‘ಕಥಾ ಸರೋವರ’ ಕಥಾ ಸಂಕಲನದಲ್ಲಿ ಬರುವ ಒಂದು ಕಥೆಯ ಕುರಿತು ಲೇಖಕಿ ಸವಿತಾ ಮುದ್ಗಲ್ ಅವರು ಬರೆದಿರುವ ಈ ಕತೆಯನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಕಥಾ ಸರೋವರ
ಲೇಖಕರು : ಸವಿತಾ ಮುದ್ಗಲ್
ಬೆಲೆ : 120
ಪ್ರಕಾಶನ : ಎಚ್.ಎಸ್.ಆರ್.ಎ. ಪ್ರಕಾಶನ
ಕೇದಿಗೆ ಹೂ ಮತ್ತು ಅಜ್ಜಿ ಹೇಳಿದ ಕಥೆ
ಕೇದಿಗೆ ಹೂ ಎಲ್ಲೆಂದರಲ್ಲಿ ಕಾಣಿಸುವುದೇ ಇಲ್ಲ. ಹಳದಿ ಬಣ್ಣದ ತೆಂಗಿನ ಗರಿಯಂತೆ ಇರುತ್ತದೆ. ಮುಳ್ಳುಗಳುಳ್ಳ ಪೊದೆಯಂತಹ ಮರದಲ್ಲಿ ಬೆಳೆಯುವ ಕೇದಗೆಯ ಸಸ್ಯಶಾಸ್ತ್ರೀಯ ಹೆಸರು Pandanus odorifer.
ಕೇದಗೆ ತನ್ನ ವಿಶಿಷ್ಟವಾದ ಸುಗಂಧದಿಂದ ಮನಸೆಳೆಯುತ್ತದೆ. ಇದರಿಂದಾಗಿ ಸುಗಂಧ ತೈಲ ಮತ್ತು ಪರ್ಫ್ಯೂಮ್ ಗಳ ತಯಾರಿಕೆಯಲ್ಲಿ ಕೇದಗೆಯನ್ನು ಬಳಸುತ್ತಾರೆ. ದೇವಾಲಯದ ಒಳಗೆ ಮತ್ತು ಹೊರಗಡೆ ಕೇದಿಗೆಯಿಂದ ಗುಬ್ಬಿ ತರಹ ಹಾರ ಬಿಟ್ಟು ತೂಗು ಬಿಟ್ಟಿರುತ್ತಾರೆ. ನೋಡಲು ತುಂಬಾ ಖುಷಿಯಾಗುತ್ತೆ.

ತಮಿಳುನಾಡು ದೇವಾಲಯದ ಲಕ್ಷ್ಮಿ ದೇವಾಲಯದ ಒಳಗಡೆ ಹೋದಾಗ ಕೇವಲ ಇದರಿಂದ ಮಾಡಿದ ಅಲಂಕಾರ ಇನ್ನೂ ಕಣ್ಣಲ್ಲಿ ಹಾಗೇ ಉಳಿದಿದೆ.
ಇನ್ನೂ ಇದರ ವಾಸನೆಗೆ ನಾಗರ ಹಾವುಗಳು ಬಂದು ಸೇರುತ್ತೆ ಅಂತ ಅಜ್ಜಿ ಹೇಳೋದು. ಒಳ್ಳೆ ಸುವಾಸನೆ ಇಷ್ಟ ಪಡುತ್ತವೆ ಅಂತ ಹೇಳೋದು ಕೇಳಿ ಒಮ್ಮೊಮ್ಮೆ ಇದನ್ನು ತಲೇಲಿ ಇಟ್ಟುಕೊಳ್ಳುವುದಕ್ಕೂ ಭಯ ಆಗ್ತಾ ಇತ್ತು.
ನಮ್ಮ ಶಾಲಾ ದಿನಗಳಲ್ಲಿ ಶಾಲೆಗೆ ಹೊರಡುವ ಮುನ್ನ, ತಲೆಬಾಚಿ ಜಡೆ ಹೆಣೆದು, ಮನೆಯಂಗಳದಲ್ಲಿ ಬೆಳೆದ ಮಲ್ಲಿಗೆ, ಜಾಜಿಮಲ್ಲಿಗೆ, ಗುಲಾಬಿ, ಸ್ಪಟಿಕ ಹೂ,ದಾಸವಾಳ ಹೀಗೆ ಯಾವುದಾದರೂ ಹೂವನ್ನು ಜಡೆಗೆ ಮುಡಿದುಕೊಂಡೇ ಶಾಲೆಗೆ ಹೋಗುತ್ತಿದ್ದೆವು.
ಅಪರೂಪಕ್ಕೆ ಹೊಲಕ್ಕೆ ಹೋದಾಗ ಅಲ್ಲಿ ಸಿಗುವ ಮುಳ್ಳು ಮೊಜಾಜಿ, ಬಿಳಿ ಸ್ಪಟಿಕ ಹಾಗೂ ಕೇದಗೆಯನ್ನೂ ಮುಡಿಯುತ್ತಿದ್ದೆವು ಬೇರೆ ಹೂವುಗಳಂತೆ ಕೇದಗೆಯನ್ನು ದಾರದಲ್ಲಿ ಪೋಣಿಸಲಾಗುವುದಿಲ್ಲ.ಕಟ್ ಮಾಡಿ ಪೋಣಿಸಿ ಪಿನ್ ಸಹಾಯ ದಿಂದ ಇಟ್ಟ್ಕೊಂಬೇಕು.
ಹಳದಿ ಬಣ್ಣದ ಕೇದಗೆಯನ್ನು ಅರ್ಧವಾಗಿ ಮಡಚಿ, ತ್ರಿಕೋನಾಕಾರವಾಗಿ, ಹೇರ್ ಪಿನ್ನಿನ ಸಹಾಯದಿಂದ ತಲೆಗೆ ಇಟ್ಟೋ ಕೊಳ್ತಾ ಇದ್ವಿ. ಕೆಲವೊಮ್ಮೆ ಟೀಚರ್ ಗೆ ಮತ್ತು ಗೆಳತಿಯರಿಗೆಂದು ಹೂವನ್ನು ತಗೊಂಡು ಹೋಗಿ ಕೊಟ್ಟರೆ ಅವ್ರಿಗೂ ಇಷ್ಟ ಆಗೋದು.

ಕೇದಗೆ ಗರಿ
ಪ್ರಕೃತಿಯಲ್ಲಿ ಕಾಣಸಿಗುವ ಸೋಜಿಗಗಳೆಷ್ಟೋ. ನಾವು ಮುಡಿಯುವ ಕೇದಿಗೆ ಗರಿಗಳು ನಿಜವಾದ ಹೂವಿನ ಗೊಂಚಲನ್ನು ಮುಚ್ಚಿರುತ್ತವೆ, ಅದೂ ಗಂಡು ಮರದಲ್ಲಿ ಮಾತ್ರ. ಹೆಣ್ಣು ಮರದಲ್ಲಿ ಹೂಗಳ ಗೊಂಚಲು ಹಲಸಿನ ಗುಜ್ಜೆ / ಅನಾನಸ್ ರೀತಿ ಕಾಣಿಸುತ್ತವೆ. ಕೆಲವು ಸಮುದಾಯದಲ್ಲಿ ಪ್ರಚಲಿತವಿರುವ ನಾಗಾರಾಧನೆಯ ಸಂದರ್ಭದಲ್ಲಿ ಕೇದಗೆ ಹೂವನ್ನು ನಾಗದೇವರಿಗೆ ಪ್ರಿಯವಾದ ಹೂವೆಂಬ ಭಾವದಿಂದ ಅರ್ಪಿಸುವ ಪದ್ಧತಿಯಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ನಾಗರಪಂಚಮಿಯಂದು ಕೇದಗೆ ಹೂವಿಗೆ ಬೇಡಿಕೆ ಹೆಚ್ಚು.
ಆದರೆ ಕೇದಗೆ ಹೂವನ್ನು ಶಿವಪೂಜೆಗೆ ಬಳಸಬಾರದೆಂಬ ಆಚರಣೆ ಇದೆ. ಅದಕ್ಕೆ ಹಿನ್ನೆಲೆಯಾಗಿ ಒಂದು ಕಥೆ ಹೀಗಿದೆ. ವಿಶ್ವಸೃಷ್ಟಿಯ ಯಾವುದೋ ಒಂದು ಕಾಲದಲ್ಲಿ, ವಿಷ್ಣು ಮತ್ತು ಬ್ರಹ್ಮ ಅವರಿಗೆ ಒಂದು ಬೃಹತ್ತಾದ ಶಿವಲಿಂಗ ಗೋಚರಿಸಿತಂತೆ. ಇದರ ಆದಿ(ತುದಿ) ಮತ್ತು ಅಂತ್ಯ(ಬುಡ) ಎಲ್ಲಿ ವರೆಗೆ ಇದೆಯೋ ನೋಡೋಣವೆಂದು ಅವರಿಬ್ಬರು ಪಣತೊಟ್ಟರು. ವಿಷ್ಣುವು ವರಾಹರೂಪಿಯಾಗಿ ಭೂಮಿಯನ್ನು ಅಗೆಯುತ್ತಾ, ಶಿವಲಿಂಗದ ಮೂಲವನ್ನು ಹುಡುಕಲು ಹೊರಟ. ಬ್ರಹ್ಮನು ಹಂಸ ರೂಪ ತಾಳಿ ಆಕಾಶದಲ್ಲಿ ಹಾರಾಡುತ್ತಾ ಶಿವಲಿಂಗದ ತುದಿಯನ್ನು ತಲಪಲು ಹೊರಟ. ಬಹಳಷ್ಟು ಪ್ರಯತ್ನಿಸಿದರೂ ಇಬ್ಬರಿಗೂ ತಮ್ಮ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ತನ್ನ ಪ್ರಯತ್ನ ವಿಫಲವಾದಾಗ ವಿಷ್ಣು ಶಿವನಿಗೆ ವಂದಿಸಿ ಆತನನ್ನು ಬ್ರಹ್ಮಾಂಡ ಸ್ವರೂಪಿ ಎಂದು ಒಪ್ಪಿಕೊಂಡ.
ಬ್ರಹ್ಮನೂ ಶಿವಲಿಂಗದ ತುದಿಯನ್ನು ತಲಪಲು ವಿಫಲನಾದರೂ ಸೋಲೊಪ್ಪಲು ಮನಸ್ಸಿಲ್ಲದೆ ಇನ್ನೂ ಹಾರಾಡುತ್ತಿರುವಾಗ ಆಕಾಶದಲ್ಲಿ ಒಂದು ಕೇತಕಿ ಪುಷ್ಪವು ಮೇಲಿನಿಂದ ಕೆಳಕ್ಕೆ ಬರುವುದನ್ನು ಕಂಡನು. ಕೇತಕಿಯು ತಾನು ಶಿವಲಿಂಗದ ಮೇಲೆ ಇರಿಸಲಾದ ಹೂವೆಂದು ಹೇಳಿತು. ಬ್ರಹ್ಮನು, ತಾನು ಶಿವಲಿಂಗದ ಆದಿಯನ್ನು ತಲಪಿದುದರ ಬಗ್ಗೆ ಸಾಕ್ಷಿ ನುಡಿಯಬೇಕೆಂದು ಕೇತಕಿಗೆ ಹೇಳಿದನು. ಅವರಿಬ್ಬರು ಶಿವನ ಬಳಿ ಹೋದರು. ಬ್ರಹ್ಮನು ತಾನು ಶಿವಲಿಂಗದ ತುದಿಯನ್ನು ತಲಪಿದೆನೆಂದನು. ಕೇತಕಿಯು ಇದನ್ನು ತಾನೇ ನೋಡಿದೆನೆಂದು ಸುಳ್ಳು ಸಾಕ್ಷ್ಯ ನುಡಿಯಿತು, ಎಲ್ಲವನ್ನೂ ಬಲ್ಲ ಶಿವನು ಇವರ ಸುಳ್ಳುಕಥೆ ಕೇಳಿ ಕುಪಿತನಾಗಿ, ಇನ್ನು ಮುಂದೆ ಬ್ರಹ್ಮನಿಗೆ ಎಲ್ಲಿಯೂ ಪೂಜೆ ಸಲ್ಲಬಾರದು ಎಂದೂ, ಕೇತಕಿಯನ್ನು ಶಿವಪೂಜೆಗೆ ಬಳಸಬಾರದೆಂದೂ ಶಾಪವಿತ್ತನು.
ಹೀಗೆ, ಕೇತಕಿ ಹೂವು ಶಿವಪೂಜೆಗೆ ನಿಷಿದ್ಧವಾಯಿತು!
ಸುಳ್ಳು ಯಾವತ್ತೂ ಒಳ್ಳೇದು ಮಾಡಲ್ಲ
- ಸವಿತಾ ಮುದ್ಗಲ್
