ಡಾ. ಬೆಸಗರಹಳ್ಳಿ ರಾಮಣ್ಣನವರ ಇನ್ನೊಂದು ರೂಪದಂತಿರುವ ನನ್ನ ಮೆಚ್ಚಿನ ಸಾಹಿತಿ ಕೇಶವರೆಡ್ಡಿ ಹಂದ್ರಾಳ ಅವರ ಪುಸ್ತಕಗಳ ಓದಿನಿಂದ ನನ್ನ ಬರವಣಿಗೆಯ ನಡೆ ರೂಪಿಸಿಕೊಂಡವನು ನಾನು. ಇವತ್ತು ನನ್ನ ಮೆಚ್ಚಿನ ಕಥೆಗಾರ – ಕರುಣಾಮೈತ್ರಿಗಳ ಮಾನವ ರೂಪವಾದ ಕೇಶವರೆಡ್ಡಿ ಹಂದ್ರಾಳ ಅವರು ಹುಟ್ಟಿದ ದಿನ.- ಡಾ. ವಡ್ಡಗೆರೆ ನಾಗರಾಜಯ್ಯ ಅವರ ಶುಭಾಶಯ ಲೇಖನವನ್ನು ತಪ್ಪದೆ ಮುಂದೆ ಓದಿ..
ತುಮಕೂರು ಜಿಲ್ಲಾ ಶಾಸನ ಸಂಪುಟ – 12 ರಲ್ಲಿ ದಾಖಲಾಗಿರುವ ಹಂದ್ರಾಳ ಶಾಸನವು, ವಿಜಯನಗರ ಸಾಮ್ರಾಜ್ಯದ ಅರಸನಾದ ಕೃಷ್ಣದೇವರಾಯನ ಬಗ್ಗೆ ತಿಳಿಸುತ್ತದೆ. ಇಲ್ಲಿನ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಮೂರು ಪುರಾತನ ಶಿಲಾ ಶಾಸನಗಳಿದ್ದು, ಒಂದು ಶಾಸನವು ಕೃಷ್ಣದೇವರಾಯನಿಂದ ನಾಯಕತನಕ್ಕಾಗಿ ನೇಮಕಗೊಂಡಿದ್ದ ಯಲ್ಲಪ್ಪನಾಯಕನು, ತಿರುಮಲ ದೇವರ ಕೈಂಕರ್ಯಗಳನ್ನು ಕೈಗೊಳ್ಳಲು ದತ್ತಿಮಾನ್ಯಗಳನ್ನು ನೀಡಿದ ದಾನ ಶಾಸನವಾಗಿರುತ್ತದೆ.
ಕ್ರಿ.ಶ 1511 ಫೆ.11 ಶುಕ್ರವಾರದಂದು ಕೃಷ್ಣದೇವರಾಯನಿಗೆ ಪುಣ್ಯವಾಗಲೆಂದು ಅವನ ಅಧೀನ ನಾಯಕನಾದ ಯಲ್ಲಪ್ಪನಾಯಕನು, ಕೃಷ್ಣದೇವರಾಯನು ನಾಯಕತನ ನೀಡಿ ಪಾಲಿಸಿದ ರಾಮನಾಯಕನ ಹಳ್ಳಿಯ ಸೀಮೆಗೆ ಸಲ್ಲುವ ಹಂದ್ರಾಳ ಗ್ರಾಮವನ್ನು ತಿರುಮಲ ದೇವರ ಅಂಗರಂಗ ವೈಭೋಗಕ್ಕಾಗಿ ಧಾರೆ ಎರೆದಿರುವ ದತ್ತಿಮಾನ್ಯಗಳ ವಿವರಗಳನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಕೃಷ್ಣದೇವರಾಯನ ಕಾಲದ ನಾಯಕತನಗಳು (1509 – 1529) ಕುರಿತು ಅಭ್ಯಾಸ ಮಾಡುವವರಿಗೆ ಈ ಶಾಸನವು ಒಂದು ಉತ್ತಮ ಆಕರವಾಗಿರುತ್ತದೆ. ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಾಣಗೊಂಡ ಅನೇಕ ದೇವಾಲಯಗಳಿಗೆ ಮತ್ತು ಆತನ ಆಶ್ರಿತ ಬ್ರಾಹ್ಮಣ ಪುರೋಹಿತರು ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಹಾಗೂ ಜೀವನ ಪೊರೆಯಲು ಅನುಕೂಲ ಮಾಡಿಕೊಡಲು ಹಾಗೂ ತಾನು ಪಾಲಿಸಿದ ಪ್ರದೇಶಗಳಲ್ಲಿ ನಾಯಕತನದ ಸೇವೆಗಾಗಿ ಭೂ ಉಂಬಳಿಗಳನ್ನೂ ದತ್ತಿಮಾನ್ಯಗಳನ್ನೂ ನೀಡಿರುತ್ತಾನೆ. ಇಂತಹದ್ದೇ ಶಾಸನಗಳ ಸಾಲಿಗೆ ಹಂದ್ರಾಳ ಶಾಸನವೂ ಸೇರಿದೆ.
(ನೋಡಿರಿ : ಎ.ಕ.ಸಂ.12, ಬಿ.ಎಲ್.ರೈಸ್ ಆವೃತ್ತಿ, ಶಾಸನ ಸಂಖ್ಯೆ: 12, ಮಧುಗಿರಿ, ಪುಟ- 326) ಅಂದ್ಹಾಗೆ, ಹಂದ್ರಾಳ ಎಂಬ ಹೆಸರು ಮೊದಲಿಗೆ ನನ್ನ ಕಿವಿಗಳ ಮೇಲೆ ಬಿದ್ದಾಗ ನಾನು ಮೂರನೇ ಅಥವಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದೆ. ಮಹಾರಾಷ್ಟ್ರದ ಪಂಡರಾಪುರದ ಪಾಂಡುರಂಗನ ಸೇವೆಗೆಂದು ಹಂದ್ರಾಳ ಗ್ರಾಮದಿಂದ ಬಂದಿದ್ದ ಪಂಡರಿ ಭಜನೆಯ ಭಕ್ತರ ಗುಂಪೊಂದು ಎರಡು ದಿನ ವಡ್ಡಗೆರೆ ಆಂಜನೇಯನ ಗುಡಿಯ ಪೌಳಿಯಲ್ಲಿ ವಸ್ತಿ ಮಾಡಿತ್ತು. ಕೆಂಪು ಮತ್ತು ಬಿಳಿ ಅಂಚಿನ ಅಂಗಿ- ಕಚ್ಚೆಗಳ ಯೂನಿಫಾರಂ ಧರಿಸಿ ಕೋಲಾಟ ನೃತ್ಯ ಮಾಡುತ್ತಲೂ… ನೆತ್ತಿಗಳ ಮೇಲೆ ಕಂಚಿನ ಚೆಂಬುಗಳ ತಿರುಪಣಿ ಪ್ರದರ್ಶನ ಮಾಡುತ್ತಲೂ ಪಾಂಡುರಂಗನ ಸೇವೆಗೆಂದು ಕುಳ ಮೇರೆಗೆ ಪ್ರತಿ ಮನೆಗಳಿಂದ ಕೈಲಾದಮಟ್ಟಿಗೆ ದುಡ್ಡುದುಗ್ಗಾಣಿ ದವಸಧಾನ್ಯ ಪಡಿಪದಾರ್ಥಗಳನ್ನು ಎತ್ತುವಳಿ ಮಾಡುತ್ತಿದ್ದರು. ಆಗ ನನ್ನ ಅಪ್ಪನೂ ಪಾವಲಿ ಕಾಸು ಕೊಟ್ಟು ಪಂಡರಿ ಭಕ್ತರ ಗುಂಪಿನ ಮುಖಂಡನ ಪಾದಗಳಿಗೆ ಅಡ್ಡಬಿದ್ದು, ನನ್ನನ್ನೂ ಅವರ ಪಾದಗಳ ಮೇಲೆ ಕೆಡವಿದ್ದ.

ಮಧುಗಿರಿ ತಾಲ್ಲೂಕಿಗೆ ಸೇರಿದ ಹಂದ್ರಾಳ ಗ್ರಾಮವು ಮಧುಗಿರಿಗಿಂತಲೂ ಕೊರಟಗೆರೆ ತಾಲ್ಲೂಕಿನಲ್ಲಿರುವ ನನ್ನೂರು ವಡ್ಡಗೆರೆ ಗ್ರಾಮಕ್ಕೆ ಹತ್ತಿರದಲ್ಲಿದೆ. ಧಾರ್ಮಿಕ ಭಾವಿಕರಿಗೆ ಸೋಮವಾರ ನಮ್ಮೂರ ಗ್ರಾಮ ದೇವತೆ ವಡ್ಡಗೆರೆ ನಾಗಮ್ಮನ ಪವಿತ್ರ ವಾರದ ದಿನ. ನಾನು ಕುಕ್ಕಿದ ಬಟ್ಟೆ ಮತ್ತು ಮೈಗೆ ಸ್ನಾನ ಕಾಣುತ್ತಿದ್ದದ್ದು ಇದೇ ವಾರದ ದಿನ. ನಮಗೆ ವಾರದ ದಿನದಂದು ಅನ್ನ ಮತ್ತು ಬೆಲ್ಲದ ಪಾಯಸ ಕಾಣುವ ಯೇಗ ಬರುತ್ತಿತ್ತು. ಪ್ರತಿ ಸೋಮವಾರ ನಮ್ಮ ತಾಲ್ಲೂಕು ಕೇಂದ್ರವಾದ ಕೊರಟಗೆರೆಯಲ್ಲಿ ವಾರದ ಸಂತೆ ನಡೆಯುವ ದಿನ. ವಾರದ ಸಂತೆಯಲ್ಲಿ ಸುತ್ತಲ ಹತ್ತಾರು ಮೈಲಿಗಳ ವ್ಯಾಪ್ತಿಯ ಹಳ್ಳಿಗಳ ರೈತಾಪಿಗಳು ಕೂಲಿಕಾರ್ಮಿಕರು ವ್ಯಾಪಾರಿಗಳು ಅಣಿನೆರೆದು ನಿತ್ಯೋಪಯೋಗಿ ವಸ್ತುಗಳ ವ್ಯಾಪಾರ ಸಾಪಾರ ಮಾಡಿಕೊಳ್ಳುತ್ತಿದ್ದರು. ವಾರದ ದಿನ ಸೋಮವಾರ ಯಾವತ್ತು ಬರುವುದೋ ಎಂದು ದಿನಗಳನ್ನು ಲೆಕ್ಕ ಹಾಕುತ್ತಾ ನಾನು ಮತ್ತು ನನ್ನ ವಾರಿಗೆಯ ಐದಾರು ಗೆಳೆಯರು ಹಂದ್ರಾಳದ ಬೆಲ್ಲದ ಗಾಡಿಗಾಗಿ ಎದುರು ನೋಡುತ್ತಾ ದಾರಿ ಕಾಯುತ್ತಿರುತ್ತಿದ್ದೆವು. ಹಂದ್ರಾಳದಿಂದ ನಮ್ಮೂರು ಮಾರ್ಗವಾಗಿ ಕೊರಟಗೆರೆ ಸಂತೆಯ ವ್ಯಾಪಾರಕ್ಕೆಂದು ಬೆಲ್ಲದ ಮೂಟೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಎತ್ತಿನ ಗಾಡಿಯೊಂದು ಬರುತ್ತಿತ್ತು. ಕಬ್ಬು ಬೆಳೆದು, ಆಲೆಮನೆ ಹಾಕಿ ಬೆಲ್ಲ ತಯಾರಿಸಿ, ತನ್ನದೇ ಎತ್ತಿನ ಗಾಡಿಯಲ್ಲಿ ತುಂಬಿ ಮಧುಗಿರಿ ಕೊರಟಗೆರೆ ತುಮಕೂರು ಹಿಂದೂಪುರ ಗೌರಿಬಿದನೂರು ಮುಂತಾದ ಪಟ್ಟಣಗಳಲ್ಲಿ ಬೆಲ್ಲ ಮಾರಾಟ ಮಾಡುತ್ತಿದ್ದ ಆ ಬೆಲ್ಲದಂತಹ ರೈತ ವ್ಯಾಪಾರಿ ಹರೇಲಿಂಗಪ್ಪ. ಅಂತಃಕರಣ ಮತ್ತು ಮಡುಗಟ್ಟಿದ ಅಕ್ಕರೆಯನ್ನು ತುಂಬಿಕೊಂಡ ಆ ಹರೇಲಿಂಗಪ್ಪನು, ದಾರಿ ಕಾಯುತ್ತಾ ಎದುರು ನೋಡುತ್ತಿದ್ದ ನಮ್ಮನ್ನೆಲ್ಲಾ ಹತ್ತಿರಕ್ಕೆ ಕರೆದು ತಲಾ ಒಂದೊಂದು ಬೆಲ್ಲದ ಹುಂಡೆಗಳನ್ನು ನಮ್ಮ ಕೈಗಿಟ್ಟು ತನ್ನ ಪ್ರಯಾಣ ಮುಂದುವರೆಸುತ್ತಿದ್ದ.
ನಮ್ಮೂರ ಪ್ರಾಥಮಿಕ ಶಿಕ್ಷಣ ಮುಗಿಸಿಕೊಂಡ ನಾನು, ಪ್ರೌಢ ಶಿಕ್ಷಣಕ್ಕೆಂದು ಕೊರಟಗೆರೆ ಪಟ್ಟಣ ಸೇರಿಕೊಂಡ ಬಳಿಕ ಆ ಬೆಲ್ಲದ ವ್ಯಾಪಾರಿಯನ್ನು ವಾರದ ದಿನ ಭೇಟಿಯಾಗುವಿಕೆ ಕೈತಪ್ಪಿಹೋಯಿತು.
ಹೈಸ್ಕೂಲು ದಿನಗಳಲ್ಲಿಯೇ ದಲಿತ ಸಂಘರ್ಷ ಸಮಿತಿಯ ಸಾಮಾಜಿಕ ನ್ಯಾಯದ ಹೋರಾಟಗಳಿಗೆ ಪ್ರವೇಶ ಪಡೆದ ನಾನು ಸಾಹಿತ್ಯ ಕೃತಿಗಳನ್ನೂ ಓದಲು ತೊಡಗಿಕೊಂಡೆ. ನಾನಿದ್ದ ಹಾಸ್ಟೆಲ್ ಹತ್ತಿರದ ತಾಲ್ಲೂಕು ಕಚೇರಿಯಲ್ಲಿ ಲಂಕೇಶ್ ಪತ್ರಿಕೆ ಹಾಗೂ ದಿನಪತ್ರಿಕೆಗಳು ನನಗೆ ಓದಲು ಸಿಗುತ್ತಿದ್ದವು. ಪಿಯುಸಿ ವ್ಯಾಸಂಗ ಮಾಡುವ ಕಾಲಕ್ಕೆ ನಾನು ಗಂಭೀರ ಸಾಹಿತ್ಯ ಕೃತಿಗಳನ್ನೂ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನ ಮತ್ತು ಕಥೆಗಳನ್ನು ಓದುವುದು ಕಡ್ಡಾಯವಾಗಿ ರೂಢಿಯಾಗಿತ್ತು. ಹೀಗಿರಲು ನಾನು 1985 -86 ರಲ್ಲಿ ನಾನು ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಭಾನುವಾರದ ಒಂದು ದಿನ ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಕೇಶವರೆಡ್ಡಿ ಹಂದ್ರಾಳ ಅವರ “ಏರುತಿಹದು ಹಾರುತಿಹದು ನೋಡು ನಮ್ಮ ಬಾವುಟ” ಎಂಬ ಕಥೆ ಪ್ರಕಟವಾಗಿದ್ದದ್ದು ನನ್ನ ಕಣ್ಣಿಗೆ ಬಿತ್ತು. ಪತ್ರಿಕೆಯನ್ನು ಬಿಚ್ಚಿ ಕಥೆ ಓದಲು ತೊಡಗಿದಾಗಲೇ ಹಂದ್ರಾಳ ಗ್ರಾಮದ ಪಂಡರಿ ಭಕ್ತರ ಕೋಲಾಟದ ಹಾಡುಗಳು ಮತ್ತು ಬೆಲ್ಲದ ರೈತವ್ಯಾಪಾರಿಯ ಚಿತ್ರಗಳು ನನ್ನ ಸ್ಮೃತಿಪಟಲದಲ್ಲಿ ಹಾದುಹೋಗತೊಡಗಿದವು.

ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯತೆಯನ್ನು ವಸ್ತುವಾಗುಳ್ಳ ಆ ಕಥೆ ಹುಸಿ ಗಾಂಧಿವಾದಿಗಳನ್ನೂ ಹುಸಿ ರಾಷ್ಟ್ರೀಯತಾವಾದಿಗಳನ್ನೂ ವಿಡಂಬನಾತ್ಮಕವಾಗಿ ಚಿತ್ರಿಸಿದ್ದ ರಾಜಕೀಯ ವಿಡಂಬನೆಯಾಗಿತ್ತು. ಆ ಕಥೆಯ ಹ್ಯಾಂಗೋವರ್ ನಿಂದ ನಾನಿನ್ನೂ ಬಿಡಿಸಿಕೊಳ್ಳಲಾಗಿರದೆ ಅದೇ ದಿನ ಮಧ್ಯಾಹ್ನ ನಾನು ಕೊರಟಗೆರೆಯಿಂದ ವಡ್ಡಗೆರೆಗೆ ಬಸ್ಸಿನಲ್ಲಿ ಪ್ರಯಾಣಿಸಲು ಬಸ್ಸು ಹತ್ತಿ ಕುಳಿತಿದ್ದೆ. ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ದಂಪತಿಗಳಿಬ್ಬರು ಮಾತಾಡುತ್ತಿದ್ದರು. ಅವರು ಯಾತಕ್ಕೋ ಏನೋ ‘ಹಂದ್ರಾಳ’ ಎಂದು ಮಾತನಾಡಿಕೊಂಡ ಶಬ್ದ ನನ್ನ ಕಿವಿಯ ಮೇಲಕ್ಕೆ ಬಿತ್ತು. ಮೈ ರೋಮಾಂಚನವಾಗಿ ಆನಂದತುಂದಿಲನಾಗಿ “ನೀವು ಹಂದ್ರಾಳದವರಾ ಸರ್?” ಎಂದೆ. ಪ್ರತಿಯಾಗಿ ಉತ್ತರಿಸಿದ ಅವರು, “ಹೌದು…. ನಾವು ಹಂದ್ರಾಳದವರು…. ಯಾಕಪ್ಪಾ ಮರಿ?” ಅಂದರು. ನಾನು ಪ್ರಜಾವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದ್ದ ಕೇಶವರೆಡ್ಡಿ ಹಂದ್ರಾಳರ ಕಥೆಯನ್ನು ಓದಿದ್ದ ಕುರಿತು ಮಾತನಾಡಿದೆ. ತಕ್ಷಣವೇ ನನ್ನ ಕಡೆ ನಗೆಬೀರಿ, “ಆ ಕಥೆ ಬರೆದಿರೋದು ನನ್ನ ತಮ್ಮ ಕೇಶವ” ಎಂದರು. ಕೆಸ್ತೂರು – ಹುಲಿಯೂರುದುರ್ಗದಿಂದ ದಂಪತಿಗಳಿಬ್ಬರೂ ಹಂದ್ರಾಳ ಗ್ರಾಮಕ್ಕೆ ಹೋಗುತ್ತಿರುವುದಾಗಿ ಹೇಳಿದರು. ಅಷ್ಟು ಹೊತ್ತಿಗೆ ಬಸ್ಸು ನಮ್ಮೂರಿನ ನಿಲ್ದಾಣ ತಲುಪಿತ್ತು. ನನ್ನದೇ ತಾಕಿನ ನೆಲದ ಭಾಷಾ ಸೊಗಡಿನಲ್ಲಿ ಗ್ರಾಮಭಾರತದ ರೈತಾಪಿ ಬದುಕಿನ ಸಾಂಧ್ರ ಅನುಭವಗಳನ್ನು ಕಥನಗಳನ್ನಾಗಿ ನಿರೂಪಿಸುವ ಹಂದ್ರಾಳರ ಕಥೆಗಳನ್ನು ಅಂದಿನಿಂದ ಹುಡುಕಾಡಿಕೊಂಡು ಓದಲುತೊಡಗಿದೆ. ಅಗ್ನಿ ಪತ್ರಿಕೆಯಲ್ಲಿ ‘ಒಕ್ಕಲ ಒನಪು’ ಸರಣಿ ಅಂಕಣ ಬರಹಗಳು ಪ್ರಕಟವಾಗುವಾಗಲಂತೂ ಹಂದ್ರಾಳರ ಸಾಹಿತ್ಯಕ್ಕಾಗಿ ಹಸಿದ ನಾಯಂತೆ ಕಾಯ್ದು ಚಡಪಡಿಸಿ ಓದಿದ್ದೇನೆ. ಆಗ ನಾನೂ ಸಹ ಅಗ್ನಿ ಪತ್ರಿಕೆಗೆ ಬರೆಯುತ್ತಿದ್ದೆನಾದರೂ ನಾನು ನನ್ನ ಲೇಖನ ನೋಡಲು ಬಯಸುವುದಕ್ಕಿಂತಲೂ ಹಂದ್ರಾಳರ ಬರಹಗಳನ್ನು ಓದಲು ದಾಹದಿಂದ ಹಂಬಲಿಸುತ್ತಿದ್ದೆ.

ಇಂದಿಗೂ ಹಂದ್ರಾಳ ಗ್ರಾಮದ ಪಂಡರಿ ಭಕ್ತರ ಭಜನೆಯ ಹಾಡು ನನ್ನ ಕರ್ಣಪಟಲದಲ್ಲಿ ಗುಂಯ್ಗುಡುತ್ತಲೇ ಇರುವಂತೆ…. ಹಂದ್ರಾಳದ ಬೆಲ್ಲದ ವ್ಯಾಪಾರಿ ಕೊಟ್ಟ ಬೆಲ್ಲದ ರುಚಿಯೇ ಇಂದಿಗೂ ನನ್ನ ನಾಲಗೆ ಮೇಲೆ ಹರಡಿಕೊಂಡಿರುವಂತೆ ಭಾಸವಾಗುತ್ತದೆ. ಕಥೆಗಾರ ಕೇಶವರೆಡ್ಡಿ ಹಂದ್ರಾಳರನ್ನು ನಾನು ನೆನೆದಾಗಲೆಲ್ಲಾ ಪಂಡರಿ ಭಜನೆಯ ಭಕ್ತರ ಮುಖಂಡನ ಪಾದಗಳಿಗೆ ನಾನು ಭಕ್ತಿಯಿಂದ ಎರಗಿದ ಅದೇ ಪವಿತ್ರ ಭಾವವೂ …. ಬೆಲ್ಲದ ವ್ಯಾಪಾರಿಯಿಂದ ಬೆಲ್ಲ ಪಡೆದು ಸವಿಯುತ್ತಿದ್ದ ಅದೇ ಸಿಹಿಯಾದ ಭಾವಾನುಭೂತಿಯೂ ನನ್ನೊಳಗೆ ಸ್ಪುರಿಸುತ್ತದೆ. ಕಳೆದ ವರ್ಷ 2018 ರ ಜನವರಿ ಮಾಸದಲ್ಲಿ ನನ್ನ ಅಪ್ಪ ತೀರಿಕೊಂಡ ಒಂಬತ್ತನೇ ದಿನದ ನೆನಪಿನಲ್ಲಿ ನಾನು ನಮ್ಮೂರಿನಲ್ಲಿ ಜಂಬೂಕುಲ ಬಳಗದ ವತಿಯಿಂದ ಆಯೋಜಿಸಿದ್ದ “ಕುಲಮಂಡಲ ದಿವಸ” ಎಂಬ ವಿಶಿಷ್ಟ ಸಾಹಿತ್ಯ ಮತ್ತು ಸಾಂಸ್ಕೃತಿಕ ದಿವಸದ ಎಲ್ಲಾ ಕೈಂಕರ್ಯಗಳನ್ನು ನನ್ನ ನೆಚ್ಚಿನ ಕಥೆಗಾರ ಕೇಶವರೆಡ್ಡಿ ಹಂದ್ರಾಳ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಿದ ಸಾರ್ಥಕ ಭಾವನೆ ನನಗಿದೆ.
ನನ್ನ ಕಿರಿಯ ಮಗ ಶಾಕ್ಯಘೋಷನ ಅಪಘಾತವಾದಾಗ ಬೆಳಗಿನ ಜಾವದ ಹೊತ್ತಿಗಾಗಲೇ ಆಸ್ಪತ್ರೆಗೆ ಧಾವಿಸಿ ಬಂದು ನನಗೂ ನನ್ನ ಕುಟುಂಬಕ್ಕೂ ಆತುಕೊಂಡು, ಮಹಾ ಕರುಣದಿಂದ
ಬಹುದೊಡ್ಡ ಪ್ರಮಾಣದ ಆರ್ಥಿಕ ಸಹಾಯವನ್ನು ಒದಗಿಸಿ ನನ್ನ ಮಗನನ್ನು ಬದುಕಿಸಿಕೊಟ್ಟಿದ್ದಾರೆ.
ಡಾ.ಬೆಸಗರಹಳ್ಳಿ ರಾಮಣ್ಣನವರ ನಂತರದಲ್ಲಿ ಅಪಾರ ಮಾನವ ಪ್ರೇಮ, ಜಾತ್ಯತೀತತೆ, ಅಂತಃಕರಣ ಮತ್ತು ತಾಯ್ತನಗಳನ್ನು ತುಂಬಿಕೊಂಡ ಮಾನವತಾ ಮೂರ್ತಿಯಾಗಿ ನನಗೆ ನಮ್ಮ ಕೇಶವರೆಡ್ಡಿ ಹಂದ್ರಾಳರು ಕಾಣಿಸುತ್ತಾರೆ. ದುಃಖಿಗಳ ಕಣ್ಣೀರಿಗೆ ಮಿಡಿಯುವ ಅವರ ಆದರ್ಶ ಗೌರವಾರ್ಹವೂ ಅನುಸರಣೀಯ ಮಾದರಿಯೂ ಆಗಿದೆ. ಅವರ ಮಾನವೀಯ ಮೌಲ್ಯಗಳು, ಪ್ರಾಮಾಣಿಕತೆ, ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ಅಸೀಮವಾದುದು. ನಾನು ಬಾಲ್ಯದಲ್ಲಿದ್ದಾಗ ಬೆಲ್ಲ ತಿನ್ನಿಸಿ ಅವ್ವನ ಮಮತೆಯನ್ನು ತೋರಿದ ಅದೇ ಹಂದ್ರಾಳ ಗ್ರಾಮದ ಅಪ್ಪಟ ಹಳ್ಳಿಯ ರೈತನ ಗುಣಗಳ ಇನ್ನೊಂದು ರೂಪವೇ ನಮ್ಮ ಕೇಶವರೆಡ್ಡಿ ಹಂದ್ರಾಳ. ಹಂದ್ರಾಳರನ್ನು ಯಾರೇ ಟೀಕಿಸಲಾಗಲೀ ವಿರೋಧಿಸಲಾಗಲೀ ಕನಿಷ್ಠ ಗುಲಗಂಜಿಯಷ್ಟಾದರೂ ಅರ್ಹತೆ ಇರಬೇಕು ಅನ್ನಿಸುತ್ತದೆ. ಯಾಕೆಂದರೆ ಹಂದ್ರಾಳ ಅವರು ಯಾವುದೇ ಅರ್ಹತೆಗಳನ್ನು ನೋಡದೆಯೇ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಗುಣಾಢ್ಯ ವ್ಯಕ್ತಿತ್ವದ ಮಾದರಿಯಾಗಿ ನಮಗೆ ಕಾಣಿಸುತ್ತಾರೆ.
- ಡಾ. ವಡ್ಡಗೆರೆ ನಾಗರಾಜಯ್ಯ
