“ಅಮ್ಮಾ ತಿನ್ನಲು ಏನಿದೆ? ” ಮಕ್ಕಳು ಕೇಳುವ ಈ ಪ್ರಶ್ನೆಗೆ ಅಮ್ಮನ ತಳಮಳಗೊಳ್ಳುತ್ತಾಳೆ, ಕಾರಣ ಅಮ್ಮಂದಿರ ಅಡುಗೆಯನ್ನೆಲ್ಲ ಮಕ್ಕಳು ಅಷ್ಟು ಸುಲಭವಾಗಿ ಒಪ್ಪುವವರಲ್ಲ… ಲೇಖಕಿ ಅಶ್ವಿನಿ ಸುನಿಲ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಮಕ್ಕಳಿಗೆ ಪರೀಕ್ಷೆ ಮುಗಿದು, ಬೇಸಿಗೆ ರಜೆ ಪ್ರಾರಂಭವಾಗಿದೆ. ‘ಓದು ಓದು’ ಎನ್ನುವ ಅಮ್ಮನ ಮಂತ್ರಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಹೋಂವರ್ಕ್, ಪ್ರಾಜೆಕ್ಟ್, ಟೆಸ್ಟ್ ಗಳ ಚಿಂತೆ ಇಲ್ಲ ಎನ್ನುವ ಖುಷಿ ಮಕ್ಕಳಿಗಾದರೆ, ಮಕ್ಕಳನ್ನು ಸಂಭಾಳಿಸುವುದು ಹೇಗಪ್ಪಾ ಎನ್ನುವ ಚಿಂತೆ ಅಮ್ಮಂದಿರಿಗೆ.
ಬೆಳಿಗ್ಗೆ ಬೇಗ ಎದ್ದು ಗಡಿಬಿಡಿಯಲ್ಲಿ ತಿಂಡಿ ತಯಾರಿಸುವ ಧಾವಂತವಿಲ್ಲ. ಲಂಚ್ ಬಾಕ್ಸ್ ಗೆ ಏನು ಮಾಡುವುದು ?ಸ್ನಾಕ್ಸ್ ಗೆ ಏನು ಹಾಕುವುದು? ಎನ್ನುವ ಯೋಚನೆ ಇಲ್ಲ. ಏಳುವುದು ಒಂದೈದು ನಿಮಿಷ ತಡವಾದರೂ ಸ್ಕೂಲ್ ಬಸ್ಸು ಬರುವ ವೇಳೆಗೆ ಮಕ್ಕಳು ತಯಾರಾಗುತ್ತಾರೋ ಇಲ್ಲವೋ ? ಯೂನಿಫಾರ್ಮ್ ಗೆ ಇಸ್ತ್ರಿ ಆಗಿಲ್ಲ , ಸಾಕ್ಸ್ ಎಲ್ಲಿದೆ? ನ್ಯಾಪ್ಕಿನ್ ಎಲ್ಲಿದೆ?ಎಂದೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಅಮ್ಮಂದಿರಿಗೆ ನಿಶ್ಚಿಂತೆಯೇನಿಲ್ಲ. ಯಾಕೆಂದರೆ ಯೋಚಿಸಿದ್ದೀರಾ?
ಹೌದು, ಇಷ್ಟು ದಿನ ‘ಓದು ಓದು’, ‘ಬೇಗ ಬೇಗ’ ಎನ್ನುವುದೆರಡು ಅಮ್ಮಂದಿರ ಮಂತ್ರವಾಗಿದ್ದರೆ ಈಗ, ಮಕ್ಕಳದ್ದು ಎರಡೇ ಮಂತ್ರ ‘ಅಮ್ಮ ತಿನ್ನುವುದಕ್ಕೆ ಏನಿದೆ?’ ‘ಅಮ್ಮಾ, ಬೋರಾಗುತ್ತೆ. ಏನು ಮಾಡಲಿ? ‘
ಅಮ್ಮಾ, ಬೋರಾಗುತ್ತೆ ಏನು ಮಾಡಲಿ?” ಎನ್ನುವ ಮಕ್ಕಳ ಪ್ರಶ್ನೆಗೆ ಅಮ್ಮಂದಿರು ಉತ್ತರವೇನೋ ಹೇಳುತ್ತಾರೆ. ಆದರೆ ಅದು ಸರಿಯುತ್ತರ ಎಂದು ಮಕ್ಕಳಿಗೆ ಅನ್ನಿಸುವುದೇ ಇಲ್ಲ. ಬೆಳಿಗ್ಗೆ ನಿಧಾನಕ್ಕೆ ಎದ್ದು ತಿಂಡಿ ತಿಂದ ನಂತರ ಮಕ್ಕಳಲ್ಲಿ ಮೂಡುವ ಪ್ರಶ್ನೆ ‘ ಏನು ಮಾಡುವುದು?’
ಪುಸ್ತಕ ಓದು , ಡ್ರಾಯಿಂಗ್ ಮಾಡು, ಮಗ್ಗಿ ಕಲಿ, ಶ್ಲೋಕ ಹೇಳು, ಅಡುಗೆ ಮಾಡಲು ಸಹಾಯ ಮಾಡು… ಹೀಗೆ ಅಮ್ಮ ಏನೇನೋ ಹೇಳಿ ಮಕ್ಕಳನ್ನು ಏನಾದರೂ ಕೆಲಸದಲ್ಲಿ ಮಗ್ನರನ್ನಾಗಿರಿಸಲು ಎಷ್ಟೇ ಪ್ರಯತ್ನಿಸಿದರೂ, ಐದೇ ನಿಮಿಷದಲ್ಲಿ ಮಾಡುವ ಕೆಲಸ ಬೇಸರವಾಗಿ ಮತ್ತೆ ಹೇಳತೊಡಗುತ್ತಾರೆ ‘ಅಮ್ಮಾ, ಬೋರಾಗುತ್ತೆ’.
ಇನ್ನು “ಅಮ್ಮಾ, ಕ್ರಾಫ್ಟ್ ಮಾಡುತ್ತೇನೆ, ಪೇಂಟಿಂಗ್ ಮಾಡುತ್ತೇನೆ” ಎಂದು ಮಕ್ಕಳು ಹೇಳಿ ಅಮ್ಮನ ಟೆನ್ಶನನ್ನು ನಿವಾರಿಸಿದರೂ ಅದು ಕ್ಷಣಿಕವಾದುದ್ದು. ಕೆಲವೇ ಹೊತ್ತಿನಲ್ಲಿ ಮನೆ ತುಂಬಾ ಹಾರಾಡುವ ಪೇಪರ್ ತುಣುಕುಗಳು , ನೆಲದ ಮೇಲೆ, ಬಟ್ಟೆಯ ತುಂಬೆಲ್ಲಾ ಅಂಟಿಕೊಂಡ ಬಣ್ಣಗಳು ಅಮ್ಮನ ಪಿತ್ತ ನೆತ್ತಿಗೆಗೇರುವಂತೆ ಮಾಡುತ್ತದೆ. ಪಾಪ ಮಕ್ಕಳಾದರೂ ಏನು ಮಾಡಿಯಾರು? ಅಕ್ಕಪಕ್ಕ ಆಟವಾಡಲು ಮಕ್ಕಳಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಸಮಯ ಕಳೆಯುವುದು ನಿಜಕ್ಕೂ ದುಸ್ತರವೇ.

ಈ ಬೋರ್ ಯಾಕಾಗುತ್ತೆ? ಅದಕ್ಕೇನು ಮಾಡಬೇಕು ಎನ್ನುವ ಉತ್ತರ ಅಮ್ಮಂದಿರಿಗೆ ಗೊತ್ತಿರುತ್ತದೆ. ಹಾಗೆಂದು ಅಷ್ಟು ಸುಲಭದಲ್ಲಿ ಬಿಟ್ಟುಕೊಡುವವಳಲ್ಲ ಅಮ್ಮ . ಮಕ್ಕಳಿಗೂ ಅಷ್ಟೇ, ಬಾಯಿ ಬಿಟ್ಟು ಕೇಳಿದರೆ ಬೈಸಿಕೊಳ್ಳಬೇಕು ಎಂದು ಚೆನ್ನಾಗಿ ಗೊತ್ತಿರುತ್ತದೆ. ಕೊನೆಗೆ ಮಕ್ಕಳ ಕಿರಿ ಕಿರಿ ತಾಳದೆ ‘ಹೋಗು, ಟಿವಿ ನೋಡು’ ಎನ್ನುವ ಮಾತು ಅಮ್ಮನ ಬಾಯಿಂದ ಬರುವುದೇ ತಡ , ಎದ್ದೆನೋ ಬಿದ್ದೆನೋ ಎಂದು ರಿಮೋಟ್ ಗಾಗಿ ಓಡುತ್ತಾರೆ.
ಅಮ್ಮಂದಿರಿಗೆ ತಲೆನೋವು ತರುವ ಇನ್ನೊಂದು ವಿಷಯ ಎಂದರೆ , “ಅಮ್ಮಾ ತಿನ್ನಲು ಏನಿದೆ? “ಎನ್ನುವ ಮಕ್ಕಳ ಪ್ರಶ್ನೆ. ದೋಸೆ ಕೊಡಲಾ? ಉಪ್ಪಿಟ್ಟು ಕೊಡಲಾ? ಬಾಳೆಹಣ್ಣು ತಿಂತೀಯಾ? ಸೇಬು ಕೊಡಲಾ? ಕಲ್ಲಂಗಡಿ ಹಣ್ಣು ತಿನ್ನು ಎಂದೆಲ್ಲಾ ಅಮ್ಮಂದಿರ ಆಫರ್ ಗೆ ಅಷ್ಟು ಸುಲಭವಾಗಿ ಒಪ್ಪುವವರಲ್ಲ ಮಕ್ಕಳು. ಬೇರೆ ಏನಿದೆ? ಎಂದು ಕೇಳುತ್ತಾ ಹೋಗುತ್ತಾರೆ? ಅಮ್ಮ ಹೇಳುತ್ತಲೇ ಹೋಗುತ್ತಾಳೆ. ಮಕ್ಕಳಿಗೆ ಏನು ಬೇಕೆನ್ನುವುದು ಅಮ್ಮನಿಗೂ ಗೊತ್ತು. ಹಾಗೆಂದು ಅವಳು ಬಾಯಿಬಿಟ್ಟು ಕೇಳುವುದಿಲ್ಲ. ಮಕ್ಕಳು ಕೂಡಾ ತಮಗೇನು ಬೇಕೆನ್ನುವುದನ್ನು ಹೇಳುವುದಿಲ್ಲ. ಆದರೆ ಗೆಲ್ಲುವುದು ಮಾತ್ರ ಮಕ್ಕಳೇ. ಐದು ನಿಮಿಷಕ್ಕೊಮ್ಮೆ’ ತಿನ್ನಲು ಕೊಡು….ತಿನ್ನಲು ಕೊಡು, ಹಸಿವಾಗುತ್ತದೆ’ ಎನ್ನುವ ಮಕ್ಕಳ ಕಿರಿಕಿರಿ ತಡೆಯಲಾಗದೆ ನಿನಗೇನು ಬೇಕು ತೆಗೆದುಕೊಂಡು ತಿನ್ನು ಎಂದು ಡಬ್ಬವನ್ನೇ ಕೊಟ್ಟುಬಿಡುತ್ತಾಳೆ.
ಈ ಕುರು ಕುರು ತಿಂಡಿಗಳೆಲ್ಲ ಕ್ಷಣಮಾತ್ರದಲ್ಲಿ ಮುಗಿದು ಹೋಗುವಂತದ್ದು. ಖಾಲಿಯಾದ ಕುರ್ಕುರೆ, ಲೇಸ್ ಪ್ಯಾಕೆಟ್ ಗಳಿಂದ ಡಸ್ಟ್ ಬಿನ್ ತುಂಬಿ ಹೋಗಬಹುದೇ ಹೊರತು, ಮಕ್ಕಳ ಹೊಟ್ಟೆಯಂತೂ ತುಂಬುವುದಿಲ್ಲ. ಐದೇ ನಿಮಿಷಕ್ಕೆ ಮತ್ತದೇ ರಾಗ “ಅಮ್ಮ ತಿನ್ನಲೇನಾದರೂ ಕೊಡು” ದಾಸರರೇನಾದರೂ ಈ ಮಕ್ಕಳನ್ನು ನೋಡಿದ್ದರೆ ‘ಯಾಕೆ ಕಿರಿಕಿರಿ ಮಾಡುತಿ? ನೀನ್ಯಾಕೆ ಕಿರಿಕಿರಿ ಮಾಡುತಿ?
ಪಿಜ್ಜಾ ತಂದು ನಿನ್ನ ಮುಂದಿಡಲೆನೋ? ಮ್ಯಾಗಿ ಕೊಟ್ಟು ನಿನ್ನ ಹಸಿವು ತಣಿಸಲೇನೋ? ‘ ಎಂದೇ ಹಾಡುತ್ತಿದ್ದರು. ಹೌದು, ಪಾಪ ಹಸಿವು ಎಂದು ನೀವೇನು ಉಪ್ಪಿಟ್ಟು, ದೋಸೆ ಮಾಡುವ ಕಷ್ಟ ತೆಗೆದುಕೊಳ್ಳಬೇಕಿಲ್ಲ. ಅವರ ಹಸಿವು ತಣಿಸಲು ಎರಡೇ ನಿಮಿಷ ಸಾಕು. ಅದುವೇ ಮ್ಯಾಗಿ.
ಮ್ಯಾಗಿ ಪ್ಯಾಕೆಟ್ ಖಾಲಿ ಆಗಿದೆ ಎಂದು ಮಕ್ಕಳನ್ನು ಯಾಮಾರಿಸುವ ಯತ್ನ ಮಾಡಿದರೆ ನಿಮ್ಮ ಪರ್ಸಿಗೆ ಕತ್ತರಿಯೇ ಗತಿ. ಕುಳಿತಲ್ಲಿಂದಲೇ “ಅಮ್ಮಾ, ಪಿಜ್ಜಾ ಆರ್ಡರ್ ಮಾಡು” ಎನ್ನುವ ಧ್ವನಿ ನಿಮ್ಮ ಗೂಗಲ್ ಪೇ ಬ್ಯಾಲೆನ್ಸ್ ಅನ್ನು ಒಮ್ಮೆ ನೋಡಿಕೊಳ್ಳುವಂತೆ ಮಾಡುತ್ತದೆ.
ಇಷ್ಟು ದಿನ ಪರೀಕ್ಷೆ ಯಾವಾಗ ಮುಗಿಯುವುದೋ? ಯಾವಾಗ ಸ್ವಲ್ಪ ಬಿಡುವು ಸಿಗುತ್ತದೋ? ? ಎಂದು ಕಾಯುತ್ತಿದ್ದ ಅಮ್ಮಂದಿರು ಈಗ ಈ ರಜೆ ಯಾವಾಗ ಮುಗಿಯುತ್ತದೆಯೋ ಎಂದು ಕಾಯುವಂತಾಗುತ್ತದೆ.
- ಅಶ್ವಿನಿ ಸುನಿಲ್
