ಧಾರವಾಡದಲ್ಲಿನ ಒಂದು ಅಪೂರ್ವ ಪವಿತ್ರ ಸ್ಥಳ ಸಂಗೊಳ್ಳಿರಾಯಣ್ಣನಿಗೆ ನೆರಳು ಕೊಡುತ್ತಿದ್ದ ಆ ಆಲದ ಮರಕ್ಕೆ ಈಗಲೂ ಪೂಜೆ ಮಾಡುತ್ತಾರೆ. ಅಲ್ಲಿ ಭೇಟಿ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ಅವರು ಅಲ್ಲಿ ತಾವು ಕಳೆದ ಕ್ಷಣಗಳನ್ನು ಮೆಲಕು ಹಾಕಿದ್ದಾರೆ, ತಪ್ಪದೆ ಮುಂದೆ ಓದಿ…
ನಮ್ಮ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಚನೆ ಅನುಷ್ಠಾನ ಪ್ರವಾಸದಲ್ಲಿ ಧಾರವಾಡದಲ್ಲಿನ ಒಂದು ಅಪೂರ್ವ ಪವಿತ್ರ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹಳ್ಳ ಗುಡ್ಡ ಇಳಿದು ಸಾಹಸಮಾಡಿ ಹೋಗಿದ್ದೆ. ಹೋಗುವ ಮುನ್ನ ಎಲ್ಲಮ್ಮನ ಗುಡ್ಡಕ್ಕೆ ಹೋಗಿ ಎಂದು ಗೆಳೆಯರು ಹೇಳಿದ್ದರು, ಆದರೆ ನಾನು ಹೋಗಿದ್ದು ಈ ಸ್ಥಳಕ್ಕೆ.
ಆ ಗುಡ್ಡ ನನಗೆ ಏನು ಕೊಡುತಿತ್ತೊ ಬಿಡುತಿತ್ತೊ ಆದರೆ ನನ್ನ ಪುಣ್ಯ ಸ್ಥಳ ನನ್ನನ್ನ ಧನ್ಯನಾಗಿಸಿತು. ನನ್ನ ಮೈ ಮನಸ್ಸನ್ನ ಪುನೀತನನ್ನಾಗಿಸಿತು. ಇದು ಸಂಗೊಳ್ಳಿರಾಯಣ್ಣ ಈಜುತಿದ್ದ ಹಳ್ಳ, ವಿಶ್ರಾಂತಿ ತೆಗೆದುಕೊಳ್ಳುತಿದ್ದ, ಕುಳಿತು ಊಟ ಮಾಡುತಿದ್ದ ಆಲದಮರದ ಬುಡ, ಇದೆ ಜಾಗದಲ್ಲಿ ಅವನ ಸ್ನೇಹಿತರು ಅವನನ್ನು ಮೋಸದಿಂದ ಬ್ರಿಟಿಷರಿಗೆ ಹಿಡಿದುಕೊಟ್ಟದ್ದು, ನಾನು ನಡೆದು ಅಲ್ಲಿಗೆ ಹೋದ ಹಾದಿಯಲ್ಲೇ ರಾಯಣ್ಣನನ್ನೂ ಬ್ರಿಟಿಷರು ರಾಯಣ್ಣನ ಮೈ ಕೈಗಳನ್ನು ಕಟ್ಟಿ ಎಳೆದುಕೊಂಡು ಹೋದದ್ದು, ಪರಮಪಾಪಿಗಳು ರಾಯಣ್ಣನ ಮೖಮುಟ್ಟಿದ ಆಪರಮ ಪವಿತ್ರ ಪುಣ್ಯ ಸ್ಥಳ ಇನ್ನೂ ಹಾಗೆಯೇ ಇದೆ ಏನೂಬದಲಾಗಿಲ್ಲ ಕೆಲವು ಪುಣ್ಯವಂತರು ಅವನು ಕುಳಿತುಕೊಳ್ಳುತಿದ್ದ ಕಲ್ಲಿಗೆ, ಅವನಿಗೆ ನೆರಳು ಕೊಡುತಿದ್ದ ಆಲದ ಮರಕ್ಕೆ ಈಗಲೂ ಪೂಜೆ ಮಾಡುತ್ತಾರೆ.
ಅಲ್ಲಿ ಕೂರುವ ಅವನ ಪಾದಸ್ಪರ್ಶದ ಬಂಡೆಗೆ ನಮಸ್ಕರಿಸುವ ಸೌಭಾಗ್ಯ ದೊರೆತದ್ದು ನನ್ನ ಬದುಕಿನ ಸುಕ್ರುತ ಫಲವೆಂದು ಭಾವಿಸಿ ನನ್ನ ಆ ಕ್ಷಣದ ಅನುಭವ ಹಾಗೂ ಚಿತ್ರಗಳನ್ನು ನಿಮಗೆ ರವಾನಿಸಿ ಧನ್ಯತೆಯನ್ನ ಅನುಭವಿಸುತ್ತಿದ್ದೇನೆ.
- ಡಾ. ಮಾನಸ – ಅಧ್ಯಕ್ಷರು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
