‘ತಾಯ್ನಾಡಿನ ಕೀರ್ತಿ ಎತ್ತಿ ಹಿಡಿವಂತೆ, ಪ್ರತಿಯೊಬ್ಬರ ಉಸಿರಾಗಬೇಕಿದೆ ಕನ್ನಡ’….ಮಧುರಾ ಮೂರ್ತಿ ಅವರ ‘ಹೆಮ್ಮೆಯ ಕನ್ನಡ’ ಕವನವನ್ನು ತಪ್ಪದೆ ಓದಿ…
ಮೊಳಗಬೇಕಿದೆ ಎಲ್ಲರೆದೆಯಲಿ
ಚೆಲುವ ನಾಡಿನ ಕನ್ನಡ ನುಡಿಯು
ಮನ್ನಣೆಯ ಪಡೆದು ಜಗದಲಿ
ನೆತ್ತರಲಿ ಬೆರೆಯಬೇಕಿದೆ ಕನ್ನಡ
ಅಜ್ಞಾನದ ಮೋಡ ಕಳೆಯುತ
ಸಂಸ್ಕಾರ ಸಂಸ್ಕೃತಿ ಉಳಿಸುತ
ಆದರ್ಶದಿ ಬಾಳಿದ ಮಹಾತ್ಮರ
ಕೊಡುಗೆಯ ಬೆಳೆಸಬೇಕಿದೆ ಕನ್ನಡ
ಪರದೇಶ ಭಾಷೆಗೆ ಮಾರು ಹೋಗದೆ
ಪಂಪ ರನ್ನರ ಆಶಯವರಿತು
ಹರಿಹರ ರಾಘವಾಂಕರ ನೆನೆಯುತ
ಅರಿತು ಮೆರೆಯಬೇಕಿದೆ ಕನ್ನಡ
ಒಡಲೊಳಗಿನ ಕಿಚ್ಚನು ಮರೆಸುತ
ಎದೆಎದೆಯಲಿ ಪ್ರೀತಿಯ ಬಿತ್ತುತ
ಮನೆಮನೆಗಳಲ್ಲಿ ಅಚ್ಚಳಿಯದಂತೆ
ಬಾಂಧವ್ಯ ಬೆಸೆಯಬೇಕಿದೆ ಕನ್ನಡ
ಕಲ್ಲು ಹೃದಯದಲೂ ಭಾವ ಬಿತ್ತುತ
ಹೃದಯದ ಮಿಡಿತದಲಿ ಒಂದಾಗುತ
ತಾಯ್ನಾಡಿನ ಕೀರ್ತಿ ಎತ್ತಿ ಹಿಡಿವಂತೆ
ಪ್ರತಿಯೊಬ್ಬರ ಉಸಿರಾಗಬೇಕಿದೆ ಕನ್ನಡ
- ಮಧುರಾ ಮೂರ್ತಿ