ಪಾಠ ಮಾಡುವುದಷ್ಟೇ ವೈದ್ಯಶಿಕ್ಷಕರ ಕೆಲಸವೇ?

 ತಮ್ಮ ಮಗುವನ್ನು ತೋರಿಸಲು ನನ್ನ ಬಳಿಗೆ ಕರೆತಂದಿದ್ದ ಸುಶಿಕ್ಷಿತ ವ್ಯಕ್ತಿಯೊಬ್ಬರು ನಾನೊಬ್ಬ ವೈದ್ಯಶಿಕ್ಷಕ ಎಂದು ತಿಳಿಯುತ್ತಿದ್ದಂತೆಯೇ ‘ಮೆಡಿಕಲ್ ಕಾಲೇಜಿನಲ್ಲೂ ಮಕ್ಕಳಿಗೆ ಚಿಕಿತ್ಸೆ ನೀಡುತ್ತೀರೋ ಅಥವಾ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಷ್ಟೇ ನಿಮ್ಮ ಕೆಲಸವೋ?’ ಎಂದು ಕೇಳಿದರು. ಇಂಥದ್ದೇ ಪ್ರಶ್ನೆಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹಲವಾರು ಜನ ನನ್ನನ್ನು ಕೇಳಿದ್ದಾರೆ. ಇಂಥದ್ದೊಂದು ಗೊಂದಲ ಜನಸಾಮಾನ್ಯರಲ್ಲಿ ಸರ್ವೇಸಾಮಾನ್ಯ. – ಡಾ. ಕೆ.ಬಿ. ರಂಗಸ್ವಾಮಿ, ತಪ್ಪದೆ ಮುಂದೆ ಓದಿ…

ವೈದ್ಯಕೀಯ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳೆರಡೂ ಇರುತ್ತವೆ. ಸ್ನಾತಕ ಅಂದರೆ ಎಂ ಬಿ ಬಿ ಎಸ್ ಪದವಿ ಪಡೆಯುವ ವಿದ್ಯಾರ್ಥಿಗಳು ಅನಾಟಮಿ (ಅಂಗರಚನಾ ಶಾಸ್ತ್ರ), ಫಿಸಿಯಾಲಜಿ (ಅಂಗಕ್ರಿಯಾ ಶಾಸ್ತ್ರ) ಮತ್ತು ಬಯೋಕೆಮಿಸ್ಟ್ರಿ (ಜೀವರಾಸಾಯನ ಶಾಸ್ತ್ರ) ಗಳನ್ನು ಮೊದಲ ವರ್ಷದಲ್ಲಿ ಕಲಿಯುತ್ತಾರೆ. ಇವುಗಳನ್ನು ಪ್ರಿಕ್ಲಿನಿಕಲ್ ಸಬ್ಜೆಕ್ಟ್ ಗಳು ಎನ್ನಲಾಗುತ್ತದೆ. ಇವುಗಳಲ್ಲಿ ಕೇವಲ ಥಿಯರಿ ಮತ್ತು ಪ್ರಾಯೋಗಿಕ ತರಗತಿಗಳಷ್ಟೇ ಇರುತ್ತವೆ. ಹಾಗಾಗಿ ಈ ಸಬ್ಜೆಕ್ಟುಗಳನ್ನು ಕಲಿಸುವ ಶಿಕ್ಷಕರು ಆಯಾ ಸಬ್ಜೆಕ್ಟುಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದವರಾಗಿರುತ್ತಾರೆ ಮತ್ತು ಇತರೆ ವಿಜ್ಞಾನ ಕಾಲೇಜುಗಳಲ್ಲಿದ್ದಂತೆ ಪಾಠ ಮಾಡುವುದಷ್ಟೇ ಅವರ ಕೆಲಸವಾಗಿರುತ್ತದೆ.

ಇನ್ನು ಎರಡನೇ ವರ್ಷದ ಎಂ ಬಿ ಬಿ ಎಸ್ ನಲ್ಲಿ ಫಾರ್ಮಕಾಲಜಿ (ಔಷಧ ವಿಜ್ಞಾನ ಶಾಸ್ತ್ರ), ಪೆಥಾಲಜಿ (ರೋಗ ನಿದಾನ ಶಾಸ್ತ್ರ), ಮೈಕ್ರೋಬಯಾಲಜಿ (ಸೂಕ್ಷ್ಮ ಜೀವಿ ಶಾಸ್ತ್ರ) ಮತ್ತು ಫೊರೆನ್ಸಿಕ್ ಮೆಡಿಸಿನ್ (ವಿಧಿ ವಿಜ್ಞಾನ ಶಾಸ್ತ್ರ) ಎಂಬ ನಾಲ್ಕು ಸಬ್ಜೆಕ್ಟುಗಳಿರುತ್ತವೆ. ಇವುಗಳಲ್ಲಿ ಪೆಥಾಲಜಿ ಮತ್ತು ಸೂಕ್ಷ್ಮ ಜೀವಿ ಶಾಸ್ತ್ರಗಳನ್ನು ಕಲಿಸುವ ಶಿಕ್ಷಕರು ಪಾಠ ಕಲಿಸುವುದರ ಜೊತೆಯಲ್ಲಿ ಕಾಯಿಲೆಗಳನ್ನು ಪತ್ತೆ ಹಚ್ಚಬಲ್ಲ ರಕ್ತ, ಮಲ, ಮೂತ್ರ ಮುಂತಾದ ಪ್ರಯೋಗ ಶಾಲಾ ಪರೀಕ್ಷೆಗಳನ್ನು ನಿರ್ವಹಿಸಬೇಕಾಗಿರುವುದರಿಂದ ರೋಗಿಗಳೊಂದಿಗೆ ಪರೋಕ್ಷ ಸಂಪರ್ಕ ಹೊಂದಿರುತ್ತಾರೆ. ಫೊರೆನ್ಸಿಕ್ ಮೆಡಿಸಿನ್ ಕಲಿಸುವ ಶಿಕ್ಷಕರು ಅದರಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶಿಕ್ಷಕರು ಅಟಾಪ್ಸಿ, ಪೊಲೀಸ್ ಮತ್ತು ಕೋರ್ಟ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಅಂತಿಮ ವರ್ಷದ ಪ್ರಥಮ ವಿಭಾಗದಲ್ಲಿ ಕಲಿಸಬೇಕಾಗಿರುವ ಸಮುದಾಯ ಆರೋಗ್ಯ ಶಾಸ್ತ್ರದ ಶಿಕ್ಷಕರು ಪಾಠ ಹೇಳುವುದರ ಜೊತೆಯಲ್ಲಿ ಸಮುದಾಯ ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಈ ಐದೂ ಸಬ್ಜೆಕ್ಟುಗಳನ್ನು ಪ್ಯಾರಾ ಕ್ಲಿನಿಕಲ್ ಸಬ್ಜೆಕ್ಟುಗಳೆನ್ನಲಾಗುತ್ತದೆ.

ವೈದಕೀಯ ವಿದ್ಯಾರ್ಥಿಗಳೊಂದಿಗೆ ಡಾ. ಕೆ.ಬಿ. ರಂಗಸ್ವಾಮಿ

ಮಿಕ್ಕಂತೆ ಅಂತಿಮ ವರ್ಷವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ವಿಭಾಗದಲ್ಲಿ ಸಮುದಾಯ ಆರೋಗ್ಯ ಶಾಸ್ತ್ರದ ಜೊತೆಯಲ್ಲಿ ಕಣ್ಣಿನ ಹಾಗೂ ಕಿವಿ- ಮೂಗು- ಗಂಟಲಿನ ಕುರಿತ ಸಬ್ಜೆಕ್ಟುಗಳಿರುತ್ತವೆ ಮತ್ತು ಈ ಎರಡೂ ಸಬ್ಜೆಕ್ಟುಗಳಲ್ಲಿ ರೋಗಿಗಳ ಜೊತೆ ನೇರ ಸಂಪರ್ಕವಿರುವುದರಿಂದ ಇವುಗಳೂ ಸಹ ಕ್ಲಿನಿಕಲ್ ಸಬ್ಜೆಕ್ಟುಗಳ ಗುಂಪಿಗೆ ಸೇರುತ್ತವೆ. ಅಂತಿಮ ವರ್ಷದ ಎರಡನೇ ವಿಭಾಗದಲ್ಲಿ ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಪ್ರಸೂತಿ ಮತ್ತು ‌ಸ್ತ್ರೀರೋಗ ಶಾಸ್ತ್ರ ಹಾಗೂ ಪೀಡಿಯಾಟ್ರಿಕ್ಸ್ (ಮಕ್ಕಳಿಗೆ ಸಂಬಂಧಿಸಿದ್ದು) ಎಂಬ ನಾಲ್ಕು ಪ್ರಮುಖ ಸಬ್ಜೆಕ್ಟುಗಳಿರುತ್ತವೆ. ಇವಷ್ಟೇ ಅಲ್ಲದೆ ಜನರಲ್ ಮೆಡಿಸಿನ್ ನ ಅಂಗ ಸಬ್ಜೆಕ್ಟುಗಳಾಗಿ ಚರ್ಮಕ್ಕೆ ಸಂಬಂಧಿಸಿದ ಮತ್ತು ಮಾನಸಿಕ ಕಾಯಿಲೆಗೆ ಸಂಬಂಧಿಸಿದ ಹಾಗೂ ರೇಡಿಯಾಲಜಿ (ಕ್ಷ ಕಿರಣ, ಅಲ್ಟ್ರಾಸೌಂಡ್ ಮುಂತಾದ ಪರೀಕ್ಷೆ ಗಳಿಗೆ ಸಂಬಂಧಿಸಿದ್ದು) ಸಬ್ಜೆಕ್ಟುಗಳಿರುತ್ತವೆ. ಹಾಗೆಯೇ ಜನರಲ್ ಸರ್ಜರಿಯ ಅಂಗ ಸಬ್ಜೆಕ್ಟಾಗಿ ಮೂಳೆ ಮತ್ತು ಕೀಲು ಶಾಸ್ತ್ರವಿರುತ್ತದೆ. ಹಾಗೆಯೇ ಎಲ್ಲಾ ತರಹದ ಶಸ್ತ್ರಚಿಕಿತ್ಸೆಗಳಿಗೆ ಅಗತ್ಯವಾದ ಅನೆಸ್ತೇಸಿಯಾ (ಅರವಳಿಕೆ) ವಿಭಾಗವೂ ಇರುತ್ತದೆ. ಈ ಎಲ್ಲಾ ಸಬ್ಜೆಕ್ಟುಗಳಲ್ಲಿ ವೈದ್ಯಶಿಕ್ಷಕರಿಗೆ ರೋಗಿಗಳ ಜೊತೆ ನೇರ ಸಂಪರ್ಕವಿರುವುದರಿಂದ ಇವುಗಳನ್ನು ಕ್ಲಿನಿಕಲ್ ಸಬ್ಜೆಕ್ಟುಗಳು ಎನ್ನಲಾಗುತ್ತದೆ.

ರೋಗಿಗಳ ಜೊತೆ ನೇರ ಸಂಪರ್ಕಕ್ಕೆ ಬರುವ ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಪ್ರಸೂತಿ ಮತ್ತು ಸ್ತ್ರೀ ರೋಗ ಶಾಸ್ತ್ರ, ಪೀಡಿಯಾಟ್ರಿಕ್ಸ್ (ಮಕ್ಕಳ), ಕೀಲು ಮತ್ತು ಮೂಳೆ, ಚರ್ಮ, ಮಾನಸಿಕ, ನೇತ್ರ ಹಾಗೂ ಕಿವಿ- ಮೂಗು- ಗಂಟಲು.. ಈ ಕ್ಲಿನಿಕಲ್ ಸಬ್ಜೆಕ್ಟುಗಳನ್ನು ಕಲಿಸುವ ವೈದ್ಯಶಿಕ್ಷಕರು ಓ ಪಿ ಡಿ ಮತ್ತು ಒಳರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ನೇರವಾಗಿ ಭಾಗಿಯಾಗುತ್ತಾರೆ. ಚಿಕಿತ್ಸೆಯ ಜೊತೆ ಜೊತೆಯಲ್ಲೇ ವಿದ್ಯಾರ್ಥಿಗಳಿಗೆ ಆಯಾ ಸಬ್ಜೆಕ್ಟುಗಳ ಥಿಯರಿ ಮತ್ತು ಕ್ಲಿನಿಕಲ್ (ರೋಗಿಯನ್ನು ತೋರಿಸುತ್ತಾ ಕಲಿಸುವುದು) ಪಾಠಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ ಕ್ಲಿನಿಕಲ್ ಸಬ್ಜೆಕ್ಟುಗಳ ವೈದ್ಯಶಿಕ್ಷಕರುಗಳಿಗೆ ಪಾಠ ಮಾಡುವುದು ವೃತ್ತಿಯ ಒಂದು ಭಾಗವೇ ಹೊರತು ಅದೇ ಪೂರ್ಣ ಪ್ರಮಾಣದ ವೃತ್ತಿಯಲ್ಲ.

ಇನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿರುವ ವಿಭಾಗಗಳ ವೈದ್ಯಶಿಕ್ಷಕರು ಸೆಮಿನಾರ್ ಗಳು, ಜರ್ನಲ್ ಕ್ಲಬ್ ಗಳು ಮತ್ತು ಕೇಸ್ ಡಿಸ್ಕಷನ್ನುಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಧಾರೆಯೆರೆಯುವುದರ ಜೊತೆ ಜೊತೆಗೆ ಅವರ ಡಿಸರ್ಟೇಷನ್ನುಗಳಿಗೆ ಗೈಡುಗಳಾಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಹಾಗೆಯೇ ನಿರಂತರ ಕಲಿಕೆ, ಅಧ್ಯಯನ,
ಸಂಶೋಧನೆ ಮುಂತಾದವು ಒಬ್ಬ ವೈದ್ಯಶಿಕ್ಷಕನ ವೃತ್ತಿ ಬದುಕಿನ ಅವಿಭಾಜ್ಯ ಅಂಗಗಳಾಗಿರುತ್ತವೆ.

ವೈದ್ಯಶಿಕ್ಷಕರೆಲ್ಲರೂ ಕೇವಲ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಎಂದು ಭಾವಿಸಿಕೊಂಡಿರುವ ಜನಸಾಮಾನ್ಯರಿಗಾಗಿ ಈ ಬರಹ.


  • ಡಾ. ಕೆ.ಬಿ. ರಂಗಸ್ವಾಮಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading