ಅಬ್ದುಲ್ ರಶೀದ್ ಅವರ ‘ಲಾರ್ಡ್ ಕಾರ್ನವಾಲೀಸ್ ಮತ್ತು ಕ್ವೀನ್ ಎಲಿಜಬೆತ್ ಕತೆಗಳು’ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಲಾರ್ಡ್ ಕಾರ್ನವಾಲೀಸ್ ಮತ್ತು ಕ್ವೀನ್ ಎಲಿಜಬೆತ್ ಕತೆಗಳು
ಲೇಖಕರು : ಅಬ್ದುಲ್ ರಶೀದ್
ಪ್ರಕಾಶಕರು : ಬಹುವಚನ ಪ್ರಕಾಶನ
ಬೆಲೆ : 135.00
ಪುಟ : 84
ಖರೀದಿಸಲು : 6362588659
ರೂಪಾಂತರಗಳ ಸಂಕರ ಸಂಸ್ಕೃತಿಗಳ ಕಥನ: ಅವರ ಶೀರ್ಷಿಕೆಯ ಕಥೆ ಇದಕ್ಕೆ ನಿದರ್ಶನ. ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್ ಕತೆಯ ಶೀರ್ಷಿಕೆಯಲ್ಲಿ ಬರುವ ಹೆಸರುಗಳು ಅವರ ನಿಜ ಹೆಸರುಗಳಲ್ಲ. ಅವು ಅವರಿಗೆ ವಿದ್ಯಾರ್ಥಿಗಳು ಕೊಟ್ಟ ಅಡ್ಡಹೆಸರುಗಳು. ಅದರ ಪರಿಣಾಮವಾಗಿ ಹೂವಯ್ಯ ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿ ಲಾರ್ಡ್ ಕಾರ್ನವಾಲಿಸ್ ಆಗಿ ಶಿಕ್ಷಣಾಧಿಕಾರಿಯಾಗಿ ರೂಪಾಂತರ ಹೊಂದಿದ್ದರೆ, ಕಾನ್ವೆಂಟ್ ಶಿಕ್ಷಕಿ ಎಲಿಜಬೆತ್ ಇಲ್ಲಿ ಇಂಗ್ಲೆಂಡ್ ರಾಣಿ ಕ್ವೀನ್ ಎಲಿಜಬೆತ್ ಆಗಿ ರೂಪಾಂತರಗೊಂಡಿದ್ದಾರೆ. ಅಲ್ಲಿ ಸಿಸ್ಟರ್ ಆಗಿದ್ದ ಆಕೆ ಕಾರ್ನವಾಲೀಸನ ಪ್ರೇಮದಲ್ಲಿ ಸಿಲುಕಿ ಅದರಿಂದ ಹೊರಗಡೆ ಬಂದಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ನಿಂತವರು ಅವರ ವಿದ್ಯಾರ್ಥಿಗಳು, ಇದನ್ನು ಬಯಲು ಮಾಡಿದಾಗ , ಕಾರ್ನವಾಲೀಸ್ ಗೆ ಹಿಂಬಡ್ತಿ ಆದರೆ, ಎಲಿಜಬೆತ್ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಮರಳಬೇಕಾಗುತ್ತದೆ. ಆಕೆ ಇದಕ್ಕೆ ಕಾರಣರಾದ ವಿದ್ಯಾರ್ಥಿಗಳ ಮೇಲೆ ಯಾವ ಕ್ರಮವನ್ನು ಕೈಗೊಳ್ಳುವುದಿಲ್ಲ.ಅವರು ಕತೆಯ ಮೊದಲಿಗೆ ಉಲ್ಲೇಖ ಮಾಡಿರುವ ಬ್ಲೇಕ್ ಪದ್ಯವನ್ನು ಅವರಿಗೆ ಕಲಿಸುತ್ತಾ ‘”ಅರಳುವ ಮಲ್ಲಿಗೆ ಪರಿಮಳ ಬೀರುತ್ತದೆ ಹೊರತು ಯಾರಿಗೂ ಅಹಿತವನ್ನು ಉಂಟು ಮಾಡುವುದಿಲ್ಲ” ಎಂದು ವ್ಯಾಖ್ಯಾನ ಮಾಡಿದಂತೆ ಬದುಕುತ್ತಾರೆ. ಆದರೆ ಇದು ಅವರ ನಡುವಿನ ಪ್ರೇಮಕ್ಕೆ ಧಕ್ಕೆ ತರದೆ ಅವರಿಬ್ಬರೂ ಒಂದಾಗುತ್ತಾರೆ.
ಇದಕ್ಕೆ ಸಮಾನಾಂತರವಾಗಿ ಘಟಿಸಿದ ಇನ್ನೊಂದು ಪ್ರೇಮ ಪ್ರಕರಣವೆಂದರೆ ನಿರೂಪಕ ಮತ್ತು ಶಾಲೆಯ ವಾರ್ಷಿಕೋತ್ಸವದಲ್ಲಿ ನರ್ತಿಸಲು ಬರುವ ಕೃಷ್ಣಕುಮಾರಿಯರದು. ಅವರು ಕೂಡ ಜಗಳವಾಡುತ್ತಲೆ ಪ್ರೀತಿಯ ಮೂಲಕ ಒಂದಾಗುತ್ತಾರೆ. ಹೀಗಾಗಿ ಇದು ಏಕಕಾಲಕ್ಕೆ ರೂಪಾಂತರ ಹಾಗೂ ಸಂಕರ ಸಂಸ್ಕೃತಿಗಳ ಕಥನವಾಗಿದೆ.ನಿರೂಪಕ ತನ್ನನ್ನು ಹೆಣ್ಣುತನದೊಂದಿಗೆ ಗುರುತಿಸಿಕೊಂಡು ಗಂಡಾಳ್ವಿಕೆಯನ್ನು ನಿರಾಕರಿಸುತ್ತಾನೆ .ಅವರು ಏಕಕಾಲಕ್ಕೆ ನಡುವೆ ಸುಳಿವ ಆತ್ಮಗಂಡೂ ಅಲ್ಲ ಹೆಣ್ಣೂ ಅಲ್ಲವಾಗಿ ಲಿಂಗ ರಾಜಕಾರಣವನ್ನು ನಿರಾಕರಿಸುತ್ತಾರೆ . ಇದು ಸ್ವಾತಂತ್ರ್ಯೋತ್ತರ ಭಾರತದ ಪಲ್ಲಟಗಳಿಗೆ ಕನ್ನಡಿ ಹಿಡಿಯುತ್ತದೆ.
ಅವರ ಭೂತ ವರ್ತಮಾನಗಳ ನಡುವೆ ಉಯ್ಯಾಲೆ ಆಡುವ ಸಮಾನಾಂತರ ಸಂಬಂಧಗಳ ಅನ್ವೇಷಣೆ ಇವರ . ‘ಕಲಗಚ್ಚು’ ಕತೆಯ ವಸ್ತು.ಕಥಾನಾಯಕ ಮತ್ತು ನಾಯಕಿಯರ ನಡುವಿನ ಸಂಬಂಧ ಇದಕ್ಕೆ ಒಂದು ನಿದರ್ಶನ. ಹದಿಹರೆಯದಲ್ಲಿ ಪ್ರಾರಂಭವಾದ ಈ ಸಂಬಂಧ ನಡುವಯಸ್ಸಿನವರೆಗೂ, ಮುಂದುವರಿದರೂ ಪರಸ್ಪರ ಸೇರದೆ ಹೋಗಲು ಕಾರಣ ಈ ಸಮಾನಾಂತರತೆಯೆ. ಇದು ಒಂದು ಭಾಷಾ ಸಂಕರತೆಗೆ ಕೂಡ ನಿದರ್ಶನ. ಅವನು ಅವಳನ್ನು ತುಳುವಿನಲ್ಲಿ ಕುರೆ( ಮಂಗ) ಎಂದು ಕರೆದರೆ, ಅವಳು ಅವನನ್ನು ‘ಮಂಗ ‘ಎಂದು ಕನ್ನಡದಲ್ಲಿ ಕರೆಯುತ್ತಾಳೆ. ಇದು ಅವರ ನಡುವಿನ ಆಪ್ತತೆಯ ದ್ಯೋತಕವಾಗಿದೆ .ಕೊನೆಯವರೆಗೆ ಅವರ ಈ ಆತ್ಮೀಯ ಸಂಬಂಧ ಉಳಿದು ಬೆಳೆದು ಬರುತ್ತದೆ. ಅವರ ನಡುವಿನ ಅಂತಸ್ತಿನ ಅಂತರ ಕೂಡ ಅದಕ್ಕೆ ಧಕ್ಕೆ ತರುವುದಿಲ್ಲ.- ಅದು ವಿವಾಹದಲ್ಲಿ ಪರ್ಯವಸಾನಗೊಳ್ಳದಿದ್ದರೂ.
ಕಾರಂತರ ಅಳಿದ ಮೇಲೆ ಮತ್ತು ಹ್ಯಾಮ್ಲೆಟ್ ನಾಟಕದ ವಸ್ತು ಹೊಂದಿದ ಒಂದು ಕಥೆ ಇಲ್ಲಿದೆ( ರಕ್ತ ಚಂದನ). ಇಲ್ಲಿನ ಕಥಾನಾಯಕ ತನ್ನ ನಿಜ ಹೆಸರನ್ನು ಬಿಟ್ಟು ‘ಚಾರುದತ್ತ’ ಎಂಬ ಸಂಸ್ಕೃತ ನಾಟಕದ ನಾಯಕನ ಹೆಸರನ್ನು ಇಟ್ಟುಕೊಳ್ಳುತ್ತಾನೆ. ಇದರ ವೈಶಿಷ್ಟ್ಯವೆಂದರೆ ಅದರ ಬಹುಮುಖಿ ಕಥನ. ಕಥಾನಾಯಕ ಅಳಿದ ನಂತರ ಅವನ ಕತೆ ಹೇಳಲು ನಡೆವ ಪೈಪೋಟಿ. ವಿಲಾಸಿನಿ ಒಂದು ಕತೆ ಬರೆದರೆ, ಕಥಾನಾಯಕನ ನಂಬಿಕೆಯ ನಿರೂಪಕ ಇನ್ನೊಂದು ಕತೆ ಹೇಳುತ್ತಾರೆ. ಕಥಾನಾಯಕನೆ ನಿರೂಪಕನನ್ನು ಅವಳ ವಿರುದ್ಧ ಛೂ ಬಿಡುತ್ತಾನೆ ಕನಸಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡು ಎಚ್ಚರಿಕೆ ನೀಡುವ ಮೂಲಕ. ಸತ್ಯಕ್ಕೆ ಒಂದು ಮುಖ ಮಾತ್ರ ಇರುವುದಿಲ್ಲ. ಅದಕ್ಕೆ ಇರುವ ನಾನಾ ಮುಖಗಳ ಅನಾವರಣದ ಮಾಡುವ ಮೂಲಕ ಇದು ಬಹುತ್ವವನ್ನು ಪಡೆದುಕೊಳ್ಳುತ್ತದೆ. ಅಲ್ಲದೆ ಭೂತ ವರ್ತಮಾನದಲ್ಲಿ ಕ್ರಿಯಾಶೀಲವಾಗುವ ಬಗೆಯನ್ನು ನಿರ್ದೇಶಿಸುತ್ತದೆ.
ಲಾರ್ಡ್ ಕಾರ್ನವಾಲೀಸ್ ಮತ್ತು ಕ್ವೀನ್ ಎಲಿಜಬೆತ್ ಕತೆಗಳು ಲೇಖಕ ಅಬ್ದುಲ್ ರಶೀದ್
‘ಜಲಪುಷ್ಪ’ ಎನ್ನುವ ಕತೆ ಧರ್ಮ ಸಂಕರದ ನಡುವೆ ಆಹಾರ ಸಂಹಿತೆಯೊಂದು ಅಡ್ಡಬರುವುದಕ್ಕೆ ನಿದರ್ಶನ ಇಲ್ಲಿ ಬರುವ ಮೀನು ತಿನ್ನುವ ಸಾಬಿ ಹುಡುಗ ಮೊಯಿದು.( ಮೊದ್ದು) ಮತ್ತು ತರಕಾರಿ ತಿನ್ನುವ ಬ್ರಾಹ್ಮಣ ಹುಡುಗಿ ಪರಸ್ಪರ ಒಲಿದರೂ, ಮೀನು ತಿನ್ನುವ ಮೂಲಭೂತ ತನ್ನ ಪ್ರವೃತ್ತಿಯನ್ನು ಬಿಡಲಾರದ ನಾಯಕ, ತನಗು ಅವಳಿಗೂ ಇದು ಆಗಿ ಬರುವ ಸಂಬಂಧವಲ್ಲ ಎಂದು ನಿರ್ಧರಿಸಿ ಹಿಂದೆ ಸರಿಯುತ್ತಾನೆ. ಪರಸ್ಪರರು ತಮ್ಮ ತಮ್ಮ ಮಿತಿಯನ್ನು ಮೀರಲಾರದ, ಪರಸ್ಪರ ಒಂದಾಗಲಾರದ ಅವರ ಅಸಹಾಯಕತೆ ಕೊನೆಯಲ್ಲಿ ವಿಷಾದ ಭಾವಕ್ಕೆ ಇಬ್ಬರನ್ನೂ ದೂಡುತ್ತದೆ.
ಪು.ತಿ.ನ.ಅವರ ‘ ಒಡೆದ ಹಡಗುಗಳಂತೆ ಮೈ ಮನ ಅದರ ತಡಿಯೊಲು ಬಿದ್ದಿದೆ” ಎಂಬ ಸಾಲುಗಳಿಗೆ ನಿದರ್ಶನವಾದ ಮೋಹಕ ದ್ವೀಪದ ಮೂಗಿನ ತುದಿ ಕತೆ ಇಲ್ಲಿ ಇದೆ. ದ್ವೀಪದಲ್ಲಿ ಹಡಗು ಕೆಟ್ಟು ನಿಂತಾಗ, ತಾನು ಮದುವೆಯಾದ ಹೆಣ್ಣನ್ನು ಕೂಡಲೆಂದು ಬಂದ ಕಥಾನಾಯಕ , ಅವನ ಮೇಲೆ ಆಪಾದನೆ ಬಂದು, ತನ್ನ ತಾನೇ ಕೊಂದು ಕೊಳ್ಳುತ್ತಾನೆ. ಮೊದಲ ಗಂಡ ಸತ್ತ ಆರು ತಿಂಗಳ ನಂತರ ಮದುವೆ ಆದ ಹೆಣ್ಣು ,ಈ ಗಂಡನನ್ನು ಕಳೆದುಕೊಂಡು ಮತ್ತೆ ಆರು ತಿಂಗಳು ಕಾದರೂ ಯಾವ ಗಂಡೂ ಬರದಿದ್ದಾಗ, ಈಟಿಯ ಮೂಲಕ ಸಮುದ್ರದ ಆಕ್ಟೋಪಸ್ ಗಳನ್ನು ಕೊಂದು ಅಡುಗೆ ಮಾಡಿ ಉಣಿಸುವ ಮೂಲಕ ತನ್ನ ಬದುಕನ್ನು ಕಟ್ಟಿ ಕೊಳ್ಳುವ ಛಲಗಾತಿಯಾಗುತ್ತಾಳೆ. ಆ ದಿಟ್ಟ ಕಥಾನಾಯಕಿ ಜುಬೇದಾ. ಅಲ್ಲಿಗೆ ಕೆಲಸದ ಮೇಲೆ ಬಂದ ನಿರೂಪಕ ಮತ್ತು ಅವಳು ಇಬ್ಬರೂ ತುಳುನಾಡಿನವರಾದ ಕಾರಣ ಪರಸ್ಪರ ಹತ್ತಿರವಾಗುತ್ತಾರೆ.
ಅವಳು ಅವನಿಗೆ ಮರ್ಲು (ಹುಚ್ಚು) ಎಂದು ತುಳುವಿನಲ್ಲಿ ಕರೆದು, ಅಲ್ಲಿನ ಸಮಾನ ಆಹಾರ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾರೆ. ಹೀಗೆ ಅಬ್ದುಲ್ ರಶೀದ್ ಅವರ ಈ ಕಥಾಸಂಕಲನ ತನ್ನ ಧರ್ಮ, ಭಾಷೆ, ಸಂಸ್ಕೃತಿ, ಲಿಂಗ,ಸಂಕರ ಮತ್ತು ರೂಪಾಂತರ ಕ್ರಿಯೆಗಳ ಮೂಲಕ, ಬಹುತ್ವವನ್ನು ಜೀವನಾಡಿಯಾಗಿ ಹೊಂದಿರುವ ಇದು, ಪ್ರಸ್ತುತ ಕನ್ನಡ ಕಥಾಸಾಹಿತ್ಯದಲ್ಲಿ ವಿಶಿಷ್ಠವಾದ ಸ್ಥಾನ ಪಡೆದಿದೆ. ಮೂರು ದಶಕಗಳ ಹಿಂದೆ ಅವರ ‘ ಹಾಲು ಕುಡಿದ ಹುಡುಗ’ ಕಥಾಸಂಕಲನ ಓದಿ ಚಕಿತನಾಗಿದ್ದ ನನಗೆ, ಮತ್ತೊಮ್ಮೆ ಅವರು ಮೇಲಿನ ಕಥಾಸಂಕಲನವನ್ನು, ಕೈಯಾರೆ ಒದಗಿಸಿ ಕೊಡುವ ಮೂಲಕ ಮತ್ತಷ್ಟು ವಿಸ್ಮಯಕ್ಕೆ ಮತ್ತು ಸಂತೋಷಕ್ಕೆ ಕಾರಣರಾದ ಲೇಖಕರಿಗೆ ವಂದನೆ, ಅಭಿನಂದನೆ…
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು