‘ತನು ಕರಗದವರಲ್ಲಿ’ ಕೃತಿ ಪರಿಚಯ

ಲೇಖಕಿ ಡಾ. ಮಲ್ಲಿಕಾ ಘಂಟಿಯವರ ಆಯ್ದ ಲೇಖನಗಳ ಸಂಗ್ರಹದ ಪುಸ್ತಕವೇ ‘ತನು ಕರಗದವರಲ್ಲಿ’. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ತನು ಕರಗದವರಲ್ಲಿ
ಲೇಖಕರು: ಡಾ. ಮಲ್ಲಿಕಾ ಘಂಟಿ
ಗೌತಮ ಪ್ರಕಾಶನ ಬಳ್ಳಾರಿ
ಮುದ್ರಣದ ವರ್ಷ: ೨೦೦೦
ಪುಟಗಳು: ೨೧೨
ಬೆಲೆ: ರೂ. ೧೨೫

ತನು ಕರಗದವರಲ್ಲಿ ನಿರಂತರ ಒಡನಾಡುತ್ತಾ, ಬದುಕುವ ಪ್ರೀತಿ ಉಳಿಸಿಕೊಂಡ ತಮ್ಮಂತವರ ವಿಚಾರಗಳಿಗೆ ಒಂದು ಆಕಾರ ಕೊಡುವ ಪ್ರಯತ್ನಗಳೇ ಇಲ್ಲಿನ ಲೇಖನಗಳು ಎಂಬುದಾಗಿ ಅವರು ಹೇಳಿ ಕೊಂಡಿದ್ದಾರೆ. ಹಳೆಯ ಗಂಟನ್ನು ಬಿಚ್ಚಿ ಹೊಸ ಕೌದಿಯನ್ನು ಹೊಲಿದು ಹೇಗಿದೆ? ಎಂದು ಕೇಳಿದಂತಿದೆ ಎಂದು ಅವರು ತಮ್ಮ ಲೇಖನಗಳ ಬಗ್ಗೆ ವ್ಯಾಖ್ಯಾನಿಸಿದ್ದಾರೆ.

ಅಂದರೆ ನಮ್ಮ ಸಮಾಜದಲ್ಲಿ ಸ್ತ್ರೀ -ಪುರುಷರ ನಡುವೆ ತಲೆ ತಲಾಂತರಗಳಿಂದ ಬೆಳೆದು ಬಂದ ತಾರತಮ್ಯದ ಕುರಿತ ಚರ್ಚೆಯೇ ಇಲ್ಲಿನ ಲೇಖನಗಳ ಪ್ರಧಾನ ಅಂಶ. ಯಾವ ಧರ್ಮಗಳೂ ಮಹಿಳೆಯನ್ನು ಸಂಪೂರ್ಣ ವಾಗಿ ಎಬ್ಬಿಸಿ ನಿಲ್ಲಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಮುಕ್ತ ಅವಕಾಶ ನೀಡಲಿಲ್ಲ ಎಂಬುದು ಭಕ್ತಿಪಂಥದ ವಚನಕಾರ್ತಿಯರಾದ ಅಕ್ಕ ಮಹಾದೇವಿ, ಹೊನ್ನಮ್ಮ,ರಾಯಮ್ಮ,ಮುಂತಾದ ಮಹಿಳೆಯರ ಕಾಲದಲ್ಲಿಯೇ ಸ್ತ್ರೀ ಪರ ನಿಲುವನ್ನು ನಾವು ಕಾಣುತ್ತೇವೆ.

ಮನುಷ್ಯ ಸ್ವಭಾವದ ವಿಕೃತಿಯನ್ನು ಸ್ತ್ರೀಗೆ ಆರೋಪಿಸಿಯೇ ಬಹುಪಾಲು ವಚನದಲ್ಲಿದ್ದುದನ್ನು ಅವರು ಪ್ರಶ್ನಿಸಿದ್ದಾರೆ. ಕುವೆಂಪು ಅವರ ಕೃತಿಗಳಲ್ಲಿ ಮಹಿಳಾ ಸಂವೇದನೆಗಳು ಎನ್ನುವ ಲೇಖನದಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ ಬರುವ ಇಂತಹ ಅನೇಕ ಸಂಕೀರ್ಣ ಸಂದರ್ಭಗಳನ್ನು ಪ್ರಸ್ತಾಪಿಸಿದ್ದಾರೆ.

ಪುರಾಣ ಪ್ರಸಿದ್ಧ ಮಹಿಳೆಯರು ಕುವೆಂಪುರವರ ರಾಮಾಯಣ ದರ್ಶನಂ ಕೃತಿಯಲ್ಲಿ ಮಾನವೀಯ ಸ್ಪರ್ಶದಿಂದ ಜೀವಗೊಂಡಿದ್ದಾರೆ ಎನ್ನಬಹುದು. ಸರ್ವಕ್ಕೂ ಕಾರಣಿಭೂತಳಾದ ಹೆಣ್ಣನ್ನು ಮುಕ್ತವಾಗಿ ಪ್ರಶಂಸಿಸುತ್ತಾರೆ. ಕೈಕೆ, ವಿಭೀಷಣನ ಮಗಳು ಅನಲೆ ಹಾಗೂ ಮಂಥರೆಯಂತವರನ್ನೂ ಕುವೆಂಪು ಮನುಷ್ಯರಲ್ಲಿಯ ಗುಣಗಳ ಗಣಿಯಾಗಿ ನೋಡುತ್ತಾರೆ. ಇದು ಯಾವ ರಾಮಾಯಣದಲ್ಲಿಯೂ ಇಲ್ಲ.

ಮೂಲ ರಾಮಾಯಣದಲ್ಲಿ ನಿಂದೆಗೆ ಮತ್ತು ರಾಮನಂತಹ ಮಹಾತ್ಮನ ದುಃಖಕ್ಕೆಲ್ಲ ಕಾರಣಳಾದ ಖಳ ನಾಯಕಿ, ಹೊಟ್ಟೆ ಕಿಚ್ಚಿನ, ಅಲ್ಪಬುದ್ಧಿಯ ಹೆಣ್ಣಾಗಿ ಕಾಣಿಸಿಕೊಂಡ ಪಾಪಿ ಮಂಥರೆಗೆ, ವಿಧಿಯ ಕೈಯಲ್ಲಿ ಸಿಕ್ಕ ವೀಣೆಯನ್ನು ಬಾರಿಸುವ ಬೆರಳು ಎಷ್ಟೇ ನೊಂದರೂ, ನೋವಾದರೂ ಅದರಿಂದ ಸುಂದರ -ಮಧುರ ರಾಗವೇ ಹೊರಡುವಂತೆ ನಿನ್ನ ಕಾರಣಕ್ಕೆ ಇದು ಬೃಹತ್ ಗೀತೆಯಾಯಿತು. ಎನ್ನುವುದರಲ್ಲಿ ಕವಿಯ ಧೋರಣೆ ಎಂತಹದ್ದು ಎಂದು ಅರ್ಥವಾಗುತ್ತದೆ.

ಇನ್ನು ಶರಣ ಬಸವಣ್ಣನವರ ಕಾಲದಲ್ಲಿ ದೈಹಿಕ ಅಂಗ ರಚನೆಯ ಕಾರಣಕ್ಕಾಗಿ ಹೆಣ್ಣು -ಗಂಡು ಎಂಬ ಭೇದ ಮೂಡಿದ್ದಲ್ಲವೆಂಬುದನ್ನು ಅರಿತು ಸ್ತ್ರೀಯರಿಗೂ ಅಧ್ಯಾತ್ಮದ ನೆಲೆಯಲ್ಲಿ ಸಮಾನತೆಯನ್ನು ಒದಗಿಸುತ್ತಾರೆ. ಅನ್ಯರ ಆಶ್ರಯದಲ್ಲಿ ಬದುಕುವ ಹೆಣ್ಣಿಗೆ ಸಾಮಾಜಿಕ ಭದ್ರತೆಯನ್ನು ತಂದು ಕೊಡುವ ನಿಟ್ಟಿನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸುತ್ತಾರೆ.

ಹೆಣ್ಣನ್ನು ಕಟ್ಟಿ ಹಾಕಿದ ಧರ್ಮದ ಕಟ್ಟುಗಳನ್ನು ಕಿತ್ತು ಹಾಕದೇ ಸಾಮಾಜಿಕ ಜೀವನದಲ್ಲಿ ಬದಲಾವಣೆಯನ್ನು ತರಲಾಗದು ಎನ್ನುವಷ್ಟರ ಮಟ್ಟಿಗೆ ಧರ್ಮ ಭಾರತೀಯರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಅನಾದಿ ಕಾಲದಿಂದಲೂ ಎಷ್ಟೋ ಸ್ತ್ರೀಯರು ಪುರುಷ ಚಕ್ರಾಧಿಪತ್ಯದಡಿಯಲ್ಲಿ ಸಿಕ್ಕು ಶೋಷಣೆಗೊಳಗಾಗಿ ಅನುಭವಿಸಿದ ನೋವಿನ ಧ್ವನಿಗಳಿವೆ.

ಹಾಗೆಯೇ ಗುಲಾಮಗಿರಿಯಲ್ಲಿ ನರಳಿದ ಪುರುಷ ವರ್ಗವೂ ಇದೆ. ಇದಕ್ಕಾಗಿ ಪ್ರತಿಭಟಿಸಿ ಬಂಡಾಯವೆದ್ದವರೂ ಇದ್ದಾರೆ. ಹೆಣ್ಣಿಗೂ ಸಮಾನ ವಿದ್ಯೆ ಉದ್ಯೋಗ ಸ್ಥಾನಮಾನ ದೊರೆಯ ಬೇಕು. ಒಟ್ಟಾರೆ ಸ್ತ್ರೀವಾದಿ ಪ್ರಜ್ಞೆ ಜಾಗೃತವಾಗಿ, ಸ್ತ್ರೀಯರಿಗೆ ಆತ್ಮಗೌರವದಿಂದ ಬದುಕುವ ಸ್ವಾತಂತ್ರ್ಯ ಸಿಕ್ಕ ಬೇಕು ಎನ್ನುವುದೇ ಇಲ್ಲಿನ ಬಹಳಷ್ಟು ಲೇಖನಗಳ ಆಶಯ ವಾಗಿದೆ ಎನ್ನಬಹುದು.

ಓದಲೇ ಬೇಕಾದ ಅರ್ಥ ಪೂರ್ಣ ಕೃತಿ ಇದು.


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading