ಕೆಂಪು ಕಿರುಹೊತ್ತಿಗೆಯ ಸಾರ್ವಕಾಲಿಕ ಗುಣ ಮತ್ತು ಸಮಕಾಲೀನತೆ



ಫೆಬ್ರವರಿ ೨೧, ೧೮೪೮ರಲ್ಲಿ ಮೊದಲ ಮುದ್ರಣ ಕಂಡ ‘ಕಮ್ಯೂನಿಸ್ಟ್‌ ಪ್ರಣಾಳಿಕೆ’ಯ ಮೆಲುಕು  “ತತ್ತ್ವಶಾಸ್ತ್ರಜ್ಞರು ಲೋಕವನ್ನು ವ್ಯಾಖ್ಯಾನಿಸಿರಬಹುದು. ವಿಷಯವಿರುವುದು ಅದನ್ನು ಬದಲಾಯಿಸಬೇಕು ಎನ್ನುವುದು.” 

ಕಾರ್ಲ್‌ ಮಾರ್ಕ್ಸ್ 

ಹೌದು, ಕಿರು ಹೊತ್ತಿಗೆಯೊಂದು ಪ್ರಕಟಿಸಿದ ನೂರೆಪ್ಪತ್ತೈದು ವರ್ಷಗಳ ಬಳಿಕವೂ ಇಂದಿನ ಸಮಾಜಕ್ಕೆ ಅನ್ವಯವಾಗುವ ಹಾಗಿದೆಯಲ್ಲ? ಮೂವತ್ತರ ಆಸುಪಾಸಿನಲ್ಲಿದ್ದ ಆ ಪುಸ್ತಕದ ಲೇಖಕ ಜೋಡಿಯೇನು ಪ್ರವಾದಿತನದ ಅವತಾರ ಪುರುಷರಾಗಿದ್ದರೆ, ಇಲ್ಲ, ಅವರಿಗೆ ಅಪರೋಕ್ಷಜ್ಞಾನವಿತ್ತೆ?

ಫೋಟೋ ಕೃಪೆ : melinweb

ಎರಡು ಪ್ರಶ್ನೆಗಳಿಗೆ ಉತ್ತರ ‘ಇಲ್ಲ’ ಎನ್ನುವುದೇ. ಸರಳವಾಗಿ ಹೇಳುವುದಾದರೆ, ಆ ಇಬ್ಬರೂ ಯುವಕರು ಸಮಾಜ ಕುರಿತು ಎಷ್ಟೊಂದು ಚಿಂತಿಸಿದ್ದರು, ತಮ್ಮ ನಿಲುವಿಗೆ ತಲುಪಲು ಎಷ್ಟೊಂದು ದತ್ತಾಂಶವನ್ನು ಸಂಗ್ರಹಿಸಿದ್ದರು ಎಂದರೆ, ಆ ಕಾಲದ ಉಳಿದ ಸಿದ್ಧಾಂತಿಗಳಿಗಿಂತ ಇವರು ಸೂಕ್ಷ್ಮಸಂವೇದಿಯಾಗಿ ಪ್ರತಿಕ್ರಿಯಿಸಬಲ್ಲವರಾಗಿದ್ದರು. ಸಮಾಜವನ್ನು ಅರಿತುಕೊಳ್ಳುವಲ್ಲಿ ಇಬ್ಬರೂ ತೋರಿದ ಸ್ವೋಪಜ್ಞತೆಯಿಂದಾಗಿ ಅಂದಂದಿಗಲ್ಲದೆ, ಆ ಕಿರುಕೃತಿ ಇಂದಿಂದಿಗೂ ಪ್ರಸ್ತುತವಾಗುವ ಗುಣವನ್ನು ಅಡಕವಾಗಿಸಿಕೊಂಡಿತ್ತು! ಕಾಲಕಾಲಕ್ಕೆ ಪ್ರಸ್ತುತವಾಗುವ ಅದರ ಈ ಸ್ವಭಾವವೇ ಹೊತ್ತಿಗೆಯನ್ನು ಈ ಹೊತ್ತಿನ ಪುಸ್ತಕವಾಗಿಸುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಗುಣಲಕ್ಷಣ ಮತ್ತು ಆ ವ್ಯವಸ್ಥೆಯ ಸಾರಸಂಗ್ರಹವನ್ನು ನಿಖರವಾಗಿ ವ್ಯಾಖ್ಯಾನಿಸಿದ್ದೇ ಈ ಕೃತಿಯನ್ನು ಬರೆದ ಯುವಕದ್ವಯರ ಬಹುದೊಡ್ಡ ಸಾಧನೆಯಾಗಿತ್ತು.

ಇಬ್ಬರು ಯುವಕರಲ್ಲಿ ಒಬ್ಬರಾಗಿದ್ದ ಜರ್ಮನಿಯ ಕಾರ್ಲ್‌ ಮಾರ್ಕ್ಸ್‌‌ರಂತೂ ‘ಹೊಸ ಹಣಕಾಸು ವ್ಯವಸ್ಥೆಯ ರೂಪುರೇಶೆ ಹಾಗೂ ಅದರ ಸುತ್ತ ಸಂಘಟಿತವಾಗುತ್ತಿದ್ದ ಹೊಸ ರಾಜಕಾರಣ’ದ ಆಳಗಲವನ್ನು ಅರ್ಥಮಾಡಿಕೊಳ್ಳಲು ತಮ್ಮಡೀ ಬದುಕನ್ನು ಮುಡಿಪಿಟ್ಟರು.

ಬಂಡವಾಳ ಮತ್ತು ಶ್ರಮದ ವ್ಯಾಖ್ಯಾನ

ತಮ್ಮ ‘#ಬಂಡವಾಳ’ ಕೃತಿಯ ಮೊದಲ ಸಂಪುಟದಲ್ಲಿ ಬಂಡವಾಳಶಾಹಿಯ ಉತ್ಪಾದನೆಯ ವಿಧಾನ ಮತ್ತು ಅದನ್ನು ಆಧರಿಸಿದ ಸಾಮಾಜಿಕ ರಚನೆಯನ್ನು ಖಚಿತ ವೈಜ್ಞಾನಿಕ ಸೂತ್ರದ ಮೂಲಕ ಮಾರ್ಕ್ಸ್‌ ವಿಶ್ಲೇಷಿಸಿದ್ದರು. ಖಾಸಗಿ-ಆಸ್ತಿಯ ಮಾಲಿಕರು ಮತ್ತು ಸರಕು ವಿನಿಮಯದ ಅರ್ಥವನ್ನು ಈ ವಿಶ್ಲೇಷಣೆ ತೆರೆದಿಡುವಂತಿತ್ತು. ಅದರಲ್ಲೂ ಮೌಲ್ಯ ಹಾಗೂ ಅಮೂರ್ತವಾಗಿರುವ ಸಾಮಾಜಿಕ ಶ್ರಮದ ಹೊರ ಹೊಮ್ಮುವಿಕೆ ಮತ್ತು ಪ್ರಾಬಲ್ಯದ ಅರ್ಥವನ್ನು ಇದು ಖಚಿತವಾಗಿ ನಿರೂಪಿಸಿತು. ಈ ಹಿಂದೆ ಸರಕು ವಿನಿಮಯ ವ್ಯವಸ್ಥೆ ಇರಲೇ ಇಲ್ಲವೆಂದು ಇದರರ್ಥವಲ್ಲ. ಆದರೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅದು ವಿಶಿಷ್ಟರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಎತ್ತಿ ತೋರಿಸುವುದು ಈ ವಿಶ್ಲೇಷಣೆಯ ವಿಶೇಷವಾಗಿತ್ತು.



ಶ್ರಮಜೀವಿಯು ತನ್ನ ಶ್ರಮಶಕ್ತಿಯನ್ನು ‘ಹಣವಿರುವ ವ್ಯಕ್ತಿಗೆ’ ಮಾರಾಟ ಮಾಡಿದಾಗ ಆ ಹಣವಂತನು ಸಹಜವಾಗಿ ‘ಹೆಚ್ಚುವರಿ ಮೌಲ್ಯ’ದ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳುತ್ತಾನೆ. ಈ ಸನ್ನಿವೇಶವೇ ಬಂಡವಾಳ ಶೇಖರಣೆಗೆ ಅನುವು ಮಾಡಿಕೊಡುತ್ತದೆ, ಎಂದು ಮಾರ್ಕ್ಸ್‌ ಸಾಧಿಸಿ ತೋರಿಸಿದರು. ಮೌಲ್ಯದ ಈ ಪ್ರಾಬಲ್ಯವು ಕೇವಲ ಹಣಕಾಸು ವ್ಯವಸ್ಥೆಯ ಮೇಲೆ ಮಾತ್ರವಲ್ಲದೆ ಆಧುನಿಕ ಬದುಕಿನ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೂ ತನ್ನ ಹಿಡಿತವನ್ನು ಬಿಗಿ ಮಾಡುತ್ತದೆ. ಶ್ರಮವನ್ನು ನೀಡುತ್ತಿರುವವರು ಯಾರು ಮತ್ತು ಶ್ರಮವನ್ನು ಪಡೆದವರು ಹೇಗೆ ತಮ್ಮ ಪರಿಶ್ರಮವಿಲ್ಲದೆ ‘ಉಳಿಕೆ’ಯ ಲಾಭವನ್ನು ಸಂಪಾದಿಸುತ್ತಿರುವರು, ಎಂಬ ವಿರೋಧಾಭಾಸವನ್ನು ಅರಿಯುವುದೇ ಬದಲಾವಣೆಯ ಪೂರ್ವಸೂಚನೆ. ಶ್ರಮಿಕರು ಅಥವ ಕಾರ್ಮಿಕವರ್ಗ ಇದನ್ನು ಅರ್ಥ ಮಾಡಿಕೊಂಡ ಬಳಿಕ ಸಂಘಟಿತರಾಗುವುದು, ಹಕ್ಕು ಮಂಡಿಸುವುದು ಹಾಗೂ ಇರುವ ವ್ಯವಸ್ಥೆಯನ್ನು ಬುಡಮಟ್ಟದಿಂದ ಬದಲಿಸುವುದೇ ಕ್ರಾಂತಿ. ಇದನ್ನೇ ಆ ಯುವಕರು ತಮ್ಮ ಕಿರುಹೊತ್ತಿಗೆಯಲ್ಲಿ:

“ಸಮಾಜವನ್ನು ಸಂಪೂರ್ಣವಾಗಿ ಬುಡಮಟ್ಟದಿಂದ ಪುನಾರಚಿಸುವ ಹೋರಾಟ ಅಥವ ಎರಡು #ಸ್ಪರ್ಧಾತ್ಮಕ ವರ್ಗಗಳ ನಡುವೆ ನಡೆವ ಹೋರಾಟದಲ್ಲಿ ನೆಲಗಚ್ಚುವ ಸಾಮಾನ್ಯ ವೈರಿ,” ಎಂದು ಕರೆದಿದ್ದರು.

ಆ ಇಬ್ಬರು ಯುವಕರು ತಮ್ಮ ವರ್ಷಗಳ ಪರಿಶ್ರಮ, ಚಿಂತನೆ ಮತ್ತು ದತ್ತಾಂಶ ಸಂಗ್ರಹಗಳಿಗೆ ಆಧಾರವಾಗಿ ರಚಿಸಿದ ಪುಸ್ತಕದ ಹೆಸರು: ಕಮ್ಯೂನಿಸ್ಟ್‌ ಪ್ರಣಾಳಿಕೆ. ಮೊದಲ ಆವೃತ್ತಿ ಪ್ರಕಟವಾದುದು ಫೆಬ್ರವರಿ ೨೧, ೧೮೪೮. ಕೃತಿಯನ್ನು ರೂಪಿಸಿದ ಯುವಕರ ಹೆಸರು: ಫ್ರೆಡರಿಕ್‌ ಏಂಗೆಲ್ಸ್‌ ಮತ್ತು ಕಾರ್ಲ್‌ ಮಾರ್ಕ್ಸ್‌.

‘ಮನುಷ್ಯರು ಮಾತ್ರ ತಮ್ಮ ಇತಿಹಾಸವನ್ನು ರಚಿಸಿಕೊಳ್ಳಬಲ್ಲರು’. ಉಳಿದ ಜೀವಿಗಳು ಅಥವ ನಿಸರ್ಗ ವಸ್ತುಗಳ ವಿಕಾಸ ಅವುಗಳ ನಿಯಂತ್ರಣದಲ್ಲಿಲ್ಲ. ಅವೇನಿದ್ದರೂ ಅದಕ್ಕೆ ಈಡಾಗುವ ವಸ್ತು ಮಾತ್ರ, ಎಂಬ ವೈಜ್ಞಾನಿಕ ನಂಬಿಕೆಯೇ ಈ ಯುವಕರಿಬ್ಬರ ಜೀವಮಾನದ ಸೈದ್ಧಾಂತಿಕ ಪ್ರಸ್ತಾವನೆಗೆ ತಳಹದಿ.

ಫೋಟೋ ಕೃಪೆ : artsandculture

ಸಮಾಜ ರಚನೆಯ ವಿಧಾನ

ಮನುಷ್ಯ ವಹಿಸುವ ಮಧ್ಯಸ್ಥಿಕೆ ಮತ್ತು ತೆಗೆದುಕೊಳ್ಳುವ ನಿರ್ಣಯಗಳ ಸಮನ್ವಯತೆಗೆ ಆಧಾರವಾಗಿ ರೂಪುಗೊಳ್ಳುವ ಅಂಗೀಕೃತ ಪದ್ಧತಿಯು ಸಮಾಜಕ್ಕೆ ಸಮಂಜಸವೇ. ಅಡಿಗಲ್ಲಿನ ರಚನೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಮೇಲಿನ ರಚನೆಯಲ್ಲಿ ಕಂಡು ಬರುವ ವಿರೋಧಾಭಾಸಕರ ಸಂಬಂಧ ಸಹ ಸಮಾಜದಲ್ಲಿ ಸಹಜವೇ. ಆದರೆ, ಇವುಗಳ ಸ್ವಭಾವದಲ್ಲಿ ಸಮಾನಾಂಶವನ್ನು ಕಾಣಲಾರೆವು. ಈ ಸಂಬಂಧ ಒಮ್ಮುಖದ ಸಂಬಂಧವೂ ಅಲ್ಲ. ನೆನಪಿಡಬೇಕಾದ ಇನ್ನೂ ಒಂದು ಅಂಶ: ಮೇಲೆ ಹರಡಿಕೊಂಡ ರಚನೆಯು ‘ಬುನಾದಿ ರಚನೆ’ಯ ಪ್ರತಿರೂಪವಲ್ಲ, ಎಂಬುದು. ಅದು ಕೇವಲ ಪ್ರತಿರೂಪವಾಗಿದ್ದರೆ ಸಮಾಜವು ಯಾವಾಗಲೂ ಪರಾವಲಂಬಿಯಾಗಿರುತ್ತದೆ. ಜತೆಗೆ, ಅದು ತನ್ನನ್ನು ತಾನು ಬಿಡುಗಡೆಗೊಳಿಸಿಕೊಳ್ಳಲು ಅಸಮರ್ಥವಾಗಿರುತ್ತದೆ!

ಈ ಕಾರಣದಿಂದಲೇ, ಒಂದು ಉತ್ಪಾದನಾ ವ್ಯವಸ್ಥೆಯಿಂದ ಇನ್ನೊಂದು ರೀತಿಯ ಉತ್ಪಾದನಾ ವಿಧಾನಕ್ಕೆ ರೂಪಾಂತರಗೊಳ್ಳಲು ಗುಣಾತ್ಮಕ ಸಾಧ್ಯತೆಯನ್ನು ನಾವು ಪರಿಶೀಲಿಸಬೇಕು. ಒಂದೊಮ್ಮೆ, ಸಿದ್ಧಾಂತವು ಸ್ವಯಂಪೂರ್ಣವಾಗಿ ಬಯಸುತ್ತಿರುವ ಬದಲಾವಣೆಯನ್ನು ನೈಜವಾಗಿ ಗ್ರಹಿಸುತ್ತಿದೆ ಎನ್ನುವುದಾದರೆ, ನಾವು ಕ್ರಾಂತಿಯ ಕುರಿತು ಮಾತನಾಡಲು ಅರ್ಹರಾಗಿದ್ದೇವೆ ಎಂದರ್ಥ! ಆದರೆ, ಬಂಡವಾಳಶಾಹಿ ವ್ಯವಸ್ಥೆಯು ತನ್ನಷ್ಟಕ್ಕೆ ಒಂದು ಶಾಶ್ವತವಾದ ವ್ಯವಸ್ಥೆಯಾಗಿದೆ ಎಂದು ನಂಬುವ ಮನಸ್ಸು ಈ ವಾದವನ್ನು ತಿರಸ್ಕರಿಸುತ್ತದೆ! ಮಾತ್ರವಲ್ಲ, ಅಲ್ಲಿಗೆ, “ಇತಿಹಾಸವೇ ಕೊನೆಯಾದಂತೆ” ಎಂದು ಭ್ರಮಿಸುತ್ತದೆ.

‘ಬಂಡವಾಳಶಾಹಿ ಶಾಶ್ವತ ವ್ಯವಸ್ಥೆಯಲ್ಲ’

ಆದರೆ, ಈ ಹಳವಂಡಕ್ಕೆ ತದ್ವಿರುದ್ಧವಾಗಿ, ಮಾನವ ಇತಿಹಾಸದಲ್ಲಿ ‘#ಬಂಡವಾಳಶಾಹಿ’ ವ್ಯವಸ್ಥೆಯು ತಾತ್ಕಾಲಿಕವಾಗಿ ಸೇರಿಕೊಂಡ ಭಾಗವಾಗಿದೆ, ಎಂದು ಕಮ್ಯೂನಿಸ್ಟ್‌ ಪ್ರಣಾಳಿಕೆಯಲ್ಲಿ ಮಾರ್ಕ್ಸ್ ಮತ್ತು ಏಂಗೆಲ್ಸ್‌ ವಾದಿಸಿದ್ದರು. ಆ ಕಿರುಹೊತ್ತಿಗೆ ಪ್ರಕಟವಾಗುವ ಸಮಯಕ್ಕೆ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆ ಪರಿಪೂರ್ಣ ಸ್ವರೂಪವನ್ನೇನೂ ಪಡೆದಿರಲಿಲ್ಲ. ಇಂಗ್ಲೆಂಡ್‌, ಬೆಲ್ಜಿಯಂ, ಉತ್ತರ ಫ್ರಾನ್ಸ್‌ ಮತ್ತು ಪ್ರಸ್ಸಿಯದ ಪಶ್ಚಿಮ ಭಾಗದಲ್ಲಿ ಅದರ ಸುಳಿಹು ಚಿಗುರಿಕೊಳ್ಳುತ್ತಿತ್ತಷ್ಟೇ. ಆದಾಗ್ಯೂ, ಮಾರ್ಕ್ಸ್‌, ಯುರೋಪಿನಲ್ಲಿ ಸಮಾಜವಾದಿ ಕ್ರಾಂತಿ ‘ಶೀಘ್ರದಲ್ಲಿಯೇ’ ಜರುಗಲಿದೆ ಎಂದು ಊಹಿಸಿದ್ದರು. ಅದರ ಮುನ್ಸೂಚನೆಯು ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬಂಡವಾಳಶಾಹಿ ವ್ಯವಸ್ಥೆಯು ಇಡೀ ವಿಶ್ವವನ್ನೇ ವ್ಯಾಪಿಸಲಿರುವುದನ್ನು ಕೃತಿಯ ಲೇಖಕರು ಮನಗಂಡಿದ್ದರು. ಅಮೆರಿಕದ ಆವಿಷ್ಕಾರ, ಬ್ರಿಟನ್ನಿನ ಸಾಮ್ರಾಜ್ಯ ವಿಸ್ತರಿಸುವ ದಾಹವು ವ್ಯಾಪಾರಿ ರೂಪವನ್ನು ಕಳಚಿ ಪೂರ್ಣ ಪ್ರಮಾಣದ ಬಂಡವಾಳ ವ್ಯವಸ್ಥೆಯಾಗಿ ಮಾರ್ಪಡಲಿದೆ, ಎಂಬುದು ಕೂಡ ಕೃತಿಕಾರರ ಪ್ರಮೇಯವಾಗಿತ್ತು.

“ಆಧುನಿಕ ಕೈಗಾರಿಕೆಯು ವಿಶ್ವ ಮಾರುಕಟ್ಟೆಯನ್ನು ಸೃಷ್ಟಿಸಿದ್ದು, ಅಮೆರಿಕದ ಆವಿಷ್ಕಾರ ಅದಕ್ಕೆ ಹೆದ್ದಾರಿಯನ್ನು ನಿರ್ಮಿಸಿದೆ. ಬೂರ್ಷ್ವಾ ವ್ಯವಸ್ಥೆಯು ವಿಶ್ವ ಮಾರುಕಟ್ಟೆಯ ಸಂಪೂರ್ಣ ಪ್ರಯೋಜನ ಪಡೆಯಲು ತನ್ನ ಉತ್ಪಾದನೆಗೆ ಸಾರ್ವತ್ರಿಕ ಸ್ವರೂಪ ನೀಡಿ, ಪ್ರತಿ ರಾಷ್ಟ್ರವು ಈ ಉತ್ಪನ್ನದ ಬಳಕೆದಾರನಂತೆ ಗ್ರಹಿಸುತ್ತಿದೆ”, ಎಂದು ಪ್ರಣಾಳಿಕೆಯಲ್ಲಿ ಬರೆದರು. ಮಾನವ ಇತಿಹಾಸದಲ್ಲಿ ಕಾಣಿಸಿಕೊಂಡ ಈ ಹೊಸ ವಿದ್ಯಮಾನವನ್ನು ಮಾರ್ಕ್ಸ್ ಸ್ವಾಗತಿಸಿದರು.

ಫೋಟೋ ಕೃಪೆ : fashion-history.lovetoknow

“ಬೂರ್ಷ್ಟಾ ವ್ಯವಸ್ಥೆ ತಾನು ಮೇಲುಗೈ ಸಾಧಿಸಿದಲ್ಲೆಲ್ಲ ಪಾಳೇಗಾರಿಕೆಯನ್ನು, ಪುರುಷ ಪ್ರಧಾನ ರಚನೆಯನ್ನು, ರಮ್ಯ ಸಂಬಂಧಗಳಿಗೆ ಮಂಗಳವನ್ನೂ ಹಾಡಿದೆ. ಬೂರ್ಷ್ವಾಗಳು ನಗರವನ್ನು ಆಳ್ವಿಕೆಯ ಭಾಗವನ್ನಾಗಿಸಿದ್ದಾರೆ .ಇದು ಗ್ರಾಮೀಣ ಬದುಕಿನ ಮುಗ್ಧತೆ ಮತ್ತು ಪ್ರತ್ಯೇಕತೆಯಿಂದ ಬಹುಪಾಲು ಜನರನ್ನು ರಕ್ಷಿಸಿದೆ. ದೇಶವು ನಗರಗಳ ಮೇಲೆ ಅವಲಂಬಿತವಾಗುವುದರಿಂದ, ಅನಾಗರಿಕ, ಅರೆ-ನಾಗರಿಕ ರಾಷ್ಟ್ರಗಳು ನಾಗರಿಕ ರಾಷ್ಟ್ರಗಳ ಮೇಲೆ, ರೈತಾಪಿ ರಾಷ್ಟ್ರವು ಬೂರ್ಷ್ವಾ ರಾಷ್ಟ್ರಗಳ ಮೇಲೆ, ಪೂರ್ವವು ಪಶ್ಚಿಮದ ಮೇಲೆ ಅವಲಂಬಿತವಾಗುವಂತೆ ಮಾಡಿದೆ”, ಎಂದು ಗುರುತಿಸಿದರು.

ಹಾಗಿದ್ದರೆ, ಪ್ರಣಾಳಿಕೆಯು ಯುರೋಪಿನ, ಅದಕ್ಕಿಂತ ಮಿಗಿಲಾಗಿ ವಸಾಹತುಗಳಾಗಿದ್ದ ದೇಶಗಳ ರೈತಾಪಿಗಳ ಚಿತ್ರಣವನ್ನು, ಕೃಷಿ ನಾಶದ ರಾಜಕೀಯ ಪರಿಣಾಮವನ್ನು ಸರಿಯಾಗಿ ಗ್ರಹಿಸಿತ್ತೆ? ಎಂದು ಕೇಳಿಕೊಂಡರೆ, ಉತ್ತರ ಇಲ್ಲವೆನ್ನುವುದೇ ಆಗಿದೆ. ಉದಾಹರಣೆಗೆ, ನಂತರದ ಕಾಲಮಾನದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಮಾರ್ಕ್ಸ್‌ ಮತ್ತು ಏಂಗೆಲ್ಸ್‌ ಕಲ್ಪಿಸಿದ ರೀತಿಯಲ್ಲಿ ಏಕರೂಪತೆಯನ್ನು ಸಾಧಿಸಲಿಲ್ಲ. ಕೈಗಾರಿಕಾ ಕ್ರಾಂತಿ ಸಾಧಿಸಿದ ರಾಷ್ಟ್ರಗಳು ಊಹಿಸಿದ ವಿಧದಲ್ಲಿಯೇ ವರ್ತಿಸದಿರುವುದರಿಂದ ಮಹಾಯುದ್ಧ ಮತ್ತು ಹೊಸ ರೀತಿಯ ಗುಲಾಮಿ ಪದ್ಧತಿ, ತಾರತಮ್ಯ, ಅಮಾನವೀಯ ಅಸಮಾನತೆಯ ನೀತಿಗಳು ಹುಟ್ಟಿಕೊಂಡವು. ಮಾರ್ಕ್ಸ್‌‌ರ ಕೆಲವು ಬರಹಗಳು ಭಾರತ ವಸಾಹತುವಾಗಿದ್ದರ ಕುರಿತು ‘ಸಾಂತ್ವನದ ಬೆಳಕಿನಡಿ’ಯಲ್ಲಿ ನೋಡಿದ್ದು ಕೂಡ ಇಂತಹ ಗ್ರಹಿಕೆಯ ಹಿನ್ನೆಲೆಯಲ್ಲಿಯೇ. ಆದರೆ, ಬಳಿಕ ಮಾರ್ಕ್ಸ್‌ ತಮ್ಮ ನಿಲುವು ಬದಲಿಸಿಕೊಂಡರು ಎಂಬ ಅಂಶ ಅವರೊಬ್ಬ ನೈಜ ತತ್ತ್ವಶಾಸ್ತ್ರರು, ಮಾನವಕುಲ ಚಿಂತಕರು ಆಗಿದ್ದರು ಎಂಬುದನ್ನು ಎತ್ತಿ ತೋರಿಸುತ್ತದೆ. ಈ ಬದಲಾವಣೆಯನ್ನು ಪ್ರಸಿದ್ಧ ಮಾರ್ಕ್ಸ್‌ವಾದಿ ಸಮೀರ್‌ ಅಮಿನ್‌ :

ಮಾರ್ಕ್ಸ್‌ವಾದಿ ಸಮೀರ್‌ ಅಮಿನ್‌  (ಫೋಟೋ ಕೃಪೆ : wikipedia)

“ಮಾಗಿದ ವಯಸ್ಸಿನ ಮಾರ್ಕ್ಸ್‌ ತಾರುಣ್ಯದಲ್ಲಿ ರೂಢಿಸಿಕೊಂಡಿದ್ದ ಯುರೋಕೇಂದ್ರಿತ ದೃಷ್ಟಿಕೋನವನ್ನು ಬಿಟ್ಟುಕೊಟ್ಟರು. ಲೋಕ ಬದಲಾವಣೆಯಲ್ಲಿ ತಮ್ಮ ಚಿಂತನೆಯನ್ನು ಮಾರ್ಪಡಿಸಿಕೊಳ್ಳಬೇಕಾದ ವಿಧಾನವನ್ನು ಕಂಡುಕೊಂಡರು, ” ಎಂದು ಗುರುತಿಸುತ್ತಾರೆ.
—————
ಹೊಸ ಸಮಾಜ ರೂಪುಗೊಳ್ಳುವ ವಿಧಾನ:

ಕೆಲವು ಮುಕ್ತ ವಿಚಾರಗಳು :

ಸಮತಾವಾದಿ ಇಲ್ಲವೇ ಕಮ್ಯೂನಿಸ್ಟ್‌ ಪರಿವರ್ತನೆಗೆ ಬೇಕಾಗುವ ಕಾಲ ಸುದೀರ್ಘ. ಹಾಗೆಂದೇ, ವಿಶ್ವದಲ್ಲಿ ಎಲ್ಲೆಲ್ಲಿ ಸಕಾರಾತ್ಮಕ ಪರಿಸರವಿರುತ್ತದೋ ಅಲ್ಲೆಲ್ಲ ಕ್ರಾಂತಿಯ ಮುನ್ನೋಟ ಎದ್ದು ಕಾಣತೊಡಗುತ್ತವೆ. ಅದರಲ್ಲೂ, ಜಾಗತಿಕ ಬಂಡವಾಳಶಾಹಿಯೊಂದಿಗೆ ‘ಸಾವಯವ ಸಂಬಂಧ’ ಹೊಂದಲು ಸಾಧ್ಯವಿಲ್ಲವೆಂದು ನವ್ಯ ಪ್ರಯೋಗಶೀಲರು ಅರಿಯುವ ದೇಶಗಳಲ್ಲಿ ಇದು ಆದಷ್ಟು ಬೇಗನೆ ಸಾಕಾರವಾಗುವುದು. ಈ ಕಾರಣವಾಗಿಯೇ ನಾವು ವಿಭಿನ್ನ ಉಪಕ್ರಮವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಸಮತಾವಾದಿ ಪರಿವರ್ತನೆಯೊಂದಿಗೆ ಕ್ರಿಯಾಶೀಲ ಹೆಜ್ಜೆ ಹಾಕಬೇಕಾಗುತ್ತದೆ.

ಫೋಟೋ ಕೃಪೆ : theguardian

ಹೀಗೆ ಸಮತಾವಾದಿ ಪರಿವರ್ತನೆಗೆ ಸಿದ್ಧಗೊಳ್ಳುತ್ತಿರುವ ಸಮಾಜ-ದೇಶ ಅನೇಕ ಸವಾಲು ಎದುರಿಸಬೇಕಾಗುತ್ತದೆ. ಅದು ಹೊಸ ಸಾಮ್ರಾಜ್ಯಶಾಹಿ ದೇಶಗಳ ಪ್ರತಿ-ದಾಳಿಗೆ ಸಿದ್ಧವಿರಬೇಕಾಗುತ್ತದೆ. ಜತೆಗೆ, ಎಲ್ಲೆಡೆಯೂ ಏಕಕಾಲಕ್ಕೆ ಕ್ರಾಂತಿ ನಡೆದೀತು, ಎಂಬ ಕಣ್ಕಟ್ಟಿನ ಪೊರೆಯನ್ನು ಕಳಚಿರಬೇಕಾಗುತ್ತದೆ. ಹೊಸ ಬಗೆಯ ಸಾಮ್ರಾಜ್ಯಶಾಹಿ ಸೃಷ್ಟಿಸುವ ಆಂತರಿಕ-ಬಾಹ್ಯ ಒತ್ತಡ, ಪ್ರತ್ಯಕ್ಷ-ಪರೋಕ್ಷ ಪ್ರತಿಕ್ರಾಂತಿ ಚಟುವಟಿಕೆಯನ್ನು ಎದುರಿಸಬೇಕಾಗುತ್ತದೆ. ಸಮಾಜವಾದಿ ಕ್ರಾಂತಿಯ ಪರಿಕಲ್ಪನೆಯು ಸಮಾಜದ ಎಲ್ಲ ವರ್ಗ-ವರ್ಣ-ಲಿಂಗ- ನಗರ-ಗ್ರಾಮೀಣ ಮತ್ತು ಆಯಾ ಸಮಾಜದಲ್ಲಿ ನೆಲೆಗೊಂಡಿರುವ ವಿಶಿಷ್ಟತೆಯನ್ನು ಒಳಗೊಂಡಿರಬೇಕಾಗುತ್ತದೆ. ಈ ಒಳಗೊಳ್ಳುವಿಕೆಯು ‘ಉದಾರವಾದಿ’ ರಾಜಕಾರಣದ ಹುಸಿತನದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಿರುತ್ತದೆ.
ಮಾತ್ರವಲ್ಲದೆ, ನೈಜ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಮೂಲಕ ಎಲ್ಲರನ್ನೂ ಸಹಭಾಗಿತ್ವಕ್ಕೆ ಒಳಪಡಿಸುವುದು, ಪ್ರತಿ ಭಾಗೀದಾರರು ಪ್ರಕ್ರಿಯೆಯನ್ನು ತಮ್ಮದಾಗಿಸಿಕೊಳ್ಳುವಂತೆ ಮಾಡುವ ಭಾವುಕ-ವೈಚಾರಿಕ-ಸಾಮುದಾಯಿಕ ಉಪಕ್ರಮವನ್ನು ರೂಪಿಸಬೇಕಾಗುತ್ತದೆ. ವೈವಿಧ್ಯತೆ ಮತ್ತು ಬಹುತ್ವವೇ ಜೀವಾಳವಾದ ಸಮಾಜದಲ್ಲಿ ‘ಸಾಮುದಾಯಿಕ ದರ್ಶನ’ಕ್ಕೆ, ಜನಾಂಗ ವಿಶಿಷ್ಟ ನಂಬಿಕೆಯ ಪದ್ಧತಿಗೆ ಆಸ್ಪದ ಮತ್ತು ಮಾನ್ಯತೆ ನೀಡುವುದನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಕೇವಲ ‘ನಿರಾಕರಣೆ’ಯನ್ನು ಮಾತ್ರ ಚಿಂತನಾ ವಿಧಾನ ಮಾಡಿಕೊಳ್ಳದೆ, ‘ನಿವಾರಣೆ’ ಮತ್ತು ‘ನಮ್ಯತೆ’ಯನ್ನು ಸಹಜ ಸ್ವಭಾವವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ಕೇಂದ್ರೀಕೃತ ಚಿಂತನೆಗೆ ಸಂವಾದಿಯಾಗಿ ವಿಕೇಂದ್ರಿಕೃತ, ಸಂಯೋಜಿತ ಹಾಗೂ ಕ್ರೋಡೀಕೃತ ವೈಚಾರಿಕತೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಅಂತೆಯೇ, ಸ್ಥಳೀಯತೆ ಮತ್ತು ಪ್ರಾದೇಶಿಕ ಆಶೋತ್ತರಗಳು ಚಿಂತನಾ ಮುಂಚೂಣಿಗೆ ಬರಬೇಕಾಗುತ್ತದೆ.

ಇಂತಹ ಅನೇಕ ವಿಷಯಗಳು ಕಮ್ಯುನಿಸ್ಟ್‌ ಪ್ರಣಾಳಿಕೆ ತನ್ನ ಕಾಲದಲ್ಲಿ ಪ್ರತಿಫಲಿಸಲು ಸಾಧ್ಯವಿರಲಿಲ್ಲ. ಮಾರ್ಕ್ಸ್‌-ಏಂಗೆಲ್ಸ್‌ ತಾವು ಬದುಕಿ ಬರೆದ ಕಾಲದಲ್ಲಿ ಹೇಳಲು ಸಾಧ್ಯವಿರಲಿಲ್ಲ. ಅಲ್ಲಿರುವುದು ಲೋಕಕಲ್ಯಾಣಕ್ಕಾಗಿ ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಿಸಲೆತ್ನಿಸಿದ ವೈಚಾರಿಕ ಪ್ರಸ್ತಾವನೆ ಮಾತ್ರ. ಆಧುನಿಕ ಯುಗದಲ್ಲಿ, ಇದಕ್ಕಿಂತ ಮೊದಲು ಅಂತಹ ಪ್ರಮೇಯ ಮಂಡಿಸಲಾಗಿರಲಿಲ್ಲ. ಅದು ತನ್ನ ಕಾಲದ ಅನುಪಮೇಯ ರಾಜಕೀಯ ಸಿದ್ಧಾಂತದ ಹೊತ್ತಿಗೆ. ವಿಶ್ವಮಾನ್ಯ ಲೇಖಕ ಶೇಕ್ಸ್‌ಪಿಯರ್‌ ಕೃತಿಗಳಿಗೆ ಸಂದ ವಿಮರ್ಶೆ, ವಿಶ್ಲೇಷಣೆ, ವ್ಯಾಖ್ಯಾನಕ್ಕೂ ಮಿಗಿಲಾದ ವಿಚಾರಗಳನ್ನು ಬಡಿದೆಬ್ಬಿಸಿದ ರಾಜಕೀಯ ದಸ್ತಾವೇಜು!

ತನ್ನ ಕಾಲದ ಮಿತಿಯಿಂದ ಅಲ್ಲಿ ಸೇರಿಸದೇ ಉಳಿದದ್ದನ್ನು ಸೇರಿಸಿ, ಬೆಳೆಸಬೇಕಿರುವುದು ಸಮಕಾಲೀನ ಸಮತಾವಾದಿಗಳೇ. ಅಂತಹ ವಿಚಾರ ಬಿತ್ತನೆಗೆ ಕಮ್ಯೂನಿಸ್ಟ್‌ ಪ್ರಣಾಳಿಕೆಯನ್ನು ನೆನಪಿಸಿಕೊಳ್ಳುವುದು ನಿಮಿತ್ತ ಮಾತ್ರ.


  • ಕೇಶವ ಮಳಗಿ  (ಖ್ಯಾತ ಕತೆಗಾರರು, ಲೇಖಕರು, ಕವಿಗಳು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW