‘ಕೃಷ್ಣಮೃಗ’ ಕೃತಿ ಪರಿಚಯ – ವೀಣಾ ನಾಯಕ

ಉಷಾ ನರಸಿಂಹನ್ ಅವರ ಮಾಸ್ತಿ ಕಾದಂಬರಿ ಪುರಸ್ಕಾರ ಪಡೆದ ‘ಕೃಷ್ಣಮೃಗ’ ಕೃತಿಯ ಕುರಿತು ಹಿರಿಯ ಲೇಖಕಿ ವೀಣಾ ನಾಯಕ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕಾದಂಬರಿ : ಕೃಷ್ಣಮೃಗ
ಲೇಖಕಿ : ಉಷಾ ನರಸಿಂಹನ್
ಪ್ರಕಾಶನ : ವಸಂತ ಪ್ರಕಾಶನ, ಬೆಂಗಳೂರು.

ಮಾಸ್ತಿ ಕಾದಂಬರಿ ಪುರಸ್ಕಾರ ಪಡೆದ ಈ ಕೃತಿಯಲ್ಲಿ ‘ಕಾದಂಬರಿಯೊಳಗೊಂದು ಕಾದಂಬರಿ’ ತಂತ್ರವನ್ನು ಯಶಸ್ವಿಯಾಗಿ ಬಳಸಲಾಗಿದೆ. ಓದುಗನ ಆಸಕ್ತಿಯನ್ನು ಹೆಚ್ಚಿಸುತ್ತ ಹೋಗುವ ಈ ಕಾದಂಬರಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಶ್ರೇಷ್ಠತೆಯನ್ನು ಎರಡು ಕಥಾ ಪಾತ್ರಗಳ ನಡುವಿನ ಪತ್ರ ವ್ಯವಹಾರದ ಮೂಲಕ ಪ್ರಸ್ತುತಪಡಿಸುತ್ತದೆ.

‘ಪುರು’ ಎಂದು ಕರೆಸಿಕೊಳ್ಳುವ ಪುರುಷೋತ್ತಮ ಮತ್ತು ಶಾರದಾ ಬಾಲ್ಯ ಸ್ನೇಹಿತರು. ಪುರು ಓದುವುದರಲ್ಲಿ ಯಾವಾಗಲೂ ಮುಂದು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು‌ ತಂದೆಯ ಸಾಂಗತ್ಯವಿಲ್ಲದೆ ಅಜ್ಜಿಯ ಅತಿ ಕಾಳಜಿ ಮತ್ತು ಪ್ರೀತಿಯ ನೆರಳಲ್ಲಿ ಬೆಳೆಯುತ್ತಾನೆ. ಅವನಲ್ಲಿ ತಾನು ಎಲ್ಲರಿಗಿಂತ ಮೇಲು ಎಂಬ ಮನೋಭಾವ ಎಳವೆಯಿಂದಲೆ ಬೆಳೆಯುತ್ತದೆ. ಇಂಜಿನಿಯರ್ ಆಗಿ ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುತ್ತಾನೆ. ಓದಿಯಾದ ಮೇಲೆ ಅಲ್ಲೇ‌ ಉದ್ಯೋಗ ಪಡೆಯುತ್ತಾನೆ. ತನ್ನಷ್ಟೆ ಓದಿ ಒಳ್ಳೆಯ ಕೆಲಸದಲ್ಲಿರುವ ನಳಿನಿಯನ್ನು ಹಿರಿಯರ ಇಚ್ಛೆಯಂತೆ ಮದುವೆಯಾಗಿ ಒಂದು ಗಂಡು ಮಗುವಿನ ತಂದೆಯಾಗಿದ್ದಾನೆ.

ಶ್ರೀಮಂತಿಕೆ ಇದ್ದರೂ ಪತ್ನಿ ನಳಿನಿಯ ಸರ್ವಾಧಿಕಾರಿ ಮನೋಭಾವದಿಂದ ಬೇಸತ್ತ ಪುರು ಸಾಹಿತ್ಯದೆಡೆಗೆ‌ ವಾಲುತ್ತಾನೆ. ಅವನು ಬರೆದ ಇಂಗ್ಲಿಷ್ ಕಾದಂಬರಿ “ಬ್ಲ್ಯಾಕ್ ಬಕ್ ” ಗೆ(ಕೃಷ್ಣಮೃಗ) ಬುಕರ್ ಪ್ರಶಸ್ತಿ ಸಿಗುತ್ತದೆ. ಅವನು ಅಜ್ಜಿಯನ್ನು ಕಾಣಲು ಊರಿಗೆ ಬಂದಾಗ ಬಾಲ್ಯದ ಗೆಳತಿ ಶಾರದಾ ಹಳೆಯ ಸಹಪಾಠಿಗಳನ್ನು ಕರೆಸಿ ಪಾರ್ಟಿ ಕೊಟ್ಟು ಸನ್ಮಾನ ಮಾಡಿಸುತ್ತಾಳೆ. ಬಹಳ ವರ್ಷಗಳ ‌ನಂತರ ಭೇಟಿಯಾದ ಪುರು ಮತ್ತು ಶಾರದಾ ತಮ್ಮ ವೈಯಕ್ತಿಕ ಸುಖದುಃಖಗಳನ್ನು ಹೇಳಿಕೊಳ್ಳುತ್ತಾರೆ. ವಿದೇಶಕ್ಕೆ ಹಿಂದಿರುಗುವ ಮೊದಲು ಪುರು ತನ್ನ ಬಳಿಯಿದ್ದ ಕಾದಂಬರಿಯ ಪ್ರತಿಯನ್ನು ಶಾರದಾಗೆ ಕೊಡುತ್ತಾನೆ. ಅದನ್ನು ಓದಿ ಅಭಿಪ್ರಾಯ ತಿಳಿಸಬೇಕೆಂದು ಕೋರುತ್ತಾನೆ.

ಪದವೀಧರೆಯಾದ ಶಾರದಾಳ ಮದುವೆ ಅವಳ ತಂದೆ ಗೊತ್ತುಮಾಡಿದ ವರ, ಗೌಡರ ಮಗ ಮುಕುಂದ ನೊಂದಿಗೆ ಆಗುತ್ತದೆ. ವೆಟರ್ನರಿ ಡಾಕ್ಟರ್ ಆಗಿದ್ದು ಸರ್ಕಾರಿ ಉದ್ಯೋಗ ಹೊಂದಿದ್ದ ಮುಕುಂದ ಹೊರ ನೋಟಕ್ಕೆ ಸುಂದರನಾಗಿದ್ದ. ಪ್ರಥಮ ರಾತ್ರಿಯಂದು ಮುಕುಂದ ಏನೋ ಸಬೂಬು ಹೇಳಿ ಶಾರದಾಳನ್ನು ದೂರವಿರಿಸುತ್ತಾನೆ. ಮುಂದೆ ಮಧುಚಂದ್ರಕ್ಕಾಗಿ ಅಲೆಪ್ಪಿಯಲ್ಲಿ ಎರಡು ಸುಸಜ್ಜಿತ ಕೊಠಡಿಗಳಿರುವ ದೋಣಿಯನ್ನು ಬಾಡಿಗೆಗೆ ಪಡೆದು ಪತ್ನಿಯೊಂದಿಗೆ ಹೋಗುತ್ತಾನೆ. ಅವರಿಬ್ಬರು ಅಲ್ಲಿಗೆ ಹೋದ ಮೇಲೆ ಮುಕುಂದನ ಗೆಳೆಯ ಮೃತ್ಯುಂಜಯ ಸ್ವಾಮಿಯೂ ಅಲ್ಲಿಗೆ ಬರುತ್ತಾನೆ.

ಸ್ವಾಮಿಯ ಮೋಹದ ಬಿರುನೋಟಕ್ಕೆ ಶಾರದಾ ಸಂಕೋಚಪಡುತ್ತಾಳೆ. ಅದರ ಬಗ್ಗೆ ಆಕ್ಷೇಪವೆತ್ತಿದಾಗ ಗೆಳೆಯರಾದ ತಾವಿಬ್ಬರೂ ಒಂದೇ ಎಂದೂ, ಬದುಕಿ ನಲ್ಲಿ ಪತ್ನಿ ಸಮೇತ ಎಲ್ಲವನ್ನು ಹಂಚಿಕೊಳ್ಳುತ್ತೇವೆಂದೂ ಮುಕುಂದ ಹೇಳುತ್ತಾನೆ. ರಾತ್ರಿ ಶಾರದಾ ಇದ್ದ ಕೊಠಡಿಗೆ ಸ್ವಾಮಿಯನ್ನು ಕಳಿಸಿ, ತಾನು ಪಕ್ಕದ ರೂಮಲ್ಲಿ ಮಲಗುತ್ತಾನೆ. ಶಾರದಾ ಧೈರ್ಯದಿಂದ ಸೆಣಸಾಡಿ, ತಪ್ಪಿಸಿಕೊಂಡು ದೋಣಿಯಿಂದ ಹೊರಗೆ ಓಡುತ್ತಾಳೆ. ದೋಣಿಯ ಮಾಲಿಕನ ಮನೆಯಲ್ಲಿ ಆಶ್ರಯ ಪಡೆದು ಮರುದಿನ ಅವನ ಸಹಾಯದಿಂದ ಬಸ್ಸಿನ ಮೂಲಕ ಮೈಸೂರಿಗೆ ಬಂದು, ಅಲ್ಲಿಂದ ಹಾಸನದ ತಾಯಿ ಮನೆ ತಲುಪುತ್ತಾಳೆ.

ಅಳುತ್ತಾ ಒಂಟಿಯಾಗಿ ಹಿಂದಿರುಗಿದ ಸೊಸೆಯಿಂದ ವಿಷಯ ತಿಳಿದ ಗೌಡರು ಸ್ವಾಮಿಗೆ ಛೀಮಾರಿ ಹಾಕಿ ತಮ್ಮ ಮನೆಗೆ ಬರದಂತೆ ಮಾಡುತ್ತಾರೆ. ತಮ್ಮ ಮಗನಿಗೂ ಬುದ್ಧಿ ಹೇಳಿ ಸಂಸಾರ ಸರಿಪಡಿಸಿಕೊಳ್ಳಲು ಒಂದು ಅವಕಾಶ ಕೊಡುತ್ತಾರೆ. ಆದರೆ ಹೆಣ್ಣಿನಲ್ಲಿ ಆಸಕ್ತಿ ಇಲ್ಲದ ಮುಕುಂದನ ಜೊತೆಗೆ ಶಾರದಾ ತಾಳ್ಮೆಯಿಂದ ಆರು ತಿಂಗಳು ಕಳೆದರೂ ಪ್ರಯೋಜನವಾಗುವುದಿಲ್ಲ. ಸೋತ ಗೌಡರು ಸೊಸೆಯನ್ನು ಅವಳ ತಂದೆಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು, ಕ್ಷಮೆ ಯಾಚಿಸುತ್ತಾರೆ. ಮುಂದೆ ವಿವಾಹ ವಿಚ್ಛೇದನವನ್ನೂ ಅವರೆ ಕೊಡಿಸುತ್ತಾರೆ. ಶಾರದಾ ವಿದ್ಯಾಭ್ಯಾಸ ಮುಂದುವರೆಸಿ ಬಿ.ಎಡ್. ಮಾಡಿ ಹೈಸ್ಕೂಲ್ ನಲ್ಲಿ ಅಧ್ಯಾಪಕಿ ಯಾಗುತ್ತಾಳೆ. ಸಾಹಿತ್ಯದಲ್ಲಿ ಆಸಕ್ತಳಾಗಿದ್ದರಿಂದ ಪುಸ್ತಕಗಳ ವಿಮರ್ಶೆ ಬರೆದು ಒಳ್ಳೆಯ ಹೆಸರು ಗಳಿಸುತ್ತಾಳೆ.

ಪುರು ಭೇಟಿಯಾದಾಗ ಶಾರದಾ ತನ್ನ ವಿಫಲ ದಾಂಪತ್ಯ ಮತ್ತು ಆಮೇಲಿನ ವಿವಾಹ ವಿಚ್ಛೇದನದ ಬಗ್ಗೆ ಹೇಳಿದ್ದಳು. ಅದನ್ನು ಕೇಳಿದಾಗ ಅವನ ಕಣ್ಣುಗಳಲ್ಲಿ ತಪ್ಪಿತಸ್ಥ ಭಾವ, ನೋವು ಕಾಣಿಸಿತ್ತು. ಅವನೊಂದಿಗೆ ನಿರ್ಮಲ ಸ್ನೇಹಭಾವದಿಂದ ಇರುವ ಶಾರದಾಗೆ ಆ ನೋವಿನ ಹಿಂದೆ ಇದ್ದ ಸತ್ಯವೇನೆಂದು ಅರ್ಥವಾಗುವುದಿಲ್ಲ.

ಶಾರದಾ ಪುರು ಕೊಟ್ಟ ಕಾದಂಬರಿ ಓದಿ ವಿಮರ್ಶೆ ಬರೆದು, ಅವನಿಗೆ ಕಳಿಸುತ್ತಾಳೆ. ಅವಳ ಕಟು ವಿಮರ್ಶೆ ಓದಿ ಪುರುವಿಗೆ ಅಭಿಮಾನಭಂಗವಾಗುತ್ತದೆ. ವಿದೇಶಗಳಲ್ಲಿ ಹೊಗಳಿಸಿಕೊಂಡ ಸಮರ್ಥ ಲೇಖಕ ಪುರು ಶಾರದಾಳ ನೇರ ವಾಗ್ದಾಳಿಗೆ ಸೋತು ತತ್ತರಿಸುತ್ತಾನೆ. ನಮ್ಮ ಭಾರತದ ಜನಜೀವನ, ಆದರ್ಶ, ಧರ್ಮಾಚರಣೆ, ಸಂಪ್ರದಾಯ, ನಂಬಿಕೆಗಳ ಕುರಿತು ಅವಹೇಳನಕಾರಿ ಮಾತುಗಳನ್ನು ಕಾದಂಬರಿಯಲ್ಲಿ ವಿದೇಶೀ ಮಹಿಳೆಯ ಪಾತ್ರದ ಬಾಯಲ್ಲಿ ಹೇಳಿಸಿ ಅಕ್ಷಮ್ಯ ಅಪರಾಧ ಮಾಡಿರುವುದಾಗಿ ಆಪಾದಿಸಿದ ಶಾರದಾಳ ಪತ್ರದಿಂದ ಪುರುವಿನ ಜೀವನದಲ್ಲಿ ಅನೇಕ ಅನಿರೀಕ್ಷಿತ ಬದಲಾವಣೆಗಳಾಗುತ್ತವೆ. ಅದನ್ನು ಕಾದಂಬರಿ ಓದಿಯೆ ತಿಳಿಯುವುದು ಸೂಕ್ತ.

ಪುರುವಿನ ಜೀವನದ ದಾರಿಯನ್ನು ಬದಲಿಸಿದಂತಹ ಗಂಭೀರ ವಿಮರ್ಶೆಗೊಳಗಾದ ಆ ಕಾದಂಬರಿಯಲ್ಲಿದ್ದ ಕಥೆ ಯಾವುದು ಎಂಬ ಕುತೂಹಲ ಉಂಟಾಗುವುದು ಸಹಜ. ಸಂಕ್ಷಿಪ್ತವಾಗಿ ಅದನ್ನು ಇಲ್ಲಿ ಹೇಳಲೇ ಬೇಕಾಗುತ್ತದೆ. ಅನ್ಯಥಾ ಈ ಪುಸ್ತಕ ಪರಿಚಯ ಅಪೂರ್ಣ.

“ಭಾರತೀಯ ದೇವರುಗಳು ಮತ್ತು ನಂಬಿಕೆಗಳು” ಎಂಬ ವಿಷಯದ ಅಧ್ಯಯನ ಮಾಡಲು ಕ್ಯಾಥರೀನ್ ಎಂಬ ವಿದೇಶಿ ಲೇಖಕಿ ದಕ್ಷಿಣ ಭಾರತದ ದೇವಾಲಯಗಳನ್ನು ನೋಡಿ, ಉತ್ತರ ಭಾರತದೆಡೆಗೆ ಬಂದಿದ್ದಳು. ಒಂಬತ್ತು ವರ್ಷಗಳ ಹಿಂದೆ ಕಲ್ಕತ್ತಾಗೆ ಬಂದು ಒಂದು ಅನಾಥಾಶ್ರಮ ಸ್ಥಾಪಿಸಿ, ಬೀದಿ ಪಾಲಾಗಿದ್ದ ಮಕ್ಕಳನ್ನು ಆಶ್ರಮಕ್ಕೆ ತಂದು ರಕ್ಷಿಸುತ್ತ ಅಲ್ಲೇ ನೆಲೆಸಿದ್ದಳು. ಹೊರದೇಶಗಳಿಂದ ಸಾಕಷ್ಟು ಹಣಕಾಸಿನ ನೆರವು ಸಿಗುತ್ತಿತ್ತು. ಬಾಲು ಎಂಬ ಸಹಾಯಕ ಸದಾ ಅವಳ ಜೊತೆಗೆ ಇರುತ್ತಿದ್ದ.

ಕಿಶನ್ ಲಾಲ್ ದೆಹಲಿಯಲ್ಲಿ ಟ್ಯಾಕ್ಸಿ ಡ್ರೈವರ್. ಕ್ಯಾಥರೀನ್ ಮತ್ತು ಬಾಲುವನ್ನು ಜೈಪುರ, ಜೋಧಪುರ ಮುಂತಾದ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾನೆ. ತನಗೆ ಗೊತ್ತಿರುವ ಸ್ಥಳಪುರಾಣ, ದೇವರ ಬಗ್ಗೆ ಕೇಳಿದ ಜಾನಪದ ಕಥೆಗಳು ಇತ್ಯಾದಿ ಕ್ಯಾಥರೀನಳಿಗೆ ಹೇಳುತ್ತಿದ್ದ. “ಕಲುಷಿತವಾದ ಗಂಗಾನದಿಯನ್ನು ಪವಿತ್ರವೆನ್ನುತ್ತೀರಿ, ನದಿ, ಪ್ರಾಣಿ ಪಕ್ಷಿಗಳನ್ನು ದೇವರೆಂದು ಪೂಜಿಸುವ ಮೂರ್ಖ ಜನರು ನೀವೆಲ್ಲ.” ಎಂದು ತಾತ್ಸಾರದಿಂದ ಭಾರತೀಯರನ್ನು ಅವಹೇಳನ ಮಾಡಿ ನಗುವ ಕ್ಯಾಥರೀನಳನ್ನು ಡ್ರೈವರ್ ಕಿಶನ್ ಲಾಲ್ ತನ್ನ ಮಿತಿಯಲ್ಲಿ ವಿರೋಧಿಸುತ್ತಾನೆ. ಬಾಲು ಸುಮ್ಮನೆ ಇರುತ್ತಾನೆ. ಊರೂರು ಸುತ್ತುತ್ತಾ ಅವಳ ಕೋರಿಕೆಯಂತೆ ಕಿಶನ್ ಜೋಧಪುರದ ಬಳಿ ಇರುವ ತನ್ನ ಮನೆಗೂ ಕರೆದುಕೊಂಡು ಹೋಗುತ್ತಾನೆ.
ಅವನ ಮನೆಯ ಹತ್ತಿರವಿರುವ ದಟ್ಟ ಕಾಡಿನಲ್ಲಿ ನವಿಲುಗಳನ್ನು ನೋಡಲೆಂದು ಮೂವರು ಹೋದಾಗ ಒಂದು ರಾತ್ರಿ ಅಲ್ಲೇ ಉಳಿಯುತ್ತಾರೆ. ಬೆಳಗಿನ ಜಾವ ನೀರು ಕುಡಿಯಲು ಬಂದ ಪ್ರಾಣಿಗಳ ಹಿಂಡನ್ನು ಕಂಡು ಹುಚ್ಚೆದ್ದ ಕ್ಯಾಥರೀನ್, ಕಿಶನ್ ಗೆ ತಿಳಿಯದಂತೆ ತಂದಿದ್ದ ತನ್ನ ಗನ್ ನಿಂದ ಗುಂಡು ಹಾರಿಸುತ್ತಾಳೆ. ತುಂಬು ಗರ್ಭಿಣಿಯಾಗಿದ್ದ ಒಂದು ಕೃಷ್ಣಮೃಗದ ಹೊಟ್ಟೆಗೆ ಗುಂಡೇಟು ಬಿದ್ದು, ಅದಕ್ಕೆ ಪ್ರಸವ ವೇದನೆ ಶುರುವಾಗಿ ವಿಲಿವಿಲಿ ಒದ್ದಾಡಿ ಅರ್ಧ ಹೊರಗೆ ಬಂದ ಮರಿ ಸಹಿತ ಪ್ರಾಣ ಬಿಡುತ್ತದೆ. ಕೃಷ್ಣ ಮೃಗವನ್ನು ದೇವರೆಂದು ಪೂಜಿಸುವ ಜನಾಂಗಕ್ಕೆ ಸೇರಿದ ಕಿಶನ್ ಇದನ್ನು ಕಂಡು ಭಯಭೀತನಾಗುತ್ತಾನೆ.

ಅರಣ್ಯಾಧಿಕಾರಿಗಳು ವಿಚಾರಣೆಗೆ ಬಂದಾಗ ಆ ವಿದೇಶಿ ಮಹಿಳೆ ಅಮಾಯಕನಾದ ಕಿಶನ್ ಮೇಲೆ ಅಪರಾಧ ಹೊರಿಸುತ್ತಾಳೆ. ಅವಳು ಹಿಂದಿನ ರಾತ್ರಿ ನಡೆದ ಒಂದು ಅಚಾತುರ್ಯವನ್ನು ಆಯುಧವಾಗಿ ಬಳಸಿ‌ದಾಗ ಕಿಶನ್ ಅಸಹಾಯಕನಾಗಿ ಸುಮ್ಮನಿರಬೇಕಾಗುತ್ತದೆ. ಮೋಸದ ಬಲೆ ಬೀಸಿ, ಅವನು ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾಳೆ. ಮುಂದೆ ಅನೇಕ ಘಟನೆಗಳು ಘಟಿಸಿ ಕಥೆ ಬಹಳ ರೋಚಕವಾಗಿ ಮುಂದುವರಿಯುತ್ತದೆ. ಅದನ್ನು ಓದಿಯೇ ತಿಳಿಯಬೇಕು.


  • ವೀಣಾ ನಾಯಕ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading