ಮರುಕಳಿಸದ ಸುಗಂಧ – (ಭಾಗ ೮)

ಒಂದು ಹೂವು ತನ್ನ ಸೌಂದರ್ಯ ಮತ್ತು ಮಕರಂದವು ಕೀಟ ಹಕ್ಕಿಗಳಿಗೆ ಪ್ರಪಂಚವಾಗಿರುತ್ತದೆ, ಅದರ ಬೆಡಗು ಪ್ರಪಂಚವನ್ನು ಕೋಮಲಗೊಳಿಸಿದೆ. ನಿವೃತ್ತ ಶಿಕ್ಷಕರಾದ ಶಿವದೇವಿ ಅವನೀಶಚಂದ್ರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಅಡುಗೆ ಕೋಣೆಯಲ್ಲಿ ಏನಿದೆ..?

ಆದರೂ ಉದರನಿಮಿತ್ತಂ ಆಹಾರ ತಯಾರಿಯನ್ನು ನಿರ್ಲಕ್ಷಿಸಲಾದೀತೇ ಅದೂ ಒಂದು ಸಿದ್ಧಿಯೇ‌ ತಾನೆ. ಪರ್ಯಾಯ ವ್ಯವಸ್ಥೆಯಿಲ್ಲದ ಹಳ್ಳಿಯ ಪರಿಸರದಲ್ಲಿ ಬೆಳಗ್ಗಿನ ಆಹಾರ ತಯಾರಿಕೆಗೆ ಸಿಗುವ ಮಾನ್ಯತೆ ಹೆಚ್ಚು. ಅದೊಂದು ಕರ್ತವ್ಯ ಪೂರೈಸಿ ಅವರವರ ಕ್ಷೇತ್ರಕ್ಕೆ ‌ತೆರಳಿದರೆಂದರೆ ಮತ್ತೆ ಉಸಿರು ಬಿಡುವಷ್ಟು ಪುರುಸೊತ್ತು ಮನೆಯಾಕೆಗೂ ಸಿಗುತ್ತದೆ.
ತನ್ನಂತಹವಳಿಗಂತೂ ಅದು ಹೊರಪ್ರಪಂಚಕ್ಕೆ ಬೆರಗಿನ ನೋಟವನ್ನು ಕಲ್ಪಿಸುವ ಅಮೃತ ಘಳಿಗೆಯೇ..

*
ಒಮ್ಮೆ ಹೀಗೆ ಯಾವುದೋ ಒಂದು ಮನೆಯ ಪರಿಸರ ಇದ್ದ ಕಾಡಿನೊಳಕ್ಕೆ ಪ್ರವೇಶಿಸಿದ್ದಾಯಿತು. ಹರಿವ ನೀರು, ಹೂವಿರುವ ಕೊಳದ ಪರಿಸರ ತನ್ನ ಆದ್ಯತೆ…

*
ತನ್ನದು ವೇಗದ ನಡಿಗೆ. ದಾರಿಯಲ್ಲಿ ಸಿಕ್ಕವರೊಡನೆಯೂ ಮಾತನಾಡುವ ವ್ಯವಧಾನವಿಲ್ಲದ ಧ್ಯಾನ…! ಒಂದೋ ಭಗವಂತನ ಸ್ಮರಣೆ. ‘ಸದಾ ಎನ್ನ ನಾಲಗೆಯಲಿ ಬರಲಿ ರಾಮನಾಮ.. ಬರಲಿ ರಾಮ ನಾಮ ಸದಾ ಬರಲಿ ಕೃಷ್ಣನಾಮ..’ಹೀಗೆ ಮನಸ್ಸಿನೊಳಗೇ ಗುನುಗುನಿಸುತ್ತಾ… ಅಥವಾ ಓದಿದ ಕಾದಂಬರಿಗಳ ಪ್ರಕೃತಿ ಚಿತ್ರಣಗಳನ್ನು ಎದೆಗಿಳಿಸಿಕೊಳ್ಳುತ್ತಾ… ನೆಲವನ್ನೇ ಅವಲೋಕಿಸದೆ ಸಾಗುತ್ತಾ… ಎಷ್ಟು ದೂರ…. ಹಾಗಿದ್ದರೆ ಅಂದು ಕೂಡ ತಾನು… ಎಲ್ಲಿಂದಲೋ ಧುತ್ತೆಂದು ಸುಳಿದು ಬಂದು ಘಮ್ಮೆಂದು ರಾಚಿದ ಹಿತವಾದ ಕಂಪಿನ…ಜಾಡನ್ನು ಹಿಡಿದು…. ಅದರ ಮೂಲ ಅಸ್ತಿತ್ವವನ್ನು ಮೈಯೆಲ್ಲಾ ಕಣ್ಣಾಗಿ ಅರಸತೊಡಗಿದ್ದು.. ಥೇಟ್.. ಮಳೆಹನಿಗೆ ಕಾತರಿಸುವ ಚಾತಕದಂತೆಯೇ ಬೇಲಿಯಲ್ಲಿಲ್ಲ.

ಫೋಟೋ ಕೃಪೆ : google

ಏಕೋ ಜೇನ್ನೊಣಗಳ ಝೇಂಕಾರ ಇಲ್ಲಿ ಹೆಚ್ಚಾಗಿದೆ ಎನಿಸಿ ತಲೆಯೆತ್ತಿ ನೋಡಿದೆ ತಾನು! ಸಣ್ಣ ಮುತ್ತಿನ ಗೊಂಚಲಿನಂತೆ ತೂಗುತ್ತಿರುವ ಅಚ್ಚ ಬಿಳಿಯ ಈ ನಕ್ಷತ್ರ ಸೊಬಗಿಯನ್ನು ಪರಿಚಯಿಸಿಕೊಳ್ಳದೆ ಬಿಡುವವಳಲ್ಲ ಯಾರು ಎಷ್ಟು ಬೇಡವೆಂದರೂ…ಅದೂ ಇಷ್ಟೊಂದು ಮಕರಂದ ತುಂಬಿದ ಒಡಲಿನವಳು.ಮಧುಪೋಷಿಣಿ…!

ಸುತ್ತಮುತ್ತ ಕೊಕ್ಕೆ ಸಿಗಬಹುದೇನೋ ಎಂದು ಅರಸಿ ಹೇಗೋ ಒಂದು ಕವಲು ಕೊಂಬೆಯನ್ನು ಕೈಗೆಟುಕಿಸಿಕೊಂಡು ಮುರಿದು ಆ ದಟ್ಟ ಹಸಿರಿನ ಕಿವಿಯಲ್ಲಿ ತೂಗುತ್ತಿದ್ದ ಲೋಲಾಕುಗಳಂತಹ ಹೂಮಾಲೆಯನ್ನು ಸ್ವಲ್ಪವೂ ನಲುಗದಂತೆ ಕೈಬೊಗಸೆಗೆ ತಂದುಕೊಂಡೆ. ಆಘ್ರಾಣಿಸಿದಷ್ಟೂ ತಣಿಯದ ಮನ.ಮತ್ತೆ ಮತ್ತೆ ಅದರ ಕಂಪಿನ ಬಯಕೆ ಮೀರುತ್ತಾ ಅಲ್ಲೇ ಇದ್ದ ಅಗಲವಾದ ಎಲೆಯೊಂದನ್ನು ಕಿತ್ತು ಪೂಜೆಗೆ ಸಮರ್ಪಿಸುವಷ್ಟೇ ಭಕ್ತಿಯಿಂದ ಬೊಗಸೆಗೆ ವರ್ಗಾಯಿಸಿ ಕೊಂಡು ಕೃಷ್ಣಾರ್ಪಣವೆಂದೆ!

ಆ ಕ್ಷಣದಿಂದ ತಾನು ಇದುವರೆಗೂ ಗಮನಿಸಿರದಿದ್ದ ನಕ್ಷತ್ರಗಂಧಿನಿಯ ಪರಿಮಳದ ಲೋಕವೇ ತನ್ನ ವಿಹಾರದ ಗುರಿಯಾಯಿತು. ಬೊಗಸೆ ತುಂಬಾ ಸಣ್ಣ ರೆಂಬೆ ಸಹಿತ ಹಿರಿದು ಮನೆಯೊಳಗೂ ಪರಿಮಳದ ಲೋಕವೊಂದನ್ನು ಸೃಷ್ಟಿಸಿಕೊಂಡದ್ದಾಯಿತು.
*
ಉಮೆಯ ಮನಸ್ಸಿನ ತುಂಬಾ ಈ ವಿಶೇಷ ಗಂಧಿನಿಯದೇ ಅಮಲು ಹೇಗೆ ಆವರಿಸಿಕೊಂಡಿತ್ತೋ ಅರಿಯೆ.ಅಂದಿನಿಂದ ಅವಳ ಪ್ರತಿ ಮಾತಿನಲ್ಲೂ ಅದರ ಪ್ರಸ್ತಾಪವಿಲ್ಲದೆ ಇರುತ್ತಿರಲಿಲ್ಲ.ಮನೆಯೊಳಗೂ… ತಾನು ಅಡುಗೆ ಮಾಡುವ ಸ್ಥಳದಲ್ಲೂ ಅದಕ್ಕೊಂದು ಹೂದಾನಿ…

*
ಮನೆಯ ಸುತ್ತಮುತ್ತಲೆಲ್ಲ ಅಷ್ಟೆಲ್ಲಾ ರಾಶಿ‌ರಾಶಿ ಹೂಗಳಿವೆ.ಇದೇನು ಹುಚ್ಚು ಮನೆಯೊಳಗೂ ಕಾಡು..ಹಳ್ಳಿ ಮನೆಯಲ್ಲಿ ಎಲ್ಲರ ಉದ್ಗಾರ..! ಇದೆಂಥ ಹೂವು ನಿನಗೆ ಸಿಕ್ಕಿದ್ದು ನಾವು ಗಮನಿಸಿರಲೇ ಇಲ್ಲವಲ್ಲ, ಇಲ್ಲೇ ಹುಟ್ಟಿ ಬೆಳೆದವರೂ ಕೂಡ..!

ಫೋಟೋ ಕೃಪೆ : google

ಆಂತೋರಿಯಂದೇ ಕಾರುಬಾರು ಹೂ ಕುಂಡಗಳಲ್ಲಿ! ಬಹುದಿನ‌ ಬಾಡದೆ ಗಿಡದಲ್ಲಿ ಹಾಗೆಯೇ ಇರುತ್ತದೆಂಬ ಕಾರಣಕ್ಕೆ ಇಲ್ಲಿ ಎಲ್ಲರಿಗೂ ಅದರ ಮೇಲೆಯೇ ಒಲವು.ವಾಣಿಜ್ಯ ಉದ್ದೇಶವೂ ಇದೆ.ಸಮಾರಂಭಗಳಲ್ಲಿ ಅಲಂಕಾರಕ್ಕೂ ಇದರದ್ದೇ ಕೇಂದ್ರ ಆಕರ್ಷಣೆ.ಆದರೆ ತಾನು ಉದ್ದೇಶಪೂರ್ವಕವಾಗಿ ಅದರಿಂದ ಅಲಂಕಾರ ಮಾಡುವುದನ್ನು ನಿರಾಕರಿಸಿದ್ದೆ.ಗದ್ದೆ ಬದಿಯಲ್ಲಿ ಬೆಳೆಯುವ ಎಷ್ಟು ವಿನ್ಯಾಸದ ಎಲೆಗಳಿವೆಯೋ ಅವುಗಳದೇ ಚಿತ್ತಾರ.ಚರ್ಮೆ ಗಿಡ ಕೂಡ ಕಲಾತ್ಮಕ ಅಲಂಕಾರಕ್ಕೆ ಎಷ್ಟೊಂದು ಕಳೆಕೊಡುತ್ತದೆ.

ತೆಂಗು ಅಡಿಕೆ ಬಾಳೆ ಎಲೆಗಳೂ ಸರಿಯಾದ ರೀತಿಯಲ್ಲಿ ಬಳಸಿದರೆ ಅದ್ಭುತ ಕಲ್ಪನೆಯ ಜಾಲವನ್ನು ಹೆಣೆದು ಬಿಡುತ್ತವೆ.ಅವುಗಳ ನಡುವೆ ಈ ಪುಟ್ಟ ನಕ್ಷತ್ರ ಹೂಗೊಂಚಲನ್ನು ತೂಗಾಡಿಸಿಬಿಟ್ಟರೆ ಅಲ್ಲಿ ನಿರ್ಮಾಣವಾಗುವ ವಾತಾವರಣವೇ ದೈವಿಕ. ನಸುಗಂಧ ಬೀರುತ್ತಾ ಆಹ್ಲಾದಕರವಾದ ನೈಸರ್ಗಿಕ ಅತ್ತರು ಅಲ್ಲೇ ಹರಿದಾಡುತ್ತಿರುತ್ತದೆ.

*
ಬೊಗಸೆ ತುಂಬಾ ನಕ್ಷತ್ರ ಹೂಗಳನ್ನು ತಂದು ಕುಂಡದಲ್ಲಿ ಅಲಂಕರಿಸಿದ್ದೆ. ತನ್ನ ಸಾಹಿತ್ಯಲೋಕಕ್ಕೆ ಹೊಸತೊಂದು ಬೆಡಗಿನ ಸ್ಪರ್ಶವಾಗತೊಡಗಿತು.ತನ್ನ ಎಲ್ಲ ಬರವಣಿಗೆಯೂ ಅವಳ ಸನ್ನಿಧಿಯಲ್ಲೇ…!

*
ಕಾಫಿ ತೋಟವೆಲ್ಲ ಗಂಧಮಯವಾಗುತ್ತದೆ ಅದರ ಮಧುರ ಕಂಪಿನ ಹೂಗಳು‌ ಬಿಟ್ಟಾಗ ಮಾರ್ಚಿ ತಿಂಗಳ ಮೊದಲ ಮಳೆಗೆ ! ದೇವತೆಗಳು‌ ನಲಿಯುತ್ತಾರಂತೆ ಅಂದು ಈ ಹೂವಿನ ಲೋಕದಲ್ಲಿ ವಿಹರಿಸುತ್ತಾ…. ಯಾರೂ ಹೋಗಬೇಡಿ ಒಂಟಿಯಾಗಿ..ತಲೆತಿರುಗಿ ಬೀಳುತ್ತಾರಂತೆ… ಹಿರಿಯರ ಎಚ್ಚರಿಕೆಯ ಮಾತು ಹಿಂಬಾಲಿಸುತ್ತಾರೆ ಇದ್ದರೂ…ಮೊಬೈಲ್‌ ಕ್ಯಾಮೆರಾ ಕಣ್ಣನ್ನು ತೆರೆದು ತೋಟದೊಳಗೆ‌ ನುಗ್ಗಿದವಳಿಗೆ ಆ ಗಂಧರ್ವ ಲೋಕವನ್ನು ಕಣ್ತುಂಬಿಸಿಕೊಂಡು ಸೆರೆಯಾಗಿಸುವ ಕೆಲಸವನ್ನು ಎಲ್ಲಿಂದ ಪ್ರಾರಂಭಿಸಲಿ ಎಂಬ ಚಿಂತೆ.

*
ನಿತ್ಯದ ನಡಿಗೆಗಾಗಿ ಹೊರಟವಳಿಗೆ ಬೆಳ್ಳಂಬೆಳಗೆಯೇ ಎದುರಾದ ಮದುವೆ ಮನೆಯ ಸಂಭ್ರಮ. ಪ್ರತಿ ಗಿಡದ ಸುತ್ತಲೂ ಅಷ್ಟು ಸಂಖ್ಯೆಯ ಜೇನ್ನೊಣಗಳು ! ಎಲ್ಲಿದ್ದುವೋ ಇಷ್ಟು ದಿನ! ಈಗ ತೋಟ ಎಲ್ಲ ಮತ್ತ ಮಧುಕರಿಗಳ ಸ್ವರ್ಗ ! ಬಿಡುವಿಲ್ಲದೆ ಝೇಂಕಾರದೊಂದಿಗೆ ಹಾರಾಟ ಹೀರುವಾಟ..ತೂರಾಟ.. ಹೂಗಳ ಸುತ್ತಲೇ ನರ್ತನದಾಟ….ನಾವು ಅಲ್ಲಿದ್ದರೂ ನಮ್ಮ ಅಸ್ತಿತ್ವದ ಗೊಡವೆಯೇ ಇಲ್ಲ ಅವುಗಳಿಗೆ! ಇನ್ನು ಕಚ್ಚುವ ಮಾತೆಲ್ಲಿ ಬಂತು?

*
ಯಾರೋ ಹೂಗಾರ ಇಂದ್ರನ ನಂದನದಿಂದ ರಾಶಿರಾಶಿ ಗೌರವರ್ಣದ ಈ ಗೊಂಚಲು ಹೂಗಳನ್ನು ತಂದಿರಬಹುದೆ. ಬಹುಶ: ದೇವಲೋಕದಲ್ಲಿ ಯಾರದೋ ಸ್ವಯಂವರಕ್ಕಾಗಿ ಸಿದ್ಧತೆ ನಡೆದಿರಬಹುದೇನೋ ಯಾವ ಯಾವ ವಿನ್ಯಾಸವೋ ಬಣ್ಣಿಸಲು ಪದಗಳೇ ಸಿಗುತ್ತಿಲ್ಲ..! ಶ್ಯಾಮಲ ಸುಂದರ ಪರ್ಣಗಳ ದುಕೂಲದಲಿ ರೂಪಾಂತಿದೆ ಹೂವಿನಲಂಕಾರ!
ಮೊಗ್ಗಿನ ಅಲಂಕಾರದ ಜಡೆಗಳ..ಮುತ್ತಿನೊಡವೆಗಳ ವಿಶಿಷ್ಟ‌ಲೋಕ.

ಫೋಟೋ ಕೃಪೆ : google

ಮೊಗತೋರಬಾರದೇ ಈ ಅನುಪಮ ಚೆಲುವೆಯರು…? ಅಲ್ಲೆ ಬಗ್ಗಿ ಬಗ್ಗಿ ಹುಡುಕಲಾರಂಭಿಸಿದೆ..,ಆಹಾ..ತಲೆಯೆತ್ತಿದೆ..! ಆಗ ಕಂಡ ಸೌಂದರ್ಯರಾಶಿಯೋ… ಆ ವಜ್ರಕಾಂತ ಸೂರ್ಯ..ತನ್ನ ಸಹಸ್ರಾಂಶುಗಳ ತೂರಿ…ಎಲೆಗಳ ನಡುವೆ..ಬೆಳಕಿನ ಹಂದರ ನಿರ್ಮಿಸಿದ್ದಾನೆ. ಪತ್ರಪತ್ರದ ಅಂಚೂ ಜರತಾರಿಯಾಗಿದೆ.

ಶ್ವೇತ ಹೂರಾಶಿಯ ಮಂಟಪ ಬೆಳಕಿನಿಂದ ಪ್ರಜ್ವಲಿಸುತ್ತಿದೆ. ಯಾರಾದರೂ ಊಹಿಸಲು ಸಾಧ್ಯವೇ… ಈ ವಿನ್ಯಾಸದ ಕಲಾತ್ಮಕತೆಯನ್ನು? ದೇವತೆಗಳೇ ಈ ಹೂವಿನ ನಂದನದಲ್ಲಿ ವಿಹರಿಸಲು ಬರುತ್ತಾರೆಂದರೆ ಅದರ ವೈಭವ ಇನ್ನು ಹೇಗಿರಬೇಡ? ಅತ್ತರಿನ ಗಂಧ ಅಲ್ಲಿ ಎಂಥ ಮಾದಕತೆಯನ್ನು ತುಂಬಿದೆಯೆಂದು ಬೇರೆ ಹೇಳಬೇಕೆ? ಆ ಪರಿಸರವೇ ಅಲ್ಲಿ ನಡೆಯುವ ಮಂಗಳ ಕಾರ್ಯದ ಮುನ್ಸೂಚನೆ ಯಂತಿದೆ!

ಆದರೆ ಇದರ ಈ ಎಲ್ಲ ಸ್ವರ್ಗೀಯ ವೈಭವ ಕೇವಲ ಮೂರು ದಿನಗಳಿಗಷ್ಟೇ ಸೀಮಿತ.ಮತ್ತೆಲ್ಲಾ.ಶ್ಮಶಾನ ಮೌನ….!

*
ತಾನು ಎಂದಿಗೂ ಈ ಕ್ಷಣಿಕ ಆಡಂಬರದ ಹಿಂದೆ ಹೋದವಳಲ್ಲ.ಅದನ್ನು ವಿಜ್ರಂಭಿಸುವ ಮನೋಭಾವದವಳೂ ಅಲ್ಲ..! ಆಸ್ವಾದಿಸುತ್ತೇನೆ ಅಯಾಚಿತವಾಗಿ ಒದಗಿದ ಈ ದೈವದತ್ತ ಸೌಭಾಗ್ಯವನ್ನು ನಿರ್ಲಿಪ್ತವಾಗಿ ಅಷ್ಟೆ. ನಿತ್ಯ ಅರ್ಚನೆಗೆ ಒದಗದ ಈ ರಾಶಿ ರಾಶಿ ಜೀವನ ಪ್ರೀತಿ ,ಪ್ರವಾಹೋಪೇತವಾಗಿ ಆಗಮಿಸಿ ಮತ್ತೇರಿಸಿ ಮತ್ತೆ ಏನೂ ಸಂಬಂಧವಿಲ್ಲದವರಂತೆ
ಧಾವಿಸಿ ತೆರಳಿಬಿಡುವ‌ ಅನೂಹ್ಯ ವಾಗಿ ಆಗಮಿಸಿ ಅವಸರದಲ್ಲಿ ಎಲ್ಲಾ ಬಂಧನಗಳನ್ನು ನಿಷ್ಠುರವಾಗಿ ಕಳಚಿ ತೆರಳಿಬಿಡುವ ಅತಿಥಿಯಂತೆಯೇ ನನಸೆನಿಸುವ ಕನಸು!

ಯಾವ ಭಾವನೆಗಳಲ್ಲೂ ಪಾಲ್ಗೊಳ್ಳದ ಬಿಸಿಲ್ಗುದುರೆಯಂತೆ.ತನಗೆ ಇಂತಹುದರಲ್ಲಿ ಸಂಬಂಧದ ನವಿರಿನ ಸೋಂಕು ಪುಳಕ ತರುವುದಿಲ್ಲ. ಆದುದರಿಂದ ತನ್ನ ಜಗತ್ತು ತನ್ನ ಪುಟ್ಟ ಕೈತೋಟದ ಜಗತ್ತಿನಲ್ಲಿ ಅರಳಿ ತಿಂಗಳುಗಟ್ಟಲೆ ತನ್ನನ್ನೂ ದೇವರನ್ನೂ ಮುದಗೊಳಿಸುವ ಮಲ್ಲಿಗೆಯ ವಿವಿಧ ಬಗೆಯ ಹೂಗಳು.ಸಂಪಗೆ,ಪಾರಿಜಾತ,ರಾತ್ರಿರಾಣಿ, ಶ್ರೀಗಂಧದ ಅಪರೂಪ ಕುಸುಮ,ಜಾಜಿ, ನಂದಿಬಟ್ಟಲು,ನರುಗಂಪಿನ ಗುಲಾಬಿ,ಸುಗಂಧರಾಜ…ಮತ್ತೆ ನನ್ನ ಪ್ರೀತಿಯ ನುಚ್ಚು ಮಲ್ಲಿಗೆ..!

*
ಅದೊಂದು ದಿನ ಅಪರೂಪದ ಅತಿಥಿ, ಪ್ರಕೃತಿ ಆರಾಧಕ ,ಪುಸ್ತಕ ಪ್ರೇಮಿ ಆತ್ಮೀಯ ಬಂಧುಗಳೊಬ್ಬರ ಆಗಮನ. ಒಳಗೆ ಕಾಲಿರಿಸುತ್ತಿದ್ದಂತೆ ಇದೆಂತಹ ಪರಿಮಳ ಬಹಳ ಅಪರೂಪವಾಗಿದೆಯಲ್ಲ ಎಂದು ಸುತ್ತಮುತ್ತ ಅರಸಿದರು.ಸ್ವಲ್ಪ ಮರೆಯಲ್ಲಿ‌ ಹೂಕುಂಡದಲ್ಲಿದ್ದ ಈ ಸಾಧಾರಣ ರೂಪವಂತೆಯರು ಅವರ ಕಣ್ಣಿಗೆ ಬಿದ್ದ ಕೂಡಲೇ ಅದನ್ನು ಆಘ್ರಾಣಿಸಿದರು.ಮತ್ತೆ ಅದರ ಲಭ್ಯತೆಯ ಬಗ್ಗೆ ಮಾಹಿತಿ ಬಯಸಿದಾಗ.. ಅವರ ಸ್ಥಳದಲ್ಲಿ ಲಭ್ಯವಿಲ್ಲದಿದ್ದ ಅದನ್ನು ತಮ್ಮ ಹೂತೋಟದಲ್ಲಿ ನೆಟ್ಟು ಬೆಳೆಸುವ ಇರಾದೆ ಅವರದಾಗಿತ್ತು. ನಮ್ಮ ಕೆಲಸದ ಹುಡುಗನ ಬಳಿ ಹೇಳಿ ತರಿಸಿಕೊಟ್ಟಿದ್ದೆ.

ಅಲ್ಲಿಗೆ ಆ ವಿಚಾರ ಮರೆತೇ ಹೋಯಿತಾದರೂ ನನ್ನ ಪರಿಮಳದ ಜಗತ್ತು ವಿಕಸಿಸುತ್ತಲೇ ಹೋಯಿತು.

*
ಒಂದು ವರುಷಕ್ಕಿಂತಲೂ ಹೆಚ್ಚು ಅವಧಿ ಕಳೆದಿರಬಹುದು. ಅವರ ಪರಿಸರದಲ್ಲಿ ಗಂಧ ಪಸರಿಸುವ ಈ ಗಂಧಿನಿ ತನ್ನ ಇರುಳಿಗೆ ಕಂಪಿನತ್ತರವ ಪಸರಿಸುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಸರದಿ ಅವರದಾಗಿತ್ತು. ಅವರ ಮನೆಗೆ ಭೇಟಿಯಿತ್ತ ಸಮಯದಲ್ಲಿ ಅವರು ಅವಳನ್ನು ಪರಿಚಯಿಸಿದಾಗ ಧನ್ಯತೆಯಿಂದ ಹೃದಯ‌ತುಂಬಿ ಬಂತು.

ಕೂಡಲೇ ಏನೋ ನೆನಪಾದವಳಂತೆ ಹಿತ್ತಲಿಗೆ ಧಾವಿಸಿದೆ ತಾನು..ಅದಕ್ಕಿಂತ ಆರು ತಿಂಗಳು ಮೊದಲೇ ತಾನು ತನ್ನ‌ ಗಂಧಿನಿಯನ್ನು ಶಾಶ್ವತ ‌ಸಾಂಗತ್ಯಕ್ಕಾಗಿ ಮನೆಯ ಆವರಣದಲ್ಲಿಯೇ ಪ್ರತಿಷ್ಠಾಪಿಸಿದ್ದೆ. ಅವಸರದಿಂದ ಧಾವಿಸಿ ನೋಡುತ್ತೇನೆ ಮೊನ್ನೆ ತಾನೇ ಸರ್ವಾಭರಣಭೂಷಿತೆ ಯಾಗಿ ಅತ್ತರಿನ ಕರಂಡಕದಂತಿದ್ದ ಆ ಗಿಡ ಕಪಾತಿನ ಕತ್ತಿಗೆ ಕಾಡು ಗಿಡದಂತೆ ಕಂಡು ತನ್ನ ಟೊಂಕದವರೆಗೂ ಕತ್ತರಿಸಿಕೊಂಡು ನನ್ನತ್ತಲೇ ಕರುಣಾಮಯ ದೃಷ್ಟಿಯಿಂದ ನೋಡುತ್ತಿತ್ತು.ಕಾಫಿ ಗಿಡಕ್ಕೆ ನೆರಳು ಜಾಸ್ತಿ ಬೀಳುತ್ತದೆಂದು ತೋಟದ ಕೆಲಸದವನು ಅದನ್ನು ಕತ್ತಿಯ ಬಾಯಿಗೆ ಆಹಾರವಾಗಿಸಿದ್ದ.

ಮೌನವಾಗಿ ಬಿಕ್ಕಳಿಸುವುದನ್ನು ಬಿಟ್ಟರೆ ಬೇರೆ ಯಾವ ದಾರಿಯೂ‌ ಇಲ್ಲದಂತಾಗಿತ್ತು. ತನಗೇನೋ ಭಾವಲೋಕವನ್ನು ಬೆಳಗುತ್ತಿದ್ದ ಆ ಬೆಡಗಿ ಅವನಿಗೋ ಪ್ರಯೋಜನವಿಲ್ಲದ ಕಳೆಗಿಡದಂತೆ ಕಂಡಿದ್ದಳು. ವಾಣಿಜ್ಯದ ಉದ್ದೇಶದ ಎದುರು ಭಾವನಾತ್ಮಕ ಬೆಸುಗೆಯ ಪಾವಿತ್ರ್ಯವನ್ನು ಯಾರೂ ಹಿರಿದಾಗಿ ಪರಿಗಣಿಸದೆ ಇದ್ದುದು ತನ್ನ ಕೋಮಲ ಹೃದಯವನ್ನು ಘಾಸಿಗೊಳಿಸಿದ್ದಂತೂ ಸುಳ್ಳಲ್ಲ.

*
ಸಂವೇದನಾಶೀಲತೆ ಸಾಹಿತಿಯ ಮನೋಧರ್ಮ.ಅದು ಜಗತ್ತಿನ ಎಲ್ಲ ಸೌಂದರ್ಯವನ್ನೂ ಆಸ್ವಾದಿಸುತ್ತದೆ.ಆರಾಧಿಸುತ್ತದೆ. ಅಣುವಿನಲ್ಲಿಯೂ ಮಹತ್ತನ್ನೇ ಅನ್ವೇಷಿಸುತ್ತದೆ.ಪ್ರತಿ ವಿದ್ಯಮಾನಕ್ಕೂ ಬೆರಗನ್ನು ಲೇಪಿಸಿ ಅಪರೂಪದ ಶ್ರದ್ಧೆಯಿಂದ ಪರಿಗಣಿಸುತ್ತದೆ.ಅದೇ ನಿಜವಾದ ಜೀವನ ಧರ್ಮ!

ಏಕೆಂದರೆ…ಒಂದು ಹೂವು..ಅದು ಸುತ್ತುವರಿದ ‌ಕೀಟ ಹಕ್ಕಿಗಳ ಪ್ರಪಂಚ,ಅದರ ಪ್ರಫುಲ್ಲತೆ ವಾತಾವರಣಕ್ಕೆ ನೀಡುವ ಬೆಡಗಿಗೆ ತಾನು ಸದಾ ತೆರೆದ ಕಣ್ಣಾಗುತ್ತೇನೆ. ನಿತ್ಯ ಮಗುತನದ ಬೆರಗು ತನ್ನ ಪ್ರಪಂಚವನ್ನು ಕೋಮಲಗೊಳಿಸಿದೆ.

ಇದು ಹೀಗೇ ಇರಬೇಕು.ಇಲ್ಲವಾದರೆ ಇಲ್ಲಿ ಏನಿದೆ…?

ಫೋಟೋ ಕೃಪೆ : google

ಸಂಜೆ ಕಾಫಿಯ ತಯಾರಿಯಲ್ಲಿದ್ದ ತನ್ನ ಕಿವಿಗೆ ಆಗ ತಾನೆ ಶಾಲೆಯಿಂದ ಹಿಂತಿರುಗಿದ ಮಗ ಧನುಷ್ ನ ಕರೆ ಹೊರಕ್ಕೆ ಕರೆಯಿತು. ಅಮ್ಮಾ…ನೋಡಮ್ಮಾ…ಇಲ್ಲಿ ನಿನ್ನ ಹೂವಿನ ಗಿಡದ ಕೊಂಬೆಯನ್ನು ಕಟ್ಟಿದ್ದ ಹಕ್ಕಿಗೂಡು ಹೇಗೆ ಕೊಂಬೆ ಸಹಿತ ನೆಲಕ್ಕೆ ಬಿದ್ದಿದೆ ! ಇದ್ದೂ ನಾಲ್ಕು ಮೊಟ್ಟೆಗಳು ಒಡೆದು ಹೋಗಿವೆ ಅಮ್ಮಾ..ಎಂದಾಗ ಎದೆ ಧಸಕ್ಕೆಂದಿತು.ತಾನು ಪ್ರತಿದಿನ ತನ್ನ ಕೋಣೆಯ ಕಿಟಕಿ ತೆರೆದು ಅವುಗಳ ವಿಹಾರ ಗಾದೆಯನ್ನು ಆಲಿಸುತ್ತಿದ್ದರು.ಮಗನಿಗೆ ಪಾಠ ಹೇಳಿಕೊಡುತ್ತಾ ಅವುಗಳ ಪ್ರಪಂಚದ ಒಟ್ಟು ಹಾಕುವ ಹವ್ಯಾಸವನ್ನು ಬೆಳೆಸಿದ್ದೆ.ಅವನೂ ಅವುಗಳ ಗೂಡಿನಲ್ಲಿ ನಡೆಯುತ್ತಿದ್ದ ಸಂವಾದಗಳಿಗೆ ಕಿವಿಗೊಡುತ್ತಿದ್ದ. ಈಗ..ಇನ್ನೂ ಹಕ್ಕಿಗಳು ತಮ್ಮ ಗೂಡಿಗೆ ಹಿಂತಿರುಗುವ ಈ ಇಳಿಸಂಜೆಯಲ್ಲಿ ಅವುಗಳ ಆಕ್ರಂದನಕ್ಕೆ ಕಿವಿಗೊಡುವ ಸನ್ನಿವೇಶ ಎದುರಾಗಿದೆಯಲ್ಲ.

ಹೇಗೆ ಸಂತೈಸಬಲ್ಲೆ ಅವುಗಳ ಭಗ್ನಗೊಂಡ ಕನಸುಗಳಿಗೆ ಮುಲಾಮು ಹಾಕಿ…ವಿಷಾದ ಮತ್ತೆ ಮಡುಗಟ್ಟಿತು… ಪ್ರೀತಿಯ ಬಂಧ ಇರುವಲ್ಲಿ ಇಂತಹ ನೋವು ಹತಾಶೆಗಳ ಪ್ರಖರತೆ ಸದಾ ಉತ್ಕಟವಾಗಿರುತ್ತದಲ್ಲವೆ..ಸಂವೇದನಾಶೀಲತೆ ಹೀಗೆ ಶಾಪವಾಗಬಹುದೆ…?
*
ಅಂದು ಸಂಜೆ ತಾನು ಮುಚ್ಚಿದ ಆ ಕಿಟಕಿಯ ಬಾಗಿಲನ್ನು ಸದ್ಯ ತೆರೆಯುವ ಉತ್ಸಾಹ ತನ್ನಲ್ಲಿಲ್ಲ. ದುರಂತದ ಕಟುವಾಸ್ತವಕ್ಕೆ ಸಾಕ್ಷೀ ಭೂತವಾಗಿರುವ ನನ್ನ ನಕ್ಷತ್ರಗುವರಿ ಮತ್ತೆ ಪುಷ್ಪಿತಳಾಗುವವರೆಗೆ… ತಾನು ಅವಳನ್ನು ಸಮೀಪಿಸುವುದಿಲ್ಲವೆಂದು ತನಗೆ ನಾನೇ ದಿಗ್ಬಂಧನ ವಿಧಿಸಿಕೊಂಡಿದ್ದೇನೆ. ದೀರ್ಘವಾದ ನಿಟ್ಟುಸಿರ ಒಂದನ್ನು ಹೊರಹಾಕಿದಳು ಉಮೆ..ಇಲ್ಲಿ ವೇದನೆ ಮಾತ್ರ ನಿರಂತರ…ಎಂದುಕೊಳ್ಳುತ್ತಾ..!

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  • ಶಿವದೇವಿ ಅವನೀಶಚಂದ್ರ, ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW