ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಅವರ ಕುರಿತು ಡಾ. ಎಸ್ ವಿ ಪ್ರಭಾವತಿ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ತೇಜಸ್ವಿ ಹೆಸರು ಕೇಳದ ಕನ್ನಡಿಗರೇ ಇಲ್ಲ . ಅವರ ಪರಿಸರದ ಕತೆಗಳು ಪ್ರೈಮರಿ ಮಟ್ಟದಲ್ಲಿಯೇ ಪಠ್ಯ ವಾಗುವುದರಿಂದ ಅವರು ಬೆಂಗಳೂರಿಗೆ ಬರುತ್ತಾರೆಂದರೆ ಸಾಕು ಚಿಕ್ಕ ಮಕ್ಕಳು ಇಡಿಕಿರಿದು ತುಂಬಿರುತ್ತಿದ್ದವು . ಮರ ಗಿಡ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ ಮಣ್ಣು ನೀರು ಗಾಳಿ ಹೀಗೆ ಪ್ರಕೃತಿಯ ಪ್ರತಿಯೊಂದು ಅಂಶವನ್ನೂ ಬಿಡದೇ ತಮ್ಮ ಕೃತಿಗಳಲ್ಲಿ ಶೋಧಿಸುವ ತೇಜಸ್ವಿಯವರ ಮನೋಭಾವ ಮತ್ತು ಅವರ ಸರಳವಾದ ಕನ್ನಡ ಚಿಕ್ಕ ಮಕ್ಕಳಿಗೆ ಬಹು ಪ್ರಿಯ . ಏಕೆಂದರೆ ಅವು ಮೇಲೆ ಹೇಳಿದ ಯಾವುದನ್ನೂ ನೋಡಿರುವುದೇ ಇಲ್ಲ . ತಿಳಿ ಹೇಳಲು ತಂದೆ ತಾಯಿಗಳಿಗೂ ಪುರುಸೊತ್ತೇ ಇರುವುದಿಲ್ಲ.
ಮೀನು ಹಿಡಿಯಲು ಇಡೀ ಒಂದು ದಿನ ಗಾಳ ಹಿಡಿದು ಕೂರಬಲ್ಲರು . ಹಕ್ಕಿ ಪೋಸು ಕೊಡುವವರೆಗೆ ಮನೆಯ ಕಿಟಕಿಯ ಹಿಂದೆ ಕ್ಯಾಮರಾ ಹಿಡಿದು ತಾಳ್ಮೆ ಯಿಂದ ಕಾಯಬಲ್ಲರು . ಒಂದೇ ರಾತ್ರಿಯಲ್ಲಿ ಒಂದು ಪುಸ್ತಕ ಬರೆದು ಮುಗಿಸಬಲ್ಲರು. ಗದ್ದೆತೆನೆಗಳಿಗೆ ಹುಳು ಹತ್ತಿದೆ ಅಂದಾಗ ನೀರನ್ನೆಲ್ಲಾ ಹೊರಬಿಟ್ಟು ಬುಡಕ್ಕೆ ಹತ್ತಿರುವ ಹುಳುಗಳಿಗೆ ಔಷಧಿ ಹಾಕಬಲ್ಲರು . ಆರರ ಮುಂದೆ ಒಂಬತ್ತು ಸೊನ್ನೆ ಹಾಕಿದರೆ ಎಷ್ಟಾಗುತ್ತೋ ಅಷ್ಟು ವರ್ಷದ ಹಿಂದಿನ ಹಾರುವ ಓತಿಯನ್ನು ಹುಡುಕಿ ಹೊರಟವರ ಬಗ್ಗೆ ಬರೆಯಬಲ್ಲರು. ಮಂದಣ್ಣನಂತಹ ಪೆದ್ದನ ಬಗ್ಗೆ ಯೂ ಅವರಿಗೆ ಅನುಕಂಪವಿದೆ . ಅವರ ದೃಷ್ಟಿಯಲ್ಲಿ ಅವನು ಅದ್ಭುತ ಪ್ರಾಣಿಶಾಸ್ತ್ರಜ್ಙ . ಇಷ್ಟೆಲ್ಲಾ ಮಾಡಿ ಹಾರುವ ಓತಿ ಕೈ ತಪ್ಪಿ ಹೋದಾಗ ಪರವಾಗಿಲ್ಲ ಬಿಡಿ bad luck no regrets ಎಂದು ನಿರ್ಲಿಪ್ತವಾಗಿ ಕರ್ವಾಲೋ ಅವರಿಂದ ಹೇಳಿಸಬಲ್ಲರು.

ಚಿದಂಬರ ರಹಸ್ಯದಲ್ಲಿ ಜಯಂತಿ ರಫೀಕ್ ಪರಸ್ಪರ ಪ್ರೀತಿಸಿದಾಗ ಇಡೀ ಊರು ಜಾತಿಯ ಹೆಸರಲ್ಲಿ ಹೊತ್ತಿ ಉರಿದಾಗ ಪ್ರೇಮಿಗಳಿಬ್ಬರನ್ನೂ ಬೆಟ್ಟದ ಮೇಲೇರಿ ಬದುಕುವಂತೆ ಮಾಡಬಲ್ಲರು. ತಂದೆಗಾಗಿ ಮೂಡಿಗೆರೆ ಜೇನು ಸೊಸೈಟಿಗೆ ಹೋಗಿ ಸೀಮೆಎಣ್ಣೆ ಟಿನ್ ನಂಥ ಡಬ್ಬದಲ್ಲಿ ಜೇನು ತರಬಲ್ಲರು .
ಇಂತಹ ತೇಜಸ್ವಿ ಎಷ್ಟು ಮುಂದಾಲೋಚನೆ ಉಳ್ಳವರಾಗಿದ್ದರೆಂದರೆ ಈಗಲೇ ಕನ್ನಡಕ್ಕೊಂದು ಸಮರ್ಪಕ ಕೀಲಿಮಣೆ ಮಾಡದಿದ್ದರೆ ಮುಂದೆ ತಂತ್ರಜ್ಞಾನದಲ್ಲಿ ಕನ್ನಡ ಉಳಿಯುವುದಿಲ್ಲ ಎಂದು ಪ್ರವಾದಿಯಂತೆ ನಂಬಿ ಹಠ ಹಿಡಿದು ಅದನ್ನು ಆಗು ಮಾಡಿಸಿದರು . ಅದರಿಂದಲೇ ಕನ್ನಡ * ಅಸೀಮ ಅದು ಅದಿಗಂತ *ವಾದುದು . ಇಂತಹ ತೇಜಸ್ವಿ ತಮ್ಮ ಆರೋಗ್ಯದ ವಿಷಯದಲ್ಲಿ ಕಂಡಕಂಡುದನ್ನೆಲ್ಲಾ ನಂಬುತ್ತಿದ್ದರು . ಯಾರೋ ಎಂಥದೋ ಎಣ್ಣೆ ಹಾಕಿ ಮೈ ಮಸಾಜ್ ಮಾಡುತ್ತೇನೆಂದು ಬಂದ ಮಾಡಿಸಿಕೊಂಡರು . ಅದೇ ನೆಪವಾಗಿ ಅವರು ನಮ್ಮನ್ನು ಅಗಲಿ ಹೋದರು ತಂದೆಯಷ್ಟೂ ದೀರ್ಘಕಾಲ ಬಾಳಲಿಲ್ಲ . ಅವರ ಪತ್ನಿ ರಾಜೇಶ್ವರಿಯವರೂ ಹೋದರು ಅವರ ಮಕ್ಕಳಿಬ್ಬರಿಗೆ – ಸುಸ್ಮಿತಾ ಈಶಾನ್ಯ – ಕನ್ನಡ ಓದಲು ಬರೆಯಲು ಬರುವುದಿಲ್ಲ . ನಮಗೆ ಉಳಿದಿರುವುದು ಅವರ ಸಾಹಿತ್ಯ ಮತ್ತು ನೆನಪು ನೆನಪು ನೆನಪು.
- ಡಾ. ಎಸ್ ವಿ ಪ್ರಭಾವತಿ
