ಕಾಶಿ ಅನುಭವ (ಭಾಗ ೧೧) – ಡಾ.ಪ್ರಕಾಶ ಬಾರ್ಕಿ



ಜೈನರಿಗೂ, ಬೌದ್ಧರಿಗೂ “ಕಾಶಿ ಪವಿತ್ರ ತೀರ್ಥ ಕ್ಷೇತ್ರ”.ವಾರಣಾಸಿಯಲ್ಲಿ ಸಿಂಗಪುರಿ 11ನೇ ತೀರ್ಥಂಕರರಾದ ಶ್ರೇಯಾಂಶನಾಥರ ಜನ್ಮಸ್ಥಳ ಎಂದು ಜೈನ ಸಂಪ್ರದಾಯದಲ್ಲಿ ನಂಬಲಾಗಿದೆ. ಡಾ ಪ್ರಕಾಶ ಬಾರ್ಕಿ ಅವರ ಕಾಶಿ ಅನುಭವ ಓದುಗರನ್ನು ಸಾಕಷ್ಟು ಸೆಳೆದಿದ್ದಷ್ಟೇ ಅಲ್ಲ, ಕೆಲವರು ಕಾಶಿ ಅನುಭವ ಪಡೆಯಲು ಸ್ವತಃ ಕಾಶಿಯತ್ತ ಪ್ರಯಾಣ ಬೆಳೆಸಿದ್ದವರಿದ್ದಾರೆ, ಮುಂದೆ ಓದಿ…

ಕಾಶಿ ಶಿವನ ಆಸ್ಥಾನ. ಹುಟ್ಟು ಮತ್ತು ಸಾವಿನ ಬಂಧನದಿಂದ ಮುಕ್ತಗೊಳಿಸುವ “ಮುಕ್ತಿ ನಗರ” ಎಂಬುದು ಹಿಂದೂಗಳ ಆಳವಾದ ನಂಬಿಕೆ.

ಪವಿತ್ರ ಸಪ್ತಪುರಿಗಳಲ್ಲಿ ಒಂದಾದ, ಜ್ಯೋತಿರ್ಲಿಂಗವಿರುವ ಪವಿತ್ರ ತಾಣ. ಹಿಂದೂಗಳಿಗೆ ಅಷ್ಟೇ ಅಲ್ಲ, ಜೈನರಿಗೂ, ಬೌದ್ಧರಿಗೂ “ಕಾಶಿ ಪವಿತ್ರ ತೀರ್ಥ ಕ್ಷೇತ್ರ”.

ಜೈನರಲ್ಲಿ ತೀರ್ಥಂಕರರು ಪೂಜನೀಯ. ಜೈನ ಸಂಪ್ರದಾಯದಲ್ಲಿ ಪೂಜ್ಯ 24 ತೀರ್ಥಂಕರಿರುವ, ಹಿಂದೂ ಧರ್ಮದ ತಳಹದಿಯ ಮೇಲೆ ಸ್ಥಾಪಿತವಾದ “ಅಹಿಂಸಾ ಧರ್ಮ”ವಿದು.

ಫೋಟೋ ಕೃಪೆ : tripadvisor

ತೀರ್ಥಂಕರ ಎಂದರೆ “ಭೌತಿಕ ಜಗತ್ತಿನಿಂದ, ಬಂಧನಗಳಿಂದ ಬೇರ್ಪಟ್ಟವನು” ಎಂದರ್ಥ. ಧರ್ಮಭೋದನೆ, ಪಾಲನೆ ಮತ್ತು ಧರ್ಮ ಪ್ರಚಾರ ಇವರ ಪ್ರಮುಖ ಕಾರ್ಯಗಳು.
ನಾಲ್ಕು ಜೈನ ತೀರ್ಥಂಕರರು ಜನಿಸಿದ ಪವಿತ್ರ ನಗರ ಕಾಶಿಯಾಗಿದೆ.

  • ಸುಪಾರ್ಶ್ವನಾಥ (7ನೇ ತೀರ್ಥಂಕರರು)
  • ಚಂದ್ರಪ್ರಭು (8 ನೇ ತೀರ್ಥಂಕರರು)
  • ಶ್ರೇಯಾಂಸನಾಥ (11 ನೇ ತೀರ್ಥಂಕರರು)
  • ಪಾರ್ಶ್ವನಾಥ (23 ನೇ ತೀರ್ಥಂಕರರು)

ಒಟ್ಟು ನಾಲ್ಕು ತೀರ್ಥಂಕರರಿಗೆ ಜನ್ಮ ನೀಡಿದ ಧನ್ಯ ನೆಲ ಕಾಶಿಯದು. ಅವರು ನಡೆದಾಡಿದ ಕ್ಷೇತ್ರ ಜೈನರಿಗೆ ಪವಿತ್ರ ತೀರ್ಥ ಸ್ಥಳ.

ಫೋಟೋ ಕೃಪೆ : istock

ಸಮ್ಯಕ್ ದರ್ಶನ (ಸತ್ಯದಲ್ಲಿ ನಂಬಿಕೆ), ಸಮ್ಯಕ್ ಜ್ಞಾನ (ಉತ್ತಮ ಜ್ಞಾನ), ಸಮ್ಯಕ್ ಚಾರಿತ್ರ್ಯ (ಉತ್ತಮ ಚಾರಿತ್ರ್ಯ) ಎಂಬ ರತ್ನತ್ರಯ ಪಾಲಿಸುವ ಜೈನ ಸಂಪ್ರದಾಯದಲ್ಲಿ ಎರಡು ಪಂಗಡಗಳಿವೆ.

  • ಶ್ವೇತಾಂಬರರು
  • ದಿಗಂಬರರು

 ಶ್ವೇತಾಂಬರರು:
ಇವರು ಪಾರ್ಶ್ವನಾಥನ ಅನುಯಾಯಿಗಳು ಮತ್ತು ಬಿಳಿಯ ವಸ್ತ್ರವನ್ನು ಧರಿಸುವವರು.

ದಿಗಂಬರರು: ಇವರು ಮಹಾವೀರನ ಅನುಯಾಯಿಗಳು. ನಗ್ನರಾಗಿರುತ್ತಾರೆ. ದಿಗಂಬರ ಎಂದರೆ “ಆಕಾಶವನ್ನೇ ಧರಿಸಿದವರು” ಎಂದರ್ಥ. ಉಪವಾಸದ ಮೂಲಕ ದೇಹ ದಂಡಿಸುವುದು ಇವರ ಪದ್ದತಿಯಾಗಿದೆ.

ಫೋಟೋ ಕೃಪೆ : andbeyond

“ಸಾರನಾಥ”ದಲ್ಲಿ ಮತ್ತು ವಾರಣಾಸಿಯಲ್ಲಿ ಸಹ ಮಹಾವೀರ ತೀರ್ಥಂಕರ “ಧರ್ಮೋಪದೇಶ”ಗಳನ್ನು ನೀಡಿದ್ದರಂತೆ ಮತ್ತು ಇಲ್ಲಿಂದ ಅನತಿ ದೂರದ ಸಿಂಗಪುರಿ ಎಂಬ ಗ್ರಾಮದಲ್ಲಿ “ಜೈನ ದೇವಾಲಯವಿದ್ದು., ಈ ದೇವಾಲಯವು “ಧಮೇಕ ಸ್ತೂಪ”ದ ಬಳಿಯಿದೆ.

ಸಿಂಗಪುರಿ 11ನೇ ತೀರ್ಥಂಕರರಾದ ಶ್ರೇಯಾಂಶನಾಥರ ಜನ್ಮಸ್ಥಳ ಎಂದು ಜೈನ ಸಂಪ್ರದಾಯದಲ್ಲಿ ನಂಬಲಾಗಿದೆ . ಈ ಸ್ಥಳವು ಶ್ರೇಯಾಂಸನಾಥನ ಐದು ಕಲ್ಯಾಣಕಗಲ್ಲಿ(ಶುಭ ಘಟನೆಗಳು), ನಾಲ್ಕು ಕಲ್ಯಾಣಕಗಳು ಜರುಗಿದ ಸ್ಥಳವಾಗಿದೆ. ಅವು…

  • ಚ್ಯವನ್ ( ತೀರ್ಥಂಕರರು ಅವರ ತಾಯಿಯ ಗರ್ಭವನ್ನು ಪ್ರವೇಶಿಸುವುದು).
  • ಜನ್ಮ (ಜನನ )
  • ದೀಕ್ಷಾ (ಪರಿತ್ಯಾಗ).
  • ಕೈವಲ್ಯ ಜ್ಞಾನ (ಸರ್ವಶಾಸ್ತ್ರ ಅಧ್ಯಯನ).

ಫೋಟೋ ಕೃಪೆ : commons.wikimedia

ಶ್ರೇಯಾಂಸನಾಥ ತೀರ್ಥಂಕರರ ದೇವಾಲಯ ವಿಶಾಲವಾಗಿದ್ದು, ಶಾಂತಿ, ಏಕತಾನತೆಯ ದಿವ್ಯಾನುಭವ ನೀಡುವ ಶ್ರೀ ಕ್ಷೇತ್ರವಾಗಿದೆ . ದೇವಾಲಯದಲ್ಲಿ ಶ್ರೇಯಾಂಸನಾಥರ ವಿಗ್ರಹವಿದ್ದು, ಗೋಡೆಗಳ ಮೇಲೆ ಮಹಾವೀರ ತೀರ್ಥಂಕರರ ಜೀವನವನ್ನು ವರ್ಣರಂಜಿತ ಚಿತ್ರಗಳ ಮೂಲಕ ಬಿಂಬಿಸಲಾಗಿದೆ.

ಕಾಶಿಯ “ಭೆಲುಪುರ” 23 ನೇಯ ತೀರ್ಥಂಕರ ಪಾರ್ಶ್ವನಾಥರ ಜನ್ಮಸ್ಥಳವಾಗಿದ್ದು ಇಲ್ಲಿ ಸುಂದರವಾದ ಆಕರ್ಷಣೀಯ ಕೆತ್ತನೆ ಹೊಂದಿದ ದಿಗಂಬರ “ಪಾರ್ಶ್ವನಾಥ ಜೈನ ಮಂದಿರ”ವಿದೆ. ಈ ಮಂದಿರ ಜೈನ ಧರ್ಮೀಯರ ಪವಿತ್ರ ಕ್ಷೇತ್ರ.

ಈ ದೇವಾಲಯದೊಳಗೆ ಪಾರ್ಶ್ವನಾಥರ 75 ಸೆಂ. ಮೀ ಎತ್ತರದ ಕಪ್ಪು ಬಣ್ಣದ ದಿಗಂಬರ ಪಂಗಡದ ವಿಗ್ರಹವಿದ್ದು ಇದು 9 ರಿಂದ 11 ನೇ ಶತಮಾನದಷ್ಟು ಪುರಾತನವಾದದು.

60 ಸೆಂ. ಮೀ‌ ಎತ್ತರದ ಶ್ವೇತವರ್ಣದ ವಿಗ್ರಹವೂ ಇದ್ದು ಶ್ವೇತಾಂಬರ ಪಂಗಡಕ್ಕೆ ಸೇರಿದ್ದಾಗಿದೆ. ಆದ್ದರಿಂದ ಭೇಲುಪುರ ಮಂದಿರವು ಜೈನರ ಎರಡು ಪಂಗಡಗಳಾದ ಶ್ವೇತಾಂಬರ ಮತ್ತು ದಿಗಂಬರ ಪಂಗಡದವರಿಗೆ ಪವಿತ್ರ ತೀರ್ಥ ಕ್ಷೇತ್ರವಾಗಿದೆ.

ಗಂಗೆಯ ದಡದಲ್ಲಿ “ಜೈನ್ ಘಾಟ್” ಸಹ ಇದೆ.

ಫೋಟೋ ಕೃಪೆ : commons.wikimedia

ಜೈನ ಪಂಗಡದವರಿಗೆ ಕಾಶಿ ಹಿಂದೂಗಳ ತರಹ ಪರಮ ಪವಿತ್ರ ತೀರ್ಥಕ್ಷೇತ್ರವಾಗಿದೆ.

****

ಬೌದ್ಧ ಧರ್ಮ ಸ್ಥಾಪಕನಾದ ಬುದ್ಧನು ಜ್ಞಾನೋದಯದ ನಂತರ ಮೊದಲು ವಾರಣಾಸಿಯ ಸಾರನಾಥದ “ಜಿಂಕೆ ಉದ್ಯಾನವನ”ದಲ್ಲಿ ತನ್ನ ಅನುಯಾಯಿಗಳಾದ ಐದು ಜನ ಸನ್ಯಾಸಿಗಳಿಗೆ ಧರ್ಮೋಪದೇಶ ನೀಡಿದ. ಇದು “ಧರ್ಮ ಚಕ್ರಪ್ರವರ್ತನ” ಎಂದು ಹೆಸರಾಗಿದೆ. “ಬೌದ್ಧ ಸಂಘ”ವೂ ಸಹ ಆವಾಗಲೆ ಅಸ್ತಿತ್ವಕ್ಕೆ ಬಂದಿತು.

ಮುಂದೇ ಆ ಸನ್ಯಾಸಿಗಳು ಪ್ರಪಂಚದ ಉದ್ದಗಲಕ್ಕೂ ಸಂಚರಿಸಿ ಧರ್ಮ ಬೋಧನೆ, ಪ್ರಚಾರ ಮಾಡಿದರು.

ಭಾರತದಲ್ಲಿ ಭೌದ್ಧ ಧರ್ಮದ ಹುಟ್ಟು ಮತ್ತು ಅರಿವಿಗೆ “ಸಾರನಾಥ” ಪ್ರಮುಖ ಕಾರಣವಾಗಿದೆ. ಇಲ್ಲಿ ಬುದ್ಧ ಬೌದ್ಧ ಧರ್ಮದ ಮೊದಲ 5 ತತ್ವಗಳು, 4 ಉದಾತ್ತ ಸತ್ಯಗಳು ಮತ್ತು ಅಷ್ಟ ಮಾರ್ಗವನ್ನು ತಿಳಿಸಿದನು. ನಂತರ ಅಶೋಕ ಚಕ್ರವರ್ತಿಯು ಇಲ್ಲಿ ಅನೇಕ ಸ್ತೂಪಗಳನ್ನು ಕಟ್ಟಿದನು.

1930 ರಲ್ಲಿ ಮಾಡಲಾದ “ಭಾರತೀಯ ಪುರಾತತ್ವ ಸರ್ವೇ” ಪ್ರಕಾರ, ಅನೇಕ ಸ್ಮಾರಕಗಳು, ರಚನೆಗಳು ಇಲ್ಲಿ ದೊರೆತವು. ಅವುಗಳನ್ನ ಇಲ್ಲಿನ ಸಂಗ್ರಹಾಲಯದಲ್ಲಿ ಇಡಲಾಗಿದೆ. ಇದು 3 ರಿಂದ 12 ನೇ ಶತಮಾನದ ಎಲ್ಲಾ ಸ್ಮಾರಕಗಳನ್ನು ಮತ್ತು ಬೌದ್ಧ ಕಲೆಗಳ ಮಾದರಿಯನ್ನು ಹೊಂದಿದೆ. ಮ್ಯೂಸಿಯಂ 5 ಗ್ಯಾಲರಿ ಮತ್ತು 2 ವರಾಂಡಗಳನ್ನು ಹೊಂದಿದೆ.



ಬುದ್ಧನ ಚರಣ ಸ್ಪರ್ಷವಾದ “ಕಾಶಿಯ” ಸಾರನಾಥವು ಭಾರತ ಮತ್ತು ವಿದೇಶದ ಬೌದ್ಧ ಅನುಯಾಯಿಗಳಿಗೆ ತೀರ್ಥ ಕ್ಷೇತ್ರವಾಗಿದೆ.

ಥೈಲ್ಯಾಂಡ್, ಜಪಾನ್, ಟಿಬೆಟ್, ಶ್ರೀಲಂಕಾ ಮತ್ತು ಮಾಯನ್ಮಾರ್ ದೇಶಗಳ ಬೌದ್ಧ ಧರ್ಮೀಯರು ತಮ್ಮ ದೇಶದ ವಿಶಿಷ್ಟವಾದ ಶೈಲಿಗಳಲ್ಲಿ ದೇವಾಲಯಗಳು ಮತ್ತು ಮಠಗಳನ್ನು ಸ್ಥಾಪಿಸಿದರು. ಹೀಗಾಗಿ, ಪ್ರವಾಸಿಗರಿಗೆ ಮತ್ತು ತೀರ್ಥ ಯಾತ್ರೆಯ ಭಕ್ತರಿಗೆ ವಿವಿಧ ದೇಶಗಳ ಸಂಸ್ಕೃತಿಗಳ ಬೌದ್ಧ ವಾಸ್ತುಶಿಲ್ಪದ ಅವಲೋಕನವನ್ನು ಅನುಭವಿಸಲು ಅವಕಾಶವನ್ನು ನೀಡಿದಂತಾಗಿದೆ.
ಇಂಡೋ-ಥಾಯ್ ಜಂಟಿ ಪ್ರಯತ್ನಗಳಿಂದ ನಿರ್ಮಿಸಲಾದ ಬುದ್ಧನ 24 ಮೀಟರ್ ಎತ್ತರದ ಬೌದ್ಧ ಪ್ರತಿಮೆ ಆಕರ್ಷಕ ಮತ್ತು ಪೂಜ್ಯನೀಯ.

ಫೋಟೋ ಕೃಪೆ : raveeshkumar

ಕಳಿಂಗ ಯುದ್ದದ ಗೆಲುವಿನ ಬಳಿಕ ಆದ ಸಾವು ನೋವಿನ ಘಟನೆ ಬಳಿಕ ಅಹಿಂಸಾ ಮಾರ್ಗವನ್ನ ಹಿಡಿಯಲು ಮೌರ್ಯ ಸಾಮ್ರಾಜ್ಯದ ಪ್ರಬಲ ಸಾಮ್ರಾಟ ಅಶೋಕ ಚಕ್ರವರ್ತಿ ನಿರ್ಧರಿಸಿದ. ಈ ಹಿನ್ನೆಲೆಯಲ್ಲಿ ಆತ ಬೌದ್ದ ಧರ್ಮಕ್ಕೂ ಮತಾಂತರ ಹೊಂದಿದ. ಬಳಿಕ ಶಾಂತಿ, ಅಹಿಂಸೆಯ ಜೀವನದ ಹಾದಿಯಲ್ಲಿ ನಡೆದ ಎನ್ನುವುದು ಈಗ ಇತಿಹಾಸ.ಹೀಗೆ ಬೌದ್ದ ಮತ ಸೇರಿದ ಅಶೋಕ ಬೌದ್ಧ ತತ್ವ ಆದರ್ಶಗಳನ್ನ ಜನರಿಗೆ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ. ಹೀಗೆ ರಚನೆಯಾದ ಹಲವು ಸ್ತೂಪಗಳಲ್ಲಿ ಸಾರಾನಾಥದ ಸ್ತೂಪವೂ ಒಂದು.ಇಲ್ಲಿನ ನಾಲ್ಕು ಸಿಂಹಗಳು, ವೃಷಭ, ಕುದುರೆ, ಆನೆ ಹಾಗೂ ಚಕ್ರವನ್ನೊಳಗೊಂಡ ಪೀಠವನ್ನೇ ಭಾರತ ಸರ್ಕಾರ 1950 ಜನವರಿ26 ರಂದು ತನ್ನ ರಾಷ್ಟ್ರೀಯ ಲಾಂಛನವನ್ನಾಗಿಸಿ ಘೋಷಿಸಿತು. ಅಂದಿನಿಂದ ಅಶೋಕ ಚಕ್ರ ಲೋಕಮಾನ್ಯವಾಗಿ ವಿಶ್ವ ವಿಖ್ಯಾತಿಯನ್ನ ಪಡೆದುಕೊಂಡಿತು.

ಹೀಗೆ ಬೌದ್ಧ ಧರ್ಮೀಯರ ಪುಣ್ಯಕ್ಷೇತ್ರವಾಗಿದೆ ಕಾಶಿ. ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಪೂಜ್ಯ ಭಾವನೆಯ ಪವಿತ್ರ ಭುವಿ ಕಾಶಿ.

ಕಾಶಿ ಎಂದೆಂದಿಗೂ ಎಲ್ಲರಿಗೂ ಪವಿತ್ರ ತೀರ್ಥಕ್ಷೇತ್ರ. ಪದೆ ಪದೆ ತನ್ನೆಡೆಗೆ ಸೆಳೆಯುವ ಪ್ರಬಲ ಚುಂಬಕ ಶಕ್ತಿ ಕೇಂದ್ರ.

ಜೈ ಭೋಲೆನಾಥ…


  • ಡಾ. ಪ್ರಕಾಶ ಬಾರ್ಕಿ   (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading