‘ಆನ್ಲೈನ್ ಗೆಳೆಯ’ ಸಣ್ಣಕತೆ – ಶಾಲಿನಿ ಹೂಲಿ ಪ್ರದೀಪ್

ಹೆಣ್ಣು ಮದುವೆಯಾದ ಮೇಲೆ ತನ್ನ ಗಂಡನೇ ಸರ್ವಸ್ವ ಎಂದು ನಂಬಿ ಬರುತ್ತಾಳೆ. ಅವನಿಂದ ಪ್ರೀತಿ, ಕಾಳಜಿ ಸಿಗದಿದ್ದಾಗ ಅವಳ ಮನಸ್ಸು ಬೇರೆಡೆ ಸಿಕ್ಕ ಪ್ರೀತಿಯತ್ತ ವಾಲುತ್ತದೆ, ಆ ಕ್ಷಣಕ್ಕೆ ಅದು ತಪ್ಪು ಅಂತ ಅವಳಿಗೂ ಅನಿಸುವುದಿಲ್ಲ, ಬದಲಾಗಿ ತನ್ನ ಪ್ರೀತಿಗಾಗಿ ಸಮಾಜದ ವಿರುದ್ಧ ಹೋರಾಡಲು ಸಿದ್ಧಳಾಗುತ್ತಾಳೆ. ಮುಂದೆ ಆ ಪ್ರೀತಿ ಏನಾಗುತ್ತದೆ ತಪ್ಪದೆ ಓದಿ …

ಬೆಳಗ್ಗೆ ಮಗಳಿಗೆ ಬಾಕ್ಸ್ ಮಾಡಿ, ಅವಳ ಬಾಯಿಗೆ ತುರುಕಿ  ಟಾ…ಟಾ… ಬಾಯ್… ಬಾಯ್… ಮಾಡಿ ಸ್ಕೂಲ್ ಗೆ ಕಳಿಸಿದರೆ ಸುಜಾತಾಳ ಅಂದಿನ ದೊಡ್ಡ ಜವಾಬ್ದಾರಿ ಕೆಲಸ ಮುಗಿತು, ಇನ್ನೊಂದು ಗಂಡ ಅಜಯ ಸ್ನಾನ ಮಾಡಿ ರೂಮ್ ಗೆ ಹೋಗಿ ಬಟ್ಟೆ ಹಾಕೊಂಡು ಬರೋವಷ್ಟರಲ್ಲಿ ತಟ್ಟೆಗೆ ತಿಂಡಿ ಹಾಕಿಟ್ಟು, ಕಾಫಿ ಮಾಡ್ಕೊಂಡು ಅವನ ಮುಂದೆ ನಿಲ್ಲಬೇಕು. ಅಜಯ ಮೊದಲಿಂದಲೂ ಸಿಡುಕ,  ದುಡ್ಡು, ಆಫೀಸ್ ಕೆಲಸ, ಮಾರ್ಕೆಟ್ ನಲ್ಲಿ ದುಡ್ಡು ಹಾಕಿ ತಗಿಯೋದು ಇದೆ ಅವನ ಪ್ರಪಂಚವಾಗಿತ್ತು. ಹೆಂಡತಿ ಎನ್ನೋ ಒಂದು ಜೀವ ಮನೆಯಲ್ಲಿ ಇದೆ ಅನ್ನೋದೇ ಮರೆತು ಹೋಗಿದ್ದ. ಅವಳ ಬೇಕು ಬೇಡಗಳನ್ನು ಕೇಳುತ್ತಿರಲಿಲ್ಲ. ಬಾಯಿ ಮಾತಿಗೂ ಬಣ್ಣದ ಮಾತು ಆಡುತ್ತಿರಲಿಲ್ಲ. ಬದಲಾಗಿ ಎದುರಿಗೆ ನಿಂತಾಗ ‘ಉಪ್ಪಿಲ್ಲ, ಖಾರ ಇಲ್ಲ, ಅಡುಗೆ ಏನಂತ ಮಾಡ್ತೀಯೋ… ರಾಗ ಎಳೆದು ಸಿಡುಕಿ ತಿನ್ನುತ್ತಿದ್ದ. ಅವನ ಚುಚ್ಚು ಮಾತಿಗೆ ಸುಜಾತಾಳ ಮುಖ ಬಾಡಿ ಹೋಗುತ್ತಿತ್ತು.

ಆದರೆ ನಿತ್ಯ ಇದೆ ಆದಾಗ… ಸುಜಾತಾಳ ಮನಸ್ಸು ರೋಸಿ ಹೋಗುವ ಜೊತೆಗೆ ತನ್ನ ಜೀವನ ಇಷ್ಟೇ ಅನ್ನೋದು ಅರೆತು ಬಿಟ್ಟಿದ್ದಳು. ಗಂಡ ತಿಂಡಿ ತಿಂದು ಆಫೀಸ್ ಹೋಗ್ತಿದ್ದ ಹಾಗೆ ಮನೆ ಜಾಡಿಸಿ – ಗೂಡಿಸಿ, ತಿಕ್ಕು- ತೊಳೋದು ಮನೆ ಸ್ವಚ್ಛ ಮಾಡುವಷ್ಟರಲ್ಲಿ ಸಮಯ ಕೆಳೆದೆ ಹೋಗುತ್ತಿತ್ತು. ಆಮೇಲೆ ಉಸಿರು ಹಾಕುತ್ತಾ, ಸೋಫಾ ಮೇಲೆ ಕೂತು ಮೊಬೈಲ್ ಲ್ಲಿ ರೀಲ್ಸ್, ಅದು ಇದು ನೋಡಿ ಮನಸ್ಸು ಹಗುರು ಮಾಡಿಕೊಳ್ಳುತ್ತಿದ್ದಳು. ಬೇರೆಯವರ ರೀಲ್ಸ್ ನೋಡಿದಾಗಲೆಲ್ಲ ಆಕೆಗೂ ರೀಲ್ಸ್ ಮಾಡಬೇಕು ಎನ್ನುವ ಆಸಕ್ತಿ ಮೂಡುತ್ತಿತ್ತು,  ಕೊನೆಪಕ್ಷ ತನ್ನ ಸೆಲ್ಫಿ ಫೋಟೋಗಳನ್ನಾದರೂ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳಬೇಕು ಅನ್ನೋ ಆಸೆಯಂತೂ ಇತ್ತು. ಆದರೆ ಮೊಬೈಲ್ ನಲ್ಲಿ ಫೋಟೋ ತಗೆದುಕೊಳ್ಳುವ ಧೈರ್ಯ ಬಂದಿರಲಿಲ್ಲ. ನೆಮ್ಮದಿಯಿಲ್ಲದ ಬದುಕು, ದೇಹವೆಲ್ಲ ಬಾಡಿ ಹೋಗಿ ಆಕೆಯ ದೇಹ ಕೃಶವಾಗಿತ್ತು. ಅದನ್ನು ನೋಡಿ ಟ್ರೊಲ್ ಮಾಡೋರು ಏನಾದ್ರು ಕೆಟ್ಟದಾಗಿ ಕಾಮೆಂಟ್ಸ್ ಹಾಕಿದರೆ ಎನ್ನುವ ಭಯಕ್ಕೆ ಹಿಂಜರಿಯುತ್ತಿದ್ದಳು. ಆದರೆ ಅಂದು ಯಾಕೋ ಸುಜಾತಾಳಿಗೆ  ತನ್ನ ಫೋಟೋ ಕ್ಲಿಕ್ ಮಾಡಲೇಬೇಕು ಅಂತ ನಿರ್ಧಾರ ಮಾಡಿಯೇ ಬಿಟ್ಟಳು. ಮೊಬೈಲ್ ತಗೆದುಕೊಂಡು ಬೇರೆ ಬೇರೆ ಹಾವಭಾವ ಬೀರುತ್ತಾ ಫೋಟೋ ಕ್ಲಿಕ್ಕಿಸಿದಳು. ಫೋಟೋಗಳು ಒಂದಕ್ಕಿಂತ ಒಂದು ಸುಂದರವಾಗಿ ಬಂದವು. ಫೋಟೋ ತೆಗೆದುಕೊಂಡ ಮೇಲೆ ಸುಜಾತ ಅಲ್ಲಿಗೆ ಸುಮ್ಮನಾಗಲಿಲ್ಲ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದಳು. ಅಲ್ಲಿಂದ ಆಕೆಗೆ ಸೋಶಿಯಲ್ ಮೀಡಿಯಾ ಹುಚ್ಚು ಹಿಡಿಯಿತು., ಸ್ನೇಹಿತರ ಅನುಮತಿಗಳು, ದಿನಕ್ಕೊಂದು ಪ್ರಶಂಸೆಗಳು ಬರಲು ಶುರುವಾಯ್ತು. ಅವಳಿಗೆ ಅರಿಯದ ಸೌಂದರ್ಯ ಹತ್ತು ಜನರಿಂದ ಹೊಗಳಿಕೆ ಸಿಕ್ಕಾಗ ಸುಜಾತ ಉಬ್ಬಿ ಹೋದಳು. ಗಂಡನಿಗೆ ಮಾಸಿ ಹೋದ ಆಕೆಯ ಸೌಂದರ್ಯ, ಮತ್ತೆ ಚಿಗರತೊಡಗಿತು.

ಆ ಸಂದರ್ಭದಲ್ಲಿ ಸ್ನೇಹದ ರೂಪದಲ್ಲಿ ಪರಿಚಯವಾದವನೇ ರೂಪೇಶ್.

”ಹಲೋ… ಮೇಡಂ, ನೀವು ನೋಡೋಕೆ ತುಂಬಾ ಸುಂದರವಾಗಿದ್ದೀರಿ”. ಎಂದಾಗ  ಅಜಯ್ ನ ನೆನಪಾಯಿತು, ಎಷ್ಟೋ ಬಾರಿ ಅಜಯ ಮುಂದೆ ಹೊಸ ಸೀರೆಯುಟ್ಟು ನಿಂತ್ರೆ ಹೊಗಳುವುದಿರಲಿ, ತಲೆ ಎತ್ತಿಯೂ ನೋಡಿರಲಿಲ್ಲ. ಆದರೆ ಯಾರೋ ಅಪರಿಚಿತನೊಬ್ಬ ತನ್ನ ಸೌಂದರ್ಯವನ್ನು ಹೊಗಳಿದಾಗ ಸುಜಾತ ನಾಚಿ ಮನಸ್ಸಲ್ಲೇ ಹಿಗ್ಗಿದಳು. ಅದಕ್ಕೆ ಪ್ರತಿಯುತ್ತರವಾಗಿ

”ಓಹ್… (ಜೋರಾಗಿ ನಕ್ಕು) ಥ್ಯಾಂಕ್ಸ್ ರೀ … ನಾನು ಚಂದ ಇಲ್ಲ ರೀ …ಮೊಬೈಲ್ ಮಹಿಮೆ ಅಷ್ಟೇ;… ಅಂದಳು.

ಹೀಗೆ ಶುರುವಾಯಿತು, ಅವರಿಬ್ಬರ ಮಾತು ಕತೆ.

ದಿನ ಬೆಳಗ್ಗೆಯಾದರೆ ಅವನ ಶುಭೋದಯ, ರಾತ್ರಿಯಾದರೆ ಶುಭರಾತ್ರಿ ಬರಲು ಶುರುವಾಯಿತು. ಮಾತಿಗೆ ಮಾತು ಶುರುವಾದ ಮೇಲೆ ತನ್ನ ಬೇಸರ, ಸಂತೋಷ ಅವನೊಂದಿಗೆ ಹಂಚಿಕೊಳ್ಳಲು ಶುರು ಮಾಡಿದಳು. ಅವನು ಕೂಡಾ ಬ್ರಹ್ಮಚಾರಿ ತನ್ನ ಬೇಸರಕ್ಕೆ ಒಂದು ಆಸರೆ ಸಿಕ್ಕಿತೆಂದು ಕೊಂಡ.

ಗಂಡನ ಚುಚ್ಚು ಮಾತು, ಕ್ಷುಲ್ಲಕ ಜಗಳ, ನಿರ್ಲಕ್ಷದಿಂದ ಬೇಸತ್ತ ಮನಸಿಗೆ ರೂಪೇಶ ಮಾತು ಮುದ ನೀಡಿದವು. ರೂಪೇಶ್ ನ ಜೊತೆಗಿನ ನಿತ್ಯ ಮಾತು, ಹರಟೆ, ಅವನ ಕಾಳಜಿ ಮನಸ್ಸಿಗೆ ಹತ್ತಿರವಾಗಲು ಶುರುವಾಯಿತು. ರೂಪೇಶ್ ಸಿಕ್ಕ ಮೇಲೆ ಸುಜಾತಾಳ ಅಲ್ಲೋಲ ಕಲ್ಲೋಲವಾಗಿದ್ದ ಮನಸ್ಸು ಶಾಂತವಾಯಿತು. ಮನೆಯಲ್ಲಿ ಯಾವಾಗಲು ನಗು ನಗುತ್ತಾ ಇರುತ್ತಿದ್ದಳು. ಅಜಯ ಏನೇ ಬೈದ್ರು ಕಿವಿಗೆ ಹಾಕ್ಕೊಳ್ಳದೆ ಖುಷಿಯಾಗಿ ಇರುತ್ತಿದ್ದಳು.  ಅಜಯ್ ಅವಳಲ್ಲಿನ ಬದಲಾವಣೆ ನೋಡಿ ಅಚ್ಚರಿ ಪಟ್ಟಿದ್ದರೂ ಅದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗೆ ಅಜಯನ ನಿರ್ಲಕ್ಷ್ಯ, ಸುಜಾತ ಹಾಗೂ ರೂಪೇಶ್ ನಡುವಿನ ಒಡನಾಟ ಚಾಟಿಂಗ್ ನಿಂದ ಕಾಲ್ ಗೆ ಬಂತು, ಅನಂತರ ವಿಡಿಯೋ ಕಾಲ್ ಗೆ ಬಂದು ನಿಂತಿತ್ತು, ಪರಸ್ಪರ ನೇರವಾಗಿ ಭೇಟಿಯಾಗುವುದೊಂದೇ ಉಳಿದಿತ್ತು. ಅಷ್ಟು ಅವರಲ್ಲಿ ಒಂದು ರೀತಿಯ ಆತ್ಮೀಯತೆ ಬೆಳೆದು ಹೋಯಿತು.

ಸುಜಾತಾಳಿಗೆ ರೂಪೇಶ್ ಮೇಲೆ ಪ್ರೀತಿಯೋ, ಆಕರ್ಷಣೆಯೋ ಗೊತ್ತಿಲ್ಲ. ಸುಜಾತ ಏನೇ ಡ್ರೆಸ್ ಮಾಡಿಕೊಂಡರು ಅದನ್ನು ರೂಪೇಶ್ ನಿಗೆ ತೋರಿಸಬೇಕು ಎನ್ನುವ ಹಾತೊರೆತ ಇರುತ್ತಿತ್ತು, ಅದನ್ನು ನೋಡಿ ರೂಪೇಶ್ ಹೊಗಳಿಕೆಯ ಒಂದೆರಡು ಮಾತು ಹೇಳಿದರೆ ಸುಜಾತ ಸ್ವರ್ಗಕ್ಕೆ ನಾಲ್ಕೇ ಗೇಣು ಎನ್ನುವಂತೆ ಅದನ್ನು ಸಂಭ್ರಮಿಸುತ್ತಿದ್ದಳು. ಆದರೆ ಅವನ ಮಾತು, ಅವನ ನಡವಳಿಕೆ ಅವಳ ಮನಸ್ಸಲ್ಲೇ ಬಿರುಗಾಳಿಯನ್ನೇ ಎಬ್ಬಿಸಿತು.

ದಿನ ಅವನದೇ ಗುಂಗು…ಬೆಳಗ್ಗೆಯಾದರೆ ಅವನ ಮೆಸ್ಸೇಜ್ ಗಾಗಿ ಕಾಯುತ್ತಿದ್ದಳು, ಮನಸ್ಸನ್ನೆಲ್ಲ ರೂಪೇಶ ಆವರಿಸಿಬಿಟ್ಟಿದ್ದ.ಅವಳ ಬಾಳಿನಲ್ಲಿ ಬಂದ ಹೊಂಗಿರಣನಾಗಿದ್ದ. ಅವನ ಮೇಲೆ ಪ್ರೀತಿ ಚಿಗುರೊಡೆದಿತ್ತು. ಅವನಿಗೆ ತನ್ನ ಭಾವನೆಯನ್ನೆಲ್ಲ ಒಮ್ಮೆ ಹೇಳಬೇಕು ಅಂದೆನ್ನಿಸಿತ್ತಾದರೂ ಹೇಗೆ ಹೇಳೋದು, ಹೇಳಿ ಕೇಳಿ ತಾನು ಮದುವೆಯಾದ ಒಂದು ಹೆಣ್ಣು, ಜೊತೆಗೆ ಒಂದು ಹೆಣ್ಣು ಮಗುವಿನ ತಾಯಿ, ಗಂಡ ಇರುವಾಗಲೇ ಇನ್ನೊಬ್ಬನತ್ತ ಆಕರ್ಷಣೆಯಾಗುವುದು ತನ್ನನ್ನು ಈ ಸಮಾಜ ಹೇಗೆಲ್ಲ ನೋಡಬಹುದು, ಅದೆಲ್ಲ ಹೋಗಲಿ… ರೂಪೇಶ್ ಕೂಡ ನನ್ನನ್ನು ಪ್ರೇಮಿಸುತ್ತಿದ್ದಾನಾ ?ಅವನು ನನ್ನ ಪ್ರೀತಿ ಒಪ್ಪುವನೇ ?… ಏನಿರಬಹುದು ಗೊತ್ತಿಲ್ಲ. ಹಾಗಿದ್ದಾಗ ಹೀಗೆಲ್ಲ ಮಾತಾಡಿದರೆ ತಪ್ಪಾಗುತ್ತೆ ,ರೂಪೇಶ್ ಮನಸ್ಸಲ್ಲಿ ಏನಿದೆ ಅನ್ನೋದನ್ನ ಮೊದಲು ತಿಳಿದುಕೊಳ್ಳೋಣ,  ಸಮಯ ನೋಡಿ ತನ್ನ ಭಾವನೆಯನ್ನು ವ್ಯಕ್ತ ಪಡಿಸಿದರಾಯಿತು ಅಂದುಕೊಂಡು ಸುಮ್ಮನಾದಳು.

ಒಂದು ದಿನ ಇದ್ದಕ್ಕಿಂದಂತೆ ರೂಪೇಶ್ ನ ಶುಭೋದಯ ಮೆಸ್ಸೇಜ್ ಇಲ್ಲ, ಮಾತಿಲ್ಲ, ಕತೆಯಿಲ್ಲ, ಎಲ್ಲೋ ಹೋಗಿರಬೇಕು…. ಅಂದುಕೊಂಡು ಸುಜಾತ ಒಂದು ದಿನ ಸುಮ್ಮನಾದಳು. ಎರಡು ದಿನ ಕಳೆಯಿತು, ಹಾಗೆ ವಾರವೇ ಕಳೆಯಿತು. ಇದರಿಂದ ಸುಜಾತ ವಿಚಿಲಿತಳಾದಳು. ಸುಜಾತಾ ಮನಸ್ಸು ಅವನ ಮೆಸ್ಸೇಜ್ ಗಾಗಿ ಚಡಪಡಿಸಿತು. ಮಾಡುವ ಕೆಲಸದಲ್ಲಿ ಆಸಕ್ತಿ ಇರಲಿಲ್ಲ. ಮನಸ್ಸೆಲ್ಲ ರೂಪೇಶ್ ನ ಸುತ್ತ ಇತ್ತು. ಇದ್ದಕ್ಕಿದ್ದಂತೆ ಎಲ್ಲಿ ಹೋದ?… ಏನಾಯಿತು ಅವನಿಗೆ?… ಹುಷಾರು ಇದ್ದಾನೋ, ಇಲ್ವೋ?…ಏನೇನೋ ಹುಚ್ಚು ಯೋಚನೆಗಳು ಹರಿದಾಡಿದವು.

ಆದರೆ ಎರಡು ವಾರ ಆದಮೇಲೆ ರೂಪೇಶ್ ತನ್ನ ಸ್ಟೇಟಸ್ ನಲ್ಲಿ MARRIED ಅಂತ ಹಾಕುವುದಷ್ಟೇ ಅಲ್ಲ, ತನ್ನ ಡಿಪಿಯಲ್ಲಿ ಹೆಂಡತಿಗೆ ಚುಂಬಿಸುವ ಫೋಟೋ ಕೂಡಾ ಹಾಕಿದ. ಅದನ್ನು ನೋಡಿದ ಸುಜಾತಾಳಿಗೆ ಬರ ಸಿಡಿಲು ಹೊಡೆದಂತೆ ಆಯಿತು. ರೂಪೇಶ್ ತಾನು ಮದುವೆ ಆಗೋದು ಯಾಕೆ ಮುಚ್ಚಿಟ್ಟ, ಇಷ್ಟು ದಿನ ನನ್ನೊಂದಿಗೆ ಮಾತಾಡಿದ್ದು, ಕಾಳಜಿ ತೋರಿಸಿದ್ದು ಬರಿ ಸುಳ್ಳಾ?. ತನ್ನ ಟೈಮ್ ಪಾಸ್ ಮಾತುಗಳಿಗೆ ನಾನೆ ಬೇಕಿತ್ತಾ ?…ನಾನು ಎಂಥ ಹುಚ್ಚಿದ್ದೀನಿ, ಮದುವೆ ಆದವಳನ್ನ ಯಾರಾದರೂ ಬ್ಯಾಚುಲರ್ ಹುಡುಗ ಇಷ್ಟ ಪಡ್ತಾನಾ?… ಯಾಕೆ ನನ್ನ ಹೃದಯಕ್ಕೆ ಅರ್ಥವಾಗಲಿಲ್ಲ, ಎಂತ ದಡ್ಡಿ ಇದ್ದೀನಿ ಅಂತ ತನ್ನನ್ನು ತಾನು ದ್ವೇಷಿಸಲು ಶುರುಮಾಡಿದಳು.

ರೂಪೇಶ್ ನ ಬಣ್ಣ ಬಣ್ಣದ ಮಾತಿನಿಂದ ಸುಜಾತ ಮಾರು ಹೋಗಿದ್ದಳು. ಗಂಡ ಅಜಯ್ ಮನಸ್ಸಲ್ಲಿ ಏನು ಇಟ್ಟುಕೊಳ್ಳದೆ ನೇರವಾಗಿ ಬೈಯುತ್ತಿದ್ದ. ಆದರೆ ರೂಪೇಶ್ ಮನಸ್ಸಲ್ಲಿ ಒಂದು, ಹೊರಗೆ ಒಂದು ಮಾತುಗಳನ್ನಾಡುತ್ತಾ ಸುಜಾತಾಳ ಭಾವನೆಗಳ ಜೊತೆ ಚಲ್ಲಾಟವಾಡಿದ್ದ. ಮುಗ್ದೆ ಸುಜಾತಾಗೆ ಇದೆಲ್ಲ ಅರ್ಥವಾದಾಗ ಮಂಕಾಗಿ ಹೋದಳು. ಸ್ವಾರ್ಥ ಪ್ರಪಂಚದ ಮಧ್ಯೆ ಯಾರೊಂದಿಗೂ ಮಾತಾಡುವುದು ಆಕೆಗೆ ಬೇಡವಾಯಿತು ಕೋಣೆಯ ಒಂದು ಮೂಲೆಯಲ್ಲಿ ದಿನವಿಡಿ ಕೂಡುತ್ತಿದ್ದಳು. ರೂಪೇಶ್ ತನ್ನ ಹೊಸ ದಾಂಪತ್ಯದ ಬದುಕಿನಲ್ಲಿ ಸುಜಾತ ಮರೆಯಾಗಿ ಹೋಗಿದ್ದಳು. ಸುಜಾತ ಎರಡು ಗಂಡುಗಳ ಮಧ್ಯೆ ಡಿಪ್ರೆಶನ್ ಅನ್ನೋ ಕಾಯಿಲೆಗೆ ತುತ್ತಾಗಿ ತತ್ತರಿಸಿ ಹೋದಳು.

ಎಚ್ಚರಿಕೆ :

  • ಸಾಮಾಜಿಕ ಜಾಲತಾಣದ ಬಗ್ಗೆ ಹೆಣ್ಣುಮಕ್ಕಳು ಸರಿಯಾಗಿ ಅರ್ಥಮಾಡಿಕೊಂಡು, ವಾಸ್ತವದಲ್ಲಿ ಬದುಕಬೇಕು, ಭ್ರಮೆಯಲ್ಲಿ ಬದುಕಿದರೆ ಸುಜಾತಾಳ ಕತೆ ನಿಮ್ಮದು ಆಗಬಹುದು.
  • ಸ್ನೇಹದ ಹೆಸರಲ್ಲಿ ಯಾರು ಬೇಕಾದರೂ  ಮೋಸ ಮಾಡಬಹುದು. ಭಾವುಕ ಜೀವಿಗಳ ಬದುಕು ಹಾಳಾಗಬಹುದು.
  • ಬಹುತೇಕ ಗೃಹಿಣಿಯರು ಗಂಡನ ಪ್ರೀತಿಗೆ ಹಾತೊರೆಯುತ್ತಿರುತ್ತಾರೆ,ಅದನ್ನು ಅರ್ಥಮಾಡಿಕೊಂಡು ಗಂಡ ಹೆಂಡತಿಗಾಗಿ ತಮ್ಮ ನಿರ್ದಿಷ್ಟ ಸಮಯವನ್ನು ಮೀಸಲಿಟ್ಟರೆ ಒಳ್ಳೇದು.
  • ಯಾರನ್ನೋ ನಂಬಿ ನಿಮ್ಮ ಸಂಸಾರವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ.

  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW