ಹಾಸನಾಂಬ ಹಾಸನದ ನಗರ ದೇವಿಯ ಭಾವಚಿತ್ರವನ್ನು ಯಾರೂ ಮನೆಯಲ್ಲಿ ಇಡುವುದಿಲ್ಲ. ಕಾರಣ ಮನೆಯಲ್ಲಿ ಮಡಿಮೈಲಿಗೆ ಇಲ್ಲದಿದ್ದಲ್ಲಿ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಊರಿನ ಯಾವುದೇ ಮನೆಯಲ್ಲಿ ಈ ದೇವಿಯ ಭಾವಚಿತ್ರವಿಲ್ಲ. ಹಾಸನಾಂಬ ದೇವಿಯ ವಿಶೇಷತೆಯ ಕುರಿತು ಶಿವಕುಮಾರ್ ಬಾಣಾವರ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
” ಸ್ಥಳಪುರಾಣ ”
ಸುಮಾರು ೧೨ ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ ಕೃಷ್ಣಪ್ಪ ನಾಯ್ಕರಿಗೆ ಕನಸಿನಲ್ಲಿ ದೇವಿಯು ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರನಾದ ಶ್ರೀ ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಗೆ ಗುಡಿಯನ್ನು ಕಟ್ಟಿಸಿದರು.

ದೇವಿಯರು ನೆಲೆಸಿದ ಪುರಾಣ ಕಥೆ ಕ್ಷೇತ್ರ ಮಹಿಮೆ
ಹಾಸನಕ್ಕೆ ಹಿಂದೆ ಸಿಂಹಾಸನಪುರಿ ಎಂದು ಹೆಸರಿತ್ತು. ದೇವಿಯರು ನೆಲೆಸಿದ ನಂತರ ಹಾಸನ ಎಂಬ ಹೆಸರು ಬಂದಿತು. ದೇಶವಿದೇಶಗಳಲ್ಲಿ ನೆಲೆಸಿರುವ ಪ್ರತಿಯೊಂದು ದೇವಸ್ಥಾನದಂತೆ ಇಲ್ಲಿ ಪ್ರತಿದಿನ ಭಕ್ತರಿಗೆ ದೇವಿಯರ ದರ್ಶನ ಭಾಗ್ಯವು ಇರುವುದಿಲ್ಲ. ವರ್ಷಕ್ಕೆ ಕೇವಲ ಹತ್ತರಿಂದ ಹನ್ನೆರಡು ದಿನ ಮಾತ್ರ ಬಾಗಿಲು ತೆಗೆದಾಗ ದೇವಿಯರ ದರ್ಶನದ ಲಾಭವಾಗುತ್ತದೆ. ಆಶ್ವಯುಜ ಮಾಸದ ಹುಣ್ಣಿಮೆ ಕಳೆದ ನಂತರ ಬರುವಂತಹ ಗುರುವಾರದಂದು ಬಾಗಿಲನ್ನು (ವರ್ಷಕೊಮ್ಮೆ) ತೆರೆಯಲಾಗುತ್ತದೆ ಮತ್ತು ಬಲಿಪಾಡ್ಯದ ಮರುದಿನ ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತಾರೆ.
ಈ ಸಂದರ್ಭದಲ್ಲಿ ಇರುವ ಇನ್ನೊಂದು ವೈಶಿಷ್ಟ್ಯವೇನೆಂದರೆ ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ,ಕುಂಕುಮ,ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ,ನಂದಾದೀಪವನ್ನು ಉರಿಸಿ,ಅನ್ನ,ಹಣ್ಣು ಇತ್ಯಾದಿಗಳನ್ನು ನೈವೇದ್ಯ ಮಾಡಿ ಅಲ್ಲಿಯೇ ಇಟ್ಟು ಬಾಗಿಲು ಮುಚ್ಚಿ ಬೀಗ ಹಾಕುತ್ತಾರೆ. ಮುಂದಿನ ವರ್ಷ ದೇವಸ್ಥಾನದ ಬಾಗಿಲು ತೆಗೆಯುವವರೆಗೆ,ಹೂವು ಬಾಡದೇ,ನಂದಾದೀಪ ನಂದದೇ,ಅರ್ಪಿಸಿದ ಅನ್ನ ಹಳಸದೆ,ಹಣ್ಣುಗಳು ಕೊಳೆಯದೆ,ಹಾಗೆಯೇ ಇರುತ್ತವೆ.!!!
ಆಕಸ್ಮಿಕವಾಗಿ ನಂದಾದೀಪ ಆರಿ,ಹೂವು ಬಾಡಿ, ಹಣ್ಣು ಕೆಟ್ಟಿದ್ದರೆ ಅದು ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ. ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ಹತ್ಯೆಗೀಡಾದ ಸಂದರ್ಭದಲ್ಲಿ ಈ ಆಕಸ್ಮಿಕ ಸಂಭವಿಸಿತ್ತು.
ಸುಮಾರು ೧೦೦ ವರ್ಷಗಳ ಹಿಂದೆ ಈ ದೇವರ ಎದುರು ೩ ಬುಟ್ಟಿಯಲ್ಲಿ ಅನ್ನವನ್ನು ಮಾಡಿ ಇಡಲಾಗುತ್ತಿತ್ತು. ಆ ಸಮಯದಲ್ಲಿ ಅನ್ನವು ಹಾಳಾಗದೆ ಬಿಸಿಯಾಗಿರುತ್ತಿತ್ತು ಮತ್ತು ಅದನ್ನೇ ದೇವರ ಪ್ರಸಾದವೆಂದು ಬಡಿಸಲಾಗುತ್ತಿತ್ತು. ಈಗ ಆ ಪದ್ಧತಿಯೂ ಕ್ರಮೇಣ ನಿಂತುಹೋಯಿತು.
ಈ ದೇವಿಯ ಭಾವಚಿತ್ರವನ್ನು ಯಾರೂ ಮನೆಯಲ್ಲಿ ಇಡುವುದಿಲ್ಲ. ಕಾರಣ ಮನೆಯಲ್ಲಿ ಮಡಿಮೈಲಿಗೆ ಇಲ್ಲದಿದ್ದಲ್ಲಿ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಊರಿನ ಯಾವುದೇ ಮನೆಯಲ್ಲಿ ಈ ದೇವಿಯ ಭಾವಚಿತ್ರವಿಲ್ಲ.

ದೇವಿಕೆರೆಯ ವೈಶಿಷ್ಟ್ಯ
ನಗರದ ಮಧ್ಯಭಾಗದಲ್ಲಿ ಹಾಗೂ ದೇವಸ್ಥಾನದಿಂದ ೧೦೦ ಮೀ. ದೂರದಲ್ಲಿರುವ ದೇವಿಗೆರೆಯಲ್ಲಿ ಮೂವರು ದೇವಿಯರು ವಾಸವಾಗಿದ್ದಾರೆ.ಈ ದೇವಿಯರನ್ನು ಪ್ರತಿದಿನ ಭೇಟಿಯಾಗಲು ದೇವಸ್ಥಾನದಿಂದ ಅಕ್ಕಂದಿರು ದೇವಿಗೆರೆಗೆ ಬರುತ್ತಾರೆ ಮತ್ತು ದೇವಿಗೆರೆಯಲ್ಲಿ ಪ್ರತಿನಿತ್ಯ ಸ್ನಾನ ಮಾಡುತ್ತಾರೆ ಹಾಗೂ ದೇವಸ್ಥಾನದಲ್ಲಿ ಮಾಡಿದ ಪೂಜೆಯ ಅಭಿಷೇಕದ ಜಲವು ಈ ದೇವಿಗೆರೆಯಲ್ಲಿ ಬಂದು ಬೀಳುತ್ತದೆಂದು ಹೇಳುತ್ತಾರೆ.
ಕಲ್ಲಾದ ಸೊಸೆ
ಓರ್ವ ಸೊಸೆಗೆ ಅತ್ತೆಯು ಬಹಳಷ್ಟು ಕಷ್ಟ ಕೊಡುತ್ತಿದ್ದಳು.ಆ ಸೊಸೆಯು ಪ್ರತಿನಿತ್ಯ ದೇವಸ್ಥಾನಕ್ಕೆ ಬಂದು ದೇವರ ಬಳಿ ಮಾತನಾಡುತ್ತಿದ್ದಳು. ದೇವತೆಯರು ಅವಳಿಗೆ ಪ್ರತ್ಯಕ್ಷರಾಗಿ ಮಾತನಾಡಿಸುತ್ತಿದ್ದರು ಮತ್ತು ಈ ವಿಷಯವನ್ನು ಯಾರ ಬಳಿಯೂ ಹೇಳಬಾರದೆಂದು ದೇವಿಯರು ಸೊಸೆಗೆ ಹೇಳಿದ್ದರು.ಒಂದು ದಿನ ಸೊಸೆ ಅಮ್ಮನವರ ದರ್ಶನ ಪಡೆಯಲು ಹೊರಟಾಗ, ಅತ್ತೆಯು ಅವಳನ್ನು ಹಿಂಬಾಲಿಸಿ,ಬಂದು ನೋಡಿದಾಗ ಅಮ್ಮನವರ ಮುಂದೆ ನಿಂತು ಧ್ಯಾನ ಮಗ್ನಳಾಗಿದ್ದ ಸೊಸೆಯನ್ನು ಕಂಡು ಕೋಪದಿಂದ “ಮನೆಯ ಕೆಲಸ ಕಾರ್ಯಗಳಿಗಿಂತ ಅಮ್ಮನವರ ದರ್ಶನ ಹೆಚ್ಚಾಯಿತೆ!” ಎಂದು ದೇವಿಯ ಮುಂಭಾಗದಲ್ಲಿದ್ದ ಚಂದ್ರ ಬಟ್ಟಲನ್ನು ತೆಗೆದುಕೊಂಡು ತಲೆಯ ಮೇಲೆ ಕುಟ್ಟಿದಾಗ ನೋವನ್ನು ತಾಳಲಾರದೆ ಸೊಸೆಯು ‘”ಅಮ್ಮಾ ಹಾಸನಾಂಬೆ” ಎಂದು ಕೂಗಿದಾಗ ಭಕ್ತಳ ಕಷ್ಟವನ್ನು ನೋಡಿ ಅವಳ ಭಕ್ತಿಗೆ ಮೆಚ್ಚಿ ನನ್ನ ಸನ್ನಿಧಿಯಲ್ಲೇ ಯಾವಾಗಲೂ ಕಾಣುವಂತಿರು ಎಂದು ಹರಸಿದ್ದರಿಂದ ಸೊಸೆಯು ಅಲ್ಲಿಯೇ ಕಲ್ಲಾಗಿ ಬಿಟ್ಟಳು.ಆ ಕಲ್ಲು ಈಗಲೂ ಅಲ್ಲಿದೆ.ಆ ಕಲ್ಲು ವರ್ಷದಿಂದ ವರ್ಷಕ್ಕೆ ಭತ್ತದ ಕಾಳಿನ ಮೊನೆಯಷ್ಟು ಚಲಿಸುತ್ತದೆ. ಹೀಗೆ ಅದು ಸಂಪೂರ್ಣ ಚಲಿಸಿ ದೇವಿಯರ ಪಾದ ತಲುಪಿದ ದಿನ ಕಲಿಯುಗದ ಅಂತ್ಯವೆಂದು ಹೇಳುತ್ತಾರೆ.
ಇನ್ನೊಮ್ಮೆ ನಾಲ್ಕು ಜನ ಕಳ್ಳರು ದೇವಿಯ ಒಡವೆಗಳನ್ನು ಕದಿಯಲು ಬಂದವರು ಕದಿಯಲಾಗದೆ ಅಲ್ಲಿಯೇ ಕಲ್ಲಾದರು. ಪುರಾವೆ ಎಂಬಂತೆ ದೇವಾಲಯದ ಹೊರಗಿನ ಮಂಟಪದಲ್ಲಿ ನಾಲ್ಕು ಕಲ್ಲುಗಳಿದ್ದು ಅದನ್ನು ಕಲ್ಲಪ್ಪಗುಡಿ ಎಂದು ಕರೆಯುತ್ತಾರೆ.
ಈ ವರ್ಷ ತಾ 24-10-24 ರಿಂದ 3-11-24 ರವರೆಗೆ ಹಾಸನಾಂಬೆಯ ದರ್ಶನ ಲಭ್ಯ.
ಅರಸು ವಂಶಸ್ಥರಿಂದ ದ್ವಾರಪೂಜೆಯಾಗಿ ಬಾಗಿಲಲ್ಲಿ ನೆಟ್ಟ ಬಾಳೆಗಿಡವನ್ನು ಒಂದೇ ಏಟಿಗೆ ಕತ್ತರಿಸಿದ ನಂತರ ಬಾಗಿಲು ತೆರೆದಾಗ, ದೇವಿಯ ಎಡ-ಬಲಗಳಲ್ಲಿರುವ ದೊಡ್ಡ ಬಳಪದ ಕಲ್ಲಿನ ದೀಪಗಳಲ್ಲಿ, ಉರಿಯುತ್ತಿರುವ ದೀಪದೊಂದಿಗೆ ದೇವಿಯ ದರ್ಶನವಾಗುತ್ತದೆ.
ದೇವಾಲಯದ ಪ್ರಾಂಗಣದಲ್ಲಿಯೇ ಅರ್ಜುನನಿಗೆ ಪಾಶುಪತಾಸ್ತ್ರ ನೀಡುತ್ತಿರುವ ಶಿವನ ಉದ್ಭವ ಮೂರ್ತಿ ಸಿದ್ಧೇಶ್ವರ ಸ್ವಾಮಿಯ ದೇವಾಲಯವಿದ್ದು ಬಲಿಪಾಡ್ಯಮಿಯಂದು ರಥೋತ್ಸವ ನಡೆಯುತ್ತದೆ. ಆಸಕ್ತ ಭಕ್ತರು ತಾ 24-10-24 ರಿಂದ ತಾ 3-11-24 ರ ಅವಧಿಯಲ್ಲಿ ಹೋಗಿ ದರ್ಶನ ಮಾಡಿ ಪುನೀತರಾಗ ಬಹುದು.
ಹಿಂದಿನ ವರ್ಷ ಬಾಗಿಲು ತೆರೆದಾಗ ಉರಿಯುತ್ತಿರುವ ದೀಪ,ಮತ್ತು ಸ್ಥಳಪುರಾಣಕ್ಕೆ ಸಂಬಂಧಿಸಿದ ಚಿತ್ರಗಳಿವೆ.ನೋಡಿರಿ.
- ಶಿವಕುಮಾರ್ ಬಾಣಾವರ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಶಿವಮೊಗ್ಗ
