ಕನ್ನಡ ಭಾಷೆಗೆ ತನ್ನದೇ ಆದ ಸಾವಿರಾರು ವರ್ಷಗಳ ಭವ್ಯವಾದ ಶ್ರೀಮಂತ ಇತಿಹಾಸವಿದೆ. ದಕ್ಷಿಣದ ಇತರೆ ಯಾವುದೇ ಭಾಷೆಗೂ ಕಡಿಮೆಯಿಲ್ಲದ ಅಷ್ಟೇಕೆ, ಸರಿಸಾಟಿಯಿಲ್ಲದ ಶ್ರೇಷ್ಠ ಪರಂಪರೆ ಕನ್ನಡಕ್ಕಿದೆ. ಆದರೆ “ಥಗ್ ಲೈಫ಼್” ನ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ನಟ ಕಮಲ್ ಹಾಸನ್ ಅವರು “ಕನ್ನಡ ಕೂಡಾ ತಮಿಳಿನಿಂದಲೇ ಹುಟ್ಟಿದ್ದು ” ಎನ್ನುವ ಮಾತಿಗೆ ಲೇಖಕ ಹಿರಿಯೂರು ಪ್ರಕಾಶ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಮೊದಲಿಗೆ ನಮ್ಮ ಕನ್ನಡದವರಿಗೆ ಕನ್ನಡಾಭಿಮಾನ ಎಂಬುದು ಯಾವಾಗ ಉಕ್ಕಿ ಹರಿಯುತ್ತೆ ? ಎಂಬ ಪ್ರಶ್ನೆಯನ್ನು ಕುತೂಹಲಕ್ಕಾಗಿ ಮುಂದಿಟ್ಟುಕೊಂಡರೆ, ಕನ್ನಡ ಪರ ಸಂಘಟನೆಗಳು, ಕನ್ನಡಪರ ಹೋರಾಟಗಾರರಿಗೆ ” ಯಾರಾದರೂ ಅನ್ಯಭಾಷಿಕರು ಕನ್ನಡಕ್ಕೆ ಅಪಮಾವಾಗುವ ರೀತಿಯಲ್ಲಿ ಮಾತನಾಡಿದಾಗ, ಅನ್ಯ ರಾಜ್ಯದವರು ಕನ್ನಡದ ಬಗ್ಗೆ ದುರ್ವರ್ತನೆ ತೋರಿದಾಗ ಅಥವಾ ಸರ್ಕಾರದ ಕೆಲವು ಕನ್ನಡಪರವಲ್ಲದ ರೀತಿ, ನೀತಿ, ಕಾನೂನು ಅಥವಾ ಹೇಳಿಕೆಗಳು ಕಂಡುಬಂದಾಗ ,ತಕ್ಷಣವೇ ಇವರು ಪ್ರತಿಭಟನೆಗಿಳಿದು ಹೋರಾಟ ಮಾಡಿ ಕನ್ನಡಾಭಿಮಾನವನ್ನು ತೋರುತ್ತಾರೆ.
ಸೋಷಿಯಲ್ ಮೀಡಿಯಾ ಅಥವಾ ಇನ್ನಿತರೆ ಎಲ್ಲಾ ಮೀಡಿಯಾದವರು ಕನ್ನಡ ಕುರಿತಾದ ಯಾವುದೇ ಕ್ಷುಲ್ಲಕ ಹೇಳಿಕೆ, ಘಟನೆ ಅಥವಾ ಕನ್ನಡವಿರೋಧಿ ವರ್ತನೆಯೆಂಬುದು ಸಾಕಷ್ಟು
ಟಿ ಆರ್ ಪಿ, ಲೈಕ್ಸು, ವೈರಲ್ಲು ಆಗುವ ರೋಚಕತೆ ಇದೆಯೆಂದಾಗ ಮಾಧ್ಯಮದವರ ಕನ್ನಡಾಭಿಮಾನ ಇತರರನ್ನು ಕೆರಳಿಸುವಷ್ಟು ಉಕ್ಕುತ್ತದೆ.
ಬೇರೆಲ್ಲಾ ಸಮಯದಲ್ಲಿ ಸುಮ್ಮನಿರುವ ನಮ್ಮ ರಾಜಕೀಯ ನಾಯಕರಿಗೆ ತಮ್ಮ ವಿರೋಧಿಯಾದವನು ಕನ್ನಡಕ್ಕೆ ಸ್ವಲ್ಪವಾದರೂ ಅಪೇಕ್ಷಿತವಲ್ಲದ ಅಥವಾ ಅಪಮಾನಕರ ಹೇಳಿಕೆ ನೀಡಿದನೆಂದು ಗೊತ್ತಾದ ತಕ್ಷಣವೇ ಅವನ ಮೇಲೆ ಮುಗಿಬೀಳುತ್ತಾರೆ. ಇಲ್ಲಿ ರಾಜಕಾರಣಿಗಳು ಹಾಗೆ ಅಬ್ಬರಿಸುವುದು ಕನ್ನಡದ ಮೇಲಿನ ಅಭಿಮಾನದಿಂದಲ್ಲ, ಬದಲಿಗೆ ತಮ್ಮ ರಾಜಕೀಯವಿರೋಧಿಯನ್ನು ತರಾಟೆಗೆ ತೆಗೆದುಕೊಳ್ಳಲು ಅವನೇ ಮಾಡಿಕೊಟ್ಟ ಸುಂದರ ಅವಕಾಶದಿಂದಾಗಿ.!!
ಇನ್ನು ನಮ್ಮ ಸಾಮಾನ್ಯ ಕನ್ನಡಿಗರು ಎಂದಿನಂತೆ ಕನ್ನಡವೊಂದನ್ನು ಬಿಟ್ಟು ಮಿಕ್ಕ ಎಲ್ಲಾ ಭಾಷೆಗಳಲ್ಲೂ ಅನ್ಯಭಾಷಿಕರ ಜೊತೆ ವ್ಯವಹರಿಸುತ್ತಾ ಮನೆಯಲ್ಲೂ ಇಂಗ್ಲೀಷಿನಲ್ಲೇ ಮಾತನಾಡುತ್ತಾ ಅನ್ಯಭಾಷೆಗಳ ಸಿನಿಮಾ ನೋಡುತ್ತಾ , ತಮ್ಮ ಚಿಕ್ಕ ಮಕ್ಕಳು ಇಂಗ್ಲೀಷಿನಲ್ಲಿ ಮಾತನಾಡಿದರೆ ಮೈಯೆಲ್ಲಾ ಪುಳಕಿತರಾಗುತ್ತಾ, ರಾಷ್ಟ್ರೀಯವಾದದ ಹಿನ್ನೆಲೆಯಲ್ಲಿ ಹಿಂದಿಯನ್ನೂ ಮೆಚ್ಚಿಕೊಳ್ಳುತ್ತಾ ತಮ್ಮ ಅಸೀಮ ಔದಾರ್ಯದ ಮೂಲಕ ಕನ್ನಡವನ್ನು ಬೆಳೆಸಿ (?) ಕನ್ನಡಾಭಿಮಾನ ತೋರುತ್ತಾರೆ. ಅಲ್ಲವೇ….?
ಸತತ ಮಳೆಯಿಂದಾಗಿ ಉಕ್ಕುವ ನದಿಗಳಂತೆ ಈಗ ಈ ಎಲ್ಲಾ ವರ್ಗದ ಕನ್ನಡಿಗರಿಗೆ ಕನ್ನಡಾಭಿಮಾನ ಉಕ್ಕಿ ಹರಿದು ಸೋಷಿಯಲ್ ಮೀಡಿಯಾ ತುಂಬೆಲ್ಲಾ ವೈರಲ್ ಆಗುತ್ತಿರುವುದಕ್ಕೆ ಇತ್ತೀಚಿನ ಕಾರಣಕರ್ತರಾದವರು, ಬಹುಭಾಷಾ ಕಲಾವಿದ, ಭಾರತದ ಪ್ರತಿಭಾವಂತ ನಟ ಕಮಲ್‌ಹಾಸನ್ !! ಕನ್ನಡಿಗರನ್ನು ಈ ಪಾಟಿ ಕೆರಳಿಸಿದ್ದು ಮೊನ್ನೆ ಚೆನ್ನೈನಲ್ಲಿ ಅವರಾಡಿದ ಆ ಒಂದೇ ಒಂದು ಮಾತು !

ಏನದು ಆ ಮಾತು..!
ಮೊನ್ನೆ ಶನಿವಾರ ಚೆನ್ನೈನಲ್ಲಿ ತಮ್ಮ ಹೊಸ ಸಿನಿಮಾ “ಥಗ್ ಲೈಫ಼್” ನ ಆಡಿಯೋ ಬಿಡುಗಡೆ ಕಾರ್ಯಕ್ರಮದ ಸಂಧರ್ಭದಲ್ಲಿ ಮಾತನಾಡುತ್ತಾ ನಟ ಕಮಲ್ ಹಾಸನ್ ತಮಿಳು ಭಾಷೆಯನ್ನು ಮತ್ತು ಅದರ ಮೂಲವನ್ನು ಹೊಗಳುತ್ತಲೇ ಒಂದು ಹಂತದಲ್ಲಿ “ಕನ್ನಡ ಕೂಡಾ ತಮಿಳಿನಿಂದಲೇ ಹುಟ್ಟಿದ್ದು ” ಎಂದು ಸ್ವಲ್ಪ ಎಮೋಷನಲ್ಲಾಗಿಯೇ ಹೇಳಿಬಿಡುತ್ತಾರೆ . ಆದಕ್ಕೆ ಮುನ್ನ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಶಿವರಾಜ್‌ಕುಮಾರ್ ರ ಸೌಜನ್ಯ ದ ಮಾತುಗಳಿಗೆ ಉತ್ತರಿಸುತ್ತಾ ಡಾ. ರಾಜ್ ಕುಮಾರ್, ಶಿವಣ್ಣ ಇವರೆಲ್ಲ ತಮಗೆ ಬೆಂಗಳೂರಿನಲ್ಲಿರುವ ತನ್ನ ಕುಟುಂಬ ಎಂದು ರಾಜ್ ರ ಕೊಡುಗೆಯನ್ನು ಸ್ಮರಿಸುತ್ತಾರೆ.
ಅಲ್ಲಿಗೆ ಸುಮ್ಮನಾಗದೇ ತಮಿಳನ್ನು ಹಾಡಿಹೊಗಳುವ ಭರದಲ್ಲಿ ” ಕನ್ನಡವೂ ತಮಿಳಿನಿಂದಲೇ ಹುಟ್ಟಿದ್ದು” ಕ ಎಂಬಂತಹ ಮೂರ್ಖತನದ ಮಾತೊಂದನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹರಿಯಬಿಟ್ಟರು. ಅದೀಗ ಎಲ್ಲೆಡೆ ವೈರಲ್ ಆಗಿ ಕರ್ನಾಟಕದಲ್ಲಿ ಕಮಲ್ ಮಾತಿನ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ಶುರುವಾಗಿವೆ. ಕನ್ನಡಪರ ಸಂಘಟನೆಗಳು, ಸಾಮಾಜಿಕ ಜಾಲತಾಣದ ಕನ್ನಡಿಗರು, ಸಾಹಿತಿಗಳು, ಪ್ರಜ್ಞಾವಂತರು, ವಿವೇಕಿಗಳು, ವಿಚಾರವಾದಿಗಳು ಹಾಗೂ ಜನಸಾಮಾನ್ಯ ಕನ್ನಡಾಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲಕ್ಕಿಂತ ಜೋರಾಗಿ ಅಪರೂಪಕ್ಕೆ ಕನ್ನಡದ ವಿಷಯಕ್ಕಾಗಿ ನಮ್ಮ ರಾಜಕೀಯ ನಾಯಕರು ಸಹಾ ಕಮಲ್ ಹೇಳಿಕೆಯ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಕಮಲ್‌ಹಾಸನ್ ಒಬ್ಬ ಪ್ರತಿಭಾವಂತ ನಟನಷ್ಟೇ ಅಲ್ಲ, ಭಾರತದ ಕೆಲವೇ ಬುದ್ದಿವಂತ ಹಾಗೂ ಪ್ರಜ್ಞಾವಂತ ಕಲಾವಿದರಲ್ಲೊಬ್ಬರು ಎಂಬ ನಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ.
ಕನ್ನಡ ಭಾಷೆಗೆ ತನ್ನದೇ ಆದ ಸಾವಿರಾರು ವರ್ಷಗಳ ಭವ್ಯವಾದ ಶ್ರೀಮಂತ ಇತಿಹಾಸವಿದೆ. ದಕ್ಷಿಣದ ಇತರೆ ಯಾವುದೇ ಭಾಷೆಗೂ ಕಡಿಮೆಯಿಲ್ಲದ ಅಷ್ಟೇಕೆ, ಸರಿಸಾಟಿಯಿಲ್ಲದ ಶ್ರೇಷ್ಠ ಪರಂಪರೆ ಕನ್ನಡಕ್ಕಿದೆ. ಮೂಲ ದ್ರಾವಿಡ ಭಾಷೆಯಿಂದ ಬೇರ್ಪಟ್ಟು ತನ್ನ ಲಿಪಿ ಸೌಂದರ್ಯ, ಅರ್ಥ ವ್ಯಾಖ್ಯಾನ, ಪದ ಸಂಪತ್ತು, ಭಾಷಾ ಇತಿಹಾಸ ಹಾಗೂ ಐತಿಹಾಸಿಕ ಪರಂಪರೆಗಳಿಂದಾಗಿ ಇಡೀ ಭಾರತೀಯ ಭಾಷೆಗಳಲ್ಲೇ ಕನ್ನಡ “ವಿಶ್ವಲಿಪಿಗಳ ರಾಣಿ ” ಎಂಬ ಅಭಿದಾನವನ್ನೂ ಹೊಂದಿದೆ.
ತನ್ನನ್ನು ಆಳಲು ಬಂದ ದೇವಭಾಷೆ ( ಸಂಸ್ಕೃತ) , ರಾಜಭಾಷೆಗಳ ( ಇಂಗ್ಲಿಷ್) ಕೆಲವು ಪದಗಳನ್ನೇ ತನ್ನದನ್ನಾಗಿಸಿಕೊಂಡು ಅವುಗಳನ್ನೂ ತನ್ನೊಳಗೇ ಕನ್ನಡೀಕರಣಗೊಳಿಸಿಕೊಳ್ಳಬಲ್ಲ ತಾಕತ್ತು ಕನ್ನಡಕ್ಕಿದೆ. ಮೇಲಾಗಿ ತಮಿಳಿನಂತೆಯೇ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹೊಂದಿರುವ ಕನ್ನಡವು ಬೇರಾವುದೇ ಭಾಷೆಗಿಂತ ಕಡಿಮೆಯಿಲ್ಲ. ಅದಕ್ಕೇ ಇದನ್ನು ಕಸ್ತೂರಿ ಕನ್ನಡ ಎನ್ನುವುದು. ಇದು ಬರೀ ಅಭಿಮಾನದ ಮಾತಲ್ಲ, ಸ್ಪಟಿಕದಷ್ಟೇ ಸತ್ಯ ಮತ್ತು ವಾಸ್ತವ. ವಸ್ತುಸ್ಥಿತಿ ಹೀಗಿರುವಾಗ ತನ್ನಂತೆಯೇ ಮೂಲ ದ್ರಾವಿಡದಿಂದ ಬೇರೆಯಾದ ತಮಿಳು ಏನಿದ್ದರೂ ಕನ್ನಡದ ಪಾಲಿಗೆ , ತೆಲುಗು ಮಲೆಯಾಳಂ ನಂತೆ ಒಂದು ಸಹೋದರ ಭಾಷೆಯಷ್ಟೇ ವಿನಃ ಕನ್ನಡ ತಮಿಳುಜನ್ಯವೂ ಅಲ್ಲ , ಹಾಗೆಯೇ ಕನ್ನಡಕ್ಕೆ ಯಾವ ಭಾಷೆಯ ಯಜಮಾನಿಕೆಯೂ ಇಲ್ಲ.

ಬಹುಶಃ ಕನ್ನಡ ಭಾಷೆಯ ಇತಿಹಾಸ ಅರಿಯದೇ ತಮಿಳನ್ನು ಸಿಕ್ಕಾಪಟ್ಟೆ ಹೊಗಳುವ ಆವೇಶದಲ್ಲಿ ಕಮಲ್‌ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎನ್ನುವ ಅವಿವೇಕದ ಮಾತುಗಳನ್ನಾಡಿರಬಹುದು ಅಥವಾ ಅಂದಿನ ವೇದಿಕೆಯ ಪ್ರಭಾವವೂ ಆಗಿರಬಹುದು, ಇಲ್ಲವೇ ಅರಳುಮರಳಿನ ಅಂಶವೂ ಇದ್ದಿರಬಹುದು.
ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಕಮಲ್ ಹಾಸನ್ ಕನ್ನಡದ ಬಗ್ಗೆ ಹಾಗೆ ಹಗುರವಾಗಿ ಹೇಳುವ ಮುನ್ನ ಸ್ವಲ್ಪ ಎಚ್ಚರ ವಹಿಸಬೇಕಿತ್ತು. ನಿಮ್ಮ ನಿಮ್ಮ ಮಾತೃಭಾಷೆಯನ್ನು ನೀವು ಎಷ್ಟು ಬೇಕಾದರೂ ಹೇಗೆ ಬೇಕಾದರೂ ಹೊಗಳಿಕೊಳ್ಳಿ. ಆದರೆ ಹಾಗೆ ಹೊಗಳುವಾಗ ಇತರೆ ಭಾಷೆಗಳ ಐತಿಹಾಸಿಕ ಪರಂಪರೆ ಅರಿಯದೇ ನಾಲಿಗೆಯನ್ನು ಸಡಿಲ ಬಿಡುವುದು ಸಮಂಜಸವೂ ಅಲ್ಲ, ವಿವೇಕವೂ ಅಲ್ಲ ಹಾಗೂ ಶೋಭೆಯೂ ಅಲ್ಲ.
ಈಬಗ್ಗೆ ತಕ್ಷಣವೇ ಕಮಲ್ ಹಾಸನ್ ತಮ್ಮಿಂದಾದ ಪ್ರಮಾದವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಿಹೆಜ್ಜೆ ಇಡುವ ಮೂಲಕ ತಮ್ಮ ದೊಡ್ಡತನ ಮೆರೆಯಲಿ. ಅದರಿಂದ ಅವರಿಗೇ ಒಳ್ಳೆಯದು. ಕನ್ನಡಕ್ಕಾಗುವ ಎಂತಹ ಅಪಮಾನವನ್ನೂ ಕನ್ನಡಿಗರು ಸಹಿಸರು ಎಂಬ ಸಂವೇದನಾ ರೂಪದ ಎಚ್ಚರಿಕೆ ಅವರಿಗಿದ್ದಲ್ಲಿ ಮಾತ್ರ ಅವರ ಪ್ರತಿಭೆಗೂ ವ್ಯಕ್ತಿತ್ವಕ್ಕೂ ಘನತೆ ಬರಲು ಸಾಧ್ಯ.!
** ಮರೆಯುವ ಮುನ್ನ **
ಇತ್ತೀಚಿನ ಕೆಲವೇ ದಿನಗಳ ಅಂತರದಲ್ಲಿ ಕನ್ನಡಕ್ಕೆ , ಕನ್ನಡಿಗರಿಗೆ , ಕರ್ನಾಟಕಕ್ಕೆ ಅನ್ಯ ಭಾಷೆಯ ಒಬ್ಬ ವಿಂಗ್ ಕಮಾಂಡರ್, ಒಬ್ಬ ಸೋನುನಿಗಮ್ ಹಾಗೂ ಒಬ್ಬ ಮಹಿಳಾ ಬ್ಯಾಂಕ್ ಮ್ಯಾನೇಜರ್ ಇವರುಗಳಿಂದ ರಾಷ್ಟ್ರಮಟ್ಟದಲ್ಲಿ ವೈರಲ್ ಆದಂತಹ ಅಪಮಾನಕರ ಘಟನೆಗಳಾದಾಗ ಪೂರ್ತಿ ಕಾಣೆಯಾಗಿದ್ದ ನಮ್ಮ ಕೆಲ ರಾಜಕೀಯ ನಾಯಕರು ಈಗ ಕಮಲ್ ಹಾಸನ್ ವಿಷಯದಲ್ಲಿ ಇದು ಕನ್ನಡಕ್ಕಾದ ಅಪಮಾನವೆಂದು ಅತ್ಯುಗ್ರವಾಗಿ ಪ್ರತಿಭಟಿಸುತ್ತಿರುವ ಡ್ರಾಮಾಗಳನ್ನು ನೋಡಿದರೆ ನಿಟ್ಟುಸಿರು ಬಿಡುವಂತಾಗುತ್ತದೆ.
ನಮ್ಮ ರಾಜಕಾರಣಿಗಳಿಗೆ ಕನ್ನಡವೆಂಬುದೂ ರಾಜಕೀಯಕ್ಕಾಗಿ ಇರುವ ವಿಷಯ ವಸ್ತುವೇ ? ಕಮಲ್ ಹಾಸನ್ ಇವರ ರಾಜಕೀಯ ವಿರೋಧಿ ಎಂಬ ಒಂದೇ ಕಾರಣಕ್ಕೆ ಮುಗಿಬಿದ್ದು ವಿರೋಧ ಮಾಡುವ ಕೆಲ ಗೋಸುಂಬೆ ರಾಜಕೀಯ ನಾಯಕರು ಕನ್ನಡದ ಮೇಲಿನ ಬದ್ದತೆಯನ್ನು ಎಲ್ಲಾ ಸಂಧರ್ಭದಲ್ಲೂ ತೋರುವ ಅಭಿಮಾನ ಮೊದಲು ಬೆಳೆಸಿಕೊಳ್ಳಲಿ. ಕನ್ನಡವೆಂದರೆ ನಿಮ್ಮ ರಾಜಕೀಯ ಅನುಕೂಲಕ್ಕಾಗಿ ಬೇಕೆನಿಸಿದಾಗ ಆಟವಾಡುವ ಚೆಂಡಲ್ಲ.!
ನಿಮಗೆ ನೆನಪಿರಬಹುದು .೨೦೨೩ ರಲ್ಲಿ ಹಾವೇರಿಯಲ್ಲಿ ನಡೆದ ಎಂಭತ್ತಾರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನಾರೋಗ್ಯದ ಕಾರಣ ಭಾಗವಹಿಸಲಾಗದ ಖ್ಯಾತ ಸಾಹಿತಿ ಮಾನ್ಯ ಎಸ್.ಎಲ್. ಭೈರಪ್ಪನವರು ಅಂದು ಕಳುಹಿಸಿದ ಸಂಸ್ಕೃತ ಪ್ರೇಮದ ಒಂದು ಸಂದೇಶ ಹೀಗಿತ್ತು.
” ಭಾರತದ ಎಲ್ಲಾ ಭಾಷೆಗಳಿಗೂ ಸಂಸ್ಕೃತ ಮಾತೃ ಸ್ಥಾನದಲ್ಲಿದೆ. ಕನ್ನಡವೂ ಸೇರಿದಂತೆ ಭಾರತದ ಭಾಷೆಗಳ ಶಬ್ಧ ಸಂಪತ್ತು ಸಂಸ್ಕೃತದಿಂದಲೇ ಬಂದಿದೆ. ಕನ್ನಡ ಶಬ್ಧಕೋಶದ ಶೇ 60 ರಷ್ಟು ಶಬ್ಧ ಸಂಪತ್ತು ಸಂಸ್ಕೃತದ್ದಾಗಿದೆ”. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಂದು ಭೈರಪ್ಪನವರ ಈ ಸಂದೇಶಾಮೃತವನ್ನು ಕೇಳಿ ನಮ್ಮ ಯಾವೊಬ್ಬ ರಾಜಕಾರಣಿಯಾಗಲೀ, ಭಾಷಾ ಪಂಡಿತರಾಗಲೀ, ಪ್ರಜ್ಞಾವಂತರಾಗಲೀ ಅಥವಾ ನಮ್ಮ ಸೋಷಿಯಲ್ ಮೀಡಿಯಾದಲ್ಲಿ ಈಗ ಅಬ್ಬರಿಸುತ್ತಿರುವ ಬಹುತೇಕ ಕನ್ನಡಿಗರಾಗಲೀ ಈ ಬಗ್ಗೆ ಸಾಸಿವೆಯಷ್ಟೂ ಸೊಲ್ಲೆತ್ತಲಿಲ್ಲ !! ಕನ್ನಡಕ್ಕೆ ಯಾವ ಭಾಷೆಯ ಯಮಾನಿಕೆಯೂ ಇಲ್ಲವೆಂದು ಇಂದು ರೌದ್ರಾವತಾರ ತಾಳಿರುವ ಅನೇಕರು ಅಂದು ಕನ್ನಡದ್ದೇನಿಲ್ಲ, ಇಲ್ಲಿರುವ ಮುಕ್ಕಾಲು ಭಾಗ ಎಲ್ಲವೂ ಸಂಸ್ಕೃತದ್ದೇ…. ಎಂದು ಭೈರಪ್ಪನವರು, ಅದೂ ಸಾಹಿತ್ಯ ಸಮ್ಮೇಳನದ ಸಂದೇಶದಲ್ಲೇ ಹೇಳಿದಾಗ ಎಲ್ಲರೂ ದಿವ್ಯಮೌನಕ್ಕೆ ಶರಣಾಗಿದ್ದರು.!
ಅಂದರೆ ಕನ್ನಡದ ಮೇಲಿನ ಸಂಸ್ಕೃತ ಸವಾರಿ ಬಗ್ಗೆ ಭೈರಪ್ಪನವರು ಹೇಳಿದ್ದು ಸರಿ ಅಂತಾನಾ…? ಅಥವಾ ನಮ್ಮವರ ಶಂಖದಿಂದ ಏನು ಬಂದರೂ ತೀರ್ಥ ಅಂತಾನಾ..?
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್
