“ಮಿತಿ”ಗಿಂತಲೂ “ಅತಿ”ಯನ್ನೇ ಎತ್ತಿ ಆಡಿಸುವ ಸೋಷಿಯಲ್ ಮೀಡಿಯಾಗಳ ಸೆನ್ಸೇಷನ್ ಟಾಪಿಕ್ ಹನ್ನೊಂದು ವರ್ಷದ ಬಾಲಕ ಇಶಿತ್ ಭಟ್. ವಯಸ್ಸಿಗೆ ಮೀರಿದ ಆಟಿಟ್ಯೂಡ್ ಮತ್ತು ಅಗ್ರೆಸ್ಸೀವ್ ನೆಸ್ ಅವನ ಪ್ರತೀ ಮಾತಿನಲ್ಲೂ ಎದ್ದು ಕಾಣುತ್ತಿತ್ತು. ಲೇಖಕರಾದ ಹಿರಿಯೂರು ಪ್ರಕಾಶ್ ಅವರು ಇಶಿತ್ ಭಟ್ ಅವರ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಜೂನಿಯರ್, ಸೀಸನ್ ಹದಿನೇಳರ ಈ ಒಂದು ಎಪಿಸೋಡು ದೇಶಾದ್ಯಂತ ವೈರಲ್ ಆಗಿ ಮಕ್ಕಳ ಮಾನಸಿಕ ಬೆಳವಣಿಗೆ, ವರ್ತನೆ ಹಾಗೂ ಅಗ್ರೆಸ್ಸೀವ್ ನೆಸ್ ಬಗ್ಗೆ ಹಲವಾರು ಕೌತುಕ ಪ್ರಶ್ನೆಗಳನ್ನು, ಚರ್ಚೆಗಳನ್ನು ಸಂವಾದಗಳನ್ನು ಹುಟ್ಟುಹಾಕಿದ್ದು , “ಮಿತಿ”ಗಿಂತಲೂ “ಅತಿ”ಯನ್ನೇ ಎತ್ತಿ ಆಡಿಸುವ ಸೋಷಿಯಲ್ ಮೀಡಿಯಾಗಳ ಸೆನ್ಸೇಷನ್ ಟಾಪಿಕ್ ಆಗಿದೆ. ಇಂಥಾದ್ದೊಂದು ಚರ್ಚೆಗೆ ಇಶಿತ್‌ಭಟ್ ಎಂಬ ಐದನೇ ತರಗತಿ ಓದುತ್ತಿರುವ ಬಾಲಕನನಲ್ಲಿನ ಎಲ್ಲವೂ “ಓವರ್ ” ಎನಿಸುವಂತಹ ವರ್ತನೆ ಮುಖ್ಯ ಕಾರಣ, ಆಗಿದ್ದಿಷ್ಟು.
ಗುಜರಾತ್ ನ ಗಾಂಧಿನಗರದ ಹನ್ನೊಂದು ವರ್ಷದ ಬಾಲಕ ಇಶಿತ್ ಭಟ್ 83 ರ ಹರೆಯದ ಅಮಿತಾಭ್ ಬಚ್ಚನ್ ರ ಎದುರು ಕೆಬಿಸಿ ಹಾಟ್ ಸೀಟ್ ನಲ್ಲಿ ಕುಳಿತು ಸ್ವಲ್ಪವೂ ಅಳುಕಿಲ್ಲದೇ ಬೀಸು ಬಿಂದಾಸ್ ಆಗಿ ಮಾತನಾಡಿದ ರೀತಿ ಬಹಳಷ್ಟು ಚರ್ಚೆಗೆ ಒಳಗಾಗಿದೆ. ಷೋ ನ ಆರಂಭದಲ್ಲೇ ಬಚ್ಚನ್ ರಿಗೆ ” ನನಗೆ ಆಟದ ರೂಲ್ಸು ಎಲ್ಲಾ ಗೊತ್ತಿದೆ, ಅವನ್ನು ನೀವು ಹೇಳುವ ಅಗತ್ಯವಿಲ್ಲ” ಎಂದು ಅಬ್ಬರಿಸಿದ ಅವನ ದಾರ್ಷ್ಟ್ಯದ ಮಾತಲ್ಲಿಯೂ ಎಲ್ಲರೂ ಒಬ್ಬ ಬಾಲಕನಲ್ಲಿರಬಹುದಾದ ಮುಗ್ಧತೆಯನ್ನಷ್ಟೇ ಗುರ್ತಿಸಿ ಅದನ್ನು ತಮಾಷೆಯಾಗಿ ಕಂಡಿದ್ದರು. ಮೇಲಾಗಿ ಚಿಕ್ಕ ಮಕ್ಕಳು ಏನೇ ಮಾತನಾಡಿದರೂ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಾರರು. ಅಮಿತಾಭ್ ಕೂಡಾ ಅವನ ಮಾತಿಗೆ ನಕ್ಕು ರೂಲ್ಸ್ ಹೇಳುವ ಗೋಜಿಗೆ ಹೋಗಲಿಲ್ಲ.
ಆದರೆ ಈ ಹುಡುಗನ ವರ್ತನೆ ಬರುತ್ತ ಬರುತ್ತಾ ಅತಿರೇಕ ಎನಿಸುವ ಮಟ್ಟಕ್ಕೆ ತಲುಪಲು ಶುರುವಾಯಿತು. ಇಶಿತ್ ಭಟ್ ನ ಕೆಲವು ಅತಿರೇಕದ ಡೈಲಾಗುಗಳ ಸ್ಯಾಂಪಲ್ ಹೀಗಿವೆ .
ಬಚ್ಚನ್ ರ ಮೊದಲ ಒಂದೆರಡು ಪ್ರಶ್ನೆಗಳಿಗೆ ಆ ಹುಡುಗ ” ನನಗೆ ಆಯ್ಕೆಗಳ ಅಗತ್ಯವಿಲ್ಲ …. ಇದನ್ನೇ ಲಾಕ್ ಮಾಡಿ. ಎಂದು ಗರ್ವದಿಂದ ಹೇಳಿದ್ದ.
ಚೆಸ್ ನಲ್ಲಿ ಎಷ್ಟು ರಾಜರಿರುತ್ತಾರೆ ಎಂಬ ಪ್ರಶ್ನೆಗೆ…” ಇದೊಂದು ಕೇಳಲು ಅರ್ಹವಾದ ಪ್ರಶ್ನೆಯೇ…..? ಎಂದು ತನ್ನಲ್ಲಿನ ಜ್ಞಾನದ ಬಗ್ಗೆ ಅಹಮ್ಮಿಕೆಯಿಂದ ಝೇಂಕರಿಸಿದ್ದ.
ಅಮಿತಾಭ್ ಒಂದು ಹಂತದಲ್ಲಿ ಯಾವುದೋ ವಿವರಣೆ ಕೊಡಲು ಶುರು ಮಾಡಿದಾಗ ಅದನ್ನು ಕೇಳಿಸಿಕೊಳ್ಳುವ ತಾಳ್ಮೆಯಿಲ್ಲದೇ ಮಧ್ಯೆ ಮಧ್ಯೆ ತಡೆದು “ಸಾರ್..ನೀವು ಪ್ರಶ್ನೆಗಳನ್ನು ಮಾತ್ರ ಕೇಳ್ತೀರಾ…” ಎನ್ನುವಂತೆ ಅಸಹನೆಯಿಂದ ತಿವಿದಿದ್ದ.

” ಇನ್ನೂ ಒಂದು ಹಂತದಲ್ಲಿ ” ಮೊದಲು ನೀವು ಆಯ್ಕೆಗಳನ್ನಾದರೂ ಕೊಡಿ. ಮಾತು ಬೇಡ ” ಎಂದೂ ನಂತರ ” ನೀವು ಬೇಕಾದರೆ ನಾಲ್ಕೂ ಆಪ್ಷನ್ ಲಾಕ್ ಮಾಡಿಕೊಂಡು ನಾನು ಹೇಳಿದ್ದನ್ನು ಮಾತ್ರ ಲಾಕ್ ಮಾಡಿ ಎಂಬ ತಿರಸ್ಕಾರ ಭಾವದಲ್ಲಿ ಬಚ್ಚನ್‌ರಿಗೆ ಜೋರಾಗಿ ಉಲಿದಿದ್ದ.
ಬಾಲಕ ಇಶಿತ್ ಭಟ್ ನ ಈ ರೀತಿಯ ವರ್ತನೆ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿ ಅವನೀಗ ಬೇಡದ ಕಾರಣಕ್ಕಾಗಿ ಮನೆ ಮಾತಾಗಿದ್ದಾನೆ. ಬಹುತೇಕ ನೆಟ್ಟಿಗರು ಆ ಹುಡುಗನ ವರ್ತನೆಯನ್ನು ಖಂಡಿಸಿ ” ತಂದೆತಾಯಿಗಳು ಮಕ್ಕಳಿಗೆ ಸಂಸ್ಕಾರ, ಸೌಜನ್ಯ, ಸಂಯಮ ಮನೆಗಳಲ್ಲಿ ಕಲಿಸದಿದ್ದರೆ ಆಗೋದು ಹೀಗೇನೇ….ಎಂದೆಲ್ಲಾ ಕಾಮೆಂಟುಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಲವರು ಮಾತ್ರ ಆ ಹುಡುಗನ ಪ್ರತಿಕ್ರಿಯೆಗಳನ್ನು ಅದನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲವೆಂದು ಚರ್ಚಿಸಿದ್ದಾರೆ.
ನಿಮ್ಮೊಂದಿಗೆ ಈ ಬಗ್ಗೆ ಒಂದಷ್ಟು !
ಮೊದಲನೆಯದಾಗಿ ಯಾರೇನೇ ಹೇಳಿದರೂ ಈ ಬಾಲಕನ ಪ್ರತೀ ಹೆಜ್ಜೆಯಲ್ಲೂ “ಅತಿ” ಎನಿಸುವ ವರ್ತನೆ , ಅತಿಯಾದ ಆತ್ಮ ವಿಶ್ವಾಸ, ಅಗತ್ಯಕ್ಕಿಂತಲೂ ಓವರ್ ಸ್ಮಾರ್ಟ್ ನೆಸ್ಸು ತುಂಬಿ ತುಳುಕುತ್ತಲೇ ಇತ್ತು ಎಂಬುದು ನಿಜ. ವಯಸ್ಸಿಗೆ ಮೀರಿದ ಆಟಿಟ್ಯೂಡ್ ಮತ್ತು ಅಗ್ರೆಸ್ಸೀವ್ ನೆಸ್ ಅವನ ಪ್ರತೀ ಮಾತಿನಲ್ಲೂ ಎದ್ದು ಕಾಣುತ್ತಿತ್ತು. ವಿನಯ, ಸಂಸ್ಕಾರ, ದೊಡ್ಡವರ ಮುಂದೆ, ಅದರಲ್ಲೂ ಅಮಿತಾಭ್ ರಂತಹ ಹಿರಿಯ ಕಲಾವಿದರ ಮುಂದೆ ಕೂತಾಗ ಇರಬೇಕಾದ ಕನಿಷ್ಠ ಭಯ, ಸೌಜನ್ಯ ಅಥವಾ ಗೌರವ ಇದಾವುವೂ ಆ ಹುಡುಗನಲ್ಲಿರಲಿಲ್ಲ….ನಿಜ. ಬಹುಶಃ ಇವೆಲ್ಲವನ್ನೂ ಅವನ ವಯಸ್ಸಿಗೆ ಅಷ್ಟಾಗಿ ನಿರೀಕ್ಷಿಸುವುದೂ ತಪ್ಪು.
ಅಲ್ಲದೇ, ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ವಯಸ್ಸಿನಲ್ಲಿ ಹಿರಿಯ… ಎಂಬ ಕನಿಷ್ಠ ಗೌರವವೂ ಇಲ್ಲದೇ ಜಾಲತಾಣಗಳಲ್ಲಿ ನಾಚಿಕೆಯಿಲ್ಲದೇ ಅಸಹ್ಯವಾಗಿ ಕೀಳುಪದ ಪ್ರಯೋಗ ಮಾಡಿ ಕಾಮೆಂಟು ಕುಟ್ಟುವ ಅತಿ ವಿದ್ಯಾವಂತ-ಬುದ್ದಿವಂತರ “ಅಮೋಘ ಸಂಸ್ಕಾರ” ಕ್ಕೆ ಹೋಲಿಸಿದರೆ ಈ ಹುಡುಗನದ್ದು ಅಂತಹಾ “ಅತಿ” ಅಂತೇನೂ ಅನಿಸೋಲ್ಲ ಬಿಡಿ , ಆ ಮಾತು ಬೇರೆ.
ಈ ಬಾಲಕನ ಅಷ್ಟೂ ವರ್ತನೆಗಾಗಿ ಹುಡುಗನ ತಂದೆ ತಾಯಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಅಷ್ಟು ಸರಿಯಲ್ಲ. ಯಾವ ಅಪ್ಪ ಅಮ್ಮನೂ ತಮ್ಮ ಮಗು ದುರಹಂಕಾರಿಯಾಗಿ ಬೆಳೆಯಲಿ ಎಂದಾಗಲೀ ಅಥವಾ ದೊಡ್ಡವರ ಮುಂದೆ ಹೀಗೆ ಅತಿಯಾಗಿ ಆಡಲಿ ಎಂದು ಹೇಳಿ ಕೊಟ್ಟಿರುವುದಿಲ್ಲ. ನಯ-ವಿನಯ, ಸಾರ್ವಜನಿಕ ನಡವಳಿಕೆ, ಉತ್ತಮ ನಾಗರಿಕನ ಲಕ್ಷಣ ಇವೇ ಮುಂತಾದ ಒಳ್ಳೆಯ ಸಂಸ್ಕಾರವನ್ನೇ ಹೇಳಿರುತ್ತಾರೆ. ಶಾಲೆಗಳಲ್ಲೂ ಗುರುಗಳು ಇವುಗಳನ್ನೇ ಹೇಳಿಕೊಡುತ್ತಾರೆ. ಆದರೂ ಕೆಲವು ಮಕ್ಕಳು ತದ್ವಿರುದ್ಧವಾಗಿಯೇ ಬೆಳೆಯುತ್ತಾರೆ.
ಮುಖ್ಯವಾಗಿ, ಇಂದಿನ ಸ್ಮಾರ್ಟ್ ಫೋನ್ ಗಳ ಕಾಲಘಟ್ಟದಲ್ಲಿ ಬಹುತೇಕ ಮಕ್ಕಳಲ್ಲಿ ಅಗತ್ಯವಾಗಿ ಬೇಕಾದ ತಾಳ್ಮೆ, ಸಹನೆ- ಸಂಯಮ ಅಥವಾ ಮಾನವ ಸಂಬಂಧಗಳ ಮೌಲ್ಯಗಳನ್ನು ಯಾರು ಹೇಳಿಕೊಟ್ಟರೂ ಬಿಟ್ಟರೂ ಅವು ಕಣ್ಮರೆಯಾಗುತ್ತಲಿವೆ. ಕಳೆದ ಹತ್ತು ವರ್ಷಗಳಿಂದ ಮೊಬೈಲ್ ನಮ್ಮನ್ನೆಲ್ಲಾ ಆಳುತ್ತಿದೆ. ಮೊಬೈಲು, ಐಪ್ಯಾಡು, ಲ್ಯಾಪ್ ಟಾಪು, ಟೀವಿ ಮುಂತಾದವುಗಳ ಆಕರ್ಷಣೆಯಲ್ಲೇ ಹುಟ್ಟಿಬೆಳೆದು ಅವಕ್ಕೆ ಅಡಿಕ್ಟ್ ಆಗಿರುವ ಮಕ್ಕಳಲ್ಲಿ ತಾಳ್ಮೆ ಎಂಬುದು ಹುಡುಕಬೇಕಷ್ಟೇ !
ನಿರಂತರವಾಗಿ ಸ್ಮಾರ್ಟ್ ಫೋನ್ ಗೆ ಅಂಟಿಕೊಂಡಿರುವ ಮಕ್ಕಳನ್ನು ಅದರಿಂದ ವಿಮುಖಗೊಳಿಸಲು ಯತ್ನಿಸಿದರೆ ಅವರುಗಳು ರೆಬೆಲ್ ಆಗಿ ತಿರುಗಿಬೀಳುವುದಲ್ಲದೇ ಮುಖ್ಯವಾಗಿ ಯಾರ ಮಾತನ್ನೂ ಕೇಳಿಸಿಕೊಳ್ಳುವ ತಾಳ್ಮೆ ಅಥವಾ ಮಾನವ ಸಂಬಂಧಗಳ ಸಹಜ ಭಾವನೆಗಳು ಅವರಲ್ಲಿ ಮಾಯವಾಗಿರುತ್ತದೆ.

ಬರೀ ಮಕ್ಕಳೇ ಏಕೇ ! ಸದಾ ವಾಟ್ಸಪ್ಪು ಇನ್ಸ್ಟಾ ಗ್ತ್ಯಾಂ, ಇಮೈಲು, ಟ್ವೀಟರ್ , ಫ಼ೇಸ್ ಬುಕ್ಕುಗಳಲ್ಲಿ ತಲೆತೂರಿಸಿ ಸಕ್ರಿಯರಾಗಿರುವವರಲ್ಲೂ ಅವರ ಮೊಬೈಲ್ ಬ್ರೌಸಿಂಗ್ ಇಂಟರೆಸ್ಟಿಂಗ್ ಆಗಿದ್ದಾಗ ಒಮ್ಮೆ ಮಾತನಾಡಿಸಲು ಯತ್ನಿಸಿ….! ಆಗ ಅವರಿಗೆ ಅತ್ಯಂತ ಕೋಪ, ಅಸಹನೆ ಬೇಸರ ತಾನಾಗಿಯೇ ಉದ್ಭವವಾಗುತ್ತೆ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾದಂತೆ ಅಸಹನೆಯೂ ಹೆಚ್ಚಾಗಿ ಮನುಷ್ಯನಲ್ಲಿನ ತಾಳ್ಮೆ, ಸಂಯಮ ಸಮಾಧಾನ ನಿಧಾನಕ್ಕೆ ನೆಲಸಮವಾಗುತ್ತಿದೆ.
ಸ್ಮಾರ್ಟ್ ಫೋನ್ ಬಳಸುವ ಎಲ್ಲರೂ ಹೀಗೆ ಎಂದು ಹೇಳಲಾಗದಿದ್ದರೂ ಬಹುತೇಕರಲ್ಲಿ ಅದರಲ್ಲೂ ಚಿಕ್ಕ ಮಕ್ಕಳ ಸ್ವಭಾವದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿರುವುದನ್ನು ಅಲ್ಲಗಳೆಯಲಾಗದು. ಈ ಪರಿಣಾಮದ ಫಲಿತಾಂಶವೇ ಕೆಬಿಸಿಯಲ್ಲಿ ಆ ಹುಡುಗನ ಸಹನೆ ಸಂಸ್ಕಾರವಿರದ ಅತಿ ಎನಿಸಬಹುದಾದ ವರ್ತನೆಗೆ ಮುಖ್ಯ ಕಾರಣ.
ಇಂತಹ ಅಹಂಕಾರ ವೆನ್ನಬಹುದಾದ ವರ್ತನೆ ಇಲ್ಲವೇ ಎಲ್ಲರಿಗಿಂತ ತಾನೇ ಹೆಚ್ಚು ಸ್ಮಾರ್ಟು, ಬುದ್ದಿವಂತ ಎಂದು ಭಾವಿಸಿರುವವರಿಗೆ ಅಂತಿಮವಾಗಿ ಏನಾಗಬೇಕೋ ಅದೇ ಅಗುವುದು ನಿಶ್ಚಿತ. ವಾಲ್ಮೀಕಿ ರಾಮಾಯಣದ ಮೊದಲಕಾಂಡ ಯಾವುದೆಂಬ ಒಂದು ಪ್ರಶ್ನೆಗೆ ಆ ಹುಡುಗ ಓವರ್ ಕಾನ್ ಫ಼ಿಡೆನ್ಸಿನಿಂದ ” ಅಯೋಧ್ಯೆ ಕಾಂಡ ” ಎಂದು ತಪ್ಪು ಉತ್ತರ ಕೊಟ್ಟು ಸ್ಪರ್ಧೆಯಿಂದ ಹೊರಬಿದ್ದ. ಅವನು ಉತ್ತರ ಕೊಡುವ ಸಮಯದಲ್ಲಿ ತಮ್ಮ ಮಗನ ದಾರ್ಷ್ತ್ಯದ ವರ್ತನೆ ಬಗ್ಗೆ ಅವನ ತಂದೆ ಒಳಗೊಳಗೇ ಕಸಿವಿಸಿ ಅನುಭವಿಸುತ್ತಿದ್ದುದನ್ನು ಯಾರಾದರೂ ಗಮನಿಸಿದ್ದಿರಬಹುದು.
ಒಟ್ಟಾರೆ, ಒಬ್ಬ ಹಿರಿಯನೆದುರು ಆ ಹುಡುಗನ ಬೀಡುಬೀಸಾದ ವರ್ತನೆಯೊಂದು ಇಂದಿನ ಕಾಲಘಟ್ಟದಲ್ಲಿ ಸರಳತೆ,ಸಂಯಮ, ಸಜ್ಜನಿಕೆ, ಸಂಸ್ಕಾರ..ಇವೇ ಮುಂತಾದ ಮರೆತುಹೋದ ವಿಚಾರಗಳ ಬಗೆಗೆ ಗಂಭೀರವಾದ ಚರ್ಚೆಯೊಂದನ್ನು ಹುಟ್ಟುಹಾಕಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ! ಕೊನೇಪಕ್ಷ ತಂದೆ ತಾಯಂದಿರು ತಮ್ಮ ಮಕ್ಕಳ ಗುಣ ಸ್ವಭಾವ ಹಾಗೂ ವರ್ತನೆಗಳಲ್ಲಿ ಏನಿರಬೇಕು- ಏನಿರಬಾರದೆಂಬುದರ ಬಗ್ಗೆ, ಮತ್ತೊಮ್ಮೆ ಅವಲೋಕನ ಮಾಡಿಕೊಳ್ಳಲು ಕೆಬಿಸಿಯ ಈ ಎಪಿಸೋಡು ಪರಿಣಾಮಕಾರಿ ವೇದಿಕೆಯಾಗಿದ್ದಂತೂ ನಿಜ.
ವಿನಯವಿಲ್ಲದ ವಿದ್ವತ್ತು , ಸಂಸ್ಕಾರವಿಲ್ಲದ ಸ್ಮಾರ್ಟ್ ನೆಸ್ ಗಳ ದುಷ್ಪರಿಣಾಮವನ್ನು ಅರ್ಥೈಸಿಕೊಳ್ಳಲು ಇದು ಸಕಾಲ.
** ಮರೆಯುವ ಮುನ್ನ **
ಆ ಹುಡುಗನ ವರ್ತನೆಯ ಬಗ್ಗೆ ದೇಶಾದ್ಯಂತ ಈ ರೇಂಜಿಗೆ ಟ್ರೋಲ್ ಆಗಿರುವುದರ ಪರಿಣಾಮದಿಂದ ಹೊರಬರಲು ಅವನ ತಂದೆ ತಾಯಿಗೆ , ಮುಖ್ಯವಾಗಿ ಆ ಬಾಲಕನಿಗೆ ಬಹಳ ಸಮಯವೇ ಬೇಕಾದೀತು. ಅದರಲ್ಲೂ ಆ ಹುಡುಗನಲ್ಲಿದ್ದ ಅಹಂ ಗೆ , ಜ್ಞಾನಕ್ಕೆ, ಅತಿಯಾದ ಆತ್ಮವಿಶ್ವಾಸಕ್ಕೆ ಸ್ಪರ್ಧೆಯ ಅಪಯಶಸ್ಸೆಂಬುದು ಸರಿಯಾದ ಪೆಟ್ಟನ್ನೇ ಕೊಟ್ಟಿದ್ದು , ಒಂದೊಮ್ಮೆ ಅದನ್ನು ಅವಮಾನವೆಂಬಂತೆ ಭಾವಿಸಿದಲ್ಲಿ ಅವನ ಮಾನಸಿಕ ಪರಿಸ್ಥಿತಿ ಇನ್ನೂ ಕೆಟ್ಟದಾಗಿರಬಲ್ಲದು. ಹಾಗಾಗಿ ಅವನಿಗೆ ಅಂತಹ ಭಾವನೆ ಬರದಂತೆ ತಿದ್ದಿ ನಡವಳಿಕೆಯನ್ನು ಬದಲಿಸಿಕೊಳ್ಳುವ ಬುದ್ದಿ ಹೇಳುವ ಹೊಣೆ ತಂದೆ- ತಾಯಿಯರದ್ದು .
ಇಶಿತ್ ಭಟ್ ಎಂಬ ಬಾಲಕನ ಅತಿಯಾದ ಆಟಿಟ್ಯೂಡನ್ನು, ಅವನ ಸಹ್ಯವಲ್ಲದ ಅಷ್ಟೂ ವರ್ತನೆಯನ್ನು ಸಹಿಸಿಕೊಂಡು ಎಂದಿನಂತೆ ಸುಗಮವಾಗಿ ಕಾರ್ಯಕ್ರಮ ನಿರ್ವಹಿಸಿದ ಅಮಿತಾಭ್ ರ ಸಂಯಮವೂ ಇಲ್ಲಿ ಉಲ್ಲೇಖಾರ್ಹ. ಅನುಕರಣೀಯ.
# ಲಾಸ್ಟ್ ಪಂಚ್ #
ಎಂತಹ ಅಹಂಕಾರದ ವರ್ತನೆಯನ್ನಾದರೂ ಸಹಿಸಿಕೊಳ್ಳಬಲ್ಲ ಅಂತಹ ಅಪಾರ ಸಂಯಮ ಅಮಿತಾಭ್ ರಲ್ಲಿರಲಿಕ್ಕೆ ಮನೆಯಲ್ಲಿ ಜಯಾ ಆಂಟಿಯ “ವಿಶೇಷ ಕೊಡುಗೆ” ಯೂ ಸಾಕಷ್ಟಿರಲೇ ಬೇಕಲ್ಲವೇ..?
ಪ್ರೀತಿಯಿಂದ…..
- ಹಿರಿಯೂರು ಪ್ರಕಾಶ್
