‘ಮೊಸರು ಕಡೆದಂಥ ಬಿಳಿ ಬೆಣ್ಣೆಯಿವಳು’… ಸುಂದರ ಕವನ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…
ಕೆಂದುಟಿಯ ಸೊಬಗಿಹುದು
ಬಂಧಿಸುವ ಮೊಗವಿಹುದು
ಚಂದಿರನ ಕಾಂತಿಯಿರೆ ಬೆಡಗಿಯೊಳಗೆ
ಕುಂದರದನೆಯ ನಗುವು
ಕುಂದಣದ ಹೊಳಪಿಹುದು
ಬಂಧಿಸಲು ಸೆಳೆದಿಹುದು ಕಣ್ಣ ಚೆಲುವು
ನಸುನಗುವ ಮೊಗದೊಳಗೆ
ಪಿಸುಗುಡುವ ಮಾತಿನಲಿ
ತುಸು ಮಾಯೆಯೆನ್ನೊಳಗೆ ಸುರಿಸುತಿಹಳು
ಹೆಸರೊಳಿಹ ರಮ್ಯತೆಗೆ
ಹಸಿರಾಗಿ ಕಂಡಿಹಳು
ಮೊಸರು ಕಡೆದಂಥ ಬಿಳಿ ಬೆಣ್ಣೆಯಿವಳು
ಕೊಂಕಾಡದಂತವಳು
ಬಿಂಕವನು ಬಿಟ್ಟವಳು
ಸಂಕುಲಕೆ ತರುವಂತೆ ನೆರಳಾದಳು
ಶಂಕೆಯನೆ ಪಡದವಳು
ಸುಂಕವನು ಕೇಳದಯೆ
ಸಂಕೇತವಾಗಿಹಳು ಮನಸಿನೊಳಗೆ
ನಳಿನ ಪುಷ್ಪದ ಕಾಂತಿ
ಸೆಳೆಯುತಿಹ ಶೃಂಗಾರ
ಬಳುಕಿಸುವ ಹಂಸನಡೆ ಸಂಗಾತಿಯು
ಮಳೆಯೊಳಗೆ ಮಿಂದಿಹಳು
ನಳನಳಿಸಿ ಬಾಳಿನೊಳು
ಬೆಳಕಿಳಿಸ ಬಂದಿರುವ ಕಲೆಗಾತಿಯು
- ಚನ್ನಕೇಶವ ಜಿ ಲಾಳನಕಟ್ಟೆ.