ಪ್ರೇಮ ಕಾವ್ಯದ ಗುಚ್ಛ- ಮೋಹನ‌ ರಾಗ

ಮಲ್ಲಿಕಾರ್ಜುನ ಎಸ್ ಆಲಮೇಲರವರು ಬರೆದು ಲೋಕಾರ್ಪಣೆ ಮಾಡಿದ ಕೃತಿಯು ‘ಮೋಹನ ರಾಗ’ ( ಪ್ರೇಮ ಕಾವ್ಯ) ಕವನ ಸಂಕಲನದ ಕುರಿತು ನಾರಾಯಣಸ್ವಾಮಿ ಬಂಡಹಟ್ಟಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ…

ಸಾಹಿತ್ಯದ ಬರವಣಿಗೆಯನ್ನು ಬರೆಯಲು ವಿದ್ಯಾವಂತರಾಗಿರಲೇಬೇಕು, ಅಧ್ಯಾಪಕರು, ಪ್ರಾಧ್ಯಾಪಕರಾಗಿರಲೇಬೇಕೆಂಬ ನಿಯಮವಿಲ್ಲ. ಕನ್ನಡ ಓದು ಬರಹ ಬಲ್ಲಿದವರಾಗಿದ್ದರೆ ಸಾಕು.. ಸಾಹಿತ್ಯ ಓದು, ಬರಹ ನಿರಂತರವಾಗಿದ್ದಾಗ ಕನ್ನಡದ ಪದಗಳು ಎದೆಯನ್ನು ನಾಟಿದಾಗ ಕನ್ನಡದ ಬರವಣಿಗೆಯ ರೂಪದಲ್ಲಿ ಒಲಿಯಲು ಸಾಧ್ಯ…. ಪ್ರೌಢಶಾಲೆಯ ಶಿಕ್ಷಣವರೆಗೂ ವಿದ್ಯಾಭ್ಯಾಸ ಮಾಡಿ ನಂತರ ವ್ಯಾಪಾರವನ್ನು ವೃತ್ತಿಯನ್ನಾಗಿ ಮ‍ಾಡಿಕೊಂಡು ಬಾಲ್ಯದಿಂದ ಒಲವಿದ್ದ ಸಾಹಿತ್ಯವನ್ನು ಪ್ರವೃತ್ತಿಯಾಗಿ ಬಳಸಿಕೊಂಡರು ನಿರಂತರವಾಗಿ ಎರಡು ದಶಕಗಳಿಂದ ಕನ್ನಡ ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿರುವ ಲೇಖಕ ಮಲ್ಲಿಕಾರ್ಜುನ ಎಸ್ ಆಲಮೇಲ ಬಾಲ್ಯದಿಂದಲೂ ಸಂಗೀತದ ಒಲವನ್ನು ಬೆಳೆಸಿಕೊಂಡಿದ್ದ ಮಲ್ಲಿಕಾರ್ಜುನ ಎಸ್ ಆಲಮೇಲರವರು, ದೂರದ ಊರಿನಲ್ಲಿ ಸಂಗೀತ ಕಲಿಯಲು ತಾಯಿ ಒಪ್ಪದ ಕಾರಣ ಕನ್ನಡದ ಬರವಣಿಗೆಯನ್ನು ಬರೆಯುವುದನು ಪ್ರಾರಂಭಿಸಿದೆ, ಅದು ಹವ್ಯಾಸವಾಯಿತು, ಇವರ ಹವ್ಯಾಸದ ಬರಹಕ್ಕೀಗ ಎರಡು ದಶಕಗಳ ಸಂಭ್ರಮ. 2002ರಲ್ಲಿ ಬರೆದ ತೊದಲು ನುಡಿಗಳ ಪ್ರಥಮ ಪುಸ್ತಕ ” “ಜೀವನ ಒಂದು ಗಾಳಿಪಟ ” ನಂತರದಲ್ಲಿ ಇವರು ಬರೆದು ಬಿಡುಗಡೆಗೊಳಿಸಿದ ಕೃತಿಗಳು “ಧರ್ಮರಕ್ಷಕ, ಧರ್ಮಸಿಂಧು, ಧರ್ಮಜ್ಯೋತಿ, ಸದ್ಧರ್ಮ ಸಿಂಹಾಸನ, ಎಂಬ ಸಾಮಾಜಿಕ ನಾಟಕಗಳನ್ನು ಬರೆದರು, ಈ ನಾಲ್ಕು ನಾಟಕಗಳು ರಂಗಭೂಮಿಯ ಪರದೆಯ ಮೇಲೆ ಪ್ರದರ್ಶನವಾಗಿವೆ. ಜೀವನ ಒಂದು ಗಾಳಿಪಟ ಎಂಬ ಸಿನಿನಾಟಕವನ್ನು ಬರೆದಿರುವ ಮಲ್ಲಿಕಾರ್ಜುನ ಎಸ್ ಆಲಮೇಲರವರು ಚಿತ್ರಕಥೆಗಳನ್ನು ಕೂಡ ಬರೆದಿದ್ದಾರೆ”ಗಾಂಧಾರಿ” “ಲಯಕರ್ತ” “ಸಿಂಹಗಡ ರಹಸ್ಯ” “ಪತಿತ ಪಾವನೆ” ಮುಂತಾದವು.

ಇತ್ತೀಚೆಗೆ ಇವರು ಬರೆದು ಲೋಕಾರ್ಪಣೆ ಮಾಡಿದ ಕೃತಿಯು ಮೋಹನ ರಾಗ ( ಪ್ರೇಮ ಕಾವ್ಯ) ಕವನ ಸಂಕಲನ. ಈ ಕೃತಿಯು ಒಂದು ಪ್ರೇಮ ಗೀತೆಗಳ ಗುಚ್ಛವಾಗಿದೆ. ಸುಮಾರು ಹರವತ್ತೇರಡು ಕವಿತೆಗಳಿರುವ ಈ ಕೃತಿಗೆ ಕೆ ರಾಮೇಶ್ವರ ಕಲ್ಬುರ್ಗಿ ಇವರ ಚಂದದ ಮುನ್ನುಡಿ ಬರೆದಿದ್ದಾರೆ ಇವರ ಇವರ ಈ ಕವಿತೆಗಳು ಪ್ರೇಮ ಗೀತೆಗಳು ಮೋಹನ ರಾಗದಲ್ಲಿ ಸಮಾಪ್ತಿಯಾಗಿ ಓದುಗರ ಮನ ಸೆಳೆಯುತ್ತವೆ. ಎಂದಿದ್ದಾರೆ. ಬೆನ್ನುಡಿಯನ್ನು ಬರೆದಿರುವ ಹಿರಿಯ ಕವಿಗಳಾದ ಡಿ ಪದ್ಮನಾಭ ಇವರು ಈ ಕೃತಿಯಲ್ಲಿನ ಸಾಲುಗಳು ಅರ್ಥಪೂರ್ಣವಾಗಿವೆ ಮತ್ತು ಓದುಗರ ಮನಕ್ಕೆ ಸಂದೇಶಗಳನ್ನು ಸಾರುತ್ತವೆ. ಪ್ರಾಸಬದ್ಧವಾದ ಸರಳತೆಯ ಸಾಲುಗಳು ಬಹುತೇಕ ಕವನಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿದೆ ಎಂದಿದ್ದಾರೆ.

ಮೋಹನ ರಾಗ ( ಪ್ರೇಮ ಕಾವ್ಯ) ಈ ಕವನಸಂಕಲನದ ಸಾಲುಗಳು ಪ್ರೇಮದ ಮಿಡಿತವಾಗಿದೆ. ಪ್ರೇಮಿಯೊಬ್ಬನ‌ ಅಂತರಂಗದ ಅಲಾಪನೆಯಾಗಿ ಒಮ್ಮೊಮ್ಮೆ ಎದೆಯ ಭಾವನಾತ್ಮಕ ಸಂಬಂಧವನ್ನು ಸೂಚಿಸಿದರೆ ಮತ್ತೊಮ್ಮೆ ವಿಹರದ ವೇದನೆಯನ್ನು ಅವರಿಸುತ್ತದೆ. ಕೆಲವು ಹೆಣ್ಣಿನ ಮನೋವೇದನೆ ಹೃದಯದ ತೊಳಲಾಟವನ್ನು ಓದುಗರ ಎದೆಯನ್ನು ಮುಟ್ಟುವಂತೆ ರಚನೆ ಮಾಡಿದ್ದಾರೆ.

ಮೋಹನ ರಾಗ ( ಪ್ರೇಮ ಕಾವ್ಯ)ದ ಕೆಲವು ಸಾಲುಗಳನ್ನು ನೋಡುವುದಾದರೆ…

ಸಂಸಾರದ ನೊಗ ಹೊತ್ತ ನಾರಿ ಕವನನದ ಶೀರ್ಷಿಕೆಯ ಕವಿತೆಯಲ್ಲಿ ಹೆಣ್ಣಿನ ಜೀವನದ ಬಗ್ಗೆ ಹೇಳುತ್ತಾರೆ.

ಯಾರ ಹಂಗಿಲ್ಲದೆ ಬದುಕುವ ನಿರ್ಧಾರ ಮಾಡ್ಯಾಳರಿ
ದುಡಿತವೇ ಜೀ‌ವನದ ಅಂಗ ಮಾಡಿಕೊಂಡಳಾರಿ
ಇಡೀ ಸ್ತ್ರೀ ಕುಲಕೆ ಇವಳು ಮಾದರಿಯು ಅಗ್ಯಾಳರಿ
ಧೀರತ್ವದಿಂದ ಸಂಸಾರದ ನೊಗ ಹೊತ್ತ ನಾರಿ….

ಇಂದಿನ‌ ಅಧುನಿಕ ಯುಗದಲ್ಲಿ ಮಹಿಳೆ ತನ್ನ ಸ್ವಂತ ಪರಿಶ್ರಮದಿಂದ ಮೇಲೆ ಜೀವನ ‌ಮಾಡಲು ಪ್ರಾರಂಭಿಸಿದ್ದಾಳೆ. ಎಲ್ಲಾ‌ ಕ್ಷೇತ್ರದಲ್ಲೂ ಮಹಿಳೆ ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ. ತನ್ನ ದುಡಿತ ಮಕ್ಕಳ ಕುಟುಂಬದ ಸದಸ್ಯರ ಪೋಷಣೆಯೆ ತನ್ನ ಜೀವನದ ಧ್ಯೇಯವೆಂದು ತಿಳಿದು ಈ ಸಮಾಜದಲ್ಲಿ ಸ್ತ್ರೀ ಕುಲಕ್ಕೆ ಮಾದರಿಯಾಗಿ ಯಾವುದೇ ಕಷ್ಟ ಸುಖ ನೋವು ಬದುಕಿನ ಹೊಡೆತಗಳಿಗೆ ಹೆದರದೇ ಸಂಸಾರವನ್ನು ಪೋಷಿಸುವ, ರಕ್ಷಿಸುವ, ಧೀರ‌ ಮಹಿಳೆಯಾಗಿದ್ದಾಳೆ.

ಹೆಂಡಿರ ಮೇಲಿನ ವ್ಯಾಮೋಹ ಕಡೆತನಕ ಬಿಡಬ್ಯಾಡ ಕವಿತೆಯಲ್ಲಿ ಕವಿಯು ಜೀವನ ಸಂಗಾತಿಯನ್ನು ಬದುಕಿನ‌ ಕೊನೆಯ ಕ್ಷಣದವರೆಗೂ ಮರೆಯಬೇಡ ಎಂದು ಹೇಳುವ ಸಾಲುಗಳು ಓದುಗರಿಗೆ ಇಷ್ಟವಾಗುತ್ತವೆ. ಹೆಂಡಿರ ಮೇಲಿನ ವ್ಯಾಮೋಹ ಕಡತನಕ ಬಿಡಬೇಡ ನಿನಗಾಗಿ ಅವಳು ತವರಿನಸಿರಿಯ ತೊರೆದಾಳ ನೋಡ ಹೆತ್ತು ಹೊತ್ತವರ ಒಡಹುಟ್ಟಿದವರ ವಾತ್ಸಲ್ಯ ಮರೆತಾಳ ಪತಿ ಪರದೈವವೆಂದು ಪ್ರೇಮಾಮೃತದಾರೆ ಎರೆದಾಳ ಅಗ್ನಿ ಹೋಮಗಳ ಮಧ್ಯ ಸಪ್ತಪದಿ ತುಳಿದು ಜೀವನದ ಸಂಗಾತಿಯಾಗಿಯಾಗಿ ಬಂದ ಪತ್ನಿಯ ಮೇಲಿನ ವ್ಯಾಮೋಹ ನಿಮ್ಮ ಬದುಕಿನ ಕೊನೆಯ ತನಕ ಇರಲಿ. ಆಕೆಯು ನಿಮ್ಮನ್ನೆ ದೈವವೆಂದು ನಂಬಿ ನಿಮ್ಮ ಕೈಹಿಡಿದು ಬಂದಿರುತ್ತಾಳೆ. ತನ್ನ ತವರಿನಲ್ಲಿ ಸಿಕ್ಕಿದ್ದ ಪ್ರೀತಿ, ಸುಖ ಸಂತೋಷವನ್ನು ಸಿರಿವಂತಿಕೆಯ ಜೀವನವನ್ನು ತೊರೆದು ತನ್ನ ಹೆತ್ತ ತಂದೆತಾಯಿಗಳು,ಅಣ್ಣ ತಮ್ಮಂದಿರು ನೀಡುತಿದ್ದ‌ ಪ್ರೀತಿ ವಾತ್ಸಲ್ಯಗಳನ್ನು ಮರೆತು‌ ನಿಮ್ಮನ್ನೆ ನಂಬಿ ಬಂದಿರುವ ಹೆಣ್ಣು ಮಗಳು. ತನ್ನ ಪತಿಯನ್ನೆ ದೈವವೆಂದು ಭಾವಿಸಿ ನನ್ನ ಸುಖ ಸಂತೋಷ ಎನೇ ಅನುಭವಿಸಿದರು‌ ಅದು ಇನ್ನೂ ನನ್ನ ಪತಿಯೊಂದಿಗೆ, ನನ್ನ ದೈವ ನನ್ನ ಅಸೆ ಕೋರಿಕೆಯನ್ನು ನೇರವೇರಿಸುತ್ತಾನೆ ಎಂಬದು ನಂಬಿ ಬಂದಿರುವ ಸತಿಯನ್ನು ಪತಿಯು ಯಾವುದೇ ಕಾರಣದಿಂದ ಮರೆಯದಿರಿ ಎಂಬ ಸಂದೇಶವನ್ನು ಈ ಸಾಲುಗಳ ಮೂಲಕ ನೀಡುತ್ತಾರೆ.

ಹೆಣ್ಣಾಗಲಿ ಗಂಡಾಗಲಿ ಮೊಗ್ಗನು ಅರಳಿಸೋಣ
ಪ್ರೀತಿ ಮಮತೆಯ ಅಮೃತದಾರೆಯ ಎರೆಯೋಣ
ಸದ್ಬುದ್ದಿ ಸದ್ಭಾವನೆ ಸಾಮರಸ್ಯದ ನೀತಿ ಹೇಳೋಣ
ಶಿಕ್ಷಣವೆಂಬ ಶಸ್ತ್ರದಿಂದ ಸಮೃದ್ದಿ ಭಾರತ ಕಟ್ಟೋಣ

ಹರಳುವ ಮೊಗ್ಗು ಕವನದ ಶೀರ್ಷಿಕೆಯಲ್ಲಿ‌ ಇಂದಿನ ಅಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಬದುಕಿಗೆ ಹೊರೆಯಾಗುತ್ತಿದ್ದಾರೆ ಎಂದು ಜನ ಭಾವಿಸಿ ಹೆಣ್ಣು ‌ಮಗು ಎಂದು ಗೊತ್ತಾದ ತಕ್ಷಣವೇ ಆ ಜೀವವನ್ನು ತೆಗೆಯುತ್ತಾರೆ ಇದು ನಮಗೆ ತರವಲ್ಲ ನಮಗೆ ಜನಿಸುವ ಮಗು ಹೆಣ್ಣಾಗಲಿ ಗಂಡಾಗಲಿ ಅದನ್ನು ಬದುಕಲು‌ ಬಿಡೋಣ‌, ಮೊಗ್ಗಾಗಿ ಅರಳುತಿರುವ ಆ ಜೀವವನ್ನು‌ ಉಳಿಸಬೇಕಾಗಿದೆ. ಆ ಜೀವಕ್ಕೆ ಪ್ರೀತಿ ಮಮತೆಯ ಅಮೃತ ಧಾರೆಯನ್ನು ಸುರಿಸಿ, ಈ ಸಮಾಜದಲ್ಲಿ ಒಳ್ಳೆಯ ಬುದ್ಧಿಯಿಂದ ಇತರರೊಂದಿಗೆ ಸಾಮರಸ್ಯವಾಗಿ ಬದುಕುವುದನ್ನು ಕಲಿಸೋಣ, ಅವನು ಬುದ್ದಿ ಕಲಿಯಲು ನೀತಿವಂತ,ವಿನಯವಂತಿಕೆ ಬೆಳೆಯಲು ವಿದ್ಯೆಯನ್ನು ಕಲಿಸಿ ಸಮೃದ್ಧ ಭಾರತವನ್ನು ಕಟ್ಟುವ ಕಡೆಗೆ ಹೆಜ್ಜೆ ಹಾಕೋಣ ಎನ್ನುವ ಸಾಲುಗಳು ಬಹಳಷ್ಟು ‌ಅರ್ಥಪೂರ್ಣವಾಗಿದೆ.

ಮೈಸೂರು ಮಲ್ಲಿಗೆ ಮತ್ತೇರಿತು ಮೆಲ್ಲಗೆ ಎಂಬ ಕವನದ ಶೀರ್ಷಿಕೆ ಯಲ್ಲಿ ಬರೆದ ಕವಿತೆ ಶೃಂಗಾರ ಕವಿತೆಯಾಗಿದೆ.

ನನ್ನೊಳು ಮೈಸೂರು ಮಲ್ಲಿಗೆ
ಬಳಿ ಬಂದು ಮತ್ತೇರಿಸಿದಳು ಮೆಲ್ಲಗೆ
ತಂದಿಹಳು ಹಾಲು ತುಂಬಿದ ತಂಬಿಗೆ
ಶೃಂಗಾರಗೊಂಡು ಕಾದಿದೆ ಹಾಸಿಗೆ…..

ಇಲ್ಲಿ ಕವಿಯು ಒಬ್ಬ ಪತಿಯಾಗಿ ತನ್ನ ಸಹಧರ್ಮಿಣಿಯನ್ನು ಮೈಸೂರಿನ ಮಲ್ಲಿಗೆಯಂತಹ ಕೋಮಲವಾದಂತಹ ಹೂವಿಗೆ ಹೋಲಿಸುತ್ತಾ ಶೃಂಗಾರದ ಸೆಳೆತದತ್ತ ಕೊಂಡೊಯ್ಯತ್ತಾನೆ. ಆ ಸುಂದರ ರಾತ್ರಿಯಲ್ಲಿ ಮಲ್ಲಿಗೆಯ ಹೂವನ್ನು ಮುಡಿದು ಬಂದು ತನ್ನ ಬಳಿಯಲ್ಲಿ ನಿಂತಾಗ ಆ ಮಲ್ಲಿಗೆಯಿಂದ ಬರುವ ಘಮವು ತನ್ನ ಮನಸ್ಸು ಮತ್ತು ದೇಹವು ನಿಧಾನವಾಗಿ ಮತ್ತೇರುತ್ತದೆ. ಆ ಸಮಯದಲ್ಲಿ ಅವಳು ಹಾಲು ತುಂಬಿದ ತಂಬಿಗೆಯನೊತ್ತು ಬಂದಿದ್ದಾಳೆ. ಎರಡು ದೇಹ ಮನಸ್ಸುಗಳ ಮಿಲನಕ್ಕೆ ಶೃಂಗಾರಗೊಂಡು ಹಾಸಿಗೆಯ ಕಾಯುತಿದೆ ಎಂದು ಸೊಗಸಾಗಿ ಸಾಲುಗಳನ್ನು ಬರೆದಿದ್ದಾರೆ.

ನೀನ್ನಲ್ಲೆ ನಾ ರಾಧೆ ಕವನದ ಶೀರ್ಷಿಕೆಯಲ್ಲಿ ಕೃಷ್ಣ ಪ್ರೇಮ ಲೀಲೆಗಳು ಕಟ್ಟಿದ್ದಾರೆ.

ದೇವಕಿ ನಂದನನ ಲೀಲೆ ಅಪಾರವು
ತುಂಟಾಟ ಸಹಿಸಿರುವಳು ಯಶೋದೆ
ಮುಸ್ಸಂಜೆ ರಾಧಾಕೃಷ್ಣರ ಸಮ್ಮಿಲನವು
ಮೆಲ್ಲಗೆ ನುಡಿದಳು ನಿನ್ನಲ್ಲೇ ನಾ ರಾಧೆ….

ದೇವಕಿ ಪುತ್ರನಾದ ಕೃಷ್ಣನ ಲೀಲೆಗಳು ಒಂದೆರಡಲ್ಲ ಅಪಾರವಾದವು. ಅವನ ಅಷ್ಟು ತುಂಟಾಟಗಳನ್ನು ಸಹಿಸಿದವಳು ಯಶೋಧರೆ ಮುಸ್ಸಂಜೆಯಾದರೆ ರಾಧಾಕೃಷ್ಣರ ಪ್ರೇಮದ ರಸಘಳಿಗೆಗಳ ಸಮ್ಮೋಹನ, ರಾಧೆ ಕೃಷ್ಣ ಜೊತೆಯಾದಾಗ ರಾಧೆ ಮೆಲ್ಲಗೆ ನುಡಿದಳು ನಾನು ನಿನ್ನಲ್ಲಿ ಲೀನವಾಗುವ ಜೀವ ಎಂದು ಸೊಗಸಾಗಿ ಸಾಲುಗಳನ್ನು ರಚಿಸಿದ್ದಾರೆ.

ಮಾಳಿಗೆ ಮನೆ ಮುಂದೆ ಮುತ್ತು ಕೇರುವ ಹೆಣ್ಣು
ಮರಿಬೇಡ ನವಮಾಸ ಒಡಲೊಳು ಹೊತ್ತವಳನ್ನ
ನೆನಪುಹಾರ ಬ್ಯಾಡವ್ವ ಮಗಳೇ ಒಡಹುಟ್ಟಿದವರನ್ನ
ನೆನೆಸಿಕೊಳ್ಳವ್ವ ಅರೆಹೊಟ್ಟೆ ಉಂಡು ಬೆಳೆಸಿದ ಅಪ್ಪನ್ನ ಅವ್ರ ರ ಕಷ್ಟದಲ್ಲೇ ಸಿರಿವಂತ ಮನಿಗೆ ಧಾರೆಯೆರೆದವರನ್ನ

ಮೌನವೇ ಆಭರಣ ಕವಿತೆಯು ಒಂದು ಪ್ರೇಮ ಕವಿತೆಯಾಗಿದೆ.

ಓ ನನ್ನೊಲವಿನ ತಾರೆಯೇ ನೀನೆಲ್ಲಿರುವೆ
ನಿನಗಾಗಿ ಅನುಕ್ಷಣವು ನಾನಿಲ್ಲಿ ಕಾದಿರುವೆ
ಕಂಗಳಿಂದ ಸುರಿದ ಕಂಬನಿ ಜಲಪಾತಗಳಾಗಿವೆ
ಮನದಿ ತುಂಬಾ ನಿನ್ನದೇ ನೆನಪು ತುಂಬಿದೆ….

ಪ್ರೇಮಿಯೊಬ್ಬ ತಾನು ಪ್ರೀತಿದ ಪ್ರಿಯತಮೆಯು ಕಾಣದಾಗ ತನ್ನ ಮನದೊಳಗಿನ ನೋವನ್ನು ವಿರಹಿಯಾಗಿ ಹೇಳಿ ಕೊಳ್ಳುತ್ತಾನೆ. ನನ್ನ ಒಲವಿನ ತಾರೆಯೇ ನನ್ನನ್ನು ಬಿಟ್ಟು ನೀನು ಎಲ್ಲಿಗೆ ಹೋದೆ. ನನ್ನ ಮನಸ್ಸು ಪ್ರತಿ ಕ್ಷಣ ನಿನಗಾಗಿ ಅಲಾಪಿಸುತ್ತಿದೆ. ನಿನಗಾಗಿ ಕಾದಿದೆ. ನಿನ್ನನ್ನು ಹುಡುಕಾಟ ನಡೆಸುತ್ತಿರುವ ನನ್ನ ಕಣ್ಣುಗಳಿಂದ ಸುರಿಯುತ್ತಿರುವ ಕಣ್ಣೀರ ಹನಿಗಳು ಜಲಪಾತಗಳಂತೆ ಹರಿಯುತ್ತಿವೆ. ನನ್ನ ಮನಸ್ಸಿನ ತುಂಬಾ ನಿನ್ನದೇ ನೆನಪುಗಳು ತುಂಬಿ ಹೋಗಿವೆ ಎಂಬ ಸಾಲುಗಳು ಓದುಗನ ಗಮನ ಸೆಳೆಯುತ್ತವೆ.

ಸಂಕಲನದ ಕೊನೆಯ ಕವಿತೆಯಾಗಿ ಕರುನಾಡಿನ ಸಿರಿಯಾಗು ಕಂದ ಎಂದು ಹೇಳುವ ಶೀರ್ಷಿಕೆಯಲ್ಲಿ ರಚಿಸಿರುವ ಕವಿತೆ ಬಹಳಷ್ಟು ಸೊಗಸಾಗಿದೆ.

ಕನ್ನಡದ ಕೀರ್ತಿಯ ಜಗದ ತುಂಬಾ ತುಂಬಿಸು
ಕನ್ನಡದ ಜ್ಯೋತಿಯನು ದಶ ದಿಕ್ಕಲ್ಲಿ ಬೆಳಗಿಸು
ಸರ್ವ ಧರ್ಮ ಸಮಾನತೆಯ ಹರಿಕಾರನಾಗು
ಕನ್ನಡಿಗರ ಹೃದಯದಿ ಕರ್ನಾಟಕದ ರತ್ನ ನೀನಾಗು….

ಇಲ್ಲಿ ಕವಿಯು ಮಗನಿಗೆ ಹೇಳುವ ಮಾತುಗಳು ಅರ್ಥಪೂರ್ಣವಾಗಿವೆ. ಕನ್ನಡ ನಾಡಿನಲ್ಲಿ ಹುಟ್ಟಿದ ನೀನು‌ ಕನ್ನಡದ ಕೀರ್ತಿಯನ್ನು ಈ ಪ್ರಪಂಚದ ತುಂಬೆಲ್ಲ ‌ಪಸರಿಸು‌ ಕನ್ನಡದ ಜ್ಯೋತಿಯನ್ನು ಹಿಡಿದು ಹತ್ತು ದಿಕ್ಕುಗಳಲ್ಲಿ ಆ ಜ್ಯೋತಿಯ ಬೆಳಕನ್ನು ಹರಡಬೇಕು. ಭಾರತದ ದೇಶ ವಿವಿಧ ಸಂಸ್ಕೃತಿಗಳ ಭಾಷೆಗಳ ಜಾತಿ ಧರ್ಮಗಳನ್ನು ಹೊಂದಿರುವ ಈ ದೇಶದಲ್ಲಿ ಸರ್ವ ಜನರನ್ನು, ಸರ್ವ ಧರ್ಮಗಳನ್ನು ಸಮಾನತೆಯಿಂದ ಕಾಣುವ ಹರಿಕಾರ ನಾಗಿ, ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ನೆಲೆನಿಂತು ಕರ್ನಾಟಕದ ರತ್ನದಂತೆ ನೀನಾಗು ಎಂದು ಹರಿಸುವ ಕನ್ನಡದ ನಾಡು ನುಡಿಯ ಪ್ರೇಮವನ್ನು ಸೊಗಸಾಗಿ ಬಿಂಬಿಸಿದ್ದಾರೆ.

ಮಲ್ಲಿಕಾರ್ಜುನ ಎಸ್ ಆಲಮೇಲ ಬರೆದಿರುವ ಈ ಮೋಹನ ರಾಗ ಕೃತಿಯಲ್ಲಿ ಭಾವನೆಗಳು ಸೊಗಸಾಗಿವೆ. ಅದರೆ ಆ ಭಾವನೆಗಳನ್ನು ರೂಪಕವಾಗಿ ಕಟ್ಟುವ ಜಾಣ್ಮೆಯನ್ನು ಮತ್ತಷ್ಟು ಅಧ್ಯಯನ ಬರವಣಿಗೆಯಿಂದ ಕಲಿಯಬೇಕಾಗಿದೆ. ಮತ್ತು ಒಂದು ಕವಿತೆಯಲ್ಲಿ ಬಳಸಿದ ಪದಗಳನ್ನು ಮತ್ತೆ ಮತ್ತೆ ಬಳಸುವ ರೀತಿಯಲ್ಲಿ ಗಮನ ಹರಿಸಬೇಕಾಗಿದೆ. ನನ್ನನ್ನು ಸೇರಿಸಿ ಹೇಳುತ್ತೇನೆ. ಒಂದು ಕೃತಿಯನ್ನು ಹೊರತರಲು ಆತುರ ಪಡುತ್ತಿದ್ದೇವೆ ಅನಿಸುತ್ತದೆ. ಟೈಪ್ ಮಾಡುವಾಗ ಪ್ರಿಂಟಿಗೆ ಕಳಿಸಿದಾಗ ನಿಧಾನವಾಗಿ ಮತ್ತೆ ಮತ್ತೆ ನಾವು ಬರೆದಿರುವ ಸಾಲುಗಳ ವ್ಯಾಕರಣ ದೋಷಗಳನ್ನು ಗಮನಿಸಬೇಕಾಗುತ್ತದೆ. ಒಂದೆರಡು ತಪ್ಪುಗಳು ಪದದೋಷಗಳು ಇಡೀ ಕೃತಿಯ ಅಂದವನ್ನು ಕೆಡಿಸುತ್ತವೆ. ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದೆ ಉತ್ತಮ ಕೃತಿಗಳನ್ನು ಹೊರತರಲಿ ಸಮಾಜ ಸರ್ಕಾರದಿಂದ ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ವೈಯಕ್ತಿಕವಾಗಿ ಪತ್ರಿಕೆಯ ಪರವಾಗಿ ಹಾರೈಸುತ್ತೇನೆ.


  • ನಾರಾಯಣಸ್ವಾಮಿ ಬಂಡಹಟ್ಟಿ – ವಕೀಲರು ಮತ್ತು ಲೇಖಕರು, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading