“ಚಾಂದ್ ಸರ್…. ಬಾಸ್ ಹೋಗ್ ಬಿಟ್ರು!”



ರವಿಬೆಳೆಗೆರೆಯವರನ್ನು ಹತ್ತಿರದಿಂದ ಕಂಡಂತಹ ಲೇಖಕ ಮತ್ತು ಅವರ ಸಹದ್ಯೋಗಿ ಮಂಜುನಾಥ ಚಾಂದ್ ಅವರು ರವಿಯಣ್ಣನ ಬಗ್ಗೆ, ಅವರೊಂದಿಗಿನ ಒಡನಾಟದ ಬಗ್ಗೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ನಡುರಾತ್ರಿಯ ಬಳಿಕ, ಬೆಳಗಿನ ಜಾವದ ಹೊತ್ತಿಗೆ ಫೋನು ಹೊಡೆದುಕೊಂಡಿತು ಎಂದರೆ ಎದೆಯೂ ಬಡಿದುಕೊಳ್ಳುತ್ತದೆ; ಏನೋ ಆತಂಕದ ಸುದ್ದಿ ಆಕಡೆಯಿಂದ ಕಾದಿದೆ ಎಂದು. ಇವತ್ತು ಬೆಳಗಿನ ಜಾವ ಹಾಗೇ ಆಯಿತು.

“ಚಾಂದ್ ಸರ್…. ಬಾಸ್ ಹೋಗ್ ಬಿಟ್ರು!”

ಹೃದಯ ಬಾಯಿಗೆ ಬಂದಂತಾಯಿತು. ಹಾಯ್ ಬೆಂಗಳೂರು ಪತ್ರಿಕೆಯ ಉಷಾ ಫೋನ್ ಮಾಡಿದಾಗ ಬೆಳಗಿನ ಜಾವ ಮೂರು ಗಂಟೆ. ತಕ್ಷಣ ಕರಿಷ್ಮಾ ಹಿಲ್ಸ್ ನಲ್ಲಿರುವ ಅವರ ‘ಲಲಿತಾ’ ಮನೆಗೆ ಧಾವಿಸಿದೆ. ಅದು ನಮ್ಮನೆಯಿಂದ ಹತ್ತೇ ನಿಮಿಷದ ಹಾದಿ. ಅಲ್ಲಿಗೆ ಹೋಗುವಾಗಲೂ ಆ ಸುದ್ದಿ ನಿಜವಲ್ಲ ಅನಿಸುತ್ತಿತ್ತು. ಅಣ್ಣಾ ಅನೇಕ ಬಾರಿ ಹೀಗೆ ಮಾಡಿದ್ದಿದೆ;

‘ಬಾಸ್ ಗೆ ತುಂಬಾ ಹುಷಾರಿಲ್ಲ… ಸೀರಿಯಸ್, ಬಂದುಬಿಡಿ’ ಎಂದು ಆತ್ಮೀಯರಿಗೆ ಫೋನ್ ಮಾಡಿಸುತ್ತಿದ್ದ. ಅಲ್ಲಿಗೆ ಧಾವಿಸಿದರೆ, “ಹೇಯ್, ನನಗೇನಾಗಿದೆ ಧಾಡಿ. ಗಟ್ಟಿಮುಟ್ಟಾಗಿದ್ದೇನೆ ನೋಡು, ನೂರು ವರ್ಷ ಬದುಕೇ ಬದಕ್ತೀನಿ ಕಣೋ, ದೀರ್ಘಾಯುಷಿಗಳ ವಂಶ ನಮ್ಮದು!’ ಎಂದು ಕಿಚಾಯಿಸುತ್ತಿದ್ದ.

ಆದರೆ ಈ ಬಾರಿ ಹಾಗಾಗಲಿಲ್ಲ. ‘ಲಲಿತಾ’ದ ಪಡಸಾಲೆಯಲ್ಲಿ ಅಣ್ಣಾ, ಗಾಜಿನ ಪೆಟ್ಟಿಗೆಯನ್ನು ಸೇರಿಬಿಟ್ಟಿದ್ದ; ಹೊರಬಾರದ ರೀತಿಯಲ್ಲಿ ಜಡವಾಗಿದ್ದ. ಈ ಬಾರಿಯ ಫೋನ್ ಕರೆ ಸುಳ್ಳಾಗಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಆತ ಜರ್ಝರಿತನಾಗಿದ್ದ ಎನ್ನುವುದು ಸತ್ಯ. ಕಾಯಿಲೆ ಅವನಿಗೆ ಹೊಸದೇನು ಆಗಿರಲಿಲ್ಲ. ಸಂಯುಕ್ತ ಕರ್ನಾಟಕ ದಿನಗಳಿಂದ ಆರಂಭಿಸಿ ಸುಮಾರು ಮೂವತ್ತು ವರ್ಷಗಳ ಕಾಲ ಅವನೊಂದಿಗೆ ಒಡನಾಟ ಹೊಂದಿದ್ದ ನನಗೆ ‘ಓ ಮನಸೇ’ ಪತ್ರಿಕೆಯಲ್ಲಿ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾಗ ಅವನನ್ನು ತೀರಾ ಹತ್ತಿರದಿಂದ ನೋಡಿದ್ದೇನೆ. ಸಕ್ಕರೆ ಕಾಯಿಲೆ, ಬಳಲಿಕೆಯಿಂದ ತಾಸುಗಟ್ಟಲೆ ಮಲಗಿ ಬಿಡುತ್ತಿದ್ದ. ಪತ್ರಿಕೆ ಅಚ್ಚಿಗೆ ಹೋಗುವ ಕೊನೆಯ ಹಂತದ ವರೆಗೂ ಅವನ ಕಾಲಂಗಳು ಖಾಲಿ ಉಳಿದಿರುತ್ತಿದ್ದವು. ಆದರೆ ಏಕಾಏಕಿ ನಿದ್ದೆಯಿಂದ ಎದ್ದು ಒಂದು ಸಿಗರೇಟು ಎಳೆದು ಕಾಫಿ ಕುಡಿದು ಬರೆಯಲು ಕುಳಿತುಬಿಟ್ಟರೆ ಸರಾಗ, ಸುಲಲಿತ. ಎರಡು ಮೂರು ತಾಸುಗಳಲ್ಲಿ ಅಷ್ಟೂ ಕಾಲಂಗಳು ರೆಡಿಯಾಗಿ ಬಿಡುತ್ತಿದ್ದವು. ಡಿಟಿಪಿ ಅಪರೇಟರ್ ಗಳು ರಾಕೆಟ್ ವೇಗದಲ್ಲಿ ಅವನ್ನು ಟೈಪ್ ಮಾಡಿ ಬಿಡುತ್ತಿದ್ದರು.

‘ಇನ್ನೂ ಏನಾದರೂ ಬರೆಯಲಿಕ್ಕಿದೆಯೇನೋ ನಾನು?’ ಎಂಬ ಪ್ರಶ್ನೆಯನ್ನೆಸೆದು ನಮ್ಮನ್ನು ಚಕಿತಗೊಳಿಸುತ್ತಿದ್ದ. ‘ಪ್ರಿಂಟಿಗೆ ಕಳಿಸಿಬಿಡು ಮತ್ತೆ’ ಎಂದು ಆರ್ಡರ್ ಮಾಡಿ ಇನ್ನೊಂದು ಸಿಗರೇಟು, ಕಾಫಿ ತುಟಿಗೇರಿಸಿ ‘ಬಾ ಇಲ್ಲಿ ಒಂದು ಕಥೆ ಹೇಳ್ತೀನಿ ಕೇಳು’ ಎಂದು ಕರೆದು, ತಾನು ಸಾಗಿ ಬಂದ ಪತ್ರಿಕೋದ್ಯಮ ಹಾದಿಯ ಪುಂಖಾನುಪುಂಖ ಕಥೆಗಳನ್ನು ಹೇಳುತ್ತಿದ್ದ. ನಾನು ನಕ್ಕು ನಕ್ಕು ಸುಸ್ತಾಗುತ್ತಿದ್ದೆ. ಅವನ ನೆನಪಿನ ಶಕ್ತಿ ನಿಜಕ್ಕೂ ಅಗಾಧವಾಗಿತ್ತು.

ಇದ್ಯಾವುದೂ ಇಲ್ಲವೆಂದರೆ ಈ ಹಾಡು ಕೇಳು, ಮೆಹದಿ ಹಸನ್ ಬರೆದಿದ್ದು ಎಂದು ಒಂದು ಗಝಲ್ ಪ್ಲೇ ಮಾಡುತ್ತಿದ್ದ. ಅದರ ಅಷ್ಟೂ ಸಾಲುಗಳನ್ನು ಅರ್ಥ ಬಿಡಿಸಿ ಹೇಳುತ್ತಿದ್ದ. ಉರ್ದುವಿನ ಪದ ಶ್ರೀಮಂತಿಕೆ ಅವನ ರಕ್ತದಲ್ಲಿ ಸೇರಿ ಹೋಗಿತ್ತು. ಸಾಹಿರ್-ಅಮೃತಾ ಪ್ರೀತಂ ನಡುವಿನ ಸಾಂಗತ್ಯವನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ. ಇಂತಹ ಅನೇಕ ಕಲಾಪಗಳು ನಮ್ಮ ನಡುವೆ ಚಾಲ್ತಿಯಲ್ಲಿ ಇರುತ್ತಿದ್ದವು.

ಅದ್ಯಾವುದೂ ಇಲ್ಲವೆಂದರೆ ಒಂದು ಹೊಸ ಸಿನೆಮಾ ತರಿಸಿದ್ದೇನೆ ನೋಡೋಣ ಬಾ ಎಂದು ಅವನ ಟೇಬಲ್ಲಿನ ದೊಡ್ಡ ಕಂಪ್ಯೂಟರ್ ನಲ್ಲಿ ಪ್ಲೇ ಮಾಡಿಸುತ್ತಿದ್ದ. ಹಾಗೆ ನಾವು ಬಾರಿ ಬಾರಿ ನೋಡಿದ ಮರಾಠಿ ಸಿನೆಮಾ ‘ಕಟ್ಯಾರ್ ಕಾಳ್ಜಾತ್ ಘುಸಲಿ’. ಇದರ ಹಾಡುಗಳು, ಸಂಭಾಷಣೆಗಳು ಎಷ್ಟು ಅದ್ಭುತವಾಗಿವೆ ನೋಡು ಎಂದು ಅರ್ಥ ವಿವರಿಸುತ್ತಿದ್ದ. ಫಿಲಂ ಮುಗಿದಾಗ ಇಬ್ಬರ ಕಣ್ಣುಗಳೂ ತೇವವಾಗುತ್ತಿದ್ದವು. ‘ಈ ಸಿನೆಮಾವನ್ನು ಹೇಗಾದರೂ ಮಾಡಿ ಕನ್ನಡದಲ್ಲಿ ನಾಟಕ ರೂಪಕ್ಕೆ ತರಬೇಕು ಚಾಂದ್’ ಅನ್ನುತ್ತಿದ್ದ. ಅದಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಂಡಿದ್ದ.

ಅವನು ಕರೆದಾಗಲೆಲ್ಲ, ಫೋನ್ ಮಾಡಿದಾಗಲೆಲ್ಲ ‘ಅಣ್ಣಾ’ ಎಂದೆ ಕರೆಯುತ್ತಿದ್ದ ನಮ್ಮ ನಡುವೆ ಆ ರೀತಿಯ ಸಂಬಂಧವಿತ್ತು. ಬಹುವಚನ ಬಳಸಿದಾಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ನಾನು ಮಾತ್ರವಲ್ಲ, ಅವನ ಸಮಕಾಲೀನರಲ್ಲಿ ಬಹುತೇಕ ಪತ್ರಕರ್ತರು, ಸಾಹಿತಿಗಳು ರವಿಯನ್ನು ಏಕವಚನದಿಂದಲೇ ಕರೆಯುತ್ತಿದ್ದರು. ಎದುರಿಗಿರುವ ವ್ಯಕ್ತಿಯ ಜೊತೆ ಮಾತನಾಡುತ್ತ ಕುಳಿತಾಗ ನಮ್ಮ ಜ್ಞಾನವೂ ಅಪ್-ಡೇಟ್ ಆಗಬೇಕು ಎಂದು ನಂಬಿದವನು ನಾನು. ರವಿ ಜೊತೆಗೆ “ಖಾಸ್-ಬಾತ್”ಗೆ ಕುಳಿತಾಗ, ಪ್ರವಾಸ ಹೊಂಟಾಗಲೆಲ್ಲ ನನಗೆ ಅದು ಸಾಧ್ಯವಾಗುತ್ತಿತ್ತು.

‘ಎನ್ಕೆ ಗೊತ್ತಾ ನಿನಗೆ? ಅವರ ಕಥೆಗಳನ್ನು ಓದಿದ್ದಿಯಾ ನೀನು? ಅವರು ಬರೆದಿದ್ದು ಮರಾಠಿ ಕಥೆಗಳನ್ನು. ಅವು ಕನ್ನಡಕ್ಕೆ ಅನುವಾದವಾಗಿವೆ. ಎಂಥಾ ವಿಕ್ಷಿಪ್ತ ಮನಸ್ಸಿನ ಮನುಷ್ಯ ಗೊತ್ತಾ ಆತ? ನಾನೇ ವಿಕ್ಷಿಪ್ತ ಅಂದರೆ, ನನ್ನನ್ನು ಮೀರಿಸುವಷ್ಟು…’ ಎನ್ನುತ್ತಾ ಅವನ ಲೈಬ್ರೆರಿಯಲ್ಲಿದ್ದ ಎನ್ಕೆ ಕಥಾ ಸಂಕಲನವನ್ನು ತಕ್ಷಣ ತರಿಸುತ್ತಿದ್ದ. ಇದನ್ನು ಓದಲೇಬೇಕು ನೀನು ಎಂದು ಒತ್ತಾಯ ಮಾಡುತ್ತಿದ್ದ. ಧಾರವಾಡದಲ್ಲಿಯೇ ಬದುಕಿದ್ದ ಎನ್ಕೆ ಎಷ್ಟು ವಿಕ್ಷಿಪ್ತವಾಗಿ ನಡೆದುಕೊಳ್ಳುತ್ತಿದ್ದರು ಎಂದು ಎಳೆಎಳೆಯಾಗಿ ಹೇಳುತ್ತಿದ್ದ. ವ್ಯಾಸ ಬರೆದ ಕಥೆಗಳ ಭಾಷೆಯನ್ನು ಅಪಾರವಾಗಿ ಮೆಚ್ಚಿಕೊಂಡಿದ್ದ, ‘ಅಬ್ಬಾ, ಅದನ್ನು ನನ್ನಿಂದಲೂ ಬರೆಯಲು ಸಾಧ್ಯವಿಲ್ಲ ಮಾರಾಯ!’ ಎನ್ನುತ್ತಿದ್ದ.

(ಕನ್ನಡ ಪ್ರಭಾ ಕಛೇರಿಯಲ್ಲಿ ದಿಗ್ಗಜರು ರವಿ ಬೆಳಗೆರೆ, ಮಲ್ಲಿಕಾರ್ಜುನಯ್ಯ, ವಾದಿರಾಜ ದೇಸಾಯಿ, ವಿಶ್ವ ಕುಂದಾಪುರ, ಪಾರ್ಥಸಾರಥಿ)

ಫೋಟೋ ಕೃಪೆ : ಸಾಗ್ಗೆರೆ ರಾಮಸ್ವಾಮಿ

ಹಾಯ್ ಬೆಂಗಳೂರು ಕಚೇರಿಯಲ್ಲಿರುವ ಸಾವಿರಾರು ಪುಸ್ತಕಗಳ ಲೈಬ್ರೆರಿ ಮುಂದೆ ನಿಂತು ಇಂತಹ ಪುಸ್ತಕ ಇಲ್ಲೇ ಇದೆ ಎಂದು ಹೇಳುತ್ತಿದ್ದ. ಅನೇಕ ಇಂಗ್ಲಿಷ್ ಕಾದಂಬರಿಗಳ ಭಾಷಾಂತರದ ಹಕ್ಕು ಪಡೆದುಕೊಂಡಿದ್ದ. ಅದರ ದೊಡ್ಡ ಪಟ್ಟಿಯೇ ಅವನ ಬಳಿ ಇತ್ತು. ಉರ್ದು, ಹಿಂದಿ, ತೆಲುಗು, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿದ್ದುದರಿಂದ ಅವನ ಭಾಷೆ ಹೆಚ್ಚು ಮೋಹಕವಾಗಿತ್ತು. ಆಕರ್ಷಕವಾಗಿತ್ತು. ಒಂದು ತಲೆಮಾರನ್ನು ಪ್ರಭಾವಿಸುವಷ್ಟು ಸಶಕ್ತವಾಗಿತ್ತು. ಲಂಕೇಶ್ ಹೇಗೆ ಹೊಸ ಹೊಸ ಭಾಷಾ ಪ್ರಯೋಗಗಳನ್ನು ಬಳಸಿದರೋ ಹಾಗೆ ರವಿ ಬೆಳಗೆರೆ ಅನೇಕ ಹೊಸ ಪದಗಳನ್ನು ಕೊಟ್ಟರು. ‘ಕಾವಳ’ವನ್ನು ಕರಗಿಸಿದರು. ‘ಎಗಾದಿಗಾ’ ಎನ್ನುತ್ತಾ ಅನೇಕರನ್ನು ನಡುಗಿಸಿದರು.

ಯಸ್, ರವಿ ಬಗ್ಗೆ ಅನೇಕರಿಗೆ ಆಕ್ಷೇಪಗಳಿವೆ. ನೆಗೆಟಿವ್ ಥಾಟ್ ಗಳಿವೆ. ಹಿತ್ತಾಳೆ ಕಿವಿ ಎಂಬ ಆರೋಪವೂ ಇದೆ. ಬರವಣಿಗೆಯಲ್ಲಿ ಹೇಗೆ ದೈತ್ಯನೋ ಹಾಗೆ ನಡವಳಿಕೆಯಲ್ಲಿಯೂ ರಾಕ್ಷಸ, ವಿಕ್ಷಿಪ್ತ ಮನಸ್ಸು ಎನ್ನುವವರಿಗೇನೂ ಕಡಿಮೆ ಇಲ್ಲ. ನಿಜ, ಅದನ್ನು ಅವನೂ ಹೇಳಿಕೊಂಡಿದ್ದಾನೆ. ‘ನನಗಿಂತ ದುಷ್ಟ ಬೇಕೇನೋ?’ ಎಂದು ಹಕೀಕತ್ ಕಿ ದುನಿಯಾವನ್ನು ಅವನೇ ತೆರದಿಟ್ಟಿದ್ದಾನೆ ಕೂಡ. ಅನೇಕ ಪ್ರಕರಣಗಳು ಅದನ್ನು ಜಾಹೀರು ಮಾಡಿವೆ ಕೂಡ. ಅಂತಹ ಅನೇಕ ಆಕ್ಷೇಪಗಳು ನನಗೂ ಇದ್ದವು. ‘ಓ ಮನಸೇ’ ಕಚೇರಿಯ ಮೆಟ್ಟಿಲಿಳಿದು ಬಂದಾಗ ಅವು ಗಟ್ಟಿಯೂ ಆಗಿದ್ದವು. ಆದರೆ, ಒಬ್ಬ ವ್ಯಕ್ತಿಯ ಬಗ್ಗೆ ಇಷ್ಟೆಲ್ಲ ಆಕ್ಷೇಪಗಳ ಪಟ್ಟಿ ಇಟ್ಟುಕೊಂಡೇ ‘ಸೈಡ್ ವಿಂಗ್’ನಲ್ಲಿ ಉಳಿದ ನೋಟವನ್ನು ಕಾಣುವ ಪ್ರಯತ್ನ ಮಾಡಿದ್ದೇನೆ.

 

ಒಂದು ದಿನ #ಹಾಯ್_ಬೆಂಗಳೂರು ಕಚೇರಿಯಲ್ಲಿ ಒಬ್ಬ ಹುಡುಗ ಬಂದು ಕುಳಿತಿದ್ದ. ಆತನನ್ನು ನನ್ನ ಸಮ್ಮುಖದಲ್ಲೇ ತನ್ನ ಛೇಂಬರ್ ಗೆ ಅಣ್ಣ ಕರೆಸಿಕೊಂಡ. (ಆತನ ಹೆಸರು ಮರೆತಿದ್ದೇನೆ). ಆತ ಬಂದವನೇ ಅಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ. ಅವನನ್ನು ನನಗೂ ಪರಿಚಯಿಸಿದ. ಆತ ತಾನು ಎಂಬಿಬಿಎಸ್ ಪದವಿ ಮುಗಿಸಿದ್ದು, ಸರ್ ಅವರಿಂದ ಆಶೀರ್ವಾದ ಪಡೆಯಲು ಬಂದಿದ್ದಾಗಿ ತಿಳಿಸಿದ. ಅಣ್ಣನೊಂದಿಗೆ ಫೋಟೊ ಕೂಡ ತೆಗೆಸಿಕೊಂಡು ನಿರ್ಗಮಿಸಿದ. ಆ ಮೇಲೆ ತಿಳಿದ ವಿಚಾರವೇನೆಂದರೆ ಆ ಹುಡುಗ (ಶಿವಮೊಗ್ಗದವನೆಂದು ಕಾಣುತ್ತದೆ) ಹಿಂದುಳಿದ ವರ್ಗದವನಾಗಿದ್ದು, ಬಡತನದಿಂದ ಬಂದವ. ವೈದ್ಯನಾಗುವ ಆತನ ಕನಸಿಗೆ ನೀರೆರೆದು ಪೂರ್ತಿ ಖರ್ಚು ಭರಿಸಿದವನು ರವಿ ಬೆಳಗೆರೆ!

ಪತ್ರಕರ್ತರು, ಸಾಹಿತಿಗಳ ಮಕ್ಕಳೂ ಸೇರಿದಂತೆ ಬಡವರ್ಗದ ಅನೇಕ ಮಕ್ಕಳು ರವಿ ಬೆಳಗೆರೆಯ ಪ್ರಾರ್ಥನಾ ಶಾಲೆಯಲ್ಲಿ ಪುಕ್ಕಟೆಯಾಗಿ ಓದಿದ್ದಾರೆ. ಅವರೆಲ್ಲರೂ ಪದವಿಯ ಮೆಟ್ಟಿಲನ್ನು ದಾಟಿ ಮುಂದಕ್ಕೆ ಸಾಗಿದ್ದಾರೆ. ಅವರೆಲ್ಲರೂ ರವಿಗೊಂದು ನಮಸ್ಕಾರ ಹೇಳಿಯೇ ಹೇಳುತ್ತಾರೆ. ಅವರಲ್ಲಿ ನಾನೂ, ನನ್ನ ಮಕ್ಕಳೂ ಸೇರಿದ್ದಾರೆ. ಅನೇಕ ಹಸಿದ ಕುಟುಂಬಗಳ ಮಕ್ಕಳ ಮನಸ್ಸಿನಲ್ಲಿ ರವಿ ಚಿರಸ್ಥಾಯಿ.

ರವೀ ವೀ ಮಿಸ್ ಯೂ!
ಚಾಂದ್


  • ಮಂಜುನಾಥ ಚಾಂದ್  (ಖ್ಯಾತ ಲೇಖಕರು, ಕತೆಗಾರರು, ಪತ್ರಕರ್ತರು, BookMaadi.com ಮುಖ್ಯಸ್ಥರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW