ಡಾ. ಲಕ್ಷ್ಮಣ್ ವಿ ಎ ಅವರ ‘ಪಿ ಎಚ್ ಸಿ ‘ಕವಲುಗುಡ್ಡ’ 24/7′ ಕೃತಿಯಲ್ಲಿ ಸಂಕಷ್ಟದಲ್ಲೂ ಸವಾಲಾಗುವ ಘಟನೆಗಳಿವೆ ಅದೂ ಜೀವಂತ ಎಂಬುದೆ ಕಾದಂಬರಿಯ ಗೆಲುವು. ಈ ಕೃತಿಯ ಕುರಿತು ಕವಿ, ಕತೆಗಾರ ಮಾರುತಿ ಗೋಪಿಕುಂಟೆ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪಿ ಎಚ್ ಸಿ ‘ಕವಲುಗುಡ್ಡ’ 24/7
ಲೇಖಕರು : ಡಾ. ಲಕ್ಷ್ಮಣ್ ವಿ ಎ
ಪ್ರಕಾಶನ : ಪುಸ್ತಕ ಮನೆ
ಪ್ರಕಾರ : ಕಾದಂಬರಿ
ವೈದ್ಯನೊಬ್ಬನ ಆದರ್ಶದ ಕನಸುಗಳಿಗೆ ಕೊರೋನಾ ಎಂಬ ಅಪೀಮು ಕೊಟ್ಟ ಉಡುಗೊರೆ ಆತ ಕೆಲಸವನ್ನು ಕಳೆದುಕೊಳ್ಳುವುದು ಓದಿ ಮುಗಿಸಿದ ಮೇಲೆ ಡಾ. ಸುಹಾಸನ ಬದುಕು ನನ್ನೊಳಗೆ ಕೂತು ಮೌನದ ಬಿಕ್ಕಾಗಿ ಚಡಪಡಿಸಿತು. ಕೊರೋನಾ ತಂದಿಟ್ಟ ಸಂಕಟ ಸವಾಲು ಇನ್ನಿಲ್ಲದ ದುಃಖ ಎಲ್ಲವೂ ಇನ್ನೊಬ್ಬ ಡಾಕ್ಟರಿಗಷ್ಟೆ ತಿಳಿಯುವುದು ಎನ್ನುವಂತೆ ಚಿತ್ರಿಸಿದ ಡಾ. ಲಕ್ಷ್ಮಣ್ ನನ್ನ ಕಣ್ಣೆದುರೇ ಬಂದು ಕೂತಂತಾಯಿತು
ಇಲ್ಲಿ ಸಂಕಟವಿದೆ, ನರಳಿದ ಬದುಕಿದೆ, ಅನುಭವಿಸಿದ ಯಾತನೆ ಇದೆ, ಸಂಕಷ್ಟದಲ್ಲೂ ಸವಾಲಾಗುವ ಘಟನೆಗಳಿವೆ. ಅದೂ ಜೀವಂತ ಎಂಬುದೆ ಕಾದಂಬರಿಯ ಗೆಲುವು. ಸಂಕಟದಲ್ಲೂ ಬದುಕಿನಲ್ಲೊಂದು ಆದರ್ಶವಾಗುವ ಬದುಕು ಬದಲಾಗುವ ತನ್ನ ಸಂಕಟಕ್ಕೊಂದು ಪರಿಹಾರವಾಗುವ ಮನಸ್ಥಿತಿಯಲ್ಲಿಯೆ ವೃತ್ತಿಗೆ ಹಾಜರಾಗುವ ಅವನ ಕಣ್ಣ ಮನೆಯಲ್ಲಿ ನಳಿನಿ ಇದ್ದಳು ಮನ್ವಿತ್ ಇದ್ದ ಸುಧಾರಿಸುವ ಬದುಕು ಇತ್ತು.
ಇಡೀ ಕವಲುಗುಡ್ಡ ಯಾರ್ಯಾರೊ ಅಧಿಕಾರಕ್ಕೆ ಅವರವರ ಬೇಳೆ ಬೇಯಿಸಿಕೊಳ್ಳುವುದಕ್ಕೆ ಗುತ್ತಿಗೆ ಮತ್ತು ಸರ್ಕಾರಿ ಎಂಬೆರಡು ಹಲಗಿನಲ್ಲಿ ಬೆಂದು ಬೆಂಡಾಗುವ ಗುತ್ತಿಗೆ ನೌಕರಿಯ ಯಾತನೆ ಅಧಿಕಾರಿಗಳ ಮತ್ಸರ ಮತ್ತು ಅಧಿಕಾರ ಎಂಬ ಅಹಂಕಾರಕ್ಕೆ ನಜ್ಜುಗುಜ್ಜಾಗುವ ಆದರ್ಶದ ನೆಲೆಯೊಂದು ವಾರಸುದಾರರಿಲ್ಲದೆ ಒಂಟಿಯಾಗುವ ಅಂಧಃಪತನಕ್ಕೆ ಕಪ್ಪತಗುಡ್ಡವೆ ಮಾಸ್ಕ್ ಧರಿಸಿ ಮುಸಿ ಮುಸಿ ನಕ್ಕು ಮಾತಿಲ್ಲದೆ ಮೌನದರಿಸಿ ಬಿಡುತ್ತದೆ.

ಬಹುಶಃ ಈ ನೆಲದಲ್ಲಿ ಸುಳ್ಳನ್ನೆ ಸತ್ಯವೆಂದು ನಂಬಿ ಅನಾಥವಾಗುವ ಧ್ವನಿಯಿಲ್ಲದವರ ಬದುಕೆಂಬಂತೆ ಅತಂತ್ರ ಉದ್ಯೋಗಿಗಳು ಅನುಭವಿಸುವ ಯಾತನೆಯ ಪ್ರತೀಕವಾಗಿ ಸುಹಾಸನ ಪಾತ್ರ ಪ್ರತಿನಿಧಿಸುತ್ತದೆ. ಇದಕ್ಕೆ ಕಾರಣವಾಗುವ ಮಲ್ಲಿಕಾರ್ಜುನಯ್ಯ ಜಯರಾಜ್ ನಂತಹ ರಾಜಕಾರಣಿಗಳು ತಿಪ್ಪೇಸ್ವಾಮಿ ಹೊಸಮನಿಯಂತ ಅಧಿಕಾರಿಗಳು ಎಲ್ಲಾ ಕಾಲಕ್ಕೂ ಪ್ರಸ್ತುತವೆ.
ಅಲ್ಲಲ್ಲಿ ಸಾವು ತರುವ ನೋವುಗಳು ಬದುಕು ಮುಗಿಸಿದವರ ನಂತರದ ಬದುಕಿದವರ ಬದುಕು ಸಾವಿನ ಅಲೆಗಳೆ ಆ ಅಲೆಗಳು ಯಾರಲ್ಲೂ ಮಾನವೀಯತೆಯನ್ನು ಹುಟ್ಟುಹಾಕದೆ ತನ್ನ ಸ್ವಾರ್ಥವೆ ಮೊದಲಾಗುವ ಅದರ ನೆರಳಿನಲ್ಲಿ ವಿಜೃಂಬಿಸುವ ಮನುಷ್ಯ ಸಹಜ ಗುಣಗಳು ಸಾವಿನ ಸಂಕಟದಲ್ಲೂ ಕೇಕೆ ಹಾಕಿ ನಗುತ್ತವೆ.
ಟಾರ್ಗೆಟ್ ಟಾರ್ಗೆಟ್ ಎಂದು ಹಪಹಪಿಸುವ ಜೀವಗಳು ನಿರ್ಜೀವವನ್ನು ಸಜೀವವನ್ನಾಗಿಸುವ ಸಜೀವವನ್ನು ನಿರ್ಜೀವವನ್ನಾಗಿಸುವ ಮೆಡಿಕಲ್ ಭಾಷೆಯಲ್ಲಿ ನೆಗೆಟಿವ್ ಪಾಸಿಟೀವ್ ಎಂಬ ಅಡಕತ್ತರಿಯಲ್ಲಿ ಸಾಮಾನ್ಯನ ಬದುಕು ನರಳುವ ಅನೇಕ ಘಟನೆಗಳು ಕಾದಂಬರಿಯು ಹೇಳಬೇಕಾದ ಸಂಗತಿಯನ್ನು ಓದುಗನಿಗೆ ಮುಟ್ಟಿಸುತ್ತವೆ.
ಕವಲುಗುಡ್ಡದ ಪಿ ಎಚ್ ಸಿ ಯಲ್ಲಿ ಬರುವ ರವಿ ಸರಳಾ ಆಶಾಗಳು ಅಂಬ್ಯುಲೆನ್ಸ್ ಡ್ರೈವರ್ ವಿಜಿ ಗಂಗಾಧರ್ ಎಲ್ಲರೂ ಸಾವಿನ ಸಂಕರದಲ್ಲಿ ಬದುಕನ್ನು ಕಾಣುವ ಅನಿವಾರ್ಯತೆಗೆ ಒಳಗಾದವರು. ಸುದ್ದಿ ಮಾಧ್ಯಮವು ಕೇವಲ ಪ್ರಚಾರವಾಗಿ ಮೆರೆಯುವ ಉಮೇದಿಗೆ ಬಿದ್ದು ಪ್ರಾಮಾಣಿಕತೆಯನ್ನೆ ಇಲ್ಲವಾಗಿಸುವ ಅದಕ್ಕೊಂದು ಬಲಿಯಾಗಿ ಅದನ್ನೆ ಇಲ್ಲವಾಗಿಸುವ ಆದರ್ಶವೆ ಮೌನವಾಗುವ ಸ್ಥಿತಿಯ ಚಿತ್ರಣ ಇಂದಿನ ಪ್ರಸ್ತುತತೆಗೆ ಹಿಡಿದ ಕನ್ನಡಿ ಅದನ್ನು ಕಾದಂಬರಿಕಾರರು ಧೈರ್ಯವಾಗಿಯೆ ಹೇಳಿದ್ದಾರೆ. ಅವರ ಎದೆಗಾರಿಕೆ ಮೆಚ್ಚಲೆಬೇಕು.
ಇಡೀ ಕಾದಂಬರಿಯಲ್ಲಿ ತನ್ನ ಮಣ್ಣಿನ ತುಳಸಿಗಿಡಕ್ಕಾಗಿ ಹಾತೊರೆಯುವ ಸುಹಾಸನ ಪಾತ್ರ ಜೀವಸೆಲೆಯ ಪ್ರತೀಕವಾಗಿ ಕಾಣುತ್ತದೆ. ಅದು ತನ್ನ ತಾಯಿಯ ನೆನಪಾಗಿ ಕಾಡುವ ಮೂಲಬೇರಿನ ನೆನಪುಗಳೊಂದಿಗೆ ಚೈತನ್ಯ ನೀಡುವ ರೂಪಕವಾಗಿದೆ ಅನಿಸುತ್ತದೆ. ಕೋವಿಡ್ ತಂದೊಡ್ಡಿದ ಸಂಕಟಕ್ಕಿಂತ ಅದು ಉಂಟು ಮಾಡಿದ ಬೇರೆ ಬೇರೆ ಸನ್ನಿವೇಶಗಳು ಮನುಷ್ಯನ ನಿಜಬಣ್ಣವನ್ನು ಬಯಲು ಮಾಡಿದವು. ಮನುಷ್ಯ ಎಂದಿಗೂ ಬದಲಾಗುವುದಿಲ್ಲ ಅದು ಸಾವಿನಲ್ಲೂ ಬದುಕಿನಲ್ಲೂ ಕೂಡ ಸಾವು ಸಂಕಟವಾದರೆ ಬದುಕು ಉಳ್ಳವರದಾಗುವ ಪರಿಯೆ ಮನುಷ್ಯನ ಮುಖವಾಡಗಳು ವಿಜೃಂಭಿಸುತ್ತವೆ. ಅಲ್ಲಿ ಸ್ವಾರ್ಥವೆ ಎದ್ದುಕಾಣುತ್ತವೆ ಅದಕ್ಕೆ ಬಲಿಯಾಗುವವರು ಸುಹಾಸನಂತಹವರು ಅವರ ಬದುಕು ಅಷ್ಟೆ ಅನಿಸಿಬಿಡುತ್ತದೆ.

ಓದಿ ಮುಗಿಸಿದ ಮೇಲೂ N95 ನಂತಹ ಮಾಸ್ಕ್ ಗಳು ಕಣ್ಣೆದುರು ಬಂದಂತಾಗುತ್ತದೆ. ಅದರ ವಾಸನೆ ಅಚ್ಚಳಿಯದೆ ಉಳಿದು ಬಿಡುತ್ತದೆ ಕಂಡೂ ಕಾಣದಂತೆ. ಇದೂ ಒಂದು ರೀತಿಯ ವ್ಯಾಕ್ಸಿನ್ ಅನಿಸಿ ಬಿಡುತ್ತದೆ.
ಕಾದಂಬರಿ ಸರಾಗವಾಗಿ ಓದಿಸಿಕೊಳ್ಳುತ್ತದೆ ಅಲ್ಲಲ್ಲಿ ಒಂದಿಷ್ಟು ಬೋರು ಎನಿಸಿದರೂ ಮತ್ತೆ ಓದಿನ ಟ್ರ್ಯಾಕಿಗೆ ತಂದು ಬಿಡುವ ಲೇಖಕರ ತಂತ್ರ ಸಾಗರಿಕಾಳ ನಗು ಚೆಲ್ಲಿದಂತೆ ಅಕ್ಷರಗಳ ಮಣಿಮಾಲೆ ಸಾಗುತ್ತದೆ.
ಕವಿಯಾಗಿ ನಾನವರ ಬರಹವನ್ನು ಮತ್ತೆ ಮತ್ತೆ ಓದುವ ಗೀಳಿಗೆ ಬಿದ್ದವನು. ಕಾದಂಬರಿಯನ್ನು ಓದಿ ತಣಿದಿದ್ದೇನೆ. ಕೊರೋನಾದ ಸಂಕಟ ಸುಹಾಸನ ಕರ್ತವ್ಯನಿಷ್ಟೆ ಮರೆಯಾಗಿಲ್ಲ. ಕವಲುಗುಡ್ಡವೂ ಮರೆಯುವುದಿಲ್ಲ ಅಲ್ಲಿ ಕಂಡ ಸಾವು ಬದುಕು ಕೂಡ. ಅವನ ಬುಲೆಟ್ ಮಾತ್ರ ನಿಂತಿದ್ದು ಹಿಡಿಸಲಿಲ್ಲ. ಬದುಕು ಮಾತ್ರ ನಡೆಯಲೆಬೇಕು. ಅದು ಯಾರ ಜಪ್ತಿಗೂ ಸಿಗದ ನಿಗೂಢ ಅನೂಹ್ಯ ಜಗತ್ತು. ಇದರಲ್ಲಿ ಎಲ್ಲರೂ ಇದ್ದಾರೆ.
ಡಾ ಲಕ್ಷ್ಮಣ್ ರವರು ಇನ್ನಷ್ಟು ಕಾದಂಬರಿಗಳನ್ನೂ ಬರೆಯಲಿ ಒಣಗಿದ ತುಳಸಿ ಗಿಡ ಮತ್ತೆ ಚಿಗುರಲಿ ಅದರ ವಾಸನೆ ಸಾಹಿತ್ಯದಲ್ಲಿ ಘಮಘಮಿಸಲಿ ಎಂಬ ಶುಭ ಹಾರೈಕೆ ನನ್ನದು.
- ಮಾರುತಿ ಗೋಪಿಕುಂಟೆ
