ಪ್ರೀತಿಯ ಉತ್ಸಾಹಿ ಕಲಾವಿದ ವಿವೇಕ್ ಅವರು ಮಾರ್ಚ್ ೦೩, ೨೦೨೩ ರಂದು ಕನ್ನಡ ನಾಡಿನ ಅಮೂಲ್ಯ ಯುವ ಪ್ರತಿಭೆ ಕಣ್ಮರೆಯಾಗಿದ್ದು ನೋವಿನ ಸಂಗತಿ, ಡಾ.ವಡ್ಡಗೆರೆ ನಾಗರಾಜಯ್ಯ ಅವರು ವಿವೇಕ ಕುರಿತು ಬರೆದ ಭಾವುಕ ನುಡಿಗಳು….
ಪ್ರೀತಿಯ ವಿವೇಕ್,
ಕರ್ನಾಟಕದ ಸಾಂಸ್ಕೃತಿಕ ನಕಾಶೆಯಲ್ಲಿ ಪಳಾರನೆ ಮಿಂಚಿ ಮರೆಯಾದ ಮಿಂಚಿನಬಳ್ಳಿ ನೀನು. ಸದಾ ಪಾದರಸದಂತೆ ಲವಲವಿಕೆಯಿಂದ ಪುಟಿಯುತ್ತಿದ್ದೆ. ನೀನು ನಕ್ಕರೆ ಸುತ್ತಲೂ ಬೆಳುದಿಂಗಳು ಚೆಲ್ಲಾಡಿದಂತೆ ನಿನ್ನ ನಗುವಿನ ಪ್ರಭೆ ತುಂಬಿಕೊಳ್ಳುತ್ತಿತ್ತು. ಇವತ್ತು ನೀನು ನಮ್ಮನ್ನು ಅಗಲಿಹೋಗಿ
ನೀನಿಲ್ಲದಿರುವ ನೋವಿನ ಕ್ಷಣಗಳನ್ನು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
2018 ರ ಜೂನ್ ತಿಂಗಳಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ‘ಶ್ರೀ ಈರದಿಮ್ಮಮ್ಮ ಕಣಿವೆ ಮಕ್ಕಳ ಸಾಂಸ್ಕೃತಿಕ ಉತ್ಸವ’ದಲ್ಲಿ ಮೊದಲಿಗೆ ನಾನು ನಿನ್ನನ್ನು ಕಂಡಾಗ ನೀನಿನ್ನೂ ಚಿಗುರು ಮೀಸೆಯ ಹುಡುಗ. ಜಂಬೆ ಬಾಲು ಅವರು ತಮ್ಮೂರಿನ ಮತ್ತು ಸುತ್ತಮುತ್ತಲಿನ ಎಳೆ ಚಿಗುರು ಪ್ರತಿಭೆಗಳಿಗಾಗಿ ಆಯೋಜಿಸಿದ್ದ ಆ ಉತ್ಸವದಲ್ಲಿ ನಿನ್ನ ಕಲಾ ಪ್ರತಿಭೆಯನ್ನು ಕಂಡು ನಾನು ಬೆರಗಾಗಿದ್ದೆ. ಭೂಮ್ತಾಯಿ ಬಳಗದ ಕಲಾವಿದರಾದ ಡಿ.ಆರ್.ನಿರ್ಮಲಾ ರವಿಶಾಸ್ತ್ರಿ, ಅರುಣ್, ಮಹೇಶ್ ಮುಂತಾದವರ ಗುಂಪಿನಲ್ಲಿ ಕೆಂಪನೆಯ ಹುಡುಗನಾದ ನೀನು ನಿನ್ನ ನಗುವಿನಿಂದಲೇ ಎಲ್ಲರ ಕಣ್ಸೆಳೆಯುತ್ತಿದ್ದೆ. ಜಂಬೆ ಬಾಲು ರೀತಿಯಲ್ಲಿ ವಿಶ್ವಮಟ್ಟದಲ್ಲಿ ಕರ್ನಾಟಕದ ಕುಶಲಕರ್ಮಿ ಸಮುದಾಯಗಳ ಕಲೆಗಳನ್ನು ಬೆಳಗಬಲ್ಲ ಪ್ರತಿಭಾವಂತ ಕಲಾವಿದ ನೀನಾಗಬಲ್ಲೆ ಎಂದು ನನಗಾಗಲೇ ಅನ್ನಿಸಿಬಿಟ್ಟಿತು. ಅವತ್ತಿನ ವೇದಿಕೆ ಕಾರ್ಯಕ್ರಮದಲ್ಲಿ ನನ್ನ ಜೊತೆಯಲ್ಲಿ ಜಪಾನ್ ದೇಶದ ಮೋರಿಷ್ಟಾ ಮತ್ತು ನಮ್ಮ ಜನಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಮುಖ್ಯ ಅತಿಥಿಗಳಾಗಿದ್ದೆವು.
ಇದಾದ ನಂತರದಲ್ಲಿ ಜಂಬೆ ಬಾಲು ಅವರ ಗೆಳೆತನದಲ್ಲಿ ಅರುಣ್ ಹಾಗೂ ನಿನ್ನ ಪ್ರಗತಿಯ ಹೆಜ್ಜೆಗಳನ್ನು ನಾನು ಗಮನಿಸತೊಡಗಿದೆ. ಅರುಣ್ ಹಾಡುಗಾರನಾಗಿ ಗಮನ ಸೆಳೆದರೆ ನೀನು ಮಾತ್ರ ಕೀಬೋರ್ಡ್ ವಾದನ, ತಬಲ, ಜಂಬೆ, ತಮಟೆ, ಹಾರ್ಮೋನಿಯಂ ಮುಂತಾದ ಸಂಗೀತ ವಾದ್ಯಗಳನ್ನು ನುಡಿಸುವುದರ ಜೊತೆಯಲ್ಲಿ ಹಾಡುಗಾರನಾಗಿಯೂ ಗಮನ ಸೆಳೆದವನು. ಮುಂದಿನ ದಿನಗಳಲ್ಲಿ ಕೊರೋನಾ ಕಾಲದಲ್ಲಿ ನಾವು ಕೆಲವು ಗೆಳೆಯರು ಕೋಲೆಬಸವ ಅಲೆಮಾರಿಗಳಿಗೆ ಅವಿರತವಾಗಿ ಆಹಾರ ಸರಬರಾಜು ಮಾಡುವಾಗ ನೀನು ನಮ್ಮೊಂದಿಗೆ ಕೈಜೋಡಿಸಿ ಶ್ರಮಿಸಿದ್ದನ್ನು ನಾನು ಮರೆಯಲಾರೆ ವಿವೇಕ್.
ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಅವತ್ತು 2022 ರ ಏಪ್ರಿಲ್ 14 ರ ಮಧ್ಯರಾತ್ರಿ ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಶ್ರೀ ಷಡಕ್ಷರಮುನಿ ಸ್ವಾಮೀಜಿಯವರ ಮುಂದೆ ನೀನು ಹಾಡಿದ “ಶರಣು ಹರಳಯ್ಯನಿಗೆ ಶರಣು ಚೆನ್ನಯ್ಯನಿಗೆ” ಹಾಡು ಈಗಲೂ ನನ್ನ ಎದೆಯಲ್ಲಿ ನುಡಿಗೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಜಂಬೆ ಬಾಲು ನುಡಿಸುತ್ತಿದ್ದ ಜಂಬೆಯ ಸಂಗೀತದೊಂದಿಗೆ ನಿನ್ನ ಹಾಡುಗಾರಿಕೆಯ ರಸಾಸ್ವಾದನೆ ಮಾಡಿದ ಷಡಕ್ಷರಮುನಿ ಸ್ವಾಮೀಜಿ ಅಂದು ನಮಗೆಲ್ಲರಿಗೂ ಕೈಯಾರೆ ಮುದ್ದೆ ಅನ್ನ, ಸೊಪ್ಪಿನ ಸಾರು, ಹಪ್ಪಳ, ಎಳ್ಳಿಕಾಯಿ ಉಪ್ಪಿನಕಾಯಿ, ಮಜ್ಜಿಗೆ ಉಣಲಿಕ್ಕಿ (ನರಸಿಂಹನ್, ಬಾಲು ನೀನು ಮತ್ತು ನಾನು ಇದ್ದೆವು) ನಿನ್ನನ್ನು ಬಹುವಾಗಿ ಹರಸಿದ್ದರು. ಸ್ವಾಮೀಜಿಯಂತಹ ಸ್ವಾಮೀಜಿ ಯೊಬ್ಬರು ನನ್ನನ್ನು ‘ಗುರುಗಳೇ’ ಎಂಬ ಗೌರವ ಸೂಚಕ ಶಬ್ದದಿಂದ ಕರೆಯುತ್ತಿದ್ದುದನ್ನು ನೋಡಿದ ನೀನು ಆಶ್ಚರ್ಯಪಟ್ಟಿದ್ದೆ. ನೀನು ನನ್ನ ನೇತೃತ್ವದಲ್ಲಿ ಮತ್ತು ಶ್ರೀ ಷಡಕ್ಷರಮುನಿ ಸ್ವಾಮೀಜಿಯವರ ಘನ ಉಪಸ್ಥಿತಿಯಲ್ಲಿ ನಿನ್ನ ಮದುವೆಯು “ಸಂವಿಧಾನ ಸಾಕ್ಷಿ ವಿವಾಹ’ ನೆರವೇರಬೇಕೆಂದು ಬಯಸಿದೆ. ಅಂಬೇಡ್ಕರ್ ಅನುಯಾಯಿಯಾದ ನಿನ್ನ ಮತ್ತು ನೇತ್ರಾ ಅವರ “ಸಂವಿಧಾನ ಸಾಕ್ಷಿ ವಿವಾಹ” ಕ್ಕೆ ನಾವೆಲ್ಲರೂ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅರಸೀಕೆರೆ ಪಟ್ಟಣದ ಸಿಂಧೂ ಕಲ್ಯಾಣ ಮಂಟಪದಲ್ಲಿ ಸೇರಿದೆವು.
ವಿಶ್ವ ಪರಿಸರ ದಿನದ 5 ಜೂನ್ 2022 ರಂದು ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಿನಗೂ ಮತ್ತು ನೇತ್ರಾ ಅವರಿಗೂ “ಸಂವಿಧಾನ ಸಾಕ್ಷಿ ವಿವಾಹ”ವನ್ನು ನಾನು ನಡೆಸಿಕೊಟ್ಟಿದ್ದೆನು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಗಂಡು-ಹೆಣ್ಣು ಹಾಗೂ ಜನರೊಂದಿಗೆ ಮದುವೆ ಮಂಟಪದಲ್ಲಿ ಜಂಬೆ ಝಳಕ್ ಸಿಂಧುನಾಟ್ಯ. ವಧು ವರನೂ ಕೂಡಾ ಕುಣಿದ್ದದ್ದು ವಿಶೇಷ ಆಕರ್ಷಣೆಯಾಗಿತ್ತು. ಪ್ರೀತಿಯ ವಿವೇಕ್ ಧರ್ಮಣ್ಣ ನಿನ್ನನ್ನು ಕಳೆದುಕೊಂಡಿರುವ ನಿನ್ನ ಹೆಂಡತಿ ನೇತ್ರಾ ಈಗ ಆರು ತಿಂಗಳ ಗರ್ಭಿಣಿ. 27 ವರ್ಷ ಪ್ರಾಯದ ಯುವಕನಾದ ನೀನು ನಿನಗಿಂತಲೂ ಸಣ್ಣ ವಯಸ್ಸಿನ ಬಸುರಿ ಹೆಂಡತಿಯನ್ನು ಬಿಟ್ಟು ಯಂಗೆ ಹೋದೆ ವಿವೇಕ್ ?
ಮೊನ್ನೆ ತಾನೇ ಫೆಬ್ರವರಿ 25 ರಂದು ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗ ಹಾಗೂ ಫೆಬ್ರವರಿ 26 ರಂದು ನಯನ ಸಭಾಂಗಣದಲ್ಲಿ ನಡೆದ ಕಾಯಕ ಶರಣರ ಜಯಂತಿಯಲ್ಲಿ ನಾವು ಜೊತೆಯಲ್ಲಿದ್ದೆವು. ಪ್ರೀತಿಯ ವಿವೇಕ್, ಇವತ್ತು 03-03-2023 ರಂದು ನೀನು ನಮ್ಮ ಜೊತೆ ಇಲ್ಲವೆಂದರೆ ನನಗೆ ನಂಬಲಾಗುತ್ತಿಲ್ಲ. ನಿನ್ನ ಸಾವಿಗೆ ಗೆಳೆಯರನ್ನು ಈಗ ಆಹ್ವಾನಿಸುತ್ತಿರುವುದರಿಂದ ನನಗೆ ಬಲು ದುಃಖವಾಗುತ್ತಿದೆ. ಕಣ್ಣೀರುಗರೆಯುತ್ತಾ ಆಹ್ವಾನಿಸುತ್ತಿದ್ದೇನೆ
- ಡಾ.ವಡ್ಡಗೆರೆ ನಾಗರಾಜಯ್ಯ