ವಿಶು ಕಣ್ಣುಗಳು ಯಾಕೋ ಇಷ್ಟು ಕೆಂಪಾಗಿತ್ತು. ನಾನೊಬ್ಬ ಮನೆವರಾರಿಗೂ ಬೇಡವಾದವ ಎಂದು ವಿಶು ಭಾವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ. ಮುಂದೇನಾಯಿತು ಹರಿಹರ ಬಿ ಆರ್ ಅವರ ರಚನೆಯ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
‘ನಿನ್ನೆಯೂ ಮನೆಯಲ್ಲಿ ಸಾಕಷ್ಟು ಚುಚ್ಚು ನುಡಿಯ ಕೇಳಿ ಕೇಳಿ ಸಾಕಾಗಿತ್ತು. ತಲೆ ಚಿಟ್ಟು ಹಿಡಿದು ತಲೆ ತಿರುಗುವಂತಾಗುತ್ತಿತ್ತು. ಇಂದು ತಿಂದಿದ್ದು ಯಾಕೋ ಮೈಗೆ ಸರಿ ಹೋಗುತ್ತಿಲ್ಲ. ಕಾಲೇಜಿನಲ್ಲಿ ನೋಡಿದರೆ ಅಲ್ಲಿಯೂ ಸಹಪಾಠಿಗಳ ತೊಂದರೆ ಎನ್ನುವುದಕ್ಕಿಂತ ಕಿರುಕುಳ, ತುಚ್ಚ ಕೆಲಸಗಳಿಗೆ ಒತ್ತಾಯಗಳೇ ಹೆಚ್ಚಾಗಿ ಮನಸ್ಸು ಹಾಳಾಗಿತ್ತು. ಇದರಿಂದಾಗಿ ಕಾಲೇಜಿಗೆ ಹೋಗಲೂ ಭಯವಾಗುತ್ತಿದೆ. ಮನೆಯಲ್ಲಿ ನನಗೆಂದು ವಹಿಸಿ ಮಾತನಾಡುತ್ತಿದ್ದ ಅಜ್ಜಿ, ತಾತ ಇಬ್ಬರೂ ವಾರದ ಅಂತರದಲ್ಲಿ ಪರಲೋಕಕ್ಕೆ ಪ್ರಯತ್ನಿಸಿದ್ದರು. ಅವರನ್ನು ನೆನೆಸಿಕೊಂಡು ದುಃಖ ಉಮ್ಮಳಿಸಿ ಕಣ್ಣೀರಾಡಿತು ಎಂದೇ ಆಗಲಿ ಅಜ್ಜಿ -ತಾತ ಹೋದಾಗಲೂ ಇಷ್ಟು ಅತ್ತಿದ್ದವನೇ ಅಲ್ಲ. ಈ ಸಮಯದಲ್ಲಿ ಅವರ ನೆನಪು ದುಃಖಿಸುವ ಹಾಗೆ ಮಾಡಿತೇ’ ಎಂದು ಯೋಚಿಸುತ್ತಿದ್ದ.
ಇಂದು ಏಕೋ ಮನೆಯಲ್ಲಿಯೂ ಇರಲಾಗದೆ, ಮನೆಯನ್ನು ತೊರೆದು ಹೋಗಲೇ ಎನ್ನುವಷ್ಟು ಬೇಸರವಾಗಿತ್ತು. ಏನಾದರಾಗಲಿ ಇಂದು ಕಾಲೇಜಿಗೆ ಹೋಗಲೇಬೇಕು ಮತ್ತು ತರಗತಿಗಳನ್ನು ಆದಷ್ಟು ಭಾಗವಹಿಸಬೇಕು ಎಂದು ಸಿದ್ಧವಾಗಿ ಹೊರಟಾಗ ಅಮ್ಮ ಎದುರಾಗಿ ” ವಿಶು ಕಣ್ಣುಗಳು ಯಾಕೋ ಇಷ್ಟು ಕೆಂಪಾಗಿದೆ” ಎಂದು ಕೇಳಲು “ಏನಿಲ್ಲಮ್ಮ ಓದುತ್ತಿದ್ದೆ” ಎಂದು ಜಾರಿಕೊಂಡು ಮನೆಯಿಂದ ಹೊರಗೆ ಹೊರಟಿದ್ದ.
***
ಕಾಲೇಜಿನ ಅಂಗಳದಲ್ಲಿ ಅಡಿ ಇರಿಸುತ್ತಿರುವಾಗಲೇ ಪುಂಡರ ನಾಯಕ ಚೇಲಾಗಳ (ಸ್ನೇಹಿತರು ಎನ್ನುವುದಕ್ಕಿಂತ ಈ ಹೆಸರೇ ಸೂಕ್ತ) ಜೊತೆ ಇದ್ದವ ವಿಶ್ವವನ್ನು ತಡೆದು “ಏಯ್ ನಿಂತುಕೊಳೋ ಅಲ್ಲೇ” ಎಂದು ಗದರಿದ. ವಿಶ್ವ ವಿಧೇಯನಂತೆ ತನ್ನ ತಲೆ ತಗ್ಗಿಸುತ್ತ, “ಇಂದು ಹುಷಾರಿಲ್ಲ ನಾಯಕ” ಎಂದು ಉತ್ತರಿಸಿ ಮಂದಿನ ಉತ್ತರಕ್ಕೆ ಕಾಯುತ್ತಿದ್ದ. ಚೇಲಾಗಳಲ್ಲೊಬ್ಬ “ಹುಷಾರಿಲ್ಲ ಅಂದರೆ ಹುಲ್ಲು ತಿನ್ನು” ಎನ್ನಲು ಅವರೆಲ್ಲ ಕಿಡಿಕಾರುತ್ತ ಕೆಂಪಾದ ಕಣ್ಣುಗಳಿಧ್ದರೂ ನಗಾಡುತ್ತಿದ್ದರು. ಆವರಣದಲ್ಲಿ ನೋಡಿದರೆ ಹುಲ್ಲು ಹುಡುಕಬೇಕಾಗಿತ್ತು ಹಾಗಿತ್ತು. ವಿಶ್ವ ಸುಮ್ಮನೆ ನಿಂತಿದ್ದ.
“ಏಯ್ ನೀನು ಹೋಗಬಹುದು” ಎಂಬ ನಾಯಕನ ಆದೇಶ ಕೇಳಿ ಚೇಲಾಗಳು ಆಶ್ಚರ್ಯದಿಂದ ಸುಮ್ಮನಾದರು. ನಾಯಕ ವಿಶ್ವನಿಗೆ ಕೇಳುವಂತೆ “ಬರ್ರೋ ಇವತ್ತು ಯಾಕೋ ದಿನ ಚೆನ್ನಾಗಿಲ್ಲ. ತರಗತಿಗೆ ಹೋಗೋಣ ಹಿಂಬಾಲಿಸಿ” ಎಂದು ಆಜ್ಞೆಯಿತ್ತ.
ತರಗತಿಯಲ್ಲಿ ಶಿಕ್ಷಕರು ಬಂದ ಮೇಲೇ ಬರುತ್ತಿದ್ದ ಗುಂಪು ಆ ದಿನ ಬೇಗನೆ ಒಳಗಿದ್ದರು. ಸಹಪಾಠಿಗಳು ನಾಯಕನ ಬಗ್ಗೆ ಮಾತನಾಡುತ್ತಿದ್ದರೂ ಇಂದು ಅದೇಕೋ ಅವನು ಮೌನವಾಗಿದ್ದು ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅದರಲ್ಲೂ ವಿಶ್ವನನ್ನು ಹೆಚ್ಚಾಗಿ ನೋಡುತ್ತಿದ್ದ.
ಆಯಾಯ ಅವಧಿಯಲ್ಲಿ ಶಿಕ್ಷಕರು ಬಂದು ಹೋದಾಗಲೆಲ್ಲ ವಿಶ್ವ ತಳಮಳಿಸುತ್ತಿದ್ದುದನ್ನೂ ಕೂಡ ನಾಯಕ ಗಮನಿಸಿದ. ವಿಶ್ವನಿಗೋ ತನ್ನ ನೋಟ ಶಿಕ್ಷಕರ ಕಡೆ ಇದ್ದರೂ ಅವರು ಹೇಳಿದ್ದನ್ನು ಕಿವಿಗೆ ಹಾಕಲು ಮನಸ್ಸು ಬಿಡುತ್ತಿರಲಿಲ್ಲ. ಕೊನೆಯ ಅವಧಿ ಮುಗಿಯಲು ಇನ್ನೂ ಅರ್ಧ ತಾಸಿತ್ತು. ಶಿಕ್ಷಕರ ಒಪ್ಪಿಗೆ ಪಡೆದು ‘ಕ್ಷಮಿಸಿ’ ಎಂದು ಎದ್ದು ಹೊರಟ.
ನಾಯಕನೂ ಆಚೆಗೆ ಹೊರಡುವ ಮುನ್ನ ಚೇಲಾಗಳಿಗೆ ಅಲ್ಲೇ ಇರಲು ಹೇಳಿ ಕರೆ ಮಾಡಿದಾಗ ಬನ್ನಿರೆಂದು ಮೂಕಾಭಿನಯದಲ್ಲಿ ತಿಳಿಸಿದ.
ವಿಶ್ವ ಕಾಲೇಜಿನಿಂದ ಆಚೆಗೆ ಹೊರಟವನೇ, ಮೊದಲು ಲಾಲ್ ಬಾಗಿಗೆ ಹೊರಟ. ಸುತ್ತಮುತ್ತಲಿನವರು ಓಡಾಟ ಕೇಕೆ ಗಲಾಟೆ ಕೇಳಿ ಹೊರಬಂದ. ಮುಂದೆ ದೇವಸ್ಥಾನ, ರಾಮಕೃಷ್ಣಾಶ್ರಮ ಎಂದು ಹೋಗಿದ್ದವನು, ಯಾವ ಜಾಗವೂ ಸರಿಹೋಗದೆ ಐದು ನಿಮಿಷಗಳಲ್ಲಿ ಹಿಂತಿರುಗುವಾಗ ತನ್ನ ಕಾಲೇಜಿನ ನಾಯಕನನ್ನು ಕಂಡ ಹಾಗಾಯಿತು. ಸರಿಯಾಗಿ ಗಮನಿಸಿದ ಅವನಲ್ಲ ಎಂದು ಖಾತ್ರಿಯಾದ ಮೇಲೆ ಸೀದಾ ಕೆರೆಯ ಕಡೆಗೆ ಹೊರಟ. ಆ ಕೆರೆಯಲ್ಲಿ ಹುಡುಗರು ಆಡಲೆಂದು ಬಂದು ಅಕಸ್ಮಾತ್ತಾಗಿ ಪ್ರಾಣ ಕಳೆದುಕೊಂಡವರು. ಎತ್ತರದಿಂದ ಇನ್ನೇನು ಆ ಕೆರೆಯಲ್ಲಿ ಬೀಳಬೇಕೆನ್ನವಷ್ಟರಲ್ಲಿ ಅಪರಿಚಿತ ಕೈ ಪುರುಷನ ಹಸ್ತ ಬಿಗಿದಪ್ಪಿತ್ತು.
ಮುಖ ತೋರದೆ ಕೆರೆಯ ಎತ್ತರದ ಸ್ಥಳದಿಂದ ಕೆಳಗಿಳಿಸಿ ಕೆರೆಯಿಂದ ಬಹಳವೇ ದೂರ ಕ್ರಮಿಸಿದ ಆ ವ್ಯಕ್ತಿ ನಾಯಕನೇ ಆಗಿದ್ದ. ಅವನನ್ನು ನೋಡಿ ‘ಛೀ! ನನ್ನನ್ನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಿಡಲಿಲ್ಲ. ನನಗೆ ನೀನೂ ಬೇಡ. ನಾನೊಬ್ಬ ಮನೆವರಾರಿಗೂ ಬೇಡವಾದವ ನಾನು. ಬಿಡು’ ಎಂದು ಕೊಸರಾಡಿದ.
ನಾಯಕ ಏನೂ ಮಾತನಾಡದೆ ಹತ್ತು ನಿಮಿಷಗಳ ನಂತರ ವಿಶ್ವನನ್ನು ಹಿಡಿದಿದ್ದ ತನ್ನ ಕೈಯನ್ನು ಸಡಿಲಿಸಿ, ‘ಹೋಗು’ ಎನ್ನುವಂತೆ ಕೈಯಲ್ಲಿ ಪದೇ ಪದೇ ತೋರುತ್ತ, ‘ನನ್ನ ತಂಗಿಯು ಇದೇ ರೀತಿ ಆತ್ಮಹತ್ಯೆ ಮಾಡಿಕೊಂಡವಳು ಬರಲೇ ಇಲ್ಲ. ಆಗ ನಾನು ಅವಳ ಜೊತೆಯೇ ಇದ್ದೆ. ಅವಳು ಬಹಳ ಬೇಸರವಾಗಿದ್ದಳು. ಮನಸ್ಸು ಸ್ಥಿಮಿತದಲ್ಲಿರದೆ ಅದೇನೇನೋ ಮಾತನಾಡುತ್ತಿದ್ದಳು. ನಾನು ಅವಳನ್ನೇ ಅನುಕರಿಸಿ ಗೇಲಿ ಮಾಡುತ್ತಿದ್ದೆ. ಆದರೆ ಹೇಳ ಕೇಳದೆ ವಿಷಪೂರಿತ ನೀರಿನಲ್ಲಿ ಬಿದ್ದವಳಿಗೆ ಆಗ ಪಶ್ಚಾತ್ತಾಪವಾದರೂ ಅವಳು ಉಳಿಯಲಿಲ್ಲ. ಅದು ಬೇರೆ ಕಥೆ. ಆದರೆ ಅದರ ಹಿಂದೆ ಉದ್ದೇಶ ಪೂರ್ವಕವಾಗಿ ಬೇರೇನೋ ಇದ್ದು ನನ್ನ ಮುಂದೇನೇ ಇಹಲೋಕ ಪಯಣಿಸಿದ್ಧು ನಂತರ ಗೊತ್ತಾಯಿತು. ಮಾತನಾಡಿ ಮನಸ್ಸು ಕೆಡಿಸುವವರು ಇರುತ್ತಾರೆ ಎಂತಹ ನೀಚ ಮನುಜರು. ಆದರೆ ಬುಧ್ಧಿವಂತನಾದ ನೀನು ಏನು ಮಾಡಲು ಹೊರಟಿದ್ದೆ. ನೀನು ಈ ರೀತಿ ದುಡುಕುತ್ತೀಯೆಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಹೋಗು ಹೋಗು” ಎಂದು ಮತ್ತೆ ಮತ್ತೆ ಕೈಯಿಂದ ಅಭಿನಯಿಸುತ್ತಾ, ವಿಶ್ವನಿಗೆ ಬೆನ್ನು ಮಾಡಿ ಹೊರಟೇ ಹೋದ. ಅವನ ಹೆಸರು ಗೊತ್ತಿಲ್ಲದೆ ‘ನಾಯಕ… ನಾಯಕ’ ಎಂದು ಕರೆದು ಹುಡುಕುತ್ತಾ ಹೊರಟ.
ಚಪ್ಪಾಳೆ ಶಬ್ಧ ಕೇಳಿಸಿದ್ದೆಡೆ ಮರದ ಬದಿಯಲ್ಲಿದ್ದ ನಾಯಕನೆಡೆ ಹೊರಟ. “ನನ್ನ ಹೆಸರು ಪರಶುರಾಮ, ಕಾಲೇಜಿನಲ್ಲಿ ಮಾತ್ರ ನಾಯಕನಷ್ಟೇ. ನಾನೂ ಕೂಡ ನಿನ್ನಂತೆ ಒಳ್ಳೆಯವನೇ. ಹೆದರು ಪುಕ್ಕಲನಾಗಿದ್ದ ನನಗೆ ನಾಯಕನಾಗಲು ನನ್ನ ಅಣ್ಣನ ಮಾರ್ಗದರ್ಶನ. ನಾನು ಇದುವರೆಗೂ ಯಾರನ್ನೂ ಹಿಂಸಿಸಿಲ್ಲ. ಜೊತೆಗೆ ನೀನು ಕಾಲೇಜೆಂದರೆ ಭ್ರಮೆ ಮತ್ತು ಭ್ರಾಂತಿಯಲ್ಲಿ ಮುಳುಗಿದ್ದೆ ಎಂದೂ ನನಗೆ ಗೊತ್ತಿತ್ತು” ಎಂದು ಹೇಳಿದ.
ವಿಶ್ವನ ಕಥೆ ಎಲ್ಲಾ ಕೇಳಿದ ಮೇಲೆ ಪರಶುರಾಮ “ನೀನೊಬ್ಬ ಸೋಮಾರಿ. ನಿನ್ನ ತಂದೆ ತಾಯಿಯವರಿಗೆ ಅಜ್ಜಿ – ತಾತನಂತೆಯೇ ನಿನ್ನ ಮೇಲೆ ಪ್ರೀತಿಯಿದೆ. ಕಛೇರಿಯ ಕೆಲಸದಲ್ಲಿ ನಿನ್ನ ಮೇಲಿನ ಗಮನ ಕೊಡಲು ಕಡಿಮೆ ಸಮಯ ಸಿಗುತ್ತಿತ್ತು. ನಿನ್ನ ಕೆಂಪು ಕಣ್ಣುಗಳ ಕಂಡು ವಹಿಸಿದ ಆ ಮಾತೃ ಕಾಳಜಿ ನಿನಗೆಲ್ಲಿ ಅರ್ಥವಾಗತ್ತೆ. ನಿನಗೆ ‘ನೀನು ಮತ್ತು ನಿನ್ನ ಸುಖದ ಕೋಟೆಯಲ್ಲಿ’ ಎಂದು ಮೆರೆಯುತ್ತಿದ್ದೆ. ಮನೆಯಲ್ಲಿದ್ದಾಗ ಸಣ್ಣ ಪುಟ್ಟ ಕೆಲಸ ಮಾಡಿ ಸಹಾಯಕನಾಗಿರಬೇಕು. ಅವರ ಮಾತುಗಳನ್ನು ಮೆಲುಕು ಹಾಕು. ಅರ್ಧ ಗಂಟೆ ಏನೂ ಮಾತನಾಡಬೇಡ. ಯೋಚಿಸು. ನಾನಿಲ್ಲೇ ಇರುತ್ತೇನೆ. ಮನೆಯವರ ಮಾತುಗಳು ಎಂದೂ ಖಡ್ಗದಂತೆ ಹರಿತವಾಗಿರಲ್ಲ. ಅದೆಲ್ಲ ಆಗದವರ ಸ್ವತ್ತು”.
ಅರ್ಧ ಗಂಟೆಯ ನಂತರ ವಿಶ್ವ ತನ್ನ ಕೈಯನ್ನು ಪರಶುರಾಮನ ಹೆಗಲ ಮೇಲಿರಿಸಿ “ಸಿಂಹ ರೂಪದ ನಾಯಕನಿಗೆ ಜೈ” ಎನ್ನುತ್ತಿದ್ದ.
- ಹರಿಹರ ಬಿ ಆರ್
