ಹಿರಿಯ ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಹರಿಣ ಜೋಡಿಗಳು ದಟ್ಟ ಕಾಡಿನೊಳ್
ಮರಿಯ ಸಂಗಡವೆ ತಾವು ಕೂಡಿಕೊಂ
ಡಿರಲು ಕಾತರದೊಳೀಕ್ಷಿಸುತ್ತಿರಲ್
ಸರಳ ಸುಂದರ ಕುಟುಂಬ ಕಂಡೆ ನಾ
ಮರಳಿ ಕಾಲನುರುಳುತ್ತ ಬಂದಿರಲ್
ವರುಣನಾಗಮನದಿಂದ ತೋಷಿಸೋ
ಧರಣಿಯಂಬಿಕೆಯ ಗರ್ಭ ಸೀಳುತಾ
ಗರಿಕೆ ಮೂಡಿರಲು ಮೇವು ದಕ್ಕಿತೈ
ಪರಮ ಭೂರಮೆಯ ಬಾಹು ಬಂಧದೊಳ್
ಧರೆಯೊಳೀಪರಿಯಲಾಡೊ ಜಿಂಕೆಗಳ್
ಕರಿಯ ಮೇಘಗಳ ವಾರಿ ಧಾರೆಯೊಳ್
ಗರಿಯ ಬಿಚ್ಚಿದ ಮಯೂರ ನರ್ತನಂ
ಸಿಡಿಲ ಸದ್ದಿಗೆ ಸರಾಗ ಚಿಮ್ಮಿತೈ
ಗಡಿಯ ಮೀರಿ ಹೊರಗೋಡಿ ಬಂದಿತೈ
ಮಡುವ ತುಂಬುತ ವಿರಾಜಿಸುತ್ತಿರಲ್
ಮಡಿಲ ಸೇರುತಿದೆ ಭೂಮಿ ಗರ್ಭದೊಳ್
- ಬಿಟ್ಟೀರ ಚೋಂದಮ್ಮ, ಬೆಂಗಳೂರು
