ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಕವಯತ್ರಿಯಾಗಲೆ ಒಮ್ಮೆ…ಯುವ ಕವಯತ್ರಿ ಅಮೃತ ಎಂ ಡಿ ಅವರ ಸುಂದರ ಕವನ ಓದುಗರಿಗಾಗಿ, ಮುಂದೆ ಓದಿ…
ಕವಿತ್ವದ ಕುರುಹು ಮತ್ತೆಲ್ಲೂ ಇಲ್ಲ
ಭಾವನಾತ್ಮಕ ಜೀವಿಯ ಜೀವನ ಪರ್ಯಂತ ಅವಲೋಕನವದು.
ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಮನದಲ್ಲಿ
ಅಬ್ಬಾ ಎಂಬ ಉದ್ಗಾರ ಜನಿಸಿದಾಗ ಸಾಲುಗಟ್ಟಿ ಜನಿಸುವ ಸಾಲುಗಳೆ ಈ ಕವಿತೆ
ಇನ್ಯಾರೊ ಬದುಕಿನ ಬವಣೆಗಳಿಂದ ಬಹು ಪ್ರಯಾಸ ಪಟ್ಟು ನಡುಗಿದಾಗ
ಆತನೆಡೆಗೆ ಹೊರಟ ಸಾಂತ್ವನದ ಸಾಲುಗಳೆ ಈ ಕವಿತೆ
ಹಸುಗೂಸಿನ ಹಾಲುಗಲ್ಲದ ಸೋಗಿಗೆ ಕಟ್ಟಿದ ಪದಕಟ್ಟಿನ ಸಾಲುಗಳೆ ಈ ಕವಿತೆ
ದುಗುಡ ಉಮ್ಮಳಿಸಿ ಬಂದಾಗ
ಹೆಗಲಾಸರೆ ಇಲ್ಲದೆ ಹೋದಾಗ ಪ್ರಯಾಸ ಪಟ್ಟು ಹಿಡಿದ ಸಾಲುಗಳೇ ಈ ಕವಿತೆ.
ಸಂತೋಷವು ಕಣ್ಣಾಲಿ ತುಂಬಿ ನಗಿಸಿದಾಗ ಅವ್ಯಕ್ತ ಭಾವ ವ್ಯಕ್ತವಾಗುವ ಸಾಧನವೆ ಈ ಕವಿತೆ.
ಅಲ್ಲೆಲ್ಲೋ ಜರುಗಿದ ಅನ್ಯಾಯಕ್ಕೆ ನೀಲಿ ಶಾಯಿ ಎರಚಿ ದಿಮ್ಮನೆ ಸಾಗುವ ಪದಕಟ್ಟಿನ ಮರ್ಮವೆ ಈ ಕವಿತೆ,
ಸಂಜೆಗಾಳಿ ಮೈ ಸೋಕಿ ನಡೆದಾಗ ಆವಿರ್ಭವಿಸುವ ಭಾವದ ಮೂರ್ತ ರೂಪವೆ ಈ ಕವಿತೆ,
ಕವಿಯಲ್ಲದ್ದಿದ್ದರೇನು ಅನುಭವಗಳ ಸಾರಗುಚ್ಛವೆ ಈ ಕವಿತೆ.
ಒಂದಷ್ಟು ದೂರ ಒಂಟಿಯಾಗಿ ನಡೆದಾಗ ಜಂಟಿತನ ಸೃಷ್ಟಿಸಿಕೊಟ್ಟ ಸಾಲುಗಳ ಸಾಲೇ ಈ ಕವಿತೆ,
ಮುಖವಾಡ ಕಳಚಿ ಸಮಯ ಸಾಧಕರ ಕಂಡಾಗ ಜನಿಸಿದ ಹುಟ್ಟೆ ಈ ಕವಿತೆ,
ಇನ್ನೇನು ಹೇಳಲಿ ಇನ್ನ್ ಹೇಗೆ ವ್ಯಕ್ತ ಪಡಿಸಲಿ
ನೀಲಿ ಶಾಯಿ ಮುಗಿಯುವ ಮುನ್ಸೂಚನೆ ಇದೆ
ಹರಿದ ಹಾಳೆ ಚೆಲ್ಲಾಪಿಲ್ಲಿಯಾಗಿ
ಮನದ ಒಕ್ಕಣಿಗೆ ಮಸಣ ಸೇರುತ್ತಲಿದೆ
ಇನ್ನೇನು ಹೇಳಲಿ
ಮುಗಿಯದ ಕಿಚ್ಚಿಗೆ ದಣಿಯದ ಜ್ಞಾನದಾಹಕ್ಕೆ ಆಗಾಗ ಗೀಚುವೆ ಕನ್ನಡಿಗೆ ಪ್ರತಿಬಿಂಬ ತೋರಿಸಲು.
- ಅಮೃತ ಎಂ ಡಿ ( ಕವಿಯತ್ರಿ, ಯುವ ಲೇಖಕಿ, ಶಿಕ್ಷಕಿ)
