದ ‘ಶರಣಸತಿ,ಲಿಂಗಪತಿ’ಎಂಬ ಭಾವ.

ಅಕ್ಕಮಹಾದೇವಿಯಂತೆ…ಚೆನ್ನಮಲ್ಲಿಕಾರ್ಜುನನೇ ಆಕೆಯ ಪತಿ.’ಸಾವ ನೋವ’ ಲೌಕಿಕ ಗಂಡರನೆಲ್ಲ ‘ಒಲೆಯಲಿಕ್ಕು’, ಎಂಬುದು ಅವಳ ನಿರ್ಧಾರ. ಏಕೆಂದರೆ ತನ್ನ ಚೆನ್ನಮಲ್ಲಿಕಾರ್ಜುನನೇ ಶಾಶ್ವತ ಪತಿಯವಳಿಗೆ.

“ಸಾವಿಲ್ಲದ ರೂಹಿಲ್ಲದ ಚೆಲುವಂಗಾನೊಲಿದೆನಯ್ಯಾ”… ಎನ್ನುತ್ತಾ ಆತನನ್ನು ಸಾಕ್ಷಾತ್ಕರಿಸಿಕೊಳ್ಳಲು ಶ್ರೀ ಶೈಲದವರೆಗೂ ತೆರಳುವ ಅವಳು,’ ಕದಳಿಯ ಕರ್ಪೂರವಾಗುವುದು, ಚೆನ್ನಮಲ್ಲಿಕಾರ್ಜುನನಲ್ಲೇ ಐಕ್ಯ ವಾಗುವುದು….ಎಲ್ಲವೂ ಆಕೆಯ ದೃಢ ಭಕ್ತಿಯ ಪ್ರತೀಕವೇ ಆಗಿದೆ. ತಾನು ಕೌಶಿಕ ಮಹಾರಾಜನನ್ನು ವಿವಾಹವಾದರೂ…ಜಂಗಮರ ಸೇವೆಯನ್ನು ಕೈಬಿಡದೆ,ಅನುಭವ ಮಂಟಪದ ವಿದ್ವತ್ಪೂರ್ಣ ಸಭೆಯಲ್ಲಿ ಯಾರ ಪ್ರಶ್ನೆಗಳಿಗೂ ತಲ್ಲಣಗೊಳ್ಳದೆ ದಿಟ್ಟವಾಗಿ, ಎಲ್ಲರೂ ಅಹುದಹುದೆನ್ನುವ ಉತ್ತರವನ್ನು ನೀಡುವ ಅಕ್ಕ, ಭಾರತೀಯ ನಾರಿಯ ವೀರ ವೈರಾಗ್ಯದ ಸಾಕ್ಷೀಪ್ರಜ್ಞೆಯಾಗಿದ್ದಾಳೆ.ಅಧ್ಯಾತ್ಮ ಜಗತ್ತಿನ ತಾರೆಯಾಗಿ ಮಿನುಗುತ್ತಿದ್ದಾಳೆ.

ಸಂಯಮವೆನ್ನುವುದು ಅಷ್ಟು ಸುಲಭವಲ್ಲ. ತನ್ನ ಉಕ್ಕುವ ತಾರುಣ್ಯದ ಕಾಯವನ್ನು ಹೊತ್ತು,ದಿಗಂಬರೆಯಾಗಿ, “ಚಿಲಿಪಿಲಿಯೆಂದೋದುವ ಗಿಳಿಗಳಿರಾ…ನೀವು ಕಾಣಿರೇ..ನೀವು ಕಾಣಿರೆ.
ಸರವೆತ್ತಿ ಹಾಡುವ ಕೋಗಿಲೆಗಳಾ ನೀವು ಕಾಣಿರೆ ನೀವು ಕಾಣಿರೆ…” ಎಂದು ದು:ಖಾರ್ತೆಯಾಗಿ ಕಾಡು ಮೇಡುಗಳನ್ನು ಅಲೆಯುತ್ತಾ, ‘ನೆಲದ ಮರೆಯ ನಿಧಾನ’ ವಾದ ತನ್ನ ಚೆನ್ನಮಲ್ಲಿಕಾರ್ಜುನನನ್ನು ಕಾಣಲು ಅನನ್ಯತೆಯಿಂದ ಅರಸುವ ಅವಳ ದಿಟ್ಟತನ,ಇಂದ್ರಿಯ ನಿಗ್ರಹ ಎಲ್ಲವೂ…ಪ್ರೇಮದ ಪರಾಕಾಷ್ಠೆಗೆ ಸಾಕ್ಷಿಯಾಗಿದೆ.
ಇದು ತ್ಯಾಗದ ಪರಮಾವಧಿ ಗಮ್ಯವಾಗಿದೆ.

ಈ ಪ್ರೇಮದ ಪರಿಗೆ,ಉಕ್ಕುವ ಜವ್ವನವಾಗಲಿ,ತನುವಿನ ಕಾಳಜಿಯಾಗಲಿ,ಇಂದ್ರಿಯಗಳ ಆಮಿಷ ವಾಗಲಿ ಯಾವುದೂ ಮಹತ್ವವೆನಿಸುವುದಿಲ್ಲ.’ಅನುಭಾವದ ದಿವ್ಯತೆ’ಯೊಂದೇ ಇಲ್ಲಿ ಅರಿವನ್ನು ಬೆಳಗುವ ಮಹಾಜ್ಯೋತಿಯಾಗುತ್ತದೆ. ಲೋಕೋದ್ಧಾರಕವಾಗುತ್ತದೆ. ಈ ಪರಿಯ ಪ್ರೇಮಕ್ಕೆ ಬದುಕೇ ಹಣತೆಯಾಗಿ ಉರಿದುಬಿಡುತ್ತದೆ.

ಮುಗ್ಧ ಪ್ರೇಮವೂ ಹೀಗೆಯೇ ಭಕ್ತಿ ಮೂಲವಾದುದು. ಶ್ರದ್ಧಾನಿಷ್ಠೆಯ ತಳಪಾಯವನ್ನು‌ ಹೊಂದಿರುವಂತಹುದು.

‘ದೇವರಲ್ಲಿ ಕೇಳಲು’ ಹೋದ ಧ್ರುವ ತನ್ನ ದೃಢಭಕ್ತಿಯಿಂದ ದೇವರ ಸಾಮಿಪ್ಯವನ್ನೇ ಪಡೆದು ಬಿಡುತ್ತಾನೆ.ಶಾಶ್ವತ ಪದವಿಯೇ ದೊರೆಯುತ್ತದೆ ಅವನಿಗೆ. ನಚಿಕೇತ ಪ್ರಹ್ಲಾದರೂ ಇದೇ ದಾರಿಯಲ್ಲಿ ಸಾಗಿದವರು.ಭಗವತ್ಪ್ರೇಮವಲ್ಲದೆ ಅವರಿಗೆ ಬೇರೇನೂ ಬೇಕಾಗಿಲ್ಲ.ತಪಸ್ಸು,ಕಠಿಣ ಪರೀಕ್ಷೆಗಳು ,ದೇವರು ಇರುವನೆಂಬ ನಂಬಿಕೆ ಎಲ್ಲವೂ ಅವರ ಧ್ಯೇಯ ಸಾಧನೆಗೆ ಪೂರಕ ಅಂಶಗಳು.

ದಾಂಪತ್ಯವನ್ನೂ ಸಹ ದೈವಿಕವಾಗಿ ಪರಿವರ್ತಿಸಬಹುದೆನ್ನುವ ವಿಚಾರಕ್ಕೆ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ಶ್ರೀ ಶಾರದಾಮಣಿ ದೇವೀಯವರ ಜೀವನವೇ ಒಂದು ಜ್ವಲಂತ ಉದಾಹರಣೆ.ತನ್ನಲ್ಲಿ ಅದಾಗಲೇ ಮೊಳೆತಿರುವ ಭಗವತ್ಪ್ರೇಮವನ್ನು ತನ್ನ ಕೈ ಹಿಡಿದ ಪತ್ನಿಗೆ ತಿಳಿಸಿ,’ತನ್ನ ಸಾಧನೆಗೆ ದಾಂಪತ್ಯ ಅಡ್ಡಿಯಾಗದು’ ಎಂದು ಆ ಸಾಧ್ವಿ ಯಿಂದ ಭರವಸೆ ಪಡೆದರು ಹಾಗೂ ಆಕೆಯನ್ನೇ ಜಗನ್ಮಾತೆಯ ಸ್ಥಾನದಲ್ಲಿರಿಸಿ ಪೂಜಿಸಿದರು.ಇಲ್ಲಿ ಇವರಿಬ್ಬರ ಆದರ್ಶ ಸಂಯಮ,ಲೋಕಕಲ್ಯಾಣಕ್ಕಾಗಿ ಮುಡಿಪಾದುದು ಈಗ ಇತಿಹಾಸ.

ಸುಖೀ ಸಂಸಾರ ನೌಕೆಯ ಪಯಣಿಗರಾಗಿದ್ದರೂ ಕುವೆಂಪುರವರಿಗಿದ್ದ ಅಧ್ಯಾತ್ಮದ ತುಡಿತ ಸೀಮಾತೀತವಾದುದು.

“ಒಲುಮೆ ಒಂದು ದಿವ್ಯ ರಕ್ಷೆ
ಇಹ ಸಮಸ್ಯೆಗೆ
ಮದುವೆ ಅದರ ಮಧುರ ದೀಕ್ಷೆ
ಗೃಹ ತಪಸ್ಯೆಗೆ”

ಗೃಹತಪಸ್ಯೆಯ ಮಧುರ ದೀಕ್ಷೆಯನ್ನು ಹೊಂದಿದ್ದ ಈ ರಸಋಷಿ. ಒಮ್ಮೆ ಹೀಗೂ ಹಂಬಲಿಸುತ್ತಾರೆ.

“ಎರಡು ವರಗಳ ಹಿಡಿದು ನಿಂತಿರುವೆ ದೇವಿ;
ಒಂದು ಕಾಮನಬಿಲ್ಲು, ಇನ್ನೊಂದು ಕಾವಿ !
ಒಂದು ಮುಗಿಲಲಿ ಮುಗುಳ್ನಗೆ ಬೀರಿ ಕರೆಯುತಿದೆ;
ಇನ್ನೊಂದು ಪಕ್ಕದಲೆ ನಿಂತು ಕಿವಿಗೆರೆಯುತಿದೆ;
ಎರಡನೂ ನೀಡಿತ್ತ ಓ ಎನ್ನದೇವಿ;
ಕೈಗೆ ಕಾಮನಬಿಲ್ಲು, ಮೈಗಿರಲಿ ಕಾವಿ!”

ಲೌಕಿಕದ ಒಲವನ್ನು ತಬ್ಬಿ ನಿಂತರೂ ಮನಸ್ಸು ಇನ್ನಾವುದೋ ಹಂಬಲಕ್ಕೆ ತುಡಿಯುತ್ತದೆ.ಈ ಒಲವನ್ನು ದಯಪಾಲಿಸಿದ ಆ ಇನ್ನೊಂದು ಶಕ್ತಿಯ ಪಾರಮ್ಯವನ್ನು ಕಂಡುಕೊಳ್ಳಲು ಅವರು ಆ ದೇವಿಯ ಕೃಪೆಯನ್ನು ಬೇಡುತ್ತಾರೆ. ಈ ‘ಒಲವೆಂಬುದು’ ಎಂತಹ ವಿಸ್ಮಯ ಅಲ್ವಾ. ಗೃಹ ತಪಸ್ಯೆಯೂ ಜೀವನ ಪ್ರೇಮದ ಇನ್ನೊಂದು ಮುಖ ತಾನೆ.
*
ವಿಶ್ವವನ್ನೇ ಆವರಿಸಿರುವ ಪ್ರೇಮದ ಈ ವಿರಾಟ್ ರೂಪವನ್ನು ನಮ್ಮ ಬದುಕಿನಲ್ಲಿಯೂ ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸೋಣ. ಆ ಮೂಲಕ ನಾವು ಈ ನಶ್ವರ ಕಾಯವನ್ನು ಉದಾತ್ತೀಕರಿಸಿಕೊಳ್ಳೋಣ.


  • ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಕವಿಯತ್ರಿ, ಲೇಖಕರು , ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW