ಈಗ ಇಬ್ಬರೂ ಒಂದೇ ಕಡೆ ಸನಿಹವೇ ಇದ್ದರೂ ಮಾತಿಲ್ಲ ಕತೆಯಿಲ್ಲ, ಮದುವೆಯಾಗದಿದ್ದರೇ ಚಂದ ಇತ್ತು ನೋಡು..!! ಕವಿ ಡಾ.ಲಕ್ಷ್ಮಣ ಕೌಂಟೆ ಅವರು ರಚಿಸಿದ ಇಂದಿನ ಮದುವೆ ಬಾಂಧವ್ಯದ ಕುರಿತು ಕವನದಲ್ಲಿ ವಾಸ್ತವ ಚಿತ್ರಣ. ತಪ್ಪದೆ ಮುಂದೆ ಓದಿ…
ಹೇಳು..!!
ವಿವಾಹ ಪೂರ್ವದಲ್ಲಿ
ಪರಸ್ಪರ ಪ್ರೀತಿಸಿದ್ದೇ ಹೆಚ್ಚು
ಜಗಳವಾಡಿದ್ದು ತೀರ ಕಡಿಮೆ…
ಆಗಾಗ ಮುನಿಸಿಕೊಂಡಿರಲೂ ಬಹುದು
ಕೆಲವು ಕಾರಣಗಳಿಗಾಗಿ
ಅದೂ ನೀನೇ ನಾನಂತೂ ಅಲ್ಲ..!!
ಹೇಳಿಯೂ ಬಾರದೇ ಇರುವುದಕ್ಕಾಗಿ
ಮೊಬೈಲ್ ಸ್ವಿಚ್ ಆಫ್ ಇರಿಸಿದ್ದಕ್ಕಾಗಿ
ಸ್ಟೇಟಸ್ ನಲ್ಲಿ
ಸಿನಿಮಾ ನಟಿಯರ ಭಾವಚಿತ್ರ ಇರಿಸಿದ್ದಕ್ಕಾಗಿ..
ಮದುವೆಯ ಪ್ರಸ್ತಾವನೆ ಮುಂದೂಡಿದ್ದಕ್ಕಾಗಿ..
ನಿನ್ನ ಮುನಿಸು
ಎಲ್ಲ ಇಂತಹ ಚಿಲ್ಲರೆ ಕಾರಣಗಳಿಗಾಗಿ..!!
ಅಡ್ಡಿ ಆತಂಕಗಳೆಲ್ಲ ನಿವಾರಣೆಯಾಗಿ
ನನ್ನವರು ನಿನ್ನವರು ನೆಂಟರಿಷ್ಟರಾಗಿ
ನಮ್ಮ ಮಿಲನಕ್ಕೆ ಒಪ್ಪಿಗೆ ಇತ್ತ ಮೇಲೆ
ವೈವಾಹಿಕ ಬಂಧನದೊಳಗೆ ಸಿಲುಕಿದ ಆನಂತರ
ವೈಚಿತ್ರ್ಯವೆಂದರೆ
ನೀನು ಪ್ರೀತಿಸಿದ್ದು ಕಡಿಮೆ, ಕಲಹವಾಡಿದ್ದೇ ಹೆಚ್ಚು..!!
ಈಗೀಗ ಮಾತು ಮಾತಿಗೂ ಸಿಡುಕುತ್ತಿ..!!
ಮೆಲ್ಲಗೆ ಮಾತನಾಡಿ ಒತ್ತಿಗೆ ಬಂದು ಒಲವು ಸೂಸಿದರೂ
ತಟ್ಟನೆ ಸಿಡುಕಿ
ಮನದೊಳಗೆ ಮೂಡಿದ ಬಯಕೆಗಳೆಲ್ಲ ಮುದುಡಿ ಬಾಡುವಂತೆ..
ಹಾವು ಕಂಡ ಮುಂಗೂಸಿಯಂತೆ ಮುಖ ಸಿಂಡಿರುಸುತ್ತಿ..!!
ನನ್ನ ನಯ ವಿನಯಗಳು ಒಲವಿನ ಕೋರಿಕೆಗಳು
ನಿನ್ನ ಮೇಲೆ ಉಕ್ಕಿ ಹರಿಯುವ ಪ್ರೀತಿ
ಎಲ್ಲ ಎಲ್ಲವೂ ನಿನಗೆ ತೋರಿಕೆಯವುಗಳೇ ಅನ್ನಿಸುತ್ತವೆ..
ಇಳಿಯುತ್ತಿ ನನ್ನೊಂದಿಗೆ ಕದನಕ್ಕೇ!!
ಇದೇನಾಗುತ್ತಿದೆ ಚಿನ್ನ..?
ಮದುವೆಯಾಗದಿದ್ದರೇ ಚಂದ ಇತ್ತು ನೋಡು..!!
ಒಂದೇ ಒಂದು ದಿನ ಕಾಣದೇ ಇದ್ದರೂ
ಅದೇನೋ ವಿಚಿತ್ರ ಚಡಪಡಿಕೆ ಕಳವಳ ಸಂಕಟ ..!!
ಈಗ ಇಬ್ಬರೂ ಒಂದೇ ಕಡೆ
ಸನಿಹವೇ ಇದ್ದರೂ ಮಾತಿಲ್ಲ ಕತೆಯಿಲ್ಲ
ಮುಸಿ ಮುಸಿ ನಗು, ಪಿಸು ಪಿಸು ನುಡಿಗಳು
ಉಹು.. ಇಲ್ಲವೇ ಇಲ್ಲ..!!
ವಿವಾಹ ಪೂರ್ವದಲ್ಲಾದರೋ
ನಾವು ಬಯಸಿದ್ದೇನು..?
ಇದೇ ತರಹದ ವಾಸವಲ್ಲವೇ..?
ಈಗದು ದೊರೆತಿದೆಯಾದರೂ
ಮನಸ್ಸೇ ಇಲ್ಲ ಅನುಭವಿಸುವುದಕ್ಕೆ..
ಬಿಡು ಚಿನ್ನಾ ಮುನಿಸು ತೊರೆ
ಒಂದಾಗುವಾ ಒಲವಿನೊಂದಿಗೆ
- ಡಾ. ಲಕ್ಷ್ಮಣ ಕೌಂಟೆ
