ಕಾಶಿ ಕ್ಷೇತ್ರದಲ್ಲಿ ಪುನರುಜ್ಜೀವನಗೊಂಡಿರುವ ವಿಶ್ವನಾಥ ಮಂದಿರ ಲೋಕಾರ್ಪಣೆಗೊಂಡಿದ್ದು, ಈ ಸಂದರ್ಭದಲ್ಲಿ, ನಾಲ್ಕು ವರ್ಷಗಳ ಹಿಂದೆ ಲೇಖಕ ವ್ಯೋಮಕೇಶ ಅವರು ಕಾಶಿಗೆ ಹೋಗಿದ್ದು, ಆಗ ಅವರು ಕಂಡಿದ್ದು ಮತ್ತು ಅವರಿಗೆ ಆದ ಅನುಭವಗಳನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕಾಶಿ ಮತ್ತು ಗಂಗೆ
ಗಂಗಾ ನದಿ ಮತ್ತು ಕಾಶಿ ಅನ್ನುವ ಸ್ಥಳ ಸಾವಿರಾರು ವರ್ಷಗಳಿಂದ ಇಡೀ ಭಾರತ ದೇಶ ಮತ್ತು ಜಗತ್ತಿನ ಹಲವು ದೇಶಗಳ ಜನರನ್ನು ಸತತವಾಗಿ ತಮ್ಮತ್ತ ಸೆಳೆಯುತ್ತಲೇ ಇರುವ ಎರಡು ಪ್ರಮುಖ ಆಕರ್ಷಣೆಗಳು. “ಗಂಗಾ ಸ್ನಾನ ತುಂಗಾ ಪಾನ” ಅನ್ನುವುದು ಕನ್ನಡ ನಾಡಿನಲ್ಲಿ ಜನಜನಿತವಾಗಿರುವ ಮಾತು.
ಸಿನೆಮಾಗಳಲ್ಲಿ ಕಂಡ ಕಾಶಿ
ನಮ್ಮ ಊರಿನ ಸಮೀಪದ ಶಿವಗಂಗೆಯೂ ಸೇರಿದಂತೆ ಕರ್ನಾಟಕದ ಹಲವು ಪುಣ್ಯ ಕ್ಷೇತ್ರಗಳನ್ನು ದಕ್ಷಿಣ ಕಾಶಿ ಎಂದು ಕರೆಯುವ ವಾಡಿಕೆ, ಕಾಶಿ ಬಗ್ಗೆ ನನ್ನಲ್ಲಿ ಒಂದಿಷ್ಟು ಕುತೂಹಲ ಕೆರಳಿಸಿತ್ತು. ಇದರ ಜೊತೆಗೆ, ಮೇರುನಟ ಡಾ.ರಾಜ್ ಕುಮಾರ್ ಅವರು ನಟಿಸಿದ್ದ ಮೂರು ಸಿನೆಮಾಗಳಲ್ಲಿನ ದೃಶ್ಯಗಳು ಮತ್ತು ಹಾಡುಗಳ ಮೂಲಕ, ಬಾಲ್ಯದಿಂದಲೂ ನನ್ನದೇ ಆದ ರೀತಿಯ ಕಾಶಿ ನಗರವನ್ನು ಕಲ್ಪಿಸಿಕೊಂಡಿದ್ದೆ.
ಹುಣಸೂರು ಕೃಷ್ಣಮೂರ್ತಿಯವರ ನಿರ್ದೇಶನದ ಸತ್ಯಹರಿಶ್ಚಂದ್ರ ಸಿನಿಮಾ ಮತ್ತು ಅದರಲ್ಲಿನ “ನಮೋ ಭೂತನಾಥ ನಮೋ ದೇವ ದೇವ” ಹಾಡು, ಆನಂತರ, ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ, ಡಾ.ರಾಜ್ ಅವರು ಕಾಶಿಯ ಘಾಟ್ ನಲ್ಲಿ ನಿಂತು “ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ” ಎಂದು ಹಾಡುವುದು, ಮತ್ತೆ ಜೀವನ ಚೈತ್ರದ “ನಾದಮಯ” ಹಾಡಿನಲ್ಲಿ ಕಾಣಸಿಕ್ಕಿದ ಗಂಗಾ ತಟದ ಘಾಟ್ ಗಳು, ನನ್ನಲ್ಲಿ ಕಾಶಿಯ ಬಗ್ಗೆ ಒಂದು ರೀತಿಯ ದಿವ್ಯಾಕರ್ಷಣೆಯನ್ನು ಮೂಡಿಸಿದ್ದವು. ಹೀಗಾಗಿ, ಗಂಗೆ ಮತ್ತು ಕಾಶಿ ಅನ್ನುವ ಪದಗಳು, ಗುಂಗಾಗಿ ಸದಾ ನನ್ನನ್ನು ಕಾಡುತ್ತಲೇ ಇದ್ದವು. ಆಗೀಗ, ಕಾಶಿ ಯಾತ್ರೆ ಬಗ್ಗೆಯೇ ಕನವರಿಸುತ್ತಿದ್ದರೂ ಕೂಡ ಅದು ಕೈಗೂಡಿರಲಿಲ್ಲ.

ಕಾಶಿಗೆ ಬರುವಿರೇ…?
ಈ ನಡುವೆ ಕಾಶಿಗೆ ಹೋಗಿ ಬರೋಣ, ಬರುತ್ತೀರೇ?ಎಂದು ಜೊತೆಯಲ್ಲಿ ಕೆಲಸ ಮಾಡುವ ಹಲವರನ್ನು ಮತ್ತು ಇತರೆ ಸ್ನೇಹಿತರನ್ನೂ ಕೇಳಿದೆ, ಆದರೆ ಅವರು ಯಾರೂ ಹೂಂ ಅನ್ನಲಿಲ್ಲ. “ಕಾಶಿ ಯಾತ್ರೆ ಅನ್ನುವುದು, ಹಿರಿಯ ನಾಗರಿಕರು ಅಥವ ಇನ್ನೇನು ಸಾವು ಸಮೀಪಿಸುತ್ತಿರುವ ವೃದ್ಧರು ಕೈಗೊಳ್ಳಬೇಕಾದ ಯಾತ್ರೆಯೇ ಹೊರತು ನಮಗಲ್ಲ” ಎಂದು ಬಹುತೇಕ ಯುವಕರು ಮತ್ತು ಮಾಜಿ ಯುವಕರೂ ಭಾವಿಸಿದ್ದಂತೆ ಕಂಡುಬಂತು. ಇದರ ಜೊತೆಗೆ ಕೆಲವರಂತೂ ಕಾಶಿಯಲ್ಲಿನ ಕಸದ ರಾಶಿ, ಗಂಗೆಯಲ್ಲಿ ತೇಲುವ ಅರೆಬೆಂದ ಹೆಣಗಳು ಇತ್ಯಾದಿಗಳ ಚಿತ್ರಗಳನ್ನು ತೋರಿಸಿ, ನನ್ನನ್ನು ನಿರುತ್ಸಾಹಗೊಳಿಸಿದರು. ಇಷ್ಟಾದರೂ ಕೂಡ, ‘ಅದು ಹೇಗೇ ಇದ್ದರೂ ಕೂಡ ಕಾಶಿಗೆ ಹೋಗಲೇ ಬೇಕು’ ಎಂಬ ಹಂಬಲ ತೀವ್ರವಾಯಿತು. ಹೀಗಾಗಿ, ಒಬ್ಬನೇ ಹೊರಡಲು ನಿಶ್ಚಯಿಸಿ 2017ರ ಏಪ್ರಿಲ್ ತಿಂಗಳಲ್ಲಿ ಮೈಸೂರು-ವಾರಣಾಸಿ Express ರೈಲಿನ 3AC ದರ್ಜೆ ಬೋಗಿಯಲ್ಲಿ ಟಿಕೆಟ್ ಕಾಯ್ದಿರಿಸಿದೆ. ಆ ನಂತರ ಒಂದಿಷ್ಟು ತಯಾರಿ ನಡೆಸಿ, ನಿಗದಿತ ದಿನ ಹೊರಟೆ.
ರೈಲಿನಲ್ಲಿ ಕಾಶಿಯತ್ತ ಪ್ರಯಾಣ…
ಮೈಸೂರಿನಿಂದ ಹೊರಟು ಬಂದ ರೈಲನ್ನು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ(ಸಿಟಿ ರೈಲ್ವೇ ನಿಲ್ದಾಣ)ದಲ್ಲಿ ಹತ್ತಿದೆ. ಮೂರು ನಾಲ್ಕು ಲೀಟರ್ ಕುಡಿಯುವ ನೀರು, ಎರಡು ದಿನಕ್ಕಾಗುವಷ್ಟು ಒಣ ಚಪಾತಿ, ಚಟ್ನಿ, ಓದಲು ಒಂದೆರಡು ಪುಸ್ತಕಗಳು, ದಿನಚರಿ ಪುಸ್ತಕ ಜೊತೆಗಿದ್ದವು. ರೈಲು ಯಶವಂತಪುರ ಬಳಿಕ, ನನ್ನ ಹುಟ್ಟೂರು ಇಸುವನಹಳ್ಳಿಗೆ ಹತ್ತಿರದ ದೊಡ್ಡಬೆಲೆ ನಿಲ್ದಾಣ ದಾಟುತ್ತಿದ್ದಂತೆ, ಎಲ್ಲಿಗೇ ಹೋದರೂ ಕೂಡ ಮತ್ತೆ ಇಲ್ಲಿಗೆ ಬರುವೆ ಎಂಬ ವಿಶ್ವಾಸದ ಭಾವನೆ ಮೂಡಿ, ಖುಷಿಯಾಯಿತು. ಆ ನಂತರ ತುಮಕೂರು, ಅರಸೀಕೆರೆ, ಕಡೂರು, ಚಿತ್ರದುರ್ಗ, ಬಳ್ಳಾರಿ, ಗುಂತಕಲ್, ಮಂತ್ರಾಲಯ ರಸ್ತೆ ನಂತರ ರಾಯಚೂರು ತಲುಪುವಷ್ಟರಲ್ಲಿ ರಾತ್ರಿ 9.30. ಆ ವೇಳೆಗಾಗಲೇ ನಾನಿದ್ದ ಬೋಗಿಯ ಎಲ್ಲ ಸೀಟುಗಳನ್ನು ಮತ್ತು ಅಲ್ಲಿದ್ದ ಪ್ರತಿಯೊಂದು ಇಂಚು ಜಾಗವನ್ನು ಪ್ರಯಾಣಿಕರು ಮತ್ತು ಅವರ ಲಗೇಜುಗಳು ಆಕ್ರಮಿಸಿದ್ದವು.
ಕೆಲವರು ತಂದಿದ್ದ ಲಗೇಜುಗಳ ಗಾತ್ರ ಮತ್ತು ಸಂಖ್ಯೆಯನ್ನು ನೋಡಿದಾಗ ಇವರೇನು ಪ್ರಯಾಣ ಮಾಡುತ್ತಿದ್ದಾರೋ ಅಥವ ತಮ್ಮ ಮನೆಯನ್ನೇ ಖಾಲಿ ಮಾಡಿ, ಎಲ್ಲ ವಸ್ತುಗಳನ್ನೂ ತಮ್ಮ ಜೊತೆಗೆ ತೆಗೆದುಕೊಂಡು ವಲಸೆ ಹೋಗುತ್ತಿದ್ದಾರೋ ಅನ್ನಿಸಿತ್ತು. ನನ್ನ ಜೊತೆಗಿದ್ದವರಲ್ಲಿ ಕನ್ನಡ ಭಾಷಿಕರು ಯಾರೂ ಇರಲಿಲ್ಲವಾದದ್ದರಿಂದ ಮತ್ತು ಅದು ರೈಲಿನಲ್ಲಿ ಮೊದಲ ದಿನವಾಗಿದ್ದರಿಂದ ಹೆಚ್ಚೇನೂ ಮಾತುಕತೆ ನಡೆಯಲಿಲ್ಲ. ಮರುದಿನ ಬೆಳಕು ಹರಿಯುವಷ್ಟರಲ್ಲಿ ಯಾದಗಿರಿ, ವಾಡಿ, ಕಲ್ಬುರ್ಗಿ, ಸೊಲ್ಲಾಪುರ ಜಂಕ್ಷನ್ ಗಳು ಬಂದು ಹೋಗಿದ್ದವು. ಬೆಳಕು ಹರಿಯುತ್ತಿದ್ದಾಗ ದೌಂಡ್ ಜಂಕ್ಷನ್ ಬಂತು. ಆ ಬಳಿಕ ಅಹಮದ್ ನಗರ, ಕೊಪರ್ ಗಾಂವ್ ಮತ್ತು ಮನ್ಮಾಡ್ ತಲುಪುವಷ್ಟರಲ್ಲಿ ಮಧ್ಯಾಹ್ನ.
ರೈಲಿನಲ್ಲಿ ಆಹಾರ ಸಿಗುತ್ತಿದ್ದರೂ ಗುಣಮಟ್ಟದ್ದಾಗಿದ್ದಂತೆ ಕಂಡುಬರಲಿಲ್ಲ, ಹೀಗಾಗಿ ತಂದಿದ್ದನ್ನೇ ತಿಂದು ಸಾಕಾದರೂ ಬೇರೆ ದಾರಿ ಇರಲಿಲ್ಲ. ಈ ನಡುವೆ ಜೊತೆಗಿದ್ದ ಕೆಲವರು, ಅದರಲ್ಲೂ ಮಕ್ಕಳೊಂದಿಗಿದ್ದ ರಾಜಸ್ತಾನ ಮೂಲದ ಕುಟುಂಬವಂತೂ ತಾವು ತಂದಿದ್ದ ಹತ್ತಾರು ಬಗೆಯ ಪ್ಲಾಸ್ಟಿಕ್ ಪೊಟ್ಟಣದಲ್ಲಿದ್ದ ತಿನಿಸುಗಳನ್ನು ಪ್ರತಿ 15 ನಿಮಿಷಕ್ಕೊಮ್ಮೆ ಒಂದೇ ಸಮನೆ ತಿನ್ನುತ್ತಾ, ಪರಿಸರವನ್ನು ಗಲೀಜುಮಾಡುತ್ತಾ, ತಿನ್ನುವುದಕ್ಕಾಗಿಯೇ ರೈಲು ಹತ್ತಿದವರಂತೆ ಕಂಡುಬರುತ್ತಿದ್ದರು.
ಖಾಂಡ್ವಾ, ಇಟಾರ್ಸಿ ಜಂಕ್ಷನ್ ದಾಟುವಷ್ಟರಲ್ಲಿ ರಾತ್ರಿ 10.30. ಅಷ್ಟುಹೊತ್ತಿಗೆ ನಾನು ರೈಲಿನಲ್ಲಿ 36 ಗಂಟೆಗಳನ್ನು ಕಳೆದಿದ್ದೆ. ಒಂದೇಸಮನೆ ಹವಾನಿಯಂತ್ರಿತ ಬೋಗಿಯಲ್ಲಿ ಕುಳಿತಿದ್ದರಿಂದ, ಶೀತವಾಗಿ ತಲೆನೋಯುತ್ತಲೇ ಇತ್ತು.
ಹೆಸರಿಗೆ Express ಅನ್ನಿಸಿಕೊಂಡಿದ್ದರೂ ಕೂಡ, ರೈಲು ಮಾತ್ರ ಬೆಂಗಳೂರಿನ BMTC ಬಸ್ ನಷ್ಟೇ ವೇಗದಲ್ಲಿ ಓಡುತ್ತಿದ್ದಂತೆ ಭಾಸವಾಗುತ್ತಿತ್ತು. ಆ ಹೊತ್ತಿಗಾಗಲೇ ಮೋದಿಯವರು Bullet Train ಬಗ್ಗೆ ಮಾತನಾಡುತ್ತಿದ್ದರೂ, ಈ ರೈಲು Bullock Train ಅಂದರೆ ಎತ್ತಿನ ಗಾಡಿಯ ಸ್ಪೀಡಿನಲ್ಲಿ ಚಲಿಸುತ್ತಿತ್ತು.
ರೈಲಿನಲ್ಲಿ ಮೊದಲ ದಿನ ಮಂಗಳವಾರ ಬೆಳಗ್ಗೆ, ನಂತರ ಬುಧವಾರ ರಾತ್ರಿ ಕಳೆಯುವಷ್ಟರಲ್ಲಿ ಯಾವಾಗ ಈ ರೈಲನ್ನು ಇಳಿಯುವೆನಪ್ಪಾ ಅನ್ನಿಸುತ್ತಿತ್ತು. ಮೂರನೇ ದಿನ ಜಬಲ್ ಪುರ, ಸಾತ್ನಾ ಮತ್ತು ಮಿರ್ಜಾಪುರ್ ನಿಲ್ದಾಣವನ್ನು ದಾಟುವಷ್ಟರಲ್ಲಿ ಬೆಳಗ್ಗೆ 9.30. ಅಲ್ಲಿಂದಾಚೆಗಂತೂ ಇನ್ನೂ ನಿಧಾನವಾಗಿ ಚಲಿಸಿದ ರೈಲು, ಮಿರ್ಜಾಪುರದಿಂದ ವಾರಣಾಸಿಗೆ(70 ಕಿ.ಮೀ) ತಲುಪಲು ಎರಡೂವರೆ ಘಂಟೆ ತೆಗೆದುಕೊಂಡಿತ್ತು. ಮಂಗಳವಾರ ಬೆಳಗ್ಗೆ ರೈಲು ಹತ್ತಿ, ವಾರಣಾಸಿಯಲ್ಲಿ ಇಳಿದಾಗ ಗುರುವಾರ ಮಧ್ಯಾಹ್ನ 12 ಘಂಟೆ ದಾಟಿತ್ತು.

ವಾರಾಣಸಿ ಪುರ ಪ್ರವೇಶ…!
ಕಾಶಿಯಲ್ಲಿರುವ ಜಂಗಮವಾಡಿ ಮಠದಲ್ಲಿ ಯಾತ್ರಿಗಳಿಗೆ ಉಳಿದುಕೊಳ್ಳಲು ಸೂಕ್ತ ಸೌಲಭ್ಯಗಳಿವೆ ಎಂದು ತಿಳಿದಿದ್ದರಿಂದ ಆಟೋರಿಕ್ಷಾದಲ್ಲಿ ಅಲ್ಲಿಗೆ ತೆರಳಲು ಮುಂದಾದೆ. ಅಲ್ಲಿಂದ ಸುಮಾರು 5 ಕಿಮೀ ದೂರದ ಮಠಕ್ಕೆ ತೆರಳಲು ಆಟೋರಿಕ್ಷಾದವನು 400 ರೂಪಾಯಿ ಕೇಳಿದ, ಬಳಿಕ 250 ರೂಪಾಯಿಗಳಿಗೆ ಒಪ್ಪಿದ. ಉರಿಬಿಸಿಲು, ನಿಂತಲ್ಲೇ ಮೈಯಿಂದ ನೀರು ಹರಿಯುವಷ್ಟು ಸೆಕೆ, ಬರೀ ಧೂಳು, ಕೆಟ್ಟ ರಸ್ತೆ, ಅದಕ್ಕಿಂತ ಹೆಚ್ಚು ಕೆಟ್ಟ ಟ್ರಾಫಿಕ್ ವ್ಯವಸ್ಥೆ, ಎಡ ಬಲಗಳ ನಿಯಮವೇ ಇಲ್ಲದೆ ನುಗ್ಗುವ ವಾಹನಗಳ ನಡುವೆ ನುಗ್ಗುತ್ತಾ ಸಾಗಿದ ಆಟೋ, ಜಂಗಮವಾಡಿ ತಲುಪುವಷ್ಟರಲ್ಲಿ ಕುಲುಕಿ ಕುಲುಕಿ ಕುಕ್ಕಿ ಹುಣಸೇ ಹಣ್ಣಿನ ಮುದ್ದೆಯಂತೆಯಾಗಿದ್ದೆ.
ಜಂಗಮವಾಡಿ ಮಠದಲ್ಲಿ ವಾಸ್ತವ್ಯ...
ವೀರಶೈವ ಪಂಚ ಪೀಠಗಳಲ್ಲಿ ಐತಿಹಾಸಿಕ ಕಾಶಿ ಪೀಠವೂ ಒಂದು. ಅದು ಕಾಶಿಯ ವಿಶ್ವನಾಥ ಮಂದಿರಕ್ಕೆ ಸಮೀಪದಲ್ಲೇ ಇದ್ದು ಜಂಗಮವಾಡಿ ಮಠ ಎಂದೇ ಹೆಸರಾಗಿದೆ. ಕಾಶಿ ಪೀಠದ ಗುರುಗಳು ಮೂಲತಃ ಕನ್ನಡಿಗರೇ ಆಗಿದ್ದಾರೆ. ಜಂಗಮವಾಡಿ ಮಠದಲ್ಲಿ ಬಹುತೇಕ ಕನ್ನಡದ ವಾತಾವರಣ. ಜಂಗಮವಾಡಿ ಮಠದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಉತ್ತಮ ವ್ಯವಸ್ಥೆಯಿರುವ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದಿಂದ ಕಾಶಿಗೆ ಬರುವ ಬಹುತೇಕ ಯಾತ್ರಿಗಳು ಇಲ್ಲೇ ಉಳಿದುಕೊಳ್ಳುತ್ತಾರೆ. ಇಲ್ಲಿ ದಿನಕ್ಕೆ ಎರಡು ಹೊತ್ತು ದಾಸೋಹದ ವ್ಯವಸ್ಥೆಯೂ ಇದೆ. ಇದು ಸಾಮಾನ್ಯರಿಗಾದರೆ, ಐಶಾರಾಮಿ ಸೌಲಭ್ಯಗಳನ್ನು ಬಯಸುವವರಿಗೆ ಗಂಗಾ ನದಿಯ ದಡದಲ್ಲಿರುವ ಹೊಟೇಲ್ ಗಳೂ ಸೇರಿದಂತೆ ವಾರಣಾಸಿ ನಗರದ ಹಲವು ಪ್ರದೇಶಗಳಲ್ಲಿ ಉತ್ತಮ ಹೊಟೇಲ್ ಗಳಿವೆ.
ಕಾಶಿಯಾತ್ರೆ ಮಾಡಲು ಒಬ್ಬನೇ ಬಂದ ನನಗೆ ಕೊಠಡಿ ಕೊಡಲು ಹಿಂಜರಿದ ಅಲ್ಲಿನ ವ್ಯವಸ್ಥಾಪಕರಿಗೆ, ಇವನೇನು ತಿರುಗಿ ಹೋಗಲು ಬಂದಿರುವನೋ ಅಥವ? ಅನ್ನುವ ಅನುಮಾನ. ಆ ಬಳಿಕ, ಪತ್ರಕರ್ತನೆಂದು ತಿಳಿಸಿ, ಅಲ್ಲಿಯವರಿಗೆ ಪರಿಚಯವಿದ್ದ ಗೆಳೆಯನ ಪ್ರಸ್ತಾಪದ ನಂತರ ಎಲ್ಲವೂ ಸುಗಮ. ಕೊಠಡಿ ಸೇರಿ, ಸ್ನಾನ ಮಾಡಿ ಬಳಿಕ ದಾಸೋಹ ನಿಲಯದಲ್ಲಿ ಪ್ರಸಾದ ಸೇವಿಸಿ, ಒಂದಿಷ್ಟು ಹೊತ್ತು ವಿರಮಿಸಿದೆ.

ಕಾಶಿಯಲ್ಲಿ ಕಾಲು ನಡಿಗೆ…
ಕಾಶಿಗೆ ಬಂದಿರುವುದು ಕೊಠಡಿಯಲ್ಲಿ ಮಲಗುವುದಕ್ಕಲ್ಲ ಎಂಬ ಮಾತು ಫಕ್ಕನೆ ಕೇಳಿಸಿದಂತಾಗಿದ್ದರಿಂದ ಎದ್ದು ಕುಳಿತೆ. ಮುಖ ತೊಳೆದು ನೇರವಾಗಿ ವಿಶ್ವನಾಥನ ದೇಗುಲಕ್ಕೆ ಹೊರಟೆ. ಮಠದ ಹೊರಬಾಗಿಲಲ್ಲಿ ಸಿಕ್ಕ ಯಾತ್ರಿಯೊಬ್ಬರಲ್ಲಿ ದೇಗುಲದ ದಾರಿ ಕೇಳಿದೆ. ನನಗೆ ಮಾರ್ಗದರ್ಶನ ಮಾಡಿದ ಅವರು, ಮೊದಲಿಗೆ ಕಾಶಿಯ ಕೊತ್ವಾಲ(ಕಾವಲುಗಾರ)ನಾಗಿರುವ ಕಾಲಭೈರವನ ಮಂದಿರಕ್ಕೆ ಭೇಟಿ ನೀಡಿ, ಬಳಿಕ ವಿಶ್ವನಾಥನ ದರ್ಶನ ಮಾಡಲು ಸೂಚಿಸಿದರು, ಸರಿಯೆಂದು ಮುಂದೆ ನಡೆದೆ.
ಕಾಶಿಯ ಕಿರಿದಾದ ರಸ್ತೆಗಳು, ತೆರೆದ ಮೋರಿಗಳು
ಕಿರಿದಾದ ರಸ್ತೆಗಳು, ಪಕ್ಕದಲ್ಲೇ ಕಿರಿದಾದ ಹಳೆಯಕಾಲದ ತೆರೆದ ಮೋರಿಗಳು, ಸಂಚಾರಿ ನಿಯಮಗಳೇ ಅಸ್ತಿತ್ವದಲ್ಲಿಲ್ಲವೇನೋ ಅನ್ನುವ ಹಾಗೆ ಸಂಚರಿಸುವ ವಾಹನಗಳು ಮತ್ತು ಜನರ ನಡುವೆ ಸಾಗಿದೆ. ಬೆಂಗಳೂರಿಗೆ ಬಂದು ಹಿಂದಿಯಲ್ಲಿ ಮಾತನಾಡುವ ಜನರನ್ನು ನೆನಪಿಸಿಕೊಂಡು, ಮುಯ್ಯಿಗೆ ಮುಯ್ಯಿ ಎಂಬಂತೆ, ವಾರಾಣಸಿಯೆಂಬ ಹಿಂದಿ ಭಾಷಿಕ ನಾಡಿನಲ್ಲಿ ಕನ್ನಡದಲ್ಲೇ ಪ್ರಶ್ನೆ ಕೇಳುತ್ತಾ ಮುಂದೆ ಸಾಗಿದೆ. ಸ್ಥಳೀಯರಿಗೆ ಏನು ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ, ಭಾಷೆಯ ಹಂಗೇ ಇಲ್ಲದ ಕಾಲಭೈರವ ಎಂಬ ನಾಮಪದವೇ ದಾರಿ ತೋರಿಸಿಕೊಟ್ಟಿತ್ತು. ಕಾಶಿಯ ಕೊತ್ವಾಲನ ದರ್ಶನದ ಬಳಿಕ ಮತ್ತೆ ನಡೆಯುತ್ತಾ ಬಂದು ವಿಶ್ವನಾಥ ಮಂದಿರದ ಗಲ್ಲಿ ಪ್ರವೇಶಿಸಿದೆ.
ಕಾಶಿ ವಿಶ್ವನಾಥ ಮಂದಿರದ ಹಾದಿ…
ಅಸಮವಾಗಿರುವ, ಜಾರುವ, ಎಡವದೇ ಮುಂದೆ ಸಾಗುವುದೇ ಕಷ್ಟವೆನ್ನಿಸುವ ಒಂದೇ ಮಾರು ಅಗಲದ ಕಲ್ಲುಹಾಸಿನ ದೇಗುಲದ ಹಾದಿ. ಕಾಲಿಟ್ಟ ಕಡೆಯೆಲ್ಲಾ ಹಸುಗಳ ಸಗಣಿ, ಹೂಗಳ ಕಸದ ರಾಶಿ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಒಂದೇ ಸರತಿ ಸಾಲು. ಇಕ್ಕಟ್ಟಾದ ದಾರಿಯ ಇಕ್ಕೆಲಗಳಲ್ಲಿನ ಅಂಗಡಿಗಳಲ್ಲಿ ವ್ಯಾಪಾರಿಗಳ ಪೈಪೋಟಿ. ಅವರಲ್ಲಿ ನಮ್ಮ ಪಾದರಕ್ಷೆ ಬಿಟ್ಟು ತೆರಳಲು ಸೂಚನೆ, ಅದಕ್ಕಾಗಿ ಹತ್ತಿರ ಹೋದರೆ, ಹೂವು, ಎಕ್ಕದ ಹೂಗಳ ಹಾರ, ಅಭಿಷೇಕಕ್ಕೆ ಹಾಲು ಕೊಳ್ಳಲು ಆಗ್ರಹ. ಅದಕ್ಕೆ ಬಗ್ಗದಿದ್ದವರಿಗೆ “ಬರೀ ಕೈಯ್ಯಲ್ಲಿ ಹೋಗುವುದು ಸರಿಯಲ್ಲ” ಎಂಬ ತಣ್ಣನೆಯ ಬೆದರಿಕೆ. ಅದಕ್ಕಾಗಿಯೋ ಅಥವ ಅವರವರ ನಂಬಿಕೆಗಳ ಕಾರಣಕ್ಕಾಗಿಯೋ ಕೈಯ್ಯಲ್ಲಿ, ಹೂವು, ಹಾಲಿನ ಪುಟ್ಟ ಕುಡಿಕೆಗಳನ್ನು ಹಿಡಿದ ಭಕ್ತಾದಿಗಳು, ಒಂದೇ ಮಾರು ಅಗಲದ ದಾರಿಯಲ್ಲಿ ಸುಮಾರು ಎರಡು ಗಂಟೆ ಸಾಗಿದ ಬಳಿಕ ಪೊಲೀಸರಿಂದ ಕಟ್ಟುನಿಟ್ಟಿನ ತಪಾಸಣೆ. ದೇಗುಲದ ಪರಿಸರಕ್ಕೆ ಗಂಗಾಜಲ, ಹಾಲು, ಹೂ, ಹಣ ಬಿಟ್ಟು ಬೇರೆ ಏನನ್ನೂ ಒಯ್ಯುವುದಕ್ಕೆ ನಿಷೇಧ. ಮೊಬೈಲ್ ಫೋನ್ ಅನ್ನು ಕೊಠಡಿಯಲ್ಲೇ ಬಿಟ್ಟಿದ್ದ ನಾನು ಪೆನ್ನನ್ನು ಜೇಬಿನಲ್ಲಿರಿಸಿಕೊಂಡಿದ್ದೆ, ಅದನ್ನೂ ಕಸಿದುಕೊಂಡ ಪೊಲೀಸಪ್ಪನನ್ನು ಪ್ರಶ್ನಿಸಿದ್ದಕ್ಕೆ “ಪೆನ್ ಮೆ ಕ್ಯಾಮರಾ ಹೋತಾ ಹೈ ನಾ?” ಎಂದೋ ಏನೋ ಅಂದ. ಸರಿಯೆಂದು ಮುಂದೆ ಸಾಗಿದರೆ ದೇಗುಲದ ಪ್ರಾಂಗಣ ಪ್ರವೇಶಿಸುವ ಹಾದಿ ಇನ್ನಷ್ಟು ಕಿರಿದು. ದೇಗುಲದ ಸುತ್ತಲೂ ಹಲವಾರು ಪುರಾತನ ಶಿವಲಿಂಗಗಳು, ಅವುಗಳನ್ನು ದರ್ಶಿಸುತ್ತಲೇ ಮುಂದೆ ಸಾಗಿದರೆ ಚಿಕ್ಕದಾದ ಸರಳವಾದ ಗರ್ಭಗುಡಿ. ಜನಸಂದಣಿ ಕಡಿಮೆಯಿರುವ ಸಂದರ್ಭಗಳಲ್ಲಿ ಕಾಶಿ ವಿಶ್ವನಾಥ ಎಂದು ಕರೆಯುವ ಜ್ಯೋತಿರ್ಲಿಂಗವನ್ನು ಸ್ಪರ್ಶಿಸಿ ನಮಸ್ಕರಿಸುವ ಅವಕಾಶ, ಇಲ್ಲವಾದರೆ, ಹಾಗೇ ತಿರುಪತಿಯಲ್ಲಿ ಕ್ಷಣ ಮಾತ್ರ ಕಾಣುವ ತಿಮ್ಮಪ್ಪನ ದರ್ಶನದಂತೆ ಮುಂದಕ್ಕೆ ದಬ್ಬಿಸಿಕೊಂಡು ಹೊರಬೀಳುತ್ತೇವೆ. ಅದೇ ಪರಿಸರದಲ್ಲಿರುವ ಇನ್ನೆರೆಡು ಆಲಯಗಳಲ್ಲಿ ಒಂದಿಷ್ಟು ಕಡಿಮೆ ಜನಸಂದಣಿ, ಸ್ಪರ್ಶಿಸಿ ನಮಸ್ಕರಿಸುವ ಅವಕಾಶ. ಕಾಲಿಡಲೂ ಜಾಗವಿಲ್ಲದ ದೇಗುಲದ ಪರಿಸರದಲ್ಲಿ ಕೂರಲು ಅವಕಾಶವೇ ಸಿಗಲಿಲ್ಲ. ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಹೊರಬೀಳುವ ಮುನ್ನ ಪ್ರಸಾದದ ರೂಪದಲ್ಲಿ ಮಾರುವ ಪೇಡಾ ಖರೀದಿ. ಆ ಬಳಿಕ ಹತ್ತಿರದಲ್ಲೇ ಇರುವ ವಿಶಾಲಾಕ್ಷಿ ಮಂದಿರ, ಅನ್ನಪೂರ್ಣ ಮಂದಿರಗಳಲ್ಲಿ ದೇವಿಯ ದರ್ಶನ ಪಡೆದು ವಿಶ್ವನಾಥ ಮಂದಿರದ ಗಲ್ಲಿಯಿಂದ ಹೊರಬಂದೆ.
ದಶಾಶ್ವಮೇಧ ಘಾಟ್…
ವಿಶ್ವನಾಥ ಮಂದಿರದಿಂದ ಕೇವಲ ಐದು ನಿಮಿಷ ನಡೆದರೆ ಕಾಶಿಯಲ್ಲಿ ಅತ್ಯಂತ ಪ್ರಸಿದ್ಧವಾದ ದಶಾಶ್ವಮೇಧ ಘಾಟ್ ಸಿಗುತ್ತದೆ. ಆ ಘಟ್ಟದ ಮೆಟ್ಟಿಲುಗಳ ಮೇಲೆ ನಿಂತರೆ ವಿಶಾಲ ಗಂಗೆಯ ವಿಹಂಗಮ ನೋಟ ಕಾಣಸಿಗುತ್ತದೆ.

ಗಂಗೆಯ ಮಡಿಲಲ್ಲಿ…
ವಿಶ್ವನಾಥನ ಮಂದಿರದಲ್ಲಿನ ನೂಕುನುಗ್ಗಲ ಪರಿಸರದಲ್ಲಿ ನನಗೆ ಅಂಥಾ ದೈವಿಕ ಅನುಭವ ಆಯಿತು ಎಂದು ಹೇಳಲಾರೆ. ಆದರೆ ಗಂಗೆಯನ್ನು ನೋಡಿದಾಕ್ಷಣ ಪುಳಕ, ರೋಮಾಂಚನ, ಆನಂದ ಎಲ್ಲವೂ ಒಟ್ಟೊಟ್ಟಿಗೆ ಆದಂತಾಯಿತು. ಘಟ್ಟದ ಮೆಟ್ಟಿಲುಗಳನ್ನು ಇಳಿದು ಪೂಜ್ಯ ಭಾವನೆಯೊಂದಿಗೆ ದೇವ ಗಂಗೆಯನ್ನು ಸ್ಪರ್ಶಿಸುವುದೇ ಒಂದು ದಿವ್ಯಾನುಭೂತಿ.
ಗಂಗಾ ಆರತಿಯ ದಿವ್ಯಾನಂದ…
ನಾನು ದಶಾಶ್ವಮೇಧ ಘಾಟಿಗೆ ಬರುವಷ್ಟರಲ್ಲಿ ಆಗಲೇ ಸಂಜೆ. ಗಂಗೆಯ ತೀರದಲ್ಲಿ ಹತ್ತಾರು ನಾಡ ದೋಣಿಗಳು, ಒಂದಷ್ಟು ದೊಡ್ಡವಾದ ಯಾಂತ್ರಿಕ ಬೋಟ್ ಗಳು ಕಾಣಿಸುತ್ತಿದ್ದವು. ಮತ್ತೊಂದು ಕಡೆ ಗಂಗಾ ಆರತಿ ನಡೆಸಲು ತಯಾರಿ ನಡೆಯುತ್ತಿತ್ತು.
ಗಂಗೋತ್ರಿ ಸೇವಾ ಸಮಿತಿ ಮತ್ತು ಗಂಗಾ ಸೇವಾ ಸಮಿತಿ ಹೆಸರಿನಲ್ಲಿ ಅಕ್ಕ ಪಕ್ಕವೇ ಎರಡು ಬಾರಿ ಆರತಿ ನಡೆಯುತ್ತದೆ. ಒಂದು ಕಡೆ ಐದು ಜನರು ಆರತಿ ಬೆಳಗಿದರೆ ಮತ್ತೊಂದು ಕಡೆ ಏಳು ಜನ ಆರತಿಗಳನ್ನು ಬೆಳಗುತ್ತಾರೆ.
ಸಂಜೆ 6ರ ಹೊತ್ತಿಗಾಗಲೇ ಸುಮಾರು ಮೂರು ನಾಲ್ಕು ಸಾವಿರ ಜನರು ಆರತಿ ನಡೆಯುವ ವೇದಿಕೆಗಳ ಎಲ್ಲ ಮಗ್ಗುಲುಗಳಲ್ಲಿ ಕುಳಿತಿದ್ದರು. ಕೆಲವರು ಗಂಗಾ ಆರತಿಯ ದೃಶ್ಯ ವೈಭವವನ್ನು ಇನ್ನಷ್ಟು ಚೆನ್ನಾಗಿ ನೋಡಲು ಸಾಧ್ಯವಾಗುವಂತೆ ಗಂಗೆಯ ದಡದಲ್ಲಿ ಸಾಲು ಸಾಲಾಗಿ ನಿಲ್ಲಿಸಿಕೊಂಡ ವಿವಿಧ ರೀತಿಯ ದೋಣಿಗಳಲ್ಲಿ ಕುಳಿತು ಆರತಿಯ ದರ್ಶನಕ್ಕಾಗಿ ಕಾಯುತ್ತಿದ್ದರು.
ಧ್ವನಿವರ್ಧಕದಲ್ಲಿ ವಿಶ್ವನಾಥಾಷ್ಟಕ-ಗಂಗಾ ತರಂಗ ರಮಣೀಯ ಜಟಾ ಕಲಾಪಮ್ ಇತ್ಯಾದಿ ಶಿವ ಸ್ತುತಿಗಳು ಮತ್ತು ಗಂಗಾ ಸ್ತುತಿಗಳು ಕೇಳಿ ಬರುತ್ತಿದ್ದವು. ಕೆಲವೇ ನಿಮಿಷಗಳಲ್ಲಿ ಆರತಿ ಆರಂಭವಾಯಿತು. ಕಾಷಾಯ ವಸ್ತ್ರ ಧರಿಸಿದ್ದ 7 ಜನ ಯುವಕರು ವಸ್ತ್ರಗಳಿಂದ ಸಜ್ಜುಗೊಳಿಸಿದ್ದ ಕಲ್ಲಿನ ವೇದಿಕೆಗಳ ಮೇಲೆ ಸಾಲಾಗಿ ನಿಂತು ಲಯ ಬದ್ಧವಾದ ಘಂಟೆ, ಜಾಗಟೆ ಮತ್ತು ಢಮರುಗಳ ನಾದದ ಜೊತೆಗೆ ಗಂಗೆಗೆ ಅಭಿಮುಖವಾಗಿ ನಿಂತು ಆರತಿ ಬೆಳಗುವುದನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತಿದ್ದರೆ ಆಸ್ತಿಕರಿರಲಿ, ದೇವರೇ ಇಲ್ಲ ಅನ್ನುವವರೂ ಕೂಡ ಮೈಮರೆತು ದಿವ್ಯಾನುಭೂತಿಯಲ್ಲಿ ತೋಯ್ದುಹೋಗುವುದಂತೂ ನಿಶ್ಚಿತ. ಸುಮಾರು ಅರ್ಧ ಘಂಟೆಯ ಕಾಲ ನಡೆಯುವ ಆರತಿಯ ಬಳಿಕ ಜನ ಮತ್ತೊಮ್ಮೆ ಗಂಗೆಯನ್ನು ಸ್ಪರ್ಶಿಸಿ, ನಮಸ್ಕರಿಸಿ ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಲು ಆರಂಭಿಸುತ್ತಾರೆ. ಕೆಲವರು ಹೂ ಮತ್ತು ಪುಟ್ಟ ಪುಟ್ಟ ದೀಪಗಳಿರುವ ದೊನ್ನೆಯನ್ನು ಗಂಗೆಯಲ್ಲಿ ಹರಿಯಬಿಡುತ್ತಾರೆ. ಇತ್ತ ಗಂಗಾ ಆರತಿ ಮುಕ್ತಾಯವಾಗುತ್ತಿದ್ದಂತೆ, ಮತ್ತೊಂದು ಕಡೆ ಆರತಿ ತಟ್ಟೆ ಹಿಡಿದು ಕಾಣಿಕೆ ಸಂಗ್ರಹಿಸುವ ಕಾರ್ಯ ಆರಂಭವಾಗಿರುತ್ತದೆ. ಜೀವನದಲ್ಲಿ ಮೊದಲ ಬಾರಿಗೆ ಕಾಶಿ ವಿಶ್ವನಾಥ ಮತ್ತು ಗಂಗೆಯ ಆರತಿಯನ್ನು ಕಣ್ಣುತುಂಬಿಕೊಂಡ ನಾನು ಮತ್ತೆ ಜಂಗಮವಾಡಿ ಮಠದ ಕೊಠಡಿಗೆ ಹಿಂದಿರುಗಿದೆ.

ಕಾಶಿಯ ದಿವ್ಯ ಬೆಳಗು…
ಮರುದಿನ ಮುಂಜಾನೆಯೇ ಎದ್ದು ಗಂಗಾ ತೀರಕ್ಕೆ ಹೋದೆ. ಓಹ್ ಸೂರ್ಯ ಮೂಡುವ ಸಮಯದಲ್ಲಿ ಗಂಗೆಯ ದಡದಲ್ಲಿ ನಿಲ್ಲುವುದು ಅತ್ಯಂತ ಸುಂದರವಾದ, ಆಹ್ಲಾದಕರವಾದ ಅನುಭವ. ಆ ಕ್ಷಣದಲ್ಲಿ ಬೇಂದ್ರೆ ಅಜ್ಜ ನೆನಪಾದರು, ಅವರು ಕಂಡ “ಮೂಡಲ ಮನೆಯಿಂದ ಹರಿಯುತ್ತಿದ್ದ ಮುತ್ತಿನ ನೀರು” ಗಂಗೆಯನ್ನು ಸೇರುತ್ತಿರುವಂತೆ ಭಾಸವಾಗುತ್ತಿತ್ತು.
ಆ ದಿವ್ಯ ಬೆಳಗಿನಲ್ಲಿ ದೋಣಿಯಲ್ಲಿ ಕುಳಿತು ಗಂಗಾ ನದಿಯ ತೀರದಲ್ಲಿ ಸಾಗಿ ಕಾಶಿಯ ಎಲ್ಲ ಘಟ್ಟಗಳನ್ನೂ ನೋಡುತ್ತಾ ಸಾಗುವುದೇ ಮನೋಹರ. ಗಂಗೆಯಲ್ಲಿ ಸಾಗಿದಂತೆ ನದಿಯ ನೀರು ಸ್ಫಟಿಕದಂತೆ ಸ್ವಚ್ಛವಾಗಿ ಕಂಡು ಬರದಿದ್ದರೂ ಕೂಡ, ಕೊಚ್ಚೆಯಂತೇನೂ ಇರಲಿಲ್ಲ, ಮತ್ತೊಂದು ದಂಡೆಯಲ್ಲಂತೂ ಗಂಗೆ ಇನ್ನೂ ಹೆಚ್ಚು ಪರಿಶುದ್ಧಳಾಗಿ ಕಂಡಳು.
ದಶಾಶ್ವಮೇಧ ಘಾಟ್ ನಲ್ಲಿನ ಚಟುವಟಿಕೆಗಳು…
ಬಿಸಿಲು ಚುರುಕಾಗುವಷ್ಟರಲ್ಲಿ ದಶಾಶ್ವಮೇಧ ಘಾಟ್ ಮತ್ತು ಸುತ್ತಲಿನ ಪ್ರದೇಶಗಳು ಜನರಿಂದ ಗಿಜಗುಡಲು ಆರಂಭಿಸಿರುತ್ತವೆ. ಹತ್ತಾರು ಜನ ಭಿಕ್ಷುಕರು, ಕಾವಿಧಾರಿಗಳು, ಕ್ಯಾಮರಾ ಹಿಡಿದು ಎಲ್ಲವನ್ನೂ ಸೆರೆಯಾಗಿಸುತ್ತಾ ನಡೆಯುವ ದೇಶ-ವಿದೇಶದ ಪ್ರವಾಸಿಗರು, ತಿಂಡಿ ತಿನಿಸುಗಳಿಂದ ಹಿಡಿದು ಏನೆಲ್ಲವನ್ನೂ ಮಾರುವವರು, ಪೊಲೀಸರು, ಗಂಗೆ ಮತ್ತು ಪರಿಸರವನ್ನು ಸ್ವಚ್ಛವಾಗಿರಿಸಲು ಶ್ರಮಿಸುವ ಕಾರ್ಮಿಕರು, ಸ್ವಯಂಸೇವಕರು ಘಟ್ಟಗಳಲ್ಲಿ ಕಂಡುಬರುತ್ತಾರೆ.
ಘಾಟ್ಗಳಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡಲು ಪೈಪೋಟಿ ಮೇಲೆ ಜನರನ್ನು ಓಲೈಸಲು ಮುಂದಾಗುವ ಪಾಂಡಾಗಳು, ಇಡೀ ದೇಶದ ಹಲವು ಭಾಗಗಳಿಂದ ಬಂದ ನೂರಾರು ಯಾತ್ರಿಗಳು, ಇದ್ಯಾವುದರ ಗೊಡವೆಯೇ ಇಲ್ಲದಂತೆ ಅಲ್ಲಲ್ಲಿ ಕುಳಿತ ಸಾಧುಗಳು ಕಣ್ಣಿಗೆ ಬೀಳುತ್ತಾರೆ.
ಘಟ್ಟದುದ್ದಕ್ಕೂ ಕೇಶ ಮುಂಡನ ಮಾಡುವವರು ಮತ್ತು ಕ್ಷೌರ ಮಾಡುವವರು, ಮಾಡಿಸಿಕೊಳ್ಳುವವರು, ಗಂಗಾ ಸ್ನಾನದ ಶಾಸ್ತ್ರ ಮುಗಿಸುವವರು, ಮಕ್ಕಳಿಗೆ ಈಜು ಕಲಿಸುವವರು, ಹಾಗೇ ಒಂದೆರೆಡು ಎಲೆ ತಿರುವಿಹಾಕುತ್ತಾ ಇಸ್ಪೀಟ್ ಆಡುವ ಜನರು ಕಂಡುಬರುತ್ತಾರೆ.

ದೋಣಿ ಹತ್ತಿಸುವ ಮಧ್ಯವರ್ತಿಗಳು…
ಗಂಗಾ ತೀರದಲ್ಲಿ ನಿಂತ ಮಧ್ಯವರ್ತಿಗಳು, ಹೇಗಾದರೂ ಮಾಡಿ ಪ್ರವಾಸಿಗರನ್ನು ದೋಣಿಗಳಿಗೆ ತುಂಬಿ ಗಂಗಾ ನದಿಯ ವಿಹಾರಕ್ಕೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿರುತ್ತಾರೆ. ಕೆಲವರಂತೂ ಹೆಚ್ಚೂಕಮ್ಮಿ ಯಾತ್ರಿಕರನ್ನು ಅಪಹರಿಸಿ ದೋಣಿಗೆ ತುಂಬುವಂತೆ ವರ್ತಿಸುತ್ತಾರೆ. ಅವರ ಮಾತಿನ ವರಸೆಗೆ ಮಣಿದು, ದೋಣಿಯಲ್ಲಿ ಕುಳಿತು ಮಾತಿಗಿಳಿದರೆ, “ನಾವು ಕೇವಲ ಕೂಲಿಕಾರರೇ ಹೊರತು ದೋಣಿಯ ಮಾಲೀಕರಲ್ಲ” ಎಂದು ಹೇಳುವ ಅಂಬಿಗರ ಬಗ್ಗೆ ಅನುಕಂಪ ಮೂಡುತ್ತದೆ.
ಬೆಳಗಿನಲ್ಲಿ ವಿಶ್ವನಾಥನ ದರ್ಶನ…
ಈ ನಡುವೆ ಬೆಳಗಿನಲ್ಲೇ ಮತ್ತೊಮ್ಮೆ ವಿಶ್ವನಾಥನ ದರ್ಶನಕ್ಕಾಗಿ ಸರದಿಯಲ್ಲಿ ನಿಂತ ನನಗೆ, ಕಡಿಮೆ ಜನರಿದ್ದ ಕಾರಣ, ಕಳೆದ ಸಂಜೆಗಿಂತ ಒಂದಿಷ್ಟು ಉತ್ತಮ ಅನುಭವ ದೊರಕಿತ್ತು. ಭೂಮಿಯಲ್ಲಿ ಹುದುಗಿದಂತೆ ಕಂಡುಬರುವ ಜ್ಯೋತಿರ್ಲಿಂಗವನ್ನು ಸ್ಪರ್ಶಿಸುವ ಅವಕಾಶವೂ ಸಿಕ್ಕಿತು. ಆ ಬಳಿಕ ಗರ್ಭಗುಡಿಯ ಸುತ್ತಲೂ ಏನೆಲ್ಲ ಇದೆ ಅನ್ನುವುದನ್ನು ಗಮನಿಸುತ್ತಾ ಹೋದ ನಾನು, ಅದೆಲ್ಲವನ್ನೂ ಸ್ಮೃತಿಪಟಲದ ಮೇಲೆ ದಾಖಲಿಸಿಕೊಳ್ಳುವ ಪ್ರಯತ್ನ ಮಾಡಿದೆ. ದೇಗುಲದ ಒಂದು ಮಗ್ಗುಲಿನಲ್ಲಿರುವ ಜ್ಞಾನವಪಿ ಮಸೀದಿಯ ಗುಮ್ಮಟವೂ ಕಣ್ಣಿಗೆ ಬಿತ್ತು.

ಕಾಶಿ ಮತ್ತು ಊಟ-ತಿಂಡಿ…
ಸರಿ, ಬೆಳಗಿನ ಸುಮಾರು 10 ಗಂಟೆ, ಉಪಹಾರದ ಸಮಯ. ಕಾಶಿ ನಗರ ಉಟೋಪಚಾರಕ್ಕೂ ತುಂಬಾ ಹೆಸರುವಾಸಿ. ಇಲ್ಲಿನ ಬೀದಿ ಬೀದಿಗಳ ರಸ್ತೆಗಳ ಮಗ್ಗುಲುಗಳಲ್ಲಿ ತಳ್ಳುವ ಗಾಡಿಗಳಲ್ಲಿ ಹಲವಾರು ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ, ಮಾರುತ್ತಾರೆ. ಪ್ರಮುಖವಾಗಿ ಪೂರಿ, ಜಿಲೇಬಿ, ಕಚೋರಿ, ಸಮೋಸಗಳ ಜೊತೆಗೆ ದೋಸೆ, ಇಡ್ಲಿಗಳೂ ಸಿಗುತ್ತವೆ. ಆದರೆ, ಪ್ರವಾಸಿಯಾಗಿ ಅದೂ ಒಬ್ಬಂಟಿಯಾಗಿ ಹೋಗಿದ್ದಾಗ ಆಹಾರದ ವಿಚಾರದಲ್ಲಿ ಎಚ್ಚರಿಕೆ ವಹಿಸದಿದ್ದರೆ ಆರೋಗ್ಯ ಕೈಕೊಟ್ಟು ಎಲ್ಲವೂ ಎಡವಟ್ಟಾಗುತ್ತದೆ. ಹೀಗಾಗಿ, ಕಾಶಿಗೆ ಹೋದರೂ ನಾನು ತಿಂದಿದ್ದು ಒಂದು ಇಡ್ಲಿ ಮಾತ್ರವೇ. ಆದರೆ, ನೀವು ನಿಮ್ಮ ಸ್ವಚ್ಛತಾ ಪ್ರಜ್ಞೆ, ಶುಚಿತ್ವದ ಮನೋಭಾವವೆಲ್ಲವನ್ನೂ ಬದಿಗೆ ಸರಿಸದೇ ಹೋದರೆ ಅಲ್ಲಿ ಒಂದು ಇಡ್ಲಿಯನ್ನೂ ತಿನ್ನುವುದು ಕಷ್ಟ. ಸನಿಹದಲ್ಲೇ ತೆರೆದ ಮೋರಿ, ಅದರ ಪಕ್ಕದಲ್ಲೇ ತಿಂಡಿ ತಯಾರಿಸುವ ಗಾಡಿ. ಹೀಗಿದ್ದರೂ ಕೂಡ ಭರ್ಜರಿ ರೇಷ್ಮೆ ವಸ್ತ್ರ, ಗಂಧದ ತಿಲಕ, ವಿಭೂತಿ ಇಟ್ಟುಕೊಂಡವರಿಂದ ಹಿಡಿದು, ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುವ ಎಲ್ಲರೂ ಕೂಡ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ, ಕಾಶಿಯ ಬೀದಿ ಬೀದಿಗಳಲ್ಲಿ ನಿಂತು ಆಹಾರ ಸೇವಿಸುತ್ತಾರೆ. ಇದೊಂದು ವೈರುಧ್ಯದಂತೆ(Contrasting) ಕಂಡರೂ ನನಗೆ ಸಮಾಧಾನ ತಂದ ಸಂಗತಿಯಾಗಿತ್ತು.
ಕಾಶಿಯ ವಿಶ್ವನಾಥ ಮಂದಿರದ ಗಲ್ಲಿ ಗಲ್ಲಿಗಳಲ್ಲಿ ಬಗೆ ಬಗೆಯ ಸಿಹಿ ತಿನಿಸುಗಳು ಮತ್ತು ಕೆನೆಭರಿತ ಸಿಹಿ ಲಸ್ಸಿ ಸಿಗುತ್ತದೆ. ಇಲ್ಲೂ ಕೂಡ, ಧೂಳು ಮತ್ತು ನೊಣಗಳ ಬಗ್ಗೆ ನಿಮಗೆ ಪ್ರೇಮವಲ್ಲದಿದ್ದರೂ ಕನಿಷ್ಟಪಕ್ಷ ಸಹಿಷ್ಣತಾ ಭಾವವಾದರೂ ಇರಲೇಬೇಕಷ್ಟೇ. ದಶಾಶ್ವಮೇಧ ಘಾಟಿಗೆ ತೆರಳುವ ದಾರಿಯಲ್ಲಿ ರುದ್ರಾಕ್ಷಿ, ಸ್ಫಟಿಕ ಮಾಲೆ, ಫೋಟೊಗಳು, ಶಿವಲಿಂಗಗಳು ಇತ್ಯಾದಿಗಳನ್ನು ಮಾರುವ ಅಂಗಡಿಗಳಿವೆ. ವಾರಾಣಸಿಯ ಸುತ್ತಲ ಹಳ್ಳಿಗಳಲ್ಲಿ ಬೆಳೆದ ವಿಧವಿಧ ತಾಜಾ ತರಕಾರಿಗಳನ್ನು ಮಾರುವ ಅವ್ವ-ಅಕ್ಕಂದಿರೂ ಅಲ್ಲಿ ಕಾಣಸಿಗುತ್ತಾರೆ.
ಕಾಶಿಯಲ್ಲಿ ಕ್ಷೀರ ಧಾರೆ…

ಹಲವಾರು ಬಗೆಯ ಸಿಹಿ ತಿಂಡಿಗಳು ಮತ್ತು ಹಾಲು, ಕೆನೆ ಹಾಗೂ ಬಾದಾಮಿ, ಪಿಸ್ತಾಗಳಿಂದ ತಯಾರಿಸುವ ಮಲೈಯೊಗೆ ಹೆಸರಾದ ಕಾಶಿಯಲ್ಲಿ, ಹಾಲಿನ ಉತ್ಪನ್ನಗಳು ತುಂಬಾ ಜನಪ್ರಿಯ.
ಇಂಥ ಕಾಶಿ ನಗರದ ಪ್ರಮುಖ ಚೌಕಗಳಲ್ಲಿ ಬೆಳಗಿನ ಹೊತ್ತು ನಿಂತರೆ, ಬೈಕುಗಳಿಗೆ ಹಾಲಿನ ದೊಡ್ಡ ದೊಡ್ಡ ಕ್ಯಾನುಗಳನ್ನು ಕಟ್ಟಿಕೊಂಡು ಹಾಲು ಮಾರುತ್ತಾ, ಕೊಳ್ಳುಗರಿಗಾಗಿ ಕಾಯುತ್ತಾ ನಿಂತಿರುವ ಜನರು ಕಂಡುಬರುತ್ತಾರೆ. ಕಾಶಿ ಸುತ್ತಮುತ್ತಲಿನ ಊರುಗಳಿಂದ ಬರುವ ಈ ಜನರು, ತಮ್ಮ ಹಾಲಿನ ಕ್ಯಾನುಗಳ ಮೇಲೆ ನೀರಿನಲ್ಲಿ ಅದ್ದಿದ ಗೋಣಿಚೀಲಗಳನ್ನು ಹೊದಿಸಿಕೊಂಡು ತಂಪಾಗಿಡುವ ಪ್ರಯತ್ನ ಮಾಡುತ್ತಾರೆ.
ಕಾಶಿ ವಿಶ್ವನಾಥ ದೇಗುಲದ ಆಸುಪಾಸಿನ ಚಿತ್ರಣ...
ಕಾಶಿ ವಿಶ್ವನಾಥ ದೇಗುಲದ ಸುತ್ತಲಿನ ಕಿರಿದಾದ ಓಣಿಗಳಲ್ಲಿ ನಡೆಯುತ್ತಾ ಹೋದರೆ, ಹತ್ತು ಹೆಜ್ಜೆಗೊಂದು ಶಿವಲಿಂಗಗಳು, ಪುಟ್ಟ ಪುಟ್ಟ ಗುಡಿಗಳು ಕಣ್ಣಿಗೆ ಬೀಳುತ್ತವೆ. ಈ ಪವಿತ್ರ ಗುಡಿಗಳ ನಡುನಡುವೆಯೇ ಗಲೀಜಿನ ಗುಡ್ಡೆಗಳು ಕಾಣಿಸಿಕೊಂಡು, ಒಂದನ್ನು ಆಸ್ವಾದಿಸುತ್ತಾ, ಮತ್ತೊಂದರಿಂದ ಆಗುವ ಹಿಂಸೆಯನ್ನು ಸಹಿಸುತ್ತಾ ಸಾಗಬೇಕಾಗುತ್ತದೆ.
ವಿಶ್ವನಾಥನ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಜನ, ದನ ಮತ್ತು ವಾಹನಗಳೆಲ್ಲವಕ್ಕೂ ಒಂದೇ ರಸ್ತೆ. ದೇಗುಲಕ್ಕೆ ಹೋಗುವ ರಸ್ತೆಗಳ ತುಂಬೆಲ್ಲಾ ಅಲ್ಲಲ್ಲಿ ಅಡ್ಡೆಗಳನ್ನು ಮಾಡಿಕೊಂಡು ಬೀಡುಬಿಟ್ಟಿರುವಂತೆ ಕಾಣುವ ಭಾರೀ ಗೂಳಿಗಳು ಇದು ಕಾಶಿ, ಇದು ನಮ್ಮ ಒಡೆಯ ಶಿವನ ನಗರಿ ಅನ್ನುವುದನ್ನು ತಮ್ಮದೇ ಆದ ರೀತಿಯಲ್ಲಿ ಮನದಟ್ಟುಮಾಡಿಕೊಡುತ್ತವೆ.
ಕಾಶಿಯಲ್ಲಿ ಅದರಲ್ಲೂ ಜಂಗಮವಾಡಿಯ ಆಸುಪಾಸಿನಲ್ಲಿ ಮಂಗಗಳ ಸಂಖ್ಯೆ ಹೆಚ್ಚಾಗಿಯೇ ಇದ್ದು, ಸ್ವಲ್ಪ ಯಾಮಾರಿದರೂ ಕೂಡ ಫಟಿಂಗ ಕೋತಿಗಳು ಕೈಯ್ಯಲ್ಲಿರುವುದನ್ನು ಕಿತ್ತುಕೊಂಡು ಪರಾರಿಯಾಗುತ್ತವೆ.

ಕೇವಲ ಐದಾರು ಅಡಿಗಳಷ್ಟಿರುವ ಕಿರುದಾರಿಯಲ್ಲಿ ಯಾವುದೇ ಎಗ್ಗು ಸಿಗ್ಗಿಲ್ಲದೆ ಹಾರ್ನ್ ಮಾಡುತ್ತಾ ನುಗ್ಗುವ ದ್ವಿಚಕ್ರವಾಹನ ಸವಾರರು ಭಾರಿ ಕಿರಿಕಿರಿ ಉಂಟುಮಾಡುತ್ತಾರೆ. ಕಾಶಿಗೆ ಬರುವ ಲಕ್ಷಾಂತರ ಪ್ರವಾಸಿಗರು, ತಮ್ಮ ವಸತಿ, ಊಟ, ತಿರುಗಾಟ, ಖರೀದಿಗಳಿಂದ ನಗರದ ನಿವಾಸಿಗಳ ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗುವುದಕ್ಕೆ ಕಾರಣರಾಗುತ್ತಾರೆ. ಹೀಗಿದ್ದರೂ ಕೂಡ, ಬಹುತೇಕ ಸ್ಥಳೀಯರಲ್ಲಿ ಯಾತ್ರಾರ್ಥಿಗಳ ಬಗ್ಗೆ ಆದರಕ್ಕಿಂತಲೂ ನಿರ್ಲಕ್ಷ್ಯದ ಧೋರಣೆ ಎದ್ದುಕಾಣುತ್ತದೆ.
ಅಗೆಯಪ್ಪ-ಉಗಿಯಪ್ಪರದ್ದೇ ದರ್ಬಾರು…
ಎಲ್ಲರಿಗೂ ತಿಳಿದಿರುವ ಹಾಗೆ ಬನಾರಸ್ ಅಂದರೆ ಪಾನ್, ಪಾನ್ ಅಂದರೆ ಬನಾರಸ್ ಇಡೀ ದೇಶದಲ್ಲೇ ಅಷ್ಟೊಂದು ಹೆಸರುವಾಸಿ. ಹೀಗಾಗಿ ಕಾಶಿಯ ನಿವಾಸಿಗಳಲ್ಲಿ ಶೇಕಡಾ 90ಕ್ಕೂ ಹೆಚ್ಚು ಭಾಗ ಅಗೆಯಪ್ಪ-ಉಗಿಯಪ್ಪರೇ ಆಗಿದ್ದಾರೆ. ಅವರ ಬಾಯಿಗಳಲ್ಲಿ ಸದಾ ಪಾನ್ ತುಂಬಿರುತ್ತದೆ, ಅದನ್ನು ಅಗೆದು ಅಗೆದು ಉಗಿಯುತ್ತಲೇ ಹೋಗುತ್ತಾರೆ. ದಕ್ಷಿಣದವರಾದ ನಾವೂ ಕೂಡ ಕಫ ಬಂದಾಗ ಉಗೆಯುತ್ತೇವೆ, ಆದರೆ ಉಗಿಯುವ ಮುನ್ನ ಸೂಕ್ತ ಸ್ಥಳ ಹುಡುಕಿ ಅಲ್ಲಿ ಬಾಯಿ ತೆರೆಯುತ್ತೇವೆ. ಇಲ್ಲಿ ಬನಾರಸ್ಸಿನ ಜನ ಹಾಗಲ್ಲ, ಸ್ವಲ್ಪವೂ ಮುಜುಗರಪಡದೆ ಸರಿಯಾಗಿ ರಸ್ತೆ ಮಧ್ಯದಲ್ಲೇ ಲೀಟರ್ ಗಟ್ಟಲೆ ಎಂಜಲಿನ ರಸವನ್ನು ಉಗಿಯುತ್ತಾರೆ. ಹೋಳಿ ಹಬ್ಬದಲ್ಲಿ ಪಿಚಕಾರಿಯಿಂದ ಸಿಡಿಸಿದ ಬಣ್ಣದ ಚಿತ್ತಾರಗಳಂತೆ ವಿನ್ಯಾಸಗಳನ್ನು ಮೂಡಿಸಿ, ತಮ್ಮ ಕಲಾ ಪ್ರದರ್ಶನ! ಮಾಡುತ್ತಾರೆ. ಹೀಗಾಗಿ ಕಾಶಿಯಲ್ಲಿ ನಡೆದಾಡುವಾಗ ಅದೂ ಕೂಡ ಬರಿಗಾಲಿನಲ್ಲಿ ನಡೆಯುವಾಗ, ಉಗುಳಿನ ಮೇಲೆ ಕಾಲಿಡದೇ ನಡೆಯುವುದೇ ಒಂದು ಸಾಧನೆ ಅಥವ ತಪಸ್ಸು ಎಂದರೆ ತಪ್ಪಾಗಲಾರದು.

ಗಂಗೆಯ ಘಾಟ್ ಗಳ ಗುಂಟ ನಡಿಗೆ…
ಕಾಶಿಯಲ್ಲಿ ಅಸ್ಸಿ ಘಾಟ್ ನಿಂದ ಆರಂಭಿಸಿ ಆದಿ ಕೇಶವ ಘಾಟ್ ವರೆಗೆ ಒಟ್ಟಾರೆ 84 ಘಾಟ್ ಗಳಿವೆ. ಅಸ್ಸಿ, ಗಂಗಾ ಮಹಲ್ ಘಾಟ್, ತುಳಸಿ ಘಾಟ್, ಭದೈನಿ, ಜಾನಕಿ, ಆನಂದಮಯಿ, ಜೈನ್ ಘಾಟ್, ನಿಷಾದ್ ಘಾಟ್, ಪ್ರಭು ಘಾಟ್, ಪಂಚಕೂಟ, ಚೇತ್ ಸಿಂಗ್, ನಿರಂಜನಿ, ಮಹಾ ನಿರ್ವಾಣಿ, ಶಿವಾಲ, ದಂಡಿ, ಹನುಮಾನ್ ಘಾಟ್, ವಿಜಯನಗರಂ ಘಾಟ್, ಕೇದಾರ್ ಘಾಟ್, ಕ್ಷೇಮೇಶ್ವರ್ ಘಾಟ್, ಮಾನಸಸರೋವರ್ ಘಾಟ್, ನಾರದ್ ಘಾಟ್, ರಾಜಾ ಘಾಟ್, ಪಾಂಡೆ ಘಾಟ್, ಚೌಸಾತಿ, ರಾಣಾಮಹಲ್, ಮುನ್ಷಿ ಘಾಟ್, ಅಹಲ್ಯಾ ಬಾಯಿ ಘಾಟ್, ಶೀತಲ ಘಾಟ್, ಪ್ರಯಾಗ್ ಘಾಟ್, ರಾಜೇಂದ್ರ ಪ್ರಸಾದ್ ಘಾಟ್, ಮನ್ ಮಂದಿರ್ ಘಾಟ್, ತ್ರಿಪುರ ಭೈರವಿ ಘಾಟ್, ಮೀರಾ ಘಾಟ್, ನೇಪಾಳಿ ಘಾಟ್, ಲಲಿತಾ ಘಾಟ್, ಬಾಜಿ ರಾವ್ ಘಾಟ್, ಸಿಂಧಿಯಾ ಘಾಟ್, ವೇಣಿಮಾಧವ ಘಾಟ್, ಪಂಚ ಗಂಗಾ ಘಾಟ್ ಇತ್ಯಾದಿ.
ಕಾಶಿಯಲ್ಲಿನ ಎರಡನೇ ದಿನ ರಸ್ತೆಯಲ್ಲಿ ಸಾಗುತ್ತಾ ಅಸ್ಸಿ ಘಾಟ್ ವರೆಗೆ ನಡೆದು, ಆ ಬಳಿಕ ಘಾಟ್ ನಿಂದ ಘಾಟ್ ಗೆ ಮೆಟ್ಟಿಲುಗಳ ದಾರಿಯಲ್ಲಿ ಹಿಂದಿರುಗಿ ದಶಾಶ್ವಮೇಧ ಘಾಟ್ ವರೆಗೆ ಬಂದೆ. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸ್ವಚ್ಛವಾಗಿರುವ ಅಸ್ಸೀ ಘಾಟ್ ಕೂಡ ಕಾಶಿಯ ಜನಪ್ರಿಯ ಘಾಟ್ ಗಳಲ್ಲಿ ಒಂದು. ಅಲ್ಲಿ ಮಾತುಕತೆ ನಡೆಸುತ್ತಿದ್ದ ಯುವ ಜೋಡಿಗಳಿಂದ ಹಿಡಿದು, ಹಲವಾರು ಜನರು ಕಂಡರು, ಜೊತೆಗೆ ಗಂಗೆಯಲ್ಲಿ ಮೀಯುತ್ತಿದ್ದ ಭಾರಿ ಎಮ್ಮೆಗಳ ದಂಡೇ ಅಲ್ಲಿತ್ತು.
ಸತ್ಯ ಹರಿಶ್ಚಂದ್ರ ಘಾಟ್…
ಅಲ್ಲಿಂದ ಮುಂದೆ ಹರಿಶ್ಚಂದ್ರ ಘಾಟ್ ತಲುಪಿದ ನನಗೆ ಮತ್ತೆ ನೆನಪಾಗಿದ್ದು ರಾಜಾ ಸತ್ಯ ಹರಿಶ್ಚಂದ್ರ ಮತ್ತು “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ?” ಎಂದು ಹಾಡುತ್ತಾ ಬಂದ ವೀರಬಾಹು. ಕಾಶಿಯ ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕಾ ಘಾಟ್ ಗಳಲ್ಲಿ ಮೂನ್ನೂರರವತ್ತೈದು ದಿನಗಳೂ ಹಗಲಿರುಳೆನ್ನದೆ ಚಿತೆಗಳು ಉರಿಯುತ್ತಲೇ ಇರುತ್ತವೆ, ಅಂತ್ಯ ಸಂಸ್ಕಾರಗಳು ನಡೆಯುತ್ತಲೇ ಇರುತ್ತವೆ.
ಕಾಶಿ ಶಿವನ ನಗರವಾದರೂ ಕೂಡ, ಇಲ್ಲಿ ಎಲ್ಲರೂ “ರಾಮ್ ನಾಮ್ ಸತ್ಯ ಹೇ” ಎಂದು ಕೂಗುತ್ತಾ ಶವಗಳನ್ನು ಘಾಟಿಗೆ ಹೊತ್ತು ತರುತ್ತಾರೆ. ವಿದ್ಯುತ್ ಚಿತಾಗಾರವಿದ್ದರೂ ಕೂಡ ಸಾಂಪ್ರದಾಯಕ ರೀತಿಯಲ್ಲಿ ಕಟ್ಟಿಗೆಗಳ ಚಿತೆ ಸಿದ್ಧಪಡಿಸಿ ದಹನ ಸಂಸ್ಕಾರ ಮಾಡುವವರೇ ಹೆಚ್ಚು.
ಹರಿಶ್ಚಂದ್ರ ಘಾಟಿನಲ್ಲಿ ನಿಂತಾಗ ಜೀವನದಲ್ಲಿ ಮೊದಲ ಬಾರಿಗೆ ಬೆಂಕಿಯಲ್ಲಿ ಬೇಯುವ ಮಾನವ ದೇಹದ ಕಮಟು ವಾಸನೆ ಮೂಗಿಗೆ ಅಡರಿ, ಹೊಸದು ಅನ್ನಿಸಿತ್ತಾದರೂ ಹೆಚ್ಚು ಹೊತ್ತು ಸಹಿಸಲು ಸಾಧ್ಯವಿಲ್ಲದ್ದೂ ಆಗಿತ್ತು. ಹೀಗಿದ್ದರೂ ಕೂಡ ಮಾನವವ ಬದುಕಿನ ಬಗ್ಗೆ, ಅದರ ನಶ್ವರತೆಯ ಬಗ್ಗೆ ಚಿಂತಿಸುತ್ತಾ ಅಲ್ಲಿ ಉರಿಯುತ್ತಿದ್ದ ಚಿತೆಗಳ ಮುಂದೆ ಒಂದಷ್ಟು ಹೊತ್ತು ನಿಂತೆ. ಸಾಮಾನ್ಯವಾಗಿ ಈ ಘಾಟ್ ನಲ್ಲಿ ಫೋಟೊ ತೆಗೆಯುವುದು ಮತ್ತು ವಿಡಿಯೋ ಚಿತ್ರೀಕರಿಸುವುದಕ್ಕೆ ಅಡ್ಡಿಪಡಿಸುತ್ತಾರೆ.

ಕಾಶಿ ಮತ್ತು ಪ್ರಾಚೀನತೆ…
ಕಾಶಿ ಜಗತ್ತಿನ ಅತ್ಯಂತ ಪುರಾತನ ನಗರಗಳಲ್ಲಿ ಒಂದು ಅನ್ನುವ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಹೀಗಿದ್ದರೂ, ಕಾಲದಿಂದ ಕಾಲಕ್ಕೆ ಹಳೆಯದು ನಾಶವಾಗಿ ಹೊಸದು ನಿರ್ಮಿಸಲ್ಪಡುತ್ತದೆ. ಕಾಶಿಯ ಘಟ್ಟಗಳ ಗುಂಟ ನಡೆಯುವಾಗ ಕಂಡ ಕೆಲವು ಕಟ್ಟಡಗಳಂತೂ ನೂರಾರು ವರ್ಷಗಳ ಮುನ್ನ ಕಟ್ಟಿರಬಹುದೆಂಬಂತೆ ಕಾಣಿಸುತ್ತವೆ.
ಕಾಶಿಯ ಹೊರವಲಯದಲ್ಲಿ ಕಂಡ ಚಿತ್ರ…
ಮುಂಜಾನೆಯ ಬೆಳಗಿನಲ್ಲಿ ಕಾಶಿಯ ಹೊರವಲಯದ ರಸ್ತೆಗಳಲ್ಲಿ ನಿಂತರೆ, ಹ್ಯಾಂಡಲಿಗೆ ಬುತ್ತಿಚೀಲ ತಗುಲು ಹಾಕಿಕೊಂಡು ಹಳೆಯ ಸೈಕಲ್ಲುಗಳನ್ನು ತುಳಿಯುತ್ತಾ ಗುಂಪುಗುಂಪುಗಾಗಿ ಪಟ್ಟಣದತ್ತ ಕೆಲಸಕ್ಕಾಗಿ ಬರುವ ಹಳ್ಳಿಗರು ಕಾಣಿಸುತ್ತಾರೆ. ಕರ್ನಾಟಕ ಅಥವ ದಕ್ಷಿಣ ಭಾರತಕ್ಕೆ ಹೋಲಿಸಿದಲ್ಲಿ ಉತ್ತರದ ರಾಜ್ಯಗಳ ಹಳ್ಳಿಗಳಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಹೇಗಿರಬಹುದು ಅನ್ನುವುದಕ್ಕೆ ಇದೊಂದು ದಿಕ್ಸೂಚಿ ಅನ್ನಬಹುದು.
ನಾನು ಕಾಶಿಯಲ್ಲಿದ್ದ ಮೂರು ದಿನಗಳ ಕಾಲ ಕಾಶಿಯ ಗಲ್ಲಿಗಳು, ಗಂಗಾ ತೀರದ ಘಟ್ಟಗಳು, ಬನಾರಸ್ ಹಿಂದೂ ವಿವಿ, ವ್ಯಾಸಕಾಶಿ, ಕಾಶೀ ರಾಜರ ನಿವಾಸವಾಗಿದ್ದ ರಾಮನಗರ್ ಕೋಟೆ, ಸಂಕಟ ಮೋಚನ ಹನುಮಾನ್ ದೇಗುಲ, ತುಳಸಿ ಮಾನಸ ಮಂದಿರ, ತಿಲಭಾಂಢೇಶ್ವರ ದೇಗುಲಗಳ ಜೊತೆಗೆ ಹತ್ತಿರದಲ್ಲೇ ಇರುವ ಪ್ರಸಿದ್ಧ ಬೌದ್ಧ ಕ್ಷೇತ್ರ ಸಾರಾನಾಥಕ್ಕೂ ಹೋಗಿದ್ದೆ. ಸಾರಾನಾಥದ ಅನುಭವ ಮತ್ತಷ್ಟು ವಿಶಿಷ್ಟ.
ಮೂರುದಿನಗಳ ಕಾಶಿ ವಾಸ್ತವ್ಯ ಮುಗಿಸಿದ ನಾನು, ಮತ್ತೆ ರೈಲು ಹತ್ತಿ ಎರಡೂವರೆ ದಿನಗಳನ್ನು ರೈಲಿನಲ್ಲಿ ಕಳೆದು ಬೆಂಗಳೂರಿನಲ್ಲಿನ ಮನೆಗೆ ಬಂದೆ. ಇದು, ನಾಲ್ಕು ವರ್ಷಗಳ ಹಿಂದೆ ನಾನು ಕಂಡ ಕಾಶಿಯಲ್ಲಿ ಆದ ಅನುಭವಗಳ ಒಂದು ಭಾಗ ಮಾತ್ರ, ತಿಳಿಸುವುದು ಇನ್ನೂ ಸಾಕಷ್ಟಿದೆ.
ಹೊಸ ಮೆರುಗಿನಲ್ಲಿ ಕಾಶಿ… ವಾರಾಣಸಿ.
ಇದೀಗ ಇಂಥ ಕಾಶಿಗೆ ಹೊಸ ಮೆರುಗು ದೊರೆತಿದೆ. ವಿಶ್ವನಾಥನ ದೇಗುಲದ ಆಸುಪಾಸಿನಲ್ಲಿದ್ದ ಹಳೆಯ ಮನೆಗಳು, ಅಂಗಡಿಗಳನ್ನು ತೆರವುಗೊಳಿಸಿ ವಿಶಾಲವಾದ ವಿಶ್ವನಾಥ ಧಾಮವನ್ನು ನಿರ್ಮಿಸಲಾಗಿದೆ. ಇದು ವಿಶ್ವನಾಥನ ದರ್ಶನಕ್ಕಾಗಿ ಕಾಶಿಗೆ ಬರುವ ಯಾತ್ರಿಕರು ಅನುಭವಿಸುತ್ತಿದ್ದ ಕಿರಿಕಿರಿ ಮತ್ತು ನೂಕುನುಗ್ಗಲನ್ನು ನಿವಾರಿಸುತ್ತದೆ.
ಕಾಶಿ… ಅವರವರಿಗೆ ದಕ್ಕಿದ್ದು.
ಭಾರತದ ಅಧ್ಯಾತ್ಮಿಕ ರಾಜಧಾನಿಯೆನ್ನಿಸಿರುವ ಅವಿನಾಶಿ ನಗರಿ ಕಾಶಿ ಬಗೆಗಿನ ಎಲ್ಲ ಅನುಭವಗಳೂ ಕೂಡ ಅವರವರಿಗೆ ದಕ್ಕಿದಷ್ಟು ಮಾತ್ರ. ಕಾಶಿ ಬಗ್ಗೆ ಯಾರೇ ಬರೆದರೂ, ಎಷ್ಟೇ ಬರೆದರೂ, ಹೇಗೆ ಬರೆದರೂ ಅದು ಅಪೂರ್ಣವೇ ಹೊರತು ಅಂತಿಮವಲ್ಲ. ಏಕೆಂದರೆ, ಕಾಶಿ ಅನ್ನುವುದು ಸದಾ ಪ್ರಕಾಶಿಸುತ್ತಲೇ ಇರುವಂಥದ್ದು. ಬರೆಯುತ್ತಾ ಹೋದರೆ, ನಮ್ಮ ಬದುಕು ಮುಗಿಯುತ್ತದೆಯೇ ಹೊರತು, ಕಾಶಿಯ ಚರಿತ್ರೆ ಮತ್ತು ವಿಸ್ಮಯಗಳು ಎಂದಿಗೂ ಮುಗಿಯುವುದಿಲ್ಲ.
- ವ್ಯೋಮಕೇಶ
