ಕವಿಯತ್ರಿಯಾಗಿ, ಗಜಲ್ ಗಾತಿ೯ಯಾಗಿ, ಸಾಹಿತ್ಯದ ಹಲವಾರು ಪ್ರಕಾರಗಳನ್ನು ಬರೆಯುತ್ತಾ, ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿ ಕೊಂಡುವರು ಶ್ರೀಮತಿ ಕಸ್ತೂರಿ ಡಿ ಪತ್ತಾರರವರು. ಅವರ ಸಾಹಿತ್ಯ ಪ್ರೇಮದ ಕುರಿತು ಲೇಖಕ, ಕವಿ ನಾರಾಯಣಸ್ವಾಮಿ ಮಾಲೂರು ಅವರು ಓದುಗರಿಗೆ ಪರಿಚಯಿಸಿದ್ದಾರೆ. ತಪ್ಪದೆ ಮುಂದೆ ಓದಿ…
ಒಂದು ಕುಟುಂಬದಲ್ಲಿ ಎಲ್ಲಾರು ಸುಶಿಕ್ಷಿತರು ಕಲಾವಿದರೂ ವಿದ್ಯಾವಂತರು ಇದ್ದಾಗ ಸ್ವಾಭಾವಿಕವಾಗಿ ಹಲವಾರು ಕಲಾಪ್ರತಿಭೆಗಳು ಉದಯವಾಗುತ್ತಾರೆ. ತಾನು ಅಂತಹ ವಿದ್ಯೆಯನ್ನು ಕಲಿತು ಎನಾದರೂ ಸಾಧಿಸಬೇಕೆಂಬ ಧೇಯವನ್ನು ಹೊತ್ತು ಮುಂದುವರಿಯುತ್ತಾರೆ. ಇಂತಹ ಕುಟುಂಬದಿಂದ ಬಂದು ಕವಿಯತ್ರಿಯಾಗಿ, ಗಜಲ್ ಗಾತಿ೯ಯಾಗಿ, ಸಾಹಿತ್ಯದ ಹಲವಾರು ಪ್ರಕಾರಗಳನ್ನು ಬರೆಯುತ್ತಾ, ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿ ಕೊಂಡುವರು ಶ್ರೀಮತಿ ಕಸ್ತೂರಿ ಡಿ ಪತ್ತಾರರವರು.
ಶ್ರೀಮತಿ ಕಸ್ತೂರಿ.ಡಿ.ಪತ್ತಾರ ರವರು ಶ್ರೀ ಶೇಖರಪ್ಪ ಬಡಿಗೇರ ಮತ್ತು ಶ್ರೀಮತಿ ಪಾವ೯ತಮ್ಮ ಶೇಖರಪ್ಪ ಬಡಿಗೇರ ಇವರ ಮಗಳಾಗಿ ಸಾ|| ಬಳಗಾನೂರು ಗದಗ ಜಿಲ್ಲೆ ಜನಿಸಿದರು. ಪ್ರಾಥಮಿಕ ಶಿಕ್ಷಣವಾದ ಒಂದರಿಂದ ನಾಲ್ಕನೇ ತರಗತಿಯವರೆಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲಟ ಗ್ರಾಮದಲ್ಲಿ ಮುಗಿಸಿದರು. ತದನಂತರದಲ್ಲಿ ಅದೇ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಐದರಿಂದ ಎಳನೇಯ ತರಗತಿಯವರಗೆ ರಾಮತ್ನಾಳ ಎಂಬ ಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ತದನಂತರದಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಸಜ್ಜಲಗುಡ್ಡದಲ್ಲಿ ಮುಗಿಸಿದರು.

ತಮ್ಮ ಪ್ರೌಢ ಶಿಕ್ಷಣ ಮುಗಿದ ನಂತರ ಚಿಕ್ಕವಯಸ್ಸಿನಲ್ಲೇ ಕುಟುಂಬದವರು ತಮ್ಮ ಸೋದರ ಮಾವನಾದ ಶ್ರೀ ದೇವೇಂದ್ರ ಕುಮಾರ ಪತ್ತಾರ ಮುಧೋಳ ರವರಿಗೆ ಕೊಟ್ಟು ಮದುವೆಯನ್ನು ಮಾಡಿದರು. ಆಗಲೇ ಶ್ರೀ ದೇವೇಂದ್ರ ಕುಮಾರ್ ಪತ್ತಾರ ರವರು ನಾಡಿನ ಶ್ರೇಷ್ಠ ಹಿಂದುಸ್ತಾನಿ ಸಂಗೀತ ವಿದ್ವಾನ್ ರಾಗಿದ್ದರು, ಮತ್ತು ಇವರು ರಾಯಚೂರ ಜಿಲ್ಲೆಯ ಮುದಗಲ್ಲದಲ್ಲಿ ಸರ್ಕಾರಿ ಪ್ರೌಢ ಶಾಲಾ ಸಂಗೀತ ಶಿಕ್ಷಕರಾಗಿದ್ದರು,
ಮದುವೆ ನಂತರ ತಮ್ಮ ಯಜಮಾನರು ಓದಿನ ಬಗ್ಗೆ ತಮಗಿರುವ ಅಪಾರ ಪ್ರೀತಿಯ ಇರುವುದನ್ನು ಗಮನಿಸಿ ಕಾಲೇಜು ಶಿಕ್ಷಣ ಮುಂದುವರಿಸಲು ಪ್ರೇರೇಪಿಸಿ ಓದಿಗೆ ಪ್ರೋತ್ಸಾಹಿಸಿದರು. ಕಾಲೇಜು ಶಿಕ್ಷಣವನ್ನು ಸಜ್ಜಲಗುಡ್ಡದ ಶರಣಮ್ಮ ತಾಯಿ ಕಾಲೇಜಿನಲ್ಲಿ ಮುಗಿಸಿ ಅಲ್ಲೆಯೇ ಎರಡು ವರ್ಷದ ಡಿಪ್ಲೊಮಾ ಜೆಒಡಿಸಿ ಕೋರ್ಸ ಮಾಡಿದರು ಶ್ರೀಮತಿ ಕಸ್ತೂರಿ ಡಿ ಪತ್ತಾರ ರವರು.
ನನ್ನ ನನ್ನ ಯಜಮಾನರು ಪಾಲಿಗೆ ಪತಿಯಾಗದೆ, ಒಬ್ಬ ಗುರುವಾಗಿ, ತಂದೆಯಾಗಿ, ಒಬ್ಬ ಗೆಳೆಯನ ತರಹ ನಾನು ತಿಳಿಯದೆ ಮಾಡುವ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳುತ್ತ ಹೆಜ್ಜೆ ಹೆಜ್ಜೆಗೂ ನೆರಳಾದರೆಂದು ತಮ್ಮ ಪತಿಯ ಬಗ್ಗೆ ಕವಯಿತ್ರಿ ಅಭಿಮಾನದಿಂದ ಹೇಳುತ್ತಾರೆ.
ಶ್ರೀಮತಿ ಕಸ್ತೂರಿ.ಡಿ.ಪತ್ತಾರರವರು ತಮ್ಮ ಬಾಲ್ಯದ ದಿನಗಳ ಬಗ್ಗೆ ಹೀಗೆ ಹೇಳುತ್ತಾರೆ. ನನ್ನ ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದೆ. ನನಗೆ ಹಳ್ಳಿಯ ಜನರ ಜೊತೆ ಹೆಚ್ಚು ಒಡನಾಡವಿತ್ತು. ರೈತಾಪಿ ಜನರ ಬದುಕು, ಕೂಲಿ ಕಾರ್ಮಿಕರ ಬವಣೆ, ಚಿಕ್ಕವಯಸ್ಸಿನಲ್ಲೇ ನನಗೆ ತುಂಬಾ ವಿಭಿನ್ನ ಅನುಭವ ನೀಡುತ್ತಿತ್ತು. ನಮ್ಮ ತಂದೆಗೆ ಆರು ಜನ ಮಕ್ಕಳು, ಅದರಲ್ಲಿ ನಾನೇ ಮೊದಲನೆ ಮಗಳು, ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲಿ ಓದಿದೆ. ಏಕೋಪಾಧ್ಯಾಯ ಶಾಲೆಗಳು ಆ ಕಾಲದಲ್ಲಿ ಒಬ್ಬರೇ ಅಧ್ಯಾಪಕರು ಇರುತ್ತಿದ್ದ ಕಾರಣ ಒಂದರಿಂದ ಆರನೆ ತರಗತಿ ವರಗೆ ಅಷ್ಟೇ ಇತ್ತು. ಅದು ಕೂಡ ಸರಿಯಾದ ಬೆಳಕು ಗಾಳಿ ಇಲ್ಲದ ಊರಿನ ಗೌಡರ ಕಾಳು ತುಂಬುವ ಗೋಡನ್ ನೇ ನಮಗೆ ಶಾಲೆಯಾಗಿತ್ತು. ಅಷ್ಟು ಕಷ್ಟದ ಕಾಲಮಾನ ಅದು, ಏಳನೇ ತರಗತಿಯನ್ನು ಓದುವಾಗ ಸುಮಾರು ೭ ಕಿಲೋಮೀಟರ್ ನಡೆದು ಕೊಂಡು ಹೋಗಿ ಓದ ಬೇಕಾದ ಪರಿಸ್ಥಿತಿ ಇತ್ತು, ಓದು ಎಂದರೆ ನನಗೆ ತುಂಬಾ ಇಷ್ಟ ಇದ್ದ ಕಾರಣ ನಡೆದು ಕೊಂಡು ಹೋಗಿ ಶಾಲೆ ತಲುಪುತ್ತಿದ್ದೆ. ಗಂಡು ಹೆಣ್ಣು ಎನ್ನುವ ಭೇದಭಾವ ಯಾವುದು ಇರಲಿಲ್ಲ, ನಾವು ನಾಲ್ಕು ಹುಡುಗರು ಇಬ್ಬರು ಹುಡುಗಿಯರು ಕೂಡಿ, ನಡೆದು ಕೊಂಡು ಹೋಗಿ ಶಾಲೆಯನ್ನು ತಲುಪುತ್ತಿದ್ದವು. ಆ ದಿನಗಳು ಇಂದಿಗೂ ಮರೆಯಲಾರದ ನೆನಪು, ಈಗಿನ ತರ ಹಳ್ಳಿಯಲ್ಲಿ ನಲ್ಲಿಗಳಿರಲಿಲ್ಲ, ಬಾವಿಯಿಂದ ನೀರು ಸೇದಿ ತಂದು ಹಾಕಿ, ಹಾಗೆ ಹಳ್ಳದಲ್ಲಿ ಚಿಲುಮೆ ತೋಡಿ ಕುಡಿಯುವ ನೀರು ತಂದು ರೊಟ್ಟಿ ಕಟ್ಟಿಕೊಂಡು ಶಾಲೆಗೆ ಹೋಗಬೇಕಾಗಿತ್ತು. ಮುಂದೆ ಹೈಸ್ಕೂಲ್ ಶಿಕ್ಷಣ ಇನ್ನೂ ಕಷ್ಟವಾಯಿತು, ನಮ್ಮ ತಂದೆ ನೀರಾವರಿ ಇಲಾಖೆಯಲ್ಲಿ ಇದ್ದ ಕಾರಣ ಎರಡು ವರ್ಷಕ್ಕೆಲ್ಲ ವಗಾ೯ವಣೆ ಆಗುತ್ತಿತ್ತು .. ಯಾವುದೇ ಸೌಕರ್ಯಗಳಿಲ್ಲದೇ ಬಸ್ಸಿಲ್ಲದ ಕಗ್ರಾಸ್ ಊರಿಗೆ ವರ್ಗಾವಣೆ ಆದ ಕಾರಣ ಹೈಸ್ಕೂಲ್ ಶಿಕ್ಷಣವು ಕಬ್ಬಿಣದ ಕಡಲೆಯಾಯಿತು, ಯಾಕೆಂದರೆ ಹತ್ತು ಕಿಲೋಮೀಟರ್ ನಡೆದು ಬಂದು ಬಸ್ಸು ಹಿಡಿದು ಹೋಗಬೇಕಾದ ಸ್ಥಿತಿ ಬಂದೊದಗಿತ್ತು. ಹೀಗೆ ಅಡೆತಡೆಗಳು, ಇಂಥ ಪರಸ್ತಿತಿಯಲ್ಲೂ ಕಥೆ ಹಾಗೂ ಕಾದಂಬರಿ ಓದುವ ಹವ್ಯಾಸ ಬಹಳವಿತ್ತು, ನನ್ನ ತಂದೆಗೆ ಓದುವ ಹವ್ಯಾಸ ಇದ್ದ ಕಾರಣ ಮನೆಯಲ್ಲಿ ಸುಧಾ ಮಯೂರ ಚಂದಮಾಮ ಪುಸ್ತಕ ತರುತ್ತಿದ್ದರು ಆಗಾಗ ನಾನು ಅವುಗಳನ್ನು ಓದುತ್ತಿದ್ದೆ, ಎಷ್ಟೋ ಸಾರಿ ಅಮ್ಮನ ಕಡೆ ಬೈಸಿಕೊಂಡಿರುವೆ, ಆಗಿನ ಕಾಲದಲ್ಲಿ ನಮ್ಮ ಹಳ್ಳಿಯಲ್ಲಿ ಗ್ರಂಥಾಲಯ ಇರುತ್ತಿತ್ತು, ಅಪ್ಪನ ಜೊತೆಗೆ ಹೋದಾಗೆಲ್ಲ ನನಗೆ ಬೇಕಾದ ಒಂದು ಪುಸ್ತಕ ತಂದು ಓದುತ್ತಿದ್ದೆ. ಆಗಿನಿಂದ ಓದು ಬರೆಯುವ ಹವ್ಯಾಸ ಬೆಳೆಯಿತು. ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾರೆ ಶ್ರೀಮತಿ ಕಸ್ತೂರಿ ಡಿ ಪತ್ತಾರ ರವರು.

ತದನಂತರ ದೇವೇಂದ್ರ ಕುಮಾರ ಪತ್ತಾರ ಮುಧೋಳ ರವರಿಗೆ ಸಿಂಧನೂರಿನ ಸರಕಾರಿ ಶಿಕ್ಷಕರ ತರಬೇತಿ ಕೇಂದ್ರ ಟಿ. ಸಿ. ಎಚ್, ಕಾಲೇಜ್ ಗೆ ವರ್ಗಾವಣೆ ಆಯ್ತು, ಆಗ ಸಿಂಧನೂರು ಕೂಡಾ ಸಾಂಸ್ಕೃತಿಕವಾಗಿ ಹೆಸರಾಗಿದ್ದು, ಸಾಹಿತ್ಯ ಪರ ಚಟುವಟಿಕೆಗಳು ಬಹಳಷ್ಟು ನಡೆಯುತ್ತಿದ್ದವು, ನನ್ನ ಪತಿಯೊಡನೆ ಹಲವಾರು ಸಾಹಿತ್ಯಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರಿಂದ ಹಲವಾರು ವಿಚಾರಗಳನ್ನು ತಿಳಿದುಕೊಂಡ ಅನುಭವದಿಂದ ಸ್ಪೂರ್ತಿಯ ಪಡೆದು ಹನಿಗವಿತೆ, ಕವಿತೆಗಳನ್ನು ಬರೆಯಲಾರಂಭಿಸಿದರು , ವಿಭಿನ್ನ ಪ್ರಕಾರವಾದ ಕನ್ನಡ ಗಜಲ್, ಹಾಗೂ ಕನ್ನಡ ಶಾಯಿರಿ ಬರೆಯುವುದು ಕವಯತ್ರಿಯ ಅಚ್ಚು ಮೆಚ್ಚಿನ ವಿಷಯವಾಗಿತ್ತು. ಅಂತರಂಗದರಿವು (ಆಧುನಿಕ ವಚನಗಳು) ಎಂಬ ಕೃತಿಯನ್ನು ಚೊಚ್ಚಲ ಕೃತಿಯಾಗಿ ೨೦೧೬ ರಲ್ಲಿ ಲೋಕಾರ್ಪಣೆ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶ ಮಾಡಿದರು. ನಂತರದಲ್ಲಿ ಭಾವಜೇನು (ಭಾವಗೀತೆಗಳು) ಕೃತಿಯನ್ನು ೨೦೧೮ ರಲ್ಲಿ. ಕಾವ್ಯಾಂತರಂಗ (ಭಾವಗೀತೆಗಳು) ಸಂಕಲನವನ್ನು ೨೦೧೮ ರಲ್ಲಿ. ನುಡಿಬೆಳಗು (ಮನದ ಮಿಡಿತಗಳು) ಸಂಕಲನವನ್ನು ೨೦೨೦ರಲ್ಲಿ. ಭವತೊರೆ (ಕವನ ಸಂಕಲನ) ಕೃತಿಯನ್ನು– ೨೦೨೧ರಲ್ಲಿ. ಪ್ರೀತಿ ಘಮಲು (ಕನ್ನಡ ಶಾಯಿರಿಗಳು) ಸಂಕಲನವನ್ನು ೨೦೨೧ ರಲ್ಲಿ. ಹೃದಯಗಳು ಮಾತಾಡಿವೆ (ಕನ್ನಡ ಗಜಲ್) ಕೃತಿಯನ್ನು ೨೦೨೨ರಲ್ಲಿ. ಒಲುಮೆ ಗಾನ (ಭಾವಗೀತೆಗಳು) ಕೃತಿಯನ್ನು ೨೦೨೩ ಬಿಡುಗಡೆ ಮಾಡಿ ಯಶಸ್ವಿಯಾಗಿ ಓದುಗರ ಮನಕ್ಕೆ ತಲುಪಿಸಿದರು. ಈಗ ಭಾವಪ್ರವಾಹ (ಕನ್ನಡ ಗಜಲ್) ಕೃತಿಯು ಅಚ್ಚಿನಲ್ಲಿದೆ.
ಶ್ರೀಮತಿ ಕಸ್ತೂರಿ.ಡಿ.ಪತ್ತಾರ ರವರ ಕೃತಿಗಳಾದ ಭಾವಜೇನು ಮತ್ತು ಕಾವ್ಯಾಂತರಂಗದಿಂದ ಆಯ್ದ ಹಲವು ಕವನಗಳನ್ನು ಸಂಗೀತ ಸಂಯೋಜನೆಯೊಂದಿಗೆ ಸಿಡಿ ಮೂಲಕ “ನನ್ನೆದೆಯ ಗೂಡಿನಲಿ” ಎಂಬ ಶೀರ್ಷಿಕೆಯೊಂದಿಗೆ ಲೋಕಾರ್ಪಣೆ ಮಾಡಿ ಅನೇಕರ ಮನ ತಲುಪಿಸಲಾಗಿದೆ. ಆಧುನಿಕ ವಚನ ಸಂಕಲನ “ಅಂತರಂಗದರಿವು” ಎಂಬ ಕೃತಿಯಿಂದ. ಆಯ್ದ ಕೆಲವು ವಚನಗಳನ್ನು “ನಿನ್ನಂತೆ ನೀನಾಗು” ಶೀರ್ಷಿಕೆಯೊಂದಿಗೆ ಬಂದ ಸಿಡಿ ಈಗಾಗಲೇ ಜನಮೆಚ್ಚುಗೆ ಪಡೆದಿವೆ. ಜೊತೆಗೆ ನಾಡಿನ ಹಲವಾರು ಗಣ್ಯರ ಕುರಿತು ಅಭಿನಂದನಾ ಗೀತೆಗಳನ್ನು ಗೀತೆಗಳನ್ನು ಬರೆದಿದ್ದಾರೆ. ಪ್ರಸಿದ್ಧ ಪತ್ರಿಕೆಯಾದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಯಾಗಾದಿ ವಿಷೇಶಾಂಕದಲ್ಲಿ ಕವನ ಪ್ರಕಟವಾಗಿವೆ, ನಾಡಿನ ಹಲವಾರು ಪತ್ರಿಕೆಯಲ್ಲಿ ಸಾಂರ್ದಭಿಕ ಲೇಖನಗಳು ಪ್ರಕಟವಾಗಿವೆ. ವಿನಯವಾಣಿ ಪತ್ರಿಕೆ, ವಿಶ್ವವಾಣಿ ಪತ್ರಿಕೆ, ಪ್ರಜಾಪರ್ವ ಹಾಗೂ ದೇಶದೂತ ಪತ್ರಿಕೆ ಗಳಲ್ಲಿ ಕವನಗಳು ಗಜಲ್ಗಳು ಪ್ರಕಟವಾಗಿವೆ.
ಶ್ರೀಮತಿ ಕಸ್ತೂರಿ.ಡಿ.ಪತ್ತಾರ ರವರ ಮಗಳು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ. ಪಿ.ಎಚ್.ಡಿ ಮಾಡಿದ್ದಾಳೆ ಹಾಗೂ ಆಕಾಶವಾಣಿ ಕಲಾವಿದೆಯಾಗಿದ್ದಾರೆ. ಮಗ ಪ್ರಣವ್ ಸಿವಿಲ್ ಇಂಜಿನಿಯರ್ ಯಾಗಿದ್ದರೂ ಕನ್ನಡದ ಬಗ್ಗೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡಿದ್ದಾರೆ. ಕವಯತ್ರಿಯಾದ ಶ್ರೀಮತಿ ಕಸ್ತೂರಿ.ಡಿ.ಪತ್ತಾರ ರವರ ಇದುವರೆಗಿನ ಎಲ್ಲಾ ಕವಿತೆಗಳನ್ನು ಡಿಟಿಪಿ ಮಾಡಿ ಕನ್ನಡ ಸೇವೆಗೆ ಸಹಕರಿಸಿದ್ದಾರೆ, ಸಹನ ಶೀಲ ಸ್ವಭಾವ ಸದಾ ಹಸನ್ ಮುಖಿಯಾದ ಇವರ ಯಜಮಾನರು ಸಾವಿರಾರು ಸಿ ಡಿ ಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗೂ ಹಾಡಿದ್ದಾರೆ, ಸಂಗೀತ ಅಕಾಡೆಮಿಯ ಕನಾ೯ಟಕ ಕಲಾಶ್ರೀ, ಪ್ರಶಸ್ತಿಯನ್ನು ಪಡೆದವರಾಗಿದ್ದು, ಇವರ ಕುಟುಂಬ ಕಲೆ ಸಾಹಿತ್ಯ ಸಂಗೀತ ಸಮ್ಮಿಲನ ಎಂಬುದು ಖುಷಿಯ ವಿಚಾರ.
ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿ ಗೌರವಿಸಿವೆ. ಕರ್ನಾಟಕ ವಚನ ಸಾಹಿತ್ಯ ಸಮ್ಮೇಳನ ೨೦೧೬ ರಲ್ಲಿ ಆಧುನಿಕ ವಚನ ವಾಚನ ಪ್ರಶಸ್ತಿ, ಮಂಡ್ಯ ಕನ್ನಡ ದಿನ ಪತ್ರಿಕೆಯು ೨೦೧೭ ರಾಜ್ಯಮಟ್ಟದ “ಕಾವ್ಯಶ್ರೀ ಪ್ರಶಸ್ತಿ. ಕಾವ್ಯಸಿಂಚನ ಸಾಂಸ್ಕೃತಿಕ ವೇದಿಕೆಯಿಂದ “ಕಾವ್ಯಸಿಂಚನ ಕಲಾ ಐಸಿರಿ ಪ್ರಶಸ್ತಿ” , ಸನಾತನ ಸಂಗೀತ ವಿದ್ಯಾಲಯ ಧಾರ್ಮಿಕ ಸಂಸ್ಥೆ ಮಾನ್ವಿ ಜಿ. ರಾಯಚೂರು ಇವರಿಂದ ದಂಪತಿಗಳಿಗೆ “ಅನರ್ಘ್ಯ ರತ್ನ ಪ್ರಶಸ್ತಿ. ೨೦೧೭ ಸುರ್ವೆ ಕಲ್ಚರಲ್ ಅಕಾಡೆಮಿಯವರು ನೀಡುವ “ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ” ಕನ್ನಡ ಸಂಸ್ಕೃತಿ ಇಲಾಖೆ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಕವನ ವಾಚನ ಗೌರವ. ನಗರ ಜಿಲ್ಲಾ ಕ.ಸಾ.ಪ.ದಿಂದ ಆದರ್ಶ ದಂಪತಿ ಪ್ರಶಸ್ತಿ. ಚೇತನ ಪ್ರಕಾಶನ ಹುಬ್ಬಳ್ಳಿಯವರು ನಡೆಸಿದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪ್ರಶಸ್ತಿ. ಜನಸೇವಾ ಸಂಸ್ಥೆ(ರಿ) ಬೆಂಗಳೂರು ಇವರಿಂದ “ಕಿತ್ತೂರು ರಾಣಿ ಚೆನ್ನಮ್ಮ ಸಾಧಕ ಪ್ರಶಸ್ತಿ” ೨೦೨೧ರಲ್ಲಿ. ಸಂಚಲನ ಮಹಿಳಾ ಪ್ರಶಸ್ತಿ “ವನಿತಾ ಅವಾರ್ಡ ೨೦೨೩” ರಲ್ಲಿ ಕೊಟ್ಟು ಗೌರವಿಸಿ ಸನ್ಮಾನಿಸಿವೆ.

ಶ್ರೀಮತಿ ಕಸ್ತೂರಿ.ಡಿ.ಪತ್ತಾರ ರವರು ರಾಜ್ಯಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಮತ್ತು ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದು, ಹಲವಾರು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿಯೂ ಕೂಡ ಭಾಗಿಸಿದ್ದಾರೆ. ಇವರು ಹಲವಾರು ಕಾರ್ಯಕ್ರಮಗಳಲ್ಲಿ ಉಪನ್ಯಾಸಗಳನ್ನು ಕೂಡ ಕೊಟ್ಟಿದ್ದಾರೆ.
ಮತ್ತೇರಡು ಕೃತಿಗಳ ಲೋಕಾರ್ಪಣೆ ಮಾಡಲು ತಯಾರಿಯಲ್ಲಿರುವ ಶ್ರೀಮತಿ ಕಸ್ತೂರಿ ಡಿ ಪತ್ತಾರರವನ್ನು. ಅಭಿನಂದಿಸುತ್ತಾ ಮುಂದೆ ಹಲವಾರು ಕೃತಿಯನ್ನು ಹೊರತಂದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲಿ. ಆ ಕೃತಿಗಳು ಮನುಜನ ಬದುಕಿನ ತಲ್ಲಣಗಳಾಗಲಿ. ತಮ್ಮ ಬರಹ ವೈಚಾರಿಕತೆ ಪ್ರಬುದ್ದತೆಯಡೆಗೆ ಸಾಗಿ ಸಮಾಜದಲ್ಲಿ ಗೌರವ ಪುರಸ್ಕಾರಗಳು ಸಿಗಲಿ ಎಂದು ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಹಾರೈಸುತ್ತೇನೆ. ಶುಭವಾಗಲಿ..
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ಕನ್ನಡದ ಸಾಹಿತ್ಯಲೋಕದ ಭಾವಧಾರೆ ವಿದ್ಯಾ ಅರಮನೆ
- ವೃತ್ತಿಯಲ್ಲಿ ಶಿಕ್ಷಕಿ, ಲೇಖಕಿ, ಸಾಮಾಜಿಕ ಹೋರಾಟಗಾತಿ೯
- ಬಹುಮುಖ ಪ್ರತಿಭೆ ಉದಯೋನ್ಮುಖ ಲೇಖಕಿ ಅಭಿಜ್ಞಾ ಪಿ ಎಮ್ ಗೌಡ
- ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕವಯಿತ್ರಿ
- ಕನ್ನಡದ ಅಕ್ಷರ ಲೋಕದಲ್ಲಿ ಬೆಳಗುತ್ತಿರುವ ನಂದಾದೀಪ
- ನಾರಾಯಣಸ್ವಾಮಿ ಮಾಲೂರು – ವಕೀಲರು ಮತ್ತು ಲೇಖಕರು , ಕೋಲಾರ ಜಿಲ್ಲೆ.
