“ಈ ಹುಡುಗನ್ನ ಯಾಕ ಕರಕೊಂಡು ಬಂದೀದಿ ಬಸಪ್ಪಾ. ಈಗ ಆ ಸ್ವಾಮೇರು ಶಾಪಾ ಕೊಟ್ಟರ ಅಂವಾ ಹಾಳಾಗಿ ಹೊಕ್ಕಾನ. ನಿಮ್ಮ ಮನೀಗೂ ಇದು ಒಳ್ಳೇದು ಆಗೋದಿಲ್ಲ” ಎಂದು ಹೇಳಿ ಹೆದರಿಸಿ ಬಿಟ್ಟರು. ಆಗ ಅಯ್ಯನವರು “ಶಾಪಾ ಕೊಡೋದೆಲ್ಲಿ ಬಂತು ಈ ಬೆತ್ತ ತಗೊಂಡು ಎರಡು ಬಾರಸಿದರ ಇವನಿಗೆ ಬುದ್ದಿ ಬರತೈತೆ” ಎಂದು ಹೇಳುತ್ತಾ ಬಾಗಿ ಬೆತ್ತ ತೆಗೆದುಕೊಳ್ಳಬೇಕೆನ್ನುತ್ತಿರುವಂತೆಯೇ ಅವರಿಗಿಂತ ಮೊದಲು ಬಾಗಿ ಬೆತ್ತವನ್ನು ಕೈಗೆ ತೆಗೆದುಕೊಂಡು ನಾನು ಓಡಲಿಕ್ಕೆ ಶುರು ಮಾಡಿದೆ. ಮುಂದೇನಾಯಿತು ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೊರಗಲ್ಲ ವಿರೂಪಾಕ್ಷಪ್ಪ ಅವರ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣವನ್ನು ತಪ್ಪದೆ ಓದಿ…
ನಮ್ಮ ಊರಿನಲ್ಲಿ ಒಬ್ಬ ನಿರಾಭಾರಿ ಸ್ವಾಮಿ ಇದ್ದರು. ನಾನು ಸುಮಾರು ಹತ್ತು ಹನ್ನೆರಡು ವರ್ಷದವನಿರುವಾಗ ಅವರು ನಮ್ಮ ಊರಿನಲ್ಲಿದ್ದ ನೆನಪು. ಆತ ನಿರಾಭಾರಿ ಸ್ವಾಮಿಯೆಂದು ಯಾಕೆ ಹೇಳಬೇಕೆಂದರೆ ಅವರಿಗೆ ಸಂಸಾರವಿರಲಿಲ್ಲ. ಮನೆ ಮಠ ಒಂದೂ ಇರಲಿಲ್ಲ. ಅವರ ಕಾಯಕವೆಂದರೆ ನಮ್ಮ ಊರಿನಲ್ಲಿ ಬೆಳಗ್ಗೆ ಕಾಳಿನ ಭಿಕ್ಷೆ, ಹೊತ್ತೇರಿದ ಮೇಲೆ ಕಂತಿ ಭಿಕ್ಷೆ ಬೇಡುವುದು, ನಮ್ಮ ಊರಿನಲ್ಲಿದ್ದ ಒಂದು ಮಠದಲ್ಲಿ ಕುಳಿತು ಊಟಾ ಮಾಡುವುದು.ಇಷ್ಟು ಮಾತ್ರವಲ್ಲ, ಅವರು ಎರಡೂ ಹೊತ್ತು ನಮ್ಮ ಊರ ತುಂಬಾ ಅಡ್ಡಾಡಿ ಏಕ ವ್ಯಕ್ತಿ ಭಜನೆ ಮಾಡುತ್ತಿದ್ದರು. ಬೆಳಗ್ಗೆ ಆರು ಗಂಟೆಗೆ ಎದ್ದು ಸ್ನಾನಾ ಮಾಡಿ ಬರಿ ಮೈಯಿಂದ ಒಂದು ನಾಲ್ಕು ಸೂರಿನ ಹಾರ್ಮೋನಿಯಂ ಹಿಡಿದುಕೊಂಡು ಒಬ್ಬರೇ ಹಾಡುತ್ತಾ ಎಲ್ಲಾ ದೇವಸ್ಥಾನಗಳಿಗೆ ಭೆಟ್ಟಿ ಕೊಟ್ಟು ಮತ್ತೆ ಸ್ವಸ್ಥಾನವಾದ ತಾವು ಇರುತ್ತಿದ್ದ ಆ ಮಠಕ್ಕೆ ಹೋಗುತ್ತಿದ್ದರು. ಹೀಗೆ ಊರಲ್ಲಿ ಭಜನೆ ಮಾಡುತ್ತಾ ಬಂದಾಗ ನಮ್ಮ ಮನೆಯ ಮುಂದೆ ಅವರನ್ನು ನಿಲ್ಲಿಸಿ ಅವರ ಕಾಲಿಗೆ ಒಂದು ತಂಬಿಗೆ ನೀರು ಹಾಕಿ ಮನೆಯವರೆಲ್ಲಾ ಅವರ ಪಾದಗಳ ಮೇಲೆ ಬಿದ್ದು ತಮ್ಮನ್ನು ತಾವು ಪವಿತ್ರಗೊಳಿಸಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಮನೆಯ ಯಜಮಾನರು ಒಂದಾಣೆ ಎರಡಾಣೆ, ಅಥವಾ ಒಂದು ಬಿಲ್ಲಿಯನ್ನು ಕೈಯಲ್ಲಿ ಕೊಟ್ಟು ನಮಸ್ಕರಿಸುತ್ತಿದ್ದರು. ನಮ್ಮಂಥ ಹುಡುಗರು ಸುಮ್ಮನೇ ನಿಂತರೆ ಅವರೇ ನಮ್ಮನ್ನು ಕರೆದು ‘ಲೇ ಬಾಯಿಲ್ಲಿ ಕಾಲಿಗೆ ಸಣ ಮಾಡು’ ಎಂದು ಹೇಳಿ ನಮ್ಮಿಂದ ನಮಸ್ಕಾರ ಮಾಡಿಸಿಕೊಳ್ಳುತ್ತಿದ್ದರು. ಅವರಿಗೆ ನಾವು ಅಡ್ಡ ಬಿದ್ದರೆ ಅವರಿಗೆ ಖುಷಿಯಾಗುತ್ತಿತ್ತು. ಅವರು ಯಾರನ್ನೂ ಹಣಾ ಕೊಡಿರಿ ಎಂದು ಕೇಳುತ್ತಿರಲಿಲ್ಲ. ಒಮ್ಮೊಮ್ಮೆ ನಮ್ಮಂಥ ಹುಡುಗರಿಗೆ ಎರಡು ಹಳಕು ಸಕ್ಕರೆ ಕೊಡುತ್ತಿದ್ದುದರಿಂದ ನಾವು ಸಕ್ಕರೆಯ ಹಳಕು ಸಿಗಬಹುದೆಂಬ ಆಸೆಯಿಂದ ಮತ್ತೆ ಮತ್ತೆ ನಮಸ್ಕಾರ ಮಾಡುತ್ತಿದ್ದೆವು.
ಹೀಗೆ ನಮಸ್ಕಾರಾ ಮಾಡಿದ ನಂತರ ನಾವು ಅವರ ಹಿಂದೆ ಹಿಂದೆ ಚಪ್ಪಾಳಿ ತಟ್ಟುತ್ತಾ ಅಡ್ಡಾಡುತ್ತಿದ್ದೆವು. ಅವರ ಬೆನ್ನು ಹತ್ತಿ ಹೋದರೆ ಅವರು ಬೇಡವೆನ್ನುತ್ತಿರಲಿಲ್ಲ. ಅವರು ಹಾಡಿದಂತೆ ನಮಗೆ ಹಾಡಲಿಕ್ಕೆ ಬರುತ್ತಿರಲಿಲ್ಲ. ಚಪ್ಪಾಳಿ ತಟ್ಟುವಾಗ ತಾಳ ತಪ್ಪಿದರೆ, ತಲೆಯ ಮೇಲೊಂದು ಬಡಿದು ಸುಮ್ಮನೆ ರ‍್ರಿ ಎಂದು ಸನ್ನೆ ಮಾಡುತ್ತಿದ್ದರು. ಅವರು ಊರು ಪ್ರವೇಶ ಮಾಡುವಾಗ ಒಬ್ಬರೇ ಇರುತ್ತಿದ್ದರೆ, ನಡು ಊರಲ್ಲಿ ಬಂದಾಗ ನಮ್ಮಂಥ ಪಿಳಿ ಬಂಟರೆಲ್ಲಾ ಸೇರುತ್ತಿದ್ದುದರಿಂದ ೩೦-೪೦ ಜನರಾಗಿರುತ್ತಿದ್ದೆವು. ಅವರು ವಾಸ್ತವ್ಯ ಮಾಡುತ್ತಿದ್ದ ಮಠದಲ್ಲಿ ಅವರಿಗೆ ಒಳ್ಳೆಯ ಬಿಜಿನೆಸ್ಸೂ ಇತ್ತು. ಊರ ಹೆಣ್ಣು ಮಕ್ಕಳು ಭವಿಷ್ಯ ಕೇಳಲಿಕ್ಕೆ ಅವರ ಹತ್ತಿರ ಬರುತ್ತಿದ್ದರು. ಭವಿಷ್ಯ ಕೇಳಲಿಕ್ಕೆ ಬಂದವರಿಗೆ ಇಷ್ಟೇ ಹಣ ಕೊಡಬೇಕೆಂದು ಅವರು ಪೀಡಿಸುತ್ತಿರಲಿಲ್ಲವಾದದ್ದರಿಂದ ಅವರು ಬಡವರಾಧಾರಿ ಸ್ವಾಮಿಯೆಂದು ಪ್ರಸಿದ್ಧರಾಗಿದ್ದರು. ಹಳ್ಳಿಯ ಜನರಿಗೆ ಇಂಥ ದೈನಂದಿನ ಪಂಚಾಂಗ ಹೇಳುವುದಕ್ಕೆ ಒಬ್ಬರು ಬೇಕಾಗಿದ್ದುದರಿಂದ ಜನರೆಲ್ಲಾ ಅವರ ಮೇಲೆಯೇ ಅವಲಂಬಿತರಾಗಿದ್ದರು. ಯಾರಿಗಾದರೂ ಆರಾಮವಿಲ್ಲವೆಂದರೆ ಚಿಕ್ಕ ಪುಟ್ಟ ಔಷಧಿಯನ್ನು (ಗಿಡ ಮೂಲಿಕೆಯ ಔಷಧಿ) ಅವರು ಕೊಡುತ್ತಿದ್ದರು.ಅವರ ಹೆಸರು ಅಡಿವೆಯಯ್ಯ ಕೋರುಧಾನ್ಯಮಠ. ಆದರೆ ಅವರನ್ನು ಭಜನೆಯ ಅಯ್ಯನವರು ಎಂದೇ ಜನ ಕರೆಯುತ್ತಿದ್ದರು. ಒಮ್ಮೊಮ್ಮೆ ಮೂಡು ಬಂದರೆ ನಮ್ಮನ್ನೆಲ್ಲಾ ಕೂಡ್ರಸಿಕೊಂಡು ಕಥೆ ಹೇಳುತ್ತಿದ್ದರು. “ಅಜ್ಜಾ ಅವರ ನಿಮ್ಮ ಹೆಸರು ಕೋರುಧಾನ್ಯಮಠ ಅಂತಾ ಐತಲ್ಲ ಹಂಗ ಅಂದ್ರೇನ್ರಿ” ಎಂದು ಕೇಳಿದರೆ; “ನೀವು ಬೆಳೆಯುವ ಬೆಲೆಯಲ್ಲಿ ಜಂಗಮರಾದ ನಮ್ಮ ಪಾಲು ಇರುತ್ತದೆ. ಆ ಪಾಲಿಗೆ ಕೋರುಧಾನ್ಯವೆಂದು ಹೇಳುತ್ತಾರೆ. ಅದಕ್ಕೆ ಭಿಕ್ಷೆ ಎಂದು ಹೇಳುವಂತಿಲ್ಲ. ಅದು ಜಂಗಮರಾದ ನಮ್ಮ ಹಕ್ಕು. ಅದರ ಮ್ಯಾಲಿಂದ ನಮ್ಮ ಮನೆ ಅಡ್ಡ ಹೆಸರು ಕೋರುಧಾನ್ಯಮಠ ಆಗಿದೆ” ಎಂದು ಹೇಳುತ್ತಿದ್ದರು.

ಊರಲ್ಲೆಲ್ಲಾ ಲಿಂಗಾಯತರ ಮನೆಗಳಿದ್ದುದರಿಂದ ಮನೆ ಪೂಜೆ, ಪಾದ ಪೂಜೆ, ರುತುಮತಿಯಾದವಳನ್ನು ಎಬ್ಬಿಸುವ ಕಾರ್ಯ, ತೊಟ್ಟಿಲ ಕಾರ್ಯ, ಗಣಾರಾಧನೆ, ಕುಬುಸದ ಕಾರ್ಯ ಹೀಗೆ ಏನೇನೋ ಕಾರ್ಯಗಳು ಬರುತ್ತಿದ್ದುದರಿಂದ ಅವರಿಗೆ ಯಾವುದೇ ತೊಂದರೆ ಇಲ್ಲದೆ ಹೊಟ್ಟೆ ತುಂಬುತ್ತಿತ್ತು.
ಅವರ ಹೇಳಿಕೆ ನೂರಕ್ಕೆ ನೂರು ನಿಜವಾಗುತ್ತದೆಯೆಂದೂ ನಮ್ಮ ಊರವರು ಹೇಳಿಕೊಳ್ಳುತ್ತಿದ್ದುದರಿಂದ ಪಕ್ಕದ ಹಳ್ಳಿಗಳಾದ ಕೋಳೂರು, ಲಕಮಾಪುರ, ಹಂದ್ರಾಳು, ಹಣವಾಳು, ಹಲಗೇರಿ, ಕಾಟ್ರಹಳ್ಳಿಯ ಜನರೂ ಬಂದು ಅವರಿಗೆ ಅಡ್ಡ ಬಿದ್ದು ತಮ್ಮ
ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲಿಕ್ಕೆ ಪ್ರಯತ್ನಿಸುತ್ತಿದ್ದರು. ಆತ ತುಂಬಾ ಗಂಭೀರ ಸ್ವಭಾವದ ಮನುಷ್ಯನಾಗಿದ್ದ. ಆತ ನಕ್ಕದ್ದನ್ನೇ ನಾವು ನೋಡಿರಲಿಲ್ಲವೆಂದರೂ ಅಡ್ಡಿಯಿಲ್ಲ. ಈ ಕಾರಣಕ್ಕೆ ಬಹಳ ಜನರು ಅವರಿಗೆ ಹೆದರುತ್ತಿದ್ದರು. ಅವರಲ್ಲಿ ಬಹಳ ಸತ್ವ ಇದೆಯೆಂದೂ, ಅವರೇನಾದರೂ ಶಾಪ ಕೊಟ್ಟರೆ ನಮಗೆ ಒಳ್ಳೆಯದಾಗುವುದಿಲ್ಲವೆಂದೂ ಜನ ಆಡಿಕೊಳ್ಳುತ್ತಿದ್ದರು. ಒಂದು ಸಲ ನಮ್ಮ ಮನೆಗೂ ಅವರನ್ನು ಬರ ಮಾಡಿಕೊಳ್ಳುವ ಪ್ರಸಂಗ ಬಂತು. ನಮ್ಮ ಮನೆಯ ಪಕ್ಕದಲ್ಲಿ ನಾವು ಒಂದು ಹೊಸ ಮನೆ ಕಟ್ಟಿಸಿದ್ದೆವು. ಆ ಮನೆಯ ಪೂಜೆಗೆ ಅವರನ್ನು ಕರೆದು ಪಾದ ಪೂಜೆ ಮಾಡಬೇಕೆಂದು ಅವರಿಗೆ ಬಿನ್ನಹ ಮಾಡಲಿಕ್ಕೆ ನಮ್ಮ ದೊಡ್ಡಪ್ಪನವರು ಹೊರಟಿದ್ದರು. ಮನೆಯಲ್ಲಿ ಹಬ್ಬವೆಂದರೆ ನಮಗೆಲ್ಲಾ ಖುಷಿ. ದೊಡ್ಡವರು ಮಾಡುವ ಕಾರ್ಯದಲ್ಲಿ ನಾವೂ ಭಾಗಿಗಳಾಗಿ ಅಡ್ಡಾಡುತ್ತಿದ್ದೆವು.
ನಮ್ಮ ದೊಡ್ಡಪ್ಪನವರು ಆ ಭಜನೆಯ ಅಯ್ಯನವರಿಗೆ ಭಿನ್ನಹ ಮಾಡಲಿಕ್ಕೆ ಹೊರಟಾಗ ನಾನೂ ಸಹ ಅವರ ಕೈಯಿಂದ ನನ್ನ ಕಿರು ಬೆರಳು ಹಿಡಿಸಿಕೊಂಡು ಅವರ ಹಿಂದೆ ಹೋದೆ. ನಮ್ಮ ಊರು ಎಂದರೆ ಈಚಲು ಗಿಡಗಳಿಂದ ಸುತ್ತುವರಿದ ಊರು. ಹೀಗಾಗಿ ಮಳೆಗಾಲ ಬಂದರೆ ನಮ್ಮ ಮನೆಗಳಿಂದ. ಮನೆಯ ಗೋಡೆಗಳಿಂದ ನೀರು ಜಿನುಗುತ್ತಿತ್ತು. ಅಂದರೆ ಊರಿಗೆ ಊರೇ ಕೊಳಚೆ ಪ್ರದೇಶ. ಬೆಳಿಗ್ಗೆ ಬೆಳಿಗ್ಗೆ ಭಜನೆಯ ಸ್ವಾಮಿಗಳು ಭಜನೆ ಮಾಡುತ್ತಾ ಊರಲ್ಲಿ ಬಂದಾಗ ನಾವು ಅವರಿಗೆ ಭಿನ್ನಹ ಮಾಡಲಿಕ್ಕೆ ಹೋಗಿದ್ದೆವು. ಮಸೀದೆಯ ಮುಂದೆ ಅವರು ಬರುತ್ತಿರುವಂತೆಯೇ ನಮ್ಮ ದೊಡ್ಡಪ್ಪನವರಿಗೆ ಆಗ ಅವರಿಗೆ ೬೦ಕ್ಕೂ ಮೇಲ್ಪಟ್ಟು ವಯಸ್ಸಾಗಿತ್ತು. ಅವರು ಕೈಮುಗಿದು “ ಈತಾ ನಮ್ಮ ಮಗಾ ಭಿನ್ನಾ ಮಾಡಾಕ ಬಂದಾನ. ಹೂಂ ಸಾಷ್ಟಾಂಗ ಹಾಕಿ ಬಿನ್ನಾ ಮಾಡಪಾ” ಎಂದರು ನಮ್ಮ ದೊಡ್ಡಪ್ಪನವರು. ನಾನು ಬಾಗಿ ಸ್ವಾಮಿಗಳ ಪಾದ ಮುಟ್ಟಿ ಹಣೆಗೆ ಹಚ್ಚಕೊಂಡು ಎದ್ದು ನಿಂತು ಈ ಹೊತ್ತು ನಮ್ಮ ಹೊಸಾ ಮನಿ ಪೂಜೆ ಐತ್ರಿ ಅಜ್ಜಾ ಅವರ ನೀವು ಬರಬೇಕು’ ಎಂದು ಮೊದಲೆ ಕಲಿಸಿ ಕೊಟ್ಟಂತೆ ಗಿಳಿ ಪಾಠ ಒಪ್ಪಿಸಿ ಸರಿದು ಹಿಂದಕ್ಕೆ ನಿಂತೆ.
ಆ ಅಯ್ಯನವರಿಗೆ ಕೆಂಡಾ ಮಂಡಲಾ ಸಿಟ್ಟು ಬಂದು ಬಿಟ್ಟಿತು.ಕೈಯಲ್ಲಿದ್ದ ಬೆತ್ತವನ್ನು ನೆಲಕ್ಕೆ ಕುಟ್ಟಿ “ ನಿಮ್ಮಂಥಾ ಅನಾಚಾರಿಗಳ ಮನೆಗೆ ಬರೋದಿಲ್ಲ” ಎಂದು ಬಿಡಬೇಕೆ?
ನಮ್ಮ ದೊಡ್ಡಪ್ಪ ಸಮಾಧಾನದಿಂದ “ ಯಾಕ್ರಿ ಅಜ್ಜಾರಾ ಹಂಗ್ಯಾಕ ಹೇಳ್ತೀರಿ.” ಎಂದು ಕೇಳಿದಾಗ;
“ನೀನು ಯಜಮಾನ ಬಂದ್ರೂ ಈ ಅರಿಲಾರದ ಹುಡುಗನ ಕಡಿಂದಾ ಸಾಷ್ಟಂಗಾ ಹಾಕಸತೀದಿ. ಹೋಗ್ಲಿ ಅಂವಗ ಸಾಷ್ಟಾಂಗಾ ಹ್ಯಾಂಗ ಹಾಕಬೇಕು ಅನ್ನೋದನ್ನಾದರೂ ಕಲಿಸಿಕೊಂಡು ಬರಬೇಕು. ಬರೋದಿಲ್ಲ ಹೋಗು. ” ಎಂದು ಮತ್ತೆ ಶಿವ ಶಿವಾ ಶಿವ ಶಿವಾ ಶಿವಯೆನ್ನಬೇಕು ‘ಎಂದು ಹಾಡುಹೇಳುತ್ತಾ ತಮ್ಮ ಭಜನೆಯನ್ನು ಶುರು ಮಾಡಿಕೊಂಡು ಹೊರಟರು.
ನಮ್ಮ ದೊಡ್ಡಪ್ಪ ಅವರನ್ನು ಅಡ್ಡ ತರುಬಿ “ ಯಾಕ್ರಿ ಬುದ್ಧಿ ಹಂಗ್ಯಾಕ ಹೇಳ್ತೀರಿ. ನಮ್ಮ ಮನ್ಯಾಗ ನಿಮ್ಮ ಪಾದ ಪೂಜಾ ಇಟಗೊಂಡೀವಿ ರ‍್ರೆಪಾ” ಎಂದು ಅಂಗಲಾಚಿದರು.
“ಬಸಪ್ಪಾ ನೀನು ತಪ್ಪು ಮಾಡೀದಿ. ಇಂಥಾ ಸಣ್ಣ ಮಕ್ಕಳಿಗೆ ನಡಾವಳಿ ಕಲಸಬೇಕು. ಸಾಷ್ಟಾಂಗ ಅಂದ್ರ ಸ-ಅಷ್ಟ ಅಂಗ. ದೇಹದೆಂಟು ಅಂಗಗಳಾದ, ಎರಡೂ ಪಾದ ಎರಡೂ ಮೊಳಕಾಲು ಎರಡೂ ಕೈ, ಹಣೆ ಮತ್ತು ಎದೆಯನ್ನು ನೆಲಕ್ಕೆ ಹಚ್ಚಿ ನಮಸ್ಕಾರಾ ಮಾಡಬೇಕು.ಇಂಥಾವು ಕಲಿಸದಿದ್ದರೆ ನೀವು ಲಿಂಗಾಯತರ ಅಲ್ಲಾ” ಎಂದು ಹೇಳಿ ಮತ್ತೆ ಶಿವ ಶಿವಾ ಶಿವ ಶಿವಾ ಶಿವಯೆನ್ನಬೇಕು ಶುರು ಮಾಡಿದರು.

ಫೋಟೋ ಕೃಪೆ : google
ಆಗ ನಾನು ನಮ್ಮ ದೊಡ್ಡಪ್ಪನ ಮುಂದೆ ಬಂದು ನಿಂತು “ ಇಲ್ಲಿ ನೋಡ್ರಿ ಅಜ್ಜಾರಾ ಇಲ್ಲಿ ರಾಡಿ ಐತೆ. ನಾನು ಈಹೊತ್ತ ಈ ಹೊಸಾ ಅಂಗಿ(ಹೊಸಾ ಮನಿ ಪೂಜಾದ ಸಲುವಾಗಿ ಹೊಲ್ಸಿದ್ದು) ಹಾಕ್ಕೆಂದು ಬಂದೀನಿ. ನೀವು ಹೇಳಿದ ಹಾಂಗ ಸಣ ಮಾಡಿದರ ಇದು ಎಲ್ಲಾ ರಾಡಿ ಆಗತ್ತ. ಬರಾಂಗ ಇದ್ರ ರ‍್ರಿ.ಇಲ್ಲಂದ್ರ ಬುಡ್ರಿ” ಎಂದು ದೊಡ್ಡಾಟದಲ್ಲಿ ಅಡ್ಡ ಸೋಗಿನವರು ಮಾತು ಹೇಳುವ ಹಾಂಗ ಒದರಿ ಬಿಟ್ಟೆ.
“ಲೇ! ಭಾಡ್ಕೋ!! ಬರ‍್ಲೆ ಇಲ್ಲಿ. ಎಷ್ಟು ಸೊಕ್ಕಲೆ ನಿನಗ” ಎಂದು ಆ ಅಯ್ಯನವರು ಹಲ್ಲು ಕಡಿದು ಕೈಯಲ್ಲಿದ್ದ ಬೆತ್ತವನ್ನು ಎದೆಯ ಮೇಲಿಟ್ಟು ನೂಕಿ ಬಿಟ್ಟರು. ಅವರು ನೂಕಿದ ರಭಸಕ್ಕೆ ಅವರ ಕೈಯ್ಯ ಬೆತ್ತದ ಜೊತೆಗೆ ನಾನೂ ಸಹ ಆ ಕೆಸರಿನಲ್ಲಿ ಬಿದ್ದು ಬಿಟ್ಟೆ.
ಯಾವ ಹೊಸಾ ಅಂಗಿ ರಾಡಿಯಾಗುತ್ತದೆಯೆಂದು ಹೇಳಿದ್ದೆನೋ ಆ ಅಂಗಿಯನ್ನು ಆ ಭಜನಿ ಅಯ್ಯನವರು ರಾಡಿಯಲ್ಲಿ ಅದ್ದಿ ತೆಗೆದು ಬಿಟ್ಟಿದ್ದರು. ನಾನು ಅಳುತ್ತಾ ಎದ್ದು ನಿಂತೆ. ಅದನ್ನು ನೋಡಿ ನಿಂತವರೆಲ್ಲಾ ಗೊಳ್ಳೆಂದು ನಗುತ್ತಾ ಅವರಿಗೆ ಸಮಾಧಾನಾ ಮಾಡಿ “ಏನ ಹುಡುಗ ಮುಂಡೇದು ತೆಪ್ಪ ಮಾಡೇತಿ ಹೊಟ್ಟಾö್ಯಗ ಹಾಕ್ಯಾಳ್ರಿ ಅಜ್ಜಾರಾ” ಎಂದು ಹೇಳಿದರೂ ಅವರ ಸಿಟ್ಟು ಕಮ್ಮಿಯಾಗಲಿಲ್ಲ.
“ಈ ಹುಡುಗನ್ನ ಯಾಕ ಕರಕೊಂಡು ಬಂದೀದಿ ಬಸಪ್ಪಾ. ಈಗ ಆ ಸ್ವಾಮೇರು ಶಾಪಾ ಕೊಟ್ಟರ ಅಂವಾ ಹಾಳಾಗಿ ಹೊಕ್ಕಾನ. ನಿಮ್ಮ ಮನೀಗೂ ಇದು ಒಳ್ಳೇದು ಆಗೋದಿಲ್ಲ” ಎಂದು ಹೇಳಿ ಹೆದರಿಸಿ ಬಿಟ್ಟರು. ಆಗ ಅಯ್ಯನವರು “ಶಾಪಾ ಕೊಡೋದೆಲ್ಲಿ ಬಂತು ಈ ಬೆತ್ತ ತಗೊಂಡು ಎರಡು ಬಾರಸಿದರ ಇವನಿಗೆ ಬುದ್ದಿ ಬರತೈತೆ” ಎಂದು ಹೇಳುತ್ತಾ ಬಾಗಿ ಬೆತ್ತ ತೆಗೆದುಕೊಳ್ಳಬೇಕೆನ್ನುತ್ತಿರುವಂತೆಯೇ ಅವರಿಗಿಂತ ಮೊದಲು ಬಾಗಿ ಬೆತ್ತವನ್ನು ಕೈಗೆ ತೆಗೆದುಕೊಂಡು ನಾನು ಓಡಲಿಕ್ಕೆ ಶುರು ಮಾಡಿದೆ. ಅಲ್ಲಿದ್ದವರಿಗೆಲ್ಲಾ ಇದೊಂದು ಮೋಜಿನ ವಿಷಯವಾಗಿ ನಗುತ್ತಾ ನಿಂತಿದ್ದರೆ ಹೊರತು, “ ಏ! ಹೋಗ್ರೋ ಹಿಡೀರೋ ಅವನ್ನ.ನನ್ನ ಬೆತ್ತಾ ತಗೊಂಡು ಹೊಂಟಾನ. ಹಿಡ್ದು ಕಸಗೊಂಡು ರ‍್ರೋ” ಎನ್ನುವ ಅಯ್ಯನವರ ಮಾತಿಗೆ ಯಾರೂ ಕಿವಿಗೊಡಲೇ ಇಲ್ಲ. ಒಂದು ಚಣದಲ್ಲಿನಾನು ನಮ್ಮ ಊರ ಕಲ್ಲಪ್ಪನ ಗುಡಿ ದಾಟಿ ಹೋಗಿ ಹೊರಳಿ ನೋಡಿದ. ಈಗ ಮರಳಿ ಹೋದರೆ ನನ್ನ ಮೈಮುರಿಯೆ ಬಡಿಯುತ್ತಾರೆಂದು ತಿಳಿದು ಈಚಲು ಬಿದ್ದು ಓಡಿ ಓಡಿ ಈಳಿಗರ ಪೆಂಟಿಯ ವರೆಗೆ ಹೋಗಿ ವಿಶ್ರಾಂತಿ ಪಡೆದೆ.
ಆದರೆ ಅವರ ಶಾಪ ತಟ್ಟಲಿಲ್ಲ. ಅಪ್ಪನ ಶಾಪ ತಟ್ಟಿದ್ದಂತೂ ಸುಳ್ಳಲ್ಲ. ಯಾಕಂದರೆ ರಾತ್ರಿ ಮನೆಗೆ ಬಂದ ಕೂಡಲೇ ನಮ್ಮ ಅಪ್ಪ ಬರಲು ತೆಗೆದುಕೊಂಡು ಮೈ ಮೇಲೆ ಬಾಸುಂಡೆ ಬರುವ ಹಾಗೆ ಬಡಿದು ಬಿಟ್ಟರು. ಅಂದು ಮನೆಯಲ್ಲಿ ಹೋಳಿಗೆ ಮಾಡಿದ್ದರೂ ಉಣ್ಣದೆ, ಹೊಸ ಅಂಗಿಯನ್ನೆಲ್ಲಾ ರಾಡಿ ಮಾಡಕೊಂಡು, ನಾನು ದು:ಖಿಸುತ್ತಾ ಕಟ್ಟೆಯ ಮೇಲೆ ಮಲಗಿ ನಿದ್ರೆ ಹೋಗಿ ಬಿಟ್ಟಿದ್ದೆ.

“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು
- ಗುಡಾರ – (ಭಾಗ ೩)ಪ್ರಾಮಾಣಿಕ ಹುಚ್ಚ – (ಭಾಗ ೪)
- ಹಳ್ಳಿಯ ನಾಟಕದ ಸೂಳೆಯ ಪಾತ್ರ – (ಭಾಗ ೫)
- ದೊಡ್ಡ ತಲೆಗೆ ಸಣ್ಣ ಮಾಲೆ – (ಭಾಗ ೬)
- ಉಪ್ಪಾರ ಮರಿಯಪ್ಪನ ಮಿಂಚುವ ಜಾತ್ರೆಯ ಅಂಗಿ – (ಭಾಗ ೭)
- ಹಾಲು ಕೊಟ್ಟವರ ನೆನಪಿನ ಲೋಕ – (ಭಾಗ ೮)
- ಬಬ್ರುವಾಹನನ ನಾಟಕದ ಕಥೆ – (ಭಾಗ ೯)
- ಬ್ಯಾಡಗಿ ಮೆಣಸಿನಕಾಯಿ ಮತ್ತು ಎಸ್.ಎಲ್.ಭೈರಪ್ಪನವರು – (ಭಾಗ ೧೦)
- ಕೊರಗಲ್ಲ ವಿರೂಪಾಕ್ಷಪ್ಪ – ಹಾವೇರಿ
