ಹೂಲಿ ಶೇಖರ್ ಅವರು ನಾಡಿನ ಹೆಮ್ಮೆಯಾಗಿರುವ ನಾಟಕಕಾರರು.ಕಥೆ, ಕಾದಂಬರಿ, ಧಾರಾವಾಹಿ ಕಥರಚನೆ ,ಸಂಭಾಷಣೆ ರಚನೆ ಹೀಗೆ ಹತ್ತಾರು ಕಾರ್ಯಗಳಲ್ಲಿ ತೊಡಗಿದ್ದರೂ ಪ್ರಧಾನವಾಗಿ ಗುರುತಿಸಿಕೊಂಡಿರುವದು ನಾಟಕಕಾರರೆಂದೇ. ೪೦ ಕ್ಕೂ ಅಧಿಕ ನಾಟಕಗಳನ್ನು ಬರೆದಿರುವ ಅವರು ಉತ್ತರ ಕರರ್ನಾಟಕದ ಭಾಷಾ ಬನಿಯನ್ನು ಬೆಂಗಳೂರಿನ ಧಾರಾವಾಹಿ ಪ್ರಪಂಚದಲ್ಲಿ ಉಳಿಸಿದವರೂ ಹೌದು.
“ಕರಿಯು ಕನ್ನಡಿಯೊಳಗೆ ” ಪ್ರಸಿದ್ಧ ನಾಟಕಕಾರ ಶ್ರೀ ಶೇಖರ್ ಹೂಲಿಯವರು ರಚಿಸಿದ ಹೊಸ ನಾಟಕ.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ. ಆಲಮೇಲದ ಬೆರಗು ಪ್ರಕಾಶನ (೨೦೨೧) ಇದನ್ನು ಪ್ರಕಟಿಸಿದೆ.
೧೭ ದೃಶ್ಯಗಳಾಗಿರುವ ನಾಟಕ ಇತಿಹಾಸ ವರ್ತಮಾನ ವೆರಡನ್ನು ಮುಖಾಮುಖಿಯಾಗಿಸುವ ಯತ್ನ ಮಾಡಿದೆ. ಆರಂಭದ ದೃಶ್ಯವನ್ನು ಬಸವಪೂರ್ವದ ಅರಿಕೇಸರಿ ರಾಜನ ಕಾಲದ ಸಮಾಜ ಹೇಗೆ ಜನವಿರೋಧಯಾಗಿತ್ತು , ಜನ ಹೇಗೆ ಹಿಂಸೆಗೊಳಗಾಗುತ್ತಿದ್ದರು ಎಂಬುದನ್ನು ಚಿತ್ರಿಸುತ್ತಾರೆ. ಇದೆಲ್ಲಕ್ಕೂ ಪರಿಹಾರ ಒದಗಿಸಲೆಂದೆ ಬಸವ ಉದಯ ವಾದುದನ್ನು ಸೂಕ್ಷ್ಮವಾಗಿ ಹೇಳುತ್ತಾರೆ.
೨೧ನೆಯ ಶತಮಾನದ ಡಾ.ಕಲಬುರ್ಗಿ ೧೨ ನೆಯ ಶತಮಾನದ ಶರಣರನ್ನು ಮಾತನಾಡಿಸುತ್ತ ಹೋಗುವ ಹೊಸ ತಂತ್ರದ ಮೂಲಕ ನಾಟಕ ಬೆಳೆಯುತ್ತದೆ.ಇತಿಹಾಸದ ನಡೆಯನ್ನು ವರ್ತಮಾನದೊಂದಿಗೆ ಬೆಸೆಯುತ್ತದೆ.ಹನುಮ್ಯಾ ಎಂಬ ಪಾತ್ರ ಹಾಸ್ಯದ ಮೂಲಕವೇ ಕಲಬುರ್ಗಿಯವರನ್ನು ಚುಚ್ಚುತ್ತ ಅವರಿಂದ ಸತ್ಯ ಹೊರಡಿಸುತ್ತದೆ.
ಹತ್ತನೆಯ ದೃಶ್ಯದ ಹೊತ್ತಿಗೆ ಶರಣರೆಲ್ಲ ಜನರ ಮದ್ಯದಿಂದ ಎದ್ದು ರಂಗಕ್ಕೆ ಬರುತ್ತಾರೆ.ಅವರು ಯಾರು ಎಂಬ ಪ್ರಶ್ನೆಗೆ
ಶರಣರೋ ಇವರು ಸಾತ್ವಿಕ ಧೀರರು
ಕತ್ತಲೆಯ ದಾರಿಗೆ ದೀವಟಿಗೆ ಹಿಡಿದವರು
ಅಜ್ಞಾನದ ಅಂಧಕಾರಕೆ ದೀಪ ಹ್ವಚ್ಚಿದವರು
ಸಮಾನತೆಯ ಐಕ್ಯ ಮಂತ್ರ ಸಾರಿದವರು
ಎಂದು ಉತ್ತರ ಕೊಟ್ಟಿರುವದು ಶರಣರ ಮಣಿಹದ ಉದ್ದೇಶವನ್ಜು ಸೂಚಿಸುತ್ತದೆ ಮುಂದಿನ ಕಥೆಯನ್ನು ಶರಣರ ಪಾತ್ರಗಳೇ ಮಾತನಾಡುತ್ತವೆ.ಅಲ್ಲಿ ವರ್ತಮಾನ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.ಶರಣರೆತ್ತುವ ಪ್ರಶ್ನೆಗಳು ವಾಸ್ತವವಾಗಿ ಕಲಬುರ್ಗಿಯವರೆತ್ತಿದ ಪ್ರಶ್ನೆಗಳಾಗಿದ್ದವು.ಇಪ್ಪತ್ತೊಂದನೆಯ ಶತಮಾನದಲ್ಲಿ ಬಸವಾದಿ ಪ್ರಮಥರನ್ನು ದೇವರ ಪದವಿಗೇರಿಸಿದ್ದು ದೊಡ್ಡ ತಪ್ಪು ಎನ್ನುತ್ತಾರೆ. ಅವರೆಲ್ಲ ಶರಣರನ್ನು ಇಂದಿನ ಮಠೀಯ ವ್ಯವ್ವಸ್ಥೆಗೆ ಸೇರಿಸಿದ ಗುಂಪಿಗೆ, ಶರಣ ಧರ್ಮವನ್ನು ಜಾತಿಯಾಗಿಸಿದ ಗುಂಪಿಗೆ, ತಮ್ಮ ಧರ್ಮದ ಹತ್ತಿರ ಯಾರೂ ಬಾರದಂತೆ ಒಂದು ವ್ಯವಸ್ಥೆಯಾಗಿಸಿದ ಗುಂಪಿಗೆ ಪ್ರಶ್ನೆಯೊಡ್ಡುತ್ತಾರೆ.
” ನಾವು ಷಟ್ಸ್ಥಲಗಳ ಸ್ವರೂಪವನ್ನು ಹೇಳಿದ್ದು ಜಗತ್ತಿನ ಮನುಷ್ಯರಿಗಾಗಿ, ಆದರೆ ನೀವು ನಿನ್ಮ ದೇವರ ಕೋಣೆಯಲ್ಲಿ ಬಂಧಿಸಿ ಪೂಜಾ ಮಾಡಲು ಇಟ್ಟಿರಿ”
“ಕೆಂಪು ಬಟ್ಟೆಯಲ್ಲಿ ಸುತ್ತಿದ ಇಷ್ಟಲಿಂಗ ವನ್ನು ಬೆಳ್ಳಿ ಬಂಗಾರಗ಼ಲ ಕರಡಿಗೆಯೊಳಗಿಟ್ಟು ಇವ ನಮ್ಮವ ಎಂಬುದರ ಅರ್ಥವನ್ನು ಕಳೆದು ಬಿಟ್ಟಿರಿ”
ಎಂಬ ಸವಾಲು ಒಡ್ಡುತ್ತಾರೆ. ಕೊನೆಗೆ ಶರಣರು ಈ ಜನಕ್ಕೆ “ನಮ್ಮ ವಚನ ನೀವು ಹೀಗೆ ಬಳಸೋದೆ ಬೇಡ ನಮಗ ತಿರುಗಿಕೊಟ್ಟ ಬಿಡ್ರಿ” ಎಂದು ಕೇಳುವದಂತೂ ಪರಮ ವ್ಯಂಗ್ಯವಾಗಿದೆ. ನಮ್ಮ ವರ್ತಮಾನದ ಬದುಕನ್ನುಕಂಡು ಶರಣರೆಷ್ಟು ನೊಂದಿರಬಹುದು ಎಂಬುದರ ಸೂಚನೆಯಾಗಿದೆ.

ರಂಗದ ಮೇಲೆ ಬಂದ ಶರಣರ ಪಾತ್ರಗಳು ” ಹೊಸ ಸಮಾಜ ಕಟ್ಟಬೇಕೆಂದು ,ಹೊಸ ಧರ್ಮ ಹುಟ್ಟು ಹಾಕಬೇಕೆಂದು ಎಲ್ಲರಿಗೂ ಗೌರವದಿಂದ ಬದುಕಬೇಕೆಂದು, ಸ್ತ್ರೀಯರಿಗೆ ಸಮಾನ ಹಕ್ಕು ಕೊಡಬೇಕೆಂದು ಪ್ರಯತ್ನಿಸಿದ್ದೇವು …ಆದರ ಅವರು ನಮ್ಮನ್ನ ಸಾವಿನ ಮನೆಗೆ ಕಳುಹಿಸಿಯೇ ಬಿಟ್ಟರು” ಎಂದು ಗೋಳಿಡುತ್ತವೆ. ಅಷ್ಟೇ ಅಲ್ಲ, ” ಅಂದು ಅವರು ಕೊಂದರು, ಇಂದು ಇವರು ಕೊಂದರು ,ನಮ್ಮನ್ನು ಬಿಡುಗಡೆಗೊಳಿಸಿ” ಎಂದು ಅಂಗಲಾಚುತ್ತವೆ. “ಎಂಟನೆಯ ಶತಮಾನಗ಼ಳಿಂದ ಅತಂತ್ರವಾಗಿ ಕಾಯುತ್ತಿದ್ದೇವೆ ನಮಗ ನ್ಯಾಯ ಕೊಡಿಸಿ” ಎಂದು ಬೇಡಿಕೊಳ್ಳುತ್ತವೆ.
“ಇತಿಹಾಸ ಸಂಶೋಧಕರಾದ ನೀವೇ ಅವಕ್ಕ ಸರಿಯಾದ ಹಾದಿ ತೋರಿಸಿರಿ “ಎಂದು ಹನುಮ್ಯಾನ ಮೂಲಕ ಅಹವಾಲು ಬ಼ಂದಾಗ ಮುಂದಿನ ದೃಶ್ಯಗಳಲ್ಲಿ ಶರಣರನ್ನು ,ಬಿಜ್ಜಳನನ್ನು ಅವನ ಮಗ ಸೋಯಿದೇವ ಮಂಚಣ್ಣ ಕಸಪಯ್ಯ ಎಲ್ಲರನ್ನು ನ್ಯಾಯಾಲಯದಲ್ಲಿ ಸೇರಿಸುತ್ತಾರೆ.
. ತಮ್ಮಮುಕ್ತಿ ಕಾಣದೇ ಅಂತರ್ ಪಿಶಾಚಿಗಳಂತೆ ತಿರುಗುತ್ತಿದ್ದ ಶರಣರ ಆತ್ಮಗಳಿಗೆ ಮುಕ್ತಿ ಕೊಡಿಸಲೆಂದು ಡಾ.ಎಂ.ಎಂ.ಕಲಬುರ್ಗಿ ನ್ಯಾಯಾಧೀಶರಾಗುತ್ತಾರೆ, ಶರಣರನ್ನೂ , ಬಿಜ್ಜಳನನ್ನೂ, ಬಿಜ್ಜಳನ ಕೊಲೆ ಮಾಡಿಸಿದವರನ್ನೂ ಒಂದೇ ಕೋರ್ಟಿನಲ್ಲಿ ನಿಲ್ಲಿಸುತ್ತಾರೆ ಒಂಬತ್ತನೆಯ ಶತಮಾನದ ಶರಣರು ಸರಿಯಾದ ವಾದ ಮಾಡಿ ಬಿಜ್ಜಳನ ಕೊಲೆಗೆ ಶರಣರು ಕಾರಣರಲ್ಲ,ಅವನು ಮಾಡಿದ ಕುತಂತ್ರ ಅವನ ಬಲಿ ಪಡೆಯಿತು ಎಂಬುದನ್ನು ಸಾಕ್ಷಿ ಸಮೇತ ನುಡಿಯಿಸುತ್ತಾರೆ.
ಮಾಂಡಲೀಕನಾಗಿದ್ದ ಬಿಜ್ಜಳ ಚಾಲುಕ್ಯ ದೊರೆ ತೈಲಪರನ್ನು ಗೌಪ್ಯವಾಗಿ ಕೊಲೆಗೈದ.ಅವನ ರಾಣಿ ಮಗನನ್ನು ಜೈಲಿಗೆ ತಳ್ಳಿದ . ಅದು ರಾಜನಿಷ್ಠರಿಗೆ ಕೋಪ ತರಿಸಿತು.ತೈಲಪರಿಗೆ ನಿಷ್ಠರಾದ ಸೈನಿಕರ ಸಹಾಯ ಬಳಸಿಕೊಂಡು ಬಿಜ್ಜಳನ ರಾಜ್ಯವನ್ನು ಅಪಹರಿಸಬೇಕೆಂದು ಸ್ವತಃ ಬಿಜ್ಜಳನ ಮಗ ಸೋವಿದೇವ ನ ಮೂಲಕ ಕೊಂಡಿ ಮಂಚಣ್ಣ ಕಸಪಯ್ಯರು ಸೇರಿ ಬಿಜ್ಜಳನ ಕೊಲೆಯಾಗುವಂತೆ ಮಾಡಿದರು. ಆದರೆ ಅದು ಶರಣರ ಮೇಲೆ ವಿನಾಕಾರಣ ಬಂದು ಶರಣರೆಲ್ಲಾ ಕೊಲೆಯಾಗಿ ಎಂಟು ಶತಮಾನಗ಼ಳಿಂದ ಅಂತರ್ ಪಿಶಾಚಿಗಳ ತರ ಆಕಾಶದಲ್ಲಿ ತಿರುಗಾಡಲು ಹತ್ತಿದ್ದರು.ಅದಕ್ಕೆ ಇನ್ನೂ ಎರಡು ಕಾರಣಗಳಿದ್ದವು,ಅನೇಕ ಶರಣರು ನಡೆದ ದಂಗೆಯಲ್ಲಿ ತಮ್ನ ಜೀವ ಕಳಕೊಂಡರು,ಅವರ ಕಣ್ಮುಂದೆ ಧರ್ಮ ಶಾಸನಗಳಂತಿದ್ದ ವಚನದ ಕಟ್ಟು ಸುಟ್ಟವು ಈ ಘಟಣೆಗ಼ಳು ಅವರನ್ನು ಘಾಸಿಗೊಳಿಸಿ ಅತೃಪ್ತರನ್ನಾಗಿಸಿತು. ಸೋವಿದೇವರ ಮೂಲಕ ಅವರ ಬೆಂಬಲಿಗರಿಂದಲೇ ಬಿಜ್ಜಳನ ಹತ್ಯೆಯಾಗಿರಬೇಕೆಂಬ ಊಹೆಯನ್ನು, ಆದರೆ ಇತಿಹಾಸ ಇದರ ಮೇಲೆ ಹೆಚ್ಚಿನ ಅಭ್ಯಾಸ ,ಸಂಶೋಧನೆ ಮಾಡಿ ತೀರ್ಮಾನಕ್ಕೆ ಬರಬೇಕು.ಅಲ್ಲಿವರೆಗೂ ಸೋವಿದೇವರಿಗೆ ಕಸಪಯ್ಯ, ಮಂಚಣ್ಣರಿಗೆ ಸ್ವರ್ಗದೊಳಗೂ ಪ್ರವೇಶವಿಲ್ಲ ಅವರು ಅಂತರ್ ಪಿಶಾಚಿಗಳಂಗ ತಿರುಬೇಕು ಎಂಬ ತೀರ್ಮಾಣವನ್ನು ನ್ಯಾಯಪೀಠದ ಮೂಲಕ ಡಾ.ಕಲಬುರ್ಗಿ ಕೊಡುತ್ತಾರೆ. ಬಿಜ್ಜಳನ ಹತ್ಯೆಗೆ ಕಾರಣ ಶರಣರೆಂದು ತಪ್ಪು ತಿಳುವಳಿಕೆಯಿಂದ ನೂರಾರು ಶರಣರ ಹತ್ಯೆಯಾಗುತ್ತದೆ.ಹರಳಯ್ಯ ಮದುವರಸರಿಗೆ ಕೊಟ್ಟ ಎಳಹೂಟೆಯ ಶಿಕ್ಷೆ, ಕಣ್ಣುಕೀಳಿಸಿದ್ದು ತಪ್ಪುಎಂಬ ಸತ್ಯ ಬಿಜ್ಜಳನಿಗೆ ಅರಿವಿಗೆ ಬರುತ್ತದೆ. ಬಿಜ್ಜಳ ನಾಟಕದ ಕೊನೆಗೆ ತಾನು ಶರಣರನ್ನು ಕೊಲ್ಲಿಸಿದ್ದು,ವಚನಗಳನ್ನು ಸುಡಿಸಿದ್ದು ಎಲ್ಲ ತಪ್ಪು ಎಂದು ಶರಣರ ಮುಂದೆ ಬಸವಣ್ಣನವರ ಮುಂದೆ, ಕಲಬುರ್ಗಿಯವರ ಮುಂದೆ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುತ್ತಾನೆ ಇದು ಕಾವ್ಯಸತ್ಯ.ಆದರೆ ಶರಣರದಂತೂ ತಪ್ಪಿಲ್ಲ ಎಂಬದು ನ್ಯಾಯಪೀಠದ ಮೂಲಕ ತೀರ್ಮಾನ ಆಗುತ್ತದೆ.
ಆದರೆ ಎರಡನೆಯ ಕಟಕಟೆಯಲ್ಲಿ ಶರಣರನ್ನು ಕೇವಲ ಭಜನೆ ಮಾಡುತ್ತ ಅವರ ನಿಜವಾದ ತತ್ವಗಳಿಗೆ ನೀರು ಬಿಡುತ್ತ ಶರಣರನ್ನು ನಿಜವಾಗಿ ಕೊಲೆ ಮಾಡುತ್ತ ಇರುವ ಇಂದಿನ ವಾಸ್ತವ ಸತ್ಯವನ್ನು ಕಲಬುರ್ಗಿ ಸಾರುತ್ತಾರೆ.ಬಿಜ್ಜಳ ಅವನ ಸೈನಿಕರು ಇವರ ಇತಿಹಾಸ ಹೇಳಿದ ಡಾ. ಕಲಬುರ್ಗಿಯ ವರನ್ನು ಬಿಜ್ಜಳನ ಸಮಕಾಲೀನರೇನೋ ಕ್ಷಮಿಸಿದರು . ಆದರೆ ಈ ಕಾಲದ ಜನ ಕ್ಷಮಿಸಲಿಲ್ಲ.ಸತ್ಯ ಹೇಳಿದಂತಹ ಡಾ.ಎಂ ಎಂ ಕಲಬುರ್ಗಿಯವರನ್ನು ಹುತಾತ್ಮರಾಗಿಸಿದರು ” ಶರಣರ ವಾದ ಹಿಡದು ಇತಿಹಾಸದ ಹೊಕ್ಕಳು ಬಳ್ಳಿ ಬಗೆದ ಡಾ.ಎಂ ಎಂ ಕಲಬುರ್ಗಿ ಯವರ ಗತಿ ಏನಾಯಿತು ನೋಡ್ರಿ ” ಎನ್ನುವ ಮಾತೇ ನಾಟಕ ಸಾರುವ ಸತ್ಯವಾಗಿದೆ.ಬದುಕಿನುದ್ದ ಶರಣರಿಗೆ ನ್ಯಾಯ ಕೊಡಿಸಲು ಹೋರಾಡಿದ ಸಂಶೋಧಕನ ಗತಿಯೇ ಹೇಗಾಯಿತು ನೋಡಿರಿ ಎನ್ನುವ ಸತ್ಯ ಸಾರುತ್ರಾರೆ.
ಮುಕ್ತಿ,ಸ್ವರ್ಗ ಇವನ್ನು ನಂಬದ ಶರಣರು ಬೂಮಿಯನ್ನು ನಿಜವಾದ ಸ್ವರ್ಗವಾಗಿಸಲು ಮತ್ತೆ ಭುವಲೋಕಕ್ಕೆ ಬರುವ ಸೂಚನೆಯೊ಼ಂದಿಗೆ ನಾಟಕ ಮುಗಿಯುತ್ತದೆ.
ಇತಿಹಾಸದ ಸತ್ಯವೊಂದನ್ನು ನ್ಯಾಯಾಧೀಶನಾಗಿ ಸಾರಲು ಹೋದ ಡಾ.ಕಲಬುರ್ಗಿ ಇತಿಹಾಸ ತಿರುಚುವವರ ಕೈಯಿಂದ ಕೊಲೆಗೀಡಾಗಬೇಕಾಯಿತು ಎನ್ನುವದನ್ನು ಸಾರಲು ಈ ನಾಟಕ ಬರೆದಂತಿದೆ.” ಎಂಟು ನೂರು ವರ್ಷಗಳಿಂದ ಅಲೆಯುತ್ತಿದ್ದೇವೆ ಶರಣರೆಲ್ಲ, ಅಲ್ಲಿ ಕಡು ನೀಲಿ ಆಕಾಶದಲ್ಲಿ ನಮಗ ಮುಕ್ತಿ ಕೊಡಸ್ರಿ, ನಮಗ ಮುಕ್ತಿ ಕೊಡಸ್ರಿ” ಎನ್ಜುವ ಅಲ್ಲಮನ ಮಾತು ಸದಾ ಕಾಡುತ್ತದೆ, ನಾಟಕ ಮುಗಿದ ಮೇಲೂ.
ಡಾ.ಕಲಬುರ್ಗಿಯವರ ವ್ಯಕ್ತಿತ್ವವನ್ನು, ಅವರ ಬಲಿದಾನವನ್ನು ಶರಣರೊಂದಿಗೆ ಹೋಲಿಸುವ ಕಾರ್ಯವನ್ನು ನಾಟಕ ಮಾಡುತ್ತದೆ. ನಾಟಕದ ನಾಯಕ ಡಾ.ಕಲಬುರ್ಗಿ ಯವರು-
” ಆಗ ಶರಣರೆಲ್ಲ ಬಸವ ಧರ್ಮದ ಬಗ್ಗೆ ಮಾತಾಡಿದ್ದಕ್ಕಆಗ ಬಿಜ್ಜಳ ಎದುರಾದ .,ಈಗ ನಾನು ಮಾತಾಡಿದ್ನಿ , ಅದಕ್ಕೆ ಈಗ ಬಿಜ್ಜಳರು ನನ್ನ ಹಣಿಗಿ ಗುಂಡಿಟ್ರು,ಬಿಜ್ಜಳರು ಆಗೂ ಇದ್ರು,ಈಗೂ ಅದಾರ ಅದರರ್ಥ ಬಿಜ್ಜಳ ಸಂತತಿ ಸತ್ತಿಲ್ಲ(,ಪು ೬೬) ನಾಟಕದಲ್ಲಿ ಒಂದೆಡೆ ಶರಣರೂ ಕೇಳುತ್ತಾರೆ ” ಅವರೇಕೆ ನಮ್ಮನ್ನು ಕೊಲ್ಲುತ್ತಾರೆ? ಇವರೇಕೆ ನಮ್ಮನ್ಜು ಕೊಲ್ಲುತ್ತಿದ್ದಾರೆ?” ಇನ್ನೊಂದು ಕಡೆ ಡಾ.ಕಲಬುರ್ಗಿಯವರ ಪಾತ್ರ ಪ್ರಶ್ನಿಸು ತ್ತದೆ ” ನಾ ಯಾವ ಗಾಂಧಿನೂ ಅಲ್ಲ, ನನಗ್ಯಾಕ ಹೊಡದರು ಗುಂಡು?(ದೃಶ್ಯ ೧೨) ಇದು ನಾಟಕ ಎತ್ತುವ ಬಹು ದೊಡ್ಡ ಪ್ರಶ್ನೆ.ಈ ಪ್ರಶ್ನೆಗೆ ನಾಟಕ ಕೊಡುವ ಉತ್ತರ ” ಯಾಕಂದ್ರ ನೀವು ಜಾತಿ ಗಳ ಬಗ್ಗೆ ಮಾತಾಡಿದ್ರಿ, ಆರ್ಯರ ಬಗ್ಗೆ ಮಾತಾಡಿದ್ರಿ, ಬಸವ ಧರ್ಮದ ಬಗ್ಗೆ ಮಾತಾಡಿದ್ರಿ.” ಎನ್ನುವದೇ ಆಗಿದೆ.ಕೊನೆಗೂ ಒಂದು ಸತ್ಯ ಹೊರಬೀಳುತ್ತದೆ ಸ್ವತಃ ಡಾ. ಕಲಬುರ್ಗಿಯವರ ಪಾತ್ರವೇ ಹೇಳುತ್ತದೆ.
” ಬೇಕಾದ್ರ ನಾ ಆ ಕಾಲದ ಬಿಜ್ಜಳನ ಎದುರಿಸಿ ನಿಂತು ಪ್ರಶ್ನಾ ಮಾಡತೀನಿ.ಆದರ ಇವತ್ತಿನ ಕಾಲದ ಆಧುನಿಕ ಲಿಂಗಾಂಗಿಗಳನ್ನ ಮಾತ್ರ ಪ್ರಶ್ನಾ ಮಾಡೂದಿಲ್ಲ… ಆ ಬಿಜ್ಜಳನ ಕೈಯಾಗ ಏನಿತ್ತು? ಬಾಳಂದ್ರ ನಾಕು ಪೂಟಿನ ಕತ್ತಿ, ಅಷ್ಟ, ಅಂವಾ ಇತ್ಲಾಗ ಬೀಸೂದರೊಳಗ ಅತ್ಲಾಗ ನಿರುಂಬಳಾಗಿ ತಪ್ಪಿಸಿಕೊಳ್ಳಬಹುದಿತ್ತು.ಆದರ ಇವತ್ತಿನ ಕಾಲದ ಲಿಂಗಾಂಗಿಗಳ ಕೈಯೊಳಗ ಪಿಸ್ತೂಲ್ ಅದಾವ ತಮ್ಮಾ ಇವರು ಕಣ್ಣು ಬಿಡೂದರಾಗ ಗುಂಡು ಹಾರಿಸಿದರೆ ಹಣಿಗೇ ಹೋಗಿರ್ತದ ..ಯಾಕಂದ್ರ ಈ ಕಲಿಯುಗದ ಮಂದಿ ಈಗಾಗಲೇ ನನ್ನ ಹಣಿಗೆ ಗುಂಡ ಹೊಡೆದಾರ ನೋಡಿಲ್ಲೆ ತೂತು ಕಾಣಸ್ತೈತಿ” ” (ಪು೬೫) ಎನ್ನುವ ಸಾಲುಗಳನ್ನು ಓದುವಾಗ ಎದೆ ಝಲ್ಲೆನ್ನುತ್ತದೆ.
ಕೊನೆಗೂ ನಾಟಕಕಾರ ಒಂದು ಸತ್ಯವನ್ನು ಹೇಳುತ್ರಾರೆ.ಹನುಮ್ಯಾನ ಮೂಲಕ ” ಹೋಗ್ಲಿ ಬಿಡರಿ ಸರ್, ಮಾತಾಡಿದರ ಬಾಳೈತಿ,ಮೊದಲ ಶರಣರಿಗೆ ಮುಕ್ತಿ ಕಾಣಸೋ ದಾರಿ ತೋರಸ್ರಿ, ಬಿಜ್ಜಳನ ಕರೆಸಿ ಮಾತಾಡರಿ ” ಎನ್ನುತ್ತದೆ. ಏಕೆಂದರೆ ನಾಟಕಕಾರರಿಗೆ ಗೊತ್ತಿದೆ, ಶರಣರಿ ಗಾದ ಅನ್ಯಾಯಕ್ಕೆ ಉತ್ತರ ಸಿಗಬಹುದು, ಆದರೆ ಕಲಬುರ್ಗಿಯಂಥವರಿಗಾದ ಅನ್ಯಾಯಕ್ಕೆ ಉತ್ತರ ಸಿಗಲಾರದು ಎಂಬುದು.
ನಾಟಕದ ದೃಶ್ಯವೊಂದರಲ್ಲಿ ಶರಣರು ಹೇಳುತ್ತಾರೆ ” ಎಂಟು ನೂರು ವರ್ಷ ಕಳೆಯಿತು ಆಗ ಹೇಗಿದ್ದಿರೋ ಈಗಲೂ ಹಾಗೆ ಇದ್ದಿರಿ.ನಿಮ್ಮನ್ನ ತಿದ್ದಲು ನಮ್ಮ ವಚನಗಳಿಂದಲೂ ಸಾಧ್ಯವಾಗಲಿಲ್ಲ.ನಿಷ್ಠೆ ಇಲ್ಲದವರಿಗೆ ಏನು ಹೇಳಿದರೇನು? ಇದು ನಾಟಕ ಸಾರುವ ಬಹು ದೊಡ್ಡ ಸತ್ಯ.ಶರಣರು ತಮ್ಮನ್ನು ದೇವರಾಗಿಸಬೇಡಿ,ಜಾತಿಗೆ ಸೀಮಿತರಾಗಿಸಬೇಡಿ , ಎಂದು ಬೇಡುತ್ತಲೇ ಇದ್ಸಾರೆ.ನಾವು ಅದನ್ನೇ ಮಾಡುತ್ತಲೇ ಇದ್ದೇವೆ. ನಾಟಕ ಇದನ್ನೇ ಸೂಚಿಸುತ್ತದೆ.
ನಿಜವಾಗಿ ನೋಡಿದರೆ ಈ ನಾಟಕದ ನಾಯಕ ಡಾ.ಎಂ.ಎ಼ಂ.ಕಲಬುರ್ಗಿಯವರೇ. ಅವರು ಬರಹದ ಮೂಲಕ ಮಾಡಿದ ಕ್ರಾಂತಿಯನ್ನು, ತೋರಿದ ದಿಟ್ಟ ನಿಲುವುಗಳನ್ನು ಈ ಪರಿಯಲ್ಲಿ ನಾಟಕೀಕರಿಸಿ ಕೊಡುವದು ಒಬ್ಬ ಶ್ರೇಷ್ಠ ಸಾಹಿತಿಗೆ ಸಂದ ನಿಜವಾದ ನ್ಯಾಯವಾಗಿದೆ. ಡಾ.ಎಂ.ಎಂ ಕಲಬುರ್ಗಿಯವರು ಈ ಮೂಲಕ ಅಜರಾಮರರಾಗಿದ್ದಾರೆ.
- ಡಾ.ವೈ.ಎಂ.ಯಾಕೊಳ್ಳಿ( ಸವದತ್ತಿ ಪದವಿ ಪೂರ್ವಕ ಕಾಲೇಜಿನ ಪ್ರಿನ್ಸಿಪಾಲರು, ಶ್ರೆಷ್ಠ ವಾಘ್ಮಿಗಳು, ಭಾಷಣಕಾರರು, ವಿಮರ್ಶಕರು) ಸವದತ್ತಿ
