‘ಕೂಡಿಸಬೇಕು ಕಳೆಯಬೇಕು ಸಂಬಂಧಗಳ ಎಳೆಗಳ ಆದರೂ ಇರುವ ವೃತ್ತದೊಳಗೆ ಸುತ್ತಿ’…ನಾಗರಾಜ ಬಿ.ನಾಯ್ಕ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಎಷ್ಟು ಕಿಟಕಿಗಳು ಮನೆಗೆ
ಎಂದರೆ ಲೆಕ್ಕಿಸಬಹುದು
ಎಷ್ಟು ಕಿಟಕಿಗಳು ಮನಸ್ಸಿಗೆ
ಎಂದರೆ ನೂರು ಸಾವಿರ
ಅದರಾಚೆಗೆ ಇನ್ನೊಂದಿಷ್ಟು
ನೋಟಗಳಲ್ಲಿ ನಗು
ನಗುವಿನಾಚೆ ಬದುಕು ಬವಣೆ
ಸಮಾಧಾನ ಸಮೀಕರಣಗಳ
ಸಾಮೀಪ್ಯವಾದರೂ ಗಣಿತ
ಅಲ್ಲ ಬದುಕು
ಕೂಡಿಸಬೇಕು ಕಳೆಯಬೇಕು
ಸಂಬಂಧಗಳ ಎಳೆಗಳ
ಆದರೂ ಇರುವ
ವೃತ್ತದೊಳಗೆ ಸುತ್ತಿ
ನಮ್ಮ ಪರಿಧಿಯ ಗುರುತಿಗೆ
ಅಚ್ಚರಿಗೆ ಸಾಕ್ಷಿಯಾಗಿಸಬೇಕು
ಮಾತಿನಿಂದ ಕೃತಿಯಿಂದ
ಕಿಟಕಿಯೊಳಗೆ ಬದುಕಿಗೆ
ಅದರಾಚೆಗೂ ಇದೆ
ನೋಟಗಳ ಒಳಗೆ ಬಂಧುತ್ವ
ಅರ್ಥದ ಸೋತ ನೆರಿಗೆಗಳು
ಮತ್ತೆ ಒತ್ತಾಸೆಗಳು
ಆಶ್ಚರ್ಯ ಕಾರ್ಯ ಕಾರಣಗಳು
ಏನಿಲ್ಲವೆಂದರೂ
ಮೌನದೊಳಗೆ ತರೇವಾರಿ
ಪಯಣಗಳು ಪ್ರಯಾಸಗಳು
ಆದರೂ ಒಂದು ಕಿರುನಗು
ಮನಸೊಳಗೆ
ಬದುಕೊಳಗೆ ಜೀವಂತವಾಗಿ
ಇರಬೇಕಂತೆ ಅದರಷ್ಟಕ್ಕೆ…
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
