ಆತ್ಮವಿಶ್ವಾಸವೆಂಬ ತೂಕ : ಸ್ನೇಹಾ ಆನಂದ್

ಆತ್ಮವಿಶ್ವಾಸ ಇರಬೇಕು ಆದರೆ ಈ ಮಟ್ಟಕ್ಕೆ ಅಲ್ಲ ಎನ್ನುವುದು ಕಂಡು ಬಂದಿದ್ದು ಹಿಂದಿಯಲ್ಲಿ ಬರುವ ಕೆಬಿಸಿಯ (KBC ) ಒಂದು ಘಟನೆ. ಇಶಿತ್ ಭಟ್ ಮಾತು ದುರಹಂಕಾರಿ ಎನ್ನಲು ಕಷ್ಟ. ಯಾಕೆಂದರೆ ಅವನು ಇನ್ನು ಪುಟ್ಟ ಬಾಲಕ ಮುಂದೆ ಅವನ ಸ್ವಭಾವ ಬದಲಾಗಬಹುದು. ಆದರೆ ಹುಡುಗ ಆತ್ಮವಿಶ್ವಾಸದ ಜೊತೆಗೆ ವಿನಯತೆಯನ್ನು ಕಲಿತರೆ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬರುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ನೇಹಾ ಆನಂದ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ… 

ಈಗ ಅದು ತುಂಬಾ ಸುದ್ದಿಗೆ ಬಂದು ವೈರಲ್ ಆಗಿದೆ. ಆತ್ಮವಿಶ್ವಾಸವನ್ನು ತಕ್ಕಡಿಯಲ್ಲಿಟ್ಟು ನೋಡಿದಾಗ ತುಂಬಿ ತುಳುಕಬಾರದು. ಸೋರುತ್ತಿದ್ದರೆ ಅದು ದುರಹಂಕಾರದ ಮಾತುಗಳು ಎನ್ನಬಹುದು. ಆದರೆ ಅದು ಸೋರುವುದು ದುರದೃಷ್ಟವಶಾತ್ ಆ ವ್ಯಕ್ತಿಗೆ ತಿಳಿಯುವುದೇ ಇಲ್ಲ. ಎದುರಿಗೆ ಇದ್ದವರಿಗೆ ಮಾತ್ರ ಗಮನಕ್ಕೆ ಬರುತ್ತದೆ. ಆದರೆ ಆತ ಪುಟ್ಟ ಹುಡುಗ ಎನ್ನುವ ಕಾರಣದಿಂದ ದುರಹಂಕಾರ ಜಾಸ್ತಿ ಎನ್ನುವ ಮಾತು ಹೇಳಲು ಮನಸ್ಸು ಬಯಸುವುದಿಲ್ಲ.

ಸಮಯ ಸರಿದಂತೆ ಹುಡುಗ ವಿನಯತೆಯನ್ನು ಕಲಿಯಬಹುದು. ನಿಜ ಹೇಳಬೇಕೆಂದರೆ ಈಗೀನ ಎಲ್ಲಾ ಮಕ್ಕಳಲ್ಲೂ ಹಿರಿಯರಿಗೆ ಹೇಳುವ ಈ ರೀತಿಯ ಮಾತುಗಳು ಕಾಣಸಿಗುತ್ತದೆ. ಹೇಳುವುದನ್ನು ನೇರವಾಗಿ ಹೇಳಿಬಿಡು ಸುತ್ತಿ ಬಳಸಿ ಮಾತನಾಡಬೇಡ ಎನ್ನುವುದನ್ನು ನಾವು ಕೇಳೇ ಕೇಳಿರುತ್ತೇವೆ ನಮ್ಮ ನಮ್ಮ ಮನೆಗಳಲ್ಲಿ, ಇದಕ್ಕೆ ನಮ್ಮ, ನಿಮ್ಮ ಮಕ್ಕಳು ಎನ್ನುವ ಬೇದಭಾವವಿಲ್ಲ. ಇದು ಈಗೀನ ಮಕ್ಕಳ ಸ್ವಭಾವದಲ್ಲಿ ಇದ್ದೇ ಇದೆ ಎಂದರೆ ತಪ್ಪಾಗಲಾರದು. ಆದರೆ ಅಷ್ಟು ದೊಡ್ಡ ಮಟ್ಟದ ವೇದಿಕೆಯಲ್ಲಿ ಆ ಹುಡುಗ ಮಾತಾನಾಡಿದಕ್ಕೆ ಮಾತ್ರ ಅದು ಅಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ ಅಷ್ಟೇ.

ಹೀಗೆ ಅನಿಸಿದ್ದು ಕೆಬಿಸಿ ಶೋದ ಝಲಕ್ ಫೇಸ್ಬುಕ್ನಲ್ಲಿ ನೋಡುತ್ತಿದ್ದಾಗ ಸ್ವಲ್ಪ ಹೊತ್ತು ಹುಡುಗನ ಆತ್ಮವಿಶ್ವಾಸ ಮೆಚ್ಚಬೇಕು ಅನಿಸಿತು. ಜೊತೆಗೆ ಹಾಸ್ಯದಂತೆಯೂ ತೋರಿತು. ಬರುಬರುತ್ತಾ ಆ ಹುಡುಗನ ಅತಿರೇಕದ ಮಾತುಗಳು ಮನಸ್ಸಿಗೆ ಕಿರಿಕಿರಿ, ಮುಜುಗರ ಕೊಡುತ್ತಾ ಹೋದವು. ನಿಜ ಹೇಳಬೇಕೆಂದರೆ ಕೇವಲ ಐದನೇಯ ಪ್ರಶ್ನೆಗೆ ಆ ಹುಡುಗ ಸೋತಾಗ ನನ್ನ ಮನಸ್ಸು ಒಂದು ರೀತಿಯಲ್ಲಿ ನಿರಾಳವಾಯಿತು. ಎಷ್ಟು ಗಾಭರಿ ಎನಿಸಿತ್ತು ನೋಡುವಾಗ ಎಂದರೆ ಆ ಹುಡುಗ ಮುಂದಕ್ಕೆ ಹೋದಂತೆ ಮತ್ತೇ ಯಾವ ರೀತಿಯಲ್ಲಿ ಯದ್ವಾತದ್ವಾ ಮಾತಾಡುತ್ತಾನೆಯೋ ಬಿಗ್ಬಾಸ್ ಜೊತೆಯಲ್ಲಿ ಎನ್ನುವ ಆತಂಕ ಮನಸ್ಸನ್ನಾವರಿಸಿತ್ತು.

ಪ್ರತಿಯೊಂದು ಪ್ರಶ್ನೆಗೂ ಹೀಗೆ ದುರಹಂಕಾರದ ಉತ್ತರ ಕೊಡುತ್ತಿದ್ದರೆ ಯಾರಿಗೇ ಆಗಲಿ ತಾಳ್ಮೆಯ ಮಟ್ಟ ಇಳಿಯುತ್ತದೆ. ಅತಿಯಾದ ಅವಮಾನದ ಮಾತುಗಳು ಮನಸ್ಸನ್ನು ಸಿಡಿದೇಳುವಂತೆ ಮಾಡುತ್ತವೆ. ಆದರೆ ಚಿಕ್ಕ ಹುಡುಗ ಎನ್ನುವ ಕಾರಣಕ್ಕೆ ನಮ್ಮ ಬಿಗ್ ಬಾಸ್ ತಡೆದುಕೊಂಡಿರಬಹುದು ಹೊರತು ದೊಡ್ಡವರಾದರೆ ಎರಡನೆಯ ಪ್ರಶ್ನೆಗೇ ಅವರನ್ನು ಹೊರಗೆ ಕಳುಹಿಸುತ್ತಿದ್ದರು.

ಈ ಮಗುವನ್ನು ಉದಾಹರಣೆ ಇಟ್ಟುಕೊಂಡು ನೋಡಿದರೆ ಮನಸ್ಸಿಗೆ ಖೇದವಾಗಿದ್ದು ಮುಂದಿನ ಪೀಳಿಗೆಯ ಬಗ್ಗೆ ಒಂದು ರೀತಿಯ ಆತಂಕ. ಅತಿಯಾದ ಆತ್ಮವಿಶ್ವಾಸಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಅನಿಸಿದ್ದು ಸುಳ್ಳಲ್ಲ. ಈ ಹುಡುಗನ ವರ್ತನೆಗೆ ತಂದೆ ತಾಯಿಯರನ್ನು ಕಾರಣ ಮಾಡುವುದು ಖಂಡಿತಾ ಒಳ್ಳೆಯದಲ್ಲ, ಆ ಹುಡುಗನ ಸ್ವಭಾವವೇ ಹಾಗೆ ಬಂದಿದ್ದರೆ ತಂದೆ ತಾಯಿ ಎಷ್ಟು ಬೈದರೂ ಬದಲಾಗಲಾರದು. ಆದರೆ ಏನೆಂದರೆ ಆ ಹುಡುಗ ತೀರಾ ಚಿಕ್ಕವನಿದ್ದ ಕಾರಣ ಬೈದು ತಿದ್ದುವ ಪ್ರಯತ್ನ ಮಾಡುವ ಅಧಿಕಾರ, ಕರ್ತವ್ಯ ತಂದೆ ತಾಯಿಯರಿಗೆ ಮಾತ್ರ ಇದೆ ಹೀಗಾಗಿ ಅವರು ಪ್ರಯತ್ನಿಸಲೇಬೇಕು.

ತಂದೆ ತಾಯಿಯರೇ ಹಾಗಿದ್ದರೆ ಏನು ಮಾಡಲು ಸಾಧ್ಯ?… ಆದರೆ ಈ ಹುಡುಗನ ತಂದೆ ತಾಯಿಗಳು ಮಗನ ಮಾತಿನ ಧಾಟಿಗೆ ಒಂದು ರೀತಿಯ ಮುಜುಗರ ಪಡುವುದು ಕಂಡುಬಂತು, ಹೀಗಾಗಿ ತಂದೆ ತಾಯಿಯರು ಹಾಗಿಲ್ಲ ಎನ್ನುವುದು ಸ್ಪಷ್ಟವಾಗಿ ಹೇಳದೇ ಇದ್ದರೂ ಸ್ವಲ್ಪ ಮಟ್ಟಿಗೆ ಭಾಸವಾಯಿತು. ಒಂದು ವೇಳೆ ಆ ಹುಡುಗ ಆತ್ಮವಿಶ್ವಾಸದ ಜೊತೆಗೆ ವಿನಯತೆಯನ್ನು ಕಲಿತರೆ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬರುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆತ್ಮವಿಶ್ವಾಸ ಇಲ್ಲದೇ ಇದ್ದರೆ ಜೀವನ ಘೋರ, ಆದರೆ ಆತ್ಮವಿಶ್ವಾಸ ಮಿತಿಮೀರಿದರೆ ಜೀವನ ಘನ ಘೋರ.


  • ಸ್ನೇಹಾ ಆನಂದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading