ಕರ್ನಾಟಕ ವಿದ್ಯುತ್ ನಿಗಮ ಮನೆ ಮನೆಗೂ ಬೆಳಕನ್ನು ನೀಡಿದೆ. ಬೆಳಕಿನ ಹಿಂದಿನ ಶ್ರಮ, ಕಷ್ಟಗಳನ್ನೂ ಅಲ್ಲಿಯೇ ಕೆಲಸ ಮಾಡಿದ್ದ ಶಿವಕುಮಾರ್ ಬಾಣಾವರ ಅವರು ತಮ್ಮ ಅನುಭವಗಳ ಸುರಳಿಯನ್ನು ಓದುಗರ ಮುಂದೆ ತಂದಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಹೆಮ್ಮೆಯ ಕಾಳಿನದಿ ಜಲವಿದ್ಯುತ್ ಯೋಜನೆಯ ಕೆಲಸಗಳೆಂದರೆ ಎಲ್ಲವೂ ಕರಾರುವಾಕ್ಕು. ಕೆಲಸದ ಸ್ಥಳಕ್ಕೆ ನಿಗದಿತ ವೇಳೆಗೆ ನಾವುಗಳು ಹೋದರೆ ಅಲ್ಲಿ ಗುತ್ತಿಗೆದಾರರ ಕಡೆಯವರು ಹಾಜರಿರುತ್ತಿದ್ದರು. ಅಲ್ಲಿನ ಲೋಪದೋಷಗಳನ್ನು ಗುತ್ತಿಗೆದಾರನ ಮ್ಯಾನೇಜರ್ ನಿಗೆ ಹೇಳುತ್ತಿದ್ದಂತೆಯೇ, ತನ್ನ ಕೆಳಗಿನವರಿಗೆ “ದೇಖೋ … ಆರ್ ಸಿ ಸಿ -೨ ಮೇ ದಸ್ ಲೇಬರ್ ಲಗಾವ್, ಫಿರ್ ಪ್ರೆಶರ್ ಶಾಫ್ಟ್ ಮೇ ರೇಲ್ ಕ್ಲೀನ್ ಕರ್ನೇಕೇಲಿಯೆ ಪಾಂಚ್ ಆದ್ಮಿ ಲಗಾವ್, ಮಾಲೂಮ್ ಹೋಗಯಾ… ಜಟಾ ಪಟ್ ಕಾಮ್ ಕರ್ನಾ… ಸಮ್ಜೇ…” ಅಂತ ಆದೇಶಿಸುತ್ತಿದ್ದ. ಕೂಲಿ ಕಾರ್ಮಿಕರೆಲ್ಲಾ ತಮಗೆ ಬೇಕಾದ ಸಾಮಾನು ಸರಂಜಾಮುಗಳನ್ನು ಹಿಡಿದು ಹೊರಡುತ್ತಿದ್ದರು. ಒಮ್ಮೆಯೂ ಹಿಂದಿರುಗಿ ನುಡಿದ ನೆನಪಿಲ್ಲ. ನಾವು ಹೇಳಿದ ಎಲ್ಲಾ ಕೆಲಸಗಳನ್ನೂ ಮಾಡಿ ಮುಗಿಸುತ್ತಿದ್ದರು. ಸುರಂಗದ ಕಲ್ಲಿನೊಳಗಿಂದ ನೀರು ಜಿನುಗಿ, ಜಿನುಗಿ ಅಂಟಿಕೊಂಡಿದ್ದ ಲವಣಾಂಶದ ಪದರ ಪದರಗಳನ್ನು ಸ್ವಚ್ಛಗೊಳಿಸುವುದಾಗಲೀ (lime deposit) , ಕಬ್ಬಿಣದ ಸರಳುಗಳಿಗೆ ಸರಿಯಾಗಿ ಬೈಂಡಿಂಗ್ ತಂತಿ ಕಟ್ಟದಿದ್ದರಾಗಲೀ, ಕಾಂಕ್ರೀಟ್ ಗ್ಯಾಂಟ್ರಿಯ ತಗಡುಗಳಿಗೆ ಆಯಿಲ್ ಲೇಪಿಸದೇ ಇದ್ದರಾಗಲೀ ಅಥವಾ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಸೂಚಿಸಿದರೂ ಚಕಾರವೆತ್ತದೇ ನಿರ್ವಹಿಸುತ್ತಿದ್ದರು. ಇದೇ ರೀತಿ ಕಾಂಕ್ರೀಟ್ ಮಿಶ್ರಣ ಮಾಡುವಾಗಲೂ ಗುತ್ತಿಗೆದಾರರು ಎಚ್ಚರ ವಹಿಸುತ್ತಿದ್ದರು. ೨೦ ಎಂ. ಎಂ. ಜಲ್ಲಿಯಲ್ಲಿ ಮಣ್ಣಿದ್ದರೆ ತೊಳೆಯಲಾಗುತ್ತಿತ್ತು. ಮರಳು ತೀರಾ ದಪ್ಪ ಅಥವಾ ಸಣ್ಣದಾಗಿದ್ದರೆ, ಜೆಲ್ಲಿಯಲ್ಲಿ ಫ್ಲೇಕಿನೆಸ್ ಇದ್ದರೆ ಗುಣನಿಯಂತ್ರಣ ವಿಭಾಗದವರ ನಿರ್ದೇಶನದಂತೆ ಅವುಗಳನ್ನೆಲ್ಲ ಬದಲಾಯಿಸಿ, ಬೇರೆಯೇ ತರುತ್ತಿದ್ದರು. ಒಮ್ಮೊಮ್ಮೆ ಗುತ್ತಿಗೆದಾರನ ಲೆಕ್ಕದಲ್ಲಿ ೫ ರಿಂದ ೧೦ ಕೆಜಿ ಸಿಮೆಂಟನ್ನು ಹೆಚ್ಚುವರಿಯಾಗಿ ಸೇರಿಸಿ ಕಾಂಕ್ರೀಟ್ ತಯಾರಿಸಲಾಗುತ್ತಿತ್ತು. ಹಾಗಾಗಿ ಗುಣಮಟ್ಟವನ್ನು ಕಾಯ್ದುಕೊಂಡೇ ಕೆಲಸ ಮಾಡಿಸುತ್ತಿದ್ದೆವು.
ಇವತ್ತಿನಷ್ಟು ಜನಸಂಖ್ಯಾ ಸ್ಪೋಟವಾಗಲೀ, ರಾಜಕೀಯವಾಗಲೀ, ವ್ಯವಹಾರ ಚತುರತೆಗಳಾಗಲೀ, ಮೋಸ, ವಂಚನೆಗಳಾಗಲೀ ಇಲ್ಲದ ಕಾಲ ಎಂದರೆ ಆಶ್ಚರ್ಯ ಪಡಬೇಕಿಲ್ಲ. ನೌಕರನಾಗಲೀ, ಅಧಿಕಾರಿಗಳಾಗಲೀ, ಅವರಲ್ಲಿದ್ದ ಕರ್ತವ್ಯ ನಿಷ್ಠೆಯನ್ನಂತೂ ಪ್ರಶ್ನಿಸುವಂತೆ ಇರಲಿಲ್ಲ. ದೇಶ ಕಾಯುವ ಸೈನಿಕರಂತೆ ಕಾರ್ಯವೆಸಗುತ್ಣಿದ್ದರು. ಎಲ್ಲರಲ್ಲೂ ಅದೆಂಥದೋ ಹುಮ್ಮಸ್ಸು. ನನಗೆ ತಿಳಿದಂತೆ ಲಂಚಕೊಟ್ಟಂತೂ ಯಾರೂ ಕೆಲಸಕ್ಕೆ ಸೇರಿಕೊಂಡಿರಲಿಲ್ಲ. ಓದಿಗೆ, ಪ್ರತಿಭೆಗೆ ಮಹತ್ವವಿತ್ತು. ಕೆಲಸ ಅರಸಿ ಹೊರ ರಾಜ್ಯಗಳಿಗೆ ಹೋಗಿದ್ದ ಅದೆಷ್ಟೋ ಇಂಜಿನಿಯರುಗಳು ಕರ್ನಾಟಕ ವಿದ್ಯುತ್ ನಿಗಮ ಸ್ಥಾಪನೆಯಾದ ನಂತರ ಅಲ್ಲಿ ರಾಜಿನಾಮೆ ನೀಡಿ ಇಲ್ಲಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದರು. ಉನ್ನತ ಮಟ್ಟದ ಅಧಿಕಾರಿಗಳಲ್ಲೂ ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ತುಂಬಿಕೊಂಡಿದ್ದರಿಂದಲೋ ಅಥವಾ ದುರಾಸೆಗೆ ಹಂಬಲಿಸದೇ ಇದ್ದುದರಿಂದಲೋ ಏನೋ ಲಂಚದ ವಾಸನೆ ಯಾರ ಬಳಿಯಲ್ಲೂ ಸುಳಿದಿರಲಿಲ್ಲ.

ಪ್ರತಿ ತಿಂಗಳು ನಾವು ಸಂಬಳ ಪಡೆಯುವ ಸಮಯಕ್ಕೇ ಗುತ್ತಿಗೆದಾರನಿಗೂ ಆತ ನಿರ್ವಹಿಸಿದ ಕೆಲಸಕ್ಕೆ ತಕ್ಕಂತೆ (ತಿಂಗಳಿಗೊಮ್ಮೆ) ಹಣ ಸಂದಾಯವಾಗಬೇಕಿತ್ತು. ನಮ್ಮಲ್ಲಿಗೆ ಗುತ್ತಿಗೆದಾರ ಬರದೇ ಇದ್ದರೂ ಪ್ರತೀ ತಿಂಗಳ ಮಧ್ಯ ಭಾಗದಲ್ಲೇ ಕೂತು ಎಂ. ಬಿ. (ಮೆಶರ್ಮೆಂಟ್ ಬುಕ್) ಬರೆದು ಬಿಲ್ ತಯಾರಿಸಿ ಲೆಕ್ಕಪತ್ರ ವಿಭಾಗಕ್ಕೆ ಕಳುಹಿಸಿಬಿಡುತ್ತಿದ್ದೆವು. ಹೀಗೆ ಮಾಡುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೆವು. ಅಲ್ಲದೇ ತಿಂಗಳ ಕೊನೆಯ ದಿನವೇ ಬರುತ್ತಿದ್ದ ವೇತನ ತುಂಬಾ ಸಂತೋಷ ಕೊಡುತ್ತಿತ್ತು. ಅಂದಿನ ಜೀವನ ಶೈಲಿಗೂ ಸಾಕಾಗುತ್ತಿತ್ತು. ಏನೋ ಹೇಳ್ತಾಇದಾನೆ ಬಿಡು ಅಂದುಕೊಳ್ಳಬೇಡಿ. ಇದೆಲ್ಲಾ ನೂರಕ್ಕೆ ನೂರು ಸತ್ಯ. ೧೯೭೦ ರ ದಶಕದಲ್ಲಿ ಇದ್ದ ನೈಜ ಸ್ಥಿತಿ.
ಕೆಲಸಕ್ಕೆ ಸೇರಿದ ಪ್ರಾರಂಭದಲ್ಲೇ ವೃತ್ತಿ ಮತ್ತು ಕರ್ತವ್ಯದ ಗಟ್ಟಿನೆಲೆ ಒದಗಿಬಂದಿದ್ದರಿಂದ ಮನಸ್ಸು ಅತ್ತಿತ್ತ ಚಲಿಸಲಿಲ್ಲ. ಮೊದಲು ಕರ್ತವ್ಯ ನಂತರ ಮಿಕ್ಕಿದ್ದು. ಅದಕ್ಕೇ ಹೇಳಿದ್ದು. ಇಂದಲ್ಲ, ಎಂದೆಂದೂ ಎದೆಯುಬ್ಬಿಸಿ ಹೇಳಿಕೊಳ್ಳುವಂಥಾ ಕೆಲಸ ಮಾಡಿದ್ದು ಅಂತ.
ಅದು ಅಕ್ಟೋಬರ್ ೧೯೭೭ ರ ಕಾಲ. (#ಉತ್ತರ ಕನ್ನಡ_ಜಿಲ್ಲೆಯ ದಾಂಡೇಲಿ ಸಮೀಪದ #ಕಾಳಿನದಿ_ಜಲವಿದ್ಯುತ್_ಯೋಜನೆ) ಅಂಬಿಕಾನಗರದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಸರ್ಜ್ ಟ್ಯಾಂಕ್ ವಿಭಾಗದಲ್ಲಿ ಇಂಜಿನಿಯರನಾಗಿ ವರದಿ ಮಾಡಿಕೊಂಡ ಕ್ಷಣ. ನಮ್ಮ ಕಾಮಗಾರಿಯ ಸ್ಥಳ ಅಂಬಿಕಾನಗರದಿಂದ ಸುಮಾರು ಐದು ಕಿಲೋಮೀಟರ್ ದೂರದ ಸೈಕ್ಸ್ ಪಾಯಿಂಟ್ ಎಂಬ ಪ್ರದೇಶ. ಕಾಮಗಾರಿ ಕೆಲಸ ಅಂದಾಕ್ಷಣ – ಗುತ್ತಿಗೆದಾರ ತನ್ನ ಕೆಲಸ ಮುಗಿಸಿ, ಹಣ ಪಡೆದು ಹೊರಟು ಹೋದರೆ, ನೆನಪೇ ಆಗದಷ್ಟು ಮರೆಯಾಗಿಬಿಡುತ್ತಾನೆ. ಆದರೆ ನನಗೆ ಮೆಸರ್ಸ್ ಟಿಸಿಲ್ (ತಾಪರ್ ಇಂಟ್ರಾಫರ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್) ಕಂಪನಿಯಲ್ಲಿ ಕೆಲಸಕ್ಕಿದ್ದ ವ್ಯವಸ್ಥಾಪಕರೊಬ್ಬರು ನೆನಪಾಗುತ್ತಾರೆ. ಆಜಾನುಬಾಹು. ಕಾಲುಗಳಿಗೆ ಗಮ್ ಶೂಸ್ ಗಳನ್ನು ತೊಟ್ಟು ಇನ್ ಶರ್ಟ್ ಮಾಡಿಕೊಂಡು, ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಕೆಲಸದ ಸ್ಥಳಕ್ಕೆ ಬಂದರೆಂದರೆ ಅವರನ್ನೇ ನೋಡಬೇಕೆನಿಸುತ್ತಿತ್ತು. ಅಂಥಾ ಗಜ ಗಾಂಭೀರ್ಯ, ಅಷ್ಟು ಎತ್ತರದ, ದಪ್ಪವಾಗಿದ್ದ, ಸೌಮ್ಯ ಮುಖದ ವ್ಯಕ್ತಿಯೊಬ್ಬರನ್ನು ನೋಡಿದ್ದು ಅದೇ ಮೊದಲು. ಅವರ ಪೂರ್ತಿ ಹೆಸರು ಗೊತ್ತಿಲ್ಲ. ವಿರ್ಕ್ ಅಂತ ಕರೆಯುತ್ತಿದ್ದರು. ಇಂಥಾ ಆಸಾಮಿಯ ಮುಂದೆ ನಿಂತರೆ ಒಣಕಲು ಶರೀರದ ಯುವಕನಾದ ನಾನು ಕುಬ್ಜನೆನಿಸಿಬಿಡುತ್ತಿತ್ತು. ಗುತ್ತಿಗೆದಾರನ ಕಡೆಯವನಾದ್ದರಿಂದ ನಮಗೆಲ್ಲ ಸಲಾಮು ಹಾಕುವ ಅನಿವಾರ್ಯತೆ ಅವರಿಗೆ ಇತ್ತು. ನನಗೋ ೨೫ ವರ್ಷದ ಹರೆಯ! ಕೆಲಸ ನಡೆಯುವ ಸ್ಥಳಕ್ಕೆ ಬಂದು ನಮ್ಮನ್ನು ಕಂಡೊಡನೆ, ಹಿಂದಕ್ಕೆ ಕಟ್ಟಿದ್ದ ಕೈಯನ್ನು ತೆಗೆದು, ತನ್ನ ಹೊಟ್ಟೆಯ ಬಳಿಗೆ ತಂದು “ಸಲಾಂ ಸಾಬ್” ಎಂದುಚ್ಚರಿಸಿ ಕೂಡಲೇ ಕೈಯನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ನಾವು ಆಗಬೇಕಾದ ಕೆಲಸದ ಬಗ್ಗೆ ಏನೇ ದೂರುಗಳನ್ನು ಹೇಳುತ್ತಿದ್ದರೂ ಶಾಂತ ಚಿತ್ತದಿಂದ “ಟೀಕ್ ಹೈ”, “ಕರೇಂಗೇ”, “ಅಚ್ಛಾ”, “ಹಾಜೀ” ಹೀಗೆ ಒಂದೇ ಶಬ್ಧದಲ್ಲಿ ಮಾರುತ್ತರ ನೀಡುತ್ತಾ ಕಡೆಗೆ ತನ್ನವರಿಗೆ ಆದೇಶಿಸುತ್ತಿದ್ದರು. ಕೆಲಸದ ಸಮಾಚಾರಗಳನ್ನು ಬಿಟ್ಞು ಬೇರೇನೂ ಮಾತನಾಡುತ್ತಿರಲಿಲ್ಲ. ಇಂದಿಗೂ ಅದೇ ಅರ್ಥವಾಗಿಲ್ಲ. ಆದರೂ ವಿರ್ಕ್ ಸಲಾಮು ಮಾಡುತ್ಣಿದ್ದ ರೀತಿ ಮತ್ತು ಅವರ ಆಕಾರದ ಸ್ಪಷ್ಟ ನೆನಪಿದೆ. ೪೫ ವರ್ಷಗಳ ನಂತರವೂ ಮತ್ತೆ ಭೇಟಿಯಾಗಿಲ್ಲ. ಅವರು ಎಲ್ಲಾದರೂ ಇರಲಿ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ.

ಅಂಬಿಕಾನಗರದ ಸಮೀಪದ ಸೈಕ್ಸ್ ಪಾಯಿಂಟಿನಲ್ಲಿ ಅರಣ್ಯ ಇಲಾಖೆಯವರು ನಿರ್ಮಿಸಿರುವ ಮರದ ಗೋಪುರದ ಮೇಲೆ ನಿಂತು ಕಣ್ಣಾಡಿಸಿದರೆ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳು ಹಸಿರು ತುಂಬಿನಿಂತು ವೈಯಾರ ಆಡುತ್ತಿರುವಂತೆ ಭಾಸವಾಗುತ್ತದೆ. ಎತ್ತ ನೋಡಿದರೂ ಗಿಡ ಮರ ಬಂಡೆಗಳು ಹಸಿರು ವನರಾಶಿ. ಇಲ್ಲಿಂದ ಕೆಳಗೆ ನೋಡಿದರೆ ಸಾವಿರ ಅಡಿಗಳಿಗಿಂತಲೂ ಹೆಚ್ಚು ಪ್ರಪಾತದೊಳಗೆ ಚಿಕ್ಕ ತೊರೆಯಂತೆ ಹರಿಯುವ ಕಾಳಿನದಿ. ಉತ್ತರ ಕನ್ನಡ ಜಿಲ್ಲೆಯ ಡಿಗ್ಗಿ ಎಂಬ ಹಳ್ಳಿಯಲ್ಲಿ ಹುಟ್ಟಿ ೧೬೦ ಕಿಮೀ ಉದ್ದವಾಗಿ ಹರಿಯುವ ಈನದಿ ಪ್ರಾರಂಭದಲ್ಲಿ ಪೂರ್ವಕ್ಕೆ ನಂತರ ನೈರುತ್ಯಕ್ಕೆ, ನಂತರ ಪಶ್ಚಿಮಾಭಿಮುಖವಾಗಿ ಹರಿದು ಹೋಗುವ ಕಾಳಿನದಿ ಕೊನೆಯಲ್ಲಿ ಅರಬ್ಬೀ ಸಮುದ್ರವನ್ನು ಕಾರವಾರದ ಬಳಿ ಸೇರುತ್ತಾಳೆ. ವಿದ್ಯುದಾಗಾರದ ಬಲ ಭಾಗದಿಂದ ನಾಗಝರಿ ಎಂಬ ಹಳ್ಳ ಹರಿದು ಬಂದು ಕಾಳಿನದಿಯೊಂದಿಗೆ ಸೇರಿಕೊಳ್ಳುತ್ತದೆ. ಹಾಗಾಗಿ ಕಾಳಿ ಯೋಜನೆಯ ವಿದ್ಯುದಾಗಾರದ ಹೆಸರು ನಾಗಝರಿ ವಿದ್ಯುದಾಗಾರ ಕರಿ ಶಿಲೆಗಳಿಂದ ಆವೃತವಾಗಿರುವ ನದೀ ತಟವು ನೀರು ತುಂಬಿದಾಗಲೂ ಕಪ್ಪಾಗಿಯೇ ಕಾಣುತ್ತದೆ. ಆನೆಗಳು ನೀರಿನಲ್ಲಿ ಆಟವಾಡಲು ಬಂದಾಗಲೂ ಬಂಡೆಗಳು ಯಾವುವು , ಆನೆಗಳು ಯಾವುವು ಎಂಬುದನ್ನು ಗುರುತಿಸಲು ಕಷ್ಟವಾಗುತ್ತದೆ. ನದೀತಟದಲ್ಲಿ ಅಷ್ಟೊಂದು ಕರಿಯ ಬಂಡೆಗಳಿದ್ದುದರಿಂದಲೋ, ಕಾಳಿನದಿಯು ಹರಿಯುವಾಗಲೂ ಕಪ್ಪಾಗಿಯೇ ಗೋಚರಿಸುತ್ತಿದ್ದುದರಿಂದಲೋ ಈ ನದಿಗೆ ಕಾಳಿನದಿ ಎಂದು ಹೆಸರು ಬಂದಿರಬಹುದು. ಆದರೂ ಗಂಗೆಗೆ ನಮ್ಮ ಸಂತತಿಯಲ್ಲಿ ದೈವೀ ಸ್ವರೂಪದ ಮನ್ನಣೆ ಇರುವುದರಿಂದ ಗಂಗಾ ನದಿಯನ್ನು ಪೂಜಿಸುವಂತೆ, ಶಕ್ತಿಯ ಅಧಿದೇವತೆಯಾದ ಕಾಳಿನದಿಯನ್ನು ಪೂಜಿಸುತ್ತಾರೆ. ಅದಕ್ಕೇ ಇರಬೇಕು ಅಗಾಧ ವಿದ್ಯುತ್ ಶಕ್ತಿಯನ್ನು ಕಾಳಿ ನೀಡುತ್ತಿದ್ದಾಳೆ. ಕಾಳಿ ಕಪ್ಪಾದರೇನಂತೆ ಎಷ್ಟೊಂದು ಜನರ ಮನೆಯ ಬೆಳಕಾಗಿ ದಿನವೂ ಬಾಳನ್ನು ಬೆಳಗಿಸುತ್ತಿದ್ದಾಳೆ. ಇಂತಹ ನದಿಯ ವೈಯಾರ, ಬೆಡಗು, ಬಿನ್ನಾಣಗಳನ್ನು ಬಲು ಹತ್ತಿರದಿಂದ ಕಂಡುಂಡು ಕವನದ ಮೂಲಕ ಮಿತ್ರರೊಬ್ಬರು ಈ ರೀತಿ ಚಿತ್ರಿಸಿದ್ದಾರೆ :
ಕನ್ನಡವೇ ಸರ್ವಸ್ವವೆಂದು ಸಾರ್ಯಾಳೇll
ಅಂದಿನ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಮಾನ್ಯಶ್ರೀ ಗುಂಡೂರಾವ್ ರವರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಅಂಬಿಕಾನಗರಕ್ಕೆ ಆಗಮಿಸಿ, ಕಾಳಿನದಿ ಜಲವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಸಂದರ್ಭದಲ್ಲಿ (ದಿನಾಂಕ ೧೪-೧೧-೧೯೮೦)ಮೇಲಿನ ಕವನವನ್ನು ಕನ್ನಡದ ಪ್ರಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಬಿ. ಕೆ. ಸುಮಿತ್ರರವರು ಸುಶ್ರಾವ್ಯವಾಗಿ ಹಾಡಿದಾಗ, ಅಲ್ಲಿ ನೆರೆದಿದ್ದ ಸಭಿಕರೆಲ್ಲ ಮಂತ್ರಮುಗ್ಧರಾಗಿ ವಿದ್ಯುದಾಗಾರದ ಹೆಬ್ಬಾಗಿಲಿನಲ್ಲೇ ಪ್ರತಿಷ್ಠಾಪಿಸಿದ ಕಪ್ಪು ಶಿಲೆಯ ಬೃಹತ್ ಕಾಳಿಕಾದೇವಿಯ ಪ್ರತಿಮೆಗೆ ನಮಿಸಿ ಭಾವುಕರಾಗಿ “ಎಲ್ಲರ ಒಳಿತಿಗಾಗಿ ಅಭಯ ನೀಡೇ ತಾಯೀ” ಎಂದು ಮನದಲ್ಲೇ ಪ್ರಾರ್ಥಿಸಿಕೊಂಡದ್ದು ಸುಳ್ಳಲ್ಲ.
೧೦೧ ಮೀಟರ್ ಎತ್ತರದ ೩೩೨ ಮೀಟರ್ ಉದ್ದದ ಕಾಂಕ್ರೀಟ್ ಗ್ರ್ಯಾವಿಟಿ ಸೂಪಾ ಅಣೆಕಟ್ಟನ್ನು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬಳಿ ಕಾಳಿನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಬೃಹತ್ತಾದ ಕನಸಿನ ಈ ಅಣೆಕಟ್ಟಿಗೆ ತಳಪಾಯ ಹಾಕುವಾಗ ಹಲವಾರು ಅಡ್ಡಿ ಆತಂಕಗಳು ಎದುರಾದರೂ ತಜ್ಞ ಇಂಜಿನಿಯರುಗಳು, ಭೂಗರ್ಭ ಶಾಸ್ತ್ರಜ್ಞರು ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ, ತಮ್ಮ ಗುರಿ ಮುಟ್ಟುವುದರಲ್ಲಿ ಸಫಲರಾದರೆಂದು ತಿಳಿದುಬಂತು. ಈ ಅಣೆಕಟ್ಟಿನಿಂದ ಬೊಮ್ಮನಹಳ್ಳಿ ಜಲಾಶಯಕ್ಕೆ ೬೪ ಕಿಮೀ ನಷ್ಟು ಹರಿಯುವ ನದಿಯ ಪಾತ್ರದಲ್ಲಿ ಸದಾ ನೀರಿರುತ್ತದೆ. ಆದರೆ ಅದರ ಮುಂದಿನ ನದೀ ಪಾತ್ರದಲ್ಲಿ ನಾಗಝರಿ ವಿದ್ಯುದಾಗಾರದವರೆಗೆ ನೀರಿರುವುದಿಲ್ಲ.
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
