ನಾಡಿನ ಚರಿತೆಯದು ಬರಿ ಇತಿಹಾಸವಲ್ಲ, ಮಣ್ಣಿನ ಉಜ್ವಲ ಸಂಸ್ಕೃತಿಯ ಖಜಾನೆ…ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಕರ್ನಾಟಕದ ಸೌಂದರ್ಯ, ತಪ್ಪದೆ ಮುಂದೆ ಓದಿ…
ಕರ್ನಾಟಕವೆಂದರೆ ಬರಿ ನಾಡಲ್ಲ
ಸಾಹಿತ್ಯ ಶಿಲ್ಪ ಕಲೆಗಳ ತವರು
ಕನ್ನಡಿಗರೆಂದರೆ ಬರಿ ಜನರಲ್ಲ
ಸ್ನೇಹ ಸೌಹಾರ್ದತೆ ಬಯಸುವ ಸುತರು
ಕನ್ನಡವೆಂದರೆ ಬರಿ ನುಡಿಯಲ್ಲ
ಸಾಗರ ತಳದ ಮುತ್ತು
ಕನ್ನಡಿಗರ ಶೌರ್ಯ ಬರಿ ಕೆಚ್ಚಲ್ಲ
ನೂರು ಸಿಂಹಗಳ ತಾಕತ್ತು
ಕನ್ನಡ ನೆಲವಿದು ಬರಿ ಬಯಲಲ್ಲ
ಬೆಳ್ಳಿ ಬಂಗಾರವಡಗಿಹ ಬೀಡು
ಕನ್ನಡ ಭೂಮಿ ಬರಿ ಮಣ್ಣಲ್ಲ
ತೇಗ ಶ್ರೀಗಂಧ ಬೆಳೆಯುವ ಕಾಡು
ತುಂಗೆ, ಭದ್ರೆ, ಕಾವೇರಿ ಬರಿ ನದಿಗಳಲ್ಲ
ನಾಡಿನ ರೈತರ ಉಸಿರು
ಮಲೆನಾಡು ಬರಿ ಬೆಟ್ಟಗಳಲ್ಲ
ಕವಿ ರಸಿಕರಿಗದು ಸ್ಫೂರ್ತಿಯ ಜಾಡು
ಕೋಗಿಲೆ ಕುಹೂ ಕುಹೂ ಬರಿ ಕೂಗಲ್ಲ
ಕನ್ನಡದಿಂಪಿನ ರಾಗದ ಹಾಡು
ನಾಡಿನ ಚರಿತೆಯದು ಬರಿ ಇತಿಹಾಸವಲ್ಲ
ಮಣ್ಣಿನ ಉಜ್ವಲ ಸಂಸ್ಕೃತಿಯ ಖಜಾನೆ.
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
