ಸ್ವಾಭಿಮಾನದ ಬದುಕನ್ನು ಕಂಡ ತುಂಬಜ್ಜಿ …




ಸ್ವಾಭಿಮಾನದ ಬದುಕನ್ನು ತೋರಿಸಿಕೊಟ್ಟ ತುಂಬಜ್ಜಿ, ಈಗ ನಮ್ಮ ನಡುವೆ ಇಲ್ಲ. ಶತಾಯುಷಿ ತುಂಬಜ್ಜಿ ಕುರಿತು ಡಾ.ಯುವರಾಜ್ ಹೆಗಡೆ ಅವರು ಬರೆದ ಲೇಖನ. ಮುಂದೆ ಓದಿ …

“ತುಂಬೆ” ( ಹೂವು).. ಆಗಿನ ಕಾಲದಲ್ಲಿ ಅದೆಷ್ಟು ಚೆಂದದ ಹೆಸರು ಇಟ್ಟಿದ್ದಾರೆ ಈ ಅಜ್ಜಿಗೆ. ಅದು 2013 ರ ಇಸವಿ . ಸಾಲೂರು ಪಶುಚಿಕಿತ್ಸಾಲಯದಲ್ಲಿ ಸಹಾಯಕರು ಯಾರೂ ಇಲ್ಲದೆ ಏಕೆ ಪಾತ್ರಾಭಿನಯ ನಿರ್ವಹಿಸುವಾಗ ಆಸ್ಪತ್ರೆಯಲ್ಲಿ ಕಸದ ರಾಶಿ ತುಂಬಿ ನನಗೇ ನಾಚಿಕೆ ಬರುವಂತಿತ್ತು. ಆಗ ಅಲ್ಲಿಗೆ ಬಂದ ಅಜ್ಜಿ, ” ಹೋಯ್ ನೀವ್ ಹೊಸುಬ್ರ? ಹಿಡಿ ಕೊಡಿ ಕಸಹೊಡೀತೀನಿ ಎಂದವರೇ, ಬಾಗಿಲ ಮೂಲೆಯಲ್ಲಿದ್ದ ಪೊರಕೆಯನ್ನು ತಗೊಂಡು ಕಸಹೊಡೆದು….ಹಂ ಹತ್ತು ರೂಪಾಯಿ ಕೊಡಿ” ಎಂದರು. ನಾನು ಮರುಮಾತನಾಡದೆ ಹತ್ತು ರೂಪಾಯಿ ಕೊಟ್ಟು ಅಜ್ಜಿಯ ಸ್ವಾಭಿಮಾನದ ಬದುಕು ಕಂಡು ನಿಬ್ಬೆರಗಾಗಿದ್ದೆ. ಹೀಗೆ #ಅಜ್ಜಿ ಆಗಾಗ ಬಂದು ಕಸ ಹೊಡೆದು 10 ರೂಪಾಯಿ ಪಡೆಯುತಿದ್ದರು. ಒಂದು ದಿನ ಕೇಳಿದೆ. ಅಜ್ಜಿ ಹತ್ತು ರೂಪಾಯಲ್ಲಿ ಏನು ಮಾಡುವಿರಿ ಎಂದು. “ಅಯ್ಯೋ ಎಂಥ ಬತ್ತೆ ಹತ್ತು ರೂಪಾಯಿಗೆ. ಒಂದು ಎಸಲು ಹೊಗೆ ಸೊಪ್ಪಿಗೆ ಅಷ್ಟೆ ” ಎಂದಿದ್ದರು. ಅದಾದ ನಂತರ ಸಾಲೂರಿನ ಜನರೊಂದಿಗೆ ಬೆರೆತು ಅಜ್ಜಿಯ ಬಗ್ಗೆ ವಿಚಾರಿಸಿದಾಗ ತಿಳಿದದ್ದು ಅಜ್ಜಿಗೆ ಈಗ 104 ವರ್ಷಗಳೆಂದು.

ಈ ಶತಾಯುಷಿ ಅಜ್ಜಿಯ ತವರು #ಮೂಡಬಿದ್ರೆ (ಬುಲಾಯಿ ಎಂಬ ಗ್ರಾಮ )ಅಂತೆ. ಸುಮಾರು 16-18 ವರ್ಷಗಳಿದ್ದಾಗ ಬಹುಶಃ ಮದುವೆಯ ನಂತರ ತೀರ್ಥಹಳ್ಳಿಯ ಸಾಲೂರು ( ಕೊಂಡ್ಲೂರು) ನಲ್ಲಿ ಬಂದು ನೆಲೆಯೂರಿದರು. ಪತಿ ಕರಿಯ, ನಾಲ್ಕು ಜನ ಮಕ್ಕಳಲ್ಲಿ ಮೂರು ಗಂಡು, ಒಂದು ಹೆಣ್ಣು. ಮಕ್ಕಳ ಹೆಸರು ಬಾಬು, ಸೀನ, ಸುಬ್ಬ, ನಾಗಿ. ಈಗಾಗಲೆ ಪತಿ ಮತ್ತು ನಾಲ್ಕೂ ಮಕ್ಕಳು ವಯೋಸಹಜ ಮರಣವನ್ನಪ್ಪಿದ್ದಾರೆ.

ಸಾಲೂರಿನ ಅತ್ಯಂತ ಹಿರಿಯರನ್ನು ಕಂಡು ಕೇಳಿದರೂ ಅಜ್ಜಿ ನಾವು ಹುಟ್ಟುವುದಕ್ಕಿಂತ ಮುಂಚೆಯೇ ಇದ್ದರು ಎನ್ನುವವರೇ ಹೊರತು ತಾವು ಹುಟ್ಟಿದ ನಂತರ ಅಜ್ಜಿ ಬಂದದ್ದು ಎನ್ನುವವರು ಯಾರೂ ಇಲ್ಲ. ಅಂತೂ ಅಳೆದೂ ತೂಗಿ ಅವರ ಸಮಕಾಲೀನರ ಬಗ್ಗೆ ವಿಷಯ ಕಲೆಹಾಕಿದಾಗ ನಮಗೆ ತಿಳಿದದ್ದು ಅಜ್ಜಿಗೆ ಈಗ 104 ವರ್ಷಗಳೆಂದು.!!!!.

ಈಗಲೂ ಅಜ್ಜಿಗೆ ತೀಕ್ಷ್ಣವಾದ ನೆನಪಿನ ಶಕ್ತಿ ಇದೆ. ಸಾಲೂರಿನ ಎಲ್ಲರ ಮನೆ ಮತ್ತು ದಾರಿ ನೆನಪಿದೆ. ಕನ್ನಡ ಹಾಗೂ ತುಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವರು. ದಿನವೂ ಏನಿಲ್ಲ ಅಂದರೂ 8-10 ಕಿ.ಮೀ ನಡೆದು ಸಾಗುತ್ತಾರೆ. ಪ್ರತಿ ದಿನದ ಊಟ ಗಂಜಿ ಮತ್ತು ಒಣ ಮೀನಿನ ಚಟ್ನಿ.

ಬಾಯಿಗೆ ಸದಾ ಎಲೆಅಡಿಕೆ – #ಹೊಗೆ_ಸೊಪ್ಪು ಇರಲೇ ಬೇಕು. ಸಾಲೂರಿನ ಜನರು ಕೂಡ ತುಂಬಜ್ಜಿಗೆ ಬಹಳ ಪ್ರೀತಿ ತೋರುತ್ತಾರೆ. ಮದ್ಯಾಹ್ನ ಕಂಡಲ್ಲಿ ಊಟ ಹಾಕಿಯೇ ಬೇಳ್ಕೊಡುವುದು, ಅಂಗಡಿ ಕಡೆ ಬಂದಾಗ ಎಲೆ ಅಡಿಕೆ , ಹೊಗೆ ಸೊಪ್ಪು ಕೊಡಿಸಿಯೇ ಕಳಿಸುವುದು. ಕಿಮ್ಮನೆಯವರು ಬಂದರೆ ನೂರು ರೂಪಾಯಿ ವಸೂಲಿಯೂ ಆಗತ್ತೆ .



ಬಹುಶಃ ಆಗಿನ ಕಾಲದ ಮಾಲಿನ್ಯರಹಿತ ಗಾಳಿ, ನೀರು, ಆಹಾರ,ಪರಿಸರ, ಅಜ್ಜಿಯ ಮುಗ್ಧತೆ, ಹೃದಯ ಶ್ರೀಮಂತಿಕೆ ತೋರುವ ಸಾಲೂರಿನ ಜನರು, ಅವರ ಪೃಕೃತಿ ಸಹಜ ಬದುಕು, ದುಡಿಮೆ, ಸ್ವಾಭಿಮಾನದ ಬದುಕು ಅವರ ದೀರ್ಘಾಯುಷ್ಯದ ಗುಟ್ಟು ಇರಬಹುದು.

ಇವರನ್ನು ನೋಡಿದ ಮೇಲೆ ನನಗನ್ನಿಸುವುದು… ಉತ್ತಮ ಆರೋಗ್ಯ ಪಡೆಯಲು ಆಹಾರ ಪದ್ದತಿಯೊಂದೇ ಕಾರಣವಾಗಲಾರದು. ಏಕೆಂದರೆ ಜೀವನ ಪರ್ಯಂತ ಕೂಲಿ ಮಾಡಿ ಜೀವನ ನಡೆಸಿದ ಅಜ್ಜಿ ಒಳ್ಳೆಯ ಆಹಾರ ಸವಿದು ಆರೋಗ್ಯ ವೃದ್ದಿಸಿಕೊಂಡದ್ದಲ್ಲ. ಅದರ ಜೊತೆಗೆ ನಮ್ಮಲ್ಲಿ ನಿಶ್ಕಲ್ಮಷ ಮನಸ್ಸು, ಪ್ರೀತಿ, ದುರಾಲೋಚನೆ – ಹೆಚ್ಚು ದೂರಾಲೋಚನೆ ಎರಡೂ ಇಲ್ಲದ ಜೀವನ ಪದ್ದತಿ, ಮೆದುಳು- ಮನಸ್ಸಿನ ಮೇಲಾಗುವ ಒತ್ತಡಗಳು, ಆರೋಗ್ಯಕರ ದುಡಿಮೆ.ಇಂದು ಇಂದಿಗೆ, ನಾಳೆ ನಾಳೆಗೆ ಎನ್ನುವಂತಿದ್ದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಪಾತ್ರರಾಗಿದ್ದ ತುಂಬಜ್ಜಿ ಈಗ ಇಲ್ಲ, ಆದರೆ ಅವರ ಸ್ವಾಭಿಮಾನದ ಬದುಕು ಮಾತ್ರ ಎಲ್ಲರಿಗೂ ಮಾದರಿಯಾಗಿದೆ.


  • ಡಾ.ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading