ಕವಿಯತ್ರಿ ಎಂ ಆರ್ ಕಮಲಾ ಅವರ “ಕಸೂತಿಯಾದ ನೆನಪು ” ಕೃತಿ ಕುರಿತು ರಶ್ಮಿ ಉಳಿಯಾರು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕಸೂತಿಯಾದ ನೆನಪು
ಲೇಖಕಿ : ಎಂ ಆರ್ ಕಮಲಾ
ಪ್ರಕಾರ : ಪ್ರಬಂಧಗಳು
“ಅಮ್ಮಾ ಹಚ್ಚಿದೊಂದು ಹಣತೆ…” ಭಾವಗೀತೆ ಬರೆದ ಲೇಖಕಿಯವರು ಯಾರಿಗೆ ತಾನೇ ಗೊತ್ತಿಲ್ಲ ! ಅವರ ಲವಲವಿಕೆಯ ಮತ್ತು ಅದಮ್ಯ ಜೀವನಪ್ರೀತಿ ಆಪ್ತವೆನ್ನಿಸುತ್ತವೆ. ಚಂದದ ಮುಖಪುಟದ ಈ ಪುಸ್ತಕವು ಒಟ್ಟು ಐವತ್ತೊಂದು ಪ್ರಬಂಧಗಳ ಗುಚ್ಛ. ಸುಮಾರಾಗಿ ಎರಡರಿಂದ ಮೂರು ಪುಟಗಳನ್ನು ಮೀರದ ಬರಹಗಳಿವೆ ಇಲ್ಲಿ. ಕೃತಿಯನ್ನು ಅವರು ತಮ್ಮ ಹುಟ್ಟೂರಾದ ಮೇಟಿಕುರ್ಕೆಯ ಹಳೆ ಮನೆಗೆ ಮತ್ತು ತಮ್ಮ ತಾಯಿ ಸ್ವರೂಪದ ಅತ್ತೆಯವರಾದ ಸೀತಾಲಕ್ಷ್ಮಿ ಅವರಿಗೆ ಅರ್ಪಿಸಿದ್ದಾರೆ.
ಅರವತ್ತರ ಮರಳಿ ಅರಳುವ ಹೊಸ್ತಿಲಲ್ಲಿ ನಿಂತು ಹಿಂತಿರುಗಿ ತಮ್ಮ ಬದುಕನ್ನು ಲೇಖನಗಳ ಮೂಲಕ ಸಿಂಹಾವಲೋಕನ ಮಾಡಿದ್ದಾರೆ. ಒಟ್ಟು ಹನ್ನೊಂದು ಒಡಹುಟ್ಟಿದವರ ಜೊತೆಗಿನ ಬಾಲ್ಯ, ಆಗಿನ ಜೀವನದ ರೀತಿ, ತಾಯಿ ತಂದೆ, ಯೌವನ, ಉದ್ಯೋಗ, ಮಕ್ಕಳು, ಬದುಕಿನ ದೃಷ್ಟಿಕೋನಗಳು, ಉಪನ್ಯಾಸಕಿ ಹಾಗೂ ಸರಕಾರಿ ಕಾಲೇಜುಗಳ ಪ್ರಾಂಶುಪಾಲೆಯಾಗಿ ಎದುರಿಸಿದ ಬಗೆ ಬಗೆಯ ಸವಾಲುಗಳು, ಅನುಭವಗಳು… ಹೀಗೆ ಇಲ್ಲಿ ಹತ್ತಾರು ವಿಷಯಗಳಿವೆ. ಬದುಕು, ಬಣ್ಣಗಳು, ಹಾಡುಗಳು, ಸೀರೆಗಳು, ಜಾಲಾರಿ ಹೂವುಗಳು, ಹಸಿರು, ಮಳೆ, ಸಮಾಜ, ಜನರು ಇತ್ಯಾದಿ ಎಲ್ಲದರ ಬಗ್ಗೆ ತುಂಟತನದಿಂದ ತೊಡಗಿ ಗಂಭೀರ ದನಿಯ ಬರಹಗಳಿವೆ.

ಮಹಿಳಾ ಸಂವೇದನೆಯ ನೆಲೆಯಲ್ಲಿ ನಿಂತು ಗಟ್ಟಿ ದನಿಯಲ್ಲಿ ಹೆಣ್ಣಿನ ಅಸ್ಮಿತೆಯನ್ನು ಶ್ರುತಪಡಿಸುವ ಅವರ ಅನನ್ಯ ಬಗೆ ನಮ್ಮ ಭಾವವಲಯವನ್ನು ತಟ್ಟುತ್ತದೆ. ಇಲ್ಲಿನ ಹಲವಾರು ಪ್ರಬಂಧಗಳಲ್ಲಿ ಅವರ ತಾಯಿಯ ನೆನೆಹುಗಳಿವೆ. ಪ್ರೀತಿಯ ಸಾಕು ನಾಯಿ ಕಾಳನ ಕುರಿತಾಗಿಯೂ ಉಲ್ಲೇಖಗಳಿವೆ. ಮಗ, ಮಗಳು ಮತ್ತು ಪತಿಯವರದೂ ಸಹ. ಈ ಪುಸ್ತಕವು ಮೇಡಂ ಅವರ ಬಗ್ಗೆ, ಅವರ ಬದುಕಿನ ದಿಟ್ಟ ಮತ್ತು ಗಟ್ಟಿ ನಿಲುವುಗಳ ಬಗ್ಗೆ ಸೋದಾಹರಣವಾಗಿ ನಿರೂಪಿಸುತ್ತದೆ. ಅವರನ್ನು ನಮಗೆ ಪರಿಚಯಿಸುತ್ತದೆ. ಅಲ್ಲದೇ ಅವರ ಬದುಕಿನ ಹಲವಾರು ಆಯಾಮಗಳನ್ನು ಚಿತ್ರಿಸುತ್ತದೆ.
ಮನೆಯೆಂದರೆ ಯಾವುದು? ಮತ್ತು ಗೋಡೆಗಳಿಲ್ಲದ ಆಕಾಶ ಎಂಬ ಮೊದಲೆರಡು ಲೇಖನಗಳೇ ಸಾಕು, ಈ ಪುಸ್ತಕದೊಳಗೆ ಹೊಕ್ಕು ತಾದಾತ್ಮ್ಯ ಭಾವ ಹೊಂದಲು. ಹೆಣ್ಣುಮಕ್ಕಳಿಗೆ ಮನೆ ಯಾವುದು? ಹುಟ್ಟಿದ ಮನೆಯೊಂದಿಗೆ ಭೂತಕಾಲದಿಂದ ಬೆಸೆದ ಭಾವುಕತೆ ಇದ್ದರೂ ಪ್ರಸ್ತುತ ಯಾರೂ ವಾಸವಿರದ ಆ ಮನೆಯು ನಮ್ಮದೆನಿಸೀತೆ? ಅಲ್ಲೀಗ ವಾಸಿಸುವುದು ಸಾಧ್ಯವೇ? ಅದಕ್ಕೆಂದೇ ಅವರು ಬರೆಯುತ್ತಾರೆ; ಸಂಬಂಧಗಳನ್ನು ಬೆಸೆದ, ಮನಸ್ಸಿನಲ್ಲಿ ಅದನ್ನು ಹಾಗೇ ಹೊತ್ತುಕೊಂಡು ಬಂದ ಆ ಮನೆ ಮಾತ್ರ ನನ್ನ ಮನೆ!… ಎಂದು. ಮನೆಗೂ ಮನಸ್ಸಿಗೂ ಗೋಡೆ ಕಟ್ಟಿಕೊಳ್ಳದೇ ಪಾರದರ್ಶಕವಾಗಿ ಬದುಕುವುದು ಅಭ್ಯಾಸವಾದವರಿಗೆ ಇಳಿಗಾಲಲ್ಲಿ ಹೊಸ ವೇಷ ಕಟ್ಟುವುದು ಕಷ್ಟ. ಅದನ್ನು ಸಾಧಿಸುವತ್ತ ಸತತ ಪ್ರಯತ್ನ ಬೇಕು…ಇಲ್ಲಿ ತಾಯಿಯಂತೆ ಮಗಳು ಅಂದರೆ ಲೇಖಕಿಯೂ ಸಹ.
ಆದರೆ ಇವಿಷ್ಟೇ ಅಲ್ಲ. ಇಲ್ಲಿ ಅನೇಕ ಸಂಗತಿಗಳಿವೆ. ಬದುಕಿನಲ್ಲಿ ಬಯಸಿದ್ದನ್ನು ಮಾಡಲು ಹಳ್ಳಿಯ ತಮ್ಮ ಮನೆಯಲ್ಲಿ ತಂದೆಯವರಿಂದ ಪಡೆದ ಸ್ವಾತಂತ್ರ್ಯ ಮತ್ತು ನಗರದ ಗಂಡನ ಮನೆಯಲ್ಲೂ ಸಿಕ್ಕಿದ ತವರಿನಂತಹುದೇ ಬೆಂಬಲ (ಮದುವೆಯಾದ ಮೇಲೆ ಭರತನಾಟ್ಯ ಮತ್ತು ವೀಣೆ ಕಲಿತದ್ದು) ತಮಗೆ ದೊರೆತಂತೆ ಹೆಚ್ಚಿನವರಿಗೆ ಸಿಗಲಾರದು ಎಂಬ ವಾಸ್ತವ ಸತ್ಯ ಅವರಿಗೆ ಗೊತ್ತು. ಅಷ್ಟಾಗಿ ಧಾರ್ಮಿಕ ಸ್ವಭಾವದವರಲ್ಲದ ಅವರಿಗೆ ಶ್ರಾವಣ ಮಾಸ ಬಂದರೆ ಅಡುಗೆಮನೆಯಲ್ಲಿ ದುಡಿ ದುಡಿದೇ ಹಣ್ಣಾಗುವ ಹೆಣ್ಣುಗಳ ಕಷ್ಟದ ಅರಿವು ತಾಯಿಯಿಂದ ಕಂಡಿದೆ. ಇಂತಹ ಹಬ್ಬಗಳಲ್ಲಿ ಅವರ ಮಾವನವರು ಅಡುಗೆಯವರನ್ನು ಕರೆಸಿ ಮಾಡಿಸುವ ತನ್ಮೂಲಕ ಮನೆಯ ಹೆಣ್ಣುಮಕ್ಕಳಿಗೆ ಆರಾಮಾಗಿ ಹಬ್ಬ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದರಂತೆ.

ಹೆಣ್ಣಿನ ವಿರುದ್ಧ ಗಂಡು ಮಾತನಾಡುವುದು ಏನೂ ಹೊಸದಲ್ಲ. ಆದರೆ ‘ಗಂಡು ಮನಸ್ಥಿತಿಯ’ ಹೆಣ್ಣುಗಳು ತಮ್ಮಂತೆ ಇರುವ ಇನ್ನೊಂದು ಹೆಣ್ಣನ್ನು ಪ್ರಶ್ನಿಸುವುದು ಮತ್ತು ಆಕೆಯೊಂದಿಗೆ ನಿಲ್ಲದಿರುವುದು ವಿಷಾದನೀಯ ಎಂಬರ್ಥದ ಮಾತುಗಳಿವೆ. ಮೇಡಂ ಅವರು ಇಲ್ಲಿ ತಾವು ಪ್ರವಾಸ ಮಾಡಿದ ಗಯಾ, ಕಾಶಿ, ಪ್ರಯಾಗಗಳ ಬಗ್ಗೆಯೂ ಬರೆದಿದ್ದಾರೆ. ಹೆಣ್ಣಿಗೆ ತನ್ನ ಯಾವುದೇ ಹವ್ಯಾಸಗಳನ್ನು, ಜೀವನೋತ್ಸಾಹವನ್ನು ಕಾಪಿಡುವ ಸಂಗತಿಗಳನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಅದೆಷ್ಟು ಕಷ್ಟ ಎನ್ನುವ ಬಗ್ಗೆ ಬರೆದಿದ್ದಾರೆ. ಅಡುಗೆ ಮಾಡುವಾಗಲೋ ಅಥವಾ ಪಾತ್ರೆ ತೊಳೆಯುವಾಗಲೋ ಹೊಳೆಯುವ ಸಾಲುಗಳು ಮತ್ತೆ ಮರೆತೇ ಹೋಗುತ್ತವೆ. ಅದೆಷ್ಟು ಸತ್ಯ ಅಲ್ಲವೇ!
ನನ್ನನ್ನು ಅತೀ ಹೆಚ್ಚು ಕಾಡಿದ ಇಲ್ಲಿನ ಅಧ್ಯಾಯ ಎಂದರೆ ನಿಂತ ನೀರ ಕಲಕಬೇಡಿ ಕಲ್ಲುಗಳೇ! (ಪುಟ ೧೨೪). ಅದೆಷ್ಟು ಗಾಢವಾಗಿ ಕಾಡುವ ಮತ್ತು ಚಿಂತನೆಗೆ ಹಚ್ಚುವ ಬರಹವೆಂದರೆ ಅದನ್ನು ಎರಡು ಮೂರು ಬಾರಿ ಓದಿ ನನ್ನ ಕೆಲವು ಅನುಭವಗಳನ್ನು ಸಮೀಕರಿಸಿಕೊಂಡು, ಭೂತದಲ್ಲಿ ಪಯಣಿಸಿ, ಆ ನೋವುಗಳಿಗೆ ಮುಲಾಮು ಹಚ್ಚದೇ ಮುಂದೆ ಓದಲು ಸಾಧ್ಯವೇ ಆಗಲಿಲ್ಲ! ಅಲ್ಲದೇ ಕೂಡಲೇ ಆ ಪುಟದ ಸಾಲುಗಳನ್ನು ಹೈಲೈಟ್ ಮಾಡಿ ಆಗಲೇ ವ್ಯಾಟ್ಸಪ್ ಸ್ಟೇಟಸ್ ಸಹ ಹಾಕಿದೆ.
ಉದಾಹರಣೆಗೆ ಈ ಸಾಲುಗಳು :
“ಇಲ್ಲಿ ಶ್ರೇಷ್ಠ ಕನಿಷ್ಠ ಎನ್ನುವುದು ಇಲ್ಲವೇ ಇಲ್ಲ, ಇದ್ದರೆ ಇನ್ನೊಬ್ಬರಿಗೆ ಮಾಡುವ ಒಳಿತು-ಕೆಡುಕು ಮಾತ್ರ.ಅದು ಅರ್ಥವಾದರೆ ಇಂಥದ್ದನ್ನೆಲ್ಲ ಮುಲಾಜಿಲ್ಲದೇ ಮನಸ್ಸಿನಿಂದ ಬಿಸಾಕಿ ಮುನ್ನಡೆಯುತ್ತೇವೆ. ನನ್ನ ಎದೆಗೊಳಕ್ಕೆ ನೀವು ವಿಷವನ್ನು ಸೇರಿಸಲಾರಿರಿ ಎನ್ನುವುದನ್ನು ಸಾಧಿಸಿ ನಡೆಯುವುದು ಸುಲಭವಲ್ಲ, ಮನಸ್ಸು ಮಾಡಿದರೆ ಕಷ್ಡವೂ ಅಲ್ಲ.”
ಇಲ್ಲಿನ ಎಲ್ಲ ಬರಹಗಳು ಯೋಚನೆಗೆ ಹಚ್ಚುತ್ತವೆ. ಬಹಳ ಸ್ಪೂರ್ತಿದಾಯಕವಾಗಿದೆ. ಎಷ್ಟೋ ಕಡೆಗಳಲ್ಲಿ ಲೇಖಕಿ ಸ್ವಗತವಾಡುತ್ತಾ ಬರೆದಂತೆ ಅನ್ನಿಸಿದರೂ ತುಂಬ ಶಕ್ತಿಯುತವಾದ ಸಂದೇಶಗಳನ್ನು ಓದುಗರಿಗೆ ರವಾನಿಸುತ್ತಾರೆ. ನನಗೆ ಇಲ್ಲಿನ ಕೆಲವು ಪ್ರಬಂಧಗಳನ್ನು ಓದುವಾಗ ಇವಕ್ಕೆ ಆಪ್ತ ಸಂವಾದದ ಹೀಲರ್ ಗುಣವಿದೆ ಅನ್ನಿಸಿತು. ಮನೋವೈಜ್ಞಾನಿಕ ನೆಲೆಗಟ್ಟೂ ಇದೆ ಎಂದೂ ಸಹ. ಇದರ ಬಗ್ಗೆ ನನಗಿನ್ನೂ ಬರೆಯುವುದಿದೆ ಅನ್ನಿಸುತ್ತಿದೆ, ಏಕೆಂದರೆ ಮನದಲ್ಲಿ ಬಹಳ ವಿಷಯಗಳು ಹೊರ ಹೊಮ್ಮುತ್ತಿವೆ. ಆದರೆ ಈ ಕೃತಿಯನ್ನು ನೀವೇ ಓದಿದರೆ ಇನ್ನಷ್ಟು ಚೆನ್ನ. ಎಲ್ಲರೂ ಓದಲೇಬೇಕಾದ ಮತ್ತು ತುಂಬಾ ಮುಖ್ಯವಾಗಿ ಹೆಣ್ಣುಮಕ್ಕಳು ಓದಲೇಬೇಕಾದ ಪುಸ್ತಕವಿದು. ನನ್ನ ಪ್ರಕಾರ ಅನುಭವಪೂರ್ಣ ಬೋಧನೆ ಮನಸ್ಸಿಗೆ ಹೆಚ್ಚು ನಾಟುತ್ತದೆ. ಅಂತಹ ಪುಸ್ತಕಗಳಿಂದ ಜೀವನದ ಬಗ್ಗೆ ಹೆಚ್ಚು ಸ್ಪಷ್ಟತೆ ಸಿಗುತ್ತದೆ. ಬದುಕಿನ ನೂರಾರು ಅನುಭವಗಳನ್ನು ಜಾಲಿಸಿದಾಗ ಉಳಿದ ಜೊಳ್ಳಲ್ಲದ ಕಾಳುಗಳ ಸಂಗ್ರಹವಿದು. ಕೆಲವು ಪುಸ್ತಕಗಳನ್ನು ಓದದೇ ಇದ್ದರೆ ನಾವು ಬಹಳಷ್ಟನ್ನು ಬಹುಶಃ ಅರಿವಿಲ್ಲದೇ ಕಳೆದುಕೊಂಡು ಬಿಡುತ್ತೇವೆ. ಅಂತಹ ಪುಸ್ತಕವಿದು. ನನಗೆ ಇಷ್ಟವಾಯಿತು.
ಧನ್ಯವಾದಗಳು
- ರಶ್ಮಿ ಉಳಿಯಾರು
